ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ ಲುಮಿಯಾ 630 ಜೇಬಿಗೆ ಹಗುರ ಈ ಫೋನ್‌

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೊಬೈಲ್ ಫೋನ್ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating systems) ಪ್ರಮುಖವಾದವು ಆಂಡ್ರಾಯಿಡ್, ಐಓಎಸ್ (ಐಫೋನ್), ವಿಂಡೋಸ್ ಫೋನ್ ಮತ್ತು ಬ್ಲಾಕ್‌ಬೆರ್ರಿ. (ಬ್ಲಾಕ್‌ಬೆರ್ರಿ ಬಾಗಿಲು ಹಾಕುವ ಅಥವಾ ಮಾರಾಟವಾಗುವ ಸಾಧ್ಯತೆಗಳಿವೆ). ಐಫೋನ್ ತನ್ನ ಜನಪ್ರಿಯತೆಯ ಉತ್ತುಂಗದಿಂದ ಕೆಳಕ್ಕೆ ಜಾರುತ್ತಿದೆ. ಸದ್ಯಕ್ಕೆ ಆಂಡ್ರಾಯಿಡ್ ಪ್ರಥಮ ಸ್ಥಾನದಲ್ಲಿದೆ.

ವಿಂಡೋಸ್ ಫೋನ್ ಭಾರತದಲ್ಲಿ ಎರಡನೆಯ ಸ್ಥಾನದಲ್ಲಿದ್ದು, ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸುತ್ತಲಿದೆ. ವಿಂಡೋಸ್ ಫೋನ್ ಹೆಚ್ಚೆಚ್ಚು ಜನಪ್ರಿಯವಾಗಲು ಪ್ರಮುಖ ಕಾರಣ ನೋಕಿಯಾ ಲುಮಿಯಾ ಫೋನ್‌ಗಳು. ಈ ಅಂಕಣದಲ್ಲಿ ಹಲವು ಲುಮಿಯಾ ಫೋನ್‌ಗಳ ವಿಮರ್ಶೆ ಪ್ರಕಟವಾಗಿದೆ. ಈ ಸಲ ನೋಕಿಯಾ ಲುಮಿಯಾ 630 (Nokia Lumia 630) ಫೋನ್ ಬಗ್ಗೆ ನಮ್ಮ ವಿಮರ್ಶಾನೋಟ.

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್, ಪ್ರತ್ಯೇಕ ಗ್ರಾಫಿಕ್ಸ್ ಪ್ರೊಸೆಸರ್, 512 ಮೆಗಾಬೈಟ್ ಪ್ರಾಥಮಿಕ ಮತ್ತು 8 ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ಹಾಕುವ ಸೌಲಭ್ಯ, ಎರಡು ಮೈಕ್ರೋಸಿಮ್, 4.5 ಇಂಚು ಗಾತ್ರದ 480 x 854 ಪಿಕ್ಸೆಲ್ ರೆಸಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ ಗಾಜು, 2ಜಿ ಮತ್ತು 3ಜಿ, 5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಕ್ಯಾಮೆರಾಗೆ ಫ್ಲಾಶ್ ಇಲ್ಲ, ಇನ್ನೊಂದು ಕ್ಯಾಮೆರಾ ಇಲ್ಲ, 720p/30fps ವಿಡಿಯೊ ಚಿತ್ರೀಕರಣ, ಎಫ್‌ಎಂ ರೇಡಿಯೊ, ಜಿಪಿಎಸ್, ಎನ್‌ಎಫ್‌ಸಿ ಇಲ್ಲ, ಎಕ್ಸೆಲೆರೋಮೀಟರ್, ವೈಫೈ, ಬ್ಲೂಟೂತ್, ಯುಎಸ್‌ಬಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ, 29.5 x 66.7 x 9.2 ಮಿಮೀ. ಗಾತ್ರ, 134 ಗ್ರಾಂ ತೂಕ, 1830 mAh ಬ್ಯಾಟರಿ, ಇತ್ಯಾದಿ. ಇದರ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್ 8.1. ಮಾರುಕಟ್ಟೆ ಬೆಲೆ ಸುಮಾರು ₹10,000.

ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಕೈಯಲ್ಲಿ ಹಿಡಿಯುವ ಅನುಭವ ಕೆಟ್ಟದಾಗಿಲ್ಲ. ಫೋನಿನ ಮೂಲೆಗಳು ಸ್ವಲ್ಪ ದುಂಡ ಗಾಗಿವೆ. ₹25 ಸಾವಿರ ಬೆಲೆಯ ಫೋನ್ ಹಿಡಿದಾಗಿನ ಅನುಭವಕ್ಕಿಂತ ಕಳಪೆಯಾಗೇನೂ ಇಲ್ಲ. ಹಿಂದಿನ ಕವಚ ತೆಗೆಯಬಹುದು. ಬ್ಯಾಟರಿ ಬದಲಿಸಬಹುದೆಂಬುದು ಒಳ್ಳೆಯ ಸುದ್ದಿ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ದುಬಾರಿ ಫೋನ್‌ಗಳಲ್ಲಿ ಬ್ಯಾಟರಿ ಬದಲಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿಸಿಕೊಳ್ಳಿ.

ಇದು ಬಳಸುವುದು ವಿಂಡೋಸ್ ಫೋನ್ 8.1. ವಿಂಡೋಸ್ ಫೋನ್‌ ಆವೃತ್ತಿ 8ರಲ್ಲಿಯ ಹಲವು ಕೊರತೆಗಳನ್ನು ಇದರಲ್ಲಿ ನಿವಾರಿಸಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾದುದೆಂದರೆ ಕಡಿಮೆ ಮೆಮೊರಿಯಲ್ಲೂ ಅಡೆತಡೆಯಿಲ್ಲದೆ ಕೆಲಸ ಮಾಡುವುದು. ಇದು ಈ ಫೋನ್ ಬಳಸಿದಾಗ ವೇದ್ಯವಾಗುತ್ತದೆ. ಈ ಫೋನಿನ ಪ್ರಾಥಮಿಕ ಮೆಮೊರಿ 512 ಮೆಗಾಬೈಟ್ ಮಾತ್ರ.  ನಾಲ್ಕು ಹೃದಯಗಳ ಪ್ರೊಸೆಸರ್ ಇದ್ದುಕೊಂಡು ಕೇವಲ 512 ಮೆಗಾಬೈಟ್ ಮೆಮೊರಿ ಕಡಿಮೆಯಾಗಲಿಲ್ಲವೇ ಎಂದು ಅನ್ನಿಸುವುದು ಸಹಜ. ಆದರೆ ಇದನ್ನು ಬಳಸಿದಾಗ ಇದು ಕಡಿಮೆ ಮೆಮೊರಿಯ ಫೋನ್ ಅನ್ನಿಸಲಿಲ್ಲ. ಆಟ ಆಡುವಾಗ ಎಲ್ಲೂ ಅಡೆತಡೆ ಕಾಣಿಸಲಿಲ್ಲ. 

ವಿಡಿಯೊ ವೀಕ್ಷಣೆಯಲ್ಲೂ ಅಷ್ಟೆ. ಹೈಡೆಫಿನಿಶನ್ ವಿಡಿಯೊ ಕೂಡ ಸರಾಗವಾಗಿ ಪ್ಲೇ ಆಗುತ್ತದೆ. ಈ ಫೋನಿನ ಬಗ್ಗೆ ಹೆಚ್ಚಿನ ವಿವರ ತಿಳಿಯಬೇಕಾದರೆ ಇದೇ ಅಂಕಣದಲ್ಲಿ ಪ್ರಕಟವಾಗಿದ್ದ ಇತರೆ ಲುಮಿಯಾ ಫೋನ್‌ಗಳ ವಿಮರ್ಶೆಗಳನ್ನು ಓದಿಕೊಂಡರೆ ಒಳ್ಳೆಯದು. ವಿಂಡೋಸ್ ಫೋನ್‌ಗಳಲ್ಲಿ ಮತ್ತು ನೋಕಿಯಾ ಲುಮಿಯಾ ಫೋನ್‌ಗಳಲ್ಲಿ ಏನೇನು ಸವಲತ್ತುಗಳಿವೆಯೊ ಅವೆಲ್ಲ ಈ ಫೋನಿನಲ್ಲೂ ಇವೆ. ಅವುಗಳ ಬಗ್ಗೆ ಮತ್ತೆ ಮತ್ತೆ ಬರೆಯುವ ಅವಶ್ಯಕತೆ ಇಲ್ಲ. ನೋಕಿಯಾ ಲುಮಿಯಾ 630 ಫೋನಿನಲ್ಲಿ ಒಂದೇ ಕ್ಯಾಮೆರಾ ಇರುವುದು. ಕ್ಯಾಮೆರಾಗೆ ಫ್ಲಾಶ್ ಇಲ್ಲ. ಎದುರುಗಡೆಯ ಇನ್ನೊಂದು ಕ್ಯಾಮೆರಾ ಇಲ್ಲ. 


ಕ್ಯಾಮೆರಾ ಗುಣಮಟ್ಟ ಅಷ್ಟಕ್ಕಷ್ಟೆ. ಸ್ಥಿರಚಿತ್ರ (ಫೋಟೊ) ಮತ್ತು ವಿಡಿಯೊ ಚಿತ್ರೀಕರಣ ಎರಡರಲ್ಲೂ ಅತ್ಯುತ್ತಮ ಅನ್ನಿಸುವಂತಹ ಫಲಿತಾಂಶ ಬರಲಿಲ್ಲ. ಹಾಗೆಂದು ಅತಿ ಕಳಪೆ ಎನ್ನುವಂತೆಯೂ ಇಲ್ಲ. ಆಡಿಯೊ ಎಂಜಿನ್ ಪರವಾಗಿಲ್ಲ. ಸಂಗೀತ ಆಲಿಸುವ ಅನುಭವ ಪರವಾಗಿಲ್ಲ. ಈ ಫೋನಿನ ಜೊತೆ ಯಾವುದೇ ಇಯರ್‌ಫೋನ್ ನೀಡಿಲ್ಲ. ನೀವು ಕ್ರಿಯೇಟಿವ್ EP630 ಅಥವಾ ಕೋವೋನ್ EM1 ಇಯರ್‌ಫೋನ್ ಬಳಸಬಹುದು.

  ಈ ಫೋನಿನಲ್ಲಿ ವಿಂಡೋಸ್ 8 ಮತ್ತು 8.1 ಬಳಸುವ ಎಲ್ಲ ವಿಂಡೋಸ್ ಫೋನ್‌ಗಳಂತೆ  ಕನ್ನಡ ಪಠ್ಯದ ರೆಂಡರಿಂಗ್ ಇದೆ. ಕನ್ನಡದ ಜಾಲತಾಣ ವೀಕ್ಷಣೆ ಮಾಡಬಹುದು. ವಿಂಡೋಸ್ ಫೋನ್ ಮಾರುಕಟ್ಟೆಯಲ್ಲಿ ದೊರೆಯುವ Type Kannada ಎಂಬ ಕಿರುತಂತ್ರಾಂಶವನ್ನು (app) ಇನ್‌ಸ್ಟಾಲ್ ಮಾಡಿಕೊಂಡರೆ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ನೋಕಿಯಾ ಕಂಪೆನಿ ಮತ್ತು ಮೈಕ್ರೋಸಾಫ್ಟ್ ಕಂಪೆನಿಯವರನ್ನು ಎರಡು ವರ್ಷಗಳಿಂದ ಪ್ರಶ್ನಿಸುತ್ತ ಬಂದಿದ್ದೇನೆ –ಕನ್ನಡದ ಕೀಲಿಮಣೆಯನ್ನು (keyboard – ಪಠ್ಯವನ್ನು ಊಡಿಸುವ ಸವಲತ್ತು) ನಿಮ್ಮ ವಿಂಡೋಸ್ ಫೋನ್‌ಗಳಲ್ಲಿ ಯಾವಾಗ ನೀಡುತ್ತೀರಿ ಎಂದು. ನೀವೂ ಪ್ರಶ್ನಿಸಿ.

ಒಂದು ವರ್ಷದ ಹಿಂದೆ ಇದೇ ಫೋನ್ ಇದೇ ಬೆಲೆಗೆ ದೊರೆತಿದ್ದರೆ ಖಂಡಿತವಾಗಿಯೂ ಇದು ನೀಡುವ ಹಣಕ್ಕೆ ಮೋಸವಿಲ್ಲದ (value for money) ಫೋನ್ ಎಂದು ತೀರ್ಮಾನ ಕೊಡಬಹುದಿತ್ತು. ಈ ಫೋನ್ ಕೊಳ್ಳಲು ನಿಮಗೆ ಕಾರಣಗಳು – ಎರಡು ಸಿಮ್ ಹಾಕಬಹುದಾದ ವಿಂಡೋಸ್ ಫೋನ್, ವಿಂಡೋಸ್ ಫೋನ್ 8.1 ಹಾಗೂ 128 ಗಿಗಾಬೈಟ್ ತನಕದ ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು ಎನ್ನುವುದು. 

ವಾರದ ಆಪ್ (app)
ಹನುಮಾನ್ ಟು ಲಂಕ (Hanuman To Lanka)
ಇದು ಆಂಡ್ರಾಯಿಡ್‌ನಲ್ಲಿ ಕೆಲಸ ಮಾಡುವ ಒಂದು ಸರಳ ಆಟ. ಈ ಆಟ ರಾಮಾಯಣವನ್ನು ಆಧರಿಸಿದೆ. ಇದರಲ್ಲಿ ಎರಡು ಪ್ರಮುಖ ಹಂತಗಳಿವೆ ಹಾಗೂ ಈ ಹಂತಗಳಲ್ಲಿ ಹಲವು ಉಪ-ಹಂತಗಳಿವೆ. ಹನುಮಂತನನ್ನು ಸಮುದ್ರ ದಾಟಿಸಿ ಸೀತೆ ಇರುವಲ್ಲಿಗೆ ತಲುಪಿಸಬೇಕು. ಈ ದಾರಿಯಲ್ಲಿ ಹಲವು ಅಡೆತಡೆಗಳಿವೆ.

ಸೀತೆಯನ್ನು ಭೇಟಿ ಮಾಡಿದ ನಂತರ ಹಲವು ಅಡೆತಡೆಗಳನ್ನು ದಾಟಿ ವಾಪಸ್ಸು ಬರಬೇಕು. ಅಂದರೆ ಹನುಮಂತನನ್ನು ನಾವು ಆತನ ಗುರಿಮುಟ್ಟಿಸಬೇಕು. ಅದ್ಭುತ ಆಟವೇನೂ ಅಲ್ಲ. ನಮ್ಮದೇ ಕಥೆ ರಾಮಾಯಣವನ್ನು ಆಧರಿಸಿದೆ ಎಂಬುದಷ್ಟೆ ಇದರ ಹೆಗ್ಗಳಿಕೆ. ಇದೇ ಮಾದರಿಯ ಇನ್ನೂ ಹಲವು ಆಟಗಳು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿವೆ.

ಗ್ಯಾಜೆಟ್‌ ಸುದ್ದಿ
ಮುಂಗೈಗೆ ಏರ್‌ಕಂಡಿಶನರ್
ಮಳೆ ಬಾರದೆ ಅತಿಯಾಗಿ ಸೆಕೆ ಆಗುತ್ತಿದೆ ತಾನೆ? ಪ್ರತಿಯೊಬ್ಬರೂ ಏರ್‌ಕಂಡಿಶನರ್ ಹುಡುಕುತ್ತಿದ್ದಾರೆ. ಒಂದು ಕೋಣೆಯಲ್ಲಿ ಹಲವು ಜನರಿದ್ದಾಗ, ಅವರಲ್ಲಿ ಕೆಲವರಿಗೆ ಅತಿ ತಂಪು ಬೇಕು, ಕೆಲವರಿಗೆ ಮಧ್ಯಮ, ಇನ್ನು ಕೆಲವರಿಗೆ ತಂಪು ಬೇಡವೇ ಬೇಡ –ಇಂತಹ ಸಂದರ್ಭಗಳಲ್ಲಿ ಏರ್‌ಕಂಡಿಶನರ್‌ನ ನಿಯಂತ್ರಕದಲ್ಲಿ ಯಾವ ಉಷ್ಣತೆಯನ್ನು ಆಯ್ಕೆ ಮಾಡಿಕೊಳ್ಳಬೇಕು?

ಇನ್ನೂ ಒಂದು ಪ್ರಮುಖ ಸಮಸ್ಯೆ ಎಂದರೆ ಏರ್‌ಕಂಡಿಶನರ್ ನಡೆಸಲು ತುಂಬ ವಿದ್ಯುತ್ ಬೇಕು. ಈ ಸಮಸ್ಯೆಗಳಿಗೆ ಒಂದು ಪರಿಹಾರ ದೊರೆಯುವ ನಿರೀಕ್ಷೆಯಲ್ಲಿದೆ. ವಿಜ್ಞಾನಿಗಳು ಸಂಶೋಧನೆಯಿಂದ ಪತ್ತೆ ಹಚ್ಚಿದ್ದು ಏನೆಂದರೆ ನಿಜವಾಗಿಯೂ ಎಷ್ಟು ಉಷ್ಣತೆ ಇದೆ ಎನ್ನುವುದಕ್ಕಿಂತಲೂ ನಾವು ಅದನ್ನು ಎಷ್ಟು ಇದೆ ಎಂದು ಭಾವಿಸುತ್ತೇವೆ ಅಥವಾ ಅದು ನಮ್ಮ ಅನುಭವಕ್ಕೆ ಎಷ್ಟು ಬರುತ್ತಿದೆ ಎಂಬುದೇ ಮುಖ್ಯ.

ಅಂದರೆ ಕೋಣೆಯನ್ನು ತಂಪು ಮಾಡದೆಯೂ ನಮಗೆ ತಂಪಿನ ಅನುಭವದ ಭಾವನೆ ಬರುವಂತೆ ಮಾಡಬಹುದು. ಇದಕ್ಕಾಗಿ ಅವರು ಒಂದು ಗ್ಯಾಜೆಟ್‌ನ ಆವಿಷ್ಕರಣೆ ಮಾಡಿದ್ದಾರೆ. ಅದು ಮುಂಗೈಗೆ ಕಟ್ಟುವ ಗಡಿಯಾರದ ಮಾದರಿಯ ಒಂದು ಪಟ್ಟಿ. ಅದಕ್ಕೆ ವಿದ್ಯುತ್ ಪ್ರವಹಿಸುವ ಮೂಲಕ ನಮ್ಮ ದೇಹದಲ್ಲಿ ಉಷ್ಣವನ್ನು ಅಥವಾ ತಂಪನ್ನು ಅನುಭವಿಸಿದ ಭಾವನೆ ಬರುವಂತೆ ಮಾಡಬಹುದು. ಈ ಗ್ಯಾಜೆಟ್ ಇನ್ನೂ ಪ್ರಯೋಗಾಲಯದಲ್ಲಿದೆ.

ಗ್ಯಾಜೆಟ್‌ ತರ್ಲೆ
ಕಂಠಲಂಗೋಟಿಯಿಂದ ಸಂಗೀತ
ನೀವು ಸಂಗೀತ ಪ್ರಿಯರಾಗಿದ್ದು, ಕೀಬೋರ್ಡ್ ನುಡಿಸಬಲ್ಲವರಾಗಿದ್ದಲ್ಲಿ ನಿಮಗೊಂದು ವಿಶಿಷ್ಟ ಕಂಠಲಂಗೋಟಿ (ಟೈ) ಸಿದ್ಧವಾಗಿದೆ. ಇದನ್ನು ಕುತ್ತಿಗೆಗೆ ಕಟ್ಟಿಕೊಂಡು ಸಂಗೀತ ನುಡಿಸಬಹುದು. ಇದರಲ್ಲಿ ಎಲ್ಲ (ಸಂಗೀತದ) ಕೀಬೋರ್ಡ್‌ಗಳಂತೆ ಪಿಯಾನೋ ಮಾದರಿಯ ಸ್ಪರ್ಶಸಂವೇದಿ ಕೀಲಿಗಳಿವೆ. ಇವುಗಳನ್ನು ಒತ್ತಿ ಸಂಗೀತ ನುಡಿಸಬಹುದು.

ಗ್ಯಾಜೆಟ್‌ ಸಲಹೆ
ಗಿರಿ ಅವರ ಪ್ರಶ್ನೆ: ನನ್ನ ಮೊಬೈಲ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ (Samsung galaxy core). ಮೊದಲು ತುಂಬ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ  ನಿಧಾನ ಆಗಿದೆ ಮತ್ತು ಹ್ಯಾಂಗ್ ಅಗುತ್ತಿದೆ. ಇದಕ್ಕೆ ಪರಿಹಾರ ಏನು?
ಉ:  ಹಿಂದೊಮ್ಮೆ ಇದೇ ಅಂಕಣದಲ್ಲಿ ಸೂಚಿಸಿದ್ದ Clean Master ಎಂಬ ಆಪ್ ಹಾಕಿಕೊಂಡು ನಿಮ್ಮ ಫೋನನ್ನು ಸ್ವಚ್ಛ ಮಾಡಿ. ಅನವಶ್ಯಕ ವಾದ ಎಲ್ಲ ಆಪ್‌ಗಳನ್ನು ತೆಗೆದುಹಾಕಿ. ಮೆಮೊರಿಯಲ್ಲಿ ಅನವಶ್ಯಕವಾಗಿ ಕುಳಿತುಕೊಳ್ಳುವ ಎಲ್ಲ ಆಪ್‌ಗಳನ್ನು ನಿಷ್ಕ್ರಿಯ ಮಾಡಿ. ಬೇಕಾದಾಗ ಮಾತ್ರ ವೈಫೈ, ಬ್ಲೂಟೂತ್, ಜಿಪಿಎಸ್ ಎಲ್ಲ ಬಳಸಿ, ಬೇಡವಾದಾಗ ಅವುಗಳನ್ನು ಆಫ್ ಮಾಡಿ. ಸಾಧ್ಯವಾದರೆ ಎಲ್ಲ ಬ್ಯಾಕ್‌ಅಪ್  ತೆಗೆದುಕೊಂಡು ಒಂದು ಸಲ ಫೋನನ್ನು ಪೂರ್ತಿಯಾಗಿ ರಿಸೆಟ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT