ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್: ಟ್ಯಾಬ್ ಲೋಕಕ್ಕೆ ಹೊಸ ಸದಸ್ಯ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಟ್ಯಾಬ್ಲೆಟ್ ಗಣಕಗಳನ್ನು ಎಲ್ಲರಿಗಿಂತ ಮೊದಲು ಮಾರುಕಟ್ಟೆಗೆ ತಂದಿದ್ದು ಮೈಕ್ರೋಸಾಫ್ಟ್. ಆದರೆ ಅದು ಯಾರ ಗಮನಕ್ಕೂ ಬರಲಿಲ್ಲ. ಆಪಲ್ ಕಂಪೆನಿ ಐಪ್ಯಾಡ್ ತಂದಾಗ ಆಪಲ್ ಏನೇ ತಯಾರಿಸಿದರೂ ಕಣ್ಣುಮುಚ್ಚಿ ಕೊಂಡುಕೊಳ್ಳುವ ಅಮೆರಿಕನ್ನರಿಂದಾಗಿ ಮಾರಾಟದಲ್ಲಿ ಹೊಸ ಇತಿಹಾಸವನ್ನೇ ಬರೆಯಿತು. ನಂತರ ಆಂಡ್ರಾಯಿಡ್ ಟ್ಯಾಬ್ಲೆಟ್‌ ಗಳು ಮಾರುಕಟ್ಟೆ ಕಬಳಿಸತೊಡಗಿದವು. ಭಾರತದಲ್ಲಂತೂ ಸ್ಯಾಮ್‌ಸಂಗ್ ಕಂಪೆನಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಎರಡರಲ್ಲೂ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ (Samsung Galaxy Tab S) ಹೆಸರಿನ ಟ್ಯಾಬ್ಲೆಟ್ ತಯಾರಿಸಿದೆ.
­
ಗುಣವೈಶಿಷ್ಟ್ಯಗಳು
1.9 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಮತ್ತು 1.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಇನ್ನೊಂದು ಪ್ರೊಸೆಸರ್‌ಗಳು, 3 + 16 (ಅಥವಾ 32) ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, 8 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2.1 ಮೆಗಾಪಿಕ್ಸೆಲ್ ಇನ್ನೊಂದು ಕ್ಯಾಮೆರಾ, ಫ್ಲಾಶ್, 8.4 ಇಂಚು (212.8 ಮಿ.ಮೀ.) ಗಾತ್ರದ 2560 x 1600 ಪಿಕ್ಸೆಲ್ ರೆಸೊಲೂಶನ್‌ನ ಸೂಪರ್ ಅಮೋಲೆಡ್ ಸ್ಪರ್ಶಸಂವೇದಿ ಪರದೆ, 2ಜಿ/3ಜಿ ಮೈಕ್ರೋ ಸಿಮ್, ಜಿಪಿಎಸ್, ವೈಫೈ, ಬ್ಲೂಟೂತ್, ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಸೌಲಭ್ಯ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯಿಡ್ 4.4.2 (ಕಿಟ್‌ಕ್ಯಾಟ್), 125.6 x 212.8 x 6.6 ಮಿ.ಮೀ. ಗಾತ್ರ, 298 ಗ್ರಾಂ ತೂಕ, 4900 mAH ಬ್ಯಾಟರಿ, ಇತ್ಯಾದಿ. ನಿಗದಿತ ಬೆಲೆ ₹43,000. 10 ಇಂಚು ಗಾತ್ರದ ಇನ್ನೊಂದು ಮಾದರಿಯೂ ಇದೆ.

ಸ್ಯಾಮ್‌ಸಂಗ್‌ನವರ ಎಲ್ಲ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳು ಗ್ಯಾಲಕ್ಸಿ ಎಂಬ ಹೆಸರನ್ನು ಹೊತ್ತಿವೆ. ಬ್ರಹ್ಮಾಂಡದಲ್ಲಿ ಎಷ್ಟು ಗ್ಯಾಲಕ್ಸಿಗಳಿವೆಯೋ ಅವಕ್ಕಿಂತ ಹೆಚ್ಚು ಸಂಖ್ಯೆಯ ಗ್ಯಾಲಕ್ಸಿ ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಸ್ಯಾಮ್‌ಸಂಗ್‌ನವರು ತಯಾರಿಸಿದ್ದಾರೆ ಎಂಬ ಜೋಕು ಅಂತರಜಾಲದಲ್ಲಿ ಹರಿದಾಡುತ್ತಿದೆ. ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳಲ್ಲೂ ಹಲವು ಮಾದರಿಗಳಿವೆ. ಇದೀಗ ಟ್ಯಾಬ್ ಎಸ್ ಎಂಬ ಹೆಸರಿನ ದುಬಾರಿ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಂದಿದೆ.      

ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಚೆನ್ನಾಗಿದೆ. ಕೇವಲ 6.6 ಮಿ.ಮೀ ದಪ್ಪನಾಗಿದ್ದು, ತುಂಬ ತೆಳ್ಳಗಿದೆ ಅನ್ನಿಸುತ್ತದೆ. ಬಹುಶಃ ಸದ್ಯ ಮಾರುಕಟ್ಟೆಯಲ್ಲಿರುವ ಟ್ಯಾಬ್ಲೆಟ್‌ಗಳಲ್ಲಿ ಇಷ್ಟು ತೆಳ್ಳಗಾಗಿರುವ ಟ್ಯಾಬ್ಲೆಟ್ ಇದೇ ಆಗಿರಬೇಕು. ಪ್ಲಾಸ್ಟಿಕ್ ದೇಹವಾಗಿದ್ದೂ ಲೋಹದ ಹೊಳಪು ನೀಡಿರುವುದರಿಂದ ಮೊದಲ ನೋಟಕ್ಕೆ ಪ್ಲಾಸ್ಟಿಕ್ ಅನ್ನಿಸುವುದಿಲ್ಲ. 8.4 ಇಂಚಿನ ಮಾದರಿಯನ್ನು ಕೈಯಲ್ಲಿ ಹಿಡಿದುಕೊಂಡು ವೀಕ್ಷಿಸಲು ಅಷ್ಟೇನೂ ಕಷ್ಟವಾಗುವುದಿಲ್ಲ. ನಾನು ಒಂದು ಇಡೀ ಸಿನಿಮಾವನ್ನು ಇದರಲ್ಲೇ ನೋಡಿದೆ. ಕೈಯಲ್ಲಿ ಹಿಡಿದುಕೊಂಡು ಆಟ ಆಡುವಾಗಲೂ ಕೈಗೆ ಶ್ರಮ ಅನ್ನಿಸಲಿಲ್ಲ. ಟ್ಯಾಬ್ಲೆಟ್‌ನ ಹಿಂಬದಿಯಲ್ಲಿ ಎರಡು ಬಟನ್ ಮಾದರಿಯ ರಚನೆಗಳಿವೆ. ಅವು ಈ ಟ್ಯಾಬ್ಲೆಟ್‌ಗೆಂದೇ ಸ್ಯಾಮ್‌ಸಂಗ್‌ನವರು ತಯಾರಿಸಿದ ಕವಚವನ್ನು ಜೋಡಿಸಲು ಬಳಕೆಯಾಗುತ್ತವೆ. ಆದರೆ ಈ ಕವಚವನ್ನು ಪ್ರತ್ಯೇಕವಾಗಿ ಕೊಳ್ಳಬೇಕು.

‌ಈ ಟ್ಯಾಬ್ಲೆಟ್‌ನ ಪರದೆಯ ರೆಸೊಲೂಶನ್ ಕಡೆಗೆ ಗಮನ ಹರಿಸಿ. ಅದು 2560 x 1600 ಪಿಕ್ಸೆಲ್. ಅಂದರೆ ಹೈಡೆಫಿನಿಶನ್ (1920 x 1080) ಗಿಂತಲೂ ಹೆಚ್ಚು. ಸೂಪರ್ ಅಮೋಲೆಡ್ ಪರದೆ ಆಗಿರುವುದರಿಂದ ಇದರ ವೀಕ್ಷಣೆಯ ಅನುಭವ ತುಂಬ ಚೆನ್ನಾಗಿದೆ. ಸಿನಿಮಾ ನೋಡಲು, ಅದರಲ್ಲೂ ಹೈಡೆಫಿನಿಶನ್ ಸಿನಿಮಾ ನೋಡಲು ಇದು ಉತ್ತಮ ಟ್ಯಾಬ್ಲೆಟ್. ಪರದೆ ಜೊತೆ ಇದರ ಆಡಿಯೊ ಎಂಜಿನ್ ಕೂಡ ಚೆನ್ನಾಗಿದೆ. 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಆದರೆ ಇಯರ್‌ಫೋನ್ ನೀಡಿಲ್ಲ. ₹43 ಸಾವಿರ ಬೆಲೆಯ ಗ್ಯಾಜೆಟ್ ಜೊತೆ ಇಯರ್‌ಫೋನ್ ನೀಡಿಲ್ಲ ಎಂಬುದು ಒಂದು ಪ್ರಮುಖ ಕೊರತೆ. ಸುಮಾರು ₹1,000 ಬೆಲೆ ಬಾಳುವ ಕ್ರಿಯೇಟಿವ್ EP630 ಅಥವಾ ಕೋವೋನ್ EM1 ಇಯರ್‌ಫೋನ್ ಬಳಸಬಹುದು. ಈ ಟ್ಯಾಬ್ಲೆಟ್‌ನಲ್ಲೇ ನೀಡಿರುವ ಸ್ಪೀಕರ್ ಪರವಾಗಿಲ್ಲ. ಆಟ +ಆಡುವಾಗ ಇಯರ್‌ಫೋನ್ ಬಳಸಲೇಬೇಕಿಲ್ಲ.

ಈ ಟ್ಯಾಬ್ಲೆಟ್‌ನಲ್ಲಿ ನಾಲ್ಕು ಹೃದಯಗಳ ಎರಡು ಪ್ರೊಸೆಸರ್‌ಗಳಿವೆ. ಅಂದರೆ ಇದು ತುಂಬ ಶಕ್ತಿಶಾಲಿಯಾದ ಟ್ಯಾಬ್ಲೆಟ್. ಇದರ ಶಕ್ತಿ ಆಟ ಆಡುವಾಗ ವೇದ್ಯವಾಗುತ್ತದೆ. ಮೂರು ಆಯಾಮಗಳ ಆಟವನ್ನು ಇದರಲ್ಲಿ ಆಡುವ ಅನುಭವ ನಿಜಕ್ಕೂ ಚೆನ್ನಾಗಿದೆ. ಹೆಚ್ಚು ಶಕ್ತಿಶಾಲಿ ಪ್ರೊಸೆಸರ್‌ಗಳ ಅಗತ್ಯವಿರುವ ಆಟಗಳನ್ನು ಆಡಲು ಇದು ತುಂಬ ಸೂಕ್ತ ಟ್ಯಾಬ್ಲೆಟ್.   

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌ನ ಕ್ಯಾಮೆರಾ ಹೆಸರಿಗೆ 8 ಮೆಗಾಪಿಕ್ಸೆಲ್ ರೆಸೊಲೂಶನ್‌ನದು. ಆದರೆ ಅದರ ಗುಣಮಟ್ಟ ಆ ಮಟ್ಟದಲ್ಲಿಲ್ಲ. ಹೆಚ್ಚು ಮೆಗಾಪಿಕ್ಸೆಲ್ ಇದ್ದ ಮಾತ್ರಕ್ಕೆ ಫಲಿತಾಂಶ ಚೆನ್ನಾಗಿರಲೇಬೇಕಿಲ್ಲ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ಹಾಗೆಂದು ಇದು ಅತಿ ಕೆಟ್ಟದಾಗೇನೂ ಇಲ್ಲ. ಕಡಿಮೆ ಬೆಳಕಿನಲ್ಲಿ ಫೋಟೊ ತೆಗೆದರೆ ಫಲಿತಾಂಶ ತೃಪ್ತಿದಾಯಕವಾಗಿಲ್ಲ. ಸಾಕಷ್ಟು ಬೆಳಕಿದ್ದಲ್ಲಿ ಫೋಟೊ ತೃಪ್ತಿದಾಯಕವಾಗಿ ಬರುತ್ತದೆ. ಆಂಡ್ರಾಯಿಡ್ 4.1 ಮತ್ತು ನಂತರದ ಆವೃತ್ತಿಗಳಲ್ಲಿ ಕನ್ನಡದ ಸರಿಯಾದ ತೋರುವಿಕೆ (ರೆಂಡರಿಂಗ್) ಇದೆ.

ಕನ್ನಡದ ಕೀಲಿಮಣೆ (ಎನಿಸಾಫ್ಟ್, ಜಸ್ಟ್‌ಕನ್ನಡ, ಕಾನ್‌ಕೀ, ಇತ್ಯಾದಿ ಯಾವುದಾದರೂ ಕೀಬೋರ್ಡ್ ಆಗಬಹುದು) ಹಾಕಿಕೊಂಡರೆ ಕನ್ನಡದಲ್ಲೇ ಬೆರಳಚ್ಚು ಮಾಡಬಹುದು. ಸ್ಯಾಮ್‌ಸಂಗ್‌ನವರು ತಮ್ಮ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಸಂಪೂರ್ಣ ಎಂದರೆ ಕನ್ನಡದಲ್ಲೇ ಆದೇಶ, ಮೆನು, ಯೂಸರ್ ಇಂಟರ್‌ಫೇಸ್‌ಗಳು. ಈ ಟ್ಯಾಬ್ಲೆಟ್ ಈ ಗುಂಪಿಗೆ ಸೇರಿದೆ. ಸ್ಯಾಮ್‌ಸಂಗ್‌ನವರೇ ಕನ್ನಡದ ಕೀಲಿಮಣೆಯನ್ನೂ ನೀಡಿದ್ದಾರೆ. ಆದರೆ ನಮಗೆಲ್ಲರಿಗೂ ಚಿರಪರಿಚಿತವಾದ ಯಾವುದೇ ವಿನ್ಯಾಸವಲ್ಲ. ಬಳಸಲು ಸ್ವಲ್ಪ ವಿಚಿತ್ರವಾಗಿದೆ.  

ವಾರದ ಆಪ್ (app)

ಆಸ್ಫಾಲ್ಟ್ 8
ಆಂಡ್ರಾಯಿಡ್‌ಗೆ ಲಭ್ಯವಿರುವ ವಾಹನ ಓಟದ ಹಲವು ಆಟಗಳಲ್ಲೇ Asphalt 8 Airborne ಅತ್ಯಂತ ಶಕ್ತಿಶಾಲಿಯಾದ ಆಟ ಎನ್ನಬಹುದು. ಕಾರು ಓಡಿಸುವ ಆಟದ ಚಟವಿದ್ದವರಿಗೆ ಇದು ಅತ್ಯುತ್ತಮ ಆಯ್ಕೆ. ಮೂರು ಆಯಾಮಗಳ ವಿಡಿಯೊ ಮತ್ತು ಆಡುವ ಅನುಭವ ಅದ್ಭುತವಾಗಿದೆ. ಈ ಆಟದ ಗಾತ್ರ ಸುಮಾರು 1.5 ಗಿಗಾಬೈಟ್. ಅಂದರೆ ಅನಿಯಮಿತ ಅಂತರಜಾಲ ಸಂಪರ್ಕ ಇದ್ದರೆ ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರ ಅಗತ್ಯ ಅಷ್ಟಕ್ಕೇ ಮುಗಿಯುವುದಿಲ್ಲ. ಈ ಆಟ ಆಡಲು ನಿಮ್ಮಲ್ಲಿ ಅತಿ ಶಕ್ತಿಶಾಲಿಯಾದ ಆಂಡ್ರಾಯಿಡ್ ಫೋನ್ ಅಥವಾ ಟ್ಯಾಬ್ಲೆಟ್ ಅಗತ್ಯವಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌ಗೆ ಇದು ಹೇಳಿ ಮಾಡಿಸಿದ ಆಟ.

ಗ್ಯಾಜೆಟ್ ಸುದ್ದಿ

ಭಾರತದಲ್ಲಿ ಟ್ಯಾಬ್ಲೆಟ್ ಮಾರಾಟ ಇಳಿಕೆ
2014 ಜನವರಿಯಿಂದ ಮಾರ್ಚ್ ತನಕದ ಅವಧಿಯಲ್ಲಿ ಭಾರತದಲ್ಲಿ ಟ್ಯಾಬ್ಲೆಟ್‌ಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಈ ಇಳಿಕೆ ಸುಮಾರು ಶೇಕಡ 32.8 ರಷ್ಟಾಗಿದೆ. ಈ ಅವಧಿಯಲ್ಲಿ ಸುಮಾರು 7.8 ಲಕ್ಷ ಟ್ಯಾಬ್ಲೆಟ್‌ಗಳ ಮಾರಾಟವಾಗಿದೆ. ಇಂಟರ್‌ನ್ಯಾಶನಲ್ ಡಾಟಾ ಕಾರ್ಪೊರೇಶನ್ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಇದು ಸ್ಪಷ್ಟವಾಗಿದೆ. ಈ ಇಳಿಕೆಗೆ ಭಾರತೀಯ ಮಾನಕಗಳ ಸಂಸ್ಥೆ ಹೊಸದಾಗಿ ನಿಗದಿಪಡಿಸಿದ ಕೆಲವು ಕಠಿಣ ನಿಯಮಗಳೂ ಕಾರಣ ಎನ್ನಲಾಗುತ್ತಿದೆ. ಸ್ಯಾಮ್‌ಸಂಗ್ ಕಂಪೆನಿ ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸದ್ಯ ಮುಂಚೂಣಿಯಲ್ಲಿದೆ.

ಗ್ಯಾಜೆಟ್ ತರ್ಲೆ
ಈಗಿನ ಕಾಲದ ಮದುವೆಯಲ್ಲಿ ವರ ವಧುವಿಗೆ ತಾಳಿ ಕಟ್ಟಿದ ನಂತರ ಪುರೋಹಿತರು ಎರಡು ನಿಮಿಷಗಳ ಬ್ರೇಕ್ ನೀಡುತ್ತಾರೆ. ಆಗ ಮದುಮಗ ಮತ್ತು ಮದುಮಗಳು ತಮ್ಮ ತಮ್ಮ ಫೇಸ್‌ಬುಕ್ ಅಪ್‌ಡೇಟ್ ಮಾಡಿ ಮದುವೆ ಆಯಿತು ಎಂದು ಬರೆಯುತ್ತಾರೆ.

ಗ್ಯಾಜೆಟ್ ಸಲಹೆ
‌ಅಭಿಷೇಕ್ ಅವರ ಪ್ರಶ್ನೆ:
ಸೆನ್‌ಹೈಸರ್ ಸಿಎಕ್ಸ್180, ಕ್ರಿಯೇಟಿವ್ ಇಪಿ630, ಕೋವೋನ್ ಇಎಂ1 ಮತ್ತು ಟೆಕ್‌ಫ್ಯೂಶನ್ ಟ್ವಿನ್‌ವೂಫರ್ –ಇವುಗಳಲ್ಲಿ ಯಾವ ಇಯರ್‌ಫೊನ್ ಕೊಳ್ಳಬಹುದು? ನನಗೆ ಮೈಕ್ರೋಮ್ಯಾಕ್ಸ್ ಫೋನ್ ಜೊತೆ ಬಳಸಬೇಕಾಗಿದೆ.

ಉ: ಎಲ್ಲವೂ ಬಹುತೇಕ ಒಂದೇ ಗುಣಮಟ್ಟದವು. ಕ್ರಿಯೇಟಿವ್ ಉತ್ತಮ ಎನ್ನಬಹುದು. ಫೋನ್ ಜೊತೆ ಬಳಸಲು ಅಂದರೆ ಮಾತನಾಡಲು ಮೈಕ್ರೋಫೋನ್ ಬೇಕಿದ್ದರೆ ಕೋವೋನ್ ಇಎಂ1ರಲ್ಲಿ ಅಂತಹ ಮಾದರಿ ಲಭ್ಯವಿದೆ. ನಾನು ಕೆಲವು ತಿಂಗಳುಗಳಿಂದ ಅದನ್ನು ಬಳಸುತ್ತಿ ದ್ದೇನೆ. ಟೆಕ್‌ಫ್ಯೂಶನ್ ಬಹುಕಾಲ ಮಾರುಕಟ್ಟೆಯಲ್ಲಿ ಉಳಿಯುವಂತೆ ಕಾಣಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT