ಬರವಣಿಗೆ ಎಂಬುದು ಒಂದು ಬಿಡುಗಡೆಯೇ? ಒಂದು ವಿಮೋಚನೆಯೇ? ಗಾಢವಾಗಿ ಕಾಡುವ ಎಲ್ಲದರಿಂದ ಮುಕ್ತಿ ಹೊಂದುವ ಒಂದು ವಿಧಾನವೇ?... ಹೆಚ್ಚೂ ಕಡಿಮೆ ನಲವತ್ತು ವರ್ಷಗಳ ಹಿಂದಿನ ಮಾತು. ಎಂ.ಎಂ.ಕಲಬುರ್ಗಿ ನಮ್ಮ ಗುರುಗಳಾಗಿ ತರಗತಿಯಲ್ಲಿ ಬಂದು ನಿಂತಿದ್ದರು. ತೆಳ್ಳನೆಯ ಶರೀರ. ಬಟ್ಟೆ ಬರೆ ವಿಚಾರದಲ್ಲಿ ಅಷ್ಟೇನು ಸೊಗಸುಗಾರನಲ್ಲದ ಸರಳ ಮನುಷ್ಯ.

ಅವರು ಪ್ಯಾಂಟಿನ ಒಳಗೆ ಅಂಗಿ ಸೇರಿಸುತ್ತಿದ್ದರು. ಆದರೆ, ಅದಕ್ಕೆ ಒಂದು ಬೆಲ್ಟು ಹಾಕುತ್ತಿರಲಿಲ್ಲ. ಅವರ ಅಂಗೈಯಲ್ಲಿ ಒಂದು ಹಸಿರು ಮಚ್ಚೆ ಇತ್ತು, ಗರುಡ ರೇಖೆಯಂಥದು. ಅವರು ಕೈ ಎತ್ತಿ ಪಾಠ ಮಾಡುತ್ತಿದ್ದರೆ ವಿದ್ಯಾರ್ಥಿಗಳು ಮಂತ್ರಮುಗ್ಧರಾಗಿ ಕುಳಿತುಕೊಳ್ಳುತ್ತಿದ್ದರು. ಅವರು ‘ನೋ ನಾನ್ಸೆನ್ಸ್’ ಟೀಚರ್! ವಿದ್ಯಾರ್ಥಿಗಳು ಬಾಲ ಬಿಚ್ಚಲು ಬಿಡುತ್ತಿರಲಿಲ್ಲ. ಯಾರೋ ಒಬ್ಬ ಜಾಣ ಎಂದು ಅವನ ವಿರುದ್ಧ ಕತ್ತಿಯನ್ನೂ ಮಸೆಯುತ್ತಿರಲಿಲ್ಲ. ಹಾಗೆ ಕತ್ತಿ ಮಸಿಯುವವರು ಅವರ ಸಮಕಾಲೀನರಲ್ಲಿ ಇದ್ದರು.

ನಾವು ಕನ್ನಡ ಅಧ್ಯಯನ ಪೀಠ ಸೇರುವುದಕ್ಕಿಂತ ಮುಂಚೆಯೇ ಕಲಬುರ್ಗಿ ದಂತಕಥೆಯಂತೆ ಹೆಸರು ಮಾಡಿದ್ದರು. ಕಟ್ಟುನಿಟ್ಟಿನ ಜತೆಗೆ ಅವರು ಜಾತಿವಾದಿಯೂ ಆಗಿರಬಹುದು ಎಂಬ ಗುಮಾನಿಗಳು ಇದ್ದುವು. ಒಟ್ಟು ಅಧ್ಯಯನ ಪೀಠ ಲಿಂಗಾಯತ ವಿದ್ಯಾರ್ಥಿಗಳ ಪರವಾಗಿ ಇತ್ತು. ಅದು ನಮ್ಮ ತಂಡದ ವಿಚಾರದಲ್ಲಿಯೂ ನಿಜವಾಯಿತು ಎಂಬುದು ಬೇರೆ ಮಾತು. ಆದರೆ, ಕಲಬುರ್ಗಿ ಜಾತಿವಾದಿ ಆಗಿರಲಿಲ್ಲ. ಆಗಿದ್ದರೆ ಅವರು ತಮ್ಮ ಏಕೈಕ ಮಗನಿಗೆ ಶ್ರೀವಿಜಯ ಎಂದು ಹೆಸರು ಇಡುತ್ತಿರಲಿಲ್ಲ. ಕನ್ನಡದ ಮೊದಲ ಅಲಂಕಾರ ಶಾಸ್ತ್ರ ಗ್ರಂಥ ಕವಿರಾಜಮಾರ್ಗದ ಕೃತಿಕಾರನ ಹೆಸರು ಅದು. ಆತ ಜೈನನಾಗಿದ್ದ. ಕಲಬುರ್ಗಿಯವರು ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಕುರಿತು ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದರು. ಕನ್ನಡದ ಕೆಲವೇ ಕೆಲವು ಶ್ರೇಷ್ಠ ಪಿಎಚ್.ಡಿ ಮಹಾಪ್ರಬಂಧಗಳಲ್ಲಿ ಅದೂ ಒಂದು. ಅವರು ಒಬ್ಬ ಮಗಳಿಗೆ ಅತ್ತಿಮಬ್ಬೆ ಎಂದು ಹೆಸರು ಇಡುವೆ ಎಂದು ಒಂದು ದಿನ ಪಾಠ ಮಾಡುವಾಗ ನಮಗೆ ಹೇಳಿದ್ದರು. ನಂತರ ಮೂವರು ಹೆಣ್ಣು ಮಕ್ಕಳು ಹುಟ್ಟಿದರೂ ಆ ಹೆಸರು ಇಡಲಿಲ್ಲ. ಆದರೆ, ಹಾಗೆ ಅತ್ತಿಮಬ್ಬೆ ಎಂದು ಹೆಸರು ಇಡುವ ಮನಸ್ಸು ಅವರಿಗೆ ಇತ್ತು ಎಂಬುದರಲ್ಲಿ ನನಗೆ ಶಂಕೆ ಇಲ್ಲ. ಅರ್ಥ ಇಷ್ಟೇ : ಕಲಬುರ್ಗಿಯವರಿಗೆ ಹಳಗನ್ನಡ ಕಾಡುತ್ತಿತ್ತು. ಅವರು ಮುಖ್ಯವಾಗಿ ಶಾಸ್ತ್ರದ ವಿದ್ಯಾರ್ಥಿ. ಅವರಿಗೆ ಶಾಸನ ಹೃದಯಕ್ಕೆ ಹತ್ತಿದ ಪ್ರೀತಿ.

ಶಾಸನಗಳ ಮೂಲಕವೇ ಅವರು ಸಂಶೋಧನೆಯ ಹಾದಿ ಹಿಡಿದರು. ತಾನು ಕವಿಯಾಗಲಿಲ್ಲ ಎಂದು ಅವರಿಗೆ ಎಲ್ಲಿಯೋ ಆಳದಲ್ಲಿ ನೋವು ಇತ್ತು. ಸಂಶೋಧಕನಿಗೆ ಜ್ಞಾನಪೀಠ ಪ್ರಶಸ್ತಿ ಬರುವುದಿಲ್ಲ ಎಂದು ಅವರಿಗೆ ಗೊತ್ತಿತ್ತು! ಆದರೆ, ಅವರು ಶಾಸ್ತ್ರದಲ್ಲಿ, ಸಂಶೋಧನೆಯಲ್ಲಿ ತಮ್ಮ ಮೂವರು ನಾಲ್ವರು ಸಮಕಾಲೀನ ವಿದ್ವಾಂಸರಿಗೆ ಹೆಗಲು ಹಚ್ಚಿ ನಿಲ್ಲುವಂಥ ಪ್ರಥಮ ಸಾಲಿನವರು ಆಗಿದ್ದರು. ಅವರು ತರಗತಿಗೆ ಡಸ್ಟರು, ಖಡು ಹಿಡಿದುಕೊಂಡು ಬಂದು ವೇದಿಕೆಯ ಮೇಲೆ ನಿಲ್ಲುತ್ತಲೇ ಜಿನವಲ್ಲಭನ ಗಂಗಾಧರಂ ಶಾಸನವನ್ನು ಪಠಿಸಲು ಶುರುಮಾಡಿದರು ಎಂದರೆ ಅದು ಮುಗಿಯುವ ವರೆಗೆ ನಿಲ್ಲಿಸುತ್ತಿರಲಿಲ್ಲ. ಪಂಪನ ಚಾಗದ ಭೋಗದ..., ತೆಂಕಣ ಗಾಳಿ... ಪದ್ಯಗಳನ್ನು ಅವರು ಹೇಳುವ ರೀತಿಯೇ ಅರ್ಥವನ್ನು ದಾಳಿಂಬೆಯ ಎಸಳುಗಳ ಹಾಗೆ ಬಿಡಿಸಿ ನಮ್ಮ ಮುಂದೆ ಇಟ್ಟುಬಿಡುತ್ತಿತ್ತು. ಶಾಸ್ತ್ರ ಮತ್ತು ಸಂಶೋಧನೆ ವಿಧಿಸುವ ಕಟ್ಟು ನಿಟ್ಟು ದೊಡ್ಡದು. ಅನಗತ್ಯವಾದುದನ್ನು ಅದು ಇಟ್ಟುಕೊಳ್ಳುವುದಿಲ್ಲ.

ಕಲಬುರ್ಗಿ ನಮಗೆ ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ಹೇಗೆ ಬರೆಯಬೇಕು ಎಂದು ಹೇಳಿಕೊಟ್ಟರು. ಗ್ರಂಥಸಂಪಾದನೆಯಲ್ಲಿ ಅವರದು ಎತ್ತಿದ ಕೈ. ನಮ್ಮಂಥ ಒಬ್ಬಿಬ್ಬರು ಅವರ ವಿದ್ಯಾರ್ಥಿಗಳು ‘ಸಂಪಾದಕರು’ ಆಗಲೂ ಅದು ಕೈ ದೀವಿಗೆಯಾಯಿತು. ಎಲ್ಲರೂ ತಮ್ಮ ಕಾಲದಲ್ಲಿಯೇ ಎಲ್ಲವೂ ಮುಗಿದು ಹೋಯಿತು, ಮುಂದಿನ ಕಾಲ ಕಷ್ಟ ಎಂದುಕೊಳ್ಳುವ ಹಾಗೆ ಹಾ.ಮಾ.ನಾಯಕರೂ ಅಂದುಕೊಂಡು ಒಂದು ದಿನ ಆಗಿನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದ ಆರ್.ಸಿ.ಹಿರೇಮಠರ ಮುಂದೆ ಆತಂಕ ವ್ಯಕ್ತಪಡಿಸುತ್ತ ಕುಳಿತುಕೊಂಡಿದ್ದರು. ಹಿರೇಮಠರು ಏನೂ ಹೇಳದೇ ನಾಯಕರನ್ನು ಕರೆದುಕೊಂಡು ಒಂದು ತರಗತಿಯ ಹೊರಗೆ ನಿಲ್ಲಿಸಿಕೊಂಡು ನಿಂತರು. ಒಳಗೆ ಕಲಬುರ್ಗಿ ಪಾಠ ಮಾಡುತ್ತಿದ್ದರು.

ನಾಯಕರು ಮತ್ತು ಹಿರೇಮಠರು ಇಡೀ ತರಗತಿ ಮುಗಿಯುವ ವರೆಗೆ ಅಲ್ಲಿಯೇ ನಿಂತಿದ್ದರು. ಒಳಗೆ ಕಲಬುರ್ಗಿ ಭೋರ್ಗರೆಯುವ ನದಿಯ ಹಾಗೆ ಪಾಠ ಮಾಡುತ್ತಿದ್ದರು. ನಾಯಕರು, ಹಿರೇಮಠರ ಕೈ ಹಿಡಿದು ತಾವು ಆಡಿದ ಮಾತನ್ನು ಹಿಂತೆಗೆದುಕೊಂಡರು. ನಾಯಕರಿಗೆ ಬಹುಶಃ ಡಿ.ಎಲ್.ಎನ್ ನಂತರ ಯಾರು ಎಂಬ ಚಿಂತೆ ಇತ್ತು. ಅವರಿಗೆ ಉತ್ತರ ಸಿಕ್ಕಿತ್ತು. ಹಿರೇಮಠರು ಕಲಬುರ್ಗಿಯವರನ್ನು ಮಗನ ಹಾಗೆ ಪ್ರೀತಿಸಿದ್ದರು. ಬೆಳೆಸಿದ್ದರು. ಆದರೆ, ನಂತರ ಇಬ್ಬರಿಗೂ ಕೆಟ್ಟು ಹೋಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಹೆಸರು ಶಿಫಾರಸು ಮಾಡುವಾಗ ಈ ಕಹಿ ಹೊರಗೆ ಬಂತು.

ಹಿರೇಮಠರು ಜಂಗಮರಾಗಿದ್ದರು. ಕಲಬುರ್ಗಿ ಲಿಂಗಾಯತರಾಗಿದ್ದರು. ಕಲಬುರ್ಗಿ, ಜಂಗಮತ್ವದ ವಿರೋಧಿಯಾಗಿದ್ದರು. ಕಲಬುರ್ಗಿ, ಮಠಾಧೀಶರನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ, ಕನಿಷ್ಠ ಮೂರು–ನಾಲ್ಕು ಮಠಗಳ ಜತೆಗೆ ಅವರ ನಿಕಟ ಸಂಪರ್ಕವಿತ್ತು. ವಾಸ್ತವದಲ್ಲಿ ಅವರು ಆ ಮಠಗಳ ಸಲಹೆಗಾರರೇ ಆಗಿದ್ದರು. ಅಂದರೆ ಅವರು ಒಟ್ಟು ಮಠೀಯ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದರೋ ಅಥವಾ ಕೆಲವರು ಮಠಾಧೀಶರನ್ನು ಮಾತ್ರ ವಿರೋಧಿಸುತ್ತಿದ್ದರೋ ಅಥವಾ ಅದು ಅವರ ವ್ಯಕ್ತಿತ್ವದ ದ್ವಂದ್ವವಾಗಿತ್ತೋ ಹೇಳುವುದು ಕಷ್ಟ.

ನಾವು ದ್ವಂದ್ವದಲ್ಲಿ ಬದುಕುವುದು ಹಣಕ್ಕಾಗಿ ಮತ್ತು ಅಧಿಕಾರಕ್ಕಾಗಿ. ಕಲಬುರ್ಗಿಯವರು ಯಾರ ದುಗ್ಗಾಣಿಗೂ ಕೈ ಚಾಚಿದವರು ಅಲ್ಲ. ಅಂಬಲಿ, ಕಂಬಳಿಗೆ ಆಗುವಷ್ಟು ಸಾಕು ಎಂದವರು ಅವರು. ಪಂಪ ಪ್ರಶಸ್ತಿಯ ರೂ. ಒಂದು ಲಕ್ಷ ಬಹುಮಾನವನ್ನು ಒಂದು ಕೈಯಲ್ಲಿ ತೆಗೆದುಕೊಂಡು ಇನ್ನೊಂದು ಕೈಯಲ್ಲಿ ಸರ್ಕಾರಕ್ಕೇ ಕೊಟ್ಟವರು. ‘ಪಂಪನಿಗಾಗಿ ಒಂದು ಸ್ಮಾರಕ ಮಾಡಿ’ ಎಂದು ಹೇಳಿದವರು. ಪ್ರಾಮಾಣಿಕತೆಯಲ್ಲಿ ಅವರದು ವೀರಭದ್ರನ ಕಠೋರ ವ್ರತ. ಒಂದು ರಾತ್ರಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅವರು ನನಗೆ ಸಿಕ್ಕಿದ್ದರು. ನಮ್ಮ ಊರಿನವರೇ ಆದ ಅವರ ಪತ್ನಿಯೂ ಜತೆಗೆ ಇದ್ದರು.

ರೈಲು ಬಿಡುವ ವೇಳೆ ಆದಾಗ ನಾನು ಪ್ರಥಮ ದರ್ಜೆ ಬೋಗಿ ಕಡೆಗೆ ನಡೆದೆ. ಅವರು ಹೆಂಡತಿ ಜತೆಗೆ ಪಕ್ಕದ ದ್ವಿತೀಯ ದರ್ಜೆ ಬೋಗಿ ಕಡೆಗೆ ಹೊರಟರು. ಅವರು ಒಬ್ಬ ನಿವೃತ್ತ ಕುಲಪತಿ ಆಗಿದ್ದರು. ಆದರೂ ಸರಳರಾಗಿಯೇ ಉಳಿದಿದ್ದರು. ನನಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಅವರಿಗೆ ದ್ವಂದ್ವಗಳು ಕಾಡಲೇ ಇಲ್ಲ ಎಂದು ಅಲ್ಲ. ಅನಂತಮೂರ್ತಿ ಅವರಿಗೆ ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಬಂದ ನಂತರ ಒಂದು ದಿನ ಅವರು ನನ್ನ ಮುಂದೆ ಬಂದು ಕುಳಿತರು. ಆ ಪ್ರಶಸ್ತಿ ಕೊಟ್ಟುದು ಸರಿಯಲ್ಲ ಎಂದು ಬರೆದು ಕೊಂಡು ಬಂದಿದ್ದ ಪತ್ರವನ್ನೂ ಕೈಯಲ್ಲಿ ಹಿಡಿದುಕೊಂಡಿದ್ದರು. ‘ಓದು’ ಎಂದು ಕೈಗೆ ಕೊಟ್ಟರು. ಓದಿದೆ. ‘ಸರಿ ಇದೆಯಾ’ ಎಂದು ಕೇಳಿದರು... ‘ನಾಳೆ ಬರಬೇಕು’ ಎಂದರು. ‘ನೋಡುವೆ’ ಎಂದೆ. ಅದು ಪ್ರಕಟವಾಯಿತು. ಅದೆಲ್ಲ ಈಗ ಇತಿಹಾಸ.

ಆದರೆ, ಕಲಬುರ್ಗಿಯವರಿಗೆ ಆ ಪ್ರಶಸ್ತಿ ಆ ವರ್ಷವೇ ತಮಗೆ ಬರಬೇಕಿತ್ತು ಎಂದು ಅನಿಸಿತ್ತೇ? ಆ ಪತ್ರದಲ್ಲಿ ಒಂದು ಸಾಲು ಇತ್ತು : ಅನಂತಮೂರ್ತಿಯವರಿಗೆ ಈ ಪ್ರಶಸ್ತಿಯನ್ನು ಕೊಡುವ ಮೂಲಕ ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನಿಗೆ ಅನ್ಯಾಯವಾದಂತೆ ಆಯಿತು ಎಂದು ಕಲಬುರ್ಗಿ ಬರೆದಿದ್ದರು. ಬಿಜ್ಜಳನ ಆಸ್ಥಾನವೇನೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಸ್ಥಾನ ಎಂದು ಅರ್ಥವಾಗುತ್ತದೆ. ಆದರೆ, ಇಲ್ಲಿ ಬಸವಣ್ಣ ಯಾರು? ಕಲಬುರ್ಗಿ ತಮಗೆ ಅನ್ಯಾಯವಾಯಿತು ಎಂದು ಹೇಳಲು ಪ್ರಯತ್ನ ಮಾಡಿದರೇ? ನನಗೆ ಹಾಗೆ ಅನಿಸಿತು.

ಅನುಮಾನ ಬೇಡ : ಬಸವ ಪುರಸ್ಕಾರಕ್ಕೆ ಕರ್ನಾಟಕದಲ್ಲಿ ಅವರಷ್ಟು ಅರ್ಹ ವ್ಯಕ್ತಿ ಯಾರೂ ಇರಲಿಲ್ಲ. ಅವರೇ ಬೇರೆಯವರಿಗೆ ಆ ಪ್ರಶಸ್ತಿ ದೊರಕುವಂತೆ ಮಾಡಿದ್ದರು. ಅನಂತಮೂರ್ತಿಯವರಿಗೆ ಬಂದಾಗಲೂ ಆ ವರ್ಷ ಅವರು ಸುಮ್ಮನಿರಬೇಕಿತ್ತೇ? ಆ ವಿವಾದವೇ ಮುಂದುವರಿದು ಅವರ ಹತ್ಯೆಗೆ ಕಾರಣವಾಗುವಂಥ ಮಾತನ್ನು ಅವರಿಂದ ಆಡಿಸಿತೇ? ಕಲಬುರ್ಗಿ ಸಣ್ಣದಾಗಿ ನಡೆದುಕೊಂಡುದು ಆಗ ಮಾತ್ರ. ಅವರು ಪಂಪ ಪ್ರಶಸ್ತಿಗೆ ಚಂದ್ರಶೇಖರ ಕಂಬಾರರ ಹೆಸರನ್ನು ಶಿಫಾರಸು ಮಾಡಿದಾಗ ಇದನ್ನು ಮೀರಿದ್ದರು ಎಂದು ನಮಗೆಲ್ಲ ಅನಿಸಿತ್ತು.

ಕಲಬುರ್ಗಿ ತಮ್ಮ ಶಿಷ್ಯರನ್ನು ಘನವಾಗಿ ಪ್ರೀತಿ ಮಾಡುತ್ತಿದ್ದರು. ಅವರು ಎಷ್ಟು ದೊಡ್ಡವರಾದರೂ ಏಕವಚನದಲ್ಲಿಯೇ ಮಾತನಾಡಿಸುತ್ತಿದ್ದರು. ನಾನು ಎದುರು ಸಿಕ್ಕಾಗಲೆಲ್ಲ ಬೆನ್ನು ಚಪ್ಪರಿಸಿ ಪಕ್ಕದಲ್ಲಿ ಇರುವವರಿಗೆ ‘ಇಂವ ನನ್ನ ಉಡಾಳ ಶಿಷ್ಯ’ ಎಂದು ಪರಿಚಯಿಸುತ್ತಿದ್ದರು. ಅದು ಹೊಗಳಿಕೆಯೇ, ತೆಗಳಿಕೆಯೇ ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಹೋದಾಗಲೆಲ್ಲ ಯಾವಾಗಲಾದರೂ ಮಧ್ಯದಲ್ಲಿ ಎದ್ದು ಬಂದು ನನ್ನ ಕೈ ಹಿಡಿದು ಹೊರಗೆ ಕರೆದುಕೊಂಡು ಹೋಗಿ ಕಷ್ಟ ಸುಖ ವಿಚಾರಿಸುತ್ತಿದ್ದರು. ನನ್ನ ಸಂಪಾದಕರ ಬಗೆಗೆ ಅವರಿಗೆ ಅಪಾರ ಗೌರವವಿತ್ತು. ‘ಅವರು ಇರು ಎನ್ನುವಷ್ಟು ಕಾಲ ನೀನು ಅವರ ಜತೆಗೆ ಇರು’ ಎಂದು ನನಗೆ ಬುದ್ಧಿ ಹೇಳಿದ್ದರು.

ನಾನು ದಾರಿ ತಪ್ಪಿ ಪತ್ರಕರ್ತನಾದ ಬಗ್ಗೆ ಅವರಿಗೆ ಸಂತೋಷವಿತ್ತು. ಆದರೆ, ಅಧ್ಯಾಪಕನಾಗಲಿಲ್ಲ ಎಂದು ನೋವು ಇತ್ತು. ‘ಏನು ಮಾಡುವುದು ಹೊರಗೆ ಇರಬೇಕಾದವರು ಒಳಗೆ ಇದ್ದಾರೆ, ಒಳಗೆ ಇರಬೇಕಾದವರು ಹೊರಗೆ ಇದ್ದೀರಿ’ ಎಂದು ಬೇಸರಿಸುತ್ತಿದ್ದರು. ಕಳೆದ ಸಾರಿ ‘ಸಂಭ್ರಮ’ಕ್ಕೆ ಹೋದಾಗ, ‘ನೀನು ಯುನಿವರ್ಸಿಟಿಯಲ್ಲಿ ಇರಬೇಕಿತ್ತು’ ಎಂದು ಮತ್ತೆ ಹೇಳಿದರು. ನನ್ನ ಜತೆಗೆ ಮಲ್ಲಿಕಾ ಘಂಟಿ ಅವರೂ ಇದ್ದರು.

ಎಂ.ಎ ಮಾಡಿದ ನಂತರ ನಾಲ್ಕು ವರ್ಷ ನಾನು ನಿರುದ್ಯೋಗಿಯಾಗಿದ್ದೆ. ಒಂದು ಸಾರಿ ಸಂದರ್ಶನಕ್ಕೆ ಹೋದಾಗ ಅವರೇ ವಿಷಯ ಪರಿಣತರಾಗಿದ್ದರು. ‘ನಿಮ್ಮ ಮೆಚ್ಚಿನ ಲೇಖಕರು ಯಾರು’ ಎಂದು ಕೇಳಿದರು. ನನ್ನ ದುರದೃಷ್ಟ. ನಾನು, ‘ಅನಂತಮೂರ್ತಿ’ ಎಂದು ಹೇಳಿದೆ! ‘ಏಕೆ, ಮಾಸ್ತಿಯವರು ನಿಮಗೆ ಮೆಚ್ಚಿನವರು ಅಲ್ಲವೇ’ ಎಂದರು. ‘ಅವರನ್ನೂ ಓದಿರುವೆ’ ಎಂದೆ. ಆದರೆ, ನಾನು ಆಯ್ಕೆಯಾಗಲಿಲ್ಲ. ಅದಕ್ಕೆ ಅವರು ಹೊಣೆ ಎಂದು ನಾನು ಭಾವಿಸಿಲ್ಲ.

ನನ್ನ ನಿರುದ್ಯೋಗ ಪರ್ವ ಮುಗಿಯುತ್ತಲೇ ಇಲ್ಲ ಎಂದು ಅವರಿಗೆ ತಿಳಿದಿತ್ತೋ ಏನೋ. ಒಂದು ದಿನ ಒಂದು ಕಾರ್ಡು ಬರೆದು ಧಾರವಾಡ ವಿಶ್ವವಿದ್ಯಾಲಯ ಆವರಣದ ಕರ್ನಾಟಕ ಇತಿಹಾಸ ಸಂಶೋಧನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕ ಹುದ್ದೆ ಖಾಲಿ ಇದೆ. ಬಂದು ಸೇರಿಕೋ ಎಂದು ಸೂಚಿಸಿದ್ದರು. ನನಗೆ ಆ ವೇಳೆಗೆ ಪ್ರಜಾವಾಣಿಯಲ್ಲಿ ನೌಕರಿ ಸಿಕ್ಕಿತ್ತು. ಇನ್ನೂ ಸೇರಿಕೊಂಡಿರಲಿಲ್ಲ. ಧಾರವಾಡಕ್ಕೆ ಹೋಗಿ ಅವರನ್ನು ಕಂಡು ನನ್ನ ಹಾಗೆಯೇ ನಿರುದ್ಯೋಗಿ ಆಗಿದ್ದ ನನ್ನ ಸಹಪಾಠಿ ಬಿ.ಡಿ.ನಾಗಮೋತಿ ಅವರಿಗೆ ಆ ಕೆಲಸ ಕೊಡಬಹುದೇ ಎಂದು ಕೇಳಿದೆ. ಅವರಿಗೆ ಅಷ್ಟು ಇಷ್ಟ ಆಗಲಿಲ್ಲ. ಆದರೆ, ಕೊಡಿಸಿದರು. ಅಲ್ಲಿಗೆ ವಿಶ್ವವಿದ್ಯಾಲಯ ಪ್ರವೇಶಿಸುವ ನನ್ನ ಋಣ ಮುಗಿಯಿತು ಎಂದು ಅವರಿಗೆ ಅನಿಸಿತೋ ಏನೋ?

ಅವರನ್ನು ನೆನದಾಗಲೆಲ್ಲ ನನ್ನ ಕಣ್ಣು ತೇವವಾಗುತ್ತವೆ. ಎದೆ ಒದ್ದೆಯಾಗಿ ಕರಗಿ ಹೋಗುತ್ತದೆ. ಅವರು ನನ್ನ ಗುರು ಎಂದು ನನಗೆ ಅಹಂಕಾರ ಇತ್ತು. ಅಧ್ಯಯನ ಪೀಠದಲ್ಲಿ ಅವರ ಕೊನೆಯ ಪಾಠ ಕೇಳುತ್ತ ಹುಡುಗಿಯರ ಹಾಗೆ ಗೊಳೋ ಎಂದು ಅತ್ತಿದ್ದೆ. ಅವರು, ‘ಉಳಿದಾವ ನಮ ಹಾಡ... ಮುಗಿದಾವ ನಮ ಜ್ವಾಳ’ ಎಂದು ಹಾಡಿದ್ದರು. ವಿದ್ಯಾರ್ಥಿಗಳಾಗಿ ನಮ್ಮ ಅವಧಿ ಮುಗಿದಿತ್ತು. ಗುರುವಾಗಿ ಅವರು ಹೇಳುವುದು ಇನ್ನೂ ಇತ್ತು. ಅವರ ಋಣವನ್ನು ಹೇಗೆ ತೀರಿಸುವುದು? ನೆನಪುಗಳೇ ಹಾಗೆ. ಎದೆ ಮೇಲಿನ ಭಾರ. ಭಾರ ಇಳಿಸುವುದು ಎಂದರೆ ಬರೆಯುವುದೇ? ಬರವಣಿಗೆ ಒಂದು ಋಣ ವಿಮೋಚನೆಯೂ ಇರಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.