ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುರುವಾಗಲಿದೆ ತಾಯ್ನುಡಿ ಪರ ಯುದ್ಧ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸುಮಾರು ಒಂಬತ್ತು ವರ್ಷಗಳ ಕೆಳಗೆ ನಾವೆಲ್ಲ ಮಿತ್ರರು ದಲಿತ ಹಾಗೂ ರೈತ ಸಂಘಟನೆಗಳ ಜೊತೆ ಸೇರಿ, ಸರ್ಕಾರಿ ಶಾಲೆ­ಗಳಲ್ಲಿ ಒಂದನೇ ತರಗತಿಯಿಂದ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸಲು ಒತ್ತಾಯಿಸಿ  ಚಳವಳಿಯೊಂದನ್ನು ಶುರು ಮಾಡಿ­ದೆವು. ಈ ಚಳವಳಿಯನ್ನು ವಿರೋಧಿಸಿದ ಹಿರಿಯ ಸಾಹಿತಿಗಳು ‘ಇನ್ನೇನು ಕೋರ್ಟ್ ತೀರ್ಪು ಬರು­ತ್ತದೆ, ಕಾಯಿರಿ. ಆಗ ಎಲ್ಲ ಶಾಲೆಗಳಲ್ಲೂ ಕನ್ನಡ ಮಾಧ್ಯಮ ಕಡ್ಡಾಯವಾಗುತ್ತದೆ. ಇಂಗ್ಲಿಷನ್ನು ಐದನೇ ತರಗತಿಯಿಂದ ಎಲ್ಲರೂ ಕಲಿಯುತ್ತಾರೆ; ಎಲ್ಲರಿಗೂ ಸಮಾನ ಶಿಕ್ಷಣ ಬರುತ್ತದೆ’ ಎಂದು ವಾದಿಸುತ್ತಿದ್ದರು.

ಕಾರ್ಪೊರೇಟ್ ಯುಗದ ತೀರ್ಪುಗಳನ್ನು ಗಮ­ನಿಸುತ್ತಿದ್ದ ನಾನು ಅಂಥ ಆದರ್ಶ ತೀರ್ಪು ಬರುವ ಬಗ್ಗೆ ಅನುಮಾನ ಪಡುತ್ತಿದ್ದೆ; ಆ ತೀರ್ಪಿನ ನೆವ ಒಡ್ಡಿ ಹಳ್ಳಿ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯಲು ಅಡ್ಡಿ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷಾ ಕಲಿಕೆ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಜಾರಿಗೆ ಬಂತು. ಆದರೆ ಅನುದಾನ ಪಡೆಯದ ಶಾಲೆ­ಗಳು ಅಷ್ಟೊತ್ತಿಗಾಗಲೇ ಕನ್ನಡ ಮಾಧ್ಯಮವನ್ನು ತಪ್ಪಿಸಿಕೊಳ್ಳಲು ಐ.ಸಿ.ಎಸ್‌.ಸಿ., ಸಿ.ಬಿ.ಎಸ್‌.ಇ. ಪಠ್ಯ ಕ್ರಮಗಳನ್ನು ಅಳವಡಿಸಿಕೊಂಡಿದ್ದವು; ಇನ್ನು ಕೆಲವು ಶಾಲೆಗಳು ಕನ್ನಡ ಮಾಧ್ಯಮಕ್ಕೆ ಅನು­ಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿ­ಸ­ತೊಡಗಿದ್ದವು. ಈ ಗೊಂದಲ ಹಾಗೂ ಭ್ರಷ್ಟತೆಯ ಸೂತ್ರಧಾರಿಗಳು-  ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಶಿಕ್ಷಣದ ವ್ಯಾಪಾರಿಗಳು.

ಇಂಥ ಸ್ಥಿತಿಯಲ್ಲಿ ದೇಶಭಾಷೆಗಳನ್ನು ಉಳಿ ಸಲು ಈ ನಾಡಿನ ಅತ್ಯುನ್ನತ ಕೋರ್ಟು ಹೊಸ ಹಾದಿ ತೋರಬಹುದೆಂಬ ಪುಟ್ಟ ಆಸೆ ನನ್ನೊಳ ಗಿತ್ತು. ಆದರೆ ನಾಲ್ಕು ತಿಂಗಳ ಕೆಳಗೆ ‘ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡಿ’ ಎಂಬ ತೀರ್ಪು ಸುಪ್ರೀಂ ಕೋರ್ಟಿನಿಂದ ಬಂತು. ಇದೀಗ ಈ ಕುರಿತ ರಾಜ್ಯ ಸರ್ಕಾರದ ಮರು­ಪರಿಶೀಲನೆಯ ಅರ್ಜಿಯನ್ನೂ ಕೋರ್ಟು ವಜಾ ಮಾಡಿದೆ. ಕನ್ನಡ ಭಾಷೆಯ ಉಳಿವಿನ ಬಗ್ಗೆ ನಿಜವಾದ ಆತಂಕ ಎದುರಾಗತೊಡಗಿದೆ. ನಾಡಿನ ಎಲ್ಲ ಮಕ್ಕಳೂ ಒಂದೇ ಬಗೆಯ ಶಿಕ್ಷಣ ಪಡೆ­ಯಬಹುದೆಂಬ ಕನಸೂ ಈ ತೀರ್ಪಿನಿಂದ ಕಮರಿ ಹೋಗಿದೆ. ಈ ಹಿನ್ನೆಲೆಯಲ್ಲಿ, ಕಳೆದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟಿನ ತೀರ್ಪು ಬಂದಾಗ ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ಭಾಷಾ ವಿಜ್ಞಾನಿ ಕೆ.ವಿ. ನಾರಾಯಣ ಅವರು ಹೇಳಿದ ಕೆಲವು ಮಹತ್ವದ ಸಂಗತಿಗಳನ್ನು ಅನೇಕರು ಸರಿಯಾಗಿ ಗಮನಿಸಿರಲಿಕ್ಕಿಲ್ಲ: ‘ಈ ತೀರ್ಪು ಭಾಷಾ ಅಲ್ಪಸಂಖ್ಯಾತ ಹಾಗೂ ಅನುದಾನ ಪಡೆ­ಯದ ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆಯೇ ಹೊರತು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಎಲ್ಲ ಶಾಲೆಗಳನ್ನೂ ಅನುದಾನಕ್ಕೆ ಒಳಪಡಿಸಿದರೆ ಅಲ್ಲಿಯೂ ಕನ್ನಡ ಮಾಧ್ಯಮವನ್ನು ಜಾರಿಗೊಳಿ­ಸುವ ಅಧಿಕಾರ ಸರ್ಕಾರಕ್ಕಿರುತ್ತದೆ. ಜೊತೆಗೆ, 1983ರಲ್ಲಿ ಕರ್ನಾಟಕ ವಿಧಾನ ಮಂಡಲ ಅಂಗೀಕರಿಸಿ, 1995ರಲ್ಲಿ ರಾಷ್ಟ್ರಪತಿ ಅಂಕಿತ ಹಾಕಿದ ‘ಕರ್ನಾಟಕ ಶಿಕ್ಷಣ ಕಾಯ್ದೆ’ಯ ಅಧಿ­ಕಾರವನ್ನು ಬಳಸಿ ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿ­ಸಿದ ನಿಯಮಗಳನ್ನು ರೂಪಿಸಲು ಸಾಧ್ಯವಿದೆ’.

ಈ ದಿಕ್ಕಿನಲ್ಲಿ ಚಿಂತಿಸುತ್ತಲೇ ಇನ್ನೂ ಕೆಲವು ಸವಾಲುಗಳನ್ನು ನೋಡೋಣ: ಅರವತ್ತು ಸಾವಿ­ರದಷ್ಟಿರುವ ಕಿರಿಯ, ಹಿರಿಯ ಸರ್ಕಾರಿ ಪ್ರಾಥ­ಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಗಟ್ಟಿ­ಗೊಳಿಸುವುದು ಹೇಗೆ? ಕನ್ನಡ ವಿರೋಧಿಗಳಂತಿ­ರುವ ಅನೇಕ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಭಾಷೆಯಾಗಿಯಾದರೂ ಕಲಿಸು­ವುದು ಹೇಗೆ? ತಾಯ್ನುಡಿಯ ಜೊತೆಗೆ ಮಗು­ವಿಗಿ­ರುವ ಸಾವಯವ ಸಂಬಂಧದ ಬಗ್ಗೆ ತಿಳಿ­ವಳಿಕೆಯಿಲ್ಲದ ವಿದ್ಯಾವಂತ ಪೋಷಕರಿಗೆ, ತಮ್ಮ ಮಕ್ಕಳಿಗೆ ಒಂದು ಭಾಷೆಯಾಗಿಯಾದರೂ ಕನ್ನಡವನ್ನು ಕಲಿಸಲೇಬೇಕಾದ ಅನಿವಾರ್ಯತೆ­ಯನ್ನು ಹೇಳಿಕೊಡುವುದು ಹೇಗೆ? ಅದರಲ್ಲೂ ಹೊಣೆಗೇಡಿ ಕನ್ನಡಿಗ ಪೋಷಕರು ಬಾಲ್ಯದಲ್ಲೇ ತಮ್ಮ ಮಕ್ಕಳ ಕಲಿಕೆಗೆ ಕನ್ನಡದ ಬದಲಿಗೆ ಇಂಗ್ಲಿಷ್, ಸಂಸ್ಕೃತ, ಹಿಂದಿ ಭಾಷೆಗಳನ್ನು ಕೊಡಿ­ಸುತ್ತಿರುವ ಕಾಯಿಲೆಗೆ ಮದ್ದು ಕಂಡು ಹಿಡಿ­ಯುವುದು ಹೇಗೆ?

ಆದ್ದರಿಂದಲೇ ಶಾಲಾ ಕಲಿಕೆಗೆ ಸಂಬಂಧಪಟ್ಟ ಎಲ್ಲವನ್ನೂ ಪೋಷಕರ ತಿಳಿವಳಿಕೆಗೆ ಬಿಡುವುದು ನಿಜಕ್ಕೂ ಅಪಾಯಕಾರಿ. ಅನಂತಮೂರ್ತಿ ಅವರು ‘ತನ್ನ ಆಯ್ಕೆ ಏನೆಂದು ಮಗು ಏನು ಹೇಳು­ತ್ತದೆ ಎಂಬ ಬಗ್ಗೆ ಕೋರ್ಟು ಏನೂ ಹೇಳಿಲ್ಲವಲ್ಲ?’ ಎಂದು ಕೇಳಿದ್ದು ನೆನಪಾಗುತ್ತಿದೆ. ‘ಈ ತೀರ್ಪಿನಲ್ಲಿರುವ ಪೋಷಕರ ಆಯ್ಕೆ ಎಂಬು­ದನ್ನು ಹೇಗೆ ವ್ಯಾಖ್ಯಾನಿಸುವುದು?’ ಎಂದು ಮೊನ್ನೆ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರನ್ನು ಕೇಳಿದೆ;  ತಕ್ಷಣ ಅವರು ‘ಅದೇ ನನ್ನ ಪ್ರಶ್ನೆ ಕೂಡ. ಯಾರಾದರೂ ಪೋಷಕರು ‘ನಮ್ಮ ಮಕ್ಕಳಿಗೆ ಪಠ್ಯಕ್ರಮದಲ್ಲಿ ಗಾಂಧಿ ಚಿಂತನೆ ಬೇಡ; ಹಿಂಸೆಯ ಚಿಂತನೆಯನ್ನೇ ಕಲಿಸಿ’ ಎಂದು ಒತ್ತಾಯಿಸಿದರೆ ಸರ್ಕಾರ ಅದನ್ನು ಪಠ್ಯದಲ್ಲಿ ಸೇರಿಸಲು ಸಾಧ್ಯವೇ?’ ಎಂದರು. ಆದ್ದರಿಂದ ಪೋಷಕರ ಸ್ವಾತಂತ್ರ್ಯದ ಪ್ರಶ್ನೆಯನ್ನು ತೀರಾ ಅತಿಗೆ ಎಳೆಯಲಾಗದು. ಮಾಧ್ಯಮದ ಸಮಸ್ಯೆ ಬಗೆಹರಿಯುವ ತನಕ ಖಾಸಗಿ ಶಾಲೆ­ಗ­ಳಲ್ಲಿ ಕನ್ನಡ ಮಾತೃಭಾಷೆಯ ಮಕ್ಕಳು ಕಡ್ಡಾ­ಯ­ವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿ­ಯುವಂತೆ ಕಾನೂನು ಮಾಡಬೇಕು ಅಥವಾ ಕನ್ನಡಪರ ವಿದ್ಯಾರ್ಥಿಗಳು, ಬೋಧಕರು, ರಾಜ­ಕಾರಣಿ­ಗಳು, ಹೋರಾಟಗಾರರು ಮನೆಮನೆಗೆ ತೆರಳಿ ಪೋಷಕರ ಮನವೊಲಿಸಬೇಕು. ಅದು ಈ ವರ್ಷದಿಂದಲೇ ಶುರುವಾಗಬೇಕು. ಅಕ­ಸ್ಮಾತ್ ಮಕ್ಕಳು ಎರಡು, ಮೂರು ಅಥವಾ ಮುಂದಿನ ತರಗತಿಗಳಲ್ಲಿದ್ದು, ಈ ತನಕ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಅಲ್ಲಿಂದಲೇ ಕನ್ನಡ ಭಾಷೆಯ ಆಯ್ಕೆಗೆ ಅವಕಾಶ ಕಲ್ಪಿಸಬೇಕು.

ಒಂಬ­ತ್ತನೆಯ ತರಗತಿಯವರೆಗೆ ಯಾವ ಭಾಷೆ­ಯನ್ನಾದರೂ ಮಕ್ಕಳು ಆರಿಸಿ­ಕೊಳ್ಳಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶವಿದ್ದೇ ಇದೆ. ಇದರ ಜೊತೆಗೆ, ಇವತ್ತು ನಿಜಕ್ಕೂ ಕನ್ನಡ ಉಳಿಸುತ್ತಿರುವ ಕನ್ನಡ ಮಾಧ್ಯಮದ ಮಕ್ಕಳಿಗೆ ನಾವು ಕೊಡಬೇಕಾದ್ದೇನು ಎಂಬ ಬಗ್ಗೆ ಇಡೀ ಕರ್ನಾ­ಟಕ ಅತ್ಯಂತ ಜವಾಬ್ದಾರಿಯಿಂದ ಯೋಚಿ­ಸ­ಬೇಕಾಗಿದೆ. ಮೊದಲಿಗೆ ಮಾಡಬೇಕಾದ ಕೆಲಸ­ವೆಂದರೆ, ಆರನೆಯ ತರಗತಿಯಿಂದ ಸರ್ಕಾರಿ ಶಾಲೆ­ಗಳಲ್ಲಿ ವಿಜ್ಞಾನ, ಕಂಪ್ಯೂಟರ್ ವಿಷಯ­ಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಹೇಳಿಕೊಟ್ಟು ಆ ಮಕ್ಕಳನ್ನು ಇನ್ನಷ್ಟು ಸಮರ್ಥ­ರ­ನ್ನಾಗಿಸುವುದು. ಬಾಲ್ಯದಿಂದಲೂ ಕನ್ನಡ ಮಾಧ್ಯ­ಮ­ದಲ್ಲಿ ಕಲಿತವರಿಗೆ ಹೈಸ್ಕೂಲ್ ನಂತ­ರದ ಎಲ್ಲ ಕೋರ್ಸುಗಳಲ್ಲಿ, ಎಂಜಿನಿಯರಿಂಗ್, ಮೆಡಿಕಲ್ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿ ಪ್ರಮಾ­ಣ­ವನ್ನು ಹೆಚ್ಚಿಸಬೇಕು.

ಕನ್ನಡ ಮಾಧ್ಯಮದಲ್ಲಿನ ಕಲಿಕೆ ಲಾಭದಾಯಕವಾದರೆ ಎಲ್ಲರೂ ಇತ್ತ ತಿರು­ಗಲೇಬೇಕಾಗುತ್ತದೆ.  ಈ ಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ಸರ್ಕಾರ­ಗಳು, ಕನ್ನಡ ಹೋರಾಟ ವಲಯ ಹಾಗೂ ಸಾಹಿತ್ಯ ವಲಯ­ಗಳು ಸಂಪೂರ್ಣ ಸೋತಿವೆ. ಈ ಕಟು ಸತ್ಯವನ್ನು ಮೊದಲು ವಿನಯದಿಂದ ಒಪ್ಪಿ­ಕೊಳ್ಳಬೇಕು. ಹತ್ತಾರು ವರ್ಷಗಳ ಕಾಲ ಸಮ್ಮೇಳನಗಳು, ಅಕಾ­ಡೆಮಿಗಳು, ವಿಶ್ವವಿದ್ಯಾ­ಲಯ­ಗಳಿಗೆ ಕನ್ನಡ­ವನ್ನು ಉಳಿಸಿ ಬೆಳೆಸಲು ಸಾವಿರಾರು ಕೋಟಿ­ಗಳನ್ನು ಚೆಲ್ಲಲಾಗಿದೆ. ಆದರೆ ಇವತ್ತಿಗೂ ಹಳ್ಳಿಯ ಹುಡುಗ, ಹುಡುಗಿಯರು ವಿಜ್ಞಾನ, ಎಂಜಿನಿಯರಿಂಗ್, ಮೆಡಿಕಲ್ ಅಥವಾ  ಇನ್ನಿತರ ತಾಂತ್ರಿಕ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಓದಿಕೊಳ್ಳಲು ಹೊರಟರೆ ಅವರಿಗೆ ಪುಸ್ತಕಗಳೇ ಸಿಗುವುದಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಭಾಷೆಯನ್ನು ಬಳಸಬಲ್ಲ ವೈದ್ಯರೇ ಸಿಗದಿರುವ ಸ್ಥಿತಿ ಬಂದರೆ ಅದಕ್ಕೆ ನಾವೀಗ ಬೆಳೆಸುತ್ತಿರುವ ವ್ಯವ­ಸ್ಥೆಯೇ ಕಾರಣ. ಎಲ್ಲ ಬಗೆಯ ಜ್ಞಾನ, ವಿಜ್ಞಾನಗಳ ಪುಸ್ತಕಗಳನ್ನು ಕನ್ನಡಿಸಿ, ಬರೆಸಿ ಕನ್ನಡ ಮಾಧ್ಯಮದ ಹುಡುಗ, ಹುಡುಗಿಯರಿಗೆ ತಲುಪಿಸುವುದು ಕನ್ನಡ ಸಂಸ್ಥೆಗಳ ಮುಖ್ಯ ಕರ್ತವ್ಯವಾಗಬೇಕಾಗಿತ್ತು.
 
ಪುಟ್ಟ ಊರೊಂದರ ಜೂನಿಯರ್ ಕಾಲೇಜಿ­ನಲ್ಲಿ ಓದುವಾಗ ಕನ್ನಡ ಬರಹಗಾರನಾಗಲು ಪ್ರಯ­ತ್ನಿಸುತ್ತಿದ್ದ ನಾನು ಕೆಮಿಸ್ಟ್ರಿ, ಫಿಸಿಕ್ಸ್ ಪುಸ್ತಕ­ಗಳು ಕನ್ನಡದಲ್ಲಿ ಸಿಗಬಹುದೇ ಎಂದು ಹುಡು­ಕಾಡಿ, ಅವು ಸಿಕ್ಕದೇ ನಿರಾಶನಾಗಿದ್ದು ನೆನಪಾ­ಗು­ತ್ತಿದೆ. ಇದಾದ ಎಷ್ಟೋ ವರ್ಷಗಳ ನಂತರ, ಚಂದ್ರ­ಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾ­ಲಯದ ಕುಲಪತಿಗಳಾದಾಗ ಪಿ.ಯು.ಸಿ. ವಿದ್ಯಾ­ರ್ಥಿಗಳಿಗಾಗಿ ಕನ್ನಡದಲ್ಲಿ ಬರೆಸಿದ ವಿಜ್ಞಾನ ಪಠ್ಯ­ಗಳನ್ನು ಕಂಡು ರೋಮಾಂಚನವಾಗಿತ್ತು. ಕನ್ನಡ ವಿಶ್ವವಿದ್ಯಾಲಯ ಇಂಥದೊಂದು ಅದ್ಭುತ ಕೆಲಸ ಮಾಡುತ್ತಿದ್ದಾಗ, ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಂಸ್ಥೆಗಳು ಈ ಪುಸ್ತಕಗಳನ್ನು ಕೊಂಡು ಉಚಿತವಾಗಿ ಕರ್ನಾಟಕದುದ್ದಕ್ಕೂ ತಲುಪಿಸ ಬೇಕಾಗಿತ್ತು. ಹಾಗೆ ತಲುಪಿಸಿದ್ದರೆ, ಇಂಗ್ಲಿಷಿನಲ್ಲಿ ಉರು ಹೊಡೆದು ಗಿಳಿಪಾಠ ಒಪ್ಪಿಸುವ ಮೇಷ್ಟರ ಕಷ್ಟಗಳೂ, ಅದು ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಡುವ ಹುಡುಗ, ಹುಡುಗಿಯರ ಕಷ್ಟಗಳೂ ಕಡಿಮೆಯಾಗಿರುತ್ತಿದ್ದವು. ಇದಕ್ಕೆಲ್ಲ ಸರ್ಕಾರ­ಗಳನ್ನು ಬೈದು ಪ್ರಯೋಜನವಿಲ್ಲ. ಈ ಸಲದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ­ದಲ್ಲಾದರೂ ಇಡೀ ಸಮಸ್ಯೆಯನ್ನು ಸುಪ್ರೀಂ­ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಆಳವಾಗಿ ಚರ್ಚಿಸುವ, ಜನಾಭಿಪ್ರಾಯ ರೂಪಿಸುವ ಕೆಲಸ­ವನ್ನು ಜರೂರಾಗಿ ಮಾಡಬೇಕಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತೃ­ಭಾಷಾ ಮಾಧ್ಯಮದ ಪರವಾಗಿ ಎಲ್ಲ ರಾಜ್ಯ­ಗಳನ್ನೂ ಒಗ್ಗೂಡಿಸುವ, ಸಂವಿಧಾನದ ತಿದ್ದು­ಪಡಿಗೆ ಒತ್ತಾಯ ಹೇರುವ ಮಾತಾಡುತ್ತಿದ್ದಾರೆ. ಆದರೆ ಈ ದೇಶದ ವಿಧಾನಸಭೆಗಳು ಹಾಗೂ ಪಾರ್ಲಿಮೆಂಟಿನಲ್ಲಿ ಈ ಬಗೆಯ ಮಹತ್ತರ ಚರ್ಚೆಗಾಗಿ ಒಗ್ಗೂಡುವ, ಸಮಸ್ಯೆಯನ್ನು ಆಳ­ವಾಗಿ ಚರ್ಚಿಸುವ ಮನಸ್ಥಿತಿ, ಸಿದ್ಧತೆ, ಬದ್ಧತೆ ಇನ್ನೂ ಉಳಿದಿದೆಯೇ? ಅದಕ್ಕಾಗಿ ಒತ್ತಾಯ ಹೇರುವ ಇಚ್ಛಾಶಕ್ತಿ ಹಾಗೂ ಸಂಘಟನಾ ಬಲ ಕನ್ನಡ ಸಂಘಟನೆಗಳು ಹಾಗೂ ಇತರ ರಾಜ್ಯಗಳ ದೇಶಭಾಷಾ ಸಂಘಟನೆಗಳಿಗೆ ಇದೆಯೇ? ಅದೇನೇ ಇದ್ದರೂ, ಒಂದು ಮಹತ್ವದ ಚಾರಿ­ತ್ರಿಕ ಬೆಳವಣಿಗೆಯಂತೂ ಇದೀಗ ದೇಶದಾ­ದ್ಯಂತ ಶುರುವಾಗಿದೆ.

ದೇಶಭಾಷೆಗಳ ಉಳಿವಿನ ಬಗೆಗಿನ ನಿಜವಾದ ಆತಂಕ ಹಬ್ಬತೊಡಗಿದೆ. ವಿಶಾಲ ನಾಯಕತ್ವ ದೊರೆತರೆ ಸದ್ಯದಲ್ಲೇ ಇದು ರಾಷ್ಟ್ರ­ವ್ಯಾಪಿ ಆಂದೋಲನವಾಗಲಿದೆ. ಯಾವುದೇ ಪ್ರಶ್ನೆ­ಯನ್ನು ಕೇವಲ ಭಾವನಾತ್ಮಕ ವಿಷಯ­ವ­ನ್ನಾಗಿ ಮಾಡುವುದು ಒಂದು ದೃಷ್ಟಿ­ಯಿಂದ ತಪ್ಪು. ಆದರೆ ಮನುಷ್ಯ ತನ್ನನ್ನು ತಾನು ಸಹಜ­ವಾಗಿ ಮಂಡಿಸಲು ಇರುವ ಏಕಮಾತ್ರ ಮಾಧ್ಯ­ಮ­­ವಾದ ತಾಯ್ನುಡಿಯ ಉಳಿವಿಗೆ ಭಾವನಾತ್ಮಕ ಚಳವಳಿ ಮಾಡಿದರೆ ಏನೇನೂ ತಪ್ಪಲ್ಲ. ಬರುವ ವರ್ಷ ಫೆಬ್ರುವರಿ ಇಪ್ಪತ್ತೊಂದರಂದು ದೆಹಲಿ­ಯಲ್ಲಿ ನಡೆಯುವ ‘ಮಾತೃಭಾಷಾ ದಿವಸ’ದ ಬೃಹತ್ ಆಚರಣೆಗೆ ಕರ್ನಾಟಕವೂ ಸಜ್ಜಾಗ­ತೊಡಗಿದೆ. ಅಲ್ಲಿಂದ ಕನ್ನಡವೂ ಸೇರಿದಂತೆ ದೇಶ­ಭಾಷೆಗಳ ಉಳಿವಿನ ನಿರ್ಣಾಯಕ ಹೋರಾ­ಟಕ್ಕೆ ಚಾಲನೆ ಸಿಗಲಿದೆ. ಈ ನಿರ್ಣಾಯಕ ಹೋರಾ­ಟಕ್ಕೆ ಕನ್ನಡಿಗರು ಸಿದ್ಧವಾಗುವುದು ಅನಿವಾರ್ಯ­ವಾಗಿದೆ.

ಕೊನೆ ಟಿಪ್ಪಣಿ: ಜೋಗಾಸಿಂಗ್ ಎಂಬ ಮಾತೃಭಾಷಾವಾದಿ
ಮೊನ್ನೆ ಸುಪ್ರೀಂಕೋರ್ಟಿನ ತೀರ್ಪು ಬಂದ ದಿನ ಪಂಜಾಬಿನ  ಪ್ರಖ್ಯಾತ ಭಾಷಾ ವಿಜ್ಞಾನಿ ಜೋಗಾ­ಸಿಂಗ್ ಬರೆದರು: ‘ನಾವೀಗ ತಾಯ್ನುಡಿ­ಗಳ ಪರವಾದ ಯುದ್ಧದ ಮಧ್ಯದಲ್ಲಿದ್ದೇವೆ. ನಾನು ನನ್ನ ಬದುಕಿನ ಉತ್ತಮ ಭಾಗವನ್ನು ಈಗಾ­ಗಲೇ ಕಳೆದಿದ್ದೇನೆ. ಇನ್ನು ಈ ಮಹತ್ವದ ಉದ್ದೇಶಕ್ಕಾಗಿ ಪ್ರಾಣವನ್ನೇ ಕೊಡಲು ನಾನು ಸಿದ್ಧ’.

ಜಗತ್ತಿನ ಅನೇಕ ದೇಶಭಾಷೆಗಳ ಸ್ಥಿತಿಗತಿ­ಗಳನ್ನು ಜೀವಮಾನವಿಡೀ ಅಧ್ಯಯನ ಮಾಡಿ­ರುವ ಜೋಗಾಸಿಂಗ್, ಈಚೆಗೆ ಬೆಂಗಳೂರಿನಲ್ಲಿ ಆಡುತ್ತಿದ್ದ ಮಾತುಗಳನ್ನು ಕೇಳುತ್ತಿರುವಂತೆ ಇಂಗ್ಲಿಷ್ ಮಾಧ್ಯಮದ ಬಗೆಗಿನ ನನ್ನ ಭ್ರಮೆಗಳು ಕರಗತೊಡಗಿದವು.

ತಾಯ್ನುಡಿಗಳ ಪರವಾದ ಸಿದ್ಧಾಂತದ ಜೊತೆಗೆ ಚಳವಳಿಯನ್ನೂ ರೂಪಿಸುತ್ತಿರುವ ಜೋಗಾ­ಸಿಂಗ್ ಮೊನ್ನೆ ಹಲವು ದೇಶಗಳ ತಾಜಾ ಅಂಕಿ ಅಂಶಗಳನ್ನು ಕೊಡುತ್ತಿದ್ದರು: ಅಮೆರಿಕದ ನವಾಜೋ ಭಾಷೆಯ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೊದಲ ಭಾಷೆ ನವಾಜೋನಲ್ಲಿ ಕಲಿತರು; ಅವರ ಎರಡನೇ ಭಾಷೆ ಇಂಗ್ಲಿಷ್. ಅದೇ ಶಾಲೆಯಲ್ಲಿದ್ದ ನವಾಜೋ ಭಾಷೆಯ ಇನ್ನಿತರ  ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ಮೂಲಕ ಮಾತ್ರ ಕಲಿತರು. ಆದರೆ ತಮ್ಮ ಮೊದಲ ಭಾಷೆ ನವಾಜೋದಲ್ಲಿ ಕಲಿತವರು ಇಂಗ್ಲಿಷಿನಲ್ಲಿ ಕಲಿತ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ... ಎಲ್ಲರ ಕಣ್ತೆರೆಸುವ ಇಂಥ ವಿವರಗಳು ಜೋಗಾಸಿಂಗ್ ಅವರ punjabiuniversity. academia.edu/jogasingh ವೆಬ್‌ಸೈಟಿ ನಲ್ಲಿವೆ.

ಈಚೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ‘ಶಾಲಾ ಶಿಕ್ಷಣದಲ್ಲಿ ದೇಶಭಾಷೆ­ಗಳು’ ಪುಸ್ತಕದಲ್ಲಿ ಭಾರತದ ದೇಶ­ಭಾಷೆಗಳ ಸ್ಥಿತಿಗತಿ ಬಗ್ಗೆ ಜೋಗಾಸಿಂಗ್ ಹಾಗೂ ಇನ್ನಿತರ ಮುಖ್ಯ ಭಾಷಾ ವಿಜ್ಞಾನಿಗಳು ಮಾಡಿ­ರುವ ಮಹತ್ವದ ವಿಶ್ಲೇಷಣೆಗಳಿವೆ. ಸುಪ್ರೀಂ­ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಕನ್ನಡಿಗರು ಈ ಎಲ್ಲ­ವನ್ನೂ ಆಳವಾಗಿ ಚರ್ಚಿಸಿ ಕ್ರಿಯೆ­ಗಿಳಿ­ಯ­ಬೇಕಾದ ಅಗತ್ಯವಿದೆ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT