ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ದೇಸಾಯಿ ಅವರ ಐದು ಮುಖ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಕಳೆದ ತಿಂಗಳು ನಿಧನರಾದ ನಾರಾಯಣ ದೇಸಾಯಿ ಅವರು ಮಹಾತ್ಮ ಗಾಂಧೀಜಿ ಅವರ ನಿಕಟ ಸಂಪರ್ಕದಲ್ಲಿದ್ದು ಈವರೆಗೆ ಬದುಕುಳಿದಿದ್ದವರಲ್ಲಿ ಕೊನೆಯ ಕೊಂಡಿ. ಅವರು ಮಹಾತ್ಮನನ್ನು ಚೆನ್ನಾಗಿ ಅರಿತಿದ್ದವರು ಮತ್ತು ಹತ್ತಿರದಿಂದ ಬಲ್ಲವರಾಗಿದ್ದರು. ಗಾಂಧೀಜಿ ಅವರ ಪ್ರತಿಭಾಶೀಲ ಕಾರ್ಯದರ್ಶಿ ಮಹಾದೇವ್‌ ದೇಸಾಯಿ ಹಾಗೂ ದುರ್ಗಾ ದಂಪತಿಯ ಏಕೈಕ ಪುತ್ರರಾಗಿ 1924ರ ಡಿಸೆಂಬರ್‌ನಲ್ಲಿ ನಾರಾಯಣ್‌ ಜನಿಸಿದ್ದರು. ಸಬರಮತಿ ಆಶ್ರಮದಲ್ಲಿ ಬೆಳೆದ ಅವರು, ಮಹಾತ್ಮ 1936ರಲ್ಲಿ ಸೇವಾಗ್ರಾಮಕ್ಕೆ ಸ್ಥಳಾಂತರಗೊಂಡಾಗ ತಮ್ಮ ಪೋಷಕರೊಂದಿಗೆ ಅವರನ್ನು ಅನುಸರಿಸಿದರು.

1933– 34ರ ಚಳಿಗಾಲದಲ್ಲಿ ದಕ್ಷಿಣ ಮತ್ತು ಪೂರ್ವ ಭಾರತಕ್ಕೆ ಗಾಂಧಿ ‘ಅಸ್ಪೃಶ್ಯತಾ ವಿರೋಧಿ’ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಯುವ ಹಂತದಲ್ಲಿ ಗಾಂಧಿ ಮತ್ತು ಮಹಾದೇವ್‌ ಅವರನ್ನು ಒಡಿಶಾದಲ್ಲಿ ಅವರ ಪತ್ನಿಯರು ಜೊತೆಗೂಡಿದರು. ದಿನವಿಡೀ ಗಂಡಸರು ಹಳ್ಳಿಗಾಡಿಗೆ ತೆರಳಿ ಅಸ್ಪೃಶ್ಯತೆಯ ಮಾರಕ ಆಚರಣೆಯ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದರು. ಸಹನಾಮೂರ್ತಿಗಳಂತಿದ್ದ ಅವರ ಪತ್ನಿಯರು, ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ಗಂಡಂದಿರ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದರು.

ಒಂದು ದಿನ ಹೀಗೆ ಗಂಡಸರು ಜನಜಾಗೃತಿ ಮೂಡಿಸಲು ದೂರದೂರಿಗೆ ತೆರಳಿದ್ದಾಗ, ತಾವು ಉಳಿದುಕೊಂಡಿದ್ದ ಶಿಬಿರವು ಪುರಿಯ ಖ್ಯಾತ ಜಗನ್ನಾಥ ಮಂದಿರಕ್ಕೆ ಸ್ಪಲ್ಪವೇ ದೂರದಲ್ಲಿದ್ದ ಸಂಗತಿ ಕಸ್ತೂರಬಾ ಮತ್ತು ದುರ್ಗಾ ಅವರಿಗೆ ತಿಳಿಯಿತು. ಧರ್ಮನಿಷ್ಠ ಹಿಂದೂಗಳಾಗಿದ್ದ ಮತ್ತು ಪ್ರಾರ್ಥನೆ, ವ್ರತಾಚರಣೆಯಲ್ಲಿ ನಂಬಿಕೆಯಿದ್ದ ಇಬ್ಬರೂ ಮಹಿಳೆಯರು ಆ ದೇಗುಲಕ್ಕೆ ಹೋಗಿ ಬರಲು ಅಣಿಯಾಗತೊಡಗಿದರು. ಆದರೆ ದುರ್ಗಾ ದಂಪತಿಯ 9 ವರ್ಷದ ಬಾಲಕ ನಾರಾಯಣ ದೇಸಾಯಿ ಅವರನ್ನು ಅಲ್ಲಿಗೆ ಹೋಗದಂತೆ ತಡೆಯಲು ಯತ್ನಿಸಿದ. ಅಲ್ಲಿನ ಅರ್ಚಕರು ಹಿಂದೂ ಧರ್ಮದ ಅಸ್ಪೃಶ್ಯ ಜಾತಿಗಳಲ್ಲಿ ಹುಟ್ಟಿದವರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಿರುವುದರಿಂದ, ನೀವು ಅಲ್ಲಿಗೆ ತೆರಳಿದರೆ ‘ಬಾಪು’ಗೆ ಅಸಮಾಧಾನವಾಗುತ್ತದೆ ಎಂದು ತಿಳಿಸಿದ. ಆದರೂ ಅವನ ಮಾತನ್ನು ಲೆಕ್ಕಿಸದೆ ದೇವಾಲಯಕ್ಕೆ ತೆರಳಿದ ಮಹಿಳೆಯರು, ಭಗವಾನ್‌ ಜಗನ್ನಾಥನ ದರ್ಶನ ಪಡೆದು ಸದ್ದಿಲ್ಲದೇ ಶಿಬಿರಕ್ಕೆ ಮರಳಿದರು. ಆದರೆ ಮನೆಗೆ ಹಿಂದಿರುಗಿದ ಗಂಡಸರಿಗೆ ಮಹಿಳೆಯರು ಮಾಡಿದ ಈ ಕೆಲಸ ನಾರಾಯಣನಿಂದ ತಿಳಿಯಿತು. ಇದನ್ನು ಕೇಳಿ ಕುಪಿತರಾದ ಗಾಂಧಿ, ಕಸ್ತೂರಬಾ ಅವರನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಪತ್ನಿಯೇ ಅಸ್ಪೃಶ್ಯತೆ ಆಚರಿಸುವ ದೇವಾಲಯಗಳನ್ನು ಒಪ್ಪಿಕೊಳ್ಳುವುದಾದರೆ, ಅಸ್ಪೃಶ್ಯತೆಯಿಂದ ದೂರ ಇರಿ ಎಂದು ತಾವು ಹಿಂದೂಗಳನ್ನು ಕೇಳುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆಯಾಗಿತ್ತು.

‘ಒಬ್ಬ ಸಂತನೊಡನೆ ಸ್ವರ್ಗದಲ್ಲಿ ಇರುವುದು ಪರಮಸುಖದ ಮತ್ತು ಘನತೆಯ ಸಂಗತಿ. ಆದರೆ ಅವನೊಟ್ಟಿಗೆ ಭೂಮಿಯಲ್ಲಿ ಬದುಕುವುದಿದೆಯಲ್ಲ ಅದು ಬೇರೆಯದೇ ಕಥೆ’ ಎಂದು ಮಹಾದೇವ ದೇಸಾಯಿ ಒಮ್ಮೆ ತಮಾಷೆ ಮಾಡಿದ್ದರು. ಗಾಂಧೀಜಿಯ ಕಾರ್ಯದರ್ಶಿಯಾಗಿರುವುದು ಕಷ್ಟಕರ. ಇನ್ನು ಪತ್ನಿಯಾಗುವುದಂತೂ ಇನ್ನಷ್ಟು ತ್ರಾಸದಾಯಕವಾದ ಸಂಗತಿಯೇ ಸರಿ.

ಜಗನ್ನಾಥ ದೇಗುಲಕ್ಕೆ ಭೇಟಿ ನೀಡಲು ಸಿಕ್ಕ ಏಕೈಕ ಅವಕಾಶವನ್ನು ಕಸ್ತೂರಬಾ ಅವರು ಬಿಟ್ಟುಕೊಡಬೇಕಿತ್ತು ಎಂದು ಹೇಳುವುದು ಯಾರಿಗೇ ಆಗಲಿ ಸುಲಭವಲ್ಲ. ಹಾಗೆಯೇ, ತಾವು ತರಲು ಉದ್ದೇಶಿಸಿದ್ದ ವಿಶಾಲವಾದ ಸಾಮಾಜಿಕ ಸುಧಾರಣೆಗಳಿಗೆ ಮೊದಲು ತಮ್ಮ ಕುಟುಂಬ ತಲೆಬಾಗಬೇಕು ಎಂಬ ಗಾಂಧೀಜಿ ಅವರ ಆಶಯವನ್ನು ಬೆಂಬಲಿಸದೇ ಇರುವುದು ಸಹ ಅಸಾಧ್ಯ.

1942ರ ಆಗಸ್‌್ಟನಲ್ಲಿ ‘ಭಾರತ ಬಿಟ್ಟು ತೊಲಗಿ’ ಎಂದು ಗಾಂಧಿ ಬ್ರಿಟಿಷರಿಗೆ ಕರೆ ಕೊಟ್ಟರು. ಆ ಸಮಯದಲ್ಲಿ ಮಹಾತ್ಮನನ್ನು  ಬಂಧಿಸಿ ಪತ್ನಿ ಮತ್ತು ಕಾರ್ಯದರ್ಶಿಯೊಟ್ಟಿಗೆ ಪುಣೆಯಲ್ಲಿನ ಆಗಾ ಖಾನ್‌ ಅರಮನೆಯಲ್ಲಿ ಇರಿಸಲಾಗಿತ್ತು. ಇದಾದ ಒಂದು ವಾರದ ಬಳಿಕ ಆಗಸ್‌್ಟ 15ರಂದು ಮಹಾದೇವ್‌ ಹೃದಯಾಘಾತದಿಂದ ನಿಧನರಾದರು. ಅದೇ ವೇಳೆಗೆ, ದೇಶ ಸ್ವಾತಂತ್ರ್ಯ ಪಡೆಯಬಹುದೆಂಬ ಆಶಯದಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಸಾವಿರಾರು ಜನರಲ್ಲಿ ಅವರ 18 ವರ್ಷದ ಪುತ್ರನೂ ಒಬ್ಬನಾಗಿದ್ದ.

1947ರ ಆಗಸ್‌್ಟನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ, ಹಿಂದೆ ಜೈಲು ಸೇರಿದ್ದವರಲ್ಲಿ ಬಹುತೇಕರು ಸಚಿವರು ಮತ್ತು ಸಂಸದರಾದರು. ಆದರೆ ನಾರಾಯಣ ದೇಸಾಯಿ ಇದಕ್ಕೆ ಬದಲಾಗಿ ರಚನಾತ್ಮಕ ಕಾರ್ಯದಲ್ಲಿ ತೊಡಗಿಕೊಂಡ ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಗುಂಪನ್ನು (ಅದೂ ಹೆಚ್ಚು ಜನರಿಗೆ ತಿಳಿಯದ) ಸೇರಿಕೊಂಡರು. ತಮ್ಮ ಪತ್ನಿ ಉತ್ತರಾ ಅವರೊಂದಿಗೆ  (ಒಡಿಯಾದ ಪ್ರಮುಖ ಗಾಂಧಿವಾದಿಗಳಾದ ನಬಕೃಷ್ಣ ಮತ್ತು ಮಾಲತಿ ಚೌಧರಿ ಅವರ ಪುತ್ರಿ) ದಕ್ಷಿಣ ಗುಜರಾತ್‌ನ ವೆಡ್ಚಿ ಎಂಬಲ್ಲಿ ಆದಿವಾಸಿಗಳ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆದರು.

ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿ ನಾರಾಯಣ ದೇಸಾಯಿ ಗ್ರಾಮೀಣ ಶಿಕ್ಷಣ ಮತ್ತು ವಿನೋಬಾ ಭಾವೆಯವರ ಭೂದಾನ ಚಳವಳಿಯ ಪಾಲುದಾರರಾಗಿ ಭೂಮಿ ಮರುಹಂಚಿಕೆ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಜೊತೆಗೆ ದೇಶದ ಅಣುಶಕ್ತಿ ಕಾರ್ಯಕ್ರಮಗಳ ಬಗೆಗೆ ದೂರದೃಷ್ಟಿಯಿಂದ ವಿಮರ್ಶಿಸಬಲ್ಲವರಾಗಿದ್ದರು. ಏಕೆಂದರೆ ಬಾಂಬುಗಳನ್ನು ತಯಾರಿಸುವ ಅಧಿಕಾರವನ್ನು ಹೊಂದಿದ್ದ ಅಣುಶಕ್ತಿ ಆಯೋಗವು ಪ್ರಭುತ್ವ ಮತ್ತು ಪ್ರಬಲ ರಾಜಕಾರಣಿಗಳನ್ನು ಯಾವಾಗಲೂ ಹಿಡಿತದಲ್ಲಿ ಇರಿಸಿಕೊಂಡಿತ್ತು. ಅಣುಶಕ್ತಿ ಆರ್ಥಿಕವಾಗಿ ಕಾರ್ಯಸಾಧುವಾದುದು ಎಂಬ ನಂಬಿಕೆ ಸಹ ಅವರಿಗಿರಲಿಲ್ಲ. ಅಲ್ಲದೆ ಈ ವಿಷಯವನ್ನು ಸುತ್ತುವರಿದಿದ್ದ ಗೋಪ್ಯತೆ ಮತ್ತು ಇಂತಹ ಸಂಕೀರ್ಣ ತಂತ್ರಜ್ಞಾನ ಮಾನವನ ಆರೋಗ್ಯ ಹಾಗೂ ಸಮಗ್ರ ಪರಿಸರದ ಮೇಲೆ ಬೀರಬಹುದಾದ ಅಪಾಯಗಳ ಬಗ್ಗೆ ಅವರು ಕಳವಳಗೊಂಡಿದ್ದರು. 30 ವರ್ಷಗಳ ಹಿಂದೆ ಈ ಸಂಬಂಧ ಅವರು ಎತ್ತಿದ್ದ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಲು ಅಣುಸಂಸ್ಥೆಗಳಿಗೆ ಈವರೆಗೂ ಸಾಧ್ಯವಾಗಿಲ್ಲ.

1990ರಲ್ಲಿ ಸಾಮಾಜಿಕ ಕಾರ್ಯದಿಂದ ಕೆಲ ಕಾಲ ಬಿಡುವು ಪಡೆಯುವಂತೆ ಸ್ನೇಹಿತ ಮಹೇಂದ್ರ ದೇಸಾಯಿ, ನಾರಾಯಣ ಅವರನ್ನು ಒತ್ತಾಯಿಸಿದರು. ಈ ಇಬ್ಬರೂ ದೇಸಾಯಿಗಳು ಸಂಬಂಧಿಕರಲ್ಲದಿದ್ದರೂ ಎಷ್ಟೋ ವಿಷಯಗಳಲ್ಲಿ ಪರಸ್ಪರ ಸಾಮ್ಯತೆ ಅವರಲ್ಲಿತ್ತು. ಇಬ್ಬರೂ ಸಬರಮತಿ ಆಶ್ರಮದಲ್ಲೇ ಬೆಳೆದಿದ್ದವರು (ಮಹೇಂದ್ರ ಅವರ ತಂದೆ ವಾಲ್ಜಿ ದೇಸಾಯಿ ಅವರಂತೂ ನಾರಾಯಣ ಅವರ ತಂದೆಗಿಂತಲೂ ಮೊದಲೇ ಗಾಂಧೀಜಿ ಅವರ ಜೊತೆಗೂಡಿದ್ದರು), ಕ್ವಿಟ್‌ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೇ ಜೈಲು ಸೇರಿದ್ದರು. ಮಹಾದೇವ ದೇಸಾಯಿ ಅವರ ಜೀವನಚರಿತ್ರೆ ಬರೆಯುವಂತೆ ಮಹೇಂದ್ರ ಅವರು ನಾರಾಯಣ್‌ ಅವರ ಮನವೊಲಿಸಿದರು.

ನಾರಾಯಣ ದೇಸಾಯಿ ತಮ್ಮ ತಂದೆಯ ಬಗ್ಗೆ ಬರೆದಿರುವ ಜೀವನವೃತ್ತಾಂತ, ಒಬ್ಬ ಬರಹಗಾರ ಮತ್ತು ವಿದ್ವಾಂಸ, ಯಾತ್ರಿಕ ಮತ್ತು ಅನ್ವೇಷಕ, ದೇಶಭಕ್ತ ಮತ್ತು ವಿಧೇಯ... ಹೀಗೆ ಮಹಾದೇವ್‌ ಅವರ ನಾನಾ ಮುಖಗಳನ್ನು ತೆರೆದಿಡುತ್ತದೆ. ಮೂಲ ಗುಜರಾತಿ ಭಾಷೆಯಲ್ಲಿರುವ ಈ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅದರ ಇಂಗ್ಲಿಷ್‌ ಅನುವಾದವು ‘ದಿ ಫೈರ್‌ ಅಂಡ್‌ ದಿ ರೋಸ್‌’ ಎಂಬ ಹೆಸರಿನಲ್ಲಿ ಲಭ್ಯವಿದೆ. ಇದರ ಯಶಸ್ಸು ಸ್ವತಃ ಗಾಂಧಿ ಅವರ ಜೀವನಚರಿತ್ರೆಯನ್ನೇ ಬರೆಯಲು ನಾರಾಯಣ್‌ ಅವರಿಗೆ ಸ್ಫೂರ್ತಿ ನೀಡಿತು. ಇದು ಗುಜರಾತಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪ್ರಕಟಗೊಂಡಿದೆ. ಗಾಂಧೀಜಿ ಅವರ ಬದುಕು ಮತ್ತು ದಂಡಯಾತ್ರೆಯ ಅಧ್ಯಯನಗಳನ್ನು ಒಳಗೊಂಡಿರುವ ಈ ಪುಸ್ತಕ, ನಮ್ಮ ಕಾಲಕ್ಕೆ ಮಹಾತ್ಮನ ಪ್ರಸ್ತುತತೆಯ ಅಗತ್ಯವನ್ನು ಪ್ರತಿಪಾದಿಸುವ ಮೂಲಕ ಕೊನೆಗೊಳ್ಳುತ್ತದೆ.

ಒಂದೆಡೆ ನಾರಾಯಣ ದೇಸಾಯಿ ಹೀಗೆ ಬರೆಯುತ್ತಾರೆ: ‘ಜೆಕೋಸ್ಲೊವೇಕಿಯಾದಲ್ಲಿ ಡ್ಯುಬೆಕ್‌ನ ನಾಯಕತ್ವದಲ್ಲಿ ರಷ್ಯಾದ ಯುದ್ಧ ಟ್ಯಾಂಕುಗಳ ಎದುರು ಎದೆಸೆಟೆಸಿ ನಿಂತ ಯುವಜನರು; ವಿಯೆಟ್ನಾಂ ಕದನದ ವೇಳೆ ಪೆಂಟಗನ್‌ ಮುಂದೆ ಹೂಗುಚ್ಛಗಳನ್ನು  ಹಿಡಿದು ನಿಂತ ಕಪ್ಪು ಮತ್ತು ಶ್ವೇತವರ್ಣೀಯರು, ಕೈಗಾದಲ್ಲಿನ ಅಣುಸ್ಥಾವರದ ಅಡಿಪಾಯಕ್ಕೆ ಧುಮುಕಿ ಪ್ರಾಣತ್ಯಾಗ ಮಾಡಿದ ಕರ್ನಾಟಕದ ಧೀರ ಮಹಿಳೆಯರು... ಇವೆಲ್ಲವೂ ಗಾಂಧೀಜಿಯಿಂದ ಪ್ರೇರಿತವಾಗಿ ಸತ್ಯಾಗ್ರಹದಲ್ಲಿ ಕೈಗೊಂಡ ನೂರಾರು ಪ್ರಯೋಗಗಳಲ್ಲಿ ಕೆಲವಾಗಿದ್ದವು. ಅನ್ಯಾಯವನ್ನು ನ್ಯಾಯದ ಮೂಲಕ, ದಬ್ಬಾಳಿಕೆಯನ್ನು ಪ್ರೀತಿಯ ಮೂಲಕ ನಿಗ್ರಹಿಸುವ ಕ್ರಮ ಇದಾಗಿತ್ತು’.

2002ರ ಫೆಬ್ರುವರಿ– ಮಾರ್ಚ್‌ ತಿಂಗಳಿನಲ್ಲಿ ಗುಜರಾತ್‌ನಲ್ಲಿ ಮುಸ್ಲಿಮರ ವಿರುದ್ಧ ವ್ಯವಸ್ಥಿತ ಹತ್ಯಾಕಾಂಡ ನಡೆಯಿತು. ಅದಾದ ಕೆಲ ದಿನಗಳಲ್ಲೇ ಆ ರಾಜ್ಯಕ್ಕೆ  ಭೇಟಿ ನೀಡಿದ್ದ ನನಗೆ ‘ಇದು ಮಹಾತ್ಮ ಗಾಂಧಿ ಅವರನ್ನು ಎರಡನೇ ಬಾರಿಗೆ ಹತ್ಯೆ ಮಾಡಿದ್ದಕ್ಕೆ ಸಮಾನ’ ಎಂದು ಖ್ಯಾತ ಗಾಂಧಿವಾದಿ ಪ್ರತಿಕ್ರಿಯಿಸಿದ್ದರು. ತಮ್ಮ ತವರು ರಾಜ್ಯದಲ್ಲಿನ ಹಿಂಸಾಚಾರದಿಂದ ನಾರಾಯಣ ದೇಸಾಯಿ ವಿಚಲಿತರಾಗಿದ್ದರು. ಅದಾಗಲೇ 70ರ ಅಂಚಿನಲ್ಲಿದ್ದ ಅವರು, ಈ ಹತ್ಯಾಕಾಂಡದ ಸಂಚುಕೋರರ ವಿರುದ್ಧದ ಚಳವಳಿಯ ನಾಯಕತ್ವ ವಹಿಸುವ ವಯಸ್ಸು ತಮ್ಮದಲ್ಲ ಎಂದು ಭಾವಿಸಿದ್ದರು. ಬದಲಿಗೆ,  ಮಹಾತ್ಮನ ಆದರ್ಶಗಳ ಬಗೆಗೆ ಆಧುನಿಕ ಪೀಳಿಗೆಯವರಿಗೆ ಸುಲಭಗ್ರಾಹ್ಯ ವಾಗುವಂತೆ ಜನಪ್ರಿಯ ಅಭಿಪ್ರಾಯಗಳನ್ನು ರೂಪಿಸಲು ನಿರ್ಧರಿಸಿದರು.

2002ರ ಹೊತ್ತಿಗೆ ಆಶ್ರಮವಾಸಿ, ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಹಾಗೂ ಬರಹಗಾರರಾಗಿ ನಾಲ್ಕು ವೃತ್ತಿಗಳಲ್ಲಿ ಜವಾಬ್ದಾರಿಯುತವಾಗಿ ತೊಡಗಿಕೊಂಡಿದ್ದ ಅವರು ಎಲ್ಲದರಲ್ಲೂ ಜನಮೆಚ್ಚುಗೆ ಗಳಿಸಿದ್ದರು. ಬಳಿಕ ಕವಿ ಮತ್ತು ಕಥೆಗಾರರಾಗಿ ತಮ್ಮ ಐದನೇ ಕಾಯಕವನ್ನು ಅವರು ಕೈಗೆತ್ತಿಕೊಂಡರು. ಪದ್ಯಗಳು, ಗೀತೆಗಳು, ಕಥೆಗಳ ಮೂಲಕ ಮಹಾತ್ಮನ ಜೀವನ, ಸಂದೇಶಗಳನ್ನು ಗುಜರಾತಿನಾದ್ಯಂತ ‘ಗಾಂಧಿ ಕಥಾ’ ಎಂಬ ಹೆಸರಿನಲ್ಲಿ ಜನಮಾನಸಕ್ಕೆ ತಲುಪಿಸಲು ಮುಂದಾದರು. ಹಿಂದಿಯಲ್ಲೂ ಕೆಲವು ಪ್ರವಚನಗಳನ್ನು ನೀಡಿದರು. ಸಾಕಷ್ಟು‍ಪ್ರಶಂಸೆಗೆ ಒಳಗಾದ ಇವು ಈಗ ಡಿವಿಡಿ ರೂಪದಲ್ಲಿ ನಮಗೆ ಸಿಗುತ್ತವೆ.

ನಾರಾಯಣ ದೇಸಾಯಿ ಅವರ ನಿಕಟ ಸಹೋದ್ಯೋಗಿ ಮತ್ತು ಅನುವಾದಕ ತ್ರಿದೀಪ್‌ ಸುಹೃದ್‌ ‘ಗಾಂಧಿ ಕಥಾ ನಂಬಿಕೆಯಿಂದ ಹುಟ್ಟಿದ್ದು. ಸತ್ಯ ಶೋಧನೆಯ ಮೂಲಕ ನಂಬಿಕೆಯನ್ನು, ಅಹಿಂಸೆಯನ್ನು, ಸರ್ವ ಧರ್ಮಗಳ ಏಕರೂಪತೆಯನ್ನು ಅದು ಪುನರ್‌ ದೃಢೀಕರಿಸುತ್ತದೆ. ಸಂವಾದಕ್ಕೆ ಆದ್ಯತೆ ನೀಡುವ ಮೂಲಕ ಆಧುನಿಕ ನಾಗರಿಕ ಸಮಾಜದಲ್ಲಿನ ವಿವಾದಗಳನ್ನು ಪರಿಹರಿಸುವ ಸಾಧನವಾಗಿ ಅದು ಬಳಕೆಯಾಗುತ್ತದೆ’ ಎಂದು ಬರೆದಿದ್ದಾರೆ.

ವೈಯಕ್ತಿಕ ನೆನಪಿನೊಂದಿಗೆ ನಾನು ಈ ಬರಹವನ್ನು  ಕೊನೆಗೊಳಿಸುತ್ತೇನೆ. ‘ಗಾಂಧಿ ಪಾರಂಪರಿಕ ತಾಣ’ಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿದ ಚರ್ಚೆಗಾಗಿ ಸಂಸ್ಕೃತಿ ಸಚಿವಾಲಯ 2007ರಲ್ಲಿ ಸಭೆಯೊಂದನ್ನು ಆಯೋಜಿಸಿತ್ತು. ನಾರಾಯಣ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಆ ಸಭೆಯಲ್ಲಿ ನಾನು ಸಹ ಪಾಲ್ಗೊಂಡಿದ್ದೆ. ಸಭೆ ಮುಗಿಯುತ್ತಿದ್ದಂತೆಯೇ, ಸಚಿವಾಲಯದಿಂದ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರು ಒಂದಷ್ಟು ಅರ್ಜಿಗಳನ್ನು ಹಿಡಿದುಕೊಂಡು, ಟಿ.ಎ/ಡಿ.ಎ.ಗೆ (ಪ್ರಯಾಣ ಮತ್ತು ತುಟ್ಟಿಭತ್ಯೆ) ಬೇಡಿಕೆ ಸಲ್ಲಿಸುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ತಿಳಿಸುತ್ತಿದ್ದರು. ನಾವೆಲ್ಲರೂ ನಮ್ಮ ವಿಮಾನ ಪ್ರಯಾಣದ ವಿವರಗಳನ್ನು ಭರ್ತಿ ಮಾಡುತ್ತಿದ್ದರೆ, ದೇಸಾಯಿ ಮಾತ್ರ ಆ ಅರ್ಜಿಗಳನ್ನು ಒತ್ತಟ್ಟಿಗಿಟ್ಟರು. ತಾವು ಅಹಮದಾಬಾದ್‌ನಿಂದ ಮುಂಬೈ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಪಾಸ್‌ನಿಂದ ರೈಲಿನಲ್ಲಿ ಬಂದುದಾಗಿ ಅಧಿಕಾರಿಗೆ ತಿಳಿಸಿದರು. ಕನಿಷ್ಠ ವಾರ್ಧಾ ರೈಲು ನಿಲ್ದಾಣದಿಂದ ಸೇವಾಗ್ರಾಮದವರೆಗಿನ ಟ್ಯಾಕ್ಸಿ ಶುಲ್ಕವನ್ನಾದರೂ ಪಡೆಯುವಂತೆ ಅಧಿಕಾರಿ ಅವರನ್ನು ಕೇಳಿಕೊಂಡರು. ಆದರೆ
ಅಲ್ಲಿಂದ ಇಲ್ಲಿಗೆ ತಾವು ಬಸ್‌ ಮೂಲಕ ಬಂದುದಾಗಿ ತಿಳಿಸಿದ ನಾರಾಯಣ ದೇಸಾಯಿ, ತನ್ನ ಮನೆಗೆ ತಾನು ಬರುವುದಕ್ಕೆ ಯಾರಿಗಾದರೂ ಪರಿಹಾರ ಕೊಡಬೇಕೇ ಅಥವಾ ಅದಕ್ಕೆ ತಗಲುವ ಖರ್ಚನ್ನು ಕಟ್ಟಿಕೊಡಬೇಕೇ ಎಂದು ಪ್ರಶ್ನಿಸಿದರು.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT