ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಸಮುದಾಯಗಳ ದೊಡ್ಡ ಸಾಧನೆ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಪಾರ್ಸಿಗಳ ಸಾಧನೆಗಳು ಬಹಳ ಪ್ರಸಿದ್ಧ. ಸುಮಾರು 70 ಸಾವಿರ ಜನರಿರುವ ಈ ಸಮುದಾಯ ಭಾರತದ ಶ್ರೇಷ್ಠ ದೇಶಪ್ರೇಮಿಗಳನ್ನು (ದಾದಾಭಾಯ್ ನವರೋಜಿ, ಬೈಕಾಜಿ ಕಮ) ಸೃಷ್ಟಿಸಿದೆ. ಹಾಗೆಯೇ ದೇಶದ ಪ್ರಮುಖ ಮತ್ತು ಸಮಾಜಸೇವೆಯ ಒಲವುಳ್ಳ ಉದ್ಯಮ ಸಂಸ್ಥೆಗಳು (ಟಾಟಾ, ಗೋದ್ರೆಜ್), ಅತ್ಯುತ್ತಮ ವಿಜ್ಞಾನಿ (ಹೋಮಿ ಭಾಭಾ),  ಅತ್ಯಂತ ಗೌರವಾನ್ವಿತ ವಕೀಲರು (ನಾನಿ ಪಾಲ್ಖೀವಾಲಾ, ಫಾಲಿ ನಾರಿಮನ್), ಅಚ್ಚುಮೆಚ್ಚಿನ ಲೇಖಕ (ರೋಹಿಂಟನ್ ಮಿಸ್ತ್ರಿ), ಜನಮೆಚ್ಚುಗೆಯ ಕ್ರಿಕೆಟಿಗರನ್ನು (ಪಾಲಿ ಉಮ್ರೀಗರ್, ಫಾರೂಕ್ ಎಂಜಿನಿಯರ್) ರೂಪಿಸಿದೆ. ಪಾರ್ಸಿಗಳು ತಮ್ಮ ಹುಟ್ಟೂರು ಪರ್ಷಿಯಾದಲ್ಲಿ ಧಾರ್ಮಿಕ ಕಿರುಕುಳ ಸಹಿಸಲಾಗದೆ ಭಾರತಕ್ಕೆ ಓಡಿ ಬಂದವರು. ತಮ್ಮ ತವರು ಎಂದು ಅವರು ಸ್ವೀಕರಿಸಿದ ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. 

ಆಧುನಿಕ ಭಾರತ ನಿರ್ಮಾಣದಲ್ಲಿ ಪಾರ್ಸಿಗಳ ಕೊಡುಗೆ ವ್ಯಾಪಕ ಮನ್ನಣೆ ಗಳಿಸಿದೆ. ಹೀಗಿದ್ದರೂ ಸಮುದಾಯದಲ್ಲಿನ ಜನನ ಪ್ರಮಾಣ ಬಹಳ ಬಹಳ ಕಡಿಮೆ. ಅದನ್ನು ಮನಗಂಡ ಭಾರತ ಸರ್ಕಾರ ಪಾರ್ಸಿ ಸಮುದಾಯದ ಯುವ ದಂಪತಿ ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಲು ಪ್ರೋತ್ಸಾಹಿಸುವುದಕ್ಕಾಗಿ ‘ಜಿಯೊ ಪಾರ್ಸಿ’ ಎಂಬ ಪ್ರಾಯೋಜಿತ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಮಕ್ಕಳು ಮುಂದೆ ಪ್ರತಿಭಾವಂತ ವಿಜ್ಞಾನಿಗಳು, ಉದ್ಯಮಿಗಳು, ಲೇಖಕರು ಮತ್ತು ಕಲಾವಿದರಾಗುತ್ತಾರೆ (ಕ್ರಿಕೆಟಿಗರು ಕೂಡ) ಎಂಬ ನಿರೀಕ್ಷೆಯಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಪಾರ್ಸಿಗಳಿಗಿಂತ ಬಹಳ ಕಡಿಮೆ ಪ್ರಸಿದ್ಧಿ ಪಡೆದ ಸಮುದಾಯ ಚಿತ್ರಾಪುರ ಸಾರಸ್ವತರದ್ದು. ಈಗ ದೇಶ ಮತ್ತು ಜಗತ್ತಿನಾದ್ಯಂತ ಪಸರಿಸಿರುವ ಇವರು ಕರ್ನಾಟಕ ಕರಾವಳಿಯ ಕೊಂಕಣಿ ಮಾತನಾಡುವ ಸಮುದಾಯ.

ಸುಮಾರು 25 ಸಾವಿರ ಜನಸಂಖ್ಯೆಯ ಈ ಸಮುದಾಯ ಹಲವು ಅಸಾಧಾರಣ ವ್ಯಕ್ತಿಗಳನ್ನು ರೂಪಿಸಿದೆ. ಅವರಲ್ಲಿ, ನಾಗರಿಕ ಸೇವೆಯ ಅಧಿಕಾರಿ ಮತ್ತು ಸಂವಿಧಾನ ತಜ್ಞರಾಗಿದ್ದ ಬಿ.ಎನ್. ರಾವ್ (ಸಂವಿಧಾನ ರಚನೆಯಲ್ಲಿ ಅವರ ಪಾತ್ರವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರೇ ಕೊಂಡಾಡಿದ್ದಾರೆ), ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ತಂದೆ ಮಗ- ನಾರಾಯಣ ಮತ್ತು ಭಾಸ್ಕರ ಚಂದಾವರ್ಕರ್, ನಟಿ ದೀಪಿಕಾ ಪಡುಕೋಣೆ, ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್, ನಾಟಕಕಾರ ಮತ್ತು ನಟ ಗಿರೀಶ ಕಾರ್ನಾಡ್, ಲೇಖಕ ಶಾಂತಾರಾಮ ರಾವ್, ಪತ್ರಕರ್ತ ಮತ್ತು ಲೇಖಕ ಬಿ. ಶಿವರಾವ್, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಬಿ. ರಾಮರಾವ್, ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಗಣಿತಶಾಸ್ತ್ರಜ್ಞ ರಮೇಶ್ ಗಂಗೊಳ್ಳಿ,

ಶಾಸ್ತ್ರೀಯ ಸಂಗೀತಗಾರರಾದ ದಿನಕರ ಕಾಯ್ಕಿಣಿ, ಲಲಿತ್ ರಾವ್, ಅದಿತಿ ಉಪಾಧ್ಯ ಮತ್ತು ಯೋಗೇಶ್ ಸಂಸಿ, ಉದ್ಯಮಿ-ಟೆಕ್ಕಿ ನಂದನ್ ನಿಲೇಕಣಿ ಮತ್ತು ಇನ್ನೂ ಹೆಚ್ಚಿನ ಮಹತ್ವ ಪಡೆದಿರುವ ಕಮಲಾದೇವಿ ಚಟ್ಟೋಪಾಧ್ಯಾಯ ಸೇರಿದ್ದಾರೆ. ಕಮಲಾದೇವಿ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದ್ದು ರಂಗಭೂಮಿ ಮೂಲಕ; ನಂತರ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು (ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಸೇರಿದರು), ನಂತರ ಅಸಹಕಾರ ಚಳವಳಿಯ ಪಾಠಗಳನ್ನು ಅಮೆರಿಕದ ದಕ್ಷಿಣ ಭಾಗಕ್ಕೆ ಒಯ್ದರು; ದೇಶ ವಿಭಜನೆ ನಂತರ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು; ಅದರ ನಂತರ ಕರಕುಶಲ ಕಲೆಯ ಪುನರುಜ್ಜೀವನದಲ್ಲಿ ಇನ್ನೂ ಮಹತ್ವದ ಪಾತ್ರ ವಹಿಸಿದರು

(ಈ ಮಧ್ಯದಲ್ಲಿ ಆಲ್ ಇಂಡಿಯಾ ವಿಮೆನ್ಸ್ ಕಾನ್‍ಫರೆನ್ಸ್, ಭಾರತೀಯ ಸಹಕಾರ ಒಕ್ಕೂಟ, ಸಂಗೀತ ನಾಟಕ ಅಕಾಡೆಮಿ, ಕೇಂದ್ರ ಗುಡಿ ಕೈಗಾರಿಕೆಗಳ ಸಂಸ್ಥೆ, ಭಾರತೀಯ ಕರಕುಶಲ ಮಂಡಳಿ, ಕರಕುಶಲ ವಸ್ತುಸಂಗ್ರಹಾಲಯ, ಭಾರತೀಯ ಅಂತರರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲು ನೆರವಾದರು). ಚಿತ್ರಾಪುರ ಸಾರಸ್ವತರು ತಮ್ಮ ಬಗ್ಗೆ ಇರುವ ಅತಿಯಾದ ಹೆಮ್ಮೆಯಿಂದ ತಮ್ಮನ್ನು ‘ಅಮ್ಚೀಸ್’ (ನಮ್ಮವರು) ಎಂದು ಕರೆದುಕೊಳ್ಳುತ್ತಾರೆ. ಮೇಲೆ ಪಟ್ಟಿ ಮಾಡಿದ ಯಾವುದೇ ವ್ಯಕ್ತಿಯನ್ನು ‘ಅಮ್ಚಿ’ ಎಂದು ಪರಿಗಣಿಸಬಹುದು; ಇವರಿಗಿಂತ ಕಡಿಮೆ ಪ್ರಸಿದ್ಧಿ ಹೊಂದಿರುವ ವ್ಯಕ್ತಿಯೊಬ್ಬರು ಕಳೆದ ವಾರ ಬೆಂಗಳೂರಿನಲ್ಲಿ ನಿಧನರಾದರು. ಅವರ ಹೆಸರು ತಾರಾ ಚಂದಾವರ್ಕರ್; ತಾರಾ ಅವರ ಜೀವನ ಅವರು ಅಪಾರವಾಗಿ ಮೆಚ್ಚುತ್ತಿದ್ದ ಕಮಲಾದೇವಿ ಅವರಷ್ಟೇ ವೈವಿಧ್ಯಮಯವಾದುದು (ಅವರು ಪರಸ್ಪರ ಸಂಬಂಧಿಕರೂ ಹೌದು).

ತಾರಾ ರಾಮರಾವ್ 1928ರಲ್ಲಿ ಮಂಗಳೂರಿನಲ್ಲಿ ಜನಿಸಿ ಅಲ್ಲಿಯೇ ವಿದ್ಯಾಭ್ಯಾಸ ಪಡೆದರು. ಬಿ.ಎ. ವ್ಯಾಸಂಗದ ನಡುವೆಯೇ ಹಿರಿಯರು ನಿಶ್ಚಯಿಸಿದಂತೆ ಮದುವೆಯಾಗಿ ಗಂಡ ಎನ್.ಪಿ. ಚಂದಾವರ್ಕರ್ ಜತೆ ಮೊದಲು ಮದ್ರಾಸ್‌ನಲ್ಲಿ ನೆಲೆಸಿ ನಂತರ ಬೆಂಗಳೂರಿಗೆ ಬಂದರು. ಬೆಂಗಳೂರಲ್ಲಿ ಎನ್.ಪಿ. ಚಂದಾವರ್ಕರ್ 1950ರಲ್ಲಿ ನಗರದ ವಾಸ್ತುಶಿಲ್ಪದ ಮೊದಲ ವೃತ್ತಿಪರ ಸಂಸ್ಥೆ ಕಟ್ಟಿದರು. ತಾರಾ ಅವರಿಗೆ ನಾಲ್ವರು ಮಕ್ಕಳು; ಕುಟುಂಬವನ್ನು ನೋಡಿಕೊಳ್ಳುವುದರ ಜತೆಗೆ ತಾರಾ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಗಂಭೀರ ಆಸಕ್ತಿಯನ್ನೂ ಹೊಂದಿದ್ದರು. ಹಲವು ಸಾರ್ವಜನಿಕ ವಲಯದ ಕಾರ್ಖಾನೆಗಳು  ಆರಂಭವಾಗುವುದರೊಂದಿಗೆ ಬೆಂಗಳೂರು ಮತ್ತು ಸುತ್ತಮುತ್ತ ಕಟ್ಟಡ ನಿರ್ಮಾಣ ಚಟುವಟಿಕೆ ಬಹಳ ವೇಗ ಪಡೆದುಕೊಂಡಿತು. ಹಾಗಾಗಿ ತಾರಾ ಅವರ ಗಂಡನ ಸಂಸ್ಥೆ ಭಾರಿ ಬೆಳವಣಿಗೆ ಕಂಡಿತು.

1963ರಲ್ಲಿ ತಾರಾ ಅವರ ಗಂಡ ನಿಧನರಾದರು. ಶ್ರೀಮಂತರಾಗಿದ್ದ ತಾರಾ ಅವರ ತಂದೆ ‘ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುತ್ತೇನೆ, ಮಂಗಳೂರಿಗೆ ಬನ್ನಿ’ ಎಂದು ತಾರಾ ಅವರನ್ನು ಆಹ್ವಾನಿಸಿದರು. ಆದರೆ ತಾರಾ ಅವರು ಗಂಡನ ವಾಸ್ತುಶಿಲ್ಪ ಉದ್ಯಮವನ್ನು ಮುಂದುವರಿಸಲು ನಿರ್ಧರಿಸಿದರು. ಅವರಿಗೆ ಈ ವೃತ್ತಿಯಲ್ಲಿ ಯಾವುದೇ ಔಪಚಾರಿಕ ಶಿಕ್ಷಣ ಇರಲಿಲ್ಲ; ಅವರಲ್ಲಿದ್ದದ್ದು ಅಸಾಧಾರಣ ಬುದ್ಧಿವಂತಿಕೆ ಮತ್ತು ಅದಕ್ಕೂ ಹೆಚ್ಚು ಅಸಾಧಾರಣವಾದ ಧೈರ್ಯ. ಪೇಸಿ ಥಾಕರ್ ಎಂಬ ಪಾಲುದಾರರನ್ನು ಸೇರಿಕೊಂಡು ತಾರಾ ವೃತ್ತಿ ಆರಂಭಿಸಿದರು. ಸಂಸ್ಥೆಯ ಹೆಸರು ಚಂದಾವರ್ಕರ್ ಅಂಡ್ ಥಾಕರ್ ಎಂದಾಯಿತು. ತಾರಾ ಅವರೇ ಕೆಲಸ ಕಲಿತರು ಮತ್ತು ವೃತ್ತಿಯಲ್ಲಿ ಮೇಲೇರಿದರು. ಎರಡು ದಶಕಗಳ ಕಾಲ ಚಂದಾವರ್ಕರ್ ಮತ್ತು ಥಾಕರ್ ಸಂಸ್ಥೆ ಮುನ್ನಡೆಸುವಲ್ಲಿ ತಾರಾ ಮಹತ್ವದ ಪಾತ್ರ ವಹಿಸಿದರು.

1980ರ ದಶಕದ ಕೊನೆಯಲ್ಲಿ ದೆಹಲಿ ಮತ್ತು ಅಮೆರಿಕದಲ್ಲಿ ವಾಸ್ತುಶಾಸ್ತ್ರ ಕಲಿತ ಮಗ ಪ್ರೇಮ್ ಬೆಂಗಳೂರಿಗೆ ಹಿಂದಿರುಗಿದರು. ನಂತರವೂ ಬಹಳ ವರ್ಷಗಳವರೆಗೆ ವೃತ್ತಿಯಲ್ಲಿ ತಾರಾ ಬಹಳ ಆಸಕ್ತಿ ಹೊಂದಿದ್ದರು. ಆದರೆ ಸಂಸ್ಥೆಯ ಪ್ರಮುಖ ಜವಾಬ್ದಾರಿಯನ್ನು ಪ್ರೇಮ್ ವಹಿಸಿಕೊಂಡರು. ಬೆಂಗಳೂರಿನ ಅತ್ಯಂತ ಗೌರವಾನ್ವಿತ ವಾಸ್ತುಶಿಲ್ಪ ಸಂಸ್ಥೆಯನ್ನು ನಡೆಸುವುದರ ಮಧ್ಯೆಯೂ ತಾರಾ ಅವರು ನಗರದ ಜೀವನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರು ಉಜ್ವಲ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿಗಳಲ್ಲಿ ಒಬ್ಬರು- ಈ ಟ್ರಸ್ಟ್ ಬೆಂಗಳೂರಿನ ಅತ್ಯುತ್ತಮ ಶಾಲೆಗಳಾದ ಅದಿತಿ ಮತ್ತು ಸೃಷ್ಟಿ ಸ್ಕೂಲ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯನ್ನು ನಡೆಸುತ್ತಿದೆ. ಅದಿತಿಯ ಮೊದಲ ಪ್ರಿನ್ಸಿಪಾಲ್ ಆಗಿದ್ದ ಆ್ಯನ್ ವಾರಿಯರ್ ಕಳೆದ ವರ್ಷ ನಿಧನರಾದಾಗ ತಾರಾ ಅವರ ಮಾತುಗಳು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತ್ತು;

ವಿವೇಕ ಮತ್ತು ಸಹಾನುಭೂತಿಯ ಮಿಶ್ರಣವಾಗಿದ್ದ ಆ ಮಾತುಗಳು ನಾನು ಕೇಳಿರುವ ಅತ್ಯುತ್ತಮ ನುಡಿನಮನ. ಯುವಜನರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ತಾರಾ, ಹಿರಿಯರಿಗೆ ಅಷ್ಟೇ ಕಾಳಜಿ ತೋರುತ್ತಿದ್ದರು. ಹಿರಿಯ  ನಾಗರಿಕರಲ್ಲಿ ಆತ್ಮಗೌರವ, ಘನತೆ ಮೂಡಿಸುವ ಆಶ್ವಾಸನ್ ಎಂಬ ಸಂಸ್ಥೆ ನಡೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಆಶ್ವಾಸನ್ ಬೆಂಗಳೂರಿನಲ್ಲಿ ಹತ್ತು ಕೇಂದ್ರಗಳನ್ನು ನಡೆಸುತ್ತಿದೆ. ವಿಚಾರ ಸಂಕಿರಣ, ಸಂವಾದ ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ಈ ಸಂಸ್ಥೆ ಸಾವಿರಾರು ಪಿಂಚಣಿದಾರರ ಜೀವನದಲ್ಲಿ ನೆಮ್ಮದಿ ಮೂಡಿಸಿದೆ. ಆಶ್ವಾಸನ್ ಹಿಂದಿನ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತಿರುವುದು ತಾರಾ ಅವರ ಆತ್ಮೀಯ ಗೆಳತಿ ಲಲಿತಾ ಉಭಯಕರ್. ತಾಯಿಯನ್ನು ಕಳೆದುಕೊಂಡ ನಂತರ ಅವರು ಈ ಸಂಸ್ಥೆ ಸ್ಥಾಪಿಸಿದರು.

ಕೆಲವು ವರ್ಷ ಹಿಂದೆ ಅವರು ತಮ್ಮ ಚಿಕ್ಕ ವಯಸ್ಸಿನ ಮಗನನ್ನೂ ಕಳೆದುಕೊಂಡರು. ಬಹಳ ಒಳ್ಳೆಯ ಶಾಸ್ತ್ರೀಯ ಸಂಗೀತಗಾರ್ತಿಯಾಗಿರುವ ಲಲಿತಾ ಮಗನ ಅಗಲಿಕೆಯ ನಂತರ ಹಾಡುವುದನ್ನು ನಿಲ್ಲಿಸಿದರು. ಯುವ ಸಂಗೀತಗಾರರನ್ನು ಪ್ರೋತ್ಸಾಹಿಸುವ ಮೂಲಕ ನೋವು ಮರೆಯುವಂತೆ ಲಲಿತಾರನ್ನು ಗೆಳತಿ ತಾರಾ ಸಂತೈಸಿದರು. ಹೀಗೆ ಹುಟ್ಟಿಕೊಂಡದ್ದು ದೇವನಂದನ ಉಭಯಕರ್ ಯುವ ಸಂಗೀತ ಉತ್ಸವ. ಯುವ ಹಾಡುಗಾರರು ಮತ್ತು ಸಂಗೀತಗಾರರ ಪ್ರತಿಭೆಯ ಪ್ರದರ್ಶನಕ್ಕಾಗಿಯೇ ನಡೆಯುವ ವಾರ್ಷಿಕ ಉತ್ಸವ ಇದು. ಈ ಉತ್ಸವ ಈಗ 28ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಸಿದ್ಧರಾಗುವ ಮೊದಲು ಈ ಉತ್ಸವದಲ್ಲಿ ಕಾರ್ಯಕ್ರಮ ನೀಡಿದವರಲ್ಲಿ ರಶೀದ್ ಖಾನ್, ಸಂಗೀತಾ ಶಂಕರ್, ಗುಂಡೇಚಾ ಸಹೋದರರು ಮತ್ತು ಕೌಶಿಕಿ ಚಕ್ರವರ್ತಿ ಸೇರಿದ್ದಾರೆ.

ದೀರ್ಘ ಕಾಲದಿಂದ ಸಂಪರ್ಕ ಇಲ್ಲದೇ ಇದ್ದರೂ  ನಾನು ತಾರಾ ಅವರನ್ನು ನನ್ನ ಹತ್ತಿರದ ಗೆಳತಿ ಎಂದೇ ಪರಿಗಣಿಸಿದ್ದೇನೆ. ನಮ್ಮ ನಡುವಣ ಸಂಬಂಧ ವಿವಿಧ ರೀತಿಗಳಲ್ಲಿತ್ತು: ಮಂಗಳೂರಿನಲ್ಲಿ ಬೆಳೆಯುತ್ತಿದ್ದಾಗಲೇ ನನ್ನ ತಂದೆ ಮತ್ತು ಅವರ ಸಹೋದರರ ಬಗ್ಗೆ ಆಕೆಗೆ ತಿಳಿದಿತ್ತು. ನನ್ನ ತಾಯಿಯ ತಂದೆ ಭಾರತೀಯ ಪ್ಲೈವುಡ್‌ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರಾಗಿದ್ದಾಗ ಆ ಸಂಸ್ಥೆಯ ಕಟ್ಟಡವನ್ನು ತಾರಾ ಅವರ ಸಂಸ್ಥೆ ವಿನ್ಯಾಸ ಮಾಡಿತ್ತು; ವಾಸ್ತುಶಿಲ್ಪದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ನನ್ನ ಹೆಂಡತಿ ಬಗ್ಗೆ ತಾರಾ ಅವರಿಗೆ ಬಹಳ ಅಕ್ಕರೆ. ಅವರು ಸ್ಥಾಪಿಸಲು ನೆರವಾದ ಶಾಲೆಗಳಲ್ಲಿ ನನ್ನ ಮಕ್ಕಳು ಕಲಿತಿದ್ದಾರೆ. ವಾರ್ಷಿಕ ಯುವ ಸಂಗೀತ ಉತ್ಸವದಲ್ಲಿ ನಾನು ಯಾವಾಗಲೂ ತಾರಾ ಮತ್ತು ಲಲಿತಾ ಉಭಯಕರ್‌ ಜತೆಗೆ ಕುಳಿತುಕೊಳ್ಳಲು ಬಯಸುತ್ತಿದ್ದೆ.

ಈ ಇಬ್ಬರೂ ಸಂಗೀತದ ಬಗ್ಗೆ ಬಹಳ ಹೆಚ್ಚು ತಿಳಿದವರು. ಇದಲ್ಲದೆ ಬೇರೆ ಹಲವು ವಿಚಾರಗಳನ್ನೂ ನಾವು ಮಾತನಾಡುತ್ತಿದ್ದೆವು. ಅವರಿಬ್ಬರೂ ಆಕರ್ಷಣೆ ಮತ್ತು ಮಮತೆಯ ಮಿಶ್ರಣ; ಜತೆಗೆ ದೊಡ್ಡ ಸಾಧನೆ ಮಾಡಿದವರು. ವೈಯಕ್ತಿಕ ನೋವಿನ ನಡುವೆಯೂ ಅವರು ಇಂತಹ ಸಾಧನೆ ಮಾಡಿದ್ದಾರೆ ಎಂಬುದು ಅವರ ಸಾಧನೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಲಲಿತಾ ಅವರಂತೆಯೇ ತಾರಾ ಅವರೂ ಮಗಳು ಮತ್ತು ಮೊಮ್ಮಗನನ್ನು ಕಣ್ಣ ಮುಂದೆಯೇ ಕಳೆದುಕೊಂಡಿದ್ದರು. ಬಹಳ ಹಿಂದೆಯೇ ಗಂಡನನ್ನು ಕಳೆದುಕೊಂಡರು. ಬೆಂಗಳೂರಿನಲ್ಲಿ ನಾನು ಅತ್ಯಂತ ಹೆಚ್ಚು ಇಷ್ಟಪಡುವ ಮಹಿಳೆ ತಾರಾ ಚಂದಾವರ್ಕರ್‌. ಉತ್ಸಾಹ ಮತ್ತು ಚೈತನ್ಯ ತುಂಬಿ ತುಳುಕುತ್ತಿದ್ದ, ಉದಾರಿ ಮತ್ತು ಒಳ್ಳೆಯ ಹಾಸ್ಯಪ್ರಜ್ಞೆಯ ವ್ಯಕ್ತಿ. ಪ್ಯಾಲೇಸ್‌ ಕ್ರಾಸ್‌ ರೋಡ್‌ನ ಅವರ ಮನೆಯಿಂದ ಆಹ್ವಾನ ಬರುವುದಕ್ಕಾಗಿ ನಾನು ಕಾಯುತ್ತಿದ್ದೆ. ಅಲ್ಲಿ ಮಾತು, ಆಹಾರ ಜತೆಗೆ ಸಂಗೀತ ಎಲ್ಲವೂ ಅತ್ಯುತ್ತಮವಾಗಿರುತ್ತಿದ್ದವು.

ಮಂಗಳವಾರ ಬೆಳಿಗ್ಗೆ ನನ್ನ ಮೆಚ್ಚಿನ ಸಂಗೀತ ಆಲಿಸುತ್ತಿದ್ದಾಗ ತಾರಾ ಚಂದಾವರ್ಕರ್‌ ಸಾವಿನ ಸುದ್ದಿ ತಿಳಿಯಿತು. ವೀಣೆ ವಿದ್ವಾನ್‌ ದೊರೆಸ್ವಾಮಿ ಅಯ್ಯಂಗಾರ್‌ ಮತ್ತು ಸರೋದ್‌ ಮಾಂತ್ರಿಕ ಅಲಿ ಅಕ್ಬರ್‌ ಖಾನ್‌ ಅವರ ಜುಗಲ್‌ಬಂದಿ ಕಾರ್ಯಕ್ರಮವನ್ನು ನಾನು ಆಲಿಸುತ್ತಿದ್ದೆ. ಅದು ಕಾಕತಾಳೀಯ– ಲಲಿತಾ ಮತ್ತು ಶಿವರಾಮ್‌ ಉಭಯಕರ್‌ ಮನೆಯಲ್ಲಿ 1962ರಲ್ಲಿ ನಡೆದ ಕಾರ್ಯಕ್ರಮದ ಧ್ವನಿಸುರುಳಿ ಅದು. ಆ ಕಾರ್ಯಕ್ರಮದಲ್ಲಿ ತಾರಾ ಮತ್ತು ಅವರ ಗಂಡ ಇದ್ದರು ಎಂಬುದು ಖಚಿತ. ನಂತರ ನಾನು ಮತ್ತು ನನ್ನ ಹೆಂಡತಿ ತಾರಾ ಅವರ ಮನೆಗೆ ಅಂತಿಮ ನಮನ ಸಲ್ಲಿಸಲು ಹೋದೆವು. ಅಲ್ಲಿ ಅಪಾರ ಪ್ರಮಾಣದಲ್ಲಿ ಅವರ ಅಭಿಮಾನಿಗಳು ಸೇರಿದ್ದರು. ಉಜ್ವಲ್‌ ಟ್ರಸ್ಟ್‌ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಸಂಗೀತ ಪ್ರೇಮಿಗಳು, ಬೆಂಗಳೂರಿನ ಬಹುತೇಕ ಎಲ್ಲ ವಾಸ್ತುಶಿಲ್ಪಿಗಳು, ಸಾಕಷ್ಟು ಸಂಖ್ಯೆಯಲ್ಲಿ ‘ಅಮ್ಚಿ’ಗಳು ಎಲ್ಲರೂ ಇದ್ದರು.

ಒಂದು ಮೂಲೆಯಲ್ಲಿ ಅದಿತಿ ಉಪಾಧ್ಯಾಯ ಸಣ್ಣ ಧ್ವನಿಯಲ್ಲಿ ಭಜನೆಗಳನ್ನು ಹಾಡುತ್ತಿದ್ದರು. ಅದರಲ್ಲಿ ಅವರ ದುಃಖವೆಲ್ಲವೂ ವ್ಯಕ್ತವಾಗುತ್ತಿತ್ತು. ಅದೇ ಕೋಣೆಯಲ್ಲಿ ಹಿಂದೆ ಹಲವು ಬಾರಿ ಅದಿತಿ ಅವರ ತಂದೆ ದಿನಕರ ಕಾಯ್ಕಿಣಿ ಹಾಡಿದ್ದರು. ಅವರ ಮನೆ ಪ್ರವೇಶಿಸುವ ಮುನ್ನ ಬೆಂಗಳೂರಿನ ಒಂದು ತುಣುಕು ಮರೆಯಾಯಿತು ಎಂಬ ಯೋಚನೆ ನನ್ನ ಮನದಲ್ಲಿ ಹಾದು ಹೋಯಿತು. ಆದರೆ ಅಲ್ಲಿದ್ದ ಗಂಡಸರು, ಹೆಂಗಸರು, ಯುವಜನರು, ಹಿರಿಯರನ್ನು ನೋಡಿದಾಗ, ಮನೆಯೊಳಗಿನಿಂದ ಕೇಳಿಬರುತ್ತಿದ್ದ ಮಧುರ ಸಂಗೀತವನ್ನು ಆಲಿಸಿದಾಗ ನಾನು ಮನಸ್ಸು ಬದಲಿಸಿದೆ. ತಾರಾ ಅವರ ಧೈರ್ಯ ಮತ್ತು ಘನತೆ, ಅವರ ಔದಾರ್ಯ ಮತ್ತು ಆಕರ್ಷಣೆ, ವೃತ್ತಿಪರ ಉತ್ಕೃಷ್ಟತೆ ಮತ್ತು ಸಾರ್ವಜನಿಕ ಸೇವೆಯ ಅತಿ ವಿಶಿಷ್ಟವಾದ ಸಂಯೋಜನೆಗಳೆಲ್ಲವೂ ಅವರಿಂದ ಪ್ರಭಾವಿತರಾದ ಬೆಂಗಳೂರಿಗರು ಮತ್ತು ಹೊರಗಿನವರ ಮಾತು ಮತ್ತು ಕೃತಿಯಲ್ಲಿ ಮೂಡಲಿವೆ. ತಾರಾ ಅವರ ಬದುಕು ಹೀಗೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT