ಬದುಕು ಹೀಗೂ ಇರಲು ಸಾಧ್ಯವೇ? ಹಿಂದೆ ಮೊರೆಯುವ ಕಡಲು ಮುಂದೆ ಕುಸಿಯುವ ಮರಳು. ನಡುವಿನದು ಭದ್ರ ಬದುಕು ಹೇಗೆ ಆದೀತು? ಇಂದು ಅಥವಾ ನಾಳೆ ಎಂದು ದಿನ ಎಣಿಸುತ್ತಲೇ ಇರಬೇಕು. ಒಂದು ದಿನ ಕಳೆದರೆ ಅದೇ ದೊಡ್ಡದು. ಜೀವನ ಎಂದರೆ ಕಳೆದು ಹೋದುದರ ಲೆಕ್ಕ ಹಾಕುತ್ತ ಕೂಡಿ ಇಡುವುದೇ? ಕಾರವಾರದಿಂದ ನನ್ನ ಸಹೋದ್ಯೋಗಿ ಕಳುಹಿಸಿರುವ ಬೈನಾ ಬೀಚಿನ ಮನೆಗಳ ಚಿತ್ರಗಳನ್ನು ನೋಡುತ್ತಿದ್ದೆ.

ಅಷ್ಟು ಇಕ್ಕಟ್ಟಾದ ಮನೆಗಳಲ್ಲಿ ಆ ಜನರು ಹೇಗೆ ಜೀವನ ಮಾಡುತ್ತಾರೆ? ಹತ್ತು ಅಡಿ ಅಗಲ, ಹತ್ತು ಅಡಿ ಉದ್ದವೂ ಇರದ ಮನೆಗಳಲ್ಲಿ ಆರೆಂಟು ಜನ ಇರುತ್ತಾರಂತೆ. ಗಂಡ, ಹೆಂಡತಿ, ಮಕ್ಕಳು. ಎಲ್ಲ ಒಂದೇ ಕೋಣೆಯ ಒಂದೇ ನೆಲದ ಮೇಲೆ, ಒಂದೇ ತಾರಸಿಯ ಕೆಳಗೆ ಇರುತ್ತಾರೆ, ಉಣ್ಣುತ್ತಾರೆ, ಉಡುತ್ತಾರೆ ಮತ್ತು ಮಲಗುತ್ತಾರೆ! ಅವರು ಆ ಬದುಕನ್ನು ಆಯ್ದುಕೊಂಡು ಹೋದರು. ಅದೇ ಸುಖ ಎಂದು ಅವರಿಗೆ ಅನಿಸತೊಡಗಿತು. ಅಲ್ಲಿಯೇ ನೆಲೆನಿಂತರು. ಅವರು ಅಲ್ಲಿಗೆ ದುಡಿಯಲು ಹೋಗಿದ್ದರು.

ಒಂದಿಷ್ಟು ದುಡ್ಡು ಮಾಡಲು ಹೋಗಿದ್ದರು. ಆದರೆ, ಅವರು ದುಡ್ಡು ಮಾಡಿದರೇ? ಅದು ಅವರ ಕೈಯಲ್ಲಿ ಉಳಿಯಿತೇ ಗೊತ್ತಿಲ್ಲ. ಏಕೆಂದರೆ ಅವರ ಜೀವನದ ಮಟ್ಟವೇನೂ ಸುಧಾರಿಸಿದಂತೆ ಕಾಣುವುದಿಲ್ಲ. ಅವರು ಅಲ್ಲಿಗೆ ಹೋಗುವುದನ್ನು ಆಯ್ದುಕೊಂಡರು ಎಂದೆ. ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಅವರ ಊರು ಆಗಿನ ಅಖಂಡ ವಿಜಾಪುರ ಜಿಲ್ಲೆಯ ಯಾವುದೋ ತಾಲ್ಲೂಕಿನ ಯಾವುದೋ ಹಳ್ಳಿ. ಒಂದಿಷ್ಟು ಒಣ ಜಮೀನು ಇತ್ತು. ಮಳೆ ಯಾವಾಗಲೋ ಮಂತ್ರಿಸಿದಂತೆ ಆಗುತ್ತಿತ್ತು. ಹೊಲದಲ್ಲಿ ಬಿತ್ತಿದ್ದು ಸರಿಯಾಗಿ ಬೆಳೆಯುತ್ತಿರಲಿಲ್ಲ.

ನಿತ್ಯದ ಜೀವನಕ್ಕೆ ಕೂಲಿನಾಲಿ ಮಾಡಿದರೂ ಹೆಚ್ಚು ಹಣ ಸಿಗುತ್ತಿರಲಿಲ್ಲ. ಊರು ಬಿಟ್ಟು ಗುಳೆ ಹೋಗದೇ ಬೇರೆ ದಾರಿಯೇ ಇರಲಿಲ್ಲ. ಗೋವಾ ರಾಜ್ಯದ ವಾಸ್ಕೊ, ಬಂದರು ನಗರ. ಅಲ್ಲಿಗೆ ಹೋದರೆ ಏನಾದರೂ ಕೆಲಸ ಸಿಗುತ್ತದೆ ಎಂದು ಯಾರೋ ಹೇಳಿದರು. ಯಾವ ಕೆಲಸ ಸಿಗದೇ ಇದ್ದರೂ ಮೈ ಮಾರಿಯಾದರೂ ಬದುಕಬಹುದು ಎಂದು ಕೆಲವರು ಅಂದುಕೊಂಡರು. ಅಥವಾ ಅಲ್ಲಿಗೆ ಹೋದಮೇಲೆ ಅದನ್ನು ಕಂಡುಕೊಂಡರು. ಗುಳೆ ಹೋದವರೆಲ್ಲ ದುರ್ಬಲ ವರ್ಗದವರೇ ಆಗಿದ್ದರು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಅವರು ಅಲ್ಲಿಗೆ ಹೋಗಿದ್ದು 1964ರಷ್ಟು ಹಿಂದೆ.

ಬಂದರು ನಗರ ವಾಸ್ಕೋದಲ್ಲಿ ಬಂದರಿನಲ್ಲಿ ಇರುವ ಎಲ್ಲ ಕೆಲಸವೂ ಇವರಿಗಾಗಿ ಕಾಯುತ್ತಿತ್ತು. ಜತೆಗೆ ದೂರದ ದೇಶಗಳಿಂದ ಹಡಗುಗಳಲ್ಲಿ ಬಂದವರು ದೇಹಕಾಮನೆಯಿಂದ ಬಳಲುತ್ತಿದ್ದರು. ಎಷ್ಟು ದುಡ್ಡು ಚೆಲ್ಲಲೂ ಅವರು ಸಿದ್ಧರಿರುತ್ತಿದ್ದರು. 1964ರಲ್ಲಿ ವಾಸ್ಕೊ ಪುರಸಭೆಯ ಅಧ್ಯಕ್ಷರಾಗಿದ್ದ ವೈ.ಡಿ.ಚೌಗಲೆ ಎಂಬುವರು, ‘ಎಲ್ಲ ಬಂದರು ಪಟ್ಟಣಗಳಲ್ಲಿ ದೇಹಮಾರಾಟ ದಂಧೆ ಇರಲೇಬೇಕು. ಅದನ್ನು ತಪ್ಪಿಸಲು ಸಾಧ್ಯವಿಲ್ಲ’ ಎಂದಿದ್ದರು. ಅವರು ಜರ್ಮನಿ ದೇಶದ ಆಮ್ಸ್‌ಟರ್‌ಡ್ಯಾಂ ಮತ್ತು ಹ್ಯಾಂಬರ್ಗ್ ನಗರಗಳ ವೇಶ್ಯಾವಾಟಿಕೆಗಳ ಉದಾಹರಣೆಯನ್ನೂ ಕೊಟ್ಟಿದ್ದರು.

ಕಾಲ ಬದಲಾದಂತೆ ಪುಟ್ಟ ಮತ್ತು ಗಬ್ಬು ವಾಸನೆ ಬೀರುತ್ತಿದ್ದ ಕೊಠಡಿಗಳ ನಡುವೆ ನಡೆಯುತ್ತಿದ್ದ ದೇಹ ಮಾರಾಟ ದಂಧೆ ಈಗ ಪಂಚತಾರಾ ಹೋಟೆಲ್‌ಗಳ ಮಟ್ಟದ ವರೆಗೆ ಬೆಳೆದು ನಿಂತಿದೆ. ಗೋವಾ ರಾಜ್ಯದಲ್ಲಿ ಈಗ ಶ್ರೀಮಂತ ವರ್ಗ, ಮಧ್ಯಮ ವರ್ಗ ಮತ್ತು ಬಡ ವರ್ಗದ ವೇಶ್ಯೆಯರು ಇದ್ದಾರೆ. ಇವರಲ್ಲಿ ಎಲ್ಲ ಭಾಷಿಕರೂ ಇದ್ದಾರೆ, ಅವರು ತಮಗೆ ತಕ್ಕ ಜಾಗಗಳಲ್ಲಿ ವೇಶ್ಯಾವೃತ್ತಿ ಮಾಡುತ್ತಿದ್ದಾರೆ. :ಕೆಲವರು ಶೋಕಿಗಾಗಿ, ಹಲವರು ಒಂದಿಷ್ಟು ಹಣದ ಖುಷಿಗಾಗಿ, ಉಳಿದವರು ಹೊಟ್ಟೆಪಾಡಿಗಾಗಿ.

ಟ್ಯಾಕ್ಸಿ ಚಾಲಕರು, ಮೋಟರ್‌ಸೈಕಲ್ ಪೈಲೆಟ್‌ಗಳು, ಹೋಟೆಲುಗಳ ವೇಯ್ಟರ್‌ಗಳು, ಬೀಚುಗಳಲ್ಲಿ ಹಣ್ಣುಗಳನ್ನು ಮಾರುವವರು, ‘ಪೂರೈಸುವ ದಲ್ಲಾಳಿ’ಗಳ ಕೆಲಸ ಮಾಡುತ್ತಿದ್ದಾರೆ. ಗೋವಾ ರಾಜ್ಯದಲ್ಲಿ ಈಗ ಅಂದಾಜು ಮೂರು ಸಾವಿರ ಮಂದಿ ವೇಶ್ಯೆಯರು ಇದ್ದಾರೆ. ಇದೆಲ್ಲ ಯಾರಿಗೂ ಗೊತ್ತಿರಲಿಲ್ಲ ಎಂದು ಅಲ್ಲ. ಗೋವಾ ಸರ್ಕಾರಕ್ಕೂ ಎಲ್ಲ ಗೊತ್ತಿತ್ತು. ಆದರೆ, ಜನರು ಇದೂ ಸೇರಿ ಅನೇಕ ಕಾರಣಗಳಿಗಾಗಿ ಆ ರಾಜ್ಯಕ್ಕೆ ಹೋಗುತ್ತಿದ್ದರು.

ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತಿತ್ತು. ಅದು ಕಣ್ಣು ಮುಚ್ಚಿಕೊಂಡು ಸುಮ್ಮನಿತ್ತು. ಎಲ್ಲ ಕಾಕತಾಳೀಯ ಇರಬಹುದು: ಆಂಗ್ಲ ವಾರಪತ್ರಿಕೆಯೊಂದು, ‘ಗೋವಾದಲ್ಲಿ ಕಾಮ’ ಎಂದು ಮುಖಪುಟದ ವರದಿಯೊಂದನ್ನು ಪ್ರಕಟಿಸಿತು. ಯಾವ ಯಾವ ರೀತಿಯಲ್ಲಿ ಮತ್ತು ಎಲ್ಲೆಲ್ಲಿ ಕಾಮದ ದಂಧೆ ನಡೆಯುತ್ತಿದೆ ಎಂದು ಅದು ವರದಿ ಮಾಡಿತ್ತು. ಅಲ್ಲಿನ ಸರ್ಕಾರಕ್ಕೆ ನಾಚಿಕೆ ಅನಿಸಿತು. ‘ಗೋವಾ ಎಂದರೆ ಬರೀ ದೇಹ ಮಾರಾಟ’ ಎಂದು ಅಂದ ಹಾಗೆ ಅದಕ್ಕೆ ಅನಿಸಿತು. ಮೂರು ವರ್ಷಗಳ ಹಿಂದೆ ಸ್ವಯಂ ಸೇವಾ ಸಂಸ್ಥೆಯೊಂದು ದೇಹ ಮಾರಾಟ ಮಾಡುವವರ ಆರೋಗ್ಯ ತಪಾಸಣೆ ಮಾಡಿತ್ತು.

ತಪಾಸಣೆಗೆ ಒಳಗಾದ 467 ಮಂದಿ ವೇಶ್ಯೆಯರಲ್ಲಿ 440 ಮಂದಿಗೆ ಎಚ್ಐವಿ ಸೋಂಕು ಇರುವುದು ಪತ್ತೆಯಾಯಿತು ಮತ್ತು ಅದೆಲ್ಲ ಅಸುರಕ್ಷಿತ ಲೈಂಗಿಕ ಸಂಬಂಧದಿಂದ ಬಂದುದು ಎಂದೂ ಗೊತ್ತಾಯಿತು. ಆ ವೇಳೆಗಾಗಲೇ ಅಲ್ಲಿ ಬಿಜೆಪಿ ಸರ್ಕಾರವೂ ಅಧಿಕಾರಕ್ಕೆ ಬಂದಿತ್ತು. ಬೀಚುಗಳ ದಂಡೆಯಲ್ಲಿ ವಾಸಿಸುವ ಮಂದಿ ಸರ್ಕಾರಕ್ಕೆ ಕಣ್ಣುಕಿಸರಾಗಿ ಕಾಣತೊಡಗಿದರು. ಆಚೆ ಮೊರೆಯುವ ಸಮುದ್ರವನ್ನು ಸಹಿಸಿಕೊಂಡಿದ್ದ, ಈಚೆ ನೆಲದಡಿಯ ಮರಳನ್ನು ಕುಸಿಯದಂತೆ ನೋಡಿಕೊಂಡಿದ್ದ ಜೀವಗಳಿಗೆ ಮುಂದೆ ಬಂದು ನಿಂತ ಜೆ.ಸಿ.ಬಿ ಯಂತ್ರಗಳನ್ನು ಎದುರಿಸುವ ಶಕ್ತಿ ಇರಲಿಲ್ಲ.

ಅಲ್ಲಿ 2004ರಲ್ಲಿಯೇ 309 ಗುಡಿಸಲುಗಳು ನಾಶವಾಗಿವೆ. ಈಗ ಉಳಿದಿರುವ ಗುಡಿಸಲುಗಳಿಗೆ ಒಂದು ವಾರದ ಜೀವ ಸಿಕ್ಕಿದೆ. ಬಹುಶಃ ಅಲ್ಲಿನ ಗುಡಿಸಲುಗಳು ಉಳಿಯುವುದು ಕಷ್ಟ. ಅಕ್ರಮ ಎನ್ನುವ ಎಲ್ಲ ವಸತಿಗಳ ಪಾಡು ಇಷ್ಟೇ. ಬೆಂಗಳೂರಿನ ಸಾರಕ್ಕಿ ಕೆರೆಯ ಹಿಂದಿನ ಮಹಲುಗಳೇ ಉರುಳಿ ಬಿದ್ದಿರುವಾಗ ಬೈನಾ ಬೀಚಿನ ಗುಡಿಸಲುಗಳದು ಯಾವ ಪಾಡು? ಇದು ಕನ್ನಡ, ಕೊಂಕಣಿ, ಮರಾಠಿ ಅಥವಾ ತೆಲುಗು ಭಾಷೆಯ ಸಮಸ್ಯೆಯಲ್ಲ; ಬದುಕಿನ ಸಮಸ್ಯೆ. ಇಷ್ಟು ವರ್ಷ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಆಗಿ ಹೋದ ಶಾಸಕರ, ಸಂಸದರ, ಸಚಿವರ ಮರ್ಯಾದೆಯ ಪ್ರಶ್ನೆ.

ವಿಜಯಪುರ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳಿಂದ ಜನರು ವಾಸ್ಕೊ, ಪಣಜಿ ನಗರಗಳಿಗೆ ವಲಸೆ ಹೋಗುತ್ತಲೇ ಇದ್ದಾರೆ. ಈಗ ಮುದ್ದೇಬಿಹಾಳ ಪಟ್ಟಣವೊಂದರಿಂದಲೇ ನಿತ್ಯ ಒಂಬತ್ತು ಬಸ್ಸುಗಳು ವಾಸ್ಕೊ ನಗರಕ್ಕೆ ಹೋಗುತ್ತವೆ. ಎಲ್ಲ ಬಸ್ಸುಗಳಲ್ಲಿ ಕುಳಿತುಕೊಳ್ಳಲು ಬಿಡಿ ನಿಲ್ಲಲೂ ಜಾಗ ಇರುವುದಿಲ್ಲ. 1960ರ ದಶಕದಲ್ಲಿ ಆರಂಭವಾದ ಈ ವಲಸೆ ಈಗಲೂ ನಿಂತಿಲ್ಲ. ಅಂದರೆ ಈಗ ಇರುವ ಶಾಸಕರು, ಸಚಿವರು, ಸಂಸದರೂ ಇದಕ್ಕೆ ಕಾರಣಗಳನ್ನು ಮತ್ತು ತಕ್ಕ ಉತ್ತರಗಳನ್ನು ಕಂಡುಕೊಳ್ಳಬೇಕು. ಆದರೆ, ನಮ್ಮ ಶಾಸಕರು ಅಪ್ರಾಮಾಣಿಕರಾಗಿದ್ದಾರೆ.

ಈಗ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಬೇಡಿಕೆ ಇಟ್ಟಿರುವ ಎ.ಎಸ್.ಪಾಟೀಲ ನಡಹಳ್ಳಿಯವರಿಗೆ ಗೋವಾ ರಾಜ್ಯ ಅಪರಿಚಿತವೇನೂ ಅಲ್ಲ. ಅವರ ವ್ಯಾಪಾರ ವಹಿವಾಟು ಇರುವುದು ಅದೇ ರಾಜ್ಯದಲ್ಲಿ. ಇಷ್ಟು ವರ್ಷಗಳ ನಂತರ ಅವರ ಕಣ್ಣಿಗೆ ಬೈನಾ ಬೀಚಿನ ಕನ್ನಡಿಗರು ಕಂಡುದು ಸೋಜಿಗವಾಗಿದೆ. 2004ರಲ್ಲಿಯೂ ಗೋವಾ ರಾಜ್ಯದ ಮುಖ್ಯಮಂತ್ರಿಗಳು ಬೈನಾ ಬೀಚಿನ ಕನ್ನಡಿಗರನ್ನು ಎತ್ತಂಗಡಿ ಮಾಡುವ ಮಾತು ಆಡಿದ್ದರು, ಮುನ್ನೂರಕ್ಕೂ ಹೆಚ್ಚು ಗುಡಿಸಲುವಾಸಿಗಳನ್ನು ಎತ್ತಂಗಡಿಯೂ ಮಾಡಲಾಗಿತ್ತು. ಆಗಲೂ ನಡಹಳ್ಳಿ ಪಾಟೀಲರು ಗೋವಾಕ್ಕೆ ಹೋಗುತ್ತಿದ್ದರು.

ಆಗ ಕಾಣದ ಕನ್ನಡಿಗರ ಪಾಡು ಈಗ ಅವರ ಕಣ್ಣಿಗೆ ಬೀಳುತ್ತಿರುವುದರ ಹಿಂದಿನ ಕಾರಣಗಳನ್ನು ಅರ್ಥ ಮಾಡಿಕೊಳ್ಳದಷ್ಟು ಜನರು ದಡ್ಡರು ಎಂದು ಅವರು ಅಂದುಕೊಳ್ಳಬಾರದು. ಪಾಟೀಲರ ಮುಂದಿನ ರಾಜಕೀಯ ಆಟಕ್ಕೂ ಈಗ ಇದ್ದಕ್ಕಿದ್ದಂತೆ ಗೋವಾ ಕನ್ನಡಿಗರ ಮೇಲೆ ಅವರ ಪ್ರೀತಿ ಉಕ್ಕುತ್ತಿರುವುದಕ್ಕೂ ತಾಳೆ ಇರುವಂತೆ ಕಾಣುತ್ತದೆ. ಗೋವಾದ ರಾಜಕಾರಣಿಗಳೂ ನಮ್ಮ ರಾಜ್ಯದ ರಾಜಕಾರಣಿಗಳಷ್ಟೇ ಅಪ್ರಾಮಾಣಿಕರು. ಅವರಿಗೆ ಬೀಚುಗಳಲ್ಲಿ ವಾಸ ಮಾಡುವ ಕನ್ನಡಿಗರ ಮತಗಳು ಬೇಕು.

ತಮ್ಮ ಮತಬ್ಯಾಂಕನ್ನು ಸಂಪ್ರೀತಗೊಳಿಸಲು ಮತದಾರರ ಊರ ದೇವರಿಗೆ ಅಲ್ಲಿನ ರಾಜಕಾರಣಿಗಳು ‘ನಡೆದು’ಕೊಳ್ಳುತ್ತಾರೆ. ವಿಜಯಪುರ ತಾಲ್ಲೂಕಿನ ಸೋಮದೇವರಹಟ್ಟಿ ತಾಂಡಾ ಜಾತ್ರೆಗೆ ಅಲ್ಲಿನ ರಾಜಕಾರಣಿಗಳು ಪ್ರತಿವರ್ಷ ಬರುತ್ತಾರೆ. ಕಾಣಿಕೆ ಸಲ್ಲಿಸುತ್ತಾರೆ. ಮತದಾರ ಪ್ರಭುಗಳ ದೇವರು ಎಂದರೆ ರಾಜಕಾರಣಿಗಳಿಗೆ ಎಷ್ಟು ಪ್ರೀತಿ! ಜತೆಗೆ ಮತದಾರರಿಗೆ ಬೇಕಾದ ಗುರುತಿನ ಚೀಟಿ, ಆಧಾರ ಸಂಖ್ಯೆ, ಪಡಿತರ ಚೀಟಿ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟರು.

ಅದೇ ಬದುಕಿಗೊಂದು ಭದ್ರತೆ, ನಿಂತ ನೆಲಕ್ಕೆ ಭರವಸೆ ಎನ್ನುವಂತೆ ಗುಳೆ ಬಂದ ಮಂದಿ ಸಂಭ್ರಮಪಟ್ಟರು. ಆದರೆ, ನಾಲ್ಕು, ಐದು ದಶಕಗಳು ಗತಿಸಿದರೂ ಅವರ ಗುಡಿಸಲುಗಳ ಮಟ್ಟವೇನೂ ಬದಲಾಗಲಿಲ್ಲ. ಸಿಟ್ಟಿನಿಂದ ಹುಟ್ಟಿಸಿದ ಮಕ್ಕಳು ಮರಿಗಳ ಸಂಖ್ಯೆ ಹೆಚ್ಚಾಯಿತು ಅಷ್ಟೇ. ಆ ಮಕ್ಕಳಿಗೂ ಈಗ ಮಕ್ಕಳಾಗಿವೆ. ಎಲ್ಲರೂ ಸೇರಿ ಹಬ್ಬಕ್ಕೆ, ಹುಣ್ಣಿಮೆಗೆ, ಜಾತ್ರೆಗೆ ಎಂದು ತಮ್ಮ ಊರಿಗೆ ಬರುತ್ತಾರೆ. ಮತ್ತೆ ವಾಪಸು ಹೋಗುತ್ತಾರೆ.

ಈಗಿನ ರಾಜ್ಯ ಸರ್ಕಾರ ಕೊಡುವ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿಯನ್ನೂ ತಿಂಗಳಿಗೆ ಒಮ್ಮೆ ಬಂದು ಅವರು ತೆಗೆದುಕೊಂಡು ಹೋಗುತ್ತಾರೆ ಎಂದು ಕೆಲವರು ಆಡಿಕೊಳ್ಳುತ್ತಾರೆ. ನಿಜವೋ ಸುಳ್ಳೋ ಹೇಳುವುದು ಕಷ್ಟ. ಸರ್ಕಾರ ಹಳ್ಳಿಗಾಡಿನ ಜನರ ಸಾಮಾಜಿಕ ಭದ್ರತೆಗಾಗಿ ಏನೆಲ್ಲ ಮಾಡಿದೆ ಎಂದು ಹೇಳಿಕೊಳ್ಳುತ್ತದೆ.

ಒಂದು ರೂಪಾಯಿಗೆ ಒಂದು ಕಿಲೊ ಅಕ್ಕಿ ಕೊಡುತ್ತದೆ, ವೃದ್ಧಾಪ್ಯ ವೇತನ, ವಿಧವಾವೇತನ, ಆ ವೇತನ, ಈ ವೇತನ ಎಂದು ತಿಂಗಳಿಗೆ ಒಮ್ಮೆ ಹಣ ಮನಿಯಾರ್ಡರ್ ಮಾಡುತ್ತದೆ. ಆದರೂ ಜನರು ಏಕೆ ಗುಳೆ ಹೋಗುತ್ತಾರೆ? ಹೋದರೂ ಪರವಾಗಿಲ್ಲ, ಅವರ ಬದುಕಿಗೆ ಒಂದು ಭದ್ರತೆ ಬಂತೇ? ಬರದೇ ಇದ್ದರೆ ಏಕೆ ಬರಲಿಲ್ಲ? ಉಳಿದವರು ಬಿಡಿ. ಕನಿಷ್ಠ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಕೇಳುವ ರಾಜಕಾರಣಿಗಳು ಮತ್ತು ಕನ್ನಡದ ಹೆಸರಿನಲ್ಲಿ ದಂಧೆ ಮಾಡುವವರು ಕೂಡಿಯೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.