ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಕಾಲದ ಋಷಿ

Last Updated 18 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಹುಡುಗನ ಹೆಸರು ವೆಂಕಟರಾಮನ್. ತುಂಬ ಲವಲವಿಕೆಯ ತುಂಟ ಹುಡುಗ. ಆಟದಲ್ಲಿ ತುಂಬ ಆಸಕ್ತಿ. ತಂದೆಯ ಕಚೇರಿಯ ಎಷ್ಟೋ ಕಾಗದ ಪತ್ರಗಳು ಈತನ ಗಾಳಿಪಟವಾಗಿ ಹಾರಿಹೋಗಿ­ದ್ದವು. ಆತನಿಗೆ ಈಜುವುದು ಪ್ರಿಯವಾದ ಕೆಲಸ. ಅವನು ಯಾವ ಕೆಲಸ ಮಾಡಿದರೂ ಅದಕ್ಕೆ ಯಶಸ್ಸು ಕಟ್ಟಿ­ಟ್ಟದ್ದು. ಅದಕ್ಕೇ ವೆಂಕಟರಾಮನ್‌ನನ್ನು ಸ್ನೇಹಿತರು ‘ತಂಗಕ್ಕೈ’ ಎಂದು ಕರೆಯುತ್ತಿದ್ದರು. ತಮಿಳಿನಲ್ಲಿ ಹಾಗೆಂದರೆ ‘ಚಿನ್ನದ ಕೈ’ ಎಂಬ ಅರ್ಥ.

ಮಗ ಇಂಗ್ಲಿಷ್ ಕಲಿಯಲಿ ಎಂದು ಊರಿನಲ್ಲಿದ್ದ ಇಂಗ್ಲಿಷ್ ಶಾಲೆಗೆ ಕಳುಹಿಸಿದರು ತಂದೆ. ಇಡೀ ದಿನ ಆಟ ಆಡಿ, ಈಜಾಡಿ ಬಂದ ಹುಡುಗನಿಗೆ ಆಯಾಸವಾಗಿ ನಿದ್ರೆ ಬರುವುದು ಸಹಜ. ಆದರೆ ವೆಂಕಟರಾಮನ್ ನಿದ್ರೆ ಪ್ರಚಂಡ­ವಾದದ್ದು. ಒಂದು ದಿನ ಮನೆಯವರೆಲ್ಲ ದೇವಸ್ಥಾನಕ್ಕೆ ಹೋಗುವ ಮುಂದೆ ಮನೆಯನ್ನು ಎಚ್ಚರವಾಗಿ ನೋಡಿ­ಕೊಂಡರು ಎಂದು ಹೇಳಿ ಹೋಗಿದ್ದರು. ಈತ ಬಾಗಿಲು ಹಾಕಿಕೊಂಡು ಮಲಗಿದ. ದೇವಸ್ಥಾನದಿಂದ ಬಂದವರು ಎಷ್ಟು ಬಾಗಿಲು ಬಡಿದರೂ ಈತನಿಗೆ ಎಚ್ಚರವಿಲ್ಲ.

ಈ ಗಲಾಟೆಗೆ ಪಕ್ಕದ ಮನೆಯವರೂ ಬಂದು ಸೇರಿ, ಕಿಟಕಿಯಿಂದ ಕೂಗಿ ಏನೆಲ್ಲ ಮಾಡಿದರೂ ಒಳಗಿನಿಂದ ಸದ್ದೇ ಇಲ್ಲ. ಕೊನೆಗೆ ಏನೋ ಮಾಡಿ ಮುಂದಿನ ಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಿದರೆ ಅಲ್ಲಿಯೇ ವೆಂಕಟರಾಮನ್ ಮಲಗಿದ್ದಾನೆ! ಅವನನ್ನು ಅಲುಗಾಡಿಸಿದರೂ ಎಚ್ಚರ­ವಾಗಲಿಲ್ಲ. ಆತನ ನಿದ್ರೆ ಪ್ರಖ್ಯಾತ­ವಾಯಿತು.  ಆ ದಿನಗಳಲ್ಲಿ ಆತನಿಗೆ ಪೆರಿಯ ಪುರಾಣಂ ಪುಸ್ತಕ ಓದಲು ದೊರಕಿತು. ಅರವತ್ಮೂರು ಶೈವ ಸಂತರ ಜೀವನ ಚರಿತ್ರೆಯ ಪುಸ್ತಕ ಅದು. ಅದನ್ನು ಕುತೂಹಲದಿಂದ ಆಸಕ್ತಿಯಿಂದ ಓದಿದ, ಸಂತರ ಜೀವನ ಅವನ ಮನಸೆಳೆಯಿತು.

ಅವನ ಹದಿನೇಳನೇ ವಯಸ್ಸಿನಲ್ಲಿ ಮಧ್ಯಾಹ್ನ ಅಟ್ಟದ ಮೇಲೆ ಮಲಗಿದ ಈ ಹುಡುಗನಿಗೆ ಒಂದು ವಿಚಿತ್ರ ಅನುಭವಾಯಿತು. ಆ ಅನುಭವವನ್ನು ಆತ ವಿವರಿಸಿದ್ದು ಹೀಗೆ. ‘ನಾನೀಗ ಸಾಯುತ್ತಿದ್ದೇನೆ ಎನ್ನಿಸಿತು. ಹಾಗೆ ಚಿಂತಿಸಲು ನನಗೆ ಯಾವ ಕಾರಣವೂ ಇರಲಿಲ್ಲ. ಅಂಥದೊಂದು ಸ್ಥಿತಿಯ ಬಗ್ಗೆ ಚಿಂತಿಸುವ ವಯಸ್ಸು ನನ್ನದಲ್ಲ. ಆದರೂ ಸಾವು ಎಂದರೇನು? ಅದನ್ನು ದಾಟುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ನಿರ್ಧರಿಸಿದೆ. ಆಗ ನನಗೆ ತಿಳಿದಂತೆ ಸಾವೆಂದರೆ ದೇಹವೆಲ್ಲ ಸೆಟೆಯುವುದು, ಕಣ್ಣುಮುಚ್ಚುವುದು ಮತ್ತು ಉಸಿರಾಟ ನಿಲ್ಲುವುದು. ಮನಸ್ಸು ತೀವ್ರವಾಗಿ ಯೋಚಿಸಿತು. ಅದರ ಅನುಭವ ಸಾಧ್ಯ­ವಾಯಿತು. ದೇಹ ನಿಶ್ಚೇಷ್ಟಿತವಾದರೂ ಒಳದೃಷ್ಟಿಯೊಂದು ಕಂಡಿತು. ದೇಹ ಸತ್ತರೂ ನಾನು ಸಾಯಲಿಲ್ಲ. ದೇಹ ಬೂದಿಯಾದರೂ ನಾನು ಸುಡಲಿಲ್ಲ. ಆಗ ತಕ್ಷಣ ಹೊಳೆಯಿತು.

ನಾನು ದೇಹವಲ್ಲ. ದೇಹಕ್ಕೆ ಸಾವಿದೆ ಆದರೆ ನಾನು ಅವಿನಾಶಿ, ದೇಹ ಮತ್ತು ಇಂದ್ರಿಯಗಳು ಕಳೆದುಹೋದ ಮೇಲೂ ಉಳಿದ ಜ್ಞಾನ ಇಂದ್ರಿಯಗಳ ಮೂಲಕ ದೊರೆತದ್ದಲ್ಲ. ಹಾಗಾದರೆ ಈ ನಾನು ಎಂಬ ಪ್ರಜ್ಞೆ ವಿಶೇಷ ಶಕ್ತಿಯುಳ್ಳದ್ದು, ಬೇರಾವುದರಿಂದಲೂ ಬಂದದ್ದಲ್ಲ’. ಈ ಅನುಭವವಾದದ್ದು ಕ್ಷಣದಲ್ಲಿ. ಆನಂತರ ಹುಡುಗ ಮೊದಲಿನಂತಾಗಲಿಲ್ಲ, ಮನೆ ತೊರೆದ. ತನ್ನನ್ನು ಹುಡುಕಬೇಡಿ ಎಂದು ಚೀಟಿ ಬರೆದಿಟ್ಟು ಕೈಯಲ್ಲಿದ್ದ ಮೂರು ರೂಪಾಯಿ ತೆಗೆದುಕೊಂಡು ಹೊರಟ.

ನಂತರ ಮತ್ತೊಂದೆಡೆಗೆ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಮಾರಿ ಕೊಟ್ಟಷ್ಟು ಹಣವನ್ನು ಪಡೆದು ಅರುಣಾಚಲಕ್ಕೆ ಹೋಗಿ ಅರುಣಾಚಲೇಶ್ವರನ ಮುಂದೆ ಕುಳಿತು, ಸಂತೋಷ, ಆತಂಕಗಳಿಂದ ಉಮ್ಮಳಿ­ಸಿದ. ‘ತಂದೆ, ನಿನ್ನ ಆದೇಶದಂತೆ ಬಂದು ನಿನ್ನ ಪಾದಕ್ಕೆ ಅರ್ಪಿಸಿಕೊಂಡಿದ್ದೇನೆ’. ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯು­ತ್ತಿತ್ತು. ಮನಸ್ಸು ಶಾಂತವಾಯಿತು. ಎಲ್ಲವನ್ನೂ ಬಿಟ್ಟು ಅರುಣಾಚಲಕ್ಕೆ ಬಂದಿದ್ದಾತ ಎಲ್ಲವನ್ನೂ ಪಡೆದು­ಕೊಂಡಿದ್ದ.

ನಂತರ ತನಗೆ ತಾನೇ ದೀಕ್ಷೆ ಕೊಟ್ಟುಕೊಂಡ. ಬಟ್ಟೆ ಕಿತ್ತು ಹಾಕಿ ಕೇವಲ ಕೌಪೀನ ಉಳಿಸಿಕೊಂಡ, ತನ್ನದೆಂದು ಉಳಿದದ್ದೆನ್ನಲ್ಲ ಬೀಸಾಕಿದ. ಅದರೊಂದಿಗೆ ಜನಿವಾರವನ್ನೂ ಎಸೆದ. ಸನ್ಯಾಸಕ್ಕೆ ಶುಭಸ್ನಾನ ಕೂಡ ಬೇಕಿರಲಿಲ್ಲ. ಬಾನಿನಿಂದ ಸುರಿದ ಮಳೆ ಆ ಕೆಲಸ ಮಾಡಿತ್ತು. ನವ ಸನ್ಯಾಸಿ ಹೊಸ ಜೀವನಕ್ಕೆ ಅಣಿಯಾಗಿದ್ದ. ಅದು ಒತ್ತಾಯ ದೀಕ್ಷೆಯಲ್ಲ. ಆಂತರ್ಯದಲ್ಲಿ ಮಾಗಿದ ಸೊಬಗು. ಮುಂದೆ ಐವತ್ನಾಲ್ಕು ವರ್ಷ, ಅಂದರೆ ತಮ್ಮ ಭೌತಿಕ ದೇಹದ ಎಪ್ತತ್ತೊಂದನೇ ವಯಸ್ಸಿನವರೆಗೂ ಅಲ್ಲಿಯೇ ತಿರುವಣ್ಣಾಮಲೈನಲ್ಲಿ ಉಳಿದು ಲಕ್ಷಾಂತರ ಜನರ ಆಧ್ಯಾತ್ಮಿಕ ಶಕ್ತಿಯನ್ನು ಪ್ರಚೋದಿಸಿ ರಮಣ ಮಹರ್ಷಿಯಾದರು.

ಇದೊಂದು ಅನ್ಯಾದೃಶ­ವಾದ ಜೀವನ ಚರಿತ್ರೆ. ಪ್ರಪಂಚ ಕಂಡಂತಹ ಸರ್ವಶ್ರೇಷ್ಠ ಸಂತರಲ್ಲಿ ಒಬ್ಬರಾಗಿ ನಿಮ್ಮ ಜೀವನದ ಸತ್ಯವನ್ನು ನೀವೇ ಕಂಡುಕೊಳ್ಳಬೇಕೆಂದು ತಿಳಿ  ಹೇಳಿದವರು. ಈ ಆಧುನಿಕ ಯುಗದಲ್ಲೂ ಉಪನಿಷತ್ತಿನ ಕಾಲದ ಋಷಿಗಳಂತೆ ಇದ್ದವರು ರಮಣ ಮಹರ್ಷಿಗಳು. ಜೀವನದಲ್ಲಿ ಯಾವ ತಿರುವು, ಯಾವಾಗ, ಹೇಗೆ ಎಲ್ಲಿ ಬಂದೀತೆಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಒಳಗಿದ್ದ ಚೇತನಕ್ಕೆ ಸರಿಯಾದ ಸಮಯದಲ್ಲಿ ಅಧ್ಯಾತ್ಮದ ಬೆಂಕಿಯ ಸ್ಪರ್ಶವಾದೊಡೆ ಮಹಾ­ಚೈತನ್ಯ ಕಡೆದು ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT