ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರಕ್ಕಿಂತ ರಿಪೇರಿಗೇ ಹಣ ಖರ್ಚು

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಕೊಳ್ಳುವಾಗ ನೀಡಿದ ಬೆಲೆಯಷ್ಟೇ ಹಣವನ್ನು ಅದರ ದುರಸ್ತಿಗೆ ನೀಡಬೇಕಾಗಿ ಬಂದ ಒಂದು ಕಳಪೆ ಉತ್ಪನ್ನ

ಮನೆಯಲ್ಲಿ ಇರಲೇಬೇಕಾದ ಸಾಧನಗಳಲ್ಲಿ ಬಟ್ಟೆ ತೊಳೆಯುವ ಯಂತ್ರ (ವಾಷಿಂಗ್ ಮೆಶಿನ್) ಕೂಡ ಸೇರಿದೆ. ಈ ವಾಷಿಂಗ್ ಮೆಶಿನ್ ಕೊಳ್ಳಬೇಕಾದರೆ ಏನನ್ನೆಲ್ಲಾ ಗಮನಿಸಬೇಕು ಎಂಬುದನ್ನು ಕಳೆದ ವಾರದ ಅಂಕಣದಲ್ಲಿ ಪರಿಶೀಲಿಸಲಾಗಿತ್ತು. ಮಾರುಕಟ್ಟೆಯಲ್ಲಿ ಹಲವಾರು ಕಂಪೆನಿಗಳ ವಾಷಿಂಗ್‌ ಮೆಶಿನ್‌ಗಳು ಲಭ್ಯವಿವೆ. ಅವೂ ಹಲವಾರು ಮಾದರಿಗಳಲ್ಲಿ ದೊರೆಯುತ್ತಿವೆ. ಈ ವಾರ ಅಂತಹ ಒಂದು ವಾಷಿಂಗ್ ಮೆಶಿನ್ ಕಡೆ ನಮ್ಮ ವಿಮರ್ಶಾ ನೋಟ ಬೀರೋಣ. ಅದುವೇ ವರ್ಲ್‌ಪೂಲ್‌ ಕಂಪೆನಿಯ ಸಂಪೂರ್ಣ ಸ್ವಯಂಚಾಲಿತ ವೈಟ್‌ ಮ್ಯಾಜಿಕ್ ಎಫ್ 65 (Whirlpool Whitemagic F65 6th Sense) ಮಾದರಿ.

ಗುಣವೈಶಿಷ್ಟ್ಯಗಳು
ಸಂಪೂರ್ಣ ಸ್ವಯಂಚಾಲಿತ, ಮೇಲುಗಡೆಯಿಂದ ಬಟ್ಟೆ ಹಾಕುವಂಥದ್ದು (top loading), 6 ಕಿಲೊಗ್ರಾಂ ಧಾರಣ ಶಕ್ತಿ, ತುಕ್ಕುನಿರೋಧ ಉಕ್ಕಿನ ಡ್ರಮ್, 8 ಪ್ರೋಗ್ರಾಮ್‌ಗಳು, 575 ವಾಟ್ ಶಕ್ತಿಯ ಮೋಟಾರ್, ಬಿಸಿ ಗಾಳಿಯ ಸೌಲಭ್ಯ ಇಲ್ಲ, ಕಸ ಸಂಗ್ರಹಕ್ಕೆ ಫಿಲ್ಟರ್ ಚೀಲ, ಡಿಜಿಟಲ್ ಡಿಸ್ಪ್ಲೇ ಪ್ಯಾನೆಲ್, ಬಟ್ಟೆಯನ್ನು ಸಾಬೂನಿನಲ್ಲಿ ನೆನೆಸಿಟ್ಟು ನಂತರ ತೊಳೆಯುವ ಸೌಲಭ್ಯ, ಇತ್ಯಾದಿ. 2008ರಲ್ಲಿ ಕೊಂಡುಕೊಂಡಾಗ ಅದರ ಬೆಲೆ ₹14,500.
ಇದರಲ್ಲಿ ಬಟ್ಟೆಯನ್ನು ಮೇಲಿನಿಂದ ಹಾಕಲಾಗುತ್ತದೆ.

ಎಷ್ಟು ಸಮಯ ತೊಳೆಯಬೇಕು, ನಂತರ ಎಷ್ಟು ನಿಮಿಷ ತಿರುಗಿಸಿ ಒಣಗಿಸಬೇಕು, ತೊಳೆಯುವ ಮೊದಲು ಬೇಕಿದ್ದರೆ ಎಷ್ಟು ಸಮಯ ಸಾಬೂನು ಪುಡಿ ಜೊತೆ ಮಿಶ್ರ ಮಾಡಿ ಇಡಬೇಕು, ಇತ್ಯಾದಿ ಎಲ್ಲ ಆಯ್ಕೆ ಮಾಡಿಕೊಳ್ಳಬಹುದು. ಒಮ್ಮೆ ಎಲ್ಲ ಆಯ್ಕೆಗಳನ್ನು ಮಾಡಿಕೊಂಡರೆ ಇದು ನೀರು ತೆಗೆದು ಕೊಳ್ಳುವುದು, ಸಾಬೂನು ಮಿಶ್ರ ಮಾಡಿಕೊಳ್ಳುವುದು, ತೊಳೆಯುವುದು, ಒಣಗಿಸುವುದು ಎಲ್ಲ ತಾನೇ ಮಾಡುತ್ತದೆ.

ವಾಷಿಂಗ್ ಮೆಶಿನ್‌ನಲ್ಲಿ ಡ್ರಮ್‌ನ ಮಧ್ಯದಲ್ಲಿ ನೆಲಕ್ಕೆ ಲಂಬವಾಗಿ ಪ್ಲಾಸ್ಟಿಕ್ಕಿನಿಂದ ತಯಾರಿಸಿದ ಒಂದು ಕೋಲಿನಾಕಾರದ ಸಾಧನವಿದೆ. ಡ್ರಮ್ ಪ್ರದಕ್ಷಿಣಾಕಾರವಾಗಿ ತಿರುಗುವಾಗ ಇದು ಅಪ್ರದಕ್ಷಿಣವಾಗಿ ತಿರುಗುತ್ತದೆ. ಈ ಕ್ರಿಯೆಯಿಂದಾಗಿ ಬಟ್ಟೆ ತಿಕ್ಕಲ್ಪಟ್ಟು ಇನ್ನಷ್ಟು ಶುಭ್ರವಾಗಿಸಲು ಇದು ನೆರವಾಗುತ್ತದೆ.  

ಈ ಬಟ್ಟೆ ತೊಳೆಯುವ ಯಂತ್ರದ ರಚನೆ ಮತ್ತು ವಿನ್ಯಾಸದಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ದೇಹ ಕಳಪೆಯಾಗೇನೂ ಇಲ್ಲ. ನೀರಿನ ಕೊಳವೆ ಹಿಂದುಗಡೆ ಇದೆ. ಅದನ್ನು ಮನೆಯ ನಳ್ಳಿಗೆ ಜೋಡಿಸಬೇಕು. ಎದುರುಗಡೆ ಎಲ್ಲ ಕೆಲಸಗಳನ್ನು ನಿಯಂತ್ರಿಸುವ ನಿಯಂತ್ರಕ ಫಲಕ ಇದೆ. ಅದು ಡಿಸ್ಪ್ಲೇ ಪ್ಯಾನೆಲ್ ಕೂಡ ಆಗಿದೆ. ಎಷ್ಟು ನೀರು ಬಳಸಬೇಕು, ಯಾವ ನಮೂನೆಯ ಬಟ್ಟೆಯನ್ನು ತೊಳೆಯಬೇಕು, ಎಷ್ಟು ನಿಮಿಷ ತೊಳೆಯಬೇಕು, ಎಷ್ಟು ನಿಮಿಷ ಒಣಗಿಸಬೇಕು, ತೊಳೆಯುವ ಮೊದಲು ಎಷ್ಟು ನಿಮಿಷ ಸಾಬೂನಿನಲ್ಲಿ ಅದ್ದಿಡಬೇಕು ಎಂದೆಲ್ಲ ಈ ನಿಯಂತ್ರಕ ಫಲಕದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. 

ನಾವು 1995-96ರ ಸಮಯದಲ್ಲಿ ತೈವಾನ್‌ನಲ್ಲಿ ಇದ್ದಾಗ ವರ್ಲ್‌ಪೂಲ್‌ ವಾಷಿಂಗ್ ಮೆಶಿನ್ ಬಳಸಿದ್ದೆವು. ಅದು ತುಂಬ ತೃಪ್ತಿದಾಯಕವಾಗಿತ್ತು. ಆಗ ಭಾರತದಲ್ಲಿ ವರ್ಲ್‌ಪೂಲ್‌ ಲಭ್ಯವಿರಲಿಲ್ಲ. 2008ರಲ್ಲಿ ನಾವು ನಮ್ಮ ಹಳೆಯ ಎರಡು ಡ್ರಮ್‌ಗಳ ವಿಡಿಯೋಕಾನ್ ವಾಷಿಂಗ್ ಮೆಶಿನ್ ಅನ್ನು ಎಸೆದು ಹೊಸದನ್ನು ಕೊಳ್ಳಲು ತೀರ್ಮಾನಿಸಿದಾಗ ತೈವಾನ್‌ನಲ್ಲಿನ ನಮ್ಮ ಅನುಭವದ ಆಧಾರದಿಂದ ವರ್ಲ್‌ಪೂಲ್‌ ಕೊಳ್ಳಲು ತೀರ್ಮಾನಿಸಿದೆವು.

ಅಂತೆಯೇ ಈ ಯಂತ್ರವನ್ನು ಜನವರಿ 2008ರಲ್ಲಿ ಕೊಂಡುಕೊಂಡೆವು. ಮೊದಲ ಎರಡು ವರ್ಷ ಮೆಶಿನ್ ಸರಿಯಾಗಿಯೇ ಕೆಲಸ ಮಾಡಿತು. ಬಟ್ಟೆ ತೊಳೆಯುವ ಕೆಲಸ ತೃಪ್ತಿದಾಯಕವಾಗಿತ್ತು. ಕೆಲವೊಮ್ಮೆ ಮಾತ್ರ ಬಟ್ಟೆ ಒಣಗಿಸುವಾಗ, ಎಂದರೆ ವೇಗವಾಗಿ ಡ್ರಮ್ ತಿರುಗುವಾಗ ಅದು ಭರತನಾಟ್ಯ ಮಾಡುತ್ತಿತ್ತು. ಆಗ ಅದನ್ನು ಸ್ವಲ್ಪ ಹಿಡಿದು ನಿಲ್ಲಿಸಬೇಕಾಗಿ ಬರುತ್ತಿತ್ತು.

ಇದಕ್ಕೆ ಎರಡು ವರ್ಷಗಳ ಗ್ಯಾರಂಟಿ ಇತ್ತು. ಗ್ಯಾರಂಟಿಯ ಅವಧಿ ಮುಗಿದು ಸರಿಯಾಗಿ ಎರಡೇ ತಿಂಗಳುಗಳಲ್ಲಿ ನಮ್ಮ ವರ್ಲ್‌ಪೂಲ್‌ ಯಂತ್ರದ ನಿಯಂತ್ರಕ ಫಲಕ (ಡಿಸ್ಪ್ಲೇ ಪ್ಯಾನೆಲ್) ಕೆಟ್ಟಿತು. ಗ್ಯಾರಂಟಿಯ ಅವಧಿ ಮುಗಿದಿದ್ದರಿಂದ ಹೊಸ ಪ್ಯಾನೆಲ್‌ಗೆ ₹2800 ನೀಡಬೇಕಾಯಿತು. ನಿಯಂತ್ರಕ ಫಲಕ ಅಳವಡಿಸಿದ ನಂತರ ಸರಿಯಾಗಿಯೇ ಕೆಲಸ ಮಾಡುತ್ತಿತ್ತು.

2013ರ ಏಪ್ರಿಲ್ ತಿಂಗಳಲ್ಲಿ ಮತ್ತೆ ಯಂತ್ರ ಕೈಕೊಟ್ಟಿತು. ಈ ಸಲ ನಿಯಂತ್ರಕ ಫಲಕ ಸರಿಯಾಗಿಯೇ ಇತ್ತು. ದುರಸ್ತಿಗೆ ಬಂದ ಕಂಪೆನಿಯ ಪ್ರತಿನಿಧಿ ಎಲ್ಲ ಪರಿಶೀಲಿಸಿ ಮೋಟಾರ್ ಮತ್ತು ಇನ್ನೂ ಹಲವು ಅಂಗಗಳು ಕೆಟ್ಟಿವೆ ಎಂದ. ಹೊಸ ಮೋಟಾರ್ ಮತ್ತು ಕೆಟ್ಟು ಹೋದ ಇತರೆ ಭಾಗಗಳನ್ನು ಬದಲಿಸಲು ಒಟ್ಟು ₹6440 ಖರ್ಚಾಯಿತು. ಅಷ್ಟೆಲ್ಲ ಖರ್ಚು ಮಾಡಿದ ಇಪ್ಪತ್ತೇ ದಿನಗಳಲ್ಲಿ ಮತ್ತೆ ಡಿಸ್ಪ್ಲೇ ಕೆಟ್ಟಿತು. ಮತ್ತೆ ಅದಕ್ಕೆ ₹2800 ಕಪ್ಪ ನೀಡಿ ಹೊಸತನ್ನು ಹಾಕಿಸಬೇಕಾಯಿತು.

ಈಗ ಎರಡು ವಾರಗಳ ಹಿಂದೆ ಪುನಃ ನಿಯಂತ್ರಕ ಫಲಕ (ಡಿಸ್ಪ್ಲೇ ಪ್ಯಾನೆಲ್) ಕೆಟ್ಟಿತು. ಕಂಪೆನಿಗೆ ಫೋನ್ ಮಾಡಿದರೆ ಅವರು ಬಂದು ಪರಿಶೀಲಿಸಿದ್ದಕ್ಕೆ ₹380 ಕೊಡಬೇಕು ಎಂದರು. ಈ ಯಂತ್ರ ತುಂಬ ಕಳಪೆ, ₹14,500ರ ಯಂತ್ರಕ್ಕೆ ನಾನು ಕೇವಲ 7 ವರ್ಷಗಳ ಅವಧಿಯಲ್ಲಿ ₹12 ಸಾವಿರ ಖರ್ಚು ಮಾಡಿದ್ದೇನೆ, ಇನ್ನೂ ಖರ್ಚು ಮಾಡಲು ಸಾಧ್ಯವಿಲ್ಲ ಎಂದೆಲ್ಲ ಗಲಾಟೆ ಮಾಡಿದ್ದಕ್ಕೆ ಕಂಪೆನಿಯವರು ಮಿಶಿನ್ ಅನ್ನು ಪರಿಶೀಲಿಸಲು ಜನ ಕಳುಹಿಸಿದ್ದಕ್ಕೆ ಹಣ ನೀಡುವ ಅಗತ್ಯವಿಲ್ಲ ಎಂಬ ರಿಯಾಯಿತಿ ನೀಡಿದರು.

ಕಂಪೆನಿಯ ತಂತ್ರಜ್ಞ ಬಂದು ಯಂತ್ರವನ್ನು ಬಿಚ್ಚಿ ನೋಡಿ ಅದರ ಪ್ಯಾನೆಲ್ ಕೆಟ್ಟಿದೆ. ಹೊಸದನ್ನು ಹಾಕಿಸಲು ₹2800 ಆಗುತ್ತದೆ ಎಂದ. ಒಂದು ಕಾಲದಲ್ಲಿ ನನಗೆ ಎಲೆಕ್ಟ್ರಾನಿಕ್ಸ್ ಹವ್ಯಾಸವಾಗಿತ್ತಾದುದರಿಂದ ಹಾಗೂ ನಾನು ಒಂದು ಕಾಲದಲ್ಲಿ ಭಾಭಾ  ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದುದರಿಂದ ನನಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ ಮತ್ತು ಅದರೊಳಗೆ ಇರುವ ಅಂಗಗಳ ಬಗ್ಗೆ ಸ್ವಲ್ಪ ಜ್ಞಾನವಿದೆ.

ತಂತ್ರಜ್ಞ ಯಂತ್ರವನ್ನು ಬಿಚ್ಚುವಾಗ ನಾನೂ ಪಕ್ಕದಲ್ಲೇ ನಿಂತುಕೊಂಡು ಪ್ಯಾನೆಲ್‌ನಲ್ಲಿ ಬಳಸಿದ ಎಲೆಕ್ಟ್ರಾನಿಕ್ ಅಂಗಗಳನ್ನು ಗಮನಿಸಿದೆ. ಅತಿ ಕಡಿಮೆ ಬೆಲೆಯ ಕಳಪೆ ಅಂಗಗಳನ್ನು ಬಳಸಿರುವುದು ನನ್ನ ಗಮನಕ್ಕೆ ಬಂತು.  ಇನ್ನೊಮ್ಮೆ ₹2800 ಖರ್ಚು ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಆದುದರಿಂದ ಈಗ ಮೆಶಿನ್ ಕೆಟ್ಟು ಮೂಲೆಯಲ್ಲಿ ಕುಳಿತಿದೆ.
*
ವಾರದ ಆಪ್

ಕೈಬರಹ ಗುರುತಿಸುವಿಕೆ
ಆಂಡ್ರಾಯಿಡ್ ಆಧಾರಿತ ಮೊಬೈಲ್ ಫೋನಿನಲ್ಲಿ ಕನ್ನಡವನ್ನು ಊಡಿಸಲು ಹಲವು ಕೀಲಿಮಣೆ ತಂತ್ರಾಂಶಗಳು ಲಭ್ಯವಿವೆ. ಚಿಕ್ಕ ಪರದೆಯಲ್ಲಿ ಇಂಗ್ಲಿಷಿನ  26 ಅಕ್ಷರಗಳ ಕೀಲಿಮಣೆಯ ವಿನ್ಯಾಸದಲ್ಲೇ ಕನ್ನಡದ 50 ಚಿಲ್ಲರೆ ಅಕ್ಷರಗಳನ್ನು ಊಡಿಸಲು ಸಾಧ್ಯವೇನೋ ಇದೆ. ಆದರೆ ವೇಗವಾಗಿ ಬೆರಳಚ್ಚು ಮಾಡಲು ಆಗುವುದಿಲ್ಲ. ನಾವು ಬರೆದುದನ್ನೇ ಪಠ್ಯವನ್ನಾಗಿ ಪರಿವರ್ತಿಸುವಂತಹ ಸೌಲಭ್ಯ ಇದ್ದರೆ ಒಳ್ಳೆಯದಲ್ಲವೇ? ಈಗ ಗೂಗ್ಲ್ ಅಂತಹ ಸೌಲಭ್ಯವನ್ನು ಕನ್ನಡಕ್ಕೆ ನೀಡಿದೆ.

ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ Google Handwriting Input ಎಂದು ಹುಡುಕಿ ಇದನ್ನು ಪಡೆಯಬಹುದು. ಕನ್ನಡದಲ್ಲಿ ಬರೆದುದನ್ನು ಇದು ಅರ್ಥಮಾಡಿಕೊಂಡು ಪಠ್ಯವನ್ನಾಗಿಸುತ್ತದೆ. ಚಿಕ್ಕಪುಟ್ಟ ದೋಷಗಳು ಉಳಿದುಕೊಂಡಿವೆ. ಅವನ್ನು ಗೂಗ್ಲ್ ಆದಷ್ಟು ಬೇಗನೆ ಸರಿಪಡಿಸುತ್ತದೆ ಎಂದು ಆಶಿಸೋಣ.
*
ಗ್ಯಾಜೆಟ್ ಸುದ್ದಿ

ಕಿಸೆಯಿರುವ ಧೋತಿ
ಧೋತಿ ಧರಿಸುವವರ ಸಮಸ್ಯೆಯೆಂದರೆ ತಮ್ಮ ಸ್ಮಾರ್ಟ್‌ಫೋನನ್ನು ಎಲ್ಲಿ ಇಟ್ಟುಕೊಳ್ಳುವುದು ಎಂದು. ಕೆಲವರು ಅದಕ್ಕೋಸ್ಕರ ಸೊಂಟಕ್ಕೆ ಚಿಕ್ಕ ಚೀಲವಿರುವ ಬೆಲ್ಟ್ ಧರಿಸುತ್ತಾರೆ. ಮತ್ತೆ ಕೆಲವರು ಚಿಕ್ಕ ಚೀಲವನ್ನು ಕುತ್ತಿಗೆಗೆ ನೇತಾಡಿಸುತ್ತಾರೆ. ಆದರೆ ಅವೆಲ್ಲ ನೋಡಲು ಅಷ್ಟೇನೂ ಚೆನ್ನಾಗಿ ಕಾಣಿಸುವುದಿಲ್ಲ. ಧೋತಿಯ ಒಳಗೆ ಚಡ್ಡಿ ಧರಿಸುವುದು ಹಳೆಯ ವಿಧಾನ. ಅದರಲ್ಲೂ ಸಮಸ್ಯೆಯಿದೆ.

ಎಲ್ಲರ ಮುಂದೆ ಧೋತಿ ಎತ್ತಿ ಚಡ್ಡಿಯ ಕಿಸೆಗೆ ಕೈಹಾಕುವುದು ಅಸಹ್ಯವಾಗಿ ಕಾಣಿಸುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರರೂಪವಾಗಿ ಈಗ ಕಿಸೆಯಿರುವ ಧೋತಿ ತಯಾರಾಗಿದೆ. ಇದನ್ನು ರೆಡಿಮೇಡ್ ಧೋತಿ ಎನ್ನಬಹುದು. ಧೋತಿಯನ್ನು ವೆಲ್ಕ್ರೋವನ್ನು ಬಳಸುವ ಮೂಲಕ ಸೊಂಟಕ್ಕೆ ಸುತ್ತಿ ನಿಲ್ಲಿಸಲಾಗುತ್ತದೆ. ಬಲಭಾಗದಲ್ಲಿ ಸ್ಮಾರ್ಟ್‌ಫೋನ್‌ ಅಥವಾ ಪರ್ಸ್ ಇಟ್ಟುಕೊಳ್ಳಲು ಕಿಸೆ ಇದೆ.
*
ಗ್ಯಾಜೆಟ್ ಸಲಹೆ
ರವಿಕುಮಾರರ ಪ್ರಶ್ನೆ: ನಾನು 10 ಇಂಚು ಗಾತ್ರದ ನೋಶನ್ ಇಂಕ್ ಕೈನ್ 2-ಇನ್-1 ಕೊಳ್ಳಬೇಕೆಂದುಕೊಂಡಿದ್ದೇನೆ. ಇಲ್ಲಿ 10 ಇಂಚು ಎನ್ನುವುದು ಉದ್ದವೇ ಅಥವಾ ಕರ್ಣವೇ?

ಉ: ಈ ಲ್ಯಾಪ್‌ಟಾಪ್‌ ಮಾತ್ರವಲ್ಲ. ಯಾವುದೇ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಟಿ.ವಿ., ಇತ್ಯಾದಿಗಳಲ್ಲಿ ಪರದೆಯ ಗಾತ್ರ ಇಷ್ಟು ಇಂಚು ಎಂದು ನಮೂದಿಸಿ ದರೆ ಅದು ಪರದೆಯ ಕರ್ಣದ ಉದ್ದ (diagonal) ಎಂದು ತಿಳಿಯಬೇಕು.
*
ಗ್ಯಾಜೆಟ್ ತರ್ಲೆ
ಮದುವೆಯಲ್ಲಿ ಫೋಟೊ ತೆಗೆಯಲು ಎಲ್ಲರೂ ಒದ್ದಾಡುತ್ತಾರೆ ತಾನೆ? ಅದಕ್ಕೆ ಪರಿಹಾರ ರೂಪವಾಗಿ ಹೊಸದೊಂದು ಡ್ರೋನ್ ಬಂದಿದೆ. ಅದು ಮಂಟಪದ ಮುಂದೆ ಹಾರಾಡುತ್ತಾ ಫೋಟೊ ತೆಗೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT