ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವದ ಸತ್ಯಾಸತ್ಯತೆ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇದೊಂದು ಪುಟ್ಟ ಆದರೆ, ಮನತಟ್ಟುವ ಕೋರಿಯನ್ ಕಥೆ.

ಒಂದು ದಿನ ಹತ್ತು ವರ್ಷದ ಹುಡುಗನೊಬ್ಬ ಶಾಲೆಗೆ ಹೊರಟಿದ್ದ. ಅವನು ನಡೆದು ಹೋಗುವ ದಾರಿಯಲ್ಲಿ ಸ್ವಲ್ಪ ಕಾಡಿನ ಪ್ರದೇಶವೂ ಬರುತ್ತಿತ್ತು. ಆತ ನಿಧಾನವಾಗಿ ಹೋಗುತ್ತಿದ್ದಾಗ ಒಂದು ಬೆಕ್ಕು ಓಡಿ ಬಂದು ರಸ್ತೆಯ ಮಧ್ಯದಲ್ಲಿ ನಿಂತಿತು. ಇವನನ್ನೇ ಕ್ಷಣ­ಕಾಲ ದಿಟ್ಟಿಸಿ ನೋಡಿತು. ನಂತರ ಬೆನ್ನು ತಿರುಗಿಸಿ ನಡೆದು ಕಾಡಿನಲ್ಲಿ ಸೇರಿ ಮರೆಯಾಯಿತು. ಅದು ಹಿಂದೆ ತಿರುಗಿದಾಗ ಹುಡುಗನಿಗೆ ಭಾರಿ ಆಶ್ಚರ್ಯವಾಯಿತು, ಯಾಕೆಂದರೆ ಆ ಬೆಕ್ಕಿಗೆ ಇದ್ದದ್ದು ಎರಡು ಬಾಲಗಳು! ಅವನು ಈ ಬಗೆಯ ಬೆಕ್ಕನ್ನು ಎಂದೂ ಕಂಡಿರಲಿಲ್ಲ. ಉತ್ಸಾಹದಲ್ಲಿ ಶಾಲೆಗೆ ಬಂದು ತಾನು ಎರಡು ಬಾಲದ ಬೆಕ್ಕನ್ನು ಕಂಡದ್ದನ್ನು ಸ್ನೇಹಿತರಿಗೆ ಹೇಳಿದ. ಅವರಾರೂ ಅವನ ಮಾತನ್ನು ನಂಬ­ಲ್ಲ. ಅವನು ಕನಸು ಕಾಣುತ್ತಿದ್ದಾನೆಂದು ನಕ್ಕರು. ಹುಡುಗ ತಾನು ಕಂಡದ್ದನ್ನು ಬಲವಾಗಿ ಸಮರ್ಥಿಸಿಕೊಂಡ. ಉಳಿದ ಮಕ್ಕಳು ಈ ವಿಷಯವನ್ನು ಶಿಕ್ಷಕರಿಗೆ ತಿಳಿಸಿದರು. ಅವರಿಗೂ ಇದು ಅಸಾಧ್ಯ­ವಾದದ್ದೆಂದು ಕಂಡದ್ದಲ್ಲದೇ ಈತ ಸುಳ್ಳು ಹೇಳುತ್ತಿದ್ದಾನೆ ಎಂದು ತೀರ್ಮಾನಿ­ಸಿದರು.

ಹುಡುಗ ಹಟಹಿಡಿದು ತಾನು ಕಂಡದ್ದೇ ಸತ್ಯವೆಂದು ವಾದಿಸಿದಾಗ ಅದನ್ನು ಉದ್ಧಟತನವೆಂದು ಕರೆದರು. ತಾವು ಅವನಿಗಿಂತ ಹೆಚ್ಚು ಅನುಭವ­ವುಳ್ಳವರೆಂದೂ, ಅನೇಕ ಚಿತ್ರವಿಚಿತ್ರ ಪ್ರಾಣಿಗಳನ್ನು ನೋಡಿದ್ದರೂ ಎರಡು ಬಾಲಗಳ ಬೆಕ್ಕನ್ನು ಎಂದೂ ಕಂಡಿಲ್ಲ­ವೆಂದೂ ಹೇಳಿ ಅವನಿಗೆ ಇನ್ನೊಮ್ಮೆ ಈ ತರಹದ ಹುಚ್ಚು ಮಾತುಗಳನ್ನಾಡ­ಬಾರದೆಂದು ಎಚ್ಚರಿಕೆ ನೀಡಿದರು.

ಇದೇ ಮಾತು ಹುಡುಗನ ಮನೆ ತಲುಪಿತು. ಮನೆಯಲ್ಲಿ ಇವನ ಮಾತಿಗೆ ಯಾರೂ ಬೆಲೆ ನೀಡಲಿಲ್ಲ. ಸುಳ್ಳು ಹೇಳಬೇಡ ಎಂದು ಹೇಳಿ ಬೆನ್ನ ಮೇಲೆ ನಾಲ್ಕು ಬಾರಿಸಿದರು. ಹುಡುಗನಿಗೆ ತುಂಬ ನಿರಾಸೆಯಾಯಿತು. ತಾನು ಕಂಡದ್ದು ಸತ್ಯ ಆದರೆ ಯಾರೂ ಒಪ್ಪುತ್ತಿಲ್ಲವಲ್ಲ. ಆತನ ತಲೆ ಬಿಸಿ­ಯಾಯಿತು. ಅವನಿಗೊಂದು ಯೋಚನೆ ಹೊಳೆಯಿತು. ಹೌದು, ತಾನು ಕಾಡಿಗೆ ಹೋಗಬೇಕು. ಅಲ್ಲಿ ಹುಡುಕಾಡಿದರೆ ಒಂದಲ್ಲ ಒಂದು ದಿನ ಆ ಬೆಕ್ಕು ಸಿಕ್ಕೇ ಸಿಗುತ್ತದೆ. ಅದನ್ನು ಹಿಡಿದುಕೊಂಡು ಬಂದು ಎಲ್ಲರಿಗೂ ತೋರಿಸಿದರೆ ತನ್ನ ಮಾತು ಸತ್ಯವೆಂದು ಎಲ್ಲರೂ ನಂಬುತ್ತಾರೆ. ಹೀಗೆ ಯೋಚಿಸಿ ಹುಡುಗ ಮನೆಯನ್ನು ತೊರೆದು, ಶಾಲೆಗೆ ಹೋಗದೇ ಕಾಡಿಗೆ ಓಡಿದ.

ಹುಡುಗನನ್ನು ಕಾಣದೆ ಮನೆ­ಯವರು ಗಾಬರಿಯಾದರು. ಮನೆಯವ­ರಿಂದ ವಿಷಯ ತಿಳಿದ ಶಾಲೆಯವರೂ ಚಿಂತಿತರಾದರು. ಅವನನ್ನು ಹುಡುಕಲು ಸರ್ವ ಪ್ರಯತ್ನ ಮಾಡಿದರು. ಒಂದು ವಾರದ ನಂತರ ಪೋಲಿಸರು ಕಾಡಿನಲ್ಲಿ ಶೋಧಿಸಲು ಹೋಗಿದ್ದಾಗ ಹುಡುಗನ ಶವ ಮರದ ಕೊಂಬೆಗೆ ನೇತಾಡುತ್ತಿದ್ದನ್ನು ಕಂಡು ಬಂದಿತು. ತಾನು ಕಂಡ ಸತ್ಯವನ್ನು ಸಾಧಿಸಿ ತೋರಿಸಲಾಗಲಿಲ್ಲವೆಂಬ ಹತಾಶೆ­ಯಿಂದ, ಅವಮಾನದಿಂದ ಹುಡುಗ ಅತ್ಮಹತ್ಯೆ ಮಾಡಿಕೊಂಡಿದ್ದ. ಪಾಪ! ಹುಡುಗನ ಅಂತ್ಯ ಹೀಗಾಯಿತಲ್ಲ ಎಂದು ಇಡೀ ಊರಿನ ಜನ ಕಣ್ಣೀರು ಸುರಿಸಿದರು. ಇಡೀ ಶಾಲೆ ದುಃಖದಲ್ಲಿ ಮುಳುಗಿತು. ಹುಡುಗನ ಅಂತ್ಯ­ಸಂಸ್ಕಾರಕ್ಕೆ ಶಾಲೆಯ ಎಲ್ಲ ಶಿಕ್ಷಕರು, ಮಕ್ಕಳು ಬಂದಿದ್ದರು. ಊರಿನ ಎಲ್ಲರೂ ಅಲ್ಲಿಗೆ ಬಂದಂತಿತ್ತು.

ದೇಹದ ಸಮಾಧಿಯಾಗಿ ಇನ್ನೇನು ಜನರು ಅಲ್ಲಿಂದ ಚದುರಬೇಕೆಂದಿದ್ದಾಗ ಅಲ್ಲೊಂದು ಬೆಕ್ಕು ಹಾರುತ್ತ ಬಂದು ಸಮಾಧಿಯ ಮೇಲೆ ಕುಳಿತಿತು. ಎಲ್ಲರೂ ತಿರುಗಿ ನೋಡಿ ಚಕಿತರಾದರು. ಆ ಬೆಕ್ಕಿಗೆ ಎರಡು ಬಾಲಗಳು!

ಕೆಲವೊಮ್ಮೆ ನಮಗೆ ಆಗದ ಅನುಭವಗಳು ಮತ್ತೊಬ್ಬರಿಗೆ ಆಗಿದೆಯೆಂದು ಕೇಳಿದಾಗ ಅದನ್ನು ಸುಳ್ಳೆನ್ನುತ್ತೇವೆ, ನಮಗಾದ ಅನುಭವ­ವನ್ನು ಮತ್ತೊಬ್ಬರು ನಂಬದಿದ್ದಾಗ ದುಃಖಪಡುತ್ತೇವೆ. ಆದ್ದರಿಂದ ಯಾವುದೇ ವಿಶೇಷ ಅನುಭವವನ್ನು ಸತ್ಯ ಎನ್ನುವುದು ಎಷ್ಟು ಕಷ್ಟವೋ ಅದು ಸುಳ್ಳೆನ್ನುವುದೂ ಅಷ್ಟೇ ಕಷ್ಟದ್ದು. ಅವರವರ ಅನುಭವ ಅವರವರಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT