ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಬನ್ ಸ್ಪಾರ್ಕಲ್ ವಿ: ಕ್ರಿಯಾಶೀಲ ಫೋನ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಆಂಡ್ರಾಯಿಡ್ ಫೋನ್‌ಗಳು ಮಾರುಕಟ್ಟೆಯಲ್ಲಿ ಯದ್ವಾತದ್ವ ತುಂಬತೊಡಗಿವೆ. ಕೆಲವು ಅತ್ಯಂತ ಶಕ್ತಿಶಾಲಿ, ಇನ್ನು ಕೆಲವು ತುಂಬಾ ಕಳಪೆಯಾಗಿವೆ. ಕೆಲವು ಅತಿ ದುಬಾರಿ, ಕೆಲವು ಅತಿ ಕಡಿಮೆ ಬೆಲೆಯವು. ಇವುಗಳನ್ನು ನಿಯಂತ್ರಿಸುವವರಿಲ್ಲ. ಇಂತಹ ಸಂದರ್ಭದಲ್ಲಿ ಭಾರತದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಗೆ ಅತೀ ಅಗತ್ಯವಾದ, ಎಲ್ಲ ಕೆಲಸಗಳನ್ನು ಸರಾಗವಾಗಿ ಮಾಡಬಲ್ಲ ಫೋನ್ ತಲುಪಿಸಬೇಕು ಎಂದು ಗೂಗ್ಲ್ ತೀರ್ಮಾನ ಮಾಡಿ ಆಂಡ್ರಾಯಿಡ್್ ಒನ್ ಎಂಬ ಪರಿಕಲ್ಪನೆ ಮಾಡಿದೆ. ಫೋನ್ ತಯಾರಿಕೆಯಲ್ಲಿರುವ ಮೂರು ಕಂಪೆನಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಫೋನ್‌ಗಳ ಪ್ರಮುಖ ಗುಣವೈಶಿಷ್ಟ್ಯಗಳು ಹೀಗೆಯೇ ಇರಬೇಕು ಎಂದು ಗೂಗ್ಲ್ ತೀರ್ಮಾನ ಮಾಡಿದೆ. ಅಂತಹ ಒಂದು ಫೋನ್ ಕಾರ್ಬನ್ ಸ್ಪಾರ್ಕಲ್ ವಿ (Karbonn Sparkle V) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್, 1 + 4 ಗಿಗಾಬೈಟ್ ಮೆಮೊರಿ, ಹೆಚ್ಚಿಗೆ ಮೆಮೊರಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 4.5 ಇಂಚು ಗಾತ್ರದ 480X854 ಪಿಕ್ಸೆಲ್ ರೆಸೊಲೂಶನ್ನ ಪರದೆ, 5 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್‌ನ ಇನ್ನೊಂದು ಎದುರುಗಡೆಯ ಕ್ಯಾಮೆರಾ, ಕ್ಯಾಮೆರಾ ಫ್ಲಾಶ್, ಎರಡು ಮೈಕ್ರೋಸಿಮ್ ಹಾಕಬಹುದು, 2ಜಿ ಮತ್ತು 3ಜಿ, ವೈಫೈ, ಬ್ಲೂಟೂತ್, ಜಿಪಿಎಸ್, ಎಫ್ಎಂ ರೇಡಿಯೊ, 113 x 66 x 10.4 ಮಿ.ಮೀ. ಗಾತ್ರ, 138 ಗ್ರಾಂ ತೂಕ, 1700mAh ಬ್ಯಾಟರಿ, ಆಂಡ್ರಾಯಿಡ್ 4.4 (ಕಿಟ್‌ಕ್ಯಾಟ್‌), ಇತ್ಯಾದಿ. ನಿಗದಿತ ಬೆಲೆ ₹6,690. ಕೆಲವು ಜಾಲತಾಣ ಗಳಲ್ಲಿ ₹5,999ಕ್ಕೆ ದೊರೆಯುತ್ತಿದೆ.

ಆಂಡ್ರಾಯಿಡ್‌ ಒನ್ ಫೋನ್‌ಗಳ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳನ್ನು ಮತ್ತು ಅದರಲ್ಲಿ ಯಾವ ಯಾವ ಆಂಡ್ರಾಯಿಡ್ ಸವಲತ್ತುಗಳು ಹಾಗೂ ಆಪ್‌ಗಳು ಇರಬೇಕು ಎಂಬುದನ್ನು ಗೂಗ್ಲ್ ತೀರ್ಮಾನಿಸಿದೆ. ಅದರಂತೆ ನೀವು ಯಾವ ಕಂಪೆನಿ ತಯಾರಿಸಿದ ಆಂಡ್ರಾಯಿಡ್ ಒನ್ ಫೋನ್ ಕೊಂಡರೂ ಕೆಲವು ಮೂಲಭೂತ ವಿಷಯಗಳಲ್ಲಿ ವ್ಯತ್ಯಾಸ ಇರುವುದಿಲ್ಲ. ಈ ಫೋನ್ ಅದಕ್ಕೆ ಹೊರತಾಗಿಲ್ಲ.

ಕಾರ್ಬನ್ ಸ್ಪಾರ್ಕಲ್ ವಿ ಫೋನ್ ಕೈಯಲ್ಲಿ ಹಿಡಿಯುವ ಅನುಭವ ಪರವಾಗಿಲ್ಲ. ಇದರ ಹಿಂದುಗಡೆಯ ಕವಚ ತೆಗೆಯಬಹುದು. ತೆಗೆದಾಗ ಸಿಮ್ ಕಾರ್ಡ್ ಮತ್ತು ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಜಾಗಗಳು ಕಂಡುಬರುತ್ತವೆ. ಬ್ಯಾಟರಿ ಕೂಡ ತೆಗೆಯಬಹುದು ಹಾಗೂ ಬದಲಿಸಬಹುದು. ಹಿಂದುಗಡೆಯ ಕವಚ ಸ್ವಲ್ಪ ರಬ್ಬರ್ ಮಾದರಿಯ ಪ್ಲಾಸ್ಟಿಕ್ ಆಗಿದೆ. ಸ್ವಲ್ಪ ಬಳುಕುತ್ತದೆ. ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿಗಾಗಿ ಸ್ವಲ್ಪ ಉಬ್ಬಿದ ಜಾಗ ಈ ಕವಚದಲ್ಲಿದೆ. ಅದನ್ನು ಹಾಕಿದಾಗ ಅವು ಒಳಗಿರುವ ನಿಜವಾದ ಬಟನ್‌ಗಳ ಮೇಲೆ ಕುಳಿತುಕೊಳ್ಳುತ್ತವೆ. ಕವಚದ ಗುಣಮಟ್ಟ ಚೆನ್ನಾಗಿಲ್ಲ. ಒಟ್ಟಿನಲ್ಲಿ ಫೋನಿನ ದೇಹ, ರಚನೆ ಮತ್ತು ಗಡಸುತನಕ್ಕೆ ಅಲ್ಲಿಂದಲ್ಲಿಗೆ ಪಾಸ್ ಮಾರ್ಕು ನೀಡಬಹುದಷ್ಟೆ. ಎಲ್ಲ ಭಾರತೀಯ ಕಂಪೆನಿಯ ಫೋನ್‌ಗಳಂತೆ ಇದು ಕೂಡ ಚೈನಾ ದೇಶದಲ್ಲಿ ತಯಾರಾಗಿದೆ.

ನಾಲ್ಕು ಹೃದಯಗಳ ಪ್ರೊಸೆಸರ್ ಜೊತೆಗೆ ಗ್ರಾಫಿಕ್ಸ್ ಪ್ರೊಸೆಸರ್ ಕೂಡ ಇರುವುದರಿಂದ ಇದು ಒಂದು ಮಟ್ಟಿಗೆ ಶಕ್ತಿಶಾಲಿಯಾದ ಫೋನ್ ಆಗಿದೆ. ಕಾರ್ಯಕ್ಷಮತೆ ನಿಜಕ್ಕೂ ಚೆನ್ನಾಗಿದೆ. ಹೆಚ್ಚಿನ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವ ಅನುಭವ ಚೆನ್ನಾಗಿಯೇ ಇದೆ. ಮೂರು ಆಯಾಮಗಳ ಆಟಗಳನ್ನೂ ಚೆನ್ನಾಗಿಯೇ ಅಡಬಹುದು. ವಿಡಿಯೊ ವೀಕ್ಷಣೆ ಪರವಾಗಿಲ್ಲ. ಹೈಡೆಫಿನಿಶನ್ ಪರದೆ ಇಲ್ಲದಿದ್ದರೂ ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಹಾಗೆ ಮಾಡುವಾಗ ಎಲ್ಲೂ ಅಡೆತಡೆ (jerky) ಅನ್ನಿಸಲಿಲ್ಲ. ಆದರೆ ನೆನಪಿಟ್ಟುಕೊಳ್ಳಿ. ಇದರ ಪರದೆ ಹೈಡೆಫಿನಿಶನ್ ಅಲ್ಲ. ಹೈಡೆಫಿನಿಶನ್‌ ವಿಡಿಯೊವನ್ನು ಕಡಿಮೆ ರೆಸೊಲೂಶನ್ನಿನ ಪರದೆಯಲ್ಲಿ ನೋಡಿದರೆ ಯಾವ ಅನುಭವ ಬರುತ್ತದೋ ಅದೇ ಅನುಭವ ಬರುತ್ತದೆ.

ಕ್ಯಾಮೆರಾ ಮಾತ್ರ ಚೆನ್ನಾಗಿಲ್ಲ ಎಂದೇ ಹೇಳಬಹುದು. ಹೆಸರಿಗೆ 5 ಮೆಗಾಪಿಕ್ಸೆಲ್ ರೆಸೊಲೂಶನ್ ಇದೆ. ವಿಡಿಯೊ ಚಿತ್ರೀಕರಣವನ್ನೂ ಮಾಡಬಹುದು. ಅದರೆ ಫಲಿತಾಂಶಗಳು ತೃಪ್ತಿದಾಯಕವಾಗಿಲ್ಲ. ಆಶ್ಚರ್ಯದ ಸಂಗತಿ ಎಂದರೆ ಇದರ ಆಡಿಯೊ ಸ್ವಲ್ಪ ಮಟ್ಟಿಗೆ ಉತ್ತಮವಾಗಿಯೇ ಇದೆ. ಅಂದರೆ ನೀಡುವ ಹಣಕ್ಕೆ ಹೋಲಿಸಿದರೆ ಚೆನ್ನಾಗಿದೆ ಎಂದೇ ಹೇಳಬಹುದು. ಉತ್ತಮ ಇಯರ್‌ಫೋನ್ (ಕ್ರಿಯೇಟಿವ್, ಕೋವೋನ್, ಬೋಸ್, ಇತ್ಯಾದಿ) ಬಳಸಿದರೆ ಉತ್ತಮ ಸಂಗೀತ ಆಲಿಸಬಹುದು. ಇದರ ಜೊತೆ ನೀಡಿರುವ ಇಯರ್‌ಫೋನಿನ ಗುಣಮಟ್ಟ ಮಾತ್ರ ಚೆನ್ನಾಗಿಲ್ಲ.

ಆಂಡ್ರಾಯಿಡ್ ಒನ್‌ನಲ್ಲಿ ಕೆಲವು ಆಪ್‌ಗಳು ಇಲ್ಲ. ಉದಾಹರಣೆಗೆ ವಿಡಿಯೊ ಪ್ಲೇಯರ್, ಫೈಲ್ ಮ್ಯಾನೇಜರ್, ಇತ್ಯಾದಿ. ಆದರೆ ಅವುಗಳನ್ನು ನೀವು ಗೂಗ್ಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಹಾಕಿಕೊಳ್ಳಬಹುದು. ಆಂಡ್ರಾಯಿಡ್್ 4.4 (ಕಿಟ್‌ಕ್ಯಾಟ್) ಆಗಿರುವುದರಿಂದ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಕನ್ನಡದ ಕೀಲಿಮಣೆ ಹಾಕಿಕೊಂಡರೆ ಕನ್ನಡದಲೇ ಪಠ್ಯ ಊಡಿಸಬಹದು. ಒಟ್ಟಿನಲ್ಲಿ ಖಂಡಿತ ಮೋಸವಿಲ್ಲ ಎನ್ನಬಹುದಾದ ಫೋನ್.   

ವಾರದ ಆಪ್ (app)
ಬ್ಯಾಲನ್ಸ್ 3ಡಿ
Balance 3D ಮೂರು ಆಯಾಮಗಳ ಸಮಸ್ಯೆಯ ಆಟ. ಇದರಲ್ಲಿ 31 ಹಂತಗಳಿವೆ. ಒಂದು ಗೋಳವನ್ನು ಸರಿಯಾಗಿ ಬ್ಯಾಲನ್ಸ್ ಮಾಡುತ್ತ ತಳ್ಳುತ್ತ ಅದನ್ನು ಹಂತ ಹಂತವಾಗಿ ಗಮ್ಯ ಗುರಿಯತ್ತ ಒಯ್ಯಬೇಕು. ಇದರ ಮೂರು ಆಯಾಮಗಳ ಗ್ರಾಫಿಕ್ಸ್ ಅತ್ಯುತ್ತಮವಾಗಿದೆ. ಹಲವು ನಮೂನೆಯ ನಿಯಂತ್ರಣಗಳು, ಕ್ಯಾಮೆರಾ ದೃಶ್ಯಗಳು, ಗುರುತ್ವದ ಬಳಕೆ, ಎಲ್ಲ ಇದರಲ್ಲಿವೆ. ಒಂದು ಉತ್ತಮ ಆಟ ಎನ್ನಬಹುದು. ಇದನ್ನು ಆಡಬೇಕಾದರೆ ನಿಮ್ಮಲ್ಲಿ ಹೆಚ್ಚಿನ ಶಕ್ತಿಯ ಆಂಡ್ರಾಯಿಡ್್ ಫೋನ್ ಇರಬೇಕು. ಹೆಚ್ಚಿಗೆ ಗ್ರಾಫಿಕ್ಸ್ ಪ್ರೊಸೆಸರ್ ಇದ್ದರೆ ಇನ್ನೂ ಒಳ್ಳೆಯದು. ಇದು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ.

ಗ್ಯಾಜೆಟ್ ಸುದ್ದಿ
ಆಲ್ಕಾಟೆಲ್ ಫೈರ್‌ಫಾಕ್ಸ್ ಫೋನ್
ಅಲ್ಕಾಟೆಲ್ ಕಂಪೆನಿ ಮೊಝಿಲ್ಲಾ ಫೈರ್‌ಫಾಕ್ಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಫೈರ್ ಸಿ ಎಂಬ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಮಾನ್ಯ ಫೋನ್ ಬಳಸುವವರು ಸ್ಮಾರ್ಟ್‌ಫೋನ್‌ ಕಡೆಗೆ ವಲಸೆ ಹೋಗುವಂತೆ ಮಾಡಲು ಫೈರ್‌ಫಾಕ್ಸ್ ಕಾರ್ಯಾಚರಣ ವ್ಯವಸ್ಥೆ ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿರುವ ಇನ್ನೊಂದು ಫೋನ್ ಇದಾಗಿದೆ. ಇದರ ಬೆಲೆ ಕೇವಲ ₹1990. 1 ಗಿಗಾಹರ್ಟ್ಸ್ ಪ್ರೊಸೆಸರ್, 1.3 ಮೆಗಾಪಿಕ್ಸೆಲ್ ಕ್ಯಾಮೆರಾ, 3.5 ಇಂಚಿನ 480 x 320 ಪಿಕ್ಸೆಲ್ ರೆಸೊಲೂಶನ್‌ನ ಪರದೆ ಎಲ್ಲ ಇವೆ. 2ಜಿ ಸೌಲಭ್ಯ ಮಾತ್ರ ಇದೆ. 3ಜಿ ಇಲ್ಲ. ಸದ್ಯಕ್ಕೆ ಫ್ಲಿಪ್‌ಕಾರ್ಟ್ ಮೂಲಕ ಮಾತ್ರ ದೊರೆಯುತ್ತದೆ. ಇದರಲ್ಲಿ ಹಿಂದಿ, ತಮಿಳು ಮತ್ತು ಬೆಂಗಾಳಿ ಭಾಷೆಗಳಿವೆ. ಕನ್ನಡವಿಲ್ಲ.

ಗ್ಯಾಜೆಟ್ ತರ್ಲೆ
ಕಟ್ಟಡವೊಂದರಲ್ಲಿ ಇದ್ದ ಎಚ್ಚರಿಕೆ ಫಲಕ: ಬೆಂಕಿ ಅವಘಡವಾದಲ್ಲಿ ಮೊದಲು ಕಟ್ಟಡದಿಂದ ಸುರಕ್ಷಿತವಾಗಿ ಹೊರಗೆ ಓಡಿ. ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಬರೆಯುತ್ತ ಕುಳಿತುಕೊಳ್ಳಬೇಡಿ.

ಗ್ಯಾಜೆಟ್ ಸಲಹೆ
ಶಿಕಾರಿಪುರದ ಭೀಮಪ್ಪ ಅವರ ಪ್ರಶ್ನೆ: ನನ್ನ ಆಂಡ್ರಾಯಿಡ್ ಫೋನ್‌ನಲ್ಲಿ ಇಮೇಲ್‌ನಲ್ಲಿ ಬಂದ ನುಡಿ ಏಕಭಾಷೆಯಲ್ಲಿ ಟೈಪಿಸಿದ ಟೆಕ್ಸ್ಟ್‌ ಅನ್ನು ಓದಲು ಸಪೋರ್ಟ್ ಮಾಡುವ ಆಪ್‌ ಅನ್ನು ತಿಳಿಸಿ.

ಉ:  ಈ ಪ್ರಶ್ನೆಗೆ ಹಲವು ಸಲ ಉತ್ತರಿಸಲಾಗಿದೆ. ನುಡಿ, ಬರಹ, ಶ್ರೀಲಿಪಿ ಇತ್ಯಾದಿ ತಂತ್ರಾಂಶಗಳಲ್ಲಿ ತಯಾರಿಸಿದ ಯುನಿಕೋಡ್ ಅಲ್ಲದ ಹಳೆಯ ವಿಧಾನದ ಫಾಂಟ್ ಆಧಾರಿತ ಪಠ್ಯಗಳನ್ನು ಫೋನ್, ಟ್ಯಾಬ್ಲೆಟ್‌ಗಳಲ್ಲಿ ಓದಲು ಸಾಧ್ಯವಿಲ್ಲ. ಪಠ್ಯವನ್ನು ಯುನಿಕೋಡ್‌ಗೆ ಬದಲಾಯಿಸಿದರೆ ಮಾತ್ರ ಆಂಡ್ರಾಯಿಡ್ ಫೋನ್ ಮತ್ತು ಟ್ಯಾಬ್ಲೆಟ್, ಐಫೋನ್ ಮತ್ತು ಐಪ್ಯಾಡ್ ಹಾಗೂ ವಿಂಡೋಸ್ ಫೋನ್‌ಗಳಲ್ಲಿ ಓದಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT