ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಮನುಷ್ಯನ ಸೃಷ್ಟಿಗೆ ಮೊದಲ ಹೆಜ್ಜೆ

Last Updated 6 ಮೇ 2015, 19:30 IST
ಅಕ್ಷರ ಗಾತ್ರ

ಮೆಡಿಕಲ್ ವಿಜ್ಞಾನಕ್ಕೆ ಬಹುದೊಡ್ಡ ತಿರುವು ಕೊಡಬಲ್ಲ ಸಂಶೋಧನೆಯೊಂದು ಇದೀಗ ಪ್ರಕಟವಾಗಿದೆ. ಶಿಶುವಿನ ಭ್ರೂಣವನ್ನೇ ತಿದ್ದುಪಡಿ ಮಾಡಬಲ್ಲ ತಂತ್ರ ಸಿಕ್ಕಿದೆಯೆಂದು ಚೀನೀ ವಿಜ್ಞಾನಿಗಳು ಘೋಷಿಸಿದ್ದಾರೆ. ಮಾನವ ಶರೀರದಲ್ಲಿ ಇದುವರೆಗೆ ಇಲ್ಲದಿದ್ದ ಹೊಸ ಗುಣಗಳನ್ನು ಸೇರ್ಪಡೆ ಮಾಡಲು ಇದರಿಂದ ಸಾಧ್ಯವಿದೆ.

ಮನುಷ್ಯರಲ್ಲೇ ಹೊಸ (ಜಾತಿಯಲ್ಲ) ಸಂಕುಲವನ್ನು, ಹೊಸ ಪ್ರಭೇದವನ್ನು ಸೃಷ್ಟಿ ಮಾಡಬಹುದು. ಭ್ರೂಣದ ಹಂತದಲ್ಲೇ ಇಂಥ ತಿದ್ದುಪಡಿ ಸಾಧ್ಯವಾದರೆ, ಆ ಶಿಶುವು ಬೆಳೆದು ಅದರ ವೀರ್ಯಾಣು ಅಂಡಾಣುಗಳ ಮೂಲಕ ಮುಂದಿನ ಸಂತಾನಕ್ಕೂ ಅಂಥ ಗುಣಗಳು ವರ್ಗಾವಣೆಯಾಗುತ್ತವೆ. ವೈದ್ಯಲೋಕದಲ್ಲಿ ಸಂಭ್ರಮ, ತಲ್ಲಣ ಎರಡೂ ಎದ್ದಿವೆ. ಸಂಭ್ರಮ ಏಕೆಂದರೆ ಅಪ್ಪ-ಅಮ್ಮ, ತಾತ ಮುತ್ತಜ್ಜಿಯರಿಂದ ಬರಬಲ್ಲ ಅದೆಷ್ಟೊ ಆನುವಂಶಿಕ ಕಾಯಿಲೆಗಳನ್ನು ತಡೆಗಟ್ಟುವ ಹೊಸ ತಂತ್ರವೊಂದು ಲಭಿಸಿದೆ.

ತಲ್ಲಣ ಏಕೆಂದರೆ, ಭ್ರೂಣದ ತಿದ್ದುಪಡಿ ಮಾಡಲು ಅನುಮತಿ ಸಿಕ್ಕರೆ ಪ್ರಯೋಗಶೀಲ ವಿಜ್ಞಾನಿಗಳು ಎಂಥ ಹೊಸ ಗುಣವನ್ನಾದರೂ ಭ್ರೂಣಕ್ಕೆ ಸೇರಿಸಬಹುದು. ಮಹಾ ಮಾನವರನ್ನು ರೂಪಿಸಲು ಹೋಗಿ ರಾಕ್ಷಸ ಸಂತಾನವನ್ನೇ ಸೃಷ್ಟಿಸಬಹುದು. ಸಾಧ್ಯತೆಗೆ ಮಿತಿಯೆಲ್ಲಿ? ಈಗಿನ ಸದ್ಯದಲ್ಲಿ ಅಂಥದ್ದೇನೂ ಆಗಿಲ್ಲ. ಚೀನಾದ ಸನ್‌ಯತ್ಸೆನ್ ವಿ.ವಿಯ ಸಂಶೋಧಕರು ಒಂದು ಒಳ್ಳೆಯ ಕೆಲಸಕ್ಕೆಂದೇ ಭ್ರೂಣದ ತಿದ್ದುಪಡಿ ಮಾಡಲು ಹೊರಟಿದ್ದರು. ನಮ್ಮಲ್ಲಿ ಅಪರೂಪಕ್ಕೆ ಕೆಲವರಿಗೆ ಥಲಸ್ಸೆಮಿಯಾ ಎಂಬ ಆನುವಂಶಿಕ ಕಾಯಿಲೆ ಇರುತ್ತದೆ.

ಅಂಥವರ ಶರೀರದಲ್ಲಿ ಕೆಂಪುರಕ್ತಕಣಗಳ ಉತ್ಪಾದನೆ ತೀರಾ ನಿಧಾನವಾಗಿರುತ್ತದೆ; ಆಮ್ಲಜನಕವನ್ನು ಅಂಗಾಂಗಗಳಿಗೆ ತಲುಪಿಸುವ ಕೆಲಸ ಮೆಲ್ಲಗೆ ನಡೆಯುತ್ತಿರುತ್ತದೆ.  ಸದಾ ನಿಶ್ಶಕ್ತರಾಗಿಯೇ ಇರುವ ಅವರು ಪದೇ ಪದೇ ಬೇರೆಯವರಿಂದ ರಕ್ತದಾನ ಪಡೆಯುತ್ತಿರಬೇಕಾಗುತ್ತದೆ. ಅಂಥವರ ಮಕ್ಕಳೂ ಈ ಕಾಯಿಲೆಯಿಂದ ಬಳಲುತ್ತಾರೆ. ಸೂಕ್ತ ಔಷಧವೇ ಇಲ್ಲದ ಥಲಸ್ಸೆಮಿಯಾ ಕಾಯಿಲೆಯನ್ನು ‘ಬೇರು ಸಮೇತ’ ಕಿತ್ತು ಹಾಕಲೆಂದು ಚೀನೀ ವಿಜ್ಞಾನಿಗಳು ಸನ್ನದ್ಧರಾದರು.

ಥಲಸ್ಸೆಮಿಯಾ ಕಾಯಿಲೆಯ ಲಕ್ಷಣವಿರುವ ಯುಗ್ಮಕಣವನ್ನು (ಅಂದರೆ ಅದೇತಾನೆ ಮಿಲನಗೊಂಡ ವೀರ್ಯಾಣು, ಅಂಡಾಣುಗಳ ಭ್ರೂಣಾಂಕುರವನ್ನು) ಪ್ರಯೋಗಕ್ಕೆ ಬಳಸಿದರು. ಆ ಏಕಕೋಶದಲ್ಲಿನ ಡಿಎನ್‌ಎ ಸರಪಳಿಯಲ್ಲಿರುವ ಸುಮಾರು 20 ಸಾವಿರ ಗುಣಾಣುಗಳ ಪೈಕಿ ದೋಷಯುಕ್ತ ಗುಣಾಣುಗಳಿರುವ ಡಿಎನ್‌ಎ ಭಾಗವನ್ನು ಕತ್ತರಿಸಿ ತೆಗೆದರು. ಅದೇ ಸ್ಥಾನಕ್ಕೆ ಇನ್ನೊಂದು ಡಿಎನ್‌ಎ ತುಣುಕನ್ನು ಸೇರಿಸಿದರು. ಹೀಗೆ ರಿಪೇರಿ ಮಾಡಿದ ಯುಗ್ಮಕಣ ಒಂದಿದ್ದದ್ದು ಎರಡಾಗಿ, ನಾಲ್ಕಾಗಿ, ಎಂಟಾಗಿ ಸಹಜವಾಗಿ ವಿಭಜನೆಯಾಗತೊಡಗಿತು.

ಎರಡು ದಿನಗಳ ನಂತರ ಭ್ರೂಣ ಬೆಳೆಯುತ್ತ  ಹೋದಂತೆಲ್ಲ  ರಿಪೇರಿ ಮಾಡಿದ ಭಾಗ ಯಾವುದೆಂಬುದೇ ಗೊತ್ತಾಗದ ಮಟ್ಟಿಗೆ ಈ ಪ್ರಯೋಗ ಫಲಪ್ರದವಾದಾಗ ವಿಜ್ಞಾನ ಲೋಕಕ್ಕೆ ತಮ್ಮ ಯಶಸ್ಸಿನ ವರದಿ ಒಪ್ಪಿಸಿದರು.   ಇಂಥದ್ದೊಂದು ಸಾಧ್ಯತೆಗಾಗಿ ಕಾಯುತ್ತಿದ್ದ ವಿಜ್ಞಾನ ಲೋಕ ಬೆರಗಾಯಿತು. ಗುಣಾಣುಗಳನ್ನು ಕತ್ತರಿಸಿ ಜೋಡಿಸುವ ಕೆಲಸ ಹೊಸದೇನಲ್ಲ ನಿಜ. ಇಪ್ಪತ್ತು ವರ್ಷಗಳ ಹಿಂದೆಯೇ ಸಸ್ಯಗಳಲ್ಲಿ, ಪ್ರಾಣಿಗಳಲ್ಲಿ ಇಂಥದ್ದೇ ಪ್ರಯೋಗಗಳನ್ನು ಮಾಡಿ, ಒಂದು ಕುಲಕ್ಕೆ ಸೇರಿದ ಜೀವಕೋಶವನ್ನು ಕಿತ್ತು ಇನ್ನೊಂದು ಕುಲದ ಜೀವಿಗೆ ಜೋಡಿಸಿ ಕುಲಾಂತರಿ ತಳಿಗಳನ್ನು ಸೃಷ್ಟಿಸುವುದು ಸಾಧ್ಯವಾಗಿದೆ.

ಅಲ್ಲೂ ಇದು ತುಂಬಾ ಸೂಕ್ಷ್ಮವಾದ, ತೀರಾ ಕ್ಲಿಷ್ಟವಾದ ಕೆಲಸವೇ ಹೌದು; ಏಕೆಂದರೆ ಡಿಎನ್‌ಎ ಸರಪಳಿಯನ್ನು ಕತ್ತರಿಸುವುದೆಂದರೆ ಅದು ಬ್ಲೇಡು, ಕತ್ತರಿಗಳಿಂದ ಆಗುವ ಕೆಲಸವೇನಲ್ಲ (ಚಿತ್ರಗಳಲ್ಲಿ ಮಾತ್ರ ಹಾಗಿರುತ್ತದೆ). ನಿರ್ದಿಷ್ಟ ಜೀವ ರಸಾಯನ ದ್ರವ್ಯವನ್ನು, ಅಂದರೆ ಕಿಣ್ವವನ್ನು ಮೆಲ್ಲಗೆ ಡಿಎನ್‌ಎ ಮೇಲೆ ಸುರಿಯಬೇಕು. ಯಾವ ತಂತುಗಳು ಎಲ್ಲಿ ತುಂಡಾದವು, ಯಾವುದು ಎಲ್ಲಿ ಜೋಡಣೆಗೊಂಡವು ಏನೂ ಕಣ್ಣಿಗೆ ಕಾಣುವುದಿಲ್ಲ. ಯಶಸ್ಸಿಗಿಂತ ಸಾವಿರ ಪಟ್ಟು ಹೆಚ್ಚು ವೈಫಲ್ಯಗಳಾಗುತ್ತವೆ.

ಪ್ರಯೋಗ ವಿಫಲವಾಗಿದೆ ಎಂಬುದು ಗೊತ್ತಾಗಲಿಕ್ಕೇ ಸಾಕಷ್ಟು ಸಮಯ ಬೇಕಾಗುತ್ತದೆ. ಸಸ್ಯ ಅಥವಾ ಪ್ರಾಣಿಗಳಲ್ಲಿ ಅಂತ ಪ್ರಯೋಗ ಎಡವಟ್ಟಾದರೆ ಬಿಸಾಕಿ ಬೇರೊಂದನ್ನು ಬೆಳೆಸಲು ಯತ್ನಿಸಬಹುದು. ಆದರೆ ಮನುಷ್ಯರ ಭ್ರೂಣವನ್ನು ಹಾಗೆ ಬೆಳೆಸಲು ಹೊರಟಿದ್ದೇ ಆದರೆ ವಿಕಾರಗೊಂಡ ಭ್ರೂಣವನ್ನು ಯಾವ ಮಹಿಳೆ ತನ್ನ ಗರ್ಭದಲ್ಲಿ ಬೆಳೆಸಲು ಒಪ್ಪುತ್ತಾಳೆ?

ಮೇಲಾಗಿ ಈಗಿನ ಚೀನೀ ತಂತ್ರ ‘ಕುಲಾಂತರಿ’ ಅಲ್ಲ. ಅದಕ್ಕೆ ‘ಎಂಬ್ರಿಯೊ ಎಡಿಟಿಂಗ್’ ಎಂತಲೇ ಮಾಧ್ಯಮಗಳು ನಾಮಕರಣ ಮಾಡಿವೆ. ಎಡಿಟಿಂಗ್ ಎಂದರೆ (ಅಕ್ಷರ ಮಾಧ್ಯಮದಲ್ಲಿ ಸಂಪಾದಕರು ಮಾಡುವಂತೆ) ಕೈಯಲ್ಲಿದ್ದ ಕೃತಿಯನ್ನೇ ಅಲ್ಲಿ ಇಲ್ಲಿ ತಿದ್ದಿ ತೀಡಿ, ಕತ್ತರಿಸಿ ಜೋಡಿಸುವುದು. ವಿಜ್ಞಾನಿಗಳು ಗಾಜಿನ ಬಟ್ಟಲಲ್ಲಿ ರೂಪುಗೊಂಡ ಯುಗ್ಮಕಣವನ್ನು ಅದು ತಾಯಿಯ ಗರ್ಭಕ್ಕೆ ಸೇರುವ ಮೊದಲೇ ತಿದ್ದಿ ತೀಡಿ, ಲೋಪದೋಷಗಳನ್ನು ಸರಿಪಡಿಸುವ ಕ್ರಿಯೆ ಇದು. ಸಹಜವಾಗಿಯೇ ವೈದ್ಯಕೀಯ ಲೋಕಕ್ಕೆ ವಿದ್ಯುದಾವೇಶ ಬಂದಂತಾಗಿದೆ. ಮನುಷ್ಯ ಶರೀರದ ಎಷ್ಟೊಂದು ದೌರ್ಬಲ್ಯಗಳನ್ನು ಈ ತಂತ್ರದಿಂದ ನಿವಾರಿಸಬಹುದು ತಾನೆ?

‘ಅದು ಸುಲಭದ ಕೆಲಸವೇನೂ ಆಗಿರಲಿಲ್ಲ’ ಎಂದಿದ್ದಾರೆ, ಸಂಶೋಧನ ತಂಡದ ಮುಖ್ಯಸ್ಥ ಜುಂಜಿಯು ಹುವಾಂಗ್.  ಖ್ಯಾತ ‘ನೇಚರ್’ ಪತ್ರಿಕೆಯಲ್ಲಿ ಆತ ವಿವರಿಸಿದ ಪ್ರಕಾರ, ಒಟ್ಟು 86 ಭ್ರೂಣಾಂಕುರಗಳನ್ನು ಪ್ರಯೋಗಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಎರಡೇ ದಿನಗಳಲ್ಲಿ 15 ಭ್ರೂಣಗಳು ಸತ್ತುಹೋದವು. ಇನ್ನುಳಿದವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೇವಲ 28 ಭ್ರೂಣಗಳಲ್ಲಿ ಮಾತ್ರ ಗುಣಾಣು ಜೋಡಣೆ ನಡೆದಿತ್ತು. ‘ಬರೀ ನಾಲ್ಕು ಭ್ರೂಣಗಳಲ್ಲಿ ನಾವು ನಿರೀಕ್ಷಿಸಿದ ತಾಣಗಳಲ್ಲಿ, ನಮಗೆ ಬೇಕಿದ್ದ ರಿಪೇರಿ ಕೆಲಸ ನಡೆದಿತ್ತು ’ ಎಂದು ಹುವಾಂಗ್ ಹೇಳಿದ್ದಾರೆ. ಇನ್ನುಳಿದ 24 ಭ್ರೂಣಗಳಲ್ಲಿ ಇವರು ಸೇರಿಸಿದ ಡಿಎನ್‌ಎ ತಂತು ತನ್ನದಲ್ಲದ ಬೇರೆ ಯಾವುದೋ ಕೊಂಡಿಯಲ್ಲಿ ಹೋಗಿ ಕೂತಿತ್ತು.

ಹುವಾಂಗ್ ತಂಡದ ಸಂಶೋಧನೆಯ ವಿವರಗಳು ಬೀಜಿಂಗ್‌ನಿಂದ ಪ್ರಕಟವಾಗುವ ‘ಪ್ರೋಟೀನ್ ಅಂಡ್ ಸೆಲ್’ ಪತ್ರಿಕೆಯ ಏಪ್ರಿಲ್ 18ರ ಸಂಚಿಕೆಯಲ್ಲಿ ಬಂದಿದ್ದೇ ತಡ, ಪಶ್ಚಿಮದ ಎಲ್ಲ ಮಾಧ್ಯಮಗಳಲ್ಲೂ ಅದರ ಪರ ಮತ್ತು ವಿರುದ್ಧ ಬಿರುಸಿನ ಚರ್ಚೆಗಳು ಆರಂಭವಾಗಿವೆ. ಭ್ರೂಣದ ತಿದ್ದುಪಡಿಯ ಪರವಾಗಿರುವ ವಿಜ್ಞಾನಿಗಳ ಪ್ರಕಾರ ಇಡೀ ಮಾನವ ಕುಲವನ್ನು ವೈಕಲ್ಯಮುಕ್ತ, ರೋಗಮುಕ್ತ, (ಕೊನೆಗೆ ಔಷಧಮುಕ್ತ) ಮಾಡುವಲ್ಲಿ ಇದು ಮೊದಲ ಹೆಜ್ಜೆಯೆನಿಸಿದೆ. ರೋಗಕಾರಕ ಏಕಾಣುಜೀವಿಗಳು ದೇಹಕ್ಕೆ ಪ್ರವೇಶಿಸುತ್ತಿದ್ದ ಹಾಗೆ ಅವುಗಳ ಮೇಲೆ ದಾಳಿ ಮಾಡಬಲ್ಲ ಪ್ರತಿಜೈವಿಕಗಳು ದೇಹದಲ್ಲೇ ಸೃಷ್ಟಿಯಾಗುತ್ತ ಹೋಗುವಂತೆ ಮಾಡಬಹುದು.

ಅದು ಆರಂಭವಷ್ಟೆ. ಭ್ರೂಣಗಳಲ್ಲಿ ಹಸ್ತಕ್ಷೇಪ ಮಾಡಲು ಅನುಮತಿ ಸಿಕ್ಕಿದ್ದೇ ಆದರೆ ಸೂಪರ್ ಹ್ಯೂಮನ್ ತಳಿಗಳನ್ನು ಸೃಷ್ಟಿಸಲು ಅದೆಷ್ಟೊ ಸಂಶೋಧಕರು ತುದಿಗಾಲಲ್ಲಿ ನಿಂತಿದ್ದಾರೆ. ಮೂವತ್ತು ವರ್ಷಗಳ ಹಿಂದೆಯೇ ಬ್ರಿಟಿಷ್ ವಿಜ್ಞಾನಿಗಳು ಡಾಲಿ ಹೆಸರಿನ ಕುರಿಯ ಶರೀರದಿಂದ ಇನ್ನೊಂದು ಅಂಥದ್ದೇ (ಕ್ಲೋನ್– ತದ್ರೂಪು) ಕುರಿಮರಿಯನ್ನು ಸೃಷ್ಟಿ ಮಾಡಿದಾಗ  ಅನೇಕ ವಿಜ್ಞಾನಿಗಳು ಹೀಗೆ ಮಾರ್ಕೆಟ್ ಲಾಭಕ್ಕೆ ಮುಗಿ ಬಿದ್ದಿದ್ದರು.

ಲೈಂಗಿಕ ಸಂಪರ್ಕವೇ ಇಲ್ಲದೆ ಗಂಡಿನ ಅಥವಾ ಹೆಣ್ಣಿನ ಶರೀರದ ಜೀವಕೋಶಗಳನ್ನೇ ಕಸಿ ಮಾಡಿ ತದ್ರೂಪು ಶಿಶುಗಳನ್ನು ತಯಾರಿಸಿಕೊಡಲು ಕೆಲವರು ಮುಂದೆ ಬಂದರು. ಅದರ ನೈತಿಕತೆಯ ವಿರುದ್ಧ ಎಲ್ಲ ಚಿಂತಕರೂ ದನಿ ಎತ್ತಿದ್ದರಿಂದ ಬಹುತೇಕ ಎಲ್ಲ ದೇಶಗಳಲ್ಲೂ ಮನುಷ್ಯರ ಸೂಪರ್ ತಳಿಗಳನ್ನು ಸೃಷ್ಟಿಸುವ ಯತ್ನಕ್ಕೆ ತಡೆ ಹಾಕಲಾಯಿತು. ಯಾವ ದೇಶಕ್ಕೂ ಸೇರಿರದ ದೂರ ಸಾಗರದಲ್ಲಿ ಹಡಗಿನ ಮೇಲೆ ತಾನು ಮನುಷ್ಯರ ತದ್ರೂಪನ್ನು ಸೃಷ್ಟಿಸುತ್ತೇನೆಂದು ಇಟಲಿಯ ಡಾ. ಆಂಟಿನೊರಿ ಎಂಬಾತ ಆ ದಿನಗಳಲ್ಲಿ ಪ್ರಚಾರ ಗಿಟ್ಟಿಸಿದನಾದರೂ ನಂತರ ಮೂಲೆಗುಂಪಾದ.

ತದ್ರೂಪು ಬದಲು ಗಾಜಿನ ಬಟ್ಟಲಲ್ಲಿ ಒಲಿಂಪಿಕ್ಸ್ ವೀರನ ವೀರ್ಯಾಣುಗಳಿಗೆ ಹಾಲಿವುಡ್ ಬೆಡಗಿಯ ಅಂಡಾಣುವನ್ನು ಬೆಸೆದು ಹೊಸ ಭ್ರೂಣವನ್ನು ಸೃಷ್ಟಿಸುವ ಸಾದಾ ತಂತ್ರ ಜಾರಿಗೆ ಬರುತ್ತಲೇ ಅದೇ ಒಂದು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿತು. ಮದುವೆಯಾಗದೆ ತಾಯಂದಿರಾಗಲು ಬಯಸುವವರು, ಸಲಿಂಗ ಕಾಮಿಗಳು ತಮ್ಮ ಇಷ್ಟಕ್ಕೆ ತಕ್ಕಂತೆ ‘ಡಿಸೈನರ್ ಬೇಬಿ’ಗಳನ್ನು ಪಡೆಯಲು ಅವಕಾಶ ಸಿಕ್ಕಿತು. ಆದರೆ ಭ್ರೂಣವನ್ನು ಮಾರ್ಪಡಿಸಲು ಅಥವಾ ಕುಲಾಂತರಿ ಮನುಷ್ಯರನ್ನು ಸೃಷ್ಟಿಸಲು ಇದುವರೆಗೆ ಅನುಮತಿ ಸಿಕ್ಕಿಲ್ಲ. 

ಚೀನಾದ ಈ ಪ್ರಯೋಗವನ್ನು ಅಮೆರಿಕದಲ್ಲಿ ಯಾರಾದರೂ ಮುಂದುವರೆಸಲು ಬಯಸಿದರೆ ಅವರ ಯಾವ ಸಂಶೋಧನೆಗೂ ಧನಸಹಾಯ ಕೊಡುವುದಿಲ್ಲವೆಂದು ಮೊನ್ನೆ ಅಲ್ಲಿನ ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಫ್ರಾನ್ಸಿಸ್ ಕಾಲಿನ್ಸ್ ಹೇಳಿದ್ದಾರೆ. ‘ನೈತಿಕ ಗೆರೆ ದಾಟಲು ಅನುಮತಿ ಕೊಡಲು ಸಾಧ್ಯವಿಲ್ಲ’ ಎಂದು ಆತ ಹೇಳಿದ್ದನ್ನು ‘ಲಾಸ್ ಏಂಜಲೀಸ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಸದ್ಯಕ್ಕೇನೋ ಗೆರೆ ಗಟ್ಟಿ ಇರಬಹುದು. ಆದರೆ ಮಿಲಿಟರಿ ಹುನ್ನಾರವಿರುವ ಸರ್ಕಾರಗಳು  ರಹಸ್ಯವಾಗಿ ಅಂಥ ಹೊಸ ಮಾನವ ತಳಿಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದರೆ? ಸೆಕೆಗೆ ಬೆವರದ, ಚಳಿಗೆ ಬೆದರದ, ರೋಗಾಣುಗಳಿಗೆ ಬಗ್ಗದ, ಸೂಪರ್ ಮನುಷ್ಯರ ಸಂತತಿಯನ್ನು ಸೃಷ್ಟಿಸಿದರೆ ರಾಷ್ಟ್ರಕ್ಕೆ ಒಳ್ಳೆಯದಲ್ಲವೆ? ಬಾಹ್ಯಾಕಾಶ ಯಾತ್ರೆಗೆ ಅಂಥ ವೀರರನ್ನೇ ಕಳುಹಿಸಬಹುದಲ್ಲವೆ? ಈ ಚಿಂತನೆಗಳಿಗೂ ರೆಕ್ಕೆ ಪುಕ್ಕ ಕೊಡುವಂತೆ 1997ರಲ್ಲೇ ವೈಜ್ಞಾನಿಕ ಕಥೆಯನ್ನಾಧರಿಸಿದ ‘ಗಟ್ಟಾಕಾ ’ಎಂಬ ಸಿನಿಮಾ ಬಂದಿತ್ತು.

ಇಡೀ ಸಮಾಜದಲ್ಲಿ ‘ಸಮರ್ಥರು’ ಮತ್ತು ‘ಅಸಮರ್ಥರು’ ಎಂಬ ಎರಡು ವರ್ಗಗಳು ಸೃಷ್ಟಿಯಾಗಿ ಏನೆಲ್ಲ ಹೊಸಬಗೆಯ ಸಂಘರ್ಷ ತಲೆದೋರಿದ್ದನ್ನು ಅದರಲ್ಲಿ ತೋರಿಸಲಾಗಿತ್ತು. ಸಿನಿಮಾ ಕತೆ ಹೇಗೂ ಇರಲಿ, ಸರ್ವೋನ್ನತ ಮನುಷ್ಯ ತಳಿಯನ್ನು ಸೃಷ್ಟಿಸಬೇಕೆಂಬ ತುಡಿತವುಳ್ಳವರು ವಾಸ್ತವದಲ್ಲೂ ಇದ್ದಾರೆ.   ಇವರ ‘ಟ್ರಾನ್ಸ್‌ಹ್ಯೂಮನಿಸಂ’ H+ (ಮಾನವೋತ್ತರ) ಸಿದ್ಧಾಂತಕ್ಕೆ ಅನೇಕರು ಆಕರ್ಷಿತರಾಗುತ್ತಿದ್ದಾರೆ.

ಮನುಷ್ಯ ವಿಕಾಸದ ಮುಂದಿನ ಹೆಜ್ಜೆಯನ್ನು ಮನುಷ್ಯರೇ ರೂಪಿಸಿಕೊಳ್ಳಬೇಕು ಎಂಬ ನಿಲುವಿಗೆ ಬದ್ಧರಾದ ಇವರು ಅದಕ್ಕೆ ಬೇಕಾದ ಭೂಮಿಕೆಯನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಮನುಷ್ಯನ ತಾಕತ್ತು ಈಗಿಗಿಂತ ಸಾವಿರಾರು ಪಟ್ಟು ಹೆಚ್ಚಬೇಕು. ಇಂದು ಭೂಮಿಗೆ ಎದುರಾಗುತ್ತಿರುವ ಸಂಕಟಗಳನ್ನು ನಿಭಾಯಿಸಿ ಮನುಷ್ಯ ಮನುಷ್ಯರಲ್ಲಿರುವ ಅಸಮಾನತೆ, ದುಃಖ, ಕ್ಲೇಶಗಳನ್ನು ಕಡಿಮೆ ಮಾಡಿಕೊಂಡು ಮುಂದಿನ ಶತಮಾನದಾಚೆಗೂ ಹೋಮೋ ಸೇಪಿಯನ್‌ಗಳು ಬದುಕಿ ಉಳಿಯಬೇಕೆಂದಿದ್ದರೆ ಅದಕ್ಕೆ ಹೊಸ ತಳಿಯ ಮನುಷ್ಯರೇ ರೂಪುಗೊಳ್ಳಬೇಕೆಂಬ ನಿಲುವು ಅವರದು.

ಅಂಥ ನಾಳಿನ ಜೀವಿಗಳು ತಂತ್ರಜ್ಞಾನವನ್ನು ಕೇವಲ ಹೊರಗಿನಿಂದ ಬಳಸುವುದಿಲ್ಲ; ಬದಲಿಗೆ ತಮ್ಮೊಳಗೇ ಅಂತರ್ಗತ ಮಾಡಿಕೊಂಡು ಬೆಳೆಯುತ್ತಾರೆ (ಅವರ ಸಿದ್ಧಾಂತಗಳು ಎಕ್ಸ್‌ಟ್ರೀಮ್‌ಟೆಕ್, ಹ್ಯೂಮಾನಿಟಿ ಪ್ಲಸ್ ಮುಂತಾದ ಅನೇಕ ವೆಬ್‌ಸೈಟ್‌ಗಳಲ್ಲಿ ಸಿಗುತ್ತವೆ). ಡಿಎನ್‌ಎ ತಂತ್ರಜ್ಞಾನದ ಮೂಲಕ ತಮ್ಮ ತಳಿಗುಣಗಳನ್ನು ಬದಲಾಯಿಸಿ  ಕೊಳ್ಳುವುದು, ನರಮಂಡಲದಲ್ಲೇ ಇಲೆಕ್ಟ್ರಾನಿಕ್ ಸಾಧನಗಳನ್ನು ಅಳವಡಿಸಿಕೊಂಡು ಅರೆರೋಬಾಟ್‌ಗಳಾಗುವುದು, ಬೇಕೆಂದಾಗ ಮಿದುಳನ್ನೇ ಅಪ್‌ಲೋಡ್ ಅಥವಾ ಡೌನ್ ಲೋಡ್ ಮಾಡಿಕೊಳ್ಳುವುದು ಇವೇ ಮುಂತಾದ ಹತ್ತಾರು ತಂತ್ರಗಳ ಮೂಲಕ ಭೂಲೋಕವನ್ನಷ್ಟೇ ಅಲ್ಲ, ಆಚಿನ ಲೋಕವನ್ನೂ ಆಳಬಲ್ಲ ಸೂಪರ್ ಸಮರ್ಥ ಜೀವಿಯನ್ನು ಸೃಷ್ಟಿಸಲು ಇವರು ಸನ್ನದ್ಧರಾಗುತ್ತಿದ್ದಾರೆ.

ಡ್ಯಾನ್ ಬ್ರೌನ್‌ನ ಇತ್ತೀಚಿನ ‘ಇನ್‌ಫರ್ನೋ’ ಹೆಸರಿನ ಕಾದಂಬರಿಯಲ್ಲಿ ಈ ಮಾನವೋತ್ತರ ಸಂಘಟನೆಗೆ ಸೇರಿದ ಭೂಗತ ಬುದ್ಧಿಜೀವಿಗಳು ಮಾಡುವ ಭಾನಗಡಿಯ ಚಿತ್ರಣವಿದೆ: ಭೂಮಿ ಸುಸ್ಥಿತಿಗೆ ಬರಬೇಕೆಂದರೆ ಇಡೀ ಜಗತ್ತಿನ ಈಗಿನ ಜನಸಂಖ್ಯೆಯನ್ನು ಅರ್ಧಕ್ಕೆ ತಗ್ಗಿಸಬೇಕೆಂದು ಪ್ರಚಂಡ ವಿಜ್ಞಾನಿಯೊಬ್ಬ ಹೊಸ ಶಕ್ತಿಶಾಲಿ ಪ್ಲೇಗ್ ರೋಗಾಣುವನ್ನು ಸೃಷ್ಟಿ ಮಾಡುತ್ತಾನೆ.

ನಿಗದಿತ ದಿನದಂದು ರೋಗಾಣು ತಾನಾಗಿ ಎಲ್ಲೆಡೆ ಪಸರಿಸುವಂತೆ ಈ ಸಂಘಟನೆಯ ಸದಸ್ಯರೆಲ್ಲ ಸೇರಿ ರಹಸ್ಯ ವ್ಯೂಹ ರಚಿಸುತ್ತಾರೆ.
ಮುಂದಿನ ಕತೆಯೆಲ್ಲ ಆಮೇಲೆ. ಸದ್ಯಕ್ಕಂತೂ ಮನುಷ್ಯರ ಪಾಲಿಗೆ ಸೂಪರ್ ರೋಗಾಣುಗಳ ಸೃಷ್ಟಿ ಅದೆಷ್ಟು ಅಪಾಯಕಾರಿಯೊ, ಸೂಪರ್ ಮಾನವರ ಸೃಷ್ಟಿ ಕೂಡ ಅಷ್ಟೇ ಅಪಾಯಕಾರಿಯೇನೊ ಹೌದು.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT