ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಆಧಾರಿತ ಬಾಂಧವ್ಯಗಳು

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದಂಪತಿ ಚೆನ್ನಾಗಿಯೇ ಇದ್ದರು. ಗಂಡ ವ್ಯಾಪಾರ ಮಾಡುತ್ತಿದ್ದ. ಸಾಕಷ್ಟು ಗಳಿಕೆಯೂ ಇತ್ತು. ಅವನಿಗೆ ಮೂರು ಜನ ಗಂಡುಮಕ್ಕಳು. ಅವರನ್ನು ಚೆನ್ನಾಗಿ ಓದಿಸಿ ಬೆಳೆಸಿದ. ಒಂದು ದೊಡ್ಡ ಮನೆಯನ್ನು ಕಟ್ಟಿಸಿಕೊಂಡು ಸುಖ­ವಾಗಿದ್ದ.  ಸಮಯ ಯಾವಾಗಲೂ ಹಾಗೆಯೇ ಇರುತ್ತದೆಯೇ? ಚೆನ್ನಾಗಿದ್ದ ಹೆಂಡತಿ ಹೃದಯಾ­ಘಾತವಾಗಿ ತೀರಿ­ಹೋದಳು.

ಯಜಮಾನ ಒಬ್ಬನೇ ಆದ. ಅವನ ಮೂರೂ ಮಕ್ಕಳು ತಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಮನೆಗಳಲ್ಲಿ, ಊರು-­ಗಳಲ್ಲಿ ನೆಲೆನಿಂತಿದ್ದರು. ತಂದೆ ಹೋಗಿ ಹಿರಿಯ ಮಗನ ಮನೆಯಲ್ಲಿ ಉಳಿದ. ಅವರಿಗೆ ಯಾವ ತೊಂದ­ರೆಯೂ ಆಗದಂತೆ ಮಗ, ಸೊಸೆ ನೋಡಿ­ಕೊಂಡರು. ಅವರಿಗೆ ಬೇಕಾದ ರುಚಿ, ರುಚಿಯಾದ ಊಟ, ಕಾಲ­ಕಾಲಕ್ಕೆ ಕಾಫಿ, ಇಷ್ಟವಾದ ಪತ್ರಿಕೆಗಳು ಹೀಗೆ ಯಾವುದಕ್ಕೂ ಕೊರತೆ ಇರಲಿಲ್ಲ. ಒಂದು ದಿನ ಮಕ್ಕಳೆಲ್ಲ ಬಂದು ಸೇರಿದರು.

ಒಬ್ಬ ಮಗ ಹೇಳಿದ, ‘ಅಪ್ಪಾ, ನೀನು ಕಟ್ಟಿಸಿದ ಮನೆ ಖಾಲಿಯಾಗಿ ಹಾಗೆಯೇ ಇದೆ. ಅದಕ್ಕೇನಾದರೂ ಮಾಡಬೇಕು’. ‘ಏನು ಮಾಡಬೇಕು?’ ಅಪ್ಪ ಕೇಳಿದ. ಇನ್ನೊಬ್ಬ ಮಗ ಹೇಳಿದ, ‘ಅದನ್ನು ಹಾಗೆಯೇ ಬಿಟ್ಟರೆ ಹಾಳಾಗಿ ಹೋಗು­ತ್ತದೆ. ಅದನ್ನು ಮಾರಿಬಿಟ್ಟರೆ ಒಳ್ಳೆಯ ರೇಟೂ ಬರುತ್ತದೆ’. ತಂದೆಗೆ ಸೂಚನೆ ಗೊತ್ತಾಯಿತು. ಅವರು ಅಂದಂತೆಯೇ ಆಗಲಿ ಎಂದುಕೊಂಡು ಮನೆ­ ಮಾರಿದರು. ಬಂದ ಹಣವನ್ನು ಮೂವರೂ ಮಕ್ಕಳಲ್ಲಿ ಸರಿಯಾಗಿ ಹಂಚಿಬಿಟ್ಟರು. ನಂತರ ಹೆಂಡ­ತಿಯ ಆಭರಣಗಳು, ಮನೆ­ಯಲ್ಲಿದ್ದ ಬಂಗಾರ, ಬೆಳ್ಳಿಗಳನ್ನೆಲ್ಲ ಮಾರಿ ಬಂದ ಹಣವನ್ನೆಲ್ಲ ಮಕ್ಕಳಿಗೆ ಸರಿಯಾಗಿ ನೀಡಿಬಿಟ್ಟರು. ಈಗ ಅವರ ಬಳಿ ಏನೂ ಇಲ್ಲ.

ಒಂದು ವರ್ಷ ಹೆಚ್ಚು ಬದಲಾವಣೆ­ಯೇನೂ ಆಗಲಿಲ್ಲ. ಅವರಿಗೆ ಬೇಕಾದ್ದು, ಬೇಕಾದಾಗ ಸಿಗುತ್ತಿತ್ತು. ಆದರೆ, ಬರಬರುತ್ತ ಸಣ್ಣಪುಟ್ಟ ವ್ಯತ್ಯಾಸಗಳಾ­ಗತೊಡಗಿದವು. ದೊರೆತ ಕಾಫಿ ಆರಿರುತ್ತಿತ್ತು. ಬೆಳಿಗ್ಗೆ ಎದ್ದು ಪತ್ರಿಕೆ ಓದುವ ಅಭ್ಯಾಸ ಇದ್ದ ಇವರಿಗೆ ಪತ್ರಿಕೆ ದೊರೆಯುವುದು ಎಲ್ಲರೂ ಓದಿಯಾದ ಮೇಲೆ ಮಧ್ಯಾಹ್ನದ ಮೇಲೆ. ಇವ­ರೊಂದಿಗೆ ಮಾತುಕತೆ ಅಪರೂಪ­ವಾಯಿತು. ಇವರು ತಮ್ಮ ಕೊಠಡಿ­ಯಲ್ಲೇ ಬಂದಿಯಾದಂತಾದರು. ಹೊರಗಡೆ ಬಂದು ಟಿ.ವಿ.ಯನ್ನಾದರೂ ನೋಡೋಣವೆಂದರೆ ಮಗ- ಸೊಸೆ ತಮಗೆ ಬೇಕಾದ ಕಾರ್ಯಕ್ರಮವನ್ನು ನೋಡುತ್ತಿದ್ದರು. ಯಜಮಾನರಿಗೆ ಬೇಜಾರಾಗತೊಡಗಿತು.

ಒಂದು ಭಾನುವಾರ ಎಲ್ಲ ಮಕ್ಕಳನ್ನು ಬರಹೇಳಿದರು. ‘ಮಕ್ಕಳೇ, ನಾನು ನನ್ನ ಸಕಲ ಆಸ್ತಿಯನ್ನು ಮಾರಿ ನಿಮ್ಮಲ್ಲಿ ಹಂಚಿಬಿಟ್ಟಿದ್ದೇನೆಂದು ಹೇಳಿದ್ದೆನಲ್ಲವೇ? ಅದು ಸುಳ್ಳು. ನನಗೂ ಎಲ್ಲರಿಗಿರುವಂತೆ ಆಸೆಗಳಿವೆ. ಅದಕ್ಕೇ ನಮ್ಮ ಅಜ್ಜಿಯಿಂದ ನನ್ನ ಹೆಂಡತಿಗೆ ಬಂದ ವಿಶೇಷವಾದ ವಜ್ರದ ಮತ್ತು ಬಂಗಾರದ ಆಭರಣ­ಗಳನ್ನು ನಾನು ಮಾರದೇ ಇಟ್ಟುಕೊಂಡಿ­ದ್ದೇನೆ. ಇಂದು ಆಭರಣಗಳ ಬೆಲೆ ಅದೆಷ್ಟು ಕೋಟಿಯಾಗುತ್ತದೋ ತಿಳಿ­ಯದು. ಅವೆಲ್ಲವುಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಬ್ಯಾಂಕಿನ ವಿಶೇಷ ಲಾಕರ್‌ನಲ್ಲಿ ಇಟ್ಟಿದ್ದೇನೆ.

ಒಂದು ಕೀಲಿಕೈಯನ್ನು ನನ್ನ ಸ್ನೇಹಿತ­ರಾದ ತಹಶೀಲ್ದಾರ ನಾರಾಯಣ­ರಾಯರಿಗೆ ಕೊಟ್ಟಿದ್ದೇನೆ. ಇನ್ನೊಂದು ಕೀಲಿಕೈಯನ್ನು ನಿಮಗೆ ಕೊಡುತ್ತೇನೆ. ನಾನು ಸಾಯುವವರೆಗೆ ಅದನ್ನು ತೆಗೆ­ಯುವಂತಿಲ್ಲ. ನಾನು ಸತ್ತ ಮರುದಿನ ಅದನ್ನು ತೆರೆದು ಆಭರಣಗಳನ್ನು ಮಾರಿ ಬಂದ ಹಣವನ್ನು ಮತ್ತೆ ಸರಿಯಾಗಿ ಹಂಚಿಕೊಳ್ಳಿ’ ಎಂದರು. ಹೇಳಿದಂತೆ ಒಂದು ಕೀಲೀಕೈಯನ್ನು ಹಿರಿಯ ಮಗನಿಗೆ ಕೊಟ್ಟರು. ಆಮೇಲೆ ಮತ್ತೆ ಯಜ­ಮಾನರಿಗೆ ರಾಜೋಪಚಾರ ಪ್ರಾರಂಭವಾಯಿತು.

ಒಂದು ದಿನ ಆಯಸ್ಸು ತೀರಿ ಯಜ­ಮಾನರು ಮರೆ­ಯಾದರು. ಮರುದಿನ ಎಲ್ಲ ಮಕ್ಕಳು ಬ್ಯಾಂಕಿಗೆ ನಾರಾಯಣ­ರಾಯ­ರನ್ನು ಕರೆದುಕೊಂಡು ಹೋಗಿ ಲಾಕರ್ ಬೀಗ ತೆರೆದು ಒಳಗಿದ್ದ ಪೆಟ್ಟಿಗೆ­ಯನ್ನು ತೆಗೆದು­ಕೊಂಡರು. ಅದನ್ನು ತೆರೆದು ನೋಡಿದಾಗ ಒಂದು ಚೀಟಿ ಮಾತ್ರ ಇತ್ತು. ಅದರಲ್ಲಿ ಬರೆದಿತ್ತು. ‘ಒಂದು ಬುದ್ಧಿಯಿಲ್ಲದ ಕತ್ತೆ ಮಾತ್ರ ಯಾವು­ದನ್ನೂ ಇಟ್ಟುಕೊಳ್ಳದೇ ಕೊಟ್ಟು­ಬಿಡುತ್ತದೆ’. 

ಇಂದು ಇದು ಸಾಮಾನ್ಯ­ವಾಗಿ ಕಾಣುವ ಗುಣ ಎನಿಸುತ್ತಿದೆ. ಅಂತಃಕರಣ, ಬಾಂಧವ್ಯ ಪ್ರೀತಿಗಳು ಕೂಡ ಹಣವನ್ನು ಆಶ್ರಯಿಸಿವೆ ಎಂಬಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಣ­ಕ್ಕೋಸ್ಕರ ಸಂಬಂಧ­ಗಳನ್ನು ಬಲಿಕೊ­ಡುತ್ತಿರುವ ಪರಿಸ್ಥಿತಿಗಳು ದಿನನಿತ್ಯ ಗೋಚರಿಸುತ್ತಿವೆ ಎಂಬುದು ದುಃಖದ ಸಂಗತಿಯಾದರೂ ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT