ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತೊಡಲ ಸಂಕಟಕ್ಕೆ ಹೊಸ ಹೊಸ ಆಯಾಮ

Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡಾಂಬೆಗೆ, ಭಾರತ ಜನನಿಯ ತನುಜಾತೆಗೆ ರಾಜ್ಯೋತ್ಸವ ಸಂದರ್ಭದಲ್ಲಿ ಅಷ್ಟೆಲ್ಲ ಜಯಘೋಷ ಮೊಳಗುತ್ತಿತ್ತಲ್ಲ? ಅದೇ ವೇಳೆಗೆ ವಿಶ್ವಸಂಸ್ಥೆಯ ಐಪಿಸಿಸಿ ಒಂದು ಖಡಕ್ ಎಚ್ಚರಿಕೆಯ ಘಂಟಾನಾದವನ್ನು ಮೊಳಗಿಸಿತು: ಇಡೀ ಪೃಥ್ವಿಯೇ ಹವಾಗುಣ ಬದಲಾವಣೆಯ ಮಹಾಸಂಕಟದ ಕಡೆ ಹೊರಳುತ್ತಿದೆ; ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳು ಏನೇನೂ ಸಾಲದು ಎಂದು ಎಚ್ಚರಿಸಿತು. ನವೆಂಬರ್ ೨ರಂದು ಅದು ಬಿಡುಗಡೆ ಮಾಡಿದ ವರದಿಯಲ್ಲಿ ಇದುವ­ರೆಗಿನ ಅತ್ಯಂತ ಕಟುವಾದ ಎಚ್ಚರಿಕೆಯ ಮಾತು­ಗಳು ಧ್ವನಿಸಿದವು.

‘ವಿಜ್ಞಾನವೇ ಮಾತಾಡಿದೆ. ಅದು ಈ ಬಾರಿ ನೀಡಿದ ಸಂದೇಶ ಖಡಾಖಂಡಿತವಾಗಿದೆ. ನಾಯ­ಕರು ಕಾರ್ಯಪ್ರವೃತ್ತ ಆಗಲೇಬೇಕು’ ಎಂದು ಕೊಪೆ­ನ್‌ಹೇಗನ್ ನಗರದಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್‌ ಕಿ- ಮೂನ್ ಮಾಧ್ಯಮ ಗೋಷ್ಠಿ­ಯಲ್ಲಿ ಹೇಳಿದರು. ಹವಾಗುಣ ಬದ­ಲಾ­ವಣೆ ಅಧ್ಯಯನಕ್ಕೆಂದು ನಿಯೋಜಿಸಲಾದ ವಿಜ್ಞಾನಿಗಳ ಸಮಿತಿಯ ಐದನೆಯ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

೧೯೯೦ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಈ ಸಮಿತಿ ತನ್ನ ವರದಿಯನ್ನು ವಿಶ್ವಸಂಸ್ಥೆಗೆ ಸಲ್ಲಿ­ಸುತ್ತಿದೆ. ಈಗಿನದು ಐದನೆಯ ವರದಿ. ‘ಭೂಮಿಯ ಎಲ್ಲ ಮಗ್ಗುಲುಗಳಲ್ಲೂ ನಿಸರ್ಗ ಸಮತೋಲ ತಪ್ಪುತ್ತಿರುವ ಲಕ್ಷಣಗಳುಕಾಣು­ತ್ತಿವೆ. ಎಲ್ಲೆಡೆ ಭೂಮಿಯ ಮೇಲಿನ ಹಿಮ­ಕವಚ­ಗಳು ಕರಗುತ್ತಿವೆ. ಬೆಚ್ಚಗಿನ ಹವಾಗುಣ­ವನ್ನು ಇಷ್ಟಪಡುವ ಕೀಟಗಳು ಅರಣ್ಯಗಳ ಮೇಲೆ ದಾಳಿ ಇಡುತ್ತಿವೆ; ಸಮುದ್ರದ ಮಟ್ಟ ಮೇಲೇ­ರುತ್ತಿದೆ. ಇದನ್ನು ಸರಿಪಡಿಸುವ ಕ್ರಮ ಕೈಗೊಳ್ಳ­ದಿದ್ದರೆ ಎಲ್ಲರ ಬದುಕಿನ ಸಮಸ್ಯೆ ಗಂಭೀರ­ವಾಗಲಿದೆ’ ಎಂದು ವರದಿಯಲ್ಲಿ ಎಚ್ಚರಿಸ­ಲಾಗಿದೆ. 

ವಿಜ್ಞಾನ ಮಾತಾಡುವ ಎಷ್ಟೋ ಮೊದಲು ಚಂಡಮಾರುತ, ಮಹಾಪೂರ, ಬರಗಾಲಗಳ ಮೂಲಕ ಭೂಮಿ ಮಾತಾಡುತ್ತಲೇ ಇದೆ. ತನಗೆ ಬಂದ ಜ್ವರ ಸಂಕಟಗಳನ್ನು ತೋಡಿಕೊಳ್ಳುತ್ತಲೇ ಇದೆ. ಈ ಜ್ವರವನ್ನು ತಗ್ಗಿಸಲಿಕ್ಕೆ ವಿವಿಧ ‘ಔಷಧ’­ಗಳನ್ನು ವಿಜ್ಞಾನಿಗಳು, ಎಂಜಿನಿಯರ್‌­ಗಳು ಹುಡು­ಕುತ್ತಲೇ ಇದ್ದಾರೆ. ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನಂಥ ಪಳೆಯುಳಿಕೆ ಇಂಧನದ ಬಳಕೆಯನ್ನು ಕಡಿಮೆ ಮಾಡಿದರೆ ಎಲ್ಲ ಸರಿ­ಹೋದೀತು ನಿಜ. ಆದರೆ ಅಪಾರ ಲಾಭ ತರುತ್ತಿ­ರುವ ಈ ಇಂಧನಗಳನ್ನು ಅದೆಷ್ಟೊ ಕಂಪೆ­ನಿ­­ಗಳು ತಮ್ಮ ಬಿಗಿಮುಷ್ಟಿಯಲ್ಲಿ ಹಿಡಿದಿಟ್ಟಿವೆ. ಬದಲೀ ಶಕ್ತಿಮೂಲಗಳಿಗೆ ಆದ್ಯತೆ ಸಿಗದಂತೆ ಮಾಡುತ್ತಿವೆ. ಉದಾಹರಣೆಗೆ, ಇಂದು ಭೂಜ್ವರ­ವನ್ನು ತಗ್ಗಿಸಲೆಂದು ಎಲ್ಲ ರಾಷ್ಟ್ರಗಳೂ ಸೇರಿ ಗರಿಷ್ಠ ೪೦೦ ಶತಕೋಟಿ ಡಾಲರ್‌ಗಳನ್ನು ವೆಚ್ಚ ಮಾಡುತ್ತಿವೆ. ಎಕ್ಸನ್ ಮೊಬಿಲ್ ಹೆಸರಿನ ಒಂದೇ ತೈಲ ಕಂಪೆನಿಯ ವಹಿವಾಟು ಅದಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇದೆ ಎಂದು ವರದಿಯಲ್ಲಿ ಹೇಳ­ಲಾಗಿದೆ. ಅಂತ ಪಟ್ಟಭದ್ರ ಕಂಪೆನಿಗಳನ್ನು ಹದ್ದು­ಬಸ್ತಿನಲ್ಲಿ ಇಡಬಲ್ಲ ರಾಜಕೀಯ ಶಕ್ತಿ ಮಾತ್ರ ಎಲ್ಲೂ ಕಾಣುತ್ತಿಲ್ಲ. ಅದಕ್ಕೇ ಇದು ‘ರಾಜಕೀಯ ಲಕ್ವ’ ಎಂದು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ವಿಜ್ಞಾನಿ ಮೈಕೆಲ್ ಒಪ್ಪೆನ್‌ಹೈಮರ್ ಹೇಳಿ­ದ್ದಾರೆ. ಈ ಲಕ್ವದಿಂದ ಬಿಡುಗಡೆ ಸಾಧ್ಯವೇ ಎಂಬ ಬಗ್ಗೆ ಮುಂದಿನ ತಿಂಗಳು ಪೆರು ದೇಶದ ರಾಜ­ಧಾನಿ ಲಿಮಾದಲ್ಲಿ ಜಾಗತಿಕ ಧುರೀಣರ ಸಭೆ ನಡೆ­ಯಲಿದೆ. ಅಲ್ಲಿ ಏನಾದೀತೊ ಕಾದು ನೋಡೋಣ. ಸದ್ಯಕ್ಕೆ ಭೂಮಾತೆಯನ್ನು ಅವಳ ಪಾಡಿಗೆ ಬಿಟ್ಟು ಮನುಷ್ಯ ಮಾತೆಯರ ಕುರಿತ ಹೊಸತೊಂದನ್ನು ಚರ್ಚಿಸೋಣ.

ಸ್ವೀಡನ್ನಿನಲ್ಲಿ ಮಹಿಳೆಯೊಬ್ಬಳು ತನ್ನದಲ್ಲದ ಗರ್ಭದ ಚೀಲವನ್ನು ತನ್ನೊಳಗೆ ಜೋಡಿಸಿ­ಕೊಂಡು ತನ್ನದೇ ಗಂಡು ಮಗುವನ್ನು ಹೆತ್ತಿ­ದ್ದಾಳೆ. ಮಗುವಿಗೆ ವಿನ್ಸೆಂಟ್ ಎಂದು ನಾಮಕ­ರಣ ಮಾಡಲಾಗಿದೆ. ಇದು ಜಗತ್ತಿನ ಮೊದಲ ಯಶಸ್ವೀ ‘ಗರ್ಭಕೋಶ ಕಸಿ’ ಎಂಬ ಶ್ಲಾಘನೆ ಅಲ್ಲಿನ ವೈದ್ಯರಿಗೆ ಲಭಿಸಿದೆ. ಹೊಸಬಗೆಯ ಗರ್ಭದಾನ ಪ್ರಕ್ರಿಯೆಗೆ ಚಾಲನೆ ಸಿಗತೊಡಗಿದೆ. 

(ನಮ್ಮಲ್ಲಿ ಅನೇಕರಿಗೆ ‘ಗರ್ಭಾಧಾನ’ ಮತ್ತು ‘ಗರ್ಭದಾನ’ದ ನಡುವಣ ವ್ಯತ್ಯಾಸದ ಬಗ್ಗೆ ಗೊಂದಲವಿದೆ. ಗರ್ಭಾಧಾನ ಎಂದರೆ ಮಹಿ­ಳೆಯ ಗರ್ಭದಲ್ಲಿ ಪುರುಷನ ವೀರ್ಯವನ್ನು ಪ್ರತಿ­ಷ್ಠಾಪಿಸುವುದು. ‘ಆಧಾನ’ ಎಂದರೆ ಸ್ಥಾಪಿಸು­ವುದು, ಇಡುವುದು ಎಂಬ ಅರ್ಥಗಳಿವೆ. ಸಂತಾ­ನ­ವೃದ್ಧಿಯ ಪ್ರಕ್ರಿಯೆಯಲ್ಲಿ ಅದೊಂದು ಸಹಜ ಹಂತ. ಹೊಸ ದಂಪತಿಯ ಸಂತಾನ ಚೆನ್ನಾಗಿ ಬೆಳೆದು ಬಾಳಲೆಂದು ಹಿಂದೂ ಪುರೋಹಿತರು ವಿವಾಹಮಂಟಪದಲ್ಲೇ ‘ಗರ್ಭಾಧಾನ ಹೋಮ’ ಮಾಡಿಸುತ್ತಾರೆ. ಇಲ್ಲಿ ದಾನದ ಪ್ರಶ್ನೆ ಬರುವುದಿಲ್ಲ. ಹಾಗಾಗಿ ‘ಗರ್ಭಾದಾನ’ ಅಥವಾ ‘ಗರ್ಭದಾನ’ ಎಂಬ ಪದಪ್ರಯೋಗ ಸರಿ­ಯಂತೂ ಅಲ್ಲ. ಇನ್ನುಮೇಲೆ ಗರ್ಭದಾನ ಎಂದರೆ ಮಹಿಳೆ ತನ್ನ ಗರ್ಭಕೋಶವನ್ನೇ ಬೇರೊಬ್ಬರಿಗೆ ದಾನ ಮಾಡುವುದು ಎಂಬ ಅರ್ಥ ಬಂದೀತು.)

ಸ್ವೀಡಿಶ್ ಮಹಿಳೆ (೩೬) ತನ್ನ ತಾಯಿಯ ಗೆಳತಿಯಿಂದ ಗರ್ಭದ ಚೀಲವನ್ನು ದಾನ ರೂಪ­ದಲ್ಲಿ ಪಡೆದಿದ್ದಳು. ಗರ್ಭಕೋಶವನ್ನು ದಾನ ಕೊಟ್ಟ ಹಿರಿಯಮ್ಮ ಈ ಮೊದಲು ಅದೇ ಗರ್ಭದ ಮೂಲಕ ಇಬ್ಬರು ಮಕ್ಕಳಿಗೆ ಜನ್ಮ ನೀಡಿ­ದ್ದಳು. ಆ ತಾಯಿಗೆ ಆಗಲೇ ೬೧ ವರ್ಷ­ಗಳಾಗಿ­ದ್ದರೂ ಗರ್ಭದ ಚೀಲ ಸುಸ್ಥಿತಿಯಲ್ಲಿತ್ತು. ಎರಡು ವರ್ಷಗಳ ಹಿಂದೆ ಏಕಕಾಲಕ್ಕೆ ಇಬ್ಬರೂ ಮಹಿಳೆ­ಯರಿಗೆ ಸರ್ಜರಿ ಮಾಡಿ ಹಿರಿಯ ಮಹಿಳೆಯಿಂದ ಪಡೆದ ಎರವಲು ಚೀಲವನ್ನು ಈಕೆಗೆ ಜೋಡಿಸಿ­ದರು. ಆ ಚೀಲವನ್ನು ದೇಹ ತಿರಸ್ಕರಿಸದಂತೆ ನಾನಾ ಬಗೆಯ ಔಷಧ ಚಿಕಿತ್ಸೆ ನೀಡಲಾಯಿತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆ ಯುವತಿ­ಯದೇ ಅಂಡಾಣು ಮತ್ತು ಅವಳ ಗಂಡನ ವೀರ್ಯಾಣುವನ್ನು ಗಾಜಿನ ಬಟ್ಟಲಲ್ಲಿ ಮಿಲನ ಮಾಡಿಸಿದರು. ಹಾಗೆ ಸಿದ್ಧಪಡಿಸಿದ ಅಂಕುರ­ವನ್ನು ಈಗಾಗಲೇ ಕಿಬ್ಬೊಟ್ಟೆಯಲ್ಲಿ ಸುಸ್ಥಿರವಾಗಿ ಜೋಡಣೆಗೊಂಡ ಗರ್ಭದ ಚೀಲದಲ್ಲಿ ಪ್ರತಿಷ್ಠಾ­ಪನೆ ಮಾಡಲಾಯಿತು. ಈಗಾಗಲೇ ಎರಡು ಮಕ್ಕ­ಳನ್ನು ಪೋಷಿಸಿ ಹಳತಾಗಿದ್ದ ಚೀಲದಲ್ಲಿ ಮಗು ಬೆಳೆದೀತೆ ಎಂಬ ಸಂಶಯ ನಿವಾರಣೆ­ಯಾ­ಗಿದೆ. ಗರ್ಭಧಾರಣೆ­ಯಾದ ಎಂಟು ತಿಂಗಳಿಗೆ ಸಿಸೇ­ರಿಯನ್ ಮಾಡಿ ಶಿಶುವನ್ನು ಹೊರಕ್ಕೆ ತೆಗೆ­ದರು. ತಾಯಿ ಮಗು ಇಬ್ಬರೂ ಆರೋಗ್ಯವಾಗಿ­ದ್ದಾರೆ. ‘ನನಗೇ ನಂಬಲು ಸಾಧ್ಯವಾಗುತ್ತಿಲ್ಲ! ನಾನೀಗ ಅಮ್ಮನಾಗಿ­ದ್ದೇನೆ’ ಎಂದು ಚೊಚ್ಚಿಲ ಬಾಣಂತಿ ಉದ್ಗರಿಸಿ­ದ್ದಾಳೆ.

ಗರ್ಭದ ಚೀಲದ ಕಸಿ ಮಾಡುವ ಯತ್ನಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದೆಲ್ಲ ಇಲಿಗಳಿಗೆ, ಮೊಲಗಳಿಗೆ, ನಾಯಿಗಳಿಗೆ ಇಂಥ ಕಸಿ ಮಾಡುವ ಯತ್ನಗಳು ನಡೆದಿದ್ದವು. ಕಸಿ ಮಾಡಿದ ಅಂಗಾಂಗಗಳು ಕಳಚಿ ಹೋಗದಂತೆ ತಡೆಯಬಲ್ಲ ಹೊಸಹೊಸ ಔಷಧಗಳು ಬಂದ­ನಂತರ ಅಂಥ ಪ್ರಯೋಗಗಳಿಗೆ ಯಶಸ್ಸು ಸಿಗ­ತೊಡ­ಗಿ­ದವು. ಮೂರು ವರ್ಷಗಳ ಹಿಂದೆ, 20೧೧­ರಲ್ಲಿ ಟರ್ಕಿಯ ೨೨ರ ಯುವತಿಯೊಬ್ಬ­ಳಿಗೆ ಅದೇ ತಾನೆ ಗತಿಸಿದ ಮಹಿಳೆಯ ಗರ್ಭ­ಕೋಶವನ್ನು ಜೋಡಿಸಲಾಗಿತ್ತು. ಕಳೆದ ವರ್ಷ ಯುವತಿ ಗರ್ಭ ಧರಿಸಿದಳೆಂದು ಘೋಷಿಸಿ ವೈದ್ಯಕೀಯ ತಂಡ ಸುದ್ದಿ ಮಾಡಿತ್ತು. ಆದರೆ ಎಂಟು ವಾರಗಳು ಕಳೆದರೂ ಶಿಶುವಿನ ಹೃದಯ ಬಡಿತ ಕೇಳಿಸಲಿಲ್ಲ. ಮತ್ತೆ ಸಿಸೇರಿಯನ್ ವಿಧಾನ­ದಲ್ಲಿ ಗರ್ಭಪಾತ ಮಾಡಿಸಲಾಯಿತು.

ಈಗ ವಿನ್ಸೆಂಟ್‌ಗೆ ಜನ್ಮ ನೀಡಿದ ಸ್ವೀಡಿಶ್  ಮಹಿಳೆ ತನ್ನೊಳಗಿನ ಗರ್ಭದ ಚೀಲವನ್ನು ಜೀವನಪರ್ಯಂತ ಧರಿಸಿರುವಂತಿಲ್ಲ. ಬೇಕಿದ್ದರೆ ಇನ್ನೂ ಒಂದೋ ಎರಡೋ ಹೆರಿಗೆಗಳ ನಂತರ ಮತ್ತೆ ಸರ್ಜರಿ ಮಾಡಿ ಆ ಚೀಲವನ್ನು  ತೆಗೆದು ಹಾಕು­ತ್ತಾರೆ. ಏಕೆಂದರೆ ಆ ಎರವಲು ಚೀಲ ತನ್ನ ದೇಹದಲ್ಲಿ ಇದ್ದಷ್ಟು ದಿನವೂ ಮಹಿಳೆ ಔಷಧ ಸೇವನೆ ಮಾಡುತ್ತಲೇ ಇರಬೇಕಾಗುತ್ತದೆ. ಔಷಧ­ವನ್ನು ನಿಲ್ಲಿಸಿದರೆ ಚೀಲ ಒಳಕ್ಕೇ ಕಳಚಿಕೊಂಡು ಇನ್ನೇನೇನೊ ತೊಂದರೆಗಳಿಗೆ ಕಾರಣವಾಗುತ್ತದೆ. 

ಮೊದಲ ಹೆರಿಗೆಯನ್ನು ಯಶಸ್ವಿಯಾಗಿ ನಿಭಾ­ಯಿಸಿದ ಸ್ವೀಡನ್ನಿನ ಗೋಠೆನ್‌ಬರ್ಗ್ ವಿಶ್ವವಿದ್ಯಾ­ಲಯದ ಆಸ್ಪತ್ರೆಯ ವೈದ್ಯ ವಿಜ್ಞಾನಿಗಳು ಇನ್ನೂ ಅಂಥ ಎಂಟು ಗರ್ಭದ ಚೀಲಗಳನ್ನು ಆಗಲೇ ಬೇರೆ ಬೇರೆ ಮಹಿಳೆಯರಲ್ಲಿ ಕಸಿ ಮಾಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಇನ್ನಿಬ್ಬರು ಮಹಿಳೆಯರು ತಮ್ಮದಲ್ಲದ ಚೀಲದಲ್ಲಿ ತಮ್ಮದೇ ಮಕ್ಕಳನ್ನು ಹೆರಲಿದ್ದಾರೆ. ಮುಂದಿನ ವರ್ಷ ಇನ್ನೂ ಕೆಲವರು ಹೆರಿಗೆಗೆ ಸಿದ್ಧವಾಗುತ್ತಿದ್ದಾರೆ. ಮೂವರು ಹೆಣ್ಣು­ಮಕ್ಕಳಂತೂ ತಮ್ಮದೇ ಅಮ್ಮನ ಗರ್ಭದ ಚೀಲ­ವನ್ನು ತಮ್ಮೊಳಗೆ ಕಸಿ ಮಾಡಿಸಿಕೊಂಡಿದ್ದಾರೆ. ಅಂದರೆ, ತಾವೇ ೩೦ ವರ್ಷಗಳ ಹಿಂದೆ ಮಲಗಿ ಮುಲುಗಿ ಬೆಳೆದಿದ್ದ ಚೀಲವನ್ನು ಈಗ ತಮ್ಮದೇ ಗರ್ಭದಲ್ಲಿ ಜೋಡಿಸಿಕೊಂಡಿದ್ದಾರೆ.

ಅಂದಮೇಲೆ  ನಮ್ಮ ದೇಶಕ್ಕೂ ಈ ತಂತ್ರ­ಜ್ಞಾನ ದಾಂಗುಡಿ ಇಟ್ಟೀತೆ? ಮಕ್ಕಳನ್ನು ಪಡೆ­ಯಲು ಏನೆಲ್ಲ ಕನಸು ಕಾಣುತ್ತಿರುವ ಎಷ್ಟೊಂದು ದಂಪತಿಗಳು ನಮ್ಮಲ್ಲಿದ್ದಾರೆ. ಪ್ರತಿ ೪೫ ಸಾವಿರ ಮಹಿಳೆಯರಲ್ಲಿ ಒಬ್ಬರಿಗೆ  ಹುಟ್ಟು­ವಾ­ಗಲೇ ಗರ್ಭದ ಚೀಲ ನಾಪತ್ತೆಯಾಗಿರುತ್ತ­ದಂತೆ. ಕೆಲವರಿಗೆ ಗರ್ಭಕೋಶ ಇದ್ದರೂ ನಾನಾ ಕಾರಣಗಳಿಂದ ಅಲ್ಲಿ ಗರ್ಭಾಂಕುರ ಆಗದಂಥ ಪರಿಸ್ಥಿತಿ ಇರುತ್ತದೆ. ಇನ್ನು ಮದುವೆಯ
ವಯ­ಸ್ಸನ್ನು ತೀರ ಮುಂದೂಡುತ್ತ ಬಂದ ಕೆಲವ-­ರಿಗೆ ಗರ್ಭದ ಕೊರಳಿನ ಕ್ಯಾನ್ಸರ್ ಬಂದಿದ್ದರೆ ಗರ್ಭ­­ಕೋಶವನ್ನೇ ಕತ್ತರಿಸಿ ಬಿಸುಟಬೇಕಾಗು­ತ್ತದೆ. ಅಂಥವರಿಗೆ ಗರ್ಭ ಧರಿಸುವ ಹೊಸ ಅವಕಾಶ ಈಗ ಸಿಗಲಿದೆಯೆ? ಸದ್ಯಕ್ಕಂತೂ ಇಲ್ಲವೆಂದು ಸ್ವೀಡಿಶ್ ಡಾಕ್ಟರ್‌ಗಳು ಹೇಳು­ತ್ತಾರೆ. ಏಕೆಂದರೆ ಇದು ತೀರಾ ನಿಧಾನಕ್ಕೆ ನಡೆಸ­ಬೇಕಾದ, ತೀರಾ ದುಬಾರಿಯೆನಿಸುವ ಡಬಲ್ ಶಸ್ತ್ರಚಿಕಿತ್ಸೆ. ಇಬ್ಬರು ಮಹಿಳೆಯರನ್ನೂ ಆಸ್ಪತ್ರೆಗೆ ಕರೆಸಬೇಕು. ಕೆಲವರ ಶರೀರಕ್ಕೆ ಬೇರೊಂದು ಮಹಿಳೆಯ ಗರ್ಭದ ಚೀಲ ಅಂಟುವುದೇ ಇಲ್ಲ. ಕಸಿ ಮಾಡಿ ಎರಡು ಮೂರು ತಿಂಗಳವರೆಗೆ ಏನೆಲ್ಲ ಔಷಧ ಚುಚ್ಚುಮದ್ದು ಕೊಟ್ಟರೂ ಚೀಲ ತಿರಸ್ಕೃತವಾದೀತು. ಪದೇಪದೇ ಆಸ್ಪತ್ರೆಗೆ ಎಡ­ತಾಕಬೇಕು; ದುಬಾರಿಯಂತೂ ಹೌದು. ಈಗಿನ ಆರಂಭದ ಯತ್ನಗಳಲ್ಲಿ ಖರ್ಚು ಕೋಟಿ ದಾಟು­ತ್ತದೆ.

ಹಾಗೆ ನೋಡಿದರೆ ಇದು ಮೂತ್ರಪಿಂಡ ಕಸಿ ಅಥವಾ ಹೃದಯ ಕಸಿಯಷ್ಟು ಅಪಾಯಕಾರಿ ಅಲ್ಲ, ನೈತಿಕ ದೃಷ್ಟಿಯಿಂದ ವಿವಾದಾತ್ಮಕವೂ ಆಗು­ವಂಥದ್ದಲ್ಲ. ಆಗಬಾರದು. ತಾಯಿಯೊಬ್ಬಳಿಗೆ ಮಕ್ಕಳು ಸಾಕೆನಿಸಿದರೆ ಅವಳ ಗರ್ಭದ ಚೀಲ ಚಪ್ಪಟೆ ಬಲೂನಿನಂತೆ ದೇಹದಲ್ಲಿ ಖಾಲಿ ಕೂತಿರುತ್ತದೆ ವಿನಾ ಮುಂದೆ ಅದರಿಂದ ಅವಳಿಗೆ ಏನೂ ಪ್ರಯೋಜನವಿಲ್ಲ. ಆ ಚೀಲವನ್ನು ಬೇಕಿದ್ದವರಿಗೆ ದಾನ ಕೊಡಬಹುದು. ತನ್ನದೇ ಸಂಬಂಧಿಗಳಿಗೆ ಅಥವಾ ಬಂಧುಮಿತ್ರರಿಗೆ ಅದನ್ನು ಉಚಿತವಾಗಿ ಕೊಡುವ ಬಗ್ಗೆ ಏನೂ ತಕರಾರು ಇರಲಿಕ್ಕಿಲ್ಲ. ಶಸ್ತ್ರಚಿಕಿತ್ಸೆಯ ವೆಚ್ಚ­ವೊಂದನ್ನು ಬಿಟ್ಟರೆ ಬೇರೆ ಹಣದ ಲೇವಾದೇವಿ ಇಲ್ಲದೆ, ಲಾಭದ ಆಮಿಷವಿಲ್ಲದೆ, ಕಾನೂನಿನ ತೊಡಕು ಇಲ್ಲದೆ ಸಲೀಸಾಗಿ ಕಸಿ ಕೆಲಸವನ್ನು ನಡೆಸ­ಬಹುದು.

ಆದರೆ ಈ ತಂತ್ರಜ್ಞಾನದ ಬಳಕೆ ಇಷ್ಟಕ್ಕೇ ಸೀಮಿತವಾಗುಳಿದೀತೆ? ಮಕ್ಕಳು ಬೇಕೇ ಬೇಕೆಂಬ ಆಸೆಯಿದ್ದ ಅನುಕೂಲಸ್ಥರು ಹಣ ಕೊಟ್ಟಾ­ದರೂ ಖಾಲಿ ಚೀಲವನ್ನು ಖರೀದಿಸಲು ಮುಂದೆ ಬರು­ತ್ತಾರೆ. ಇತ್ತ ತನ್ನ ಖಾಲಿ ಚೀಲಕ್ಕೆ ಚೀಲಭರ್ತಿ ಹಣ ಸಿಗುತ್ತದೆ ಎಂಬುದು ಗೊತ್ತಾ­ದರೆ ಎಷ್ಟೊಂದು ಮಹಿಳೆಯರು ತಮ್ಮದನ್ನು ಮಾರಲು ನೋಂದಣಿ ಮಾಡಿಸಿಕೊಳ್ಳುತ್ತಾರೆ. ತನ್ನ ಗರ್ಭದಲ್ಲಿ ಬೇರೊಬ್ಬರ ಶಿಶುವನ್ನು
ಬೆಳೆ­ಸುವ ಬಾಡಿಗೆ ತಾಯಂದಿರ ಸುತ್ತ ಈಗ ಏನೆಲ್ಲ ಸಮಸ್ಯೆಗಳು ಸೃಷ್ಟಿಯಾಗಿರುವ ಹಾಗೆ ಇಲ್ಲೂ ಹೊಸ ಅನಿರೀಕ್ಷಿತ ಸಮಸ್ಯೆಗಳು, ಕಾನೂನಿನ ಹೊಸ ಪ್ರಶ್ನೆಗಳು ಎದ್ದೇಳುವ ಸಂಭವವಿದೆ. ಡಾಕ್ಟರ್‌ಗಳಿಗೆ, ಔಷಧ ಕಂಪೆನಿ­ಗಳಿಗೆ ಹಾಗೂ ಮಧ್ಯವರ್ತಿಗಳಿಗೆ ಹಣ ಗಳಿಕೆಯ ಹೊಸ ದಂಧೆ ಕಾಣುತ್ತದೆ. ಗರ್ಭದ ಚೀಲದ ಸಣ್ಣಪುಟ್ಟ ದೋಷ­ಗಳನ್ನು ಔಷಧ ಅಥವಾ ಚಿಕ್ಕ ಸರ್ಜರಿಯ ಮೂಲಕ ಪರಿಹರಿಸಬಹುದಾ­ಗಿ­ದ್ದರೂ ಗರ್ಭದ ಕಸಿಯನ್ನೇ ಶಿಫಾರಸು ಮಾಡಿ ದೊಡ್ಡ ಸಮಸ್ಯೆ­ಯನ್ನೇ ಸೃಷ್ಟಿಸಬಹುದು. ‘ಗರ್ಭ­ದಾನ ಮಹಾ­ದಾನ’ ಎಂದೆಲ್ಲ ಪ್ರಚಾರ ಕೊಟ್ಟು ಭಾರೀ ಲಾಭದ ಆಮಿಷ ಹುಟ್ಟಿಸಿ ಸಂಕಷ್ಟಗಳನ್ನು ತಂದೊ­­ಡ್ಡಬಹುದು. ‘ಹೆತ್ತೊಡಲ ಸಂಕಟ’ ಎಂಬ ಮಾತಿಗೆ ಹೊಸಹೊಸ ಆಯಾಮಗಳು ಗೋಚ­ರಿ­ಸ­ಬಹುದು. 

ತಾಯಿಯಾಗುವುದು ಯಾರಿಗೂ ಯಾವತ್ತೂ ಸುಲಭವೇ ಅಲ್ಲವೇನೊ. ಕನ್ನಡಾಂಬೆಗೂ ಅಷ್ಟೆ, ಭಾರತ ಮಾತೆಗೂ ಅಷ್ಟೆ; ಭೂಮಿ ತಾಯಿಗೂನೂ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT