ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ದುಶ್ಶಾಸನರ ಕಾಲದ ದ್ರೌಪದಿಯರು

Last Updated 16 ಜೂನ್ 2018, 9:24 IST
ಅಕ್ಷರ ಗಾತ್ರ

ಗೆಳೆಯರೆಲ್ಲಾ ಹರಟೆಗಾಗಿ ಸೇರುವ ಸ್ಥಳವೊಂದಿದೆ ಎಂದು ಭಾವಿಸಿ. ಇದು ನಗರ ಮಧ್ಯೆ ಇರುವ ಒಂದು ಸ್ಥಳ. ಸುತ್ತ ಮುತ್ತ ಅನೇಕ ಅಂಗಡಿಗಳಿವೆ. ಒಂದು ದಿನ ಗೆಳೆಯರ ಜೊತೆ ಮಾತನಾಡುತ್ತಿದ್ದಾಗ ಅಲ್ಲಿದ್ದ ಅಂಗಡಿಯೊಂದರಲ್ಲಿ ಪ್ರದರ್ಶಿಸಿದ್ದ ಅಂಗಿಯೊಂದನ್ನು ನೋಡಿ ಖರೀದಿಸೋಣ ಅನ್ನಿಸುತ್ತದೆ. ನೀವು ಅಲ್ಲಿಗೆ ಹೋಗಿ ಬೆಲೆ ವಿಚಾರಿಸುತ್ತೀರಿ. ಆತ ಹೇಳಿದ ಬೆಲೆ ನಿಮಗೆ ಒಪ್ಪಿಗೆಯಾಗುವುದಿಲ್ಲ. ಬೇಡ ಎಂದು ಹೊರಬರುತ್ತೀರಿ. ಅಲ್ಲಿಂದ ನೀವು ಬಸ್ ಹಿಡಿಯಲು ಹತ್ತಿರದ ನಿಲ್ದಾಣಕ್ಕೆ ಹೋಗುತ್ತೀರಿ. ಅಲ್ಲಿ ಅಂಗಿ ಮಾರುತ್ತಿದ್ದ ಅಂಗಡಿಯಾತ ನೀವು ಖರೀದಿಸಲು ಬಯಸಿದ್ದ ಅಂಗಿಯನ್ನು ನಿಮ್ಮ ಮುಖಕ್ಕೆ ಹಿಡಿಯುತ್ತಾನೆ. ನೀವು ನಿರ್ಲಕ್ಷಿಸಿ ಬಸ್ ಹತ್ತುತ್ತೀರಿ. ಅಲ್ಲಿಯೂ ಆತ ಕಾಣಿಸುತ್ತಾನೆ. ಅವನತ್ತ ಗಮನಿಸದೆ ಬಸ್ ಇಳಿದು ಮನೆಗೆ ಹೋಗುವ ದಾರಿಯಲ್ಲಿ ಪಾನಿಪೂರಿ ತಿನ್ನಲು ಹೋದರೆ ಅದೇ ಅಂಗಡಿಯಾತ ಮತ್ತೆ ಅದೇ ಅಂಗಿಯೊಂದಿಗೆ ನಿಮಗೆದುರಾಗುತ್ತಾನೆ. ಈ ಹೊತ್ತಿಗೆ ನಿಮಗೆ ಸಿಟ್ಟು ಬಂದಿರುತ್ತದೆ. ನೀವು ಅವನನ್ನು ‘ದೂರ ಹೋಗು’ ಎಂದು ಗದರುತ್ತೀರಿ. ಪಾನಿ ಪೂರಿ ತಿಂದು ಮುಗಿಯುವ ಹೊತ್ತಿಗೆ ಮತ್ತೆ ನಿಮ್ಮ ಕಣ್ಣೆದುರು ಬರುತ್ತಾನೆ. ಅಲ್ಲಿಂದ ಮನೆಯತ್ತ ನಡೆಯಲು ತೊಡಗಿದಾಗಲೂ ಅಂಗಡಿಯಾತ ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತಾನೆ. ಗದರಿದರೆ ಒಮ್ಮೆ ಮಾಯವಾಗಿ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತಾನೆ.

ನಿಮಗೆ ಸಿಟ್ಟುಬಂದು ಅವನಿಗೆರಡು ಬಾರಿಸಲು ಹೊರಡುತ್ತೀರಿ. ಆದರೆ ಅವನು ಪೆಟ್ಟಿಗೆ ಸಿಗುವುದೇ ಇಲ್ಲ. ನೀವು ಹತಾಶರಾಗಿ ಜೋರಾಗಿ ಕಿರುಚಿ ‘ಆ ಅಂಗಡಿಯಾತ ನನ್ನನ್ನು ಕಾಡುತ್ತಿದ್ದಾನೆ’ ಎಂದು ಸುತ್ತಲಿರುವ ಎಲ್ಲರಿಗೂ ಹೇಳಲು ಪ್ರಯತ್ನಿಸುತ್ತೀರಿ. ಇದನ್ನು ಕೇಳಿಸಿಕೊಂಡವರೆಲ್ಲಾ ‘ಅಯ್ಯೋ ಅದಕ್ಕೇಕೆ ಕಿರುಚುತ್ತಿದ್ದೀಯಾ’ ಎಂದು ಇದೆಲ್ಲಾ ಸಹಜ ಎನ್ನುವಂತೆ ಮಾತನಾಡುತ್ತಾರೆ. ನೀವು ಛಲಬಿಡದ ತ್ರಿವಿಕ್ರಮನಂತೆ ಸೀದಾ ಪೊಲೀಸ್ ಠಾಣೆಗೆ ಹೋಗಿ ಅಂಗಡಿಯವನ ಬಗ್ಗೆ ಒಂದು ದೂರು ಬರೆದು ಕೊಡುತ್ತೀರಿ. ಪೊಲೀಸರು ‘ಇದಕ್ಕೆಲ್ಲಾ ಕೇಸ್ ಹಾಕಲು ಬೇಕಿರುವ ಕಾನೂನೇ ಇಲ್ಲ’ ಎಂದರೆ ನಿಮ್ಮ ಸ್ಥಿತಿ...?

ಇಂದು ನಮ್ಮೆಲ್ಲರ ಆನ್‌ಲೈನ್ ಬದುಕಿನ ಸ್ಥಿತಿ ಹೀಗೆಯೇ ಇದೆ. ಗೆಳೆಯರನ್ನು ಭೇಟಿಯಾಗಲೆಂದು ಫೇಸ್‌ಬುಕ್ ಸಂದರ್ಶಿಸುವ ನೀವು ಅಲ್ಲಿ ಶೇಕಡಾ 50ರಷ್ಟು ಕಡಿಮೆ ದರದಲ್ಲಿ ಲಭ್ಯವಿರುವ ಅಂಗಿಯನ್ನೊಮ್ಮೆ ಸುಮ್ಮನೇ ಕ್ಲಿಕ್ಕಿಸಿ ನೋಡಿದರೆ ಮುಂದಿನ ಎಲ್ಲವೂ ಮೇಲೆ ನೀಡಿದ ಉದಾಹರಣೆಯಂತೆಯೇ ನಡೆಯುತ್ತದೆ. ನೀವು ಯಾವ ವೆಬ್‌ಸೈಟಿಗೆ ಹೋದರೂ ಅದೇ ಜಾಹೀರಾತು ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ಇದೆಂಥಾ ಕಿರಿಕಿರಿ ಎಂದು ಅಂತರಜಾಲಾಟವನ್ನು ನಿಲ್ಲಿಸಿ ಕಂಪ್ಯೂಟರ್ ಆಫ್ ಮಾಡಿದರೂ ನಿಮ್ಮ ಸಮಸ್ಯೆ ಮುಗಿಯುವುದಿಲ್ಲ. ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಪ್ರವೇಶಿಸಿದರೂ ಇದೇ ಜಾಹೀರಾತು ಕಾಣಿಸುತ್ತದೆ. ಮರುದಿನವೂ ಅದೇ ಆನ್‌ಲೈನ್ ಅಂಗಡಿಯ ಉತ್ಪನ್ನಗಳು ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತವೆ.

ಹಾಗಿದ್ದರೆ ಫೇಸ್‌ಬುಕ್ ನಿಮ್ಮ ಮಾಹಿತಿಗಳನ್ನು ಜಾಹೀರಾತುದಾರರಿಗೆ ಒದಗಿಸುತ್ತಿದೆಯೇ? ಈ ಪ್ರಶ್ನೆಗೆ ಫೇಸ್‌ಬುಕ್ ಸ್ಪಷ್ಟ ಉತ್ತರ ಕೊಡುವುದಿಲ್ಲ. ಆದರೆ, ತಾನು ಜಾಹೀರಾತುದಾರರಿಗೆ ಫೇಸ್‌ಬುಕ್ ಎಕ್ಸ್‌ಚೇಂಜ್, ಫೇಸ್‌ಬುಕ್ ನಿರ್ದಿಷ್ಟ ಸಂಭವನೀಯ ಗಿರಾಕಿಗಳು ಇತ್ಯಾದಿ ಸೌಲಭ್ಯಗಳನ್ನು ಒದಗಿಸುವುದನ್ನು ಅದು ಒಪ್ಪಿಕೊಳ್ಳುತ್ತದೆ. ಈ ಸೌಲಭ್ಯವನ್ನು ಜಾಹೀರಾತುದಾರರು ಬಳಸಿಕೊಳ್ಳುತ್ತಾರಷ್ಟೆ. ನಾವು ಜಾಲತಾಣವೊಂದನ್ನು ಸಂದರ್ಶಿಸಿದ ತಕ್ಷಣ ಕುಕೀಗಳೆಂಬ ಸಣ್ಣ ಗಾತ್ರದ ಪಠ್ಯ ಕಡತಗಳು ನಮ್ಮ  ಬ್ರೌಸರ್ ಫೋಲ್ಡರ್‌ನೊಳಗೆ ಬಂದು ಕುಳಿತುಕೊಳ್ಳುತ್ತವೆ. ಇವುಗಳ ಕೆಲಸ ಜಾಲತಾಣದೊಳಗೆ ನಾವು ನಡೆಸುವ ಸಂಚಾರವನ್ನು ನೆನಪಿನಲ್ಲಿಟ್ಟುಕೊಂಡು ಸಹಕರಿಸುವುದು. ಆದರೆ ಈಗ ಇವು ಮಾರುಕಟ್ಟೆ ಅಗತ್ಯದಿಂದಾಗಿ ಹೆಚ್ಚು ‘ಸ್ಮಾರ್ಟ್’ ಆಗಿಬಿಟ್ಟಿವೆ. ನಮಗೆ ಸಹಾಯ ಮಾಡುವುದಷ್ಟೇ ಅಲ್ಲದೆ ನಮ್ಮನ್ನು ಕಾಡುವ ಸಾಮರ್ಥ್ಯವನ್ನೂ ಹೊಂದಿವೆ. ನಮ್ಮ ಅಂತರಜಾಲಾಟ ಅಥವಾ ಬ್ರೌಸಿಂಗ್ ಮಾಹಿತಿಯನ್ನು ಬಳಸಿ ನಾವು ಎಲ್ಲಿ ಹೋದರೂ ಅದೇ ಜಾಹೀರಾತು ಕಾಣಿಸುವಂತೆ ಮಾಡುವುದು ಈ ಕುಕೀಗಳೇ. ನಾವು ಮತ್ತೆ ಫೇಸ್‌ಬುಕ್‌ಗೆ ಬಂದಾಗ ಈ ಜಾಹೀರಾತುಗಳು ನಮಗೆ ಕಾಣುವಂತೆ ಮಾಡುವುದಕ್ಕೆ ಫೇಸ್‌ಬುಕ್‌ ಎಕ್ಸ್‌ಚೇಂಜ್‌ನಂಥ ಸವಲತ್ತುಗಳು ಬಳಕೆಯಾಗುತ್ತವೆ.

ಇದು ಫೇಸ್‌ಬುಕ್ ನೀಡುವ ಅಧಿಕೃತ ಉತ್ತರ. ಈ ವರ್ಷದ ಮಾರ್ಚ್‌ನಲ್ಲಿ ಹೊರಬಂದ ಬೆಲ್ಜಿಯಂನ ಪ್ರೈವಸಿ ಕಮಿಷನ್‌ಗಾಗಿ ಲುವೆನ್‌ನ ಕ್ಯಾಥೊಲಿಕ್ ವಿಶ್ವವಿದ್ಯಾಲಯದ ತಜ್ಞರು ಸಿದ್ಧಪಡಿಸಿದ ವರದಿ (goo.gl/3pS93l) ಹೇಳುವ ಕಥೆ ಮತ್ತೊಂದು. ಫೇಸ್‌ಬುಕ್ ತನ್ನ ಸದಸ್ಯರ ಚಟುವಟಿಕೆಗಳನ್ನಷ್ಟೇ ಅಲ್ಲದೇ ಸದಸ್ಯರಲ್ಲದವರ ಜಾಲಾಟದ ಮಾಹಿತಿಯನ್ನೂ ಸಂಗ್ರಹಿಸುತ್ತದೆಯಂತೆ. ಬಹುತೇಕ ಎಲ್ಲಾ ಜಾಲತಾಣಗಳ ಅವಿಭಾಜ್ಯ ಅಂಗವಾಗಿಬಿಟ್ಟಿರುವ ‘ಶೇರ್, ಲೈಕ್’  ಬಟನ್‌ಗಳ ಮೂಲಕ ಫೇಸ್‌ಬುಕ್ ತನ್ನ ಕುಕೀಗಳನ್ನು ಜಾಲಿಗರ ಬ್ರೌಸರ್‌ ಫೋಲ್ಡರ್‌ಗಳಿಗೆ ಸೇರಿಸುತ್ತದೆ. ಅಲ್ಲಿ ತಣ್ಣಗೆ ಕುಳಿತಿರುವ ಈ ಕುಕೀಗಳು ಮಾಹಿತಿಯನ್ನು ತಲುಪಿಸಬೇಕಾದವರಿಗೆ ತಲುಪಿಸುತ್ತಿರುತ್ತವೆ ಎಂಬ ವಿವರ ಈ ತಜ್ಞರ ವರದಿಯಲ್ಲಿದೆ. 2012ರಲ್ಲಿ ಈ ಬಗೆಯ ಮಾಹಿತಿ ಸಂಗ್ರಹಣೆ ಒಂದು ವಿವಾದವಾದಾಗ ಫೇಸ್‌ಬುಕ್ ಹೊಸ ಸವಲತ್ತನ್ನು ಘೋಷಿಸಿತು. ಅದರಂತೆ ತಮ್ಮ ಜಾಲಾಟದ ಮಾಹಿತಿ ಸಂಗ್ರಹ ಕೂಡದು ಎಂದು ಗ್ರಾಹಕರು ಫೇಸ್‌ಬುಕ್‌ಗೆ ಆದೇಶಿಸಬಹುದು. ಆದರೆ ಬೆಲ್ಜಿಯಂ ತಜ್ಞರ ವರದಿಯ ಪ್ರಕಾರ ಇದು ಫೇಸ್‌ಬುಕ್ ಹೇಳಿದ ಸುಳ್ಳು. ಮಾಹಿತಿ ಸಂಗ್ರಹದಿಂದ ಹೊರಗುಳಿಯುವ ಸವಲತ್ತನ್ನು ಆರಿಸಿಕೊಂಡವರ ಮಾಹಿತಿ ಸಂಗ್ರಹವನ್ನೂ ಫೇಸ್‌ಬುಕ್ ನಡೆಸುತ್ತದೆ.

ಫೇಸ್‌ಬುಕ್ ಪ್ರಕರಣ ಒಂದು ಉದಾಹರಣೆ ಮಾತ್ರ. ಈ ಸಮಸ್ಯೆಯ ಇನ್ನಷ್ಟು ಸಂಕೀರ್ಣವಾದುದು. ಅಂತರಜಾಲದೊಳಗಿನ ನಮ್ಮ ಚಟುವಟಿಕೆಗಳನ್ನು ಅಸಂಖ್ಯಾತ ಸಂಸ್ಥೆಗಳು ಸಂಗ್ರಹಿಸುತ್ತಿವೆ. ಬೆಂಗಳೂರಿನ ತೇಜೇಶ್ ಅವರ ಪ್ರಕರಣದಲ್ಲಿ (goo.gl/l9DuQC) ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಯೊಂದು ತನ್ನ ಗ್ರಾಹಕರು ನಡೆಸುವ ಅಂತರ್ಜಾಲ ಚಟುವಟಿಕೆಗಳ ಬೇಹುಗಾರಿಕೆ ನಡೆಸುತ್ತಿತ್ತು. ಇದನ್ನು ಅಕಸ್ಮಾತ್‌ ಆಗಿ ಪತ್ತೆ ಹಚ್ಚಿ ಪ್ರಕಟಿಸಿದ್ದಕ್ಕೆ ಭಾರತದ ಇಂಟರ್‌ನೆಟ್ ಸೇವಾದಾತ ಸಂಸ್ಥೆಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಇಸ್ರೇಲಿನ ಸಂಸ್ಥೆಯೊಂದು ತೇಜೇಶ್‌ಗೆ ವಕೀಲರ ಮೂಲಕ ನೊಟೀಸ್ ಕಳುಹಿಸಿದೆ. ಸರ್ಕಾರವಂತೂ ಭಾರತದ ಎಲ್ಲಾ ಪ್ರಜೆಗಳ ಎಸ್ಎಂಎಸ್‌ಗಳು, ದೂರವಾಣಿ ಕರೆಗಳು, ಇ–ಮೇಲ್‌ಗಳೂ ಸೇರಿದಂತೆ ಎಲ್ಲಾ ಅಂತರ್ಜಾಲ ಚಟುವಟಿಕೆಗಳ ಮೇಲೆ ನಿಗಾ ಇರಿಸುವುದಕ್ಕಾಗಿ ‘ನೇತ್ರ’ ಎಂಬ ಯೋಜನೆಯನ್ನೇ ಕಾರ್ಯಗತಗೊಳಿಸಿದೆ.

ಪೇಟೆ ಬೀದಿಯಲ್ಲಿ ನಾವು ಭೇಟಿ ನೀಡಿದ ಅಂಗಡಿಯ ಮಾಲೀಕರು, ನಾವು ಹೋಗುವ ಪ್ರತಿಯೊಂದು ಸರ್ಕಾರಿ ಕಚೇರಿಯ ಅಧಿಕಾರಿಗಳು ನಾವು ಈ ಹಿಂದೆ ಯಾರನ್ನು ಭೇಟಿ ಮಾಡಿದ್ದೆವು, ಏನನ್ನು ಖರೀದಿಸಿದ್ದೆವು, ಯಾರೊಂದಿಗೆ ಏನೇನು ಮಾತನಾಡಿದ್ದೆವು ಎಂಬ ಮಾಹಿತಿಗಳನ್ನು ನಮಗೆ ಗೊತ್ತಿಲ್ಲದಂತೆಯೇ ಸಂಗ್ರಹಿಸಿದರೆ ನಮ್ಮ ಸ್ಥಿತಿ ಹೇಗಿರಬಹುದೋ ಹಾಗೆ ನಮ್ಮ ಆನ್‌ಲೈನ್ ಬದುಕಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ನಡೆಸುವ ಪ್ರತಿಯೊಂದು ಚಟುವಟಿಕೆಯ ಮಾಹಿತಿಯನ್ನು ಸರ್ಕಾರದಿಂದ ಆರಂಭಿಸಿ ವಾಣಿಜ್ಯ ಸಂಸ್ಥೆಗಳ ತನಕದ ಎಲ್ಲರೂ ಸಂಗ್ರಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಇದನ್ನು ಬಳಸಿಕೊಂಡು ನಮ್ಮ ಖರೀದಿಗಳಿಂದ ತೊಡಗಿ ನಮ್ಮ ಆಸಕ್ತಿಗಳನ್ನು ನಿಯಂತ್ರಿಸುವ ತನಕದ ಎಲ್ಲವನ್ನೂ ಇವರು ಮಾಡುತ್ತಿದ್ದಾರೆ. ಆದರೆ ಈ ಚಟುವಟಿಕೆಗಳು ನಮ್ಮ ಗಮನಕ್ಕೆ ಬಂದು ಎಚ್ಚತ್ತ ತಕ್ಷಣ ಅದು ಯಾವುದೋ ಒಂದು ಕಾಯಿದೆಯ ಉಲ್ಲಂಘನೆಯಂತೆ ವಾಣಿಜ್ಯ ಸಂಸ್ಥೆಗಳಿಗೆ ಕಾಣಿಸುತ್ತದೆ. ಈ ಉಲ್ಲಂಘನೆಯನ್ನು ಸರ್ಕಾರವೂ ಮಾನ್ಯ ಮಾಡಿಬಿಡುತ್ತದೆ. ಮತ್ತೆ ನಮ್ಮ ಸ್ಥಿತಿ ತೇಜೇಶ್ ಅವರದ್ದೇ. ನಮ್ಮದೇ ಖರ್ಚಿನಲ್ಲಿ ವಕೀಲರ ನೊಟೀಸಿಗೆ ಉತ್ತರ ಕೊಡಬೇಕು.

ನಿಜ ಬದುಕಿನಲ್ಲಿ ನಮ್ಮನ್ನು ಯಾರಾದರೂ ನಿರಂತರವಾಗಿ ಹಿಂಬಾಲಿಸುತ್ತಿದ್ದರೆ ಅವರ ವಿರುದ್ಧ ಕೇಸು ದಾಖಲಿಸಲು ಸಾಧ್ಯವಿದೆ. ಆನ್‌ಲೈನ್‌ನಲ್ಲಿ ಯಾರಾದರೊಬ್ಬ ವ್ಯಕ್ತಿ ಇದೇ ಕೆಲಸ ಮಾಡಿದರೆ ಆತನನ್ನು ಶಿಕ್ಷಿಸುವುದಕ್ಕೆ ಬೇಕಿರುವ ಕಾನೂನುಗಳೂ ಇವೆ. ಆದರೆ ವಾಣಿಜ್ಯ ಸಂಸ್ಥೆಯೊಂದು ತನ್ನ ಉತ್ಪನ್ನಗಳ ಮಾರಾಟಕ್ಕಾಗಿ ಇದೇ ಕೆಲಸ ಮಾಡಿದರೆ ಅದನ್ನು ನಿಯಂತ್ರಿಸಲು ಬೇಕಿರುವ ಯಾವ ಕಾನೂನುಗಳೂ ನಮ್ಮಲ್ಲಿಲ್ಲ. ಅಷ್ಟೇಕೆ ಖಾಸಗಿ ಮಾಹಿತಿಗಳನ್ನು ವಾಣಿಜ್ಯ ಸಂಸ್ಥೆಗಳು ಹೇಗೆ ನಿರ್ವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ದೇಶಿಸುವ ಒಂದು ಕಾನೂನನ್ನು ನಾವು ಈ ತನಕ ಮಾಡಿಲ್ಲ. ಸರ್ಕಾರ ವ್ಯಕ್ತಿಯ ಖಾಸಗಿ ಬದುಕಿನೊಳಗೆ ಎಷ್ಟು ಪ್ರವೇಶಿಸಬಹುದು ಎಂಬುದಕ್ಕೆ ನಿಯಮಗಳ್ಯಾವುವೂ ಆನ್‌ಲೈನ್ ಬೇಹುಗಾರಿಕೆಗೆ ಅನ್ವಯಿಸುವುದಿಲ್ಲ. ಯೂರೋಪಿನ ರಾಷ್ಟ್ರಗಳು ಪ್ರೈವಸಿ ಕಮಿಷನ್‌ನಂಥ ನಿಯಂತ್ರಣ ವ್ಯವಸ್ಥೆಗಳನ್ನು ರೂಪಿಸಿ ಒಂದು ದಶಕವೇ ಉರುಳಿದೆ. ನಮ್ಮ ಸರ್ಕಾರಗಳು ಸ್ಮಾರ್ಟ್ ಆಡಳಿತದ ಮಾತನಾಡುತ್ತ ವ್ಯಕ್ತಿಯ ಖಾಸಗಿತನದ ಮಾರಾಟಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿವೆ. ದುಶ್ಯಾಸನರಷ್ಟೇ ಇರುವ ರಾಜ್ಯದ ದ್ರೌಪದಿಯರ ಸ್ಥಿತಿ ಶ್ರೀಸಾಮಾನ್ಯನದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT