ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿ ಎಂಐ ಪ್ಯಾಡ್ ಅತ್ಯುತ್ತಮವಾಗಬಹುದಿದ್ದ ಟ್ಯಾಬ್ಲೆಟ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೈಕ್ರೋಸಾಫ್ಟ್‌ನವರಿಂದ ಅನ್ವೇಷಿಸಲಾದ, ಆದರೆ ಯಾರಿಗೂ ಗೊತ್ತಾಗದಿದ್ದು ನಂತರ ಆಪಲ್ ಐಪ್ಯಾಡ್ ಮೂಲಕ ಜಗತ್ತಿಗೆಲ್ಲ ಚಿರಪರಿಚಿತವಾದ ಟ್ಯಾಬ್ಲೆಟ್ ಲೋಕದಲ್ಲಿ ಆಂಡ್ರಾಯಿಡ್ ಟ್ಯಾಬ್ಲೆಟ್‌ಗಳು ಅಷ್ಟೇನೂ ಹೆಸರು ಮಾಡಿಲ್ಲ. ಭಾರತದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಂಡುಬರುವುದೇನೆಂದರೆ ಸ್ಮಾರ್ಟ್‌ಫೋನ್‌ಗಳ ಲೋಕದಲ್ಲಿ ಅಂದಾಜು ಶೇ 90ರಷ್ಟು ಆಂಡ್ರಾಯಿಡ್ ಆಧಾರಿತವಾಗಿವೆ. ಆದರೆ ಆಂಡ್ರಾಯಿಡ್ ಆಧಾರಿತ ಟ್ಯಾಬ್ಲೆಟ್‌ಗಳು ಅಷ್ಟೇ ವೇಗದಲ್ಲಿ ಮಾರಾಟವಾಗುತ್ತಿಲ್ಲ.

ಆಂಡ್ರಾಯಿಡ್ ಟ್ಯಾಬ್ಲೆಟ್‌ಗಳಲ್ಲಿ ಎಲ್ಲ ಗುಣವೈಶಿಷ್ಟ್ಯಗಳನ್ನೂ ಒಳಗೊಂಡಿದ್ದು ಅವೆಲ್ಲವೂ ಉತ್ತಮ ಗುಣಮಟ್ಟದ್ದೂ ಆಗಿದ್ದಲ್ಲಿ ಅಂತಹವುಗಳ ಬೆಲೆ ಸುಮಾರು ₹30 ಸಾವಿರದ ಆಸುಪಾಸು ಅಥವಾ ಅದಕ್ಕಿಂತ ಹೆಚ್ಚಿವೆ. ಹೀಗಿರುವಾಗ ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಕಡಿಮೆ ಬೆಲೆಗೆ ಉತ್ತಮ ಉತ್ಪನ್ನಗಳನ್ನು ನೀಡಿ ಕ್ರಾಂತಿ ಮಾಡುತ್ತಿರುವ  ಶಿಯೋಮಿ ಕಂಪೆನಿ ಒಂದು  ಟ್ಯಾಬ್ಲೆಟ್ ತಂದಿದೆ.  ಅದುವೇ ಶಿಯೋಮಿ ಎಂಐ ಪ್ಯಾಡ್ (Xiaomi Mi Pad). ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
2.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್, ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಪ್ರೊಸೆಸರ್, 2 + 16 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 2048x1536 ಪಿಕ್ಸೆಲ್ ರೆಸೊಲೂಶನ್‌ನ 7.9 ಇಂಚು ಗಾತ್ರದ ಐಪಿಎಸ್ ಪರದೆ, 8 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 5 ಮೆಗಾ ಪಿಕ್ಸೆಲ್‌ನ ಇನ್ನೊಂದು ಎದುರುಗಡೆಯ (ಸ್ವಂತೀ) ಕ್ಯಾಮೆರಾ, ಪೂರ್ತಿ ಹೈಡೆಫಿನಿಶನ್ (1080p) ವಿಡಿಯೊ ರೆಕಾರ್ಡಿಂಗ್, ವೈಫೈ, ಬ್ಲೂಟೂತ್, 202.1x135.4x8.5 ಮಿ.ಮೀ ಗಾತ್ರ, 360 ಗ್ರಾಂ ತೂಕ, 6700mAh ಬ್ಯಾಟರಿ, ಯುಎಸ್‌ಬಿ ಓಟಿಜಿ, ಇತ್ಯಾದಿ. ಬೆಲೆ ₹12,999 (flipkart.com).

ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್‌ ಕಿಂಡಿ ಮತ್ತು ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಪರದೆಯ ಕೆಳಭಾಗದಲ್ಲಿ ಎಂದಿನಂತೆ ಮೂರು ಸಾಫ್ಟ್‌ಬಟನ್‌ಗಳಿವೆ. ಹಿಂಭಾಗದ ಕವಚ ತುಂಬ ನುಣುಪಾಗಿದೆ. 8 ಇಂಚು ಗಾತ್ರದ್ದಾಗಿರುವುದರಿಂದ ಈ ನುಣುಪು ಕವಚದಿಂದಾಗಿ ಇದನ್ನು ಒಂದೇ ಕೈಯಲ್ಲಿ ಹಿಡಿದು ಕೊಂಡು ಕೆಲಸ ಮಾಡುವುದು ಸ್ವಲ್ಪ ಕಷ್ಟ. ಎಡಭಾಗದಲ್ಲಿ ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯವಿದೆ. ಹಿಂಭಾಗದ ಕೆಳಭಾಗದಲ್ಲಿ ಎರಡು ಸ್ಪೀಕರ್‌ಗಳಿವೆ.

ಶಕ್ತಿಶಾಲಿಯಾದ ಪ್ರೊಸೆಸರ್ ಮತ್ತು ಗ್ರಾಫಿಕ್ಸ್‌ಗೆಂದೇ ಅಧಿಕ ಪ್ರೊಸೆಸರ್ ಇರುವುದರಿಂದ ಇದರ ಕೆಲಸದ ವೇಗ ಚೆನ್ನಾಗಿದೆ. ಆಟ ಆಡಲಂತೂ ಇದು ಹೇಳಿ ಮಾಡಿಸಿದಂತಿದೆ. ಹಲವು ಆಟಗಳನ್ನು ಆಡಿ ನೋಡಿದೆ. ಎಲ್ಲವೂ ಚೆನ್ನಾಗಿಯೇ ಕೆಲಸ ಮಾಡಿದವು. ತುಂಬ ಹೊತ್ತು ಆಡಿದರೆ ತುಂಬ ಬಿಸಿಯಾಗು ತ್ತದೆ. ಜೊತೆಗೆ ಬ್ಯಾಟರಿಯೂ ಬೇಗ ಮುಗಿಯುತ್ತದೆ.

ಪರದೆಯ ಗುಣಮಟ್ಟ ತುಂಬ ಚೆನ್ನಾಗಿದೆ. ವಿಡಿಯೊ ವೀಕ್ಷಣೆಯ ಅನುಭವ ತುಂಬ ಚೆನ್ನಾಗಿದೆ. ಒಂದು ಸಣ್ಣ ಕೊರತೆಯೆಂದರೆ ಇದರ ಪರದೆಯ ಉದ್ದ:ಅಗಲ  ಅನುಪಾತ 4:3. ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವ 16:9 ಅನು ಪಾತ ಅಲ್ಲ. 16:9 ಅನುಪಾತದ ಚಲನಚಿತ್ರಗಳ ವೀಕ್ಷಿಸುವಾಗ ಪರದೆ ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಕಪ್ಪು ಪಟ್ಟಿಗಳಿದ್ದು ಅಷ್ಟು ಜಾಗ ನಿರುಪಯುಕ್ತವಾಗುತ್ತವೆ. ಪರದೆ ರೆಸೊಲೂಶನ್ ತುಂಬ ಚೆನ್ನಾಗಿದೆ. ಪೂರ್ತಿ ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ಅಡೆತಡೆಯಿಲ್ಲದೆ ವೀಕ್ಷಿಸಬಹುದು.

ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಉತ್ತಮ ಸಂಗೀತ ಆಲಿಸಲು ಇದನ್ನು ಬಳಸಬಹುದು. ಇದರ ಜೊತೆಗೆ ಇಯರ್‌ಫೋನ್‌ ನೀಡಿಲ್ಲ. ನೀವು ಉತ್ತಮ ಇಯರ್‌ಫೋನ್‌ ಜೋಡಿಸಿ ಸಂಗೀತ ಆಲಿಸುವುದು, ಚಲನಚಿತ್ರ ಅಥವಾ ವಿಡಿಯೊ ವೀಕ್ಷಣೆ ಮಾಡಬಹುದು. ಉತ್ತಮ ಆಡಿಯೊ ಇಂಜಿನ್ ಇರುವುದರಿಂದ ಆಟ ಆಡುವಾಗ ಇಯರ್‌ಫೋನ್‌ ಜೋಡಿಸಿಕೊಂಡರೆ ಅನುಭವ ಇನ್ನೂ ಚೆನ್ನಾಗಿರುತ್ತದೆ.

ಶಿಯೋಮಿ ಎಂಐ ಪ್ಯಾಡ್ ಟ್ಯಾಬಟ್‌ನಲ್ಇ ಹೆಸರಿಗೆ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಕ್ಯಾಮೆರಾ ಜೊತೆ ಫ್ಲಾಶ್ ಇಲ್ಲ. ಉತ್ತಮ ಬೆಳಕಿರುವಲ್ಲಿ ಹೊರಾಂಗಣ ಚಿತ್ರೀಕರಣ ಚೆನ್ನಾಗಿ ಮೂಡಿಬರುತ್ತದೆ. ವಿಡಿಯೊ ಚಿತ್ರೀಕರಣವೂ ಅಷ್ಟೆ. ಕಡಿಮೆ ಬೆಳಕಿರುವಲ್ಲಿ, ಮನೆಯ ಒಳಗೆ, ಫೋಟೊ ಅಥವಾ ವಿಡಿಯೊ ಚಿತ್ರೀಕರಣ ಅದ್ಭುತ ಎನ್ನುವಂತಿಲ್ಲ. ಎದುರುಗಡೆಯ ಸ್ವಂತೀ ಕ್ಯಾಮೆರಾವೂ ಅಷ್ಟಕ್ಕಷ್ಟೆ. ಉತ್ತಮ ಕ್ಯಾಮೆರಾ ಇರುವ ಟ್ಯಾಬ್ಲೆಟ್ ಅನ್ನು ನೀವು ಹುಡುಕುತ್ತಿರುವಿರಾದರೆ ಇದು ನಿಮಗಲ್ಲ. ಅಂದ ಹಾಗೆ ಯಾರಾದರೂ ಟ್ಯಾಬ್ಲೆಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಕ್ಯಾಮೆರಾದಂತೆ ಬಳಸುತ್ತಾರಾ?

ಈ ಟ್ಯಾಬ್ಲೆಟ್‌ನಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವಿಲ್ಲ. ಇದು ಒಂದು ದೊಡ್ಡ ಕೊರೆತೆಯೆಂದೇ ನನಗೆ ಅನ್ನಿಸುತ್ತಿದೆ. ವೈಫೈ ಮೂಲಕ ಮಾತ್ರ ಅಂತರಜಾಲ ಸಂಪರ್ಕ ಮಾಡ ಬಹುದು. ಜೊತೆಗೆ ಇನ್ನೂ ಒಂದು ಬಹುದೊಡ್ಡ ಕೊರತೆ ಇದೆ. ಈ ಟ್ಯಾಬ್ಲೆಟ್‌ನಲ್ಲಿ ಜಿಪಿಎಸ್ ಇಲ್ಲ. ಜಿಪಿಎಸ್, 3ಜಿ ಅಥವಾ 4ಜಿ ಮೂಲಕ ಅಂತರಜಾಲ, ಗೂಗ್ಲ್ ಮ್ಯಾಪ್, ಉತ್ತಮ ಕ್ಯಾಮೆರಾ ಎಲ್ಲ ನಿಮ್ಮ ಆವಶ್ಯಕತೆಗಳಾದರೆ ಈ ಟ್ಯಾಬ್ಲೆಟ್ ನಿಮಗಲ್ಲ.

ಈ ಟ್ಯಾಬ್ಲೆಟ್ ಬಳಸುತ್ತಿರುವುದು ಆಂಡ್ರಾಯಿಡ್ 4.4.4 ಕಾರ್ಯಾಚರಣ ವ್ಯವಸ್ಥೆಯ ಮೇಲೆ ಶಿಯೋಮಿಯವರೇ ಅಭಿ ವೃದ್ಧಿಪಡಿಸಿದ ಎಂಐಯುಐ 6.4. ಈ ಎಂಐಯುಐ ಬಳಸಿ ಅನುಭವವಿರುವವರಿಗೆ ಇದರ ವೈಶಿಷ್ಟ್ಯಗಳ ಪರಿಚಯವಿರ ಬಹುದು. ಆದರೆ ಇದರಲ್ಲಿರುವ ಎಂಐಯುಐ ಅಷ್ಟೇನೂ ಚೆನ್ನಾಗಿಲ್ಲ. ಯುಎಸ್‌ಬಿ ಓಟಿಜಿ ಸೌಲಭ್ಯವಿದೆ. 128 ಗಿಗಾಬೈಟ್ ತನಕ ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿ ಕೊಳ್ಳುವ ಸೌಲಭ್ಯವೂ ಇದೆ. ಆದರೆ ಇದರಲ್ಲೂ ಒಂದು ಕೊರತೆಯಿದೆ. ಕಿರುತಂತ್ರಾಂಶಗಳನ್ನು (ಆಪ್) ಈ ಮೈಕ್ರೊ ಎಸ್‌ಡಿ ಕಾರ್ಡ್‌ನಲ್ಲಿ ಇನ್‌ಸ್ಟಾಲ್‌ ಮಾಡಲು ಆಗುವುದಿಲ್ಲ. ಈಗಾಗಲೇ ಇನ್‌ಸ್ಟಾಲ್‌ ಆಗಿರುವ ಕಿರುತಂತ್ರಾಂಶಗಳನ್ನು ಎಸ್‌ಡಿ ಕಾರ್ಡ್‌ಗೆ ವರ್ಗಾಯಿಸಲೂ ಆಗುವುದಿಲ್ಲ.

ಒಟ್ಟಿನಲ್ಲಿ ಶಿಯೋಮಿಯವರು ಟ್ಯಾಬ್ಲೆಟ್ ಕೇತ್ರಕ್ಕೆ ಕಾಲಿಡಲು ಈ ಎಂಐ ಪ್ಯಾಡ್ ಮೂಲಕ ಪ್ರಯತ್ನಿಸಿದ್ದಾರೆ ಎನ್ನಬಹುದು. ಸ್ವಲ್ಪ ಜಾಸ್ತಿ ಪ್ರಯತ್ನಿಸಿದ್ದರೆ ಅಥವಾ ಇನ್ನೂ ಸ್ವಲ್ಪ ಸುಧಾರಣೆ ಗಳನ್ನು ಮಾಡಿ ನಂತರ ಮಾರುಕಟ್ಟೆ ಪ್ರವೇಶಿಸಿದ್ದರೆ ನೀಡುವ ಹಣಕ್ಕೆ ಅತ್ಯುತ್ತಮ ಟ್ಯಾಬ್ಲೆಟ್ ಅನ್ನಿಸಿಕೊಳ್ಳಬಹುದಿತ್ತು. 

ವಾರದ ಆಪ್
ಸೈನ್ಸ್ ಟುಡೇ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನ ಆಗುತ್ತಿರುವ ಬೆಳವಣಿಗೆ, ಸಂಶೋಧನೆ, ಸುದ್ದಿಗಳಲ್ಲಿ ನಿಮಗೆ ಆಸಕ್ತಿ ಇದೆಯೇ? ವಿಜ್ಞಾನದಲ್ಲಿ ಆಸಕ್ತಿಯಿರುವ ಎಲ್ಲರೂ ಹಲವು ಜಾಲತಾಣಗಳಿಗೆ ಭೇಟಿ ನೀಡಿ ಆಧುನಿಕ ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಇಂತಹ ಸುದ್ದಿಗಳನ್ನು ನಿಮ್ಮ ಆಂಡ್ರಾಯಿಡ್ ಫೋನಿನಲ್ಲೇ ಓದಬೇಕೆ? ಹಾಗಿದ್ದರೆ ನಿಮಗೆ ಸೈನ್ಸ್‌ ಟುಡೇ (Science Today) ಎಂಬ ಕಿರುತಂತ್ರಾಂಶ (ಆಪ್) ಬೇಕು. 

ಇದು ಸಂಶೋಧನಾ ಕೇತ್ರದಲ್ಲಿ ಕೆಲಸ ಮಾಡುವವರಿಗೆ, ಅಧ್ಯಾಪಕರಿಗೆ, ವಿಜ್ಞಾನದಲ್ಲಿ ಪದವಿ ಓದುತ್ತಿರುವವರಿಗೆಲ್ಲ ಪ್ರಯೋಜನಕಾರಿ. ಸುದ್ದಿಗಳನ್ನು ಹಲವು ವಿಭಾಗಗಳಲ್ಲಿ ನೀಡಲಾಗಿದೆ. ಯಾವುದಾದರೂ ಸುದ್ದಿಯನ್ನು ಓದಿದ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು.

ಗ್ಯಾಜೆಟ್ ಸುದ್ದಿ
ಬಾಂಬ್ ಪತ್ತೆಗೆ ನ್ಯಾನೋ ತಂತ್ರಜ್ಞಾನ

ಬಾಂಬ್ ಪತ್ತೆ ಮಾಡಲು ನಾಯಿಗಳನ್ನು ಬಳಸುವುದನ್ನು ಗಮನಿಸಿರಬಹುದು. ಕೆಟ್ಟ ಆಹಾರವನ್ನು ಪತ್ತೆ ಮಾಡಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಈಗ ಇವೆರಡನ್ನೂ ಒಟ್ಟಿಗೆ ಸುಲಭವಾಗಿ ನ್ಯಾನೋ ತಂತ್ರಜ್ಞಾನದ ಮೂಲಕ ಮಾಡುವ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಇದರಲ್ಲಿ ಅತಿ ತೆಳ್ಳಗಿನ ಸಾವಯವ ಫಿಲ್ಮನ್ನು ಬಳಸಲಾಗುತ್ತದೆ. ಅದು ವಾಯುವನ್ನು ಹೀರಿಕೊಂಡು ಅದನ್ನು ವಿಶ್ಲೇಷಿಸುತ್ತದೆ.

ಗ್ಯಾಜೆಟ್ ಸಲಹೆ
ಹೇಮಂತ ಅವರ ಪ್ರಶ್ನೆ: ಲುಮಿಯಾ 830 ಸ್ಮಾರ್ಟ್‌ಫೋನಿನ ಕ್ಯಾಮೆರಾ ಹೇಗಿದೆ?
ಉ: ಚೆನ್ನಾಗಿದೆ.

ಗ್ಯಾಜೆಟ್ ತರ್ಲೆ
ಪ್ರಶ್ನೆ: ಪ್ರಪಂಚದ ಅತಿ ದುಬಾರಿ ಸ್ವಂತೀ (ಸೆಲ್ಫೀ) ಯಾವುದು ಗೊತ್ತೇ?
ಉ: ಸಿದ್ದರಾಮಯ್ಯನವರ ಜೊತೆ ರಿಕಿ ಕೇಜ್ ತೆಗೆಸಿಕೊಂಡ ಸ್ವಂತೀ. ಆ ಫೋಟೊ ತೆಗೆಸಿಕೊಂಡ ತಕ್ಷಣ ಸಿದ್ದರಾಮಯ್ಯನವರು ರಿಕಿ ಕೇಜ್ ಅವರಿಗೆ ₹25 ಲಕ್ಷ ಬಹುಮಾನ ಘೋಷಿಸಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT