ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ ಏರಿಳಿತಕ್ಕೆ ಕಾರಣ ಹಲವು

Last Updated 16 ಜೂನ್ 2018, 9:31 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಈ ವಾರ ಬಹಳ ಏರಿಳಿತ ಕಂಡುಬಂದಿದೆ. ಎಲ್ಲ ರೀತಿಯ ವಿಶ್ಲೇಷಣೆಗಳನ್ನು ಮೀರಿ ನಡೆದಿರುವ ಈ ಬೆಳವಣಿಗೆಗೆ ನಿರ್ದಿಷ್ಟ ಕಾರಣ ಇಲ್ಲ. ಈ ವಾತಾವರಣ ನಿರ್ಮಾಣವಾಗಲು ತಿಂಗಳು ಕೊನೆಯ ಗುರುವಾರ ಮೂಲ ಆಧರಿಸಿದ ಪೇಟೆಯ ಚುಕ್ತಾ ಚಕ್ರದ ಕೊನೆ ದಿನವಾಗಿದ್ದಿದ್ದು ಬಹುಮುಖ್ಯ ಕಾರಣ ಎನ್ನಬಹುದು.

ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಕಾರಣಕ್ಕೆ ಕೆಲವು ಕಂಪೆನಿಗಳು ಇಳಿಕೆ ಕಂಡರೆ, ಗಜಗಾತ್ರದ ವಹಿವಾಟಿನ ಕಾರಣ ಕೆಲವು ಕಂಪೆನಿಗಳು ರಭಸದ ಏರಿಳಿತ ಕಾಣುವಂತಾಯಿತು. ಉತ್ತಮ ಫಲಿತಾಂಶ ಪ್ರಕಟಿಸಿದರೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಕಾರಣಕ್ಕೆ ಕಾಲ್ಗೇಟ್ ಪಾಲ್ಮೊಲಿವ್, ಆಕ್ಸಿಸ್ ಬ್ಯಾಂಕ್, ಲಾರ್ಸನ್ ಅಂಡ್ ಟೊಬ್ರೋ  (ಎಲ್ ಅಂಡ್ ಟಿ) ಇಳಿಕೆ ಕಂಡರೆ, ಗಜಗಾತ್ರದ ಚಟುವಟಿಕೆ ಕಾರಣ ಸೋಲಾರ್ ಇಂಡಸ್ಟ್ರೀಸ್, ಎಸ್.ಕೆ.ಎಸ್ ಮೈಕ್ರೊ ಫೈನಾನ್ಸ್‌ಗಳು ರಭಸದ ಏರಿಳಿತ ಪ್ರದರ್ಶಿಸಿವೆ.

ತ್ರೈಮಾಸಿಕ ಫಲಿತಾಂಶ: ಲುಪಿನ್ ಫಲಿತಾಂಶ ಬಂದ ನಂತರ ಇಳಿಕೆ  ಕಂಡರೆ ವೋಕಾರ್ಡ್ 13 ರಂದು ಫಲಿತಾಂಶ ಪ್ರಕಟಿಸಲಿರುವ ಕಾರಣ ಮುಂಚೆಯೇ ಕುಸಿದಿದೆ. ಲಾರ್ಸನ್ ಅಂಡ್ ಟೊಬ್ರೋ ಕಂಪೆನಿಯ ಗೈಡನ್ಸ್ ತೃಪ್ತಿಕರವಾಗಿಲ್ಲವೆಂಬ  ಕಾರಣ ಕುಸಿತ ಕಂಡರೆ ಇದೇ ವಲಯದ ಬಿ.ಎಚ್‌.ಇ.ಎಲ್‌ ಮುನ್ನೆಚ್ಚರಿಕೆಯ ಕುಸಿತ ಕಂಡಿತು. 

ನವೆಂಬರ್ 5 ರಂದು ಷೇರು ಹಿಂಕೊಳ್ಳುವಿಕೆ ಪರಿಶೀಲಿಸುವ ಸುದ್ದಿ ಸನ್ ಟಿ.ವಿ ಷೇರಿನ ಬೆಲೆಯನ್ನು ₹376ರಿಂದ ₹411 ರವರೆಗೂ ಜಿಗಿಯುವಂತೆ ಮಾಡಿತು. ಎಂ.ಆರ್‌.ಎಫ್‌ ಕಂಪೆನಿ ಸಾಧನೆ ಕಳೆದ ತ್ರೈಮಾಸಿಕದ ಸಮೀಪವಿದ್ದು ಶುಕ್ರವಾರ ಷೇರಿನ ಬೆಲೆ ಸುಮಾರು ಒಂದೂವರೆ ಸಾವಿರ ರೂಪಾಯಿಗಳ ಏರಿಳಿತ ಪ್ರದರ್ಶಿಸಿ ಅಂತ್ಯದಲ್ಲಿ ₹1,056 ರಷ್ಟು ಕುಸಿತ ಕಂಡಿದೆ. ಇಂತಹ ವಾತಾವರಣದಲ್ಲಿ  ಮೌಲ್ಯಾಧಾರಿತ ಕೊಳ್ಳುವಿಕೆ- ಲಾಭದ ನಗಧೀಕರಿಸುವಿಕೆಯನ್ನು ಅಳವಡಿಸಿಕೊಂಡರೆ  ಮಾತ್ರ ಇಂದಿನ ಪೇಟೆಯಲ್ಲಿ  ಯಶಸ್ಸುಕಾಣಲು ಸಾಧ್ಯ.

ಸೂಚ್ಯಂಕ 813 ಅಂಶ ಕುಸಿತ: ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕ ಸತತ ಇಳಿಕೆಯಿಂದ ಒಟ್ಟು 813 ಅಂಶಗಳ ಕುಸಿತ ಕಂಡಿದೆ. ಇದಕ್ಕೆ ಪೂರಕವಾಗಿ ಮಧ್ಯಮ ಶ್ರೇಣಿಯ ಸೂಚ್ಯಂಕವು 163 ಅಂಶಗಳ ಹಾಗೂ ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕ 203 ಅಂಶಗಳ ಇಳಿಕೆ ಕಂಡವು. ವಿದೇಶಿ ವಿತ್ತೀಯ ಸಂಸ್ಥೆಗಳು ನಿವ್ವಳ ₹1,287 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₹724 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ₹98.33ಲಕ್ಷ ಕೋಟಿಗಳಲ್ಲಿ ಕೊನೆಗೊಂಡಿತು.

ಹೊಸ ಷೇರು: ಇತ್ತೀಚೆಗೆ ಪ್ರತಿ ಷೇರಿಗೆ ₹3.28ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಕಾಫಿ ಡೇ ಎಂಟರ್ ಪ್ರೈಸಸ್ ಷೇರುಗಳು ನವೆಂಬರ್ 2 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ. ಕೋಲ್ಕತ್ತ ಮತ್ತು ದೆಹಲಿ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಅಕ್ಮೆ ರಿಸೋರ್ಸಸ್ ಕಂಪೆನಿಯು ನವೆಂಬರ್ 3 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ  (ಬಿಎಸ್ಇ) ವಹಿವಾಟಿಗೆ ಬಿಡುಗಡೆಯಾಗಲಿದೆ. ಐ.ಡಿ.ಎಫ್.ಸಿ.ಯಿಂದ ಬೇರ್ಪಡಿಸಲಾದ ಬ್ಯಾಂಕಿಂಗ್ ಚಟುವಟಿಕೆಯ ಐ.ಡಿ.ಎಫ್.ಸಿ ಬ್ಯಾಂಕ್ ಷೇರುಗಳು 6 ರಿಂದ ವಹಿವಾಟಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬೋನಸ್ ಷೇರು: ಮರಥಾನ್ ನೆಕ್ಸ್ಟ್ ಜೆನ್ ರಿಯಾಲ್ಟಿ ಕಂಪೆನಿಯು ನವೆಂಬರ್ 3 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
ಕೊಥಾರಿ ಪ್ರಾಡಕ್ಟ್ಸ್ ಕಂಪೆನಿಯು 10 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ: ಗ್ರೀನ್ ಪ್ಲಯ್ ಇಂಡಸ್ಟ್ರೀಸ್ ಷೇರಿನ ಮುಖಬೆಲೆಯನ್ನು ₹5 ರಿಂದ ₹1 ಕ್ಕೆ ಸೀಳಲಿದೆ. ಸೀಕ್ವೆಂಟ್ ಸೈಂಟಿಫಿಕ್ ಷೇರಿನ ಮುಖಬೆಲೆ ₹10ರಿಂದ ₹2 ಕ್ಕೆ ಸೀಳಲಿದೆ.

*
ವಾರದ ವಿಶೇಷ

ಇಂಡಿಗೋ ಏವಿಯೇಶನ್ ಕಂಪೆನಿಯ ಸಾರ್ವಜನಿಕ ವಿತರಣೆಯು ಆರು ಪಟ್ಟು ಹೆಚ್ಚಿನ ಸಂಗ್ರಹಣೆಯಾಗಿದೆ ಎಂದು, ಪ್ರಮುಖ ಹೂಡಿಕೆದಾರರು ಈ ವಿತರಣೆಯಲ್ಲಿ ಭಾಗವಹಿಸಿದ್ದಾರೆ ಎಂಬ ಪ್ರಚಾರವು ಮಾರ್ಕೆಟಿಂಗ್ ವೈಖರಿಯಾಗಿದೆ.

ಸಹಜವಾಗಿ ಈ ವಿತರಣೆಯಲ್ಲಿ ವಿತ್ತೀಯ ಸಂಸ್ಥೆಗಳ ಹೂಡಿಕೆ, ವಿಶೇಷವಾಗಿ ವಿದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆ ಹೆಚ್ಚಾಗಿರುವ ಕಾರಣ ವಿತರಣೆಯು ಯಶಸ್ಸು ಕಂಡಿದೆ. ರಿಟೇಲ್‌ ಹೂಡಿಕೆದಾರರ ಆಸಕ್ತಿಯು ಕ್ಷೀಣಿತವಾಗಿದ್ದು, ಆ ಭಾಗವು ಪೂರ್ಣವಾಗಿ ಭರ್ತಿಯಾಗಲಿಲ್ಲ.  ಇನ್ನೊಂದು ವಿಶೇಷವೆಂದರೆ ಈ ಕಂಪೆನಿಯ ಉದ್ಯೋಗಿಗಳಿಗೆ ಮೀಸಲಿಟ್ಟ ಭಾಗವು ಕೇವಲ ಶೇ13 ರಷ್ಟು ಸಂಗ್ರಹವಾಗಿರುವುದು ವಿತರಣೆಯ ಬೆಲೆ ಹೆಚ್ಚೆಂಬುದು ಬಿಂಬಿತವಾಗುತ್ತದೆ.

ಎಸ್.ಎಚ್. ಕೇಲ್ಕರ್ ಆ್ಯಂಡ್  ಕಂಪೆನಿಯ  ಆರಂಭಿಕ ಷೇರು ವಿತರಣೆಯ ಕೊನೆಯ ದಿನವಾದ ಶುಕ್ರವಾರ ಮಧ್ಯಾಹ್ನ ಹನ್ನೆರಡರವರೆಗೂ ಅರ್ಹ ಸಾಂಸ್ಥಿಕ ಖರೀದಿದಾರರ ವಿಭಾಗದಲ್ಲಿ 4.7 ರಷ್ಟು ಅಧಿಕ ಸಂಗ್ರಹಣೆಯಾಗಿತ್ತು  ಆದರೆ ಸಂಜೆಯ ವೇಳೆಗೆ ಆ ವಿಭಾಗದಲ್ಲಿ ಸಂಗ್ರಹಣೆಯಾದ ಪ್ರಮಾಣ 25.55 ಕ್ಕೆ ಏರಿಕೆಯಾಗಿತ್ತು. 

ಅದೇ ರೀತಿ ಸಂಸ್ಥೆಗಳೇತರ ವಿಭಾಗದಲ್ಲಿ 1.21 ಪಟ್ಟು ಸಂಗ್ರಹಣೆಯಿದ್ದುದು  ಸಂಜೆ ವೇಳೆಗೆ 87.38 ಪಟ್ಟು ಹೆಚ್ಚು ಸಂಗ್ರಹಣೆಯಾಗಿರುವುದು ಸೋಜಿಗದ ಸಂಗತಿಯಲ್ಲವೇ?  ಆದರೆ ರಿಟೇಲ್ ವಿಭಾಗದಲ್ಲಿ ಮಾತ್ರ   ಸಂಜೆ ವೇಳೆಗೆ ಸಂಗ್ರಹಣೆಯಾಗಿದ್ದುದು ಕೇವಲ 1.72 ರಷ್ಟು ಹೆಚ್ಚಾಗಿತ್ತು.

ನವೀನ್ ಫ್ಲೋರಿನ್ ಇಂಟರ್ ನ್ಯಾಷನಲ್ ಕಂಪೆನಿಯ ವಹಿವಾಟು ಕಳೆದ ಸೆಪ್ಟೆಂಬರ್ ತಿಂಗಳ ತ್ರೈಮಾಸಿಕ  ಅಂತ್ಯದಲ್ಲಿ ಜೂನ್ ತ್ರೈಮಾಸಿಕ  ಅಂತ್ಯದ ಮಟ್ಟದಲ್ಲಿದ್ದರೂ  ನಿವ್ವಳ ಲಾಭವು ₹18.14ಕೋಟಿ ಯಿಂದ ₹23.23ಕೋಟಿಗೆ ಏರಿಕೆ ಕಂಡಿದೆ. ಹಾಗೂ ಪ್ರತಿ ಷೇರಿಗೆ ₹10 ರಂತೆ ಲಾಭಾಂಶ ಪ್ರಕಟಿಸಿದ ಕಾರಣ  ಷೇರಿನ ಬೆಲೆಯು 27 ರಂದು  ಮಂಗಳವಾರ ₹270 ರಷ್ಟು ಏರಿಕೆ ಕಂಡಿದೆ. ವಾರಾಂತ್ಯದಲ್ಲಿ ₹1613 ರಲ್ಲಿದ್ದು, ಈ ವಾರ ₹1,345 ರಿಂದ ₹1,672 ರವರೆಗೂ ಏರಿಕೆ ಕಂಡಿರುವುದು ಅಸ್ವಾಭಾವಿಕವಲ್ಲವೇ?

ಎಸ್.ಕೆ.ಎಸ್. ಮೈಕ್ರೊ ಫೈನಾನ್ಸ್ ಕಂಪೆನಿಯ ಫಲಿತಾಂಶವು ಚೆನ್ನಾಗಿದ್ದರೂ ಸಹ ಷೇರಿನ ಬೆಲೆಯು ₹398 ಕ್ಕೆ ಕುಸಿಯಿತು. ಇದಕ್ಕೆ ವೆಸ್ಟ್ ಬ್ರಿಡ್ಜ್ ವೆಂಚರ್ ಎಲ್.ಎಲ್‌.ಸಿ  14.15ಕೋಟಿ ಷೇರುಗಳನ್ನು ಮಾರಾಟ ಮಾಡಿದ ಸುದ್ದಿಯೂ ಕಾರಣವಿರಬಹುದು.  ಆದರೆ ನಂತರದ ದಿನಗಳಲ್ಲಿ ₹436ರವರೆಗೂ ಪುಟಿದೆದ್ದಿತು.

ಅಮರರಾಜ ಬ್ಯಾಟರೀಸ್ ಕಂಪೆನಿಯು ಪ್ರಕಟಿಸಿದ ತಟಸ್ಥಮಯ ಫಲಿತಾಂಶವು ಪೇಟೆಯನ್ನು ಸಮಾಧಾನಗೊಳಿಸಲು ಅಸಮರ್ಥವಾಗಿ ಷೇರಿನ ಬೆಲೆಯನ್ನು ₹990ರ ಸಮೀಪದಿಂದ ₹887 ರವರೆಗೂ ಕುಸಿಯುವಂತೆ ಮಾಡಿತು ನಂತರದ ದಿನಗಳಲ್ಲಿ ಸ್ವಲ್ಪ ಚೇತರಿಕೆಯಿಂದ ₹902 ರಲ್ಲಿ ವಾರಾಂತ್ಯ ಕಂಡಿತು.

ಭಾರತ ಫೋರ್ಜ್ ಕಂಪೆನಿಯ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿಲ್ಲವೆಂಬ ಕಾರಣಕ್ಕೆ ಷೇರಿನ ಬೆಲೆಯು ಸತತವಾದ ಮಾರಾಟದ ಕಾರಣ ₹924 ರ ಸಮೀಪದಿಂದ ₹810ರವರೆಗೂ ಕುಸಿಯುವಂತಾಗಿ, ಶುಕ್ರವಾರದ ಹೊಸ ಚುಕ್ತಾ ಚಕ್ರದ ಚಟುವಟಿಕೆಯಲ್ಲಿ ₹868 ರವರೆಗೂ ಏರಿಕೆ ಕಂಡು ₹859 ರಲ್ಲಿ ವಾರಾಂತ್ಯ ಕಂಡಿತು.

ಅಬಾನ್ ಆಫ್ ಶೋರ್ ಕಂಪೆನಿಗೆ 2014 ರ ಅಕ್ಟೋಬರ್ ನಲ್ಲಿ ಸಾರ್ವಜನಿಕ ವಲಯದ ಒಎನ್‌ಜಿಸಿ ಯಿಂದ 2015 ರ ಮೊದಲನೇ ತ್ರೈಮಾಸಿಕದಿಂದ ನಿರ್ವಹಿಸಲು ₹557 ಕೋಟಿ ಮೌಲ್ಯದ ಆರ್ಡರ್ ಪಡೆದಿದೆ ಎಂಬ ಕಾರಣಕ್ಕಾಗಿ ಷೇರಿನ ಬೆಲೆಯು ₹570 ರ ಸಮೀಪದಿಂದ ₹640 ರವರೆಗೂ ಏರಿಕೆ ಕಂಡಿತು.

ಈ ವರ್ಷವೂ ಅಕ್ಟೋಬರ್ ಕೊನೆವಾರದಲ್ಲಿ ಒಎನ್‌ಜಿಸಿಯಿಂದ ₹325 ಕೋಟಿ ಮೌಲ್ಯದ ಆರ್ಡರ್ ಪಡೆದರೂ ಷೇರಿನ ಬೆಲೆಯ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರದಾಯಿತು. ಹಾಗಾಗಿ ಹಿಂದಿನ ಘಟನೆಗಳನ್ನಾಧರಿಸಿ ನಿರ್ಧರಿಸುವುದು ಸರಿಯಲ್ಲ. ಸಂದರ್ಭವನ್ನರಿತು ನಿರ್ಧರಿಸುವುದು ಉತ್ತಮ. ನವೆಂಬರ್ 11 ರಂದು ದೀಪಾವಳಿ ಲಕ್ಷ್ಮಿ ಪೂಜೆಯ ಕಾರಣ  ಮುಹೂರ್ತದ ವಹಿವಾಟು ಅಂದು ಸಂಜೆ 5.45 ರಿಂದ 6.45 ರವರೆಗೂ ನಡೆಯಲಿದೆ.

ಮೊ: 9886313380 (ಸಂಜೆ 4.30ರ ನಂತರ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT