ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿನಿಂದಾದ ಮಹೋನ್ನತ ಆವಿಷ್ಕಾರ

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಒಂದು ಸಾಧನೆಯೆಡೆಗೆ ಎಡೆಬಿಡದೆ ಪ್ರಯತ್ನಿಸಿದಾಗ ನಡೆದ ಅಚಾ­ತುರ್ಯ ಕೂಡ ಹೇಗೆ ಮತ್ತೊಂದು ಅನಿರೀಕ್ಷಿ­ತವಾದ ವಿಶೇಷ ಸಾಧನೆಯ ಕಡೆಗೆ ಕರೆದೊಯ್ಯಬಹುದೆಂಬುದಕ್ಕೆ ಅಲೆಗ್ಸಾಂಡರ್ ಬೆಲ್‌ನ ಜೀವ­ನವೇ ಸಾಕ್ಷಿ. ಅಲೆಗ್ಸಾಂಡರ್ ಗ್ರಹಾಂ ಬೆಲ್ ಹುಟ್ಟಿದ್ದು ಸ್ಕಾಟ್‍ಲಂಡ್‌ನ ಎಡಿನ್‌­ಬರೋ­ದಲ್ಲಿ.

ಈತನ ತಂದೆ ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ಮಾತ­ನಾ­ಡುವ, ಧ್ವನಿಯನ್ನು ಬಳಸುವ ಕಲೆಯನ್ನು ಕಲಿಸುತ್ತಿದ್ದರು. ಮಗ ಗ್ರಹಾಂ ಬೆಲ್ ವಿಜ್ಞಾನದಲ್ಲಿ ಅಸಕ್ತಿ ತೋರಿಸಿದರೂ ಶಾಲೆಯ ಕಲಿಕೆಯಲ್ಲಿ ಉತ್ಸಾಹ ತೋರ­ಲಿಲ್ಲ. ಆದರೆ, ಸದಾ ಕಾಲ ಹೊಸ ಅನ್ವೇಷಣೆಯಲ್ಲಿ ಅವನ ಮನಸ್ಸು ವ್ಯಸ್ತವಾಗಿ­ರು­ತ್ತಿತ್ತು. ಆತ ತನ್ನ ಹನ್ನೆರ­ಡನೇ ವಯಸ್ಸಿಗೆ ಹಿಟ್ಟಿನ ಗಿರಣಿಯನ್ನು ಕಂಡುಹಿಡಿ­ದಿದ್ದ.

ಅದು ಎಷ್ಟೋ ವರ್ಷ ನಡೆಯಿತು. ಅವನ ಇಬ್ಬರು ಅಣ್ಣಂ­ದಿರು ಕ್ಷಯ­ರೋಗ­ದಿಂದ ಸಾವ­ನ್ನಪ್ಪಿದ ಮೇಲೆ ಆತನ ಆರೋಗ್ಯವೂ ಹದ­ಗೆಟ್ಟಿತ್ತು. ಅನಾ­ರೋಗ್ಯ­ದಿಂದ ಬಳಲುತ್ತಿದ್ದರೂ ಆತ ಕೆನಡಾಕ್ಕೆ ತೆರಳಿದೆ. ಅಲ್ಲಿ ಅವನ ಅರೋಗ್ಯ ಸುಧಾ­ರಿಸಿತು. ಅಷ್ಟು ಹೊತ್ತಿಗೆ ಅವನ ತಾಯಿಯ ಕಿವಿ ಸಂಪೂರ್ಣವಾಗಿ ಕೇಳದಂತಾ­­ದವು. ಆಗ ಅವನ ತಂದೆ ಕಿವುಡರಿಗೆ ಮಾತನಾಡುವ ರೀತಿಯನ್ನು ಕಲಿಸಿಕೊಡುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಗ್ರಹಾಂ ಅದನ್ನೇ ಮುಂದುವರೆಸಿದ.

ಕಿವುಡರಿಗೆ ಮಾತು ಕಲಿಸುವ ಸುಲಭ ವಿಧಾನವನ್ನು ಕಂಡುಹಿಡಿಯುವುದೇ ಅವನ ಜೀವನದ ಗುರಿಯಾಯಿತು.  ಹಗಲು ರಾತ್ರಿ ಅದೇ ಚಿಂತೆ ಆವರಿಸಿತು. ಆಗ ಅವನ ವಯಸ್ಸು ಕೇವಲ ಹತ್ತೊಂ­ಬತ್ತು ವರ್ಷ. ಗ್ರಹಾಮ ಬೆಲ್‌ ಅಂದಿನ ಶ್ರೇಷ್ಠ ಭಾಷಾಶಾಸ್ತ್ರ­ಜ್ಞನಾಗಿದ್ದ
ಅಲೆ­ಗ್ಸಾಂಡರ್ ಎಲ್ಲಿಸ್ ಎಂಬವರನ್ನು ಭೇಟಿಯಾಗಿ ತಾನು ಮಾಡಿದ ಪ್ರಯೋಗ­ಗಳನ್ನು ತಿಳಿಸಿದ. ಆತ ಅದನ್ನು ಮೆಚ್ಚಿ­ಕೊಂಡು ಜರ್ಮನಿಯಲ್ಲಿ ಇದೇ ವಿಷಯದಲ್ಲಿ ಸಾಧನೆ ಮಾಡಿದ ಹೆಲ್‍ಮಾಲ್ಡ್‌ ಎಂಬವನ ಕೃತಿಗಳನ್ನು ಓದಲು ಹೇಳಿದ.

ಹೆಲ್‍ಮಾಲ್ಡ್‌ನ ಕೃತಿಗಳು ಜರ್ಮನ್ ಭಾಷೆಯಲ್ಲಿದ್ದವು. ಆತನಿಗೆ ಜರ್ಮನ್ ಭಾಷೆ ಬರುತ್ತಿರಲಿಲ್ಲ. ಆದರೂ ಆ ಜರ್ಮನ್ ವಿಜ್ಞಾನಿ ತಯಾರು ಮಾಡಿದ ಯಂತ್ರಗಳ ಚಿತ್ರಗಳನ್ನು ನೋಡುತ್ತ ತನಗೆ ತೋಚಿದಂತೆ ಅರ್ಥೈಸಿಕೊಂಡ. 1874 ರಲ್ಲಿ ಆಗ ತಾನೇ ಟೆಲಿಗ್ರಾಫ್‌ಗೆ ವಿದ್ಯುತ್ ತಂತಿಗಳನ್ನು ಹಾಕಲಾಗಿತ್ತು. ಗ್ರಹಾಂ ಬೆಲ್, ಮಾತಿನ ಧ್ವನಿ ತರಂಗಗಳು ವಿದ್ಯುತ್ ತರಂಗಗಳಾಗುವ ವಿಧಾನ­ವನ್ನು ಕಂಡುಹಿಡಿದು ಧ್ವನಿ­ಯನ್ನು ದೂರದವರೆಗೆ ತೆಗೆದುಕೊಂಡು ಹೋಗಬಹು­ದಾದ ಸಾಧ್ಯತೆಗಳನ್ನು ನೋಡುತ್ತಿದ್ದ. ಆಗ ಒಂದಿಬ್ಬರು ಹಣ ಸಹಾಯ ಮಾಡಿ­ದಾಗ  ಥಾಮಸ್ ವಾಟ್ಸ್ನ್ ಎಂಬ ಎಲೆಕ್ಟ್ರಿಕಲ್ ಎಂಜನಿಯರನನ್ನು ಸಹಾಯಕ­ನನ್ನಾಗಿ ಪಡೆದ. 

ಹೊಸ ಆವಿಷ್ಕಾರಕ್ಕೆ ಅವನ ಸಹಾಯವೂ ದೊಡ್ಡದು. 1875ರ ಜೂನ್ ಎರಡರಂದು, “ವಾಟ್ಸ್‍ನ್ ಇಲ್ಲಿ ಬಾ, ನಿನ್ನ ಹತ್ತಿರ ಮಾತ­ನಾಡ­ಬೇಕು” ಎಂದಿದ್ದೇ ಮೊಟ್ಟಮೊದಲ ಟೆಲಿಫೋನ್ ಸಂದೇಶವಾಯಿತು. ಈ ಆವಿಷ್ಕಾರಕ್ಕೆ ಹಣ ಹೂಡಿದವರು ಇದನ್ನು ಕೇವಲ ಒಂದು ಲಕ್ಷ ಡಾಲರಿಗೆ ಮಾರುವುದಾಗಿ ಹೇಳಿ ವೆಸ್ಟರ್ನ್ ಯೂನಿಯನ್ ಕಂಪನಿ­ಯನ್ನು ಕೇಳಿದರು.

ಆಗ ಕಂಪನಿಯ ಯಜಮಾನರು, “ಇದೊಂದು ಹುಚ್ಚು ಪ್ರಯೋಗ, ಇದನ್ನಾರು ಬಳಸುತ್ತಾರೆ? ಟೆಲಿಗ್ರಾಫ್ ಇರುವಾಗ ಈ ಆಟದ ಸಾಮಾನು ಟೆಲಿಫೋನನ್ನು ಯಾರು ಕೊಂಡುಕೊಳ್ಳುತ್ತಾರೆ?” ಎಂದು ತಿರಸ್ಕರಿಸಿದರಂತೆ. ಮುಂದೆ ಎರಡು ವರ್ಷಕ್ಕೆ ಗ್ರಹಾಂ ತನ್ನದೇ ಬೆಲ್ ಕಂಪನಿಯನ್ನು ಪ್ರಾರಂಭಿಸಿ ಕೋಟಿ, ಕೋಟಿ ಹಣ ಗಳಿಸಿದ. ಇಂದು ನಾವು ಟೆಲಿಫೋನ್ ಇಲ್ಲದ ಜೀವನವನ್ನು ಊಹಿಸಿಕೊಳ್ಳು­ವುದೂ ಕಷ್ಟ.  ಗ್ರಹಾಂ ಬೆಲ್ ಪ್ರಯತ್ನಿಸಿದ್ದು ಕಿವುಡರಿಗೆ ಮಾತು ಕಲಿಸುವ ವಿಧಾನ­ವನ್ನು ಕಂಡುಹಿಡಿ­ಯಲು.

ಆದರೆ ಅದೇ ಮುಂದುವರೆದು ಒಂದು ಯಂತ್ರ­ವಾಗಿ ಮನುಷ್ಯನ ಜೀವನ ವಿಧಾನವನ್ನೇ ಬದಲಿಸಿತು. ಈ ಯಂತ್ರದ ಅನ್ವೇಷಣೆಗೆ  ಕಾರಣ ಗ್ರಹಾಂ ತನಗರ್ಥವಾಗದ ಜರ್ಮನ್ ಪುಸ್ತಕ­ದಲ್ಲಿಯ ಯಂತ್ರದ ಚಿತ್ರಗಳನ್ನು ತಪ್ಪಾಗಿ ತಿಳಿದದ್ದು. ಮನದಲ್ಲಿ ಪರೋಪಕಾರ ಸಾಧನೆಯ ಗುರಿ ಇದ್ದರೆ ತಪ್ಪು ಕೂಡ ಮತ್ತೊಂದು ಸಾರ್ಥಕ ಗುರಿ ತಲುಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT