ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವೊ ನಾಡಿನಲ್ಲಿ ಗಾಂಧಿ ತತ್ವಗಳ ಆಕರ್ಷಣೆ

Last Updated 16 ಮೇ 2013, 19:59 IST
ಅಕ್ಷರ ಗಾತ್ರ

ದಕ್ಷಿಣ ಕರಾವಳಿ ನಗರವಾದ ಕ್ಸಿಯಾಮೆನ್, ನವ ಚೀನಾದ ಪ್ರದರ್ಶಕವಸ್ತುವಾಗಿದೆ. ಹಣಹೂಡಿಕೆ ಹಾಗೂ ಕೈಗಾರಿಕೆಯ ಕೇಂದ್ರವಾಗಿರುವ ಈ ನಗರ ತೈವಾನ್ ಎದುರಿಗೇ ಇದೆ. ತೈವಾನಿಗಳು ಕ್ಸಿಯಾಮೆನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಹಣಹೂಡಿಕೆ ಮಾಡಿದ್ದಾರೆ. ಹಾಗೆಯೇ ವಿದೇಶಗಳಲ್ಲಿರುವ ಚೀನೀಯರೂ ಇಲ್ಲಿ ಹಣ ಹೂಡಿದ್ದಾರೆ.

ರಸ್ತೆಗಳು ವಿಶಾಲವಾಗಿದ್ದು ಪಾದಚಾರಿ ಪಥಗಳು ಸಮರ್ಪಕವಾಗಿವೆ. ಕಟ್ಟಡಗಳು ಬೃಹತ್ತಾಗಿದ್ದು ಗಟ್ಟಿಮುಟ್ಟಾಗಿವೆ. ಭಾರತೀಯರಿಗೆ ಅವರ ರಾಷ್ಟ್ರದ ಬಗ್ಗೆ ಕೀಳರಿಮೆ ಹಾಗೂ ರಾಜಕಾರಣಿಗಳ ಬಗ್ಗೆ ಆಕ್ರೋಶ ಮೂಡಿಸುವಂತಹ ಸ್ಥಳ ಇದು.

ವಿಶ್ವದ ಎರಡನೇ ಅತಿ ಉದ್ದದ್ದು ಎನ್ನಲಾದ ತೂಗುಸೇತುವೆಯ ಮೂಲಕ ಕ್ಸಿಯಾಮೆನ್‌ಗೆ ನಾವು ಹೋದೆವು. ನಂತರ `ಏಷ್ಯಾದ ಎರಡನೇ ಅತಿ ದೊಡ್ಡ ಸಮ್ಮೇಳನ ಸಭಾಂಗಣ'ವನ್ನು ಹಾದು ಹೋದೆವು. ಸಾರ್ವಜನಿಕ ವಾಸ್ತುಶಿಲ್ಪದ ಮಾದರಿ ಇಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ.

ನನ್ನನ್ನು ಅತಿಯಾಗಿ ಸೆಳೆದದ್ದು ಸಾರ್ವಜನಿಕ ಕಲೆಯ ಸ್ವರೂಪ. ನಮ್ಮ ಹೋಟೆಲ್‌ನ ಹೊರಗಿದ್ದ ಚೌಕದಲ್ಲಿ ಸಮವಸ್ತ್ರ ಧರಿಸಿದ್ದ ಸೈನಿಕರ ಶಿಲ್ಪಗಳ ದಂಡೇ ಇತ್ತು. ಅನೇಕ ಸೈನಿಕರ ಶಿಲ್ಪಗಳು ಗುಂಡು ಹಾರಿಸಲು ಸನ್ನದ್ಧವಾಗಿರುವ ರೈಫಲ್‌ಗಳನ್ನು ಹಿಡಿದ್ದ್ದಿದವು. ಕನಿಷ್ಠ ಇಬ್ಬರಾದರೂ ತಮ್ಮ ಕೈಗಳಲ್ಲಿ ಗ್ರೆನೇಡ್‌ಗಳನ್ನು ಹಿಡಿದಿದ್ದರು. ಕಪ್ಪುಶಿಲೆಯಲ್ಲಿ ಕೆತ್ತಿದ ಸೈನಿಕರ ಸಾಲು, ಸಣ್ಣ ಗುಡ್ಡವೊಂದನ್ನು  ಹತ್ತುತ್ತಿರುವಂತಹ  ಚಿತ್ರಣ  ಅದು. ಮೇಲೆ ಗುಡ್ಡದಲ್ಲಿ ಹೆಲ್ಮೆಟ್ ಧರಿಸಿದ ವ್ಯಕ್ತಿಗಳು ಪೀಪಲ್ಸ್ ರಿಪಬ್ಲಿಕ್‌ನ ಬಾವುಟ ನೆಡುತ್ತಿದ್ದಂತಹ ಶಿಲ್ಪವದು.

ಅಂತಹ ಪ್ರದರ್ಶನ ವಸ್ತುಗಳು ಚೀನಾದಲ್ಲಿ ಮಾಮೂಲು ಎಂದು ನನ್ನ ಆತಿಥೇಯರು ನನಗೆ ಹೇಳಿದರು. ಚಿಕ್ಕ ಅಥವಾ ದೊಡ್ಡ ಪಟ್ಟಣಗಳ ಸಾರ್ವಜನಿಕ ಚೌಕಗಳಲ್ಲಿ ಸಮವಸ್ತ್ರದಲ್ಲಿರುವ ಕೆತ್ತಿದ ಸೈನಿಕ ಶಿಲ್ಪಗಳೇ ತುಂಬಿವೆ. ಇದು ಸಹಜವಾದದ್ದೇ. ಏಕೆಂದರೆ, ಜಪಾನಿ ಹಾಗೂ ಪಾಶ್ಚಿಮಾತ್ಯ ವಸಾಹತುಶಾಹಿಗಳ ವಿರುದ್ಧ ಸುದೀರ್ಘ ರಕ್ತಪಾತದ ಕದನಗಳಿಂದ ತನ್ನ ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯ ಏಕತೆಯನ್ನು ಚೀನಾ ಗೆದ್ದುಕೊಂಡಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ),  ವಿಶ್ವದಲ್ಲೇ ಅತಿ ದೊಡ್ಡ ಪಡೆಯಾಗಿ ಉಳಿದುಕೊಂಡಿದೆ. ಹೀಗಿದ್ದೂ   ಕ್ಸಿಯಾಮೆನ್‌ನಲ್ಲಿ ಕಂಡ ಯುವ ಸೈನಿಕರ ಸಾಲುಗಳ ಶಿಲ್ಪ, ಈಗಾಗಲೇ ಈ ಭಾರತೀಯನಿಗೆ ಚೆನ್ನಾಗಿ ತಿಳಿದಿದ್ದ  ಸಾರ್ವಜನಿಕ ಶಿಲ್ಪಕ್ಕಿಂತ `ಬೇರೆ'ಯದಾಗಿತ್ತು.

ಈ ಭಾರತೀಯನ ಪ್ರಜ್ಞೆಯಲ್ಲಿ ಅಚ್ಚೊತ್ತಿರುವುದು, ಉಪ್ಪಿನ ಕಾನೂನುಗಳನ್ನು ಮುರಿಯಲು ದಂಡಿಯಾತ್ರೆ ಹೊರಟ ಮಹಾತ್ಮ ಹಾಗೂ ಅವರ ಶಿಷ್ಯರ `ಗ್ಯಾರಹ್ ಮೂರ್ತಿ `ಗಳ  ಶಿಲ್ಪ.  ದೇವಿಪ್ರಸಾದ್ ರಾಯ್‌ಚೌಧರಿ ಸೃಷ್ಟಿಸಿರುವ ಈ ಶಿಲ್ಪವನ್ನು ನವದೆಹಲಿಯ ಸರ್ದಾರ್ ಪಟೇಲ್ ಮಾರ್ಗ್ ಹಾಗೂ ಮದರ್ ತೆರೆಸಾ ಕ್ರೆಸೆಂಟ್‌ನ ಮಾರ್ಗದ ಬಳಿ ಪ್ರದರ್ಶಿಸಲಾಗಿದೆ. ಅಲ್ಲಿರುವ ಆ ನಾಯಕ ಕೋಲು ಹಿಡಿದ ವೃದ್ಧರು. ಹಾಗೂ ಅವರ ಅನುಯಾಯಿಗಳೂ ದೈಹಿಕವಾಗಿ ಸದೃಢಕಾಯಿಗಳ ವಿವರಣೆಗೆ ನಿಲುಕದವರು.

ಅಹಿಂಸೆಯ ಮೂಲಕ ಗೆದ್ದ ಸ್ವಾತಂತ್ರ್ಯದ ಕಥೆಗೆ ಪ್ರತಿ ಕಥಾನಕದ ಉತ್ತರವೂ ಭಾರತದಲ್ಲಿದೆ. ಬ್ರಿಟಿಷ್ ವಸಾಹತುಶಾಹಿಗೆ ಸೆಡ್ಡು ಹೊಡೆದ ಸಶಸ್ತ್ರ ಪ್ರತಿರೋಧದ  ಪುರುಷತ್ವ ಹಾಗೂ ಉಗ್ರ ಪರಂಪರೆಯನ್ನು ಭಗತ್ ಸಿಂಗ್‌ನ ತಲೆ ಮೇಲಿನ ಶಿರಸ್ತ್ರಾಣ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಖಾಕಿ ಸಮವಸ್ತ್ರ ಪ್ರತಿನಿಧಿಸುತ್ತದೆ. ಗಾಂಧಿ ವಿರೋಧಿ ಪ್ರಜ್ಞಾವಾಹಿನಿಯಲ್ಲಿ, ಈ ಜಾತ್ಯತೀತ ಎಡಪಂಥೀಯರ ಜೊತೆಗೆ ಕೆಲವೊಮ್ಮೆ  ಸ್ವಾಮಿ ವಿವೇಕಾನಂದ ಹಾಗೂ ವಿ.ಡಿ. ಸಾವರ್ಕರ್ ಅವರಂಥ  ತೀವ್ರಗಾಮಿ ಹಿಂದೂಗಳೂ ಸೇರ್ಪಡೆಯಾಗುತ್ತಾರೆ.

ಭಾರತದಾದ್ಯಂತ ಅಂಗಡಿಗಳಲ್ಲಿ ಬೋಸ್, ವಿವೇಕಾನಂದ ಹಾಗೂ ಭಗತ್ ಸಿಂಗ್ ಅವರ  ಕ್ಯಾಲೆಂಡರ್‌ಗಳು, ಪೋಸ್ಟರ್‌ಗಳೂ ಕೂಡ ಗಾಂಧಿಯವರದಕ್ಕಿಂತ ಹೆಚ್ಚು ಮಾರಾಟವಾದರೂ ಆಗಬಹುದು. ಆದರೆ ಚೀನಾದಲ್ಲಿ ರಾಷ್ಟ್ರದ ಉದಯದ ಕಥಾನಕದಲ್ಲಿ ಸಾರ್ವಜನಿಕವಾದ `ಪ್ರತಿ ಕಥಾನಕ'ವಿಲ್ಲ. ಏಕೆಂದರೆ ಚೀನಾ ಪ್ರಜಾಪ್ರಭುತ್ವ ರಾಷ್ಟ್ರವಲ್ಲ. (ಹೀಗಾಗಿ ಅಧಿಕೃತ ಕಥಾನಕದ ಬಗ್ಗೆ ನಾಗರಿಕರು ಬಹಿರಂಗ ಸವಾಲು ಹಾಕಲಾಗುವುದಿಲ್ಲ). ಅಥವಾ ಬಹುಶಃ ಪಿಎಲ್‌ಎ ನ ಭಾರಿ ಉಪಸ್ಥಿತಿ, ಹಾಗೆಯೇ ಹಗೆ ಸಾಧಿಸುವ ವಿದೇಶಿಯರ ಬೆದರಿಕೆಯಡಿ ಇರುವುದಾಗಿ ರಾಷ್ಟ್ರ ಭಾವಿಸುವುದೂ ಈ ಸ್ಥಿತಿಗೆ ಕಾರಣವಾಗಿರಬಹುದು.

ಕ್ಸಿಯಾಮೆನ್‌ನಲ್ಲಿ ಸಂಚರಿಸುತ್ತಿದ್ದಾಗ, ಮತ್ತೊಂದು ಅಷ್ಟೇ ವೀರೋಚಿತವಾದಂತಹ ಸಾರ್ವಜನಿಕ ಕಲೆಯ ಮಾದರಿ ನನ್ನ ಗಮನ ಸೆಳೆಯಿತು.  ಇದು ರಾಷ್ಟ್ರವಾಗಿ ಚೀನಾದ ಉದಯಕ್ಕಿಂತ ವಿಶ್ವದ ರಂಗದಲ್ಲಿ ಚೀನಾದ ಆಗಮನವನ್ನು ಸೆರೆ ಹಿಡಿಯುವಂತಹದ್ದಾಗಿತ್ತು. ಈ ನಗರ `ವಿಶ್ವದಲ್ಲೇ ಅತ್ಯಂತ ಮೋಹಕ ಮ್ಯಾರಥಾನ್‌ಗೆ ನೆಲೆ'ಯಾಗಿದೆ ಎಂದು ನಮ್ಮ ಗೈಡ್ ಹೇಳಿದ.  ಗೂಗಲ್‌ನಲ್ಲಿ ಶೋಧಿಸಿದಾಗ ಇದು ನಿಜವಲ್ಲವೇನೊ ಎನಿಸಿತು. ಏಕೆಂದರೆ ಕೇಪ್ ಟೌನ್ ಮ್ಯಾರಥಾನ್ ಇದೆ. 

ಆದರೆ ಈ ಓಟದ ಮಾರ್ಗ  ಅತ್ಯಂತ ಮೋಹಕವಾಗಿರುವುದು ನಿಜ. ಕಡಲ ಬದಿಯ ವಿಹಾರದ  ತಾಣದಲ್ಲಿ ಮೈಲುಗಟ್ಟಲೆ ಓಟಕ್ಕೆ ಅವಕಾಶವಿದೆ.  ಒಂದು ಬದಿಯಲ್ಲಿ ತಂಗಾಳಿಗೆ ತಲೆದೂಗುವ ತಾಳೆಮರಗಳಿವೆ. ಮತ್ತೊಂದೆಡೆ ಕಡಲಿಗೆ ಎದುರಾಗಿ ದೊಡ್ಡ ದೊಡ್ಡ ನಿವಾಸಗಳು ಹಾಗೂ ಐಷಾರಾಮಿ ಹೋಟೆಲ್‌ಗಳಿವೆ. ಇದು ಅತಿ ಉದ್ದದ ಕಡಲ ಕಿನಾರೆ. 

ಆದರೆ ನಾವು ಕ್ಯಾಲಿಫೋರ್ನಿಯಾದ್ಲ್ಲಲಿ (ಅಥವಾ ಕೇಪ್ ಟೌನ್‌ನಲ್ಲಾಗಲಿ ಇಲ್ಲ )  ಇಲ್ಲ ಎಂಬುದನ್ನು  ಅಲ್ಲಿ ಪ್ರದರ್ಶನಕ್ಕಿಟ್ಟಿರುವ ಪ್ರತಿಮೆಗಳು ಸಾರಿ ಹೇಳುತ್ತವೆ. ರಸ್ತೆಯ ಎರಡು ಬದಿಯನ್ನು ವಿಭಜಿಸುವ ಹುಲ್ಲಿನ ಹಾದಿಯುದ್ದಕ್ಕೂ ಕಪ್ಪು ಶಿಲೆಯಲ್ಲಿ ಕೆತ್ತಿದ ಅನೇಕ  ಶಿಲ್ಪಗಳಿವೆ. ಮುನ್ನುಗ್ಗಿ ಹೆಜ್ಜೆ ಇಡುತ್ತಿರುವ ಓಟಗಾರ, ಆತನ ಕೆಳಕ್ಕೆ ಬಾಗಿದ ದೇಹ, ಮಧ್ಯದ್ಲ್ಲಲೇ  ನಿಂತು ಬಾಟಲ್‌ನಿಂದ ತಲೆಗೆ ನೀರೆರಚಿಕೊಳ್ಳುತ್ತಿರುವಾತ. ಮತ್ತೊಬ್ಬ ಬೇಸ್‌ಬಾಲ್ ಕ್ಯಾಪ್ ಧರಿಸಿದ ಅಥ್ಲೆಟ್ (ಬಹುಶಃ ಆತ ಅಮೆರಿಕನ್ ಇರಬೇಕೆಂದು ಭಾವಿಸುತ್ತೇನೆ) . ನಾಲ್ಕನೆಯಾತ ಸಿಕ್ಕುಗಟ್ಟಿದ ತಲೆಗೂದಲಿನವ. ಆತ ಆಫ್ರಿಕನ್ ಅಥವಾ  ನಿರ್ದಿಷ್ಟವಾಗಿ ಈ ಅಂತರರಾಷ್ಟ್ರೀಯ ರೇಸ್‌ನ ಇಥಿಯೋಪಿಯಾದ  ಆಯಾಮವನ್ನು ಪ್ರತಿನಿಧಿಸುವವನಾಗಿರಬಹುದು.

ಈ ಒಂದು ಓಟದ ಕಾರ್ಯಕ್ರಮವನ್ನು ಸೆರೆಹಿಡಿಯುತ್ತಿರುವ ಪತ್ರಿಕಾ ಛಾಯಾಗ್ರಾಹಕರ ಕ್ಯಾಮೆರಾಗಳತ್ತ ಹದ್ದಿನ ಕಣ್ಣಿಟ್ಟ ಇಬ್ಬರು ಸಾಧಾರಣ ದಿರಿಸು ಧರಿಸಿದ ವ್ಯಕ್ತಿಗಳು ಓಟಗಾರರಿಗೆ ಮುಂಚೆ ಕಂಡು ಬರುತ್ತಾರೆ.
ಆದರೆ ಈ  ಪ್ರತಿಮೆಗಳ ಪ್ರದರ್ಶನ, ಬೃಹತ್ತಾದ ಸುಂದರ ಸೇತುವೆ,  ಚೆಂದದ ಕಚೇರಿ ಕಟ್ಟಡಗಳು  ಅಥವಾ  ಕಸ ಮುಕ್ತವಾದ ಸ್ವಚ್ಛ  ರಸ್ತೆಗಳಷ್ಟು ನನ್ನ ಮೇಲೆ ಪ್ರಭಾವ ಬೀರಲಿಲ್ಲ. ಏಕೆಂದರೆ ಇದು ಆಳವಾದ ಸಾಂಸ್ಕೃತಿಕ ಅಭದ್ರತೆಯನ್ನು ಸೂಚಿಸುವಂತಹದ್ದಾಗಿತ್ತು.  ನ್ಯೂಯಾರ್ಕ್ ಅಥವಾ ಪ್ಯಾರಿಸ್ ಅಥವಾ ಲಂಡನ್ ಮ್ಯಾರಥಾನ್, ಈ ರೀತಿಯಲ್ಲಿ ಎಂದಾದರೂ ತಮ್ಮನ್ನು ಪ್ರದರ್ಶಿಸಿಕೊಳ್ಳುತ್ತವೆಯೆ?  ಬಹುಶಃ ಇಲ್ಲ. ಆ ನಗರಗಳಿಗೆ  ತಮ್ಮ ಜಾಗತಿಕ ಪ್ರಾಮುಖ್ಯವನ್ನು ಜಗಜ್ಜಾಹೀರುಗೊಳಿಸುವುದು ಅಗತ್ಯವಿರುವುದಿಲ್ಲ.

ವಿಶ್ವದ ವಿವಿಧ ಮೂಲೆಗಳಿಂದ ಅಥ್ಲೀಟ್‌ಗಳು  ತಮ್ಮಲ್ಲಿಗೆ ಬರುತ್ತಾರೆಂಬುದು  ಅವರಿಗೆ ಬಹಿರಂಗವಾಗಿ ಕೊಚ್ಚಿಕೊಳ್ಳುವ ವಿಚಾರವಾಗಿರುವುದಿಲ್ಲ. ಅಲ್ಲೆಲ್ಲಾ ವಾರ್ಷಿಕ ಮ್ಯಾರಥಾನ್‌ಗಳು ಆಳವಾದ ನಾಗರಿಕ ಇತಿಹಾಸದ ಜೊತೆಗೆ ಹಾಗೂ ಸಮಕಾಲೀನ ಗೊಂದಲಗಳ ಜೊತೆಗೂ ಬೆರೆತುಕೊಳ್ಳುತ್ತವೆ.

ಕಾಲು ಚಾಚಿ ಕಡಲ ಸೌಂದರ್ಯವನ್ನು ಕಣ್ಣುತುಂಬಿಕೊಳ್ಳಲು ಅನುವು ಮಾಡಿಕೊಡುವುದಕ್ಕಾಗಿ ಚಲಿಸುತ್ತಿದ್ದ ನಮ್ಮ ಬಸ್ ನಿಂತಿತು. ನನ್ನ ಸಹಪಯಣಿಗರು ಕಡಲ ಕಿನಾರೆಯತ್ತ ಸಾಗುತ್ತಿದ್ದಂತೆ ನನ್ನ ಕಣ್ಣು ದೊಡ್ಡದಾದ ಫಲಕದ ಮೇಲೆ ಬಿತ್ತು. ಬಸ್ ಒಳಗಿಂದ ಅದು ಸರಿಯಾಗಿ ಕಾಣುತ್ತಿರಲಿಲ್ಲ. 

ಎತ್ತರದ ಕಾಂಕ್ರೀಟ್ ಸ್ತಂಭಗಳ ಮೇಲೆ ಈ ಫಲಕ ಇತ್ತು.   ತೈವಾನ್ ಜಲಸಂಧಿಯಾಚೆಗೂ ಹರಡಿಕೊಂಡಂತೆ ಕಾಣಿಸುವ ಈ ಫಲಕದಲ್ಲಿ  ಸುಮಾರು 200 ಮೀಟರ್  ಉದ್ದಕ್ಕೆ  ಚೀನೀ ಅಕ್ಷರಗಳನ್ನು ಪ್ರದರ್ಶಿಸಲಾಗಿತ್ತು. ಚೀನೀ ಮಾತನಾಡುವ ಸಹಯಾತ್ರಿಗೆ ಅದನ್ನು ಓದಿ  ಅನುವಾದ ಮಾಡಿ ಹೇಳಬೇಕೆಂದು ಕೋರಿದೆ.

ಅದು ಡೆಂಗ್ ಕ್ಸಿಯಾಪಿಂಗ್ ಅವರ ಅತ್ಯಂತ ಪ್ರಸಿದ್ಧವಾದ ಹೇಳಿಕೆ, `ಒಂದು ದೇಶ, ಎರಡು ವ್ಯವಸ್ಥೆಗಳು'. ಈ ನುಡಿಗಟ್ಟನ್ನು ಡೆಂಗ್ ಅವರು ಸೃಷ್ಟಿಸಿದ್ದು 1980ರ ದಶಕದಲ್ಲಿ.  ಚೀನಾದೊಂದಿಗೆ ಮರು ವಿಲೀನಗೊಳ್ಳಲು ಹಾಂಗ್‌ಕಾಂಗ್ , ಮಕಾವ್ ಹಾಗೂ ತೈವಾನ್‌ಗಳಿಗೆ ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು.  ಪೀಪಲ್ಸ್ ರಿಪಬ್ಲಿಕ್‌ನ ಭಾಗವಾಗಿ ರಾಜಕೀಯ ಸ್ವಾಯತ್ತೆಯನ್ನು ಕಳೆದುಕೊಂಡ ಮೇಲೂ  ತಂತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು  ಕಾಪಾಡಿಕೊಳ್ಳಬಹುದೆಂದು ಈ ಬಂಡವಾಳಶಾಹಿ ಪ್ರದೇಶಗಳಿಗೆ  ಆಶ್ವಾಸನೆ ನೀಡುವ ಮಾತಾಗಿತ್ತು ಅದು.

ಮಕಾವ್ ಹಾಗೂ ಹಾಂಕಾಂಗ್‌ಗಳು ಬೀಜಿಂಗ್‌ನ ಆಳ್ವಿಕೆಗೊಳಪಟ್ಟ ಪಿಆರ್‌ಸಿ ಯ  `ವಿಶೇಷ ಆಡಳಿತ ಪ್ರದೇಶ'ಗಳಾಗಿವೆ. ಆದರೆ ತೈವಾನ್ ಇನ್ನೂ  ಇದಕ್ಕೆ ಬಗ್ಗಿಲ್ಲ. ಹೀಗಾಗಿ  ಪೀತಿ ಮತ್ತು ಗದರಿಕೆಯನ್ನು ಬೆರೆಸಿ ಹಠಮಾರಿ ರಾಷ್ಟ್ರವನ್ನುದ್ದೇಶಿಸಿದ ಡೆಂಗ್ ನ  ನುಡಿಗಳವು. ರಾತ್ರಿಯ ವೇಳೆ ಕ್ಸಿಯಾಮೆನ್‌ಗೆ ಹತ್ತಿರವಿರುವ ದ್ವೀಪಗಳಿಗೆ ಎದ್ದು ಕಾಣಿಸುವಂತಿದ್ದವು ಅವು.  ತೈವಾನಿ ದೋಣಿ ಗಳಲ್ಲಿ ಪ್ರವಾಸದ ಮೋಜು ಮಾಡಲು ಬರುವವರಿಗೆ ಎದ್ದು ಕಾಣಿಸುವಂತಿತ್ತು ಈ ಫಲಕ.

ಚೀನಾ ಪ್ರಜಾತಂತ್ರ ರಾಷ್ಟ್ರವಲ್ಲ. ಹೀಗಾಗಿ ರಾಷ್ಟ್ರದ ಇತಿಹಾಸದ ಬಗ್ಗೆ ಕಮ್ಯುನಿಸ್ಟ್ ಪಕ್ಷದ ವ್ಯಾಖ್ಯಾನಕ್ಕೆ  ಯಾವುದೇ ಸಾರ್ವಜನಿಕ, ಸಾಮುದಾಯಿಕ ಸವಾಲು ಇರುವುದು ಸಾಧ್ಯವಿಲ್ಲ. ಆದರೆ ಕೆಲವೊಂದು ವ್ಯಕ್ತಿಗತ ಹಾಗೂ ಖಾಸಗಿ ಸವಾಲುಗಳಿರಬಹುದು.  ಉದಾಹರಣೆಗೆ ಚೀನೀ ಬುದ್ಧಿಜೀವಿಗಳು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ  ಈಗ ಗಾಂಧಿಯ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ಧರ್ಮಗಳ ಸಮನ್ವಯದ ಸಂದೇಶ ಹಾಗೂ ಅಹಿಂಸೆ ಕುರಿತಾಗಿ ಗಾಂಧಿಯ ತತ್ವಶಃ ಬದ್ಧತೆ ಬಗ್ಗೆ  ಅಪಾರ ಆಕರ್ಷಣೆ ಇದೆ.

ಚೀನಾದ ಪ್ರಮುಖ ಬ್ಲಾಗರ್ ಒಬ್ಬರು, ತಮ್ಮ ಹೋಮ್ ಪೇಜ್‌ನಲ್ಲಿ ಗಾಂಧಿಯ ಚಿತ್ರ ಹಾಕಿಕೊಂಡಿರುವುದನ್ನು ಇತ್ತೀಚಿನ ನನ್ನ ಚೀನಾ ಭೇಟಿಯಲ್ಲಿ ಕಂಡುಕೊಂಡೆ. ಗಾಂಧಿಯವರ ಮತ್ತೊಬ್ಬ ಅಭಿಮಾನಿ ಎಂದರೆ , ನೊಬೆಲ್ ಪ್ರಶಸ್ತಿ ವಿಜೇತ ಲಿಯು ಕ್ಸಿಯಾಬೊ. ನಾಗರಿಕರಿಗೆ  ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯ  ಕೇಳಿದ್ದಕ್ಕಾಗಿ ಜೈಲು ಸೇರಿದಾತ ಈತ.  `ನೊ  ಎನೆಮೀಸ್, ನೋ ಹೇಟ್ರೆಡ್' ಎಂಬ ಹೆಸರಿನ  ಅವರ ಪ್ರಬಂಧಗಳ ಸಂಕಲನವನ್ನು ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್ ಇತ್ತೀಚೆಗೆ  ಪ್ರಕಟಿಸಿದೆ. ಈ ಪುಸ್ತಕದ ಶೀರ್ಷಿಕೆಯೇ ಗಾಂಧಿವಾದವನ್ನು ಪ್ರತಿನಿಧಿಸುವಂತಿದೆ. ಗಾಂಧಿ ಕುರಿತಂತೆ ಅನೇಕ ಮೆಚ್ಚುಗೆಯ ನುಡಿಗಳು  ಈ ಪುಸ್ತಕದಲ್ಲಿವೆ.

  2000 ಜನವರಿಯಲ್ಲಿ ಲಿಯು ಕ್ಸಿಯಾಬೊ ಹೀಗೆ ಬರೆಯುತ್ತಾರೆ:
`ಕಮ್ಯುನಿಸಂನ ಕತ್ತಲಲ್ಲಿ ಕಳೆದ ಇತರ ರಾಷ್ಟ್ರಗಳ ಜನರಿಗೆ ಹೋಲಿಸಿದರೆ ಚೀನಾದಲ್ಲಿ ಪ್ರತಿರೋಧ ತೋರುವ ಜನತೆಯ ಸಾಧನೆ ಕಡಿಮೆಯೇ. ಎಷ್ಟೊಂದು ದೊಡ್ಡ ದೊಡ್ಡ ದುರಂತಗಳ ನಂತರವೂ  ವಾಕ್ಲಾವ್ ಹವೇಲ್‌ನಂತಹ  ನೈತಿಕ ನಾಯಕ ನಮ್ಮ ಬಳಿ ಈಗಲೂ ಇಲ್ಲ. ಸ್ವಹಿತ ಕಾಪಾಡಿಕೊಳ್ಳುವಂತಹ  ಸಾಧಾರಣಜನರ ಹಕ್ಕನ್ನು ಗೆದ್ದುಕೊಳ್ಳಲೂ  ನಿಸ್ವಾರ್ಥ ತ್ಯಾಗ ಮಾಡುವಂತಹ ನೈತಿಕ ದೈತ್ಯ ವ್ಯಕ್ತಿ ಸಮಾಜಕ್ಕೆ ಬೇಕಿರುತ್ತದೆ. ಪ್ರಭುತ್ವದ ದಮನದಿಂದ ಮುಕ್ತಿ ಅಥವಾ ಸ್ವಾತಂತ್ರ್ಯ ಗಳಿಸಿಕೊಳ್ಳಲು  ಸಕ್ರಿಯ ಪ್ರತಿರೋಧದ ಅಗತ್ಯವಿರುತ್ತದೆ.  ಇತಿಹಾಸವೆನ್ನುವುದು ವಿಧಿ ಬರಹವಲ್ಲ. ಏಕೈಕ ಹುತಾತ್ಮನ ಆಗಮನ  ರಾಷ್ಟ್ರದ ಚೈತನ್ಯವನ್ನೇ ಮೂಲಭೂತವಾಗಿ ಬದಲಿಸಬಲ್ಲುದು. ಹಾಗೂ ಅದರ ನೈತಿಕ ಎಳೆಯನ್ನು ಬಲ ಪಡಿಸಬಲ್ಲುದು. ಗಾಂಧಿಯವರು ಅಂತಹ ವ್ಯಕ್ತಿಯಾಗಿದ್ದರು'.

ಭಾರತದಲ್ಲಿ ನಮಗೆ ಗೊತ್ತಿರುವಂತೆ ಅನೇಕ ಮಾವೊವಾದಿಗಳಿದ್ದಾರೆ.  ಅವರು ನಡೆಸುವ ಕೆಲವೊಂದು ಹಿಂಸಾ ಚಟುವಟಿಕೆಗಳಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ಹಾಳುಗೆಡುವುದೂ ಸೇರಿದೆ. ಆದರೆ ಚೀನಾದಲ್ಲಿ ಕನಿಷ್ಠ ಒಂದಷ್ಟು ಮಂದಿಯಾದರೂ ಗಾಂಧಿವಾದಿಗಳಿದ್ದಾರೆ ಎಂಬುದನ್ನು ತಿಳಿಯುವುದು ಆಪ್ಯಾಯಮಾನವಾದದ್ದು. ಮಾವೊ ಹಾಗೂ ಅವರ ಪರಂಪರೆಗೆ  ಈ ಗಾಂಧಿವಾದಿಗಳು ಎಸೆಯುವ ಸವಾಲು ಸಶಸ್ತ್ರ ಹೋರಾಟವನ್ನು ಆಧರಿಸಿಲ್ಲ. ಆದರೆ ಸಕ್ರಿಯವಾದ, ಅಹಿಂಸಾತ್ಮಕ ಪ್ರತಿರೋಧವನ್ನಾಧರಿಸಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT