ಸಾರಾ ಫ್ಲಾವರ್ ಆಡಮ್ಸ ಸೋಫಾದಲ್ಲಿ ಕುಳಿತೇ ಇದ್ದಳು. ಸಂಜೆಯಾಗಲಿತ್ತು. ಸೂರ್ಯ ದಣಿದು ಸುಸ್ತಾದಂತೆ ತನ್ನ ಪ್ರಖರವಾದ ಬಿಳಿಯ ಬಣ್ಣವನ್ನು ಕಳೆದುಕೊಂಡು ಕೇಸರಿ ಬಣ್ಣದ ಚೆಂಡಾಗಿ ಸಮುದ್ರದಲ್ಲಿ ಮುಳುಗಲಿದ್ದ. ತನ್ನ ಸುತ್ತಮುತ್ತ ತಲೆದಿಂಬುಗಳನ್ನಿರಿಸಿಕೊಂಡು ಕಿಟಕಿಯ ಮೂಲಕ ಈ ದೃಶ್ಯವನ್ನು ನೋಡುತ್ತ ಸಾರಾ ಕುಳಿತೇ ಇದ್ದಳು.

ಬಹುದಿನಗಳ ಅನಾರೋಗ್ಯದಿಂದ ಶರೀರ ಬಡಕಲಾಗಿದ್ದರೂ ಅವಳ ಮುಖದಲ್ಲಿಯ ಆಕರ್ಷಣೆ, ಕಾಂತಿ ಕುಂದಿರಲಿಲ್ಲ. ಮೂರು ವರ್ಷಗಳ ಕಾಲ ತನ್ನನ್ನು ಹಣ್ಣು ಮಾಡಿದ ರೋಗ ಅವಳ ವೃತ್ತಿಯನ್ನು ಹೊಸಕಿಹಾಕಿತ್ತು. ಸೂರ್ಯ ಮುಳುಗಿದ, ಕತ್ತಲಾಯಿತು. ಸಾರಾ ನಿಟ್ಟಿಸಿರುಗರೆದಳು. ಇಂದು ಯಾಕೋ ಅವಳ ಮನಸ್ಸೇ ಸ್ಥಿರವಾಗಿಲ್ಲ, ಯಾವುದೋ ಅವ್ಯಕ್ತ ಸಂಕಟ ಕಾಡುತ್ತಿದೆ.

ದೀಪ ಹಚ್ಚಿಕೊಂಡು ಪುಸ್ತಕವನ್ನೋದಲು ಪ್ರಯತ್ನಿಸಿದಳು. ಊಹೂಂ, ಒಂದು ಸಾಲನ್ನೂ ಓದಲಾಗುತ್ತಿಲ್ಲ. ಆಕೆಗೆ ಈ ಮೂರು ವರ್ಷದ, ನಿಧಾನವಾಗಿ ತನ್ನನ್ನು ಕೊಲ್ಲುವ ರೋಗದ ಚಿಂತೆಯಿಲ್ಲ. ರೋಗ ಅನಿವಾರ್ಯವಾಗಿ ತಂದ ನೋವಾಗಲೀ ಅಶಕ್ತತೆಯಾಗಲೀ ಅಥವಾ ತಾನು ಏಕಾಂಗಿಯಾಗಿ ಕಳೆಯಬೇಕಾದ ಪರಿಸ್ಥಿತಿಯಾಗಲೀ ಅವಳ ದುಃಖಕ್ಕೆ ಕಾರಣವಾಗಿರಲಿಲ್ಲ. ಆದರೆ ತಾನು ಸದಾಕಾಲ ಕಂಡ ಕನಸು ನನಸಾಗುವ ಹಂತದಲ್ಲಿ ಈ ಪರಿಸ್ಥಿತಿ ಬಂದದ್ದು ತಡೆಯಲಾರದ ದುಃಖವಾಗಿತ್ತು.

ಸಾರಾಳಿಗೆ ಜೀವನದಲ್ಲಿ ಒಂದೇ ಗುರಿ. ಅದು ರಂಗಭೂಮಿಯ ಅತ್ಯಂತ ಶ್ರೇಷ್ಠ ನಟಿಯಾಗುವುದು. ಅದಕ್ಕೋಸ್ಕರ ಆಕೆ ಕಷ್ಟಪಟ್ಟಿದ್ದು ಎಷ್ಟು, ಓದಿದ್ದು ಎಷ್ಟು. ಅನೇಕ ಹಿರಿಯ ನಟ, ನಟಿಯರನ್ನು ಕಂಡು, ಸಂದರ್ಶಿಸಿ ಅವರ ಮಾತುಗಳನ್ನು ಅರಗಿಸಿಕೊಂಡದ್ದು ಅದೆಷ್ಟು ಕಾಲವೋ. ಹಗಲು, ರಾತ್ರಿ ಕೇವಲ ರಂಗಭೂಮಿಯದ್ದೇ ಚಿಂತನೆ. ಕೊನೆಗೆ ಅದು ಫಲ ನೀಡುವ ಕಾಲ ಬಂದಿತ್ತು. ಸಾರಾ ಆಡಮ್ಸ ಶೇಕ್ಸಪೀಯರನ ‘ಮ್ಯಾಕ್ಬೆಥ್’ ನಾಟಕದಲ್ಲಿ ಲೇಡಿ ಮ್ಯಾಕಬೆಥ್ಳಾಗಿ ನೀಡಿದ ಅಪೂರ್ವ ಅಭಿನಯ ‘ಮನೆಮನೆಯ ಮಾತಾಗಿತ್ತು’.

ವಿಮರ್ಶಕರಂತೂ ಸಾರಾಳ ನಟನೆಯ ಮಾಂತ್ರಿಕತೆಯನ್ನು ನೋಡಬೇಕಾದರೆ ಮ್ಯಾಕ್ಬೆಥ್ ನಾಟಕ ನೋಡಲೇಬೇಕೆಂದು ಬರೆದಿದ್ದರು. ಎಲ್ಲರೂ ಆಕೆಯನ್ನು ಒಬ್ಬ ಮಹಾನ್ ನಟಿ, ಇನ್ನು ಮುಂದೆ ರಂಗಭೂಮಿಯ ಸಾಮ್ರಾಜ್ಞಿ ಆಕೆ ಎಂದು ವರ್ಣಿಸಿದ್ದರು. ಆದರೆ ದುರ್ದೈವ, ಆ ಯಶಸ್ಸು ಕೇವಲ ಕ್ಷಣಿಕವಾಯಿತು. ರಂಗಭೂಮಿಯ ಮಧ್ಯದಿಂದ ದೈವ ಅವಳನ್ನು ಎತ್ತಿಕೊಂಡು ತಳ್ಳುಗಾಲಿಯ ಕುರ್ಚಿಯ ಮೇಲೆ ಕೂಡ್ರಿಸಿತು. ಆಕೆ ದೈವಭಕ್ತೆ. ಈ ನಿರಾಸೆಯ ಕಾರ್ಗತ್ತಲಿನಲ್ಲಿಯೂ ಆಕೆ ಭಗವಂತನಲ್ಲಿ ಪ್ರಾರ್ಥನೆಯನ್ನು ನಿಲ್ಲಿಸಿರಲಿಲ್ಲ.

ಅವನನ್ನು ದೂಷಿಸಲಿಲ್ಲ. ತನ್ನ ಇಡೀ ದಿನದ ಸಮಯವನ್ನು ಬೈಬಲ್ ಓದುವುದರಲ್ಲೋ, ಸಂತರ, ಸಾಧಕರ ಜೀವನಚರಿತ್ರೆಗಳನ್ನು ಓದುವುದರಲ್ಲಿಯೇ ಕಳೆಯುತ್ತಿದ್ದಳು. ಇತ್ತೀಚಿಗೆ ಆಕೆ ಬರವಣಿಗೆಯನ್ನು ಮಾಡುತ್ತಿದ್ದಳು. ತನ್ನ ಹೃದಯದಲ್ಲಿ ಕುದಿಯುತ್ತಿರುವ ಭಾವನೆಗಳಿಗೆ ಇದೊಂದು ರಹದಾರಿಯಾಗಿತ್ತು. ಇಂದು ದುಗುಡ ತುಂಬಿದ ಮನದ ಭಾವನೆಗಳನ್ನು ಹರಸಲು ಕಾಗದ, ಪೆನ್ನು ತೆಗೆದುಕೊಂಡಳು. ಸರಸರನೇ ಬರೆದಳು. ಕೆನ್ನೆಯ ಮೇಲೆ ಕಣ್ಣೀರು ಇಳಿಯುತ್ತಿದ್ದಂತೆ ಅಕ್ಷರಗಳು ಕಾಗದದ ಮೇಲಿಳಿದವು.
ಆ ಕವನದ ಮೊದಲ ಸಾಲು “ನಿಯರರ್ ಮೈ ಗಾಡ್ ಟು ದೀ”.
ನಿನ್ನ ಹತ್ತಿರವೇ ನನ್ನ ಪ್ರಭು,
ನಿನ್ನ ಹತ್ತಿರವೇ
ನನ್ನ ಮೇಲಕೆತ್ತುವುದು ಶಿಲುಬೆಯಾದರೂ,
ನನ್ನ ಹಾಡೊಂದೇ ಪ್ರಭು,
ನಿನ್ನ ಹತ್ತಿರವೇ ನನ್ನ ಪ್ರಭು,
ನಿನ್ನ ಹತ್ತಿರವೇ.

ಅಪಾರ ಶ್ರದ್ಧೆಯ ಸೋನೆಯಂತಿದ್ದ ಈ ಕವನ ಮುಗಿಸಿ ನಿರಾಳಳಾದಳು ಸಾರಾ. ಮುಂದೆ ಅವಳ ಬದುಕಿನ ಸೂರ್ಯನೂ ಅಸ್ತಂಗತನಾದ. ಆದರೆ ಈ ಹಾಡು ವಿಶ್ವವಿಖ್ಯಾತವಾಯಿತು, ಸಹಸ್ರಾರು ಶಾಲೆಗಳಲ್ಲಿ, ಚರ್ಚುಗಳಲ್ಲಿ ಮೆಚ್ಚಿನ ಪ್ರಾರ್ಥನೆಯಾಯಿತು. ಅಮೇರಿಕೆಯ ಇಪ್ಪತ್ತೈದನೆಯ ರಾಷ್ಟ್ರಪತಿ ಮೆಕಿನ್ಲೆ ಹಂತಕನ ಗುಂಡಿಗೆ ಗುರಿಯಾಗಿ ಮರಣಸನ್ನಿಹಿತನಾದಾಗ ಆತ ಕೇಳಿದ್ದು ಈ ಹಾಡನ್ನೇ ಹಾಡಬೇಕೆಂದು. ಇನ್ನೊಬ್ಬ ರಾಷ್ಟ್ರಪತಿ ರೂಸ್ವೆಲ್ಟರಿಗೂ ಈ ಹಾಡು ಅತ್ಯಂತ ಪ್ರಿಯವಾದದ್ದು. ಅದನ್ನು ಕೇಳಿದಾಗಲೊಮ್ಮೆ ಅವರು ಕಣ್ಣೀರು ಸುರಿಸುತ್ತಿದ್ದರಂತೆ.

ಇಂದಿಗೂ ಅದು ಯುರೋಪ್ನಲ್ಲಿ, ಅಮೆರಿಕೆಯಲ್ಲಿ ಅತ್ಯಂತ ಜನಪ್ರಿಯವಾದ ಪ್ರಾರ್ಥನೆ. ಅದೊಂದು ಅಮೃತಕ್ಷಣ. ಈ ಕ್ಷಣದಲ್ಲೇ ಅತ್ಯದ್ಭುತವಾದ ಕಾವ್ಯ ಹುಟ್ಟುತ್ತದೆ. ಕಾವ್ಯ ಜನಿಸುವ ಕಾಲದಲ್ಲಿ ಕವಿಯ ಮನಸ್ಸು ಎಷ್ಟು ಆರ್ತವಾಗಿರುತ್ತದೋ, ಎಷ್ಟು ಪರಿಶುದ್ಧವಾಗಿರುತ್ತದೋ ಅಷ್ಟು ಅದ್ಭುತ ಕಾವ್ಯ ಹುಟ್ಟುತ್ತದೆ. ಅದು ಕವಿಯ ಜೀವನದ, ಅನುಭವದ, ಕಾವ್ಯಶಕ್ತಿಯ, ಪರಿಶುದ್ಧತೆಯ ಸರ್ವಸ್ವವನ್ನೂ ಅಪೇಕ್ಷಿಸುತ್ತದೆ. ಅಂಥ ಕ್ಷಣ ದೊರೆತಾಗ ಪ್ರಪಂಚಕ್ಕೊಂದು ಜಿರಂಜೀವಿಯಾದ ಕಾವ್ಯ ದೊರಕುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.