ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೂರ್ ಆಡದ ಜರೂರ್ ಮಾತು

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ಬ್ರಿಟಿಷರ ಆಳ್ವಿಕೆಗೂ ಮೊದಲು ದೌರ್ಜನ್ಯ ನಡೆಸಿದವರ ಲೆಕ್ಕ ಯಾರ ಮುಂದಿಡುವುದು?

‘ಬಂಗಾಲದಿಂದ ಸೂರೆಹೊಡೆದ ಸಂಪತ್ತು, ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿಯನ್ನು ಸಾಧ್ಯವಾಗಿಸಿತು’. ಇದು ಬ್ರಿಟಿಷ್ ಇತಿಹಾಸ ತಜ್ಞ ವಿಲಿಯಂ ಡಿಗ್ಬಿ ಅವರ ಮಾತು. ಮೊನ್ನೆ ಶಶಿ ತರೂರ್, ಆಕ್ಸ್‌ಫರ್ಡ್ ಯೂನಿಯನ್ ಎದುರು ಮಂಡಿಸಿದ ವಾದ, ಭಾರತದ ಅರ್ಥವ್ಯವಸ್ಥೆ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕುಸಿಯಲು ಕಾರಣವೇನು ಎಂಬ ಚರ್ಚೆಗೆ ಪುನರ್‌ ಚಾಲನೆ ನೀಡಿದೆ.

ಬಿಡಿ, ಈ ವಿಷಯವಾಗಿ ವಾದ ಪ್ರತಿವಾದಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಬ್ರಿಟಿಷರಿಂದ ಶಿಕ್ಷಣ ಪದ್ಧತಿಯ ಸುಧಾರಣೆಯಾಯಿತು, ಜಗತ್ತಿನ ಸಂಪರ್ಕ ಭಾಷೆಯಾದ ಇಂಗ್ಲಿಷ್ ಕೊಡುಗೆಯಾಗಿ ಬಂತು, ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಾರಗೊಂಡಿತು, ರೈಲ್ವೆ ಉಡುಗೊರೆಯಾಗಿ ದೊರೆಯಿತು ಹೀಗೆ ಅವರ ಕೊಡುಗೆಗಳನ್ನು ಸ್ಮರಿಸುತ್ತಾ, ಜಲಿಯನ್ ವಾಲಾಬಾಗ್, ಬಂಗಾಲದ ಭೀಕರ ಕ್ಷಾಮದ ಘಟನೆಗಳನ್ನು ದುಗುಡದಿಂದ ನೆನೆಯುತ್ತಾ, ಸ್ವಾತಂತ್ರ್ಯಾಗ್ರಹವೇ ಅಪರಾಧವಾಗಿ ಕುಣಿಕೆಗೆ ತಲೆಯೊಡ್ಡಿದ, ಲಾಠಿ, ಬೂಟಿನ ಏಟು ತಿಂದ ನಮ್ಮವರಿಗಾಗಿ ಕಂಬನಿ ಮಿಡಿಯುತ್ತಾ, ಸಾಂಬಾರ್ ಪದಾರ್ಥಗಳ ಕಣಜವಾಗಿದ್ದ ಭಾರತ ಎಂಬುದನ್ನು ಮತ್ತೆ ಮತ್ತೆ ಓದುತ್ತಾ, ದಂಡೆತ್ತಿ ಬಂದವರ ಶೌರ್ಯದೆದುರು ನಮ್ಮವರ ಅಸಹಾಯಕತೆಗೆ ಮರುಗುತ್ತಾ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತಲೇ ಇರುತ್ತೇವೆ.

ವಿಪರ್ಯಾಸವೆಂದರೆ ಅಗತ್ಯವಾಗಿ ನಾವು ತಿಳಿದುಕೊಳ್ಳಬೇಕಾದ, ನಮ್ಮ ಎದೆಯುಬ್ಬಿಸಬಲ್ಲ ಹಲವು ಸಂಗತಿಗಳು ಶಾಲಾ ಪಠ್ಯಗಳಿಂದ ಹೊರಗೇ ಉಳಿದುಬಿಡುತ್ತವೆ. 1757ರ ಪ್ಲಾಸಿ ಕದನದಲ್ಲಿ ಮೀರ್ ಜಾಫರನನ್ನು ಬಳಸಿ ಯುದ್ಧ ಗೆದ್ದು, 1818ರಲ್ಲಿ ಕಟ್ಟಕಡೆಯ ಪೇಶ್ವೆಯನ್ನು ಹೊರಹಾಕಿ, ಪುಣೆಯ ಶನಿವಾರ್ ವಾಡ ಅರಮನೆಯ ಮೇಲೆ ಯೂನಿಯನ್ ಜಾಕ್ ಹಾರಿಸಿ, ಸಾರ್ವಭೌಮತ್ವ ಸ್ಥಾಪಿಸಿದ ಬ್ರಿಟಿಷರು ಭಾರತೀಯರ ಮೇಲೆ ಅಧಿಕಾರಯುತವಾಗಿ ದಬ್ಬಾಳಿಕೆ ನಡೆಸಿದ್ದಷ್ಟೇ ಅಲ್ಲ, ಭಾರತದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದರು. ಬ್ರಿಟಿಷರು ಒಳನುಸುಳುವ ಮೊದಲು, ವಿಶ್ವದ ಅರ್ಥವ್ಯವಸ್ಥೆಯಲ್ಲಿ ಭಾರತದ ಪಾಲು ಶೇಕಡ 23ರಷ್ಟಿತ್ತು.

ಆದರೆ ಭಾರತವನ್ನು ಬಿಟ್ಟು ಹೊರಡುವ ಹೊತ್ತಿಗೆ ಅದು ಶೇಕಡ 4ಕ್ಕೆ ಕುಸಿದಿತ್ತು. ಭಾರತವನ್ನು ಸುಮಾರು 200 ವರ್ಷಗಳ ಕಾಲ ಕೊಳ್ಳೆಹೊಡೆದ ಇಂಗ್ಲೆಂಡ್, ಆ ಅವಧಿಯಲ್ಲಿ ಕೊಬ್ಬಿ ಬೆಳೆಯಿತು.  ಭಾರತದ ಕೈಗಾರಿಕೆಗಳನ್ನು ತುಳಿಯಲು ಆಂಗ್ಲರು ಬಳಸಿದ ಕುಟಿಲ ತಂತ್ರಗಳೇ, ಬ್ರಿಟನ್ನಿನ ಕೈಗಾರಿಕಾ ಕ್ರಾಂತಿಯ ತಳಹದಿಯಾದವು. ಆರ್.ಸಿ. ದತ್ ಅವರ ‘ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ’, ದಾದಾಭಾಯಿ ನವರೋಜಿ ಅವರ ಕೃತಿಗಳು, ನೆಹರೂರ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿನ ಉಲ್ಲೇಖಗಳು ಈ ಸ್ಥಿತ್ಯಂತರವನ್ನು ವಿವರಿಸುತ್ತವೆ.

ಭಾರತದ ಉತ್ಪನ್ನಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದ್ದ ಕಾಲವೊಂದಿತ್ತು ಎಂದರೆ ಇಂದು ನಂಬುವುದು ಕಷ್ಟ. ಆದರೆ ಜಗತ್ತಿನ ಶೇಕಡ 24ರಷ್ಟು ಜನರ ಮೈ ಮುಚ್ಚುತ್ತಿದ್ದ ಬಟ್ಟೆಗಳು ಭಾರತದಿಂದ ಪೂರೈಕೆಯಾಗುತ್ತಿದ್ದವು ಎನ್ನುವುದನ್ನು ನಾವು ಹೆಮ್ಮೆಯಿಂದ ನೆನೆಯಲೇಬೇಕು. ಢಾಕಾದ ನವಿರಾದ ನೇಯ್ಗೆಯ ಬಟ್ಟೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆಯಿದ್ದ ಕಾಲ ಅದು.

ಮ್ಯಾಂಚೆಸ್ಟರ್ ಬಟ್ಟೆಗಳಿಗೆ ಗ್ರಾಹಕರ ಅಭಾವವಿತ್ತು. ಬ್ರಿಟಿಷರು ತಮ್ಮ ವ್ಯಾಪಾರ ವೃದ್ಧಿಗೆ ಅನುಸರಿಸಿದ ತಂತ್ರಗಳಲ್ಲಿ ಕೇವಲ ಜಾಣ್ಮೆ ಇರಲಿಲ್ಲ, ಕ್ರೌರ್ಯವಿತ್ತು. ಪ್ರತೀಕಾರದ ಕ್ರಮವಾಗಿ ಭಾರತದ ಉತ್ತಮ ನೇಕಾರರ ಸಮೀಕ್ಷೆ ಮಾಡಿಸಲಾಯಿತು, ಅವರನ್ನು ಬಂಧಿಸಿ, ಹೆಬ್ಬೆರಳುಗಳನ್ನು ಕತ್ತರಿಸಲಾಯಿತು. ಭಾರತದಲ್ಲಿ ತಯಾರಾದ ಉತ್ಪನ್ನಗಳ ಮೇಲೆ ಅತಿಹೆಚ್ಚು ಸುಂಕ ವಿಧಿಸಲಾಯಿತು. ಪರಿಣಾಮ ಭಾರತದ ಉತ್ಪನ್ನಗಳ ಬೆಲೆ ಹೆಚ್ಚಾಯಿತು. ಬೇಡಿಕೆ ಕುಸಿಯಿತು. ಈ ಹೊಡೆತ ತಾಳಲಾರದೆ ಬಹುಪಾಲು ಮಗ್ಗಗಳು ಬಾಗಿಲೆಳೆದವು. ಅಳಿದುಳಿದ ಮಗ್ಗಗಳಲ್ಲಿ ನೇಯ್ಗೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಬ್ರಿಟಿಷರು ಅಡ್ಡಗಾಲು ಹಾಕಿದರು. ಆದರೆ ತಾವು ಬಂಗಾಲದಿಂದ ಲೂಟಿ ಹೊಡೆದ ಹಣವನ್ನು ಸ್ಪಿನ್ನಿಂಗ್ ಜೆನ್ನಿ, ವಾಟರ್ ಫ್ರೇಮ್‌ಗಳ ಆವಿಷ್ಕಾರಕ್ಕೆ ಬಳಸಿದರು. ಇಲ್ಲಿಂದಲೇ ಕಚ್ಚಾ ವಸ್ತುಗಳನ್ನು ಕೊಂಡೊಯ್ದು, ನೂತನ ತಂತ್ರಜ್ಞಾನ ಬಳಸಿ ಬಟ್ಟೆ ತಯಾರಿಸಿ ವಿಶ್ವ ಮಾರುಕಟ್ಟೆಗೆ ಬಿಟ್ಟರು.

ಬಟ್ಟೆಗಳಷ್ಟೇ ಅಲ್ಲ, ಬ್ಲೇಡು, ಉಪ್ಪು, ಚಪ್ಪಲಿ, ಸೂಜಿ ಹೀಗೆ ಅಲ್ಲಿ ತಯಾರಾದ ಎಲ್ಲ ವಸ್ತುಗಳೂ ಭಾರತದ ಮಾರುಕಟ್ಟೆಯನ್ನು ಆವರಿಸಿದವು. ಅವುಗಳನ್ನೇ ಕೊಳ್ಳಬೇಕೆಂಬ ಒತ್ತಡವೂ ಹೆಚ್ಚಿತು. ‘ಭಾರತದಿಂದ ಹಣವನ್ನು ಸೂರೆಹೊಡೆದದ್ದಷ್ಟೇ ಅಲ್ಲ, ಇಲ್ಲಿ ತಯಾರಾದ ಬಟ್ಟೆಗಳನ್ನು ಕೊಳ್ಳುವಂತೆ ಅಲ್ಲಿನ ಜನರನ್ನು ಹಿಂಸಿಸಲಾಗುತ್ತಿದೆ. ಇಲ್ಲಿನ ಶೀತಹವೆಗೆ ಸರಿಹೊಂದುವ ಬಟ್ಟೆಗಳನ್ನು ಭಾರತೀಯರು ಏಕೆ ಕೊಳ್ಳಬೇಕು’ ಎಂದು ವಿಲಿಯಂ ಡಿಗ್ಬಿ ಬರೆದರು.

ಬ್ರಿಟಿಷರ ಈ ತಂತ್ರಕ್ಕೆ ಪ್ರತಿಯಾಗಿ ‘ಸ್ವದೇಶಿ ಆಂದೋಲನ’ ಭಾರತದಲ್ಲಿ ಟಿಸಿಲೊಡೆಯಿತು. ಅದಕ್ಕೆ ಪೂರ್ವಭಾವಿಯಾಗಿ ನಡೆದ ಘಟನೆಗಳೂ ರೋಚಕವೇ. ಆರಂಭದಿಂದಲೂ ಬಂಗಾಲಿಗಳ ಬೌದ್ಧಿಕ ಶಕ್ತಿ, ಮರಾಠಿಗರ ಕೆಚ್ಚೆದೆ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿತ್ತು. ಬಂಗಾಲಿಗಳನ್ನು ಚದುರಿಸುವ ಸಲುವಾಗಿ ಗುಪ್ತವಾಗಿ ನಡೆಯುತ್ತಿದ್ದ ಬಂಗಾಲದ ವಿಭಜನೆಯ ಪೂರ್ವಸಿದ್ಧತೆಗಳನ್ನು ಇಂಗ್ಲೆಂಡಿನ ‘ಸ್ಟಾಂಡರ್ಡ್’ ಪತ್ರಿಕೆ ಪ್ರಕಟಿಸಿತು. ಬಂಗಾಲದ ಜನ ಸಿಟ್ಟಿಗೆದ್ದರು.

ಆಡಳಿತದ ಅನುಕೂಲಕ್ಕಾಗಿ, ಏಳು ಕೋಟಿ ಜನಸಂಖ್ಯೆಯ ರಾಜ್ಯವನ್ನು ಎರಡಾಗಿ ತುಂಡುಮಾಡದೇ ವಿಧಿಯಿಲ್ಲ ಎಂದು ಲಾರ್ಡ್ ಕರ್ಜನ್ ಸಬೂಬು ಹೇಳಿದ. ಆದರೆ ಉದ್ದೇಶ, ಪೂರ್ವ ಬಂಗಾಲವನ್ನು ಅಸ್ಸಾಂ ಜೊತೆ ಸೇರಿಸಿ, ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಧರ್ಮದ ದೃಷ್ಟಿಯಿಂದ ಬಂಗಾಲಿಗಳನ್ನು ಅಲ್ಪಸಂಖ್ಯಾತರನ್ನಾಗಿಸುವುದು, ಪಶ್ಚಿಮ ಬಂಗಾಲವನ್ನು ಬಿಹಾರ ಮತ್ತು ಒರಿಸ್ಸಾ (ಈಗ ಒಡಿಶಾ) ಜೊತೆ ಸೇರಿಸಿ ಭಾಷೆಯ ದೃಷ್ಟಿಯಿಂದ ಅಲ್ಪಸಂಖ್ಯಾತರನ್ನಾಗಿಸಿ ಬಂಗಾಲಿಗಳ ಅಂತಃಸತ್ವವನ್ನು ಕೊಲ್ಲುವುದಾಗಿತ್ತು.

1905ರ ಆಗಸ್ಟ್ 7 ರಂದು ಕಲ್ಕತ್ತದ ಟೌನ್ ಹಾಲ್‌ನಲ್ಲಿ ಹತ್ತಾರು ಸಾವಿರ ಜನ ಒಟ್ಟಾದರು. ನಾಲ್ಕು ಕಡೆ ಭಾಷಣಗಳು ಆಯೋಜನೆಯಾದವು. ಮುಖ್ಯ ಸಭೆಯಲ್ಲಿ ಕಾಸಿಂಬಜಾರ್ ಮಹಾರಾಜ ಮಣೀಂದ್ರಚಂದ್ರ ನಂದಿ ಮಾತನಾಡಿದರೆ, ಅತ್ಯುತ್ತಮ ವಾಗ್ಮಿಗಳಾಗಿದ್ದ ಅಂಬಿಕಾ ಚರಣ್ ಮಜುಮ್ದಾರ್, ಬಿಪಿನ್ ಚಂದ್ರಪಾಲ್, ಸುರೇಂದ್ರನಾಥ್ ಬ್ಯಾನರ್ಜಿ ಇತರೆಡೆ ಮಾತನಾಡಿದರು. ಸಭೆ, ಬಂಗಾಲ ವಿಭಜನೆಯ ವಿರುದ್ಧ ನಿರ್ಣಯವನ್ನು ತೆಗೆದುಕೊಂಡಿತು. ಅಮೆರಿಕದ ಇತಿಹಾಸಕಾರ ವಿಲ್ ಡ್ಯುರಂಟ್ ಸಭೆಯ ಏಕಧ್ವನಿಯ ನಿರ್ಣಯವನ್ನು ‘ಭಾರತ ಸ್ವಾತಂತ್ರ್ಯ ಹೋರಾಟದ ಶಂಖನಾದ’ ಎಂದು ಕರೆದ. ಬಂಗಾಲದ ಹಲವು ಪತ್ರಿಕೆಗಳು ವಿಭಜನೆಯನ್ನು ವಿರೋಧಿಸಿ ಬರೆದವು.

‘ಸಂಜೀವಿನಿ’ ಪತ್ರಿಕೆಯಲ್ಲಿ ಕೃಷ್ಣಕುಮಾರ್ ಮಿತ್ರ, ‘ಬ್ರಿಟಿಷರು ವ್ಯಾಪಾರಿ ಬುದ್ಧಿಯವರು, ಲಾಭದ ಲೆಕ್ಕಾಚಾರವನ್ನಷ್ಟೇ ನೋಡುವವರು. ಅವರಿಗೆ ನಷ್ಟವಾಗುವಂತೆ ಮಾಡಿದರಷ್ಟೇ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ’ ಎಂದು ತಮ್ಮ ಲೇಖನದಲ್ಲಿ ಬರೆದದ್ದು ಸ್ವದೇಶಿ ಚಳವಳಿಗೆ ಮುನ್ನುಡಿಯಾಯಿತು.

ರವೀಂದ್ರನಾಥ ಟ್ಯಾಗೋರ್, ಅಶ್ವಿನಿಕುಮಾರ್ ದತ್, ಬಿಪಿನ್ ಚಂದ್ರಪಾಲ್, ಅರವಿಂದ, ನಿವೇದಿತಾ ಹೀಗೆ ಗಣ್ಯ ನಾಯಕರು ಸ್ವದೇಶಿ ಆಂದೋಲನದ ನೇತೃತ್ವ ವಹಿಸಿದರು. 1905ರ ಸೆಪ್ಟೆಂಬರ್ 5ರಂದು, ಮಹಾಲಯ ಅಮಾವಾಸ್ಯೆಯ ದಿನ ಸುಮಾರು 50 ಸಾವಿರ ಜನ, ನದಿಯಲ್ಲಿ ಮಿಂದು, ಬರಿಗಾಲಿನಲ್ಲಿ ಕಾಳಿ ಮಂದಿರಕ್ಕೆ ತೆರಳಿ ಸ್ವದೇಶಿ ವಸ್ತುಗಳನ್ನಷ್ಟೇ ಬಳಸುತ್ತೇವೆ ಎಂಬ ಪ್ರತಿಜ್ಞೆ ಮಾಡಿದರು.

ನವದ್ವೀಪದ ಅರ್ಚಕ ಪರಿಷತ್, ವಿದೇಶಿ ವಸ್ತ್ರಗಳನ್ನು ಧರಿಸಿ ಬರುವ ವಧು ವರರಿಗೆ ಲಗ್ನ ಮಾಡಿಸುವುದಿಲ್ಲ ಎಂಬ ನಿಲುವು ತಾಳಿತು. ಹೊರದೇಶಗಳಿಂದ ಆಮದಾಗುವ ಉತ್ತರ ಪತ್ರಿಕೆಗಳನ್ನು ಕೊಟ್ಟರೆ ಪರೀಕ್ಷೆಯನ್ನೇ ಬಹಿಷ್ಕರಿಸುತ್ತೇವೆ ಎಂದು ವಿದ್ಯಾರ್ಥಿ ಸಂಘಟನೆಗಳು ಘೋಷಿಸಿದವು.  ವಿದೇಶಿ ವಸ್ತ್ರ, ಚಪ್ಪಲಿಗಳನ್ನು ಹಾಕಿಕೊಂಡು ಬಂದವರ ಕ್ಷೌರ ಮಾಡಲು ಕ್ಷೌರಿಕರು ನಿರಾಕರಿಸಿದರು. ಚರ್ಮಶಿಲ್ಪಿಗಳು ವಿದೇಶಿ ಚಪ್ಪಲಿ, ಬೂಟುಗಳನ್ನು ರಿಪೇರಿ ಮಾಡುವುದಿಲ್ಲ ಎಂದು ಪಣತೊಟ್ಟರು.

ಚಳವಳಿಯ ಉತ್ಕಟತೆ ಎಷ್ಟಿತ್ತೆಂದರೆ, ಸುರೇಂದ್ರನಾಥ ಬ್ಯಾನರ್ಜಿ ತಮ್ಮ ಡೈರಿಯಲ್ಲಿ ವೈದ್ಯರೊಬ್ಬರು ಹೇಳಿದ ಮನಮುಟ್ಟುವ ಪ್ರಸಂಗವೊಂದನ್ನು ಬರೆಯುತ್ತಾರೆ: ‘ಜ್ವರ ನೆತ್ತಿಗೇರಿ ಪ್ರಜ್ಞೆ ಕಳೆದುಕೊಂಡಿದ್ದ ಏಳೆಂಟು ವರ್ಷದ ಮಗುವೊಂದು, ಪ್ರಜ್ಞೆ ಬಂದಾಗಲೆಲ್ಲಾ, ನನಗೆ ಇಂಗ್ಲೆಂಡಿನ ಔಷಧಿ ಕೊಡಬೇಡಿ ಎನ್ನುತ್ತಿದ್ದಳಂತೆ’. ಹೀಗೆ ಇಡೀ ಬಂಗಾಲದಲ್ಲಿ ಹಿರಿಕಿರಿಯರೆನ್ನದೇ ಎಲ್ಲರನ್ನೂ ಒಳಗೊಂಡು ಪ್ರಖರವಾಗಿ ಹಬ್ಬಿದ ಸ್ವದೇಶಿ ಆಂದೋಲನ, ಲಾಲಾ ಲಜಪತರಾಯರಿಂದ ಪಂಜಾಬಿಗೆ, ತಿಲಕರಿಂದ ಮಹಾರಾಷ್ಟ್ರಕ್ಕೆ, ಸುಬ್ರಮಣ್ಯ ಭಾರತಿ ಅವರಿಂದ ತಮಿಳುನಾಡಿಗೆ ಪಸರಿಸಿತು. ಈ ಘಟನೆಗಳೆಲ್ಲಾ ನಡೆದದ್ದು, ಗಾಂಧೀಜಿ ಭಾರತಕ್ಕೆ ಬರುವ ಹತ್ತುವರ್ಷಗಳ ಮೊದಲು ಎನ್ನುವುದನ್ನು ಅಡಿಗೆರೆ ಎಳೆದು ಗುರುತು ಮಾಡಿಕೊಳ್ಳಬೇಕು.

ಇತ್ತ ತಮಿಳುನಾಡಿನಲ್ಲಿ ಸುಬ್ರಮಣ್ಯ ಭಾರತಿ ಅವರ ಶಿಷ್ಯ ಚಿದಂಬರಂ ಪಿಳ್ಳೆ ಹೊಸದೊಂದು ಸಾಹಸಕ್ಕೆ ಅಣಿಯಾದರು. ಬ್ರಿಟಿಷ್ ನ್ಯಾವಿಗೇಷನ್ ಕಂಪೆನಿಯ ಹಡಗುಗಳು ಶ್ರೀಲಂಕಾ ಮತ್ತು ತಮಿಳುನಾಡಿನ ಮಧ್ಯೆ ಸಂಚರಿಸುತ್ತಿದ್ದವು. ಪ್ರಯಾಣಕ್ಕೆ ನಾಲ್ಕು ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಚಿದಂಬರಂ ಪಿಳ್ಳೆ ‘ಸ್ವದೇಶಿ ನ್ಯಾವಿಗೇಷನ್ ಕಂಪೆನಿ’ ಆರಂಭಿಸಿದರು. 10 ರೂಪಾಯಿ ಮುಖಬೆಲೆಯ 40 ಸಾವಿರ ಷೇರುಗಳು ತಲಾ 25 ರೂ.ಗಳಿಗೆ ಮಾರಾಟವಾಗಿ, ಕೇವಲ ನಾಲ್ಕಾಣೆ ಶುಲ್ಕದ ‘ವಂದೇಮಾತರಂ’ ಹೆಸರಿನ ಸ್ವದೇಶಿ ಹಡಗುಗಳು ಕಾರ್ಯಾರಂಭ ಮಾಡಿದವು. ಬ್ರಿಟಿಷ್ ಕಂಪೆನಿಗೆ ಹೊಡೆತ ಬಿತ್ತು.

ಕಂಪೆನಿಯನ್ನು ವಿಲೀನಗೊಳಿಸಬೇಕೆಂಬ ಪ್ರಸ್ತಾಪವನ್ನು ಪಿಳ್ಳೆಯವರ ಮುಂದೆ ಇಡಲಾಯಿತು. ಒಪ್ಪದಿದ್ದಾಗ ಹಲವು ಆರೋಪಗಳನ್ನು ಹೇರಿ ಅವರನ್ನು ಅಂಡಮಾನ್ ಜೈಲಿಗೆ ಬ್ರಿಟಿಷರು ಅಟ್ಟಿದರು. ಹೀಗೆ ತಮ್ಮ ಸ್ವಾರ್ಥಕ್ಕೆ, ಕುತಂತ್ರಗಳನ್ನು ಹೆಣೆದು ಭಾರತವನ್ನು ಬಡಕಲು ಮಾಡಿದ ಬ್ರಿಟಿಷರ ಯಾವ ಉಪಕಾರವನ್ನು ನೆನೆಯಬೇಕು ಹೇಳಿ? ಬ್ರಿಟಿಷರು ರೈಲ್ವೆ ವ್ಯವಸ್ಥೆ ಕಲ್ಪಿಸಿ ಉಪಕಾರ ಮಾಡಿದರು ಎನ್ನುವ ಮೊದಲು ಗಾಂಧೀಜಿಯ ‘ಹಿಂದ್ ಸ್ವರಾಜ್’ ಕೃತಿಯನ್ನೊಮ್ಮೆ ಓದಬೇಕು. ರೈಲ್ವೆಯನ್ನು ವಿರೋಧಿಸುವ ಮಹಾತ್ಮ ‘ರೈಲ್ವೆಯ ಹೊರತಾಗಿ ಬ್ರಿಟಿಷರು ಭಾರತದ ಮೇಲೆ ಹಿಡಿತ ಸಾಧಿಸಲು ಕಷ್ಟವಾಗುತ್ತಿತ್ತು, ಅದರಿಂದಾದ ಉಪಕಾರಕ್ಕಿಂತ ಅಪಕಾರವೇ ಹೆಚ್ಚು’ ಎನ್ನುತ್ತಾರೆ.

ಅಸಲಿಗೆ ಬ್ರಿಟಿಷರು ರೈಲ್ವೆ ವ್ಯವಸ್ಥೆ ತಂದದ್ದು ಭಾರತೀಯರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದಲ್ಲ, ಅಲ್ಲಿದ್ದದ್ದೂ ಸ್ವಾರ್ಥವೇ. ದೇಶದ ಒಳಭಾಗದಿಂದ ಬಂದರುಗಳಿಗೆ ಸುಲಭವಾಗಿ ಸಾಮಗ್ರಿಗಳನ್ನು ಸಾಗಿಸುವುದಕ್ಕೆ ಮತ್ತು ಅಲ್ಲಿಂದ ಹಡಗುಗಳ ಮೂಲಕ ತಮ್ಮ ನಾಡಿಗೆ ಕೊಂಡೊಯ್ಯುವುದಕ್ಕೆ ಸಾರಿಗೆಯ ಅವಶ್ಯಕತೆಯಿತ್ತು. ತೆರಿಗೆ ಹಣದಿಂದ ರೈಲ್ವೆ ಸಾಕಾರಗೊಂಡಿತು. ಇನ್ನು ಶಿಕ್ಷಣ ವ್ಯವಸ್ಥೆಯಲ್ಲಾದ ಬದಲಾವಣೆ, ಅದು ನಿಜಕ್ಕೂ ಸುಧಾರಣೆಯೋ, ಭಾರತೀಯರ ವ್ಯಕ್ತಿತ್ವದಲ್ಲಿ ಕೀಳರಿಮೆ ತುಂಬಲು ನಡೆಸಿದ ಪ್ರಯತ್ನವೋ ಎನ್ನುವುದೇ ವಿಸ್ತೃತ ಚರ್ಚಾ ವಿಷಯ.

ಅದೆಲ್ಲ ಒತ್ತಟ್ಟಿಗಿರಲಿ, ಮೊನ್ನೆ ಶಶಿ ತರೂರ್ ಆಡಿರುವ ಮಾತು ಹೊಸದೇನಲ್ಲ. ರಾಷ್ಟ್ರವಾದಿ ಚಿಂತಕ ದಿವಂಗತ ರಾಜೀವ್ ದೀಕ್ಷಿತ್, ವಿದ್ಯಾನಂದ ಶೆಣೈ ಮುಂತಾದವರು ಊರೂರು ಸುತ್ತಿ ಆಡಿದ್ದನ್ನೇ ತರೂರ್ ಬ್ರಿಟಿಷರು ಅಂಟಿಸಿಹೋದ ಭಾಷೆಯಲ್ಲಿ, ಅವರದ್ದೇ ಆಕ್ಸೆಂಟಿನಲ್ಲಿ ಆಡಿದ್ದಾರೆ.  ಅವರ ನೆಲದಲ್ಲೇ ಬ್ರಿಟಿಷರ ದೌರ್ಜನ್ಯ, ಲೂಟಿಯ ಲೆಕ್ಕ ಇಟ್ಟು ಕ್ಷಮೆಯನ್ನಾದರೂ ಕೇಳಿ ಎಂದು ಆಗ್ರಹಿಸಿದ್ದಾರೆನ್ನುವ ಕಾರಣಕ್ಕೆ ತರೂರ್ ಅವರನ್ನು ಶ್ಲಾಘಿಸಲಡ್ಡಿಯಿಲ್ಲ.

ಆದರೆ ಬ್ರಿಟಿಷ್ ಆಳ್ವಿಕೆಗೂ ಮೊದಲು ಇಲ್ಲಿನ ದೇಗುಲ, ವಿದ್ಯಾಲಯಗಳನ್ನು ಧ್ವಂಸಗೊಳಿಸಿ, ಸ್ತ್ರೀ, ಸಭ್ಯತೆಗಳ ಮೇಲೆ ಅತ್ಯಾಚಾರವೆಸಗಿ, ದೌರ್ಜನ್ಯ ನಡೆಸಿದವರ ಲೆಕ್ಕ ಯಾರ ಮುಂದಿಡುವುದು? ಮಧ್ಯ ಏಷ್ಯಾದಿಂದ ದಂಡೆತ್ತಿ ಬಂದ ಬಾಬರನ ಗುಮ್ಮಟಕ್ಕೆ, ಸೌಹಾರ್ದವನ್ನೇ ಪಣಕ್ಕಿಟ್ಟು ಅಂಟಿಕೊಂಡವರಿಗೆ ಏನು ಹೇಳುವುದು? ಆ ಬಗ್ಗೆಯೂ ತರೂರ್ ನಿರ್ಭಿಡೆಯ ಮಾತನಾಡಿದರೆ ಆಗ ಭೇಷ್ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT