ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂತಿರುಗಿ ನೋಡಿದಾಗ...

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಗ್ಯಾಜೆಟ್‌ಗಳನ್ನು ತಯಾರಿಸುವುದೇ ಅವು ತುಂಬ ಸಮಯ ಬಾಳಿಕೆ ಬರಬಾರದು ಎಂದೇ. ಗ್ಯಾಜೆಟ್‌ಲೋಕದಲ್ಲಿ ವಿಮರ್ಶಿಸಿದ ಕೆಲವು ಗ್ಯಾಜೆಟ್‌ಗಳ ಈಗಿನ ಸ್ಥಿತಿ ಹೇಗಿದೆ?

ಅಮೆರಿಕದಲ್ಲಿ ಬಳಸಿ ಎಸೆಯುವುದು ದಿನನಿತ್ಯದ ಸಂಗತಿಯಾಗಿದೆ. ಅಲ್ಲಿ ದೊರೆಯುವ ಬಹುತೇಕ ಸಾಮಗ್ರಿಗಳು ಬಳಸಿ ಎಸೆಯಲೆಂದೇ ವಿನ್ಯಾಸಗೊಂಡವುಗಳಾಗಿವೆ. ಉತ್ತಮ ಉದಾಹರಣೆಯೆಂದರೆ ಬಾಲ್‌ಪೆನ್. ಈಗೀಗ ಮಾರುಕಟ್ಟೆಯಲ್ಲಿ ದೊರೆಯುವ ಅತಿ ಕಡಿಮೆ ಬೆಲೆಯ ಬಾಲ್ ಪೆನ್‌ಗಳಿಗೆ ರೀಫಿಲ್ ಹಾಕಲಾಗುವುದಿಲ್ಲ. ಅವನ್ನು ಬಳಸಿಯಾದ ನಂತರ ಎಸೆಯಲೇಬೇಕು. ಆದರೆ ತುಂಬ ಹಣ ಕೊಟ್ಟು ಕೊಳ್ಳುವ ಗ್ಯಾಜೆಟ್‌ಗಳಿಗೂ ಈ ನಿಯಮ ಅನ್ವಯವಾಗಬೇಕಾಗಿಲ್ಲ. ಸುಮಾರು ₹30 ಸಾವಿರ ಹಣ ನೀಡಿ ಕೊಂಡುಕೊಂಡ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ ಎರಡೇ ವರ್ಷಗಳ ನಂತರ ಮೂಲೆಗುಂಪಾದರೆ ಹೇಗೆ? ಈ ರೀತಿ ಆಗಲು ಹಲವು ಕಾರಣಗಳಿರಬಹುದು.

ಮೊದಲನೆಯದಾಗಿ ತಂತ್ರಜ್ಞಾನ ಅತಿ ವೇಗವಾಗಿ ಬದಲಾಗುತ್ತಿರುವುದರಿಂದ ಹಲವು ಸಂಗತಿಗಳು ಬಹುಬೇಗನೆ ಅಪ್ರಸ್ತುತವಾಗುತ್ತವೆ. ಉದಾಹರಣೆಗೆ ಈಗ ಚಾಲ್ತಿಯಲ್ಲಿರುವ ಆಂಡ್ರಾಯಿಡ್ 4ರ ನಂತರದ ಆವೃತ್ತಿಗಳಿಗಾಗಿ ತಯಾರಾದ ಬಹುತೇಕ ಕಿರುತಂತ್ರಾಂಶಗಳು (ಆಪ್) ಹಳೆಯ ಆಂಡ್ರಾಯಿಡ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಕೆಲವು ವೇಳೆ ಯಾವುದಾದರೂ ಅಂಗ ಕೆಟ್ಟರೆ ಅದಕ್ಕೆ ಬದಲಿ ಅಂಗ ದೊರೆಯುವುದಿಲ್ಲ. ಕೆಡಲೆಂದೇ ವಿನ್ಯಾಸ (designed to fail) ಎಂಬುದು ಈಗೀಗ ಉದ್ಯಮ ಒಪ್ಪಿಕೊಂಡು ಪಾಲಿಸುತ್ತಿರುವ ಒಂದು ನೀತಿಯಾಗಿದೆ. ಆದರೆ ನಾವು ಭಾರತೀಯರಿಗೆ ಇದನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ನಾವು ಒಂದು ಬಜಾಜ್ ಚೇತಕ್ ಸ್ಕೂಟರ್ ಕೊಂಡು ಅದನ್ನು 20 ವರ್ಷ ಓಡಿಸುವ ಪರಿಪಾಠದವರು.

ಇಷ್ಟೆಲ್ಲ ಪೀಠಿಕೆ ಯಾಕೆ? ಗ್ಯಾಜೆಟ್‌ಲೋಕ ಅಂಕಣಕ್ಕೆ ಮೂರು ವರ್ಷ ತುಂಬಿತು. ಸಾಮಾನ್ಯವಾಗಿ ಬಹುತೇಕ ಗ್ಯಾಜೆಟ್‌ಗಳ ಆಯುಸ್ಸು ಸರಾಸರಿ ಮೂರು ವರ್ಷ. ಗ್ಯಾಜೆಟ್‌ಲೋಕ ಅಂಕಣದಲ್ಲಿ ವಿಮರ್ಶಿಸಿದ ಕೆಲವು ಗ್ಯಾಜೆಟ್‌ಗಳ ಈಗಿನ ಸ್ಥಿತಿ ಹೇಗಿದೆ ಎಂಬದುನ್ನು ಈ ಸಂಚಿಕೆಯಲ್ಲಿ ನಾವು ಗಮನಿಸೋಣ. ಗ್ಯಾಜೆಟ್‌ಲೋಕ ಅಂಕಣಕ್ಕೆ ವಿಮರ್ಶೆಗೆಂದು ಕೆಲವು ತಯಾರಕರು ಅವರ ಪ್ರಚಾರದ ಏಜೆನ್ಸಿಗಳ ಮೂಲಕ ಕೆಲವು ಗ್ಯಾಜೆಟ್ ನೀಡಿ ಒಂದೆರಡು ವಾರಗಳಲ್ಲಿ ವಾಪಾಸು ತೆಗೆದುಕೊಳ್ಳುತ್ತಾರೆ. ಅಂತಹ ಗ್ಯಾಜೆಟ್‌ಗಳ ಈಗಿನ ಸ್ಥಿತಿ ಹೇಗಿದೆ ಎಂದು ನನಗೆ ತಿಳಿದಿಲ್ಲ. ನಾನು ಮತ್ತು ಮಕ್ಕಳು ಎಲ್ಲ ಗ್ಯಾಜೆಟ್ ವ್ಯಸನಿಗಳೇ. ಅಂತೆಯೇ ಹಲವು ನಮ್ಮದೇ ಗ್ಯಾಜೆಟ್‌ಗಳ ಬಗ್ಗೆ ನಾನು ಈ ಅಂಕಣದಲ್ಲಿ ಬರೆದಿದ್ದೆ. ಅಂತಹ ಕೆಲವು ಗ್ಯಾಜೆಟ್‌ಗಳೊಡನೆ ನನ್ನ ಅನುಭವ, ಅವುಗಳ ಈಗಿನ ಸ್ಥಿತಿ ಹೇಗಿದೆ ಎಂದು ನೋಡೋಣ.

ಸಂಪೂರ್ಣ ಸುಸ್ಥಿತಿಯಲ್ಲಿರುವವು
ಈ ಅಂಕಣದಲ್ಲಿ ವಿಮರ್ಶೆ ಮಾಡಿದ, ಈಗಲೂ ನನ್ನಲ್ಲಿ ಇರುವ, ಸಂಪೂರ್ಣ ಸುಸ್ಥಿತಿಯಲ್ಲಿರುವ ಕೆಲವು ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ. ಆವರಣದಲ್ಲಿ ನೀಡಿರುವುದು ಆಯಾ ಗ್ಯಾಜೆಟ್‌ನ ವಿಮರ್ಶೆ ಪ್ರಕಟವಾದ ದಿನಾಂಕ. ಕಿವಿಕಾಲುವೆಯೊಳಗೆ ಕುಳಿತುಕೊಳ್ಳುವ ಇಯರ್‌ ಬಡ್‌ಗಳು - ಕ್ರಿಯೇಟಿವ್ ಇಪಿ 630 (26-01-2012) ಮತ್ತು ಕೋವೋನ್ ಇಎಂ1 (07-03-2013). ಬ್ಲೂಟೂತ್ ನಿಸ್ತಂತು (ವಯರ್‌ಲೆಸ್‌) ಹೆಡ್‌ಸೆಟ್ - ಕ್ರಿಯೇಟಿವ್ ಡಬ್ಲ್ಯುಪಿ 350 (29-03-2012). ಶಬ್ದ ನಿವಾರಿಸುವ ಇಯರ್ಫೋನ್ (noise cancelling earphone) - ಬೋಸ್ ಕ್ಯುಸಿ20 (26-06-2014). ಪವರ್‌ ಬ್ಯಾಂಕ್ ಚೋಯಿಕ್ಸ್ (Choiix Charger C-2021-K1S0, 21-06-2012). ನೋಕಿಯಾ ಲುಮಿಯಾ 720 ಸ್ಮಾರ್ಟ್‌ಫೋನ್‌ (19-9-2013). ನೋಕಿಯಾ ಸಿ2-00 ಸಾಮಾನ್ಯ ಮೊಬೈಲ್ ಫೋನ್ (12-7-2012). ಲೆನೊವೊ ಝಡ್ 570 ಮತ್ತು ವೈ500 ಲ್ಯಾಪ್‌ಟಾಪ್‌ಗಳು (16-05-2013). ಸ್ಮಾರ್ಟ್‌ಟಿವಿ - ಪಾನಾಸೋನಿಕ್ ಟಿಎಚ್-ಎಲ್32ಇ5ಡಿ (21-02-2013). ಟಾರ್ಗಸ್ ರಿಮೋಟ್ ಪ್ರೆಸೆಂಟರ್ (Targus Multimedia Presentation Remote AMP09AP, 25-09-2014). ಕೊನೆಯದ್ದಕ್ಕೆ ಇನ್ನೂ ಅಪ್ರಸ್ತುತವಾಗುವ ಅಥವಾ ಕೆಡುವ ಕಾಲ ಅಲ್ಲ ಎಂಬುದನ್ನು ಗಮನಿಸಿ.

ಅರೆಬರೆ ಕೆಟ್ಟದ್ದು ಅಥವಾ ಅಪ್ರಸ್ತುತವಾದವು
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್-1 ಸ್ಮಾರ್ಟ್‌ಫೋನ್ (2-2-2012). ಇದನ್ನು ಕೊಳ್ಳುವಾಗ ಇದರಲ್ಲಿದ್ದುದು ಆಂಡ್ರಾಯಿಡ್ 2.3. ನಂತರ ಸ್ಯಾಮ್‌ಸಂಗ್‌ನವರೇ ಆಂಡ್ರಾಯಿಡ್ 4.1ರ ತನಕ ನವೀಕರಿಸಿಕೊಳ್ಳಲು ಸೌಲಭ್ಯ ನೀಡಿದ್ದರು. ಅಲ್ಲಿಂದ ಮುಂದಕ್ಕೆ ಅಂದರೆ ಕಿಟ್‌ಕ್ಯಾಟ್ (4.4) ಅಥವಾ ಲಾಲಿಪಾಪ್ (5.0) ಇಲ್ಲ. ಒಂದು ಸಲ ಬ್ಯಾಟರಿ ಬದಲಿಸಿದ್ದೆ. ಫೋನ್ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿತ್ತು. ಹಾರ್ಡ್ ರಿಸೆಟ್ ಮಾಡಿದರೂ ಪ್ರಯೋಜನವಾಗಲಿಲ್ಲ. ಈಗ ಅದನ್ನು ಸಂಪೂರ್ಣವಾಗಿ ರೂಟ್ ಮಾಡಿ ಸಯನೋಜನ್ ಆಂಡ್ರಾಯಿಡ್ ಹಾಕಿ ನೋಡಬೇಕಾಗಿದೆ.

ನೋಕಿಯಾ ಲುಮಿಯಾ 920 ಸ್ಮಾರ್ಟ್‌ಫೋನ್‌ (14-3-2013). ಇದು ಸಂಪೂರ್ಣವಾಗಿ ಕೆಟ್ಟಿಲ್ಲ. ಕೆಲವೊಮ್ಮೆ ಪರದೆಯಲ್ಲಿ ಅಡ್ಡಡ್ಡ ಗೆರೆಗಳು ಕಂಡುಬರುತ್ತಿವೆ. ಇದು ಗ್ಯಾರಂಟಿಯ ಅವಧಿಯಲ್ಲಿದ್ದಾಗ ಇದೇ ರೀತಿ ತೊಂದರೆಯಾಗಿತ್ತು. ಆಗ ಕಂಪೆನಿಯವರೇ ಉಚಿತವಾಗಿ ಪರದೆ ಬದಲಾಯಿಸಿಕೊಟ್ಟಿದ್ದರು. ಈಗ ಈ ಫೋನ್ ಆಫ್ ಆಗಿ ಮೇಜಿನ ಮೇಲೆ ಕುಳಿತಿದೆ.

ಹುವೇ ವೈಫೈ ಡಾಟಾ ಕಾರ್ಡ್ (Huaewei E560, 21-6-12). ಇದು ಗ್ಯಾರಂಟಿ ಅವಧಿಯಲ್ಲಿ ಒಮ್ಮೆ ಸಂಪೂರ್ಣ  ಕೆಟ್ಟಿತ್ತು. ಆಗ ಕಂಪೆನಿ ಉಚಿತವಾಗಿ ಸರಿಮಾಡಿ ಕೊಟ್ಟಿತ್ತು.ಈಗ ಅದರ ಬ್ಯಾಟರಿ ಸಂಪೂರ್ಣವಾಗಿ ಸತ್ತಿದೆ. ಅದನ್ನು ದಿನ ಪೂರ್ತಿ ಬಳಸುತ್ತಿದ್ದೆವು. ಈಗ ಮನೆಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಬಂದಿದೆ. ಆದುದರಿಂದ ಇದು ಮೂಲೆಗುಂಪಾಗಿದೆ.  

ಕಾನನ್ 1000ಡಿ ಡಿಎಸ್ಎಲ್ಆರ್ ಕ್ಯಾಮೆರಾ (Canon 1000D, 5-4-2012). ಈ ಕ್ಯಾಮೆರಾ 18-55 ಮಿ.ಮೀ. ಝೂಮ್ ಲೆನ್ಸ್ ಜೊತೆ ಬಂದಿತ್ತು. ಇದು ಮಾಮೂಲಿ ಲೆನ್ಸ್. ಐಎಸ್ (image stabilisation) ಲೆನ್ಸ್ ಅಲ್ಲ. ಈ ಲೆನ್ಸ್ ಈಗ ಕೆಟ್ಟಿದೆ. ನಾನು ಪ್ರತ್ಯೇಕವಾಗಿ ಕೊಂಡುಕೊಂಡ 50 ಮಿ.ಮೀ. ಪ್ರೈಮ್ ಲೆನ್ಸ್ ಮತ್ತು 55-250 ಐಎಸ್ ಝೂಮ್ ಲೆನ್ಸ್‌ಗಳು ಚೆನ್ನಾಗಿವೆ. ಕ್ಯಾಮೆರವೂ ಚೆನ್ನಾಗಿದೆ. ಇದು ನನ್ನೊಬ್ಬನ ಅನುಭವ ಮಾತ್ರವಲ್ಲ. ಸುಮಾರು ಜನ ಕಾನನ್ ಬಳಕೆದಾರರು ಇದೇ ದೂರು ನೀಡಿದ್ದಾರೆ. ಕಾನನ್ ಡಿಎಸ್ಎಲ್ಆರ್ ಕ್ಯಾಮೆರಾ ಜೊತೆ ದೊರೆಯುವ 18-55 ಮಿ.ಮೀ. ಲೆನ್ಸ್ (ಇದಕ್ಕೆ ಕಿಟ್ ಲೆನ್ಸ್ ಎಂದೂ ಹೇಳುತ್ತಾರೆ) ಚೆನ್ನಾಗಿಲ್ಲ ಎಂದು ತೀರ್ಮಾನಿಸಬಹುದು.

ಲೆನೊವೊ ಟ್ವಿಸ್ಟ್ ಎಸ್230ಯು (30-05-2013). ಇದು ಸರಿಯಾಗಿ 15 ತಿಂಗಳಲ್ಲಿ ಸಂಪೂರ್ಣ ಕೆಟ್ಟುಹೋಯಿತು. ಮದರ್‌ಬೋರ್ಡ್ ಮತ್ತು ಹಾರ್ಡ್‌ ಡಿಸ್ಕ್ ಎರಡೂ ಕೆಟ್ಟಿದ್ದವು. ಗ್ಯಾರಂಟಿ ಅವಧಿ ಮುಗಿದು ಕೇವಲ ಮೂರೇ ತಿಂಗಳಲ್ಲಿ ಕೆಟ್ಟು ಹೋದುದರಿಂದ ಇದು ಗ್ಯಾರಂಟಿ ಅವಧಿಯಲ್ಲೇ ಕೆಟ್ಟಿದ್ದು ಎಂದು ಪರಿಗಣಿಸಿ ಉಚಿತವಾಗಿ ಸರಿಮಾಡಿಕೊಡಬೇಕು ಎಂದು ಒತ್ತಾಯಿಸಿದೆ. ಅದರ ಡೀಲರ್ ನನ್ನ ಪರಿಚಯದವನಾದುದರಿಂದ ಈ ಕೋರಿಕೆಯನ್ನು ಒಂದು ವಿಶೇಷ ಸಂದರ್ಭ ಎಂದು ಪರಿಗಣಿಸಿ ಉಚಿತವಾಗಿ ಸರಿಮಾಡಿಕೊಟ್ಟರು. ಆದರೂ ಒಂದು ಹೊಸ ಹಾರ್ಡ್‌ ಡಿಸ್ಕ್‌ಗೆ ಹಣ ನೀಡಬೇಕಾಯಿತು.

ರಾಪೂ ಎಚ್ 3070 ಹೆಡ್‌ಫೋನ್‌  (Rapoo H3070, 21-11-2013). ಇದು ಒಂದು ವಿಶಿಷ್ಟ ಹೆಡ್‌ಫೋನ್‌. ಇದನ್ನು ನಿಸ್ತಂತು ಮಾದರಿ ಮತ್ತು ನೇರವಾಗಿ ಸಂಪರ್ಕಿಸಿ ಎರಡು ರೀತಿಯಲ್ಲಿ ಬಳಸಬಹುದು. ನಿಸ್ತಂತು ಮಾದರಿಯಲ್ಲಿ ಬಳಸಲು ಇದರ ಜೊತೆ ಒಂದು ಪ್ರೇಷಕ (transmitter) ನೀಡಿದ್ದಾರೆ. ಅದರೊಳಗೆ ರೀಚಾರ್ಜ್ ಮಾಡಬಲ್ಲ ಬ್ಯಾಟರಿ ಇದೆ. ಅದನ್ನು ಚಾರ್ಜ್ ಮಾಡಲು ಯುಎಸ್‌ಬಿ ಕಿಂಡಿ ಇದೆ. ಆ ಕಿಂಡಿ ಕೆಟ್ಟಿದೆ (ಚಿತ್ರ ನೋಡಿ). ಅದರೊಳಗೆ ಇರುವ ಪಿನ್‌ಗಳು ಬಗ್ಗಿಹೋಗಿವೆ. ಅಂದರೆ ಅದನ್ನು ಈಗ ಚಾರ್ಜ್ ಮಾಡಲು ಆಗುವುದಿಲ್ಲ. ಆದುದರಿಂದ ಈಗ ಇದನ್ನು ಮಾಮೂಲಿ ಹೆಡ್‌ಫೋನ್‌ನಂತೆ ಮಾತ್ರ ಬಳಸಬಹುದು. 

ವಾರದ App
ಆಪ್‌ಸ್ವೈಪ್  

ನಿಮ್ಮ ಆಂಡ್ರಾಯಿಡ್ ಫೋನ್‌ನಲ್ಲಿ ಒಂದು ಕಿರುತಂತ್ರಾಂಶ (ಆಪ್) ಬಳಸುತ್ತಿದ್ದಾಗ ಇನ್ನೊಂದನ್ನು ಬಳಸಬೇಕೆಂದು ಅನಿಸಿದಾಗ ಇದರಿಂದ ಹೊರಗೆ ಬಂದು ಮತ್ತೊಂದನ್ನು ಪ್ರಾರಂಭಿಸುತ್ತಿದ್ದೀರಾ? ಮತ್ತೆ ಪುನಃ ಮೊದಲಿನ ಕಿರುತಂತ್ರಾಂಶವನ್ನು ಬಳಸಬೇಕಾದರೆ ಈಗ ಪ್ರಾರಂಭಿಸಿದ್ದನ್ನು ಮುಚ್ಚಿ ಮೊದಲಿನದ್ದನ್ನು ಇನ್ನೊಮ್ಮ ಪ್ರಾರಂಭಿಸುತ್ತಿದ್ದೀರಾ? ಗಣಕಗಳಲ್ಲಿ Alt-Tab ಬಳಸಿ ಒಂದು ಆಪ್‌ನಿಂದ ಇನ್ನೊಂದು ಆಪ್‌ಗೆ ಬದಲಾವಣೆ ಮಾಡುವಂತಹ ಸೌಲಭ್ಯ ಇದ್ದರೆ ಒಳ್ಳೆಯದಲ್ಲವೇ? ಹೌದು. ಈ ಆಪ್‌ಸ್ವೈಪ್ (AppSwipe!) ಕಿರುತಂತ್ರಾಂಶ ಅಂತಹ ಸೌಲಭ್ಯವನ್ನು ನಿಮ್ಮ ಆಂಡ್ರಾಯಿಡ್ ಫೋನಿಗೆ ನೀಡುತ್ತದೆ. ಆಂಡ್ರಾಯಿಡ್‌ ಫೋನಿನಲ್ಲೇ ಇರುವ ಸೌಲಭ್ಯಕ್ಕಿಂತ ಇದು ತುಂಬ ಚೆನ್ನಾಗಿದೆ. ಇದು ಆಂಡ್ರಾಯಿಡ್ ಲಾಲಿಪಾಪ್‌ನಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ.

ಗ್ಯಾಜೆಟ್ ಸುದ್ದಿ
ಭಾರತದಲ್ಲಿ ಒನ್‌ ಪ್ಲಸ್ ಮಾರಬಹುದು

ಒನ್‌ ಪ್ಲಸ್ ಮಾರಾಟಕ್ಕೆ ಭಾರತದಲ್ಲಿ ಆಗಿರುವ ತೊಂದರೆ ಬಗ್ಗೆ ಕಳೆದ ಎರಡು ವಾರಗಳಿಂದ ಬರೆಯಲಾಗಿತ್ತು. ಮೈಕ್ರೋಮ್ಯಾಕ್ಸ್ ಕಂಪೆನಿ ಒನ್‌ ಪ್ಲಸ್ ಬಳಸುವ ಸಯನೋಜನ್ ಆಂಡ್ರಾಯಿಡ್ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಭಾರತದಲ್ಲಿ ಬೇರೆ ಯಾರೂ ಸಯನೋಜನ್ ಬಳಸುವಂತಿಲ್ಲ ಎಂದು ಹೇಳಿಕೊಂಡಿದೆ. ಆದುದರಿಂದ ಭಾರತದಲ್ಲಿ ಸಯನೋಜನ್ ಬಳಸುವ ಒನ್‌ ಪ್ಲಸ್ ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಾಲಯದಲ್ಲಿ ದೂರು ನೀಡಿತ್ತು. ನ್ಯಾಯಾಲಯದ ಏಕಸದಸ್ಯ ಪೀಠವು ಮಾರಾಟಕ್ಕೆ ತಡೆ ನೀಡಿತ್ತು. ಆದರೆ ಈಗ ಬಹುಸದಸ್ಯರ ಪೀಠವು ಈ ತಡೆಯಾಜ್ಞೆಯನ್ನು ಅನೂರ್ಜಿತಗೊಳಿಸಿದೆ. ಅಂದರೆ ಭಾರತದಲ್ಲಿ ಒನ್‌ ಪ್ಲಸ್ ಮಾರಾಟಕ್ಕೆ ಈಗ ಯಾವ ಅಡ್ಡಿಯೂ ಇಲ್ಲ.

ಗ್ಯಾಜೆಟ್ ತರ್ಲೆ
ಅಲಿಯಾ ಭಟ್ ಲ್ಯಾಪ್‌ಟಾಪ್ ತುಂಬ ನಿಧಾನವಾಗಿ ಕೆಲಸ ಮಾಡುತ್ತಿತ್ತು. ನಿನ್ನ ಲ್ಯಾಪ್‌ಟಾಪ್‌ ಅನ್ನು ಸ್ವಲ್ಪ ಸ್ಕ್ಯಾನ್ ಮಾಡಿ ನೋಡು ಎಂದು ಯಾರೋ ಸಲಹೆ ನೀಡಿದರು. ಅಲಿಯಾ ಭಟ್ ಲ್ಯಾಪ್‌ಟಾಪ್ ಅನ್ನು ಸ್ಕ್ಯಾನರ್ ಮೇಲಿಟ್ಟು ಸ್ಕ್ಯಾನ್ ಮಾಡಿದಳು!

ಗ್ಯಾಜೆಟ್ ಸಲಹೆ
ಮೇಘರಾಜರ ಪ್ರಶ್ನೆ
: ನಾನು ಶಿಯೋಮಿ ರೆಡ್ಮಿ ಫೋನ್ ಕೊಂಡುಕೊಂಡಿದ್ದೇನೆ. ಅದರ ಜೊತೆ ಯಾವ ಇಯರ್ ಫೋನ್ ಬಳಸಬಹುದು? ನನ್ನ ಬಜೆಟ್ ಅಂದಾಜು ₹1000.
ಉ: ನೀವು ಕ್ರಿಯೇಟಿವ್ ಇಪಿ 630, ಕೋವೋನ್ ಇಎಂ1 ಅಥವಾ ***ಸೆನ್ಹೈಸರ್ ಸಿಎಕ್ಸ್ 180 ಕೊಳ್ಳಬಹುದು. ಇವುಗಳಲ್ಲಿ ಕೋವೋನ್ ಇಎಂ1 ರಲ್ಲಿ ಮಾತ್ರ ಮಾತನಾಡಲು ಮೈಕ್ರೋಫೋನ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT