ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ-ಲಿಂಕ್ ಡಿಡಬ್ಲ್ಯುಆರ್-111: ಕಡಿಮೆ ಬೆಲೆಗೆ ಉತ್ತಮ ರೂಟರ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಕಡಿಮೆ ಬೆಲೆಯ ರೂಟರ್‌ಗಳು ಮಾರುಕಟ್ಟೆಯಲ್ಲಿ ಹಲವಿವೆ. ಗಣಕಗಳನ್ನು ಗಣಕಜಾಲಕ್ಕೆ ಸಂಪರ್ಕಿಸಲು ರೂಟರ್‌ಗಳ ಬಳಕೆ ಆಗುತ್ತದೆ. ಈ ರೂಟರ್ ಮೂಲಕ ಅಂತರಜಾಲ ಸಂಪರ್ಕವನ್ನೂ ಸಾಧಿಸಬಹುದು. ನಿಮ್ಮ ಮನೆಗೆ ಇತರ್ನೆಟ್ (ethernet) ಕೇಬಲ್ ಮೂಲಕ ಅಂತರಜಾಲ ಸಂಪರ್ಕ ದೊರೆಯುತ್ತಿದೆಯಾದಲ್ಲಿ ನಿಮಗೆ ರೂಟರ್ ಬೇಕು. ಇಂತಹ ರೂಟರ್‌ಗಳಲ್ಲಿ ವೈಫೈ ಸೌಲಭ್ಯ ಈಗ ಸರ್ವೇಸಾಮಾನ್ಯವಾಗಿದೆ. ಈ ರೂಟರ್‌ಗಳಲ್ಲಿ ಕೆಲವಕ್ಕೆ ನೇರವಾಗಿ 3ಜಿ ಸಿಮ್ ಕಾರ್ಡ್ ಅನ್ನೂ ಹಾಕುವ ಸೌಲಭ್ಯ ಇವೆ. ಕೆಲವಕ್ಕೆ ಯುಎಸ್‌ಬಿ ಕಿಂಡಿ ಇರುತ್ತದೆ. ಈ ಕಿಂಡಿಗೆ ಯುಎಸ್‌ಬಿ 3ಜಿ ಮೋಡೆಮ್ ಜೋಡಿಸಬಹುದಾಗಿದೆ. ಈ ವಾರ ನಾವು ಅಂತಹ ಒಂದು ರೂಟರ್ ಕಡೆ ಗಮನ ಹರಿಸೋಣ. ಅದುವೇ ಡಿ-ಲಿಂಕ್ ಡಿಡಬ್ಲ್ಯುಆರ್-111 ವೈಫೈ ರೂಟರ್ (D-Link DWR-111 3G WiFi Wireless 150N Router).        

ಗುಣವೈಶಿಷ್ಟ್ಯಗಳು
ವೈಫೈ ರೂಟರ್, 150 Mbps ವೇಗ, 2 ಇತರ್ನೆಟ್ ಕಿಂಡಿಗಳು, 3ಜಿ ಡಾಂಗಲ್‌ಗಾಗಿ ಒಂದು ಯುಎಸ್‌ಬಿ ಕಿಂಡಿ, 5 ವೋಲ್ಟ್ ಡಿ.ಸಿ. ಮೂಲಕ ಕೆಲಸ ಮಾಡುತ್ತದೆ, ಅದಕ್ಕಾಗಿ ಒಂದು ಕಿಂಡಿ, 98 x 110 x 37 ಮಿ.ಮೀ. ಗಾತ್ರ, 240 ಗ್ರಾಂ ತೂಕ, 3 ವರ್ಷಗಳ ವಾರಂಟಿ, ಇತ್ಯಾದಿ. ನಿಗದಿತ ಬೆಲೆ ₹2300. ಮಾರುಕಟ್ಟೆ ಬೆಲೆ ₹1000 ದಿಂದ ₹1400.

ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ದೇಹ ಅಷ್ಟೇನೂ ಗಟ್ಟಿಮುಟ್ಟಾಗಿಲ್ಲದಿದ್ದರೂ ಕಳಪೆ ಎನ್ನುವಂತಿಲ್ಲ. ತುಂಬ ಹಗುರವಾಗಿದೆ. ಎಲ್ಲ ಕೇಬಲ್‌ಗಳನ್ನು ಜೋಡಿಸಿದಾಗ ಕೇಬಲ್ ತೂಕಕ್ಕೆ ಇದು ಬೀಳುವಂತಾಗುತ್ತದೆ. ಆದುದರಿಂದ ಕೇಬಲ್‌ಗಳನ್ನು ಎಚ್ಚರಿಕೆಯಿಂದ ಇಡಬೇಕು. ಕೇಬಲ್‌ಗಳಿಗೆ ಮೇಜಿನ ಆಧಾರ ಇದ್ದರೆ ಒಳ್ಳೆಯದು. ಆಂಟೆನಾ ಇಲ್ಲ. ಇದು ಒಂದು ಪ್ರಮುಖ ಕೊರತೆ. ಆಂಟೆನಾ ಇದ್ದರೆ ಹೆಚ್ಚು ದೂರಕ್ಕೆ ವೈಫೈ ಸಾಗುತ್ತದೆ ಮತ್ತು ಸಂಕೇತ ಶಕ್ತಿಯೂ ಜಾಸ್ತಿ ಇರುತ್ತದೆ. ಇದರಲ್ಲಿ ಬ್ಯಾಟರಿ ಇಲ್ಲ. ಹೊರಗಡೆಯಿಂದ 5 ವೋಲ್ಟ್ ಡಿ.ಸಿ. ವಿದ್ಯುತ್ ನೀಡಬೇಕು. ಅದಕ್ಕಾಗಿ ಒಂದು ಪವರ್ ಅಡಾಪ್ಟರ್ ಅನ್ನು ಅವರೇ ನೀಡಿದ್ದಾರೆ. ಅಂದರೆ ವಿದ್ಯುತ್ ಸರಬರಾಜು ಕೈಕೊಟ್ಟಾಗ ಇದು ಕೆಲಸ ಮಾಡಲಾರದು. ನಿಮ್ಮ ಮನೆಯಲ್ಲಿ ಗಣಕಕ್ಕೆ ಯುಪಿಎಸ್ ಬಳಸುತ್ತೀರಾದರೆ ಇದನ್ನೂ ಯುಪಿಎಸ್‌ಗೇ ಜೋಡಿಸುವುದು ಒಳ್ಳೆಯದು.

ನಿಮ್ಮ ಮನೆಗೆ ಅಂತರಜಾಲ ಸಂಪರ್ಕವು ಇತರ್ನೆಟ್ ಕೇಬಲ್ ಮೂಲಕ ಬರುವುದಿದ್ದಲ್ಲಿ ಅದನ್ನು ಇದಕ್ಕೆ ಜೋಡಿಸಬಹುದು. ಅದಕ್ಕೆಂದೇ ಒಂದು ಇತರ್ನೆಟ್ ಕಿಂಡಿ ಇದೆ. ಇನ್ನೂ ಒಂದು ಇತರ್ನೆಟ್ ಕಿಂಡಿ ಇದೆ. ಅದರ ಮೂಲಕ ನಿಮ್ಮ ಗಣಕಕ್ಕೆ ಅಥವಾ ಲ್ಯಾಪ್‌ಟಾಪ್‌ಗೆ ಜೋಡಿಸಬಹುದು. ಬಳಕೆಯ ಪ್ರಾರಂಭದಲ್ಲಿ ಎಲ್ಲ ಆಯ್ಕೆಗಳನ್ನು ಮಾಡಿಕೊಳ್ಳಲೂ ಇದೇ ಸಂಪರ್ಕವನ್ನು ಬಳಸಬಹುದು. ಪ್ರಾರಂಭದಲ್ಲಿ ಆಯ್ಕೆಗಳನ್ನು ಮಾಡಿಕೊಳ್ಳಲೆಂದೇ ನೀಡಿದ ಉಸ್ತುವಾರಿ ಪುಟದ ಮೂಲಕ ಹಲವು ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ರೌಸರ್ ಅನ್ನು ಬಳಸಬೇಕು.

ಈ ಆಯ್ಕೆಗಳಲ್ಲಿ ಬೇಡದ ಜಾಲತಾಣಗಳನ್ನು ನಿರ್ಬಂಧಿಸುವುದು, ನಿಗದಿತ ಮ್ಯಾಕ್ ಸಂಖ್ಯೆಯ ಸಾಧನಗಳಿಗೆ ಮಾತ್ರ ಅಂತರಜಾಲ ಸಂಪರ್ಕ ನೀಡುವುದು, ನಿಮ್ಮ ಮನೆಗೆ ಬರುವ ಅಂತರಜಾಲ ಸಂಪರ್ಕ ನೀಡುವವರು ನಿಮಗೆ ನೀಡಿದ ಲಾಗಿನ್ ಮತ್ತು ಪಾಸ್‌ವರ್ಡ್‌ ನೀಡುವುದು, ಇತ್ಯಾದಿಗಳೆಲ್ಲ ಸೇರಿವೆ. ಕೆಲವು ಸಾಧನಗಳಲ್ಲಿ, ಮುಖ್ಯವಾಗಿ ಲ್ಯಾಪ್‌ಟಾಪ್‌ಗಳಲ್ಲಿ ಎಲ್ಲ ವೈಫೈಗಳಿಗೆ ಸಂಪರ್ಕ ಆಗುವುದಿಲ್ಲ. ಅಂತಹ ಸಂದರ್ಭಗಳಿಗೆಂದೇ ಇದರಲ್ಲಿ ಬೇರೆಬೇರೆಯ ಹಲವು ಆಯ್ಕೆಗಳನ್ನು ನೀಡಿದ್ದಾರೆ. ಅವುಗಳ ಜೊತೆ ಪ್ರಯೋಗ ನಡೆಸಿ ನಿಮ್ಮ ಲ್ಯಾಪ್‌ಟಾಪ್‌ಗೆ ಯಾವುದು ಸರಿಹೊಂದುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದರಲ್ಲಿ 3ಜಿ ಸಿಮ್‌ಗೆಂದು ಯುಎಸ್‌ಬಿ ಕಿಂಡಿ ಇದೆ. ಅದರ ಮೂಲಕ 3ಜಿ ಡಾಂಗಲ್ ಅನ್ನು ಜೋಡಿಸಬಹುದು. ಮಾರುಕಟ್ಟೆ ಯಲ್ಲಿ ದೊರೆಯುವ ಎಲ್ಲ ಡಾಂಗಲ್‌ಗಳನ್ನು ಇದಕ್ಕೆ ಜೋಡಿಸಿ ಬಳಸಲು ಆಗುವುದಿಲ್ಲ. ಯಾವ ಮಾದರಿಗಳೆಲ್ಲ ಇದರ ಜೊತೆ ಕೆಲಸ ಮಾಡುತ್ತವೆ ಎಂಬ ಪಟ್ಟಿ ಅವರ ಜಾಲತಾಣದಲ್ಲಿ ಇದೆ. ಡಿ-ಲಿಂಕ್‌ನವರದ್ದೇ 3ಜಿ ಡಾಂಗಲ್ ಕೊಂಡರೆ ಯಾವ ಸಮಸ್ಯೆಯೂ ಇರುವುದಿಲ್ಲ. ನಾನು ಹಲವು ತಿಂಗಳುಗಳ ಕಾಲ 3ಜಿ ಡಾಂಗಲ್ ಜೊತೆ ಬಳಸಿದ್ದೇನೆ. ಅಂತಹ ತೊಂದರೆ ಏನೂ ಆಗಲಿಲ್ಲ.

ಇದರ ವೈಫೈ ಶಕ್ತಿ ತುಂಬ ಕಡಿಮೆ. ಮನೆಯ ಒಂದು ಕೋಣೆಯಲ್ಲಿಟ್ಟರೆ ಪಕ್ಕದ ಕೋಣೆಗೆ ಮಾತ್ರ ಸಂಕೇತ ಬರುತ್ತದೆ. ಮನೆ ತುಂಬ ದೊಡ್ಡದಾಗಿದ್ದರೆ, ಇನ್ನೊಂದು ಮಹಡಿ ಇದ್ದರೆ ಇದರ ಶಕ್ತಿ ಸಾಲದು. ಇದು ಕಡಿಮೆ ಬೆಲೆಯ ರೂಟರ್ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದನ್ನು ಗಂಟೆಗಟ್ಟಲೆ, ದಿನಗಟ್ಟಲೆ ಬಳಸುವಂತಿಲ್ಲ. ಸತತವಾಗಿ ಹಲವು ಗಂಟೆಗಳ ಕಾಲ ಬಳಸುವಂತಿಲ್ಲ. ಅಂದರೆ ಇದು ಹೆವಿಡ್ಯೂಟಿ ರೂಟರ್ ಅಲ್ಲ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದಾದ ಒಂದು ಕಡಿಮೆ ಬೆಲೆಯ ರೂಟರ್ ಎನ್ನಬಹುದು.  

ವಾರದ ಆಪ್

ಹೆಲ್ಲೋ ಎಸ್ಎಂಎಸ್  
ಆಂಡ್ರಾಯಿಡ್ ಫೋನ್‌ಗಳಿಗೆ ಎಸ್ಎಂಎಸ್‌ಗೆಂದೇ ಹಲವಾರು ಕಿರುತಂತ್ರಾಂಶಗಳು (ಆಪ್) ಲಭ್ಯವಿವೆ. ಅವುಗಳಲ್ಲಿ ಒಂದು ಹೆಲ್ಲೋ ಎಸ್ಎಂಎಸ್ (hello sms). ಇದರ ಪ್ರಮುಖ ವೈಶಿಷ್ಟ್ಯವೆಂದರೆ ಟ್ಯಾಬ್‌ಗಳ ಬಳಕೆ. ಬೇರೆ ಬೇರೆ ವ್ಯಕ್ತಿಗಳ ಜೊತೆ ಎಸ್ಎಂಎಸ್ ಮೂಲಕ ಮಾಡಿದ ಎಲ್ಲ ಮಾತುಕತೆಗಳು ಅವರ ಹೆಸರಿನ ಮುಂದೆ ಟ್ಯಾಬ್ ಮಾದರಿಯಲ್ಲಿ ಓದಲು ಲಭ್ಯ. ಎಡದ ಭಾಗದಲ್ಲಿ ಎಲ್ಲ ಹೆಸರುಗಳ ಟ್ಯಾಬ್‌ಗಳು ಕಂಡುಬರುತ್ತವೆ. ನಿಮ್ಮ ಫೋನಿನ ಎದುರುಗಡೆಯ ಕ್ಯಾಮೆರಾವನ್ನು ಬಳಸಿ ನಿಮ್ಮದೇ ಫೋಟೊವನ್ನು ಕಳುಹಿಸಬಹುದು. ಈ ಕಿರುತಂತ್ರಾಂಶದಲ್ಲಿರುವ ಸೌಲಭ್ಯಗಳು ಅಂತಹ ವಿಶೇಷ ಎಂದು ಹೇಳಿಕೊಳ್ಳುವಂತೇನೂ ಇಲ್ಲ. ಟ್ಯಾಬ್‌ಗಳ ಬಳಕೆ ಬಿಟ್ಟರೆ ಬೇರೇನೂ ವಿಶೇಷ ಎನ್ನುವಂತಿಲ್ಲ. ಇನ್ನೂ ಹಲವಾರು ಉಪಯುಕ್ತ ಸೌಲಭ್ಯಗಳು ಸದ್ಯದಲ್ಲೇ ಬರಲಿವೆ ಎಂದು ಹೇಳಿಕೊಂಡಿದ್ದಾರೆ.

ಗ್ಯಾಜೆಟ್ ಸುದ್ದಿ
ಮಿಥ್ಯಾವಾಸ್ತವಿಕತೆಯನ್ನು ಬಳಸಿ ಕೆಲಸ ಮಾಡುವ ಒಂದು ಸಾಧನವನ್ನು ನಿಮ್ಮ ಮನೆಯಲ್ಲಿಯೇ ಲಭ್ಯವಿರುವ ಕಡಿಮೆ ಬೆಲೆಯ ವಸ್ತುಗಳನ್ನೇ ಬಳಸಿ ತಯಾರಿಸಬಹುದು ಎಂದು ಗೂಗ್ಲ್ ತೋರಿಸಿಕೊಟ್ಟಿದೆ. ಇದನ್ನು ತಯಾರಿಸಲು ಬೇಕಾಗುವ ವಸ್ತುಗಳು –ರಟ್ಟು, ಒಂದೆರಡು ಅಯಸ್ಕಾಂತಗಳು, ಎರಡು ಮಸೂರ (ಲೆನ್ಸ್), ರಬ್ಬರ್ ಬ್ಯಾಂಡ್. ಇವೇನೋ ಸಾಮಾನ್ಯ ವಸ್ತುಗಳು. ಸ್ವಲ್ಪ ದುಬಾರಿ ಅಗತ್ಯಗಳು –ಮೇಲ್ದರ್ಜೆಯ ಎನ್ಎಫ್‌ಸಿ ಸೌಲಭ್ಯವಿರುವ ಆಂಡ್ರಾಯಿಡ್ ಸ್ಮಾರ್ಟ್‌ಫೋನ್ ಮತ್ತು ಎನ್ಎಫ್‌ಸಿ ಟ್ಯಾಬ್‌ಗಳು. ಇದಕ್ಕೆಂದೇ ವಿಶೇಷ ಆಪ್ ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಮಿಥ್ಯಾವಾಸ್ತವಿಕತೆಯ ಈ ಸಾಧನವನ್ನು ಮನೆಯಲ್ಲೇ ತಯಾರಿಸಿ ಬಳಸುವುದು ಹೇಗೆ ಎಂಬ ವಿವರ developers.google.com/cardboard ಜಾಲತಾಣದಲ್ಲಿದೆ.

ಗ್ಯಾಜೆಟ್ ತರ್ಲೆ
ಅತಿ ದುಬಾರಿ ಆಪಲ್ ಐಫೋನ್ ಕೊಳ್ಳುವವರು ಅದನ್ನು ಬಳಸಲು ಕೊಳ್ಳುವುದಕ್ಕಿಂತಲೂ ಐಫೋನ್ ತನ್ನಲ್ಲಿ ಇದೆಯೆಂದು ಜಂಬದಿಂದ ತೋರಿಸಿಕೊಳ್ಳಲು ಅದನ್ನು ಕೊಳ್ಳುವುದೇ ಜಾಸ್ತಿ ಎಂದು ಸಮೀಕ್ಷೆಗಳು ಹೇಳುತ್ತಿವೆ. ನಿಮ್ಮಲ್ಲಿ ದುಬಾರಿ ಐಫೋನ್ ಕೊಳ್ಳಲು ಹಣವಿಲ್ಲವೇ? ಪರವಾಗಿಲ್ಲ. ನಿಮ್ಮಂತಹವರಿಗಾಗಿಯೇ ನೋಫೋನ್ ಬಂದಿದೆ. ಇದು ನೋಡಲು ಐಫೋನ್‌ನಂತೆಯೇ ಕಾಣಿಸುತ್ತದೆ. ಆದರೆ ಇದರಲ್ಲಿ ನಿಮಗೆ ಸಿಮ್ ಹಾಕಲು ಆಗುವುದಿಲ್ಲ, ಫೋನ್ ಮಾಡಲು ಆಗುವುದಿಲ್ಲ, ಇದರಲ್ಲಿ ವೈಫೈ ಬ್ಲೂಟೂತ್ ಇತ್ಯಾದಿಗಳಿಲ್ಲ, ಇದರಲ್ಲಿ ಕ್ಯಾಮೆರಾ ಇಲ್ಲ, .... ಎಲ್ಲವೂ ಇಲ್ಲ ಇಲ್ಲ. ಹಾಗಿದ್ದರೆ ಇದು ಏನು ಮಾಡುತ್ತದೆ? ಏನೂ ಇಲ್ಲ. ಸುಮ್ಮನೆ ನಿಮ್ಮ ಕಿಸೆಯಲ್ಲಿ ಕುಳಿತುಕೊಂಡು ನೋಡುವವರಿಗೆ ನಿಮ್ಮಲ್ಲಿ ದುಬಾರಿ ಫೋನ್ ಇದೆ ಎಂಬ ಭಾವನೆ ಮೂಡುವಂತೆ ಮಾಡುತ್ತದೆ!

ಗ್ಯಾಜೆಟ್ ಸಲಹೆ
ಅಂಕೋಲದ ನಾಗರಾಜ ನಾಯ್ಕರ ಪ್ರಶ್ನೆ: ನಾನು ನೋಕಿಯಾ X2 ಆಂಡ್ರಾಯ್ಡ್  ಮೊಬೈಲ್ ಕೊಳ್ಳಲು ಬಯಸಿರುವೆ. ದಯವಿಟ್ಟು ಅದರ ಕಾರ್ಯ ವೈಖರಿಯನ್ನು ತಿಳಿಸಿ.
ಉ:
ಮೈಕ್ರೋಸಾಫ್ಟ್, ನೋಕಿಯಾ ಕಂಪೆನಿಯ ಮೊಬೈಲ್ ಫೋನ್ ವಿಭಾಗವನ್ನು ಕೊಂಡುಕೊಂಡದ್ದು ನಿಮಗೆ ತಿಳಿದಿರಬಹುದು. ಮೈಕ್ರೋಸಾಫ್ಟ್‌ನವರು ತಮ್ಮದೇ ಮೊಬೈಲ್ ಫೋನ್ ಕಾರ್ಯಾಚರಣ ವ್ಯವಸ್ಥೆ (operating system) ತಯಾರಿಸುತ್ತಿರುವುದೂ ತಿಳಿದಿರಬಹುದು. ಹೀಗಿರುವಾಗ ತಮಗೆ ಸ್ಪರ್ಧಿಯಾಗಿರುವಾಗ ಆಂಡ್ರಾಯಿಡ್ ಫೋನ್ ತಯಾರಿಸಿದ್ದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಈಗ ಆ ಆಶ್ಚರ್ಯಕ್ಕೆ ತೆರೆ ಬಿದ್ದಿದೆ. ಮೈಕ್ರೋಸಾಫ್ಟ್ ಈ ಫೋನ್‌ಗಳ ತಯಾರಿಕೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಆದುದರಿಂದ ಅವುಗಳನ್ನು ಕೊಳ್ಳದಿರುವುದೇ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT