ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಮನೆಗೆ ಮರಳಿದ ಚಾರಿತ್ರಿಕ ರೂಪಕ

Last Updated 6 ಜನವರಿ 2015, 19:30 IST
ಅಕ್ಷರ ಗಾತ್ರ

ಜಗತ್ತಿನ ಹಲವು ಕಾದಂಬರಿಗಳಲ್ಲಿ ಹೊಸ ಶಿಕ್ಷಣ ಪಡೆದ ನಾಯಕನೊಬ್ಬ ನಗರದಿಂದ ಹಳ್ಳಿಗೆ ಮರಳಿ ತನ್ನ ಪರಿಸರವನ್ನು ಸುಧಾರಿಸಲೆತ್ನಿಸುತ್ತಾನೆ. ಹಲಬಗೆಯ ಶಕ್ತಿಗಳೊಂದಿಗೆ ಹೋರಾಡುತ್ತಾನೆ. ಹೊಸ  ಆದರ್ಶಗಳನ್ನು ರೂಪಿಸಲೆತ್ನಿಸುತ್ತಾನೆ. ನೂರು ವರ್ಷಗಳ ಕೆಳಗೆ, 1915ರ ಜನವರಿ ಒಂಬತ್ತನೆಯ ತಾರೀಕು ದಕ್ಷಿಣ ಆಫ್ರಿಕಾದಿಂದ ‘ಅರೇಬಿಯಾ’ ಎಂಬ ಹಡಗಿನಲ್ಲಿ ಮುಂಬೈಗೆ ಬಂದಿಳಿದ ಮೋಹನದಾಸ್ ಕರಮಚಂದ ಗಾಂಧಿ ಮರಳಿ ಭಾರತವನ್ನು ಹುಡುಕಿಕೊಂಡ ಮನೆಮಗ ನಂತೆ ಇವತ್ತು ಚರಿತ್ರೆಯ ಹಿನ್ನೋಟದಲ್ಲಿ ಕಾಣತೊಡಗುತ್ತಾರೆ.

ಇದಾದ ಎರಡೂವರೆ ವರ್ಷಗಳ, ನಂತರ ಮತ್ತೊಬ್ಬ ಮನೆಮಗ ಅಂಬೇಡ್ಕರ್ ಕೂಡ ಇಂಗ್ಲೆಂಡಿನಿಂದ ಮುಂಬೈಗೆ ಬಂದಿಳಿದರು. ಗಾಂಧೀಜಿಯವರ ಜಾತಿಯಲ್ಲಿ ಸಮುದ್ರ ದಾಟಿ ವಿದೇಶಕ್ಕೆ ಹೋಗುವುದು ನಿಷಿದ್ಧವಾಗಿತ್ತು; ಅಂಬೇಡ್ಕರ್ ಅವರಿಗೆ ಆ ಸಾಧ್ಯತೆ ತೀರ ದೂರದಲ್ಲಿತ್ತು.  ಇವೆಲ್ಲ ಕಷ್ಟಗಳನ್ನು ದಾಟಿ ಸಮುದ್ರ ಪ್ರಯಾಣ ಮಾಡಿ ಮರಳಿ ಮನೆಗೆ  ಬಂದ  ಇಬ್ಬರು ನಾಯಕರು ಭಾರತದ ಚರಿತ್ರೆಯ ಚಕ್ರದ ದಿಕ್ಕನ್ನು ಬೇರೊಂದು ದಿಕ್ಕಿಗೆ ತಿರುಗಿಸಿದ ಕತೆ ಎಲ್ಲರಿಗೂ ಗೊತ್ತು.

ಇಂಡಿಯಾಕ್ಕೆ ಹೊರಟು ಹಡಗಿನಲ್ಲಿ ಕೂತ ಗಾಂಧೀಜಿಯವರ ‘ಯುದ್ಧಭೂಮಿ ಸಿದ್ಧ ವಾಗಿತ್ತು; ಪ್ರಯಾಣದ ಆನಂದ ಹಾಗೂ ಮಹತ್ತರ ಕೆಲಸವೊಂದರಲ್ಲಿ ತೊಡಗಲಿರು ವವನ  ಆತಂಕಗಳೆರಡೂ ಅವರಲ್ಲಿ ತುಂಬಿದ್ದವು’  ಎಂದು ‘ಮೋಹನದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್, ಹಿಸ್ ಪೀಪಲ್ ಅಂಡ್ ಆ್ಯನ್ ಎಂಪೈರ್’ ಜೀವನ ಚರಿತ್ರೆಯಲ್ಲಿ ರಾಜಮೋಹನ ಗಾಂಧಿ ಬರೆಯುತ್ತಾರೆ. ಆಗ ಗಾಂಧೀಜಿ ಬರೆದ ಪತ್ರದಲ್ಲಿ ಅವರ ತಳಮಳ ದಾಖಲಾಗಿದೆ: “ಇಂಡಿಯಾಕ್ಕೆ ಹೊರಡುವುದು ಅದೆಷ್ಟು ಸಲ ತಪ್ಪಿ ಹೋಗಿದೆಯೆಂದರೆ, ನಾನು ಇವತ್ತು ಇಂಡಿಯಾಕ್ಕೆ ಹೊರಟಿರುವ ಹಡಗಿನಲ್ಲಿ ಕೂತಿರುವುದು ನಿಜವೆಂದು ನನಗೆ ನಂಬಲು ಆಗುತ್ತಲೇ ಇಲ್ಲ. ಇಂಡಿಯಾ ತಲುಪಿದ ಮೇಲೆ ನಾನೇನು ಮಾಡಬಹುದು? ಅದೇನೇ ಇರಲಿ, ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು’ ಎಂಬ ಭಾವವಷ್ಟೇ ನನಗೀಗ ನೆಮ್ಮದಿ ಕೊಡುತ್ತಿರುವುದು”.

ಈ ಪಯಣ, ಮರುಪಯಣಗಳ ನಡುವೆ ಮೋಹನದಾಸ್ ವಸಾಹತುಕಾರ ದೇಶವಾದ ಇಂಗ್ಲೆಂಡಿಗೆ ಹೋಗಿ ಕಾನೂನು ಶಿಕ್ಷಣ ಪಡೆದದ್ದು ಹಾಗೂ ವಸಾಹತೀಕರಣದಿಂದ ನೊಂದ ದಕ್ಷಿಣ  ಆಫ್ರಿಕಾದಲ್ಲಿ ಅನುಭವಿಸಿದ್ದು, ಚಿಂತಿಸಿದ್ದು, ಹೋರಾಡಿದ್ದು, ಹಿಂಜರಿಕೆಯ ತರುಣನೊಬ್ಬ ನಿರ್ಭೀತ ನಾಯಕನಾದದ್ದು ಎಲ್ಲವೂ ಸೇರಿವೆ. ಈ ಮರುಪಯಣದ ಹೊತ್ತಿಗೆ ಅವರೊಳಗೆ ಆಧುನಿಕ ನಾಗರಿಕತೆ ಕುರಿತ ಒರಿಜಿನಲ್ ಫಿಲಾಸಫಿಯೂ ಇಂಡಿಯಾದ ಬಿಡುಗಡೆಗಾಗಿ ಹೊಸ ಕಾರ್ಯಯೋಜನೆಯೂ ಬೆಳೆಯತೊಡಗಿತ್ತು. ಇಂಡಿಯಾಕ್ಕೆ ಬರುವ ಐದು ವರ್ಷಗಳ ಕೆಳಗೆ, ಗಾಂಧೀಜಿ ಇಂಗ್ಲೆಂಡಿ ನಿಂದ ದಕ್ಷಿಣ ಆಫ್ರಿಕಾಕ್ಕೆ ಮರಳಿ ಬರುತ್ತಿರುವಾಗ ಹಡಗಿನಲ್ಲಿ ಒಂಬತ್ತು ದಿನಗಳ ಕಾಲ ತಮ್ಮ  ಜೀವನದರ್ಶನವನ್ನು ಮಂಡಿಸುವ ‘ಹಿಂದ್ ಸ್ವರಾಜ್’ ಬರೆದಿದ್ದರು. ಬಲಗೈ ಸೋತಾಗ ಎಡಗೈಯಲ್ಲಿ ಬರೆಯುತ್ತಿದ್ದರು! ಎಡಗೈಯಲ್ಲಿ ಬರೆಯುವ ಈ ಹೊಸ ಕಲೆಯನ್ನು ಕೊನೆತನಕ ಉಳಿಸಿಕೊಂಡರು!

ರಾಜಮೋಹನ್ ಗಾಂಧಿ ವಿವರಿಸುವಂತೆ ‘ಸ್ವರಾಜ್ ಎಂದರೆ  ಪ್ರತಿ ವ್ಯಕ್ತಿಯೂ ತನ್ನನ್ನು ತಾನು ಆಳಿಕೊಳ್ಳುವುದು; ರಾಜಕೀಯ ದೃಷ್ಟಿಯಲ್ಲಿ ಸ್ವರಾಜ್ ಎಂದರೆ ಹೋಂರೂಲ್  ಅಥವಾ ನಮ್ಮನ್ನು ನಾವೇ ಆಳಿಕೊಳ್ಳುವ ಸರ್ಕಾರದ ಸ್ಥಾಪನೆ ಎಂದರ್ಥ. ಆದರೆ ನಿಜವಾದ ಅರ್ಥದಲ್ಲಿ ಸ್ವಯಮಾಡಳಿತವೆನ್ನು ವುದು ನಾಯಕರು ಮತ್ತು ನಾಗರಿಕರು ತಮ್ಮನ್ನು ತಾವು ಎಷ್ಟರಮಟ್ಟಿಗೆ ನಿಯಂತ್ರಿಸಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ’. ‘ಇನ್ನು ಮುಂದೆ ನನ್ನ ಬದುಕು ಸ್ವರಾಜ್ಯದ ಸಾಧನೆಗೆ ಮುಡಿಪಾ ಗಿದೆ ಎಂದು ನನ್ನ ಮನಸ್ಸಾಕ್ಷಿ ಹೇಳುತ್ತಿದೆ’ ಎಂದು ಗಾಂಧೀಜಿ ಆ ಘಟ್ಟದಲ್ಲಿ ಬರೆದರು.

ಗಾಂಧೀಜಿ ಇಂಡಿಯಾಕ್ಕೆ ಮರಳಿ ಬಂದದ್ದು ಈ  ಬಗೆಯ ತಾತ್ವಿಕ ಹಾಗೂ ಮಾನಸಿಕ ಸಿದ್ಧತೆಯ ಜೊತೆಗೆ. ಆ ಹೊತ್ತಿಗಾಗಲೇ ಹಿಂಸೆ, ಅಹಿಂಸೆಗಳ ಬಗ್ಗೆ ಅವರ ನಿಲುವು ಸ್ಪಷ್ಟವಾಗಿತ್ತು. ಆಫ್ರಿಕಾದಲ್ಲಿ ಅವರು ಮುನ್ನಡೆಸಿದ ಹೋರಾ ಟದ ಅನುಭವ ಅಹಿಂಸಾತ್ಮಕ ಸತ್ಯಾ ಗ್ರಹವನ್ನು ಹೇಗೆ ರೂಪಿಸಬಹುದೆಂಬುದನ್ನು ಅವರಿಗೆ ಹೇಳಿಕೊಟ್ಟಿತ್ತು. ಪ್ರಭುತ್ವವನ್ನು, ಅಧಿಕಾರವನ್ನು ಮನುಷ್ಯನೊಳಗಿನ ಸಾತ್ವಿಕ ಶಕ್ತಿಯ ಮೂಲಕ ಎದುರಿಸುವ ರೀತಿಯನ್ನೂ ಅವರು ಅಷ್ಟೊತ್ತಿಗಾಗಲೇ ಪ್ರಯೋಗಿಸಲೆತ್ನಿಸಿದ್ದರು.

ಆಫ್ರಿಕಾದಲ್ಲಿ ಫೀನಿಕ್ಸ್ ಫಾರ್ಮ್ ಶುರು ಮಾಡಿ ಹಲವು ಧರ್ಮಗಳ, ವರ್ಗಗಳ ಜನರ ಜೊತೆಗೂಡಿ ಬೇಸಾಯ ಮಾಡಿದ ಗಾಂಧೀಜಿ ಮೈಬಗ್ಗಿಸಿ ದುಡಿಯುವುದರ ಆನಂದ ಹಾಗೂ ಅರ್ಥಪೂರ್ಣತೆಗಳೆರಡನ್ನೂ ಕಂಡುಕೊಂಡರು. ಆಫ್ರಿಕಾದಲ್ಲಿ ಅಸ್ಪೃಶ್ಯತೆಯ ವಿವಿಧ ರೂಪಗಳನ್ನು ಕಂಡು, ಅಸ್ಪೃಶ್ಯರ ಕಷ್ಟವನ್ನು ಅರಿತರು. ಪ್ಲೇಗಿಗೆ ತುತ್ತಾದ ರೋಗಿಗಳ ಸೇವೆ ಮಾಡಿದರು. ಮನೆ ಯಲ್ಲಿ ಕುಷ್ಠ ರೋಗಿಯನ್ನಿರಿಸಿಕೊಂಡು ಅವನ ಗಾಯ ತೊಳೆದು ಬಟ್ಟೆ ಸುತ್ತಿದರು. ಬೋಯೆರ್ ಯುದ್ಧದಲ್ಲಿ ‘ಆಂಬುಲೆನ್ಸ್ ಕಾರ್ಪ್ಸ್’ ನಲ್ಲಿ ಕೆಲಸ ಮಾಡಿ ಕರಿಯ ಹಾಗೂ ಬಿಳಿಯ ಗಾಯಾಳುಗಳಿಬ್ಬರ ಸೇವೆಯನ್ನೂ ಮಾಡಿದರು. ಕರಿಯ ದೇಹಗಳ ಮೇಲೆ ಬಿಳಿಯರು ಚೆಲ್ಲಿದ ಹಿಂಸೆಯನ್ನೂ ಕಂಡರು. ಆಫ್ರಿಕಾದ ಮಹಿಳಾ ಯುದ್ಧಕೈದಿಗಳಿಂದ ವಿಚಿತ್ರ ಸಹನೆಯನ್ನೂ ಕಲಿತರು. ನಿತ್ಯ ಹತ್ತಾರು ಮೈಲಿ ನಡೆದು ದೇಹದ ಆರೋಗ್ಯವನ್ನು ಕಾಪಾಡಿ ಕೊಳ್ಳುವುದನ್ನು ರೂಢಿಸಿಕೊಂಡರು. ಇದಂತೂ ಅವರ 78ನೇ ವಯಸ್ಸಿನಲ್ಲೂ ಅವರಿಗೆ 18 ಗಂಟೆಗಳ ಕಾಲ ಚಟುವಟಿಕೆ ಯಿಂದಿರುವ ಕಸುವು ನೀಡಿತ್ತು.

ಇಂಡಿಯಾದುದ್ದಕ್ಕೂ ಪ್ರವಾಸ ಮಾಡಿದ ಗಾಂಧೀಜಿ ಜನರ ಅಸಹಾಯಕತೆಗಳನ್ನು, ಬಡತನವನ್ನು ಅರಿಯಲೆತ್ನಿಸಿದರು. ಆದರೆ ಗಾಂಧೀಜಿಯವರಿಗೆ ಜಾತಿಭಾರತದ ನಿಜವಾದ ಸವಾಲು ಎದುರಾದದ್ದು ಅಹಮದಾಬಾದಿನ ಕೊಚ್ರಾಬ್‌ನಲ್ಲಿ ‘ಸತ್ಯಾಗ್ರಹ  ಆಶ್ರಮ’ವನ್ನು ಶುರು ಮಾಡಿದಾಗ. ಆಶ್ರಮದಲ್ಲಿದ್ದ ಇಪ್ಪತ್ತೈದು ಜನ ಗಂಡಸರು, ಹೆಂಗಸರು ಒಂದೇ ಅಡುಗೆ ಮನೆಯಲ್ಲಿ ಊಟ ಮಾಡುತ್ತಿದ್ದರು; ಒಂದು ಸಂಸಾರದಂತೆ ಬದುಕುತ್ತಿದ್ದರು. ಆ ಘಟ್ಟದಲ್ಲಿ ಅಸ್ಪೃಶ್ಯ ಕುಟುಂಬವೊಂದಕ್ಕೆ ಸೇರಿದ ದಾದಾ ಭಾಯ್, ದಾನಿ ಬೆಹನ್, ಮಗಳು ಲಕ್ಷ್ಮಿ ಆಶ್ರಮದ ನಿಯಮಗಳನ್ನು ಒಪ್ಪಿ ಆಶ್ರಮದಲ್ಲಿ ರಲು ಬಂದರು. ನಂತರದ ಬಿಕ್ಕಟ್ಟು ಕುರಿತು ಗಾಂಧೀಜಿ ಬರೆಯುತ್ತಾರೆ: ‘ಅವರು ಆಶ್ರಮ ಸೇರಿದ ಮೇಲೆ ಆಶ್ರಮಕ್ಕೆ ಸಹಾಯ ಮಾಡುತ್ತಿದ್ದ ಗೆಳೆಯರಲ್ಲಿ ಅಸಮಾಧಾನ ಶುರುವಾಯಿತು. ನಾವು ಬಳಸುತ್ತಿದ್ದ ಬಾವಿ ನಾವಿದ್ದ ಮನೆಯ ಒಡೆಯನದು. ಆ ಬಾವಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದವನು ನಮ್ಮ ಬಕೆಟ್ಟಿನ ನೀರಿನ ಹನಿಗಳಿಂದ ತನಗೆ ಮೈಲಿಗೆಯಾಗುತ್ತಿದೆ ಎಂದು ಗೊಣಗುತ್ತಾ ನಮ್ಮನ್ನೂ ದಾನಿಬೆಹನ್ ಅವರನ್ನೂ ಬಯ್ಯಲು ಶುರುಮಾಡಿದ. ‘ಅವನು ಏನಾದರೂ ಅಂದುಕೊಳ್ಳಲಿ, ಸುಮ್ಮನೆ ನೀರು ಸೇದಿಕೊಂಡು ಬನ್ನಿ’ ಎಂದೆ. ನಾವು ತಿರುಗಿ ಬೈಯದಿದ್ದುದರಿಂದ ಅವನಿಗೆ ತನ್ನ ಬಗ್ಗೆ ನಾಚಿಕೆ ಯಾಗಿ ಸುಮ್ಮನಾದ. ಆದರೆ ಆಶ್ರಮಕ್ಕೆ ನೆರವಾಗುತ್ತಿದ್ದವರು ಹಣ ಕೊಡುವುದನ್ನು ನಿಲ್ಲಿಸಿದರು’.

ಆಶ್ರಮದವರಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಮಾತುಗಳೂ ಕೇಳಿಬಂದವು. ಇದೆಲ್ಲ ದಕ್ಕೂ ಸಿದ್ಧವಾಗಿದ್ದ ಗಾಂಧೀಜಿ ಹೇಳಿದರು: ‘ನಮಗೇನಾದರೂ ಬಹಿಷ್ಕಾರ ಹಾಕಿದರೆ ಅಥವಾ ಸೌಲಭ್ಯಗಳನ್ನು ಕಿತ್ತುಕೊಂಡರೆ ನಾವು ಅಹಮದಾಬಾದನ್ನು ಬಿಟ್ಟು ಹೋಗುವುದು ಬೇಡ. ನಾವೆಲ್ಲ ಅಹಮದಾಬಾದಿನ ಅಸ್ಪೃಶ್ಯರ ಕೇರಿಯಲ್ಲಿ ಇರೋಣ. ಅಲ್ಲಿ ಮೈ ಬಗ್ಗಿಸಿ ದುಡಿದು ಅದರಿಂದ ಏನು ಬರುತ್ತದೋ ಅದರಿಂದಲೇ ಜೀವಿಸೋಣ’. ಕೆಲವೇ ದಿನಗಳಲ್ಲಿ ಆಶ್ರಮ ನಡೆಸಲು ಯಾವ ಹಣವೂ ಇರದ ದಿನ ಎದುರಾಗುತ್ತದೆ. ಗಾಂಧೀಜಿ ‘ಹಾಗಾದರೆ ಅಸ್ಪೃಶ್ಯರ ಕೇರಿಗೆ ಹೋಗೋಣ’ ಎನ್ನುತ್ತಾರೆ. ಅದೇ ಸರಿಸುಮಾರಿಗೆ ಗಾಂಧೀಜಿ ಎಂದೂ ಕಂಡಿರದಿದ್ದ ಶೇಟನೊಬ್ಬ ಆಶ್ರಮಕ್ಕಾಗಿ ಹದಿ ಮೂರು ಸಾವಿರ ರೂಪಾಯಿ ತಂದುಕೊಟ್ಟು ಹೋಗುತ್ತಾನೆ.

ಆದರೆ ಗಾಂಧೀಜಿಗೆ ನಿಜಕ್ಕೂ ತಳಮಳ ವಾದದ್ದು ಆಶ್ರಮದೊಳಗೂ ಅಸ್ಪೃಶ್ಯರ ಬಗ್ಗೆ ಅಸಮಾಧಾನವಿದ್ದುದನ್ನು ಕಂಡಾಗ. ದಾನಿಬೆಹನ್ ಬಗ್ಗೆ ಇತರರ ಉಪೇಕ್ಷೆಯನ್ನು ಗಾಂಧೀಜಿಯವರ ಕಣ್ಣು, ಕಿವಿಗಳು ಗಮನಿಸಿದವು. ‘ಹಣಕಾಸಿನ ಕಷ್ಟ ನನಗೆ ಅಂಥ ತಳಮಳ ಹುಟ್ಟಿಸಿರಲಿಲ್ಲ. ಆದರೆ ಆಶ್ರಮ ದೊಳಗಿನ ಬಿರುಗಾಳಿಯನ್ನು ನನಗೆ ಸಹಿಸಲಾಗಲಿಲ್ಲ’ ಎನ್ನುವ ಗಾಂಧೀಜಿ ಈ ಘಟ್ಟದ ಮಹತ್ವ  ಕುರಿತು ಆತ್ಮಚರಿತ್ರೆಯಲ್ಲಿ ಬರೆದರು: ‘ಈ ಕುಟುಂಬ ಬಂದು ಸೇರಿದ್ದು ಆಶ್ರಮಕ್ಕೆ ಒಂದು ಮುಖ್ಯ ಪಾಠವಾಯಿತು. ಆಶ್ರಮ ಅಸ್ಪೃಶ್ಯತೆಯನ್ನು ಸಹಿಸುವುದಿಲ್ಲವೆಂದು ಜಗತ್ತಿಗೆ ಸಾರಿ ಹೇಳಿದ್ದೆವು. ಆಗಲೂ ಸಂಪ್ರದಾಯಸ್ಥ ಹಿಂದೂಗಳು ಆಶ್ರಮಕ್ಕೆ ಹಣ ಕೊಡುತ್ತಿದ್ದುದು ಅಸ್ಪೃಶ್ಯತೆಯ ಬುಡವನ್ನೇ ಅಲುಗಾಡಿಸಿತು. ಅಸ್ಪೃಶ್ಯರೊಡನೆ ಒಟ್ಟಾಗಿ ಕೂತು ಊಟ ಮಾಡುವ ಆಶ್ರಮವೊಂದಕ್ಕೆ ನೆರವಾಗಲು ಒಳ್ಳೆಯ ಹಿಂದೂಗಳು ಹಿಂಜರಿಯುವುದಿಲ್ಲ ಎಂಬುದು ಇದಕ್ಕೆ ಒಂದು ಪುರಾವೆಯಂತಿತ್ತು.

ಇಡೀ ಪ್ರಕರಣದ ಮಹತ್ವ ಇರುವುದು ಬಿಕ್ಕಟ್ಟು ಬಗೆಹರಿದಿದ್ದರಲ್ಲಿ ಅಲ್ಲ; ಬದಲಿಗೆ, ಒಂದು ದಲಿತ ಕುಟುಂಬಕ್ಕಾಗಿ ತಮ್ಮ ಆಶ್ರಮ ಏರುಪೇರಾದರೂ ಪರವಾಗಿಲ್ಲ ಎಂಬ ನಿರ್ಣಾಯಕ ನಿಲುವನ್ನು ಗಾಂಧೀಜಿ ತಳೆದಿದ್ದರಲ್ಲಿ. ಗಾಂಧೀಜಿಯ ಈ ಒಂದು ದಿಟ್ಟ ನಿಲುವನ್ನಾದರೂ ಜಾತಿಜಾತಿಗಳ ನಡುವೆ ಊಟದಲ್ಲಿ ಪಂಕ್ತಿಭೇದ ಮಾಡುವ ಮಠಗಳು, ಮನೆಗಳು ತಳೆದಿದ್ದರೆ ಅಸ್ಪೃಶ್ಯತೆಯ ನರಕ ಇಷ್ಟು ಹೊತ್ತಿಗೆ ಕೊಂಚವಾದರೂ ತಗ್ಗಿರುತ್ತಿತ್ತು.

ಗಾಂಧೀಜಿ ಭಾರತಕ್ಕೆ ಹಿಂದಿರುಗಿ ಇಲ್ಲಿನ ಜಡತೆಗಳನ್ನು ಎದುರಿಸಿದ್ದು, ಹಳ್ಳಿಗಳನ್ನು ಅರಿತಿದ್ದು, ಕೆಲವೇ ವರ್ಗಗಳ ಚಳವಳಿಯಾಗಿದ್ದ ಸ್ವಾತಂತ್ರ್ಯ ಚಳವಳಿಯನ್ನು ಜನರ ಹೋರಾಟ ವಾಗಿಸಿದ್ದು, ಸತ್ಯಾಗ್ರಹವನ್ನು ದುರ್ಬಲರ ಪ್ರಬಲ ಅಸ್ತ್ರವಾಗಿಸಿದ್ದು ಎಲ್ಲರಿಗೂ ಗೊತ್ತಿದೆ. ಜವಾಹರ ಲಾಲ್‌ ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಒಂದು ಘಟ್ಟದಲ್ಲಿ ಮುಗಿಯಿತು. ಆದರೆ ದಕ್ಷಿಣ ಆಫ್ರಿಕಾದಿಂದ ಬಂದ ಗಾಂಧೀಜಿಯವರ ಡಿಸ್ಕವರಿ ಆಫ್ ಇಂಡಿಯಾ ಕೊನೆಯವರೆಗೂ ಮುಗಿಯಲಿಲ್ಲ. ಸ್ವಾತಂತ್ರ್ಯ ಬಂದ ರಾತ್ರಿ ಗಾಂಧೀಜಿ ಹಿಂದೂ-ಮುಸ್ಲಿಮರನ್ನು ಒಂದುಗೂಡಿಸುವುದು ಹೇಗೆ ಎಂಬ ಪ್ರಶ್ನೆಗೆ ಕಲ್ಕತ್ತಾದುದ್ದಕ್ಕೂ ಏಕಾಂಗಿಯಾಗಿ ಓಡಾಡುತ್ತಾ ಉತ್ತರ ಹುಡುಕುತ್ತಲೇ ಇದ್ದರು.

ಇವತ್ತು ‘ಪ್ರವಾಸಿ ಭಾರತ ದಿವಸ್’ ಎಂಬ ಸರ್ಕಾರಿ ಘೋಷಣೆಯ ಅಮಲಿನಲ್ಲಿರುವವರು ಗಾಂಧೀಜಿ ನಡೆದ ಹಾದಿಯ ಅಗೋಚರ ಭೂಪಟ ಬಳಸಿ ಭಾರತದ ಪ್ರವಾಸ ಮಾಡಿದರೆ ಮಾತ್ರ ಈ ತೋರುಗಾಣಿಕೆಗೂ ಒಂದಿಷ್ಟು ಅರ್ಥ ವಿರಬಲ್ಲದು; ಗಾಂಧೀಜಿ ಎದುರಿಸಿದ ಪ್ರಶ್ನೆ ಗಳನ್ನೂ ಹುಡುಕಿದ ಉತ್ತರಗಳನ್ನೂ ವಿಸ್ತರಿಸಿ ಈ ಕಾಲದ ಉತ್ತರಗಳನ್ನು ರೂಪಿಸುವುದು ಅದ ರಿಂದ ಸಾಧ್ಯವಾಗಬಲ್ಲದು. ಅದನ್ನು ಮಾಡದೆ, ಕೃತಕವಾಗಿ ಈ ನೆನಪನ್ನು ಆಚರಿಸುವವರು ಗಾಂಧೀಜಿ ಮನೆಗೆ ಮರಳಿದ ಘಟನೆಯ ಮೂಲಕ ರೂಪುಗೊಂಡಿರುವ ಅದ್ಭುತ ಚಾರಿತ್ರಿಕ ರೂಪಕವೊಂದನ್ನು ವಿಕೃತಗೊಳಿಸಿ ಹಿಂಸಾನಂದ ಪಡೆಯುತ್ತಿರುತ್ತಾರೆ, ಅಷ್ಟೆ.

ಕಳೆದ ಹತ್ತಾರು ವರ್ಷಗಳಿಂದ ಗಾಂಧೀ ಚಿಂತನೆಯನ್ನೂ ಅವರ ವ್ಯಕ್ತಿತ್ವವನ್ನೂ ನಾಶ ಮಾಡುವ ಯೋಜನೆಗಳನ್ನು ತೆರೆಮರೆಯಲ್ಲಿ ರೂಪಿಸುತ್ತಿದ್ದ ದುಷ್ಟ ಶಕ್ತಿಗಳು ಇವತ್ತು ಎದ್ದು ಕುಣಿಯುತ್ತಿವೆ. ಮೋದಿ ಸರ್ಕಾರದ ಸಿನಿಕತೆ ಹಾಗೂ ಮತೀಯವಾದಿಗಳ ಕುಟಿಲ ಚಿಂತನೆ ಗಳು ಸೇರಿ ಜನವರಿ ಒಂಬತ್ತನ್ನು ಪ್ರವಾಸಿ ಭಾರತೀಯ ದಿವಸವನ್ನಾಗಿ ಮಾಡಿರುವ ವಿಕಾರದ ಬಗ್ಗೆ ಒಳ್ಳೆಯ ಮನುಷ್ಯರು ದೇಶದುದ್ದಕ್ಕೂ ಅಸಹ್ಯ ಪಡುತ್ತಿದ್ದಾರೆ; ಸಿಟ್ಟಾಗಿ ದ್ದಾರೆ. ಗಾಂಧೀ ಚಿಂತನೆಯ ಆಳ ಅಗಲಗಳನ್ನು ಮತ್ತೆ ಅರಿಯುವುದು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಇವತ್ತು ಅಗತ್ಯವಾಗಿದೆ. ರಾಜಕುಮಾರ್ ಹಿರಾನಿಯಂಥವರ ‘ಪಿ.ಕೆ’ ಯಂಥ ಜನಪ್ರಿಯ ಸಿನಿಮಾಗಳು ಕೂಡ ಈ ಕೆಲಸವನ್ನು ಒಂದು ಮಟ್ಟದಲ್ಲಾದರೂ ಮಾಡಲು ಪ್ರಯತ್ನಿಸುತ್ತಿವೆ. ಅಕಸ್ಮಾತ್ ಈ ಬಗೆಯ ಸಣ್ಣಪುಟ್ಟ ಪ್ರಯತ್ನಗಳು ಅಥವಾ ಮೇಧಾ ಪಾಟ್ಕರ್, ‘ಚರಕಾ’ದ ಪ್ರಸನ್ನ, ಅರವಿಂದ ಕೇಜ್ರಿವಾಲ್ ಥರದವರು ಗಾಂಧೀ ಮಾರ್ಗವನ್ನು ಬೆಳೆಸಲು ಮಾಡುತ್ತಿರುವ ಅರ್ಥಪೂರ್ಣ ಕೆಲಸಗಳನ್ನು  ತಮ್ಮಿಂದ  ಮಾಡಲು ಆಗದಿದ್ದರೆ, ಚರಿತ್ರೆಯ  ಕಾಲಘಟ್ಟ ವೊಂದು ರೂಪಿಸಿದ  ಒಂದು ಅಪೂರ್ವ ಪಯಣವನ್ನು ನಾಶ ಮಾಡುವ ಹೀನ ಕೆಲಸಕ್ಕೆ ಭಾರತೀಯರು  ಇಳಿಯದಿರಲಿ. 

ಕೊನೆ ಟಿಪ್ಪಣಿ: ಗಾಂಧೀಜಿ ಮತ್ತು ಬಿಜೆಪಿ
ಗಾಂಧೀಜಿಯವರ ಮೊಮ್ಮಗ ಹಾಗೂ ಚರಿತ್ರಕಾರ ರಾಜಮೋಹನ ಗಾಂಧಿಯವರನ್ನು ಮೊನ್ನೆ ಸಂದರ್ಶಕಿಯೊಬ್ಬರು ‘ಬಿಜೆಪಿ ಗಾಂಧೀಜಿ ಯನ್ನು ಸಮನ್ವಯಗೊಳಿಸಿಕೊಳ್ಳಲು ಹೊರಟಿದೆಯಲ್ಲಾ?’ ಎಂದು ಕೇಳಿದರು. ಅದಕ್ಕೆ ರಾಜಮೋಹನ್ ಗಾಂಧಿ ನಗುತ್ತಾ  ಕೊಟ್ಟ ಉತ್ತರ: ‘ಬಿಜೆಪಿಯೇನಾದರೂ ಗಾಂಧೀಜಿಗೆ ಹತ್ತಿರವಾದರೆ ಬಿಜೆಪಿಗೂ ಒಳ್ಳೆಯದು; ಇಂಡಿಯಾಕ್ಕೂ ಒಳ್ಳೆಯದು. ಸ್ವಚ್ಛ ಭಾರತ ಆಂದೋಲನದ ಮೂಲಕ ಬಿಜೆಪಿ ಗಾಂಧೀಜಿ ಯನ್ನು ಅರಿಯಲು ಶುರು ಮಾಡಿದ್ದರೆ, ಅದೂ ಅದ್ಭುತವೇ. ಗಾಂಧೀಜಿಯನ್ನು ಅರಿಯುವ ಈ ಪ್ರಯತ್ನದಲ್ಲಿ  ಗಾಂಧೀಜಿ ಹಿಂದೂ-ಮುಸ್ಲಿಂ ಸಂಬಂಧವನ್ನು ಅರಿತಿದ್ದ ರೀತಿಯನ್ನು, ಇಂಡಿಯಾದಲ್ಲಿ ಸಮಸಮಾಜ ನಿರ್ಮಾಣ ಕುರಿತು ಚಿಂತಿಸಿದ್ದನ್ನು, ಅತಿದುರ್ಬಲರ ಹಿತವನ್ನು ಅತ್ಯಂತ ಮುಖ್ಯವಾಗಿ ಪರಿಗಣಿಸಬೇಕೆಂಬ ಬಗ್ಗೆ ಗಾಂಧೀಜಿ ಹೇಳಿಕೊಟ್ಟದ್ದನ್ನೂ ಬಿಜೆಪಿಯವರು ಕಲಿಯಲಿ. ಅವರು ಗಾಂಧೀಜಿಗೆ ಹತ್ತಿರವಾದರೆ ಅವರಿಗೆ ಏನೂ ತೊಂದರೆಯಾಗದು’.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT