ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಚಿತ ಲೋಕ’ದಲ್ಲಿ ಗ್ರಾಹಕರೇ ಉತ್ಪನ್ನ

Last Updated 18 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಯಾವುದೇ ಉತ್ಪನ್ನ ಅಥವಾ ಸೇವೆಯ ಜಾಹೀರಾತಿನಲ್ಲಿ ‘ಉಚಿತ’ ಎಂಬ ಪದ ಕಂಡರೆ ಅದನ್ನು ಸಂಪೂರ್ಣವಾಗಿ ನೋಡದೇ ಅಥವಾ ಓದದೇ ಇರುವವರು ವಿರಳ. ಇದನ್ನು ಮಾರುಕಟ್ಟೆ ತಜ್ಞರು ಬಹಳ ಹಿಂದೆಯೇ ಅರ್ಥ ಮಾಡಿಕೊಂಡಿದ್ದಾರೆ. ಕಳೆದ ಒಂದು ಶತಮಾನದ ಅವಧಿಯಲ್ಲಿ ಈ ಕುರಿತಂತೆ ಅನೇಕ ಅಧ್ಯಯನಗಳು ಬಂದಿವೆ. ಹೆಚ್ಚು ಕಡಿಮೆ ಎಲ್ಲ ಅಧ್ಯಯನಗಳೂ ‘ಉಚಿತ ಕೊಡುಗೆ’ಗಳಿಗೆ ಗ್ರಾಹಕರ ಪ್ರತಿಕ್ರಿಯೆ ಸಾಮಾನ್ಯವಾಗಿ ಧನಾತ್ಮಕವಾಗಿಯೇ ಇರುತ್ತವೆ ಎಂಬುದನ್ನು ಕಂಡುಕೊಂಡಿವೆ.

ಸಾಮಾನ್ಯವಾಗಿ ಎಲ್ಲಾ ಉಚಿತ ಕೊಡುಗೆಗಳ ಹಿಂದೆಯೂ ಗ್ರಾಹಕನಿಗೆ ತಕ್ಷಣಕ್ಕೆ ಕಾಣದೇ ಇರುವ ವೆಚ್ಚವೊಂದು ಅಡಗಿರುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಇದು ಗ್ರಾಹಕನಿಗೆ ತಡವಾಗಿಯಾದರೂ ಅರ್ಥವಾಗುತ್ತದೆ. ಆದರೆ, ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ‘ಉಚಿತ ಸೇವೆ’ಗೆ ನೀಡುತ್ತಿರುವ ಬೆಲೆಯನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಅರ್ಥವಾದರೂ ಈ ಕಣ್ಣಿಗೆ ಕಾಣದೇ ಇರುವ ವೆಚ್ಚ ತನಗೆ ಉಂಟು ಮಾಡುವ ನಷ್ಟ ಯಾವುದೆಂದು ಬಳಕೆದಾರನಿಗೆ ಸಮರ್ಪಕವಾಗಿ ಗ್ರಹಿಸುವುದರಲ್ಲಿ ಸೋಲುತ್ತಾನೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಹೊಸ ಆವಿಷ್ಕಾರವಾದ ‘ವೆಬ್ 2.0’ ಸೇವೆಗಳಿಗೆ ಗ್ರಾಹಕನ ಈ ಅರಿವಿನ ಕೊರತೆಯೇ ಆಧಾರ. ಗೂಗಲ್, ಯಾಹೂ, ರಿಡಿಫ್ ಆದಿಯಾಗಿ ಅನೇಕ ಕಂಪೆನಿಗಳು ಒದಗಿಸುವ ಇ–ಮೇಲ್, ಬ್ಲಾಗ್ ಇತ್ಯಾದಿ ಸೇವೆಗಳು ಹಾಗೆಯೇ ಫೇಸ್‌ಬುಕ್, ಟ್ವಿಟ್ಟರ್, ರೆಡ್‌ಇಟ್, ಲಿಂಕ್ಡ್ ಇನ್‌ನಂಥ ಕಂಪೆನಿಗಳು ಒದಗಿಸುತ್ತಿರುವ ‘ಸಾಮಾಜಿಕ ಜಾಲ’ದ ಸೇವೆಗಳೆಲ್ಲವೂ ಷೇರು ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿರುವುದರ ಹಿಂದೆ ಗ್ರಾಹಕನ ಅರಿವಿನ ಕೊರತೆ ಇದ್ದೇ ಇದೆ.

ಯೂನಿವರ್ಸಿಟಿ ಆಫ್ ನಾರ್ತ್ ಕೆರೋಲಿನಾದ ಮಾಹಿತಿ ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗದ ಪ್ರೊಫೆಸರ್ ಝೇನೆಪ್ ಟುಫೆಕಿ ಅವರು ಕೆಲವು ತಿಂಗಳುಗಳ ಹಿಂದೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ‘ಸಾಮಾಜಿಕ ಜಾಲ’ದ ಸೇವೆಯನ್ನು ನೀಡುವ ಕಂಪೆನಿಗಳು ತಮ್ಮ ಜಾಹೀರಾತು ಆಧಾರಿತ ಮಾದರಿಯನ್ನು ಕೈಬಿಟ್ಟು ಗ್ರಾಹಕರಿಂದ ಸಣ್ಣ ಪ್ರಮಾಣದ ಶುಲ್ಕ ಪಡೆದು ಸೇವೆ ಒದಗಿಸಬಹುದಾದ ಒಂದು ಪರಿಕಲ್ಪನೆಯ ಕುರಿತು ಚರ್ಚಿಸಿದ್ದರು. ತಿಂಗಳಿಗೆ 20 ಸೆಂಟ್ಸ್ ಅಂದರೆ ಸುಮಾರು 13 ರೂಪಾಯಿಗಳಷ್ಟನ್ನು ಪ್ರತೀ ಫೇಸ್‌ಬುಕ್ ಬಳಕೆದಾರ ಪಾವತಿಸಬಹುದು ಎಂಬುದನ್ನು ಪ್ರಸ್ತಾಪಿಸಿದ್ದ ಅವರು ಹೀಗೆ ಶುಲ್ಕ ವಿಧಿಸಿ ಸೇವೆ ಒದಗಿಸುವ ಮೂಲಕ ಸದಸ್ಯರ ವೈಯಕ್ತಿಕ ಮಾಹಿತಿಯನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳದೆಯೇ ಫೇಸ್‌ಬುಕ್ ಈಗಿನಷ್ಟೇ ಪ್ರಮಾಣದ ಲಾಭಗಳಿಸುವ ಸಾಧ್ಯತೆಯೊಂದನ್ನು ಮುಂದಿಟ್ಟಿದ್ದರು.

ವ್ಯಕ್ತಿಯ ಖಾಸಗಿ ಮಾಹಿತಿಯನ್ನು ವಾಣಿಜ್ಯ ಸಂಸ್ಥೆಗಳು ಸಂಗ್ರಹಿಸುತ್ತಿರುವುದರ ಕುರಿತಂತೆ ವಿಶ್ವದಾದ್ಯಂತ ಗ್ರಾಹಕರು ಜಾಗೃತರಾಗುತ್ತಿರುವ ಈ ದಿನಗಳಲ್ಲಿ ಝೇನಪ್ ಅವರ ಪ್ರಸ್ತಾಪ ಎಲ್ಲಾ ‘ಸಾಮಾಜಿಕ ಜಾಲ’ ಸೇವೆ ನೀಡುವ ಕಂಪೆನಿಗಳಿಗೆ ಒಂದು ಪರ್ಯಾಯ ತಂತ್ರದಂತೆ ಕಾಣಿಸಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದು ಸಹಜ. ಆದರೆ, ಇ–ಮೇಲ್‌ನಿಂದ ತೊಡಗಿ ಸಾಮಾಜಿಕ ಜಾಲ ಸೇವೆಗಳ ತನಕದ ಉದ್ಯಮಕ್ಕೆ ಈ ಬಗೆಯ ಶುಲ್ಕಾಧಾರಿತ ಸೇವೆಯಲ್ಲಿ ನಂಬಿಕೆಯೇ ಇಲ್ಲ ಎಂದು ಕೊಲಂಬಿಯಾ ಲಾ ಸ್ಕೂಲ್‌ನ ಪ್ರೊಫೆಸರ್ ಟಿಮ್ ವೂ ವಾದಿಸುತ್ತಾರೆ. ಅವರ ವಾದವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪುಸ್ತಕ, ಪತ್ರಿಕೆ, ಸಂಗೀತ, ಸಿನಿಮಾ ಮತ್ತು ಕೇಬಲ್ ಟಿ.ವಿ. ಮತ್ತು ಇತ್ತೀಚಿನ ಇಂಟರ್ನೆಟ್ ಆಧಾರಿತ ಉದ್ಯಮಗಳ ತನಕದ ಸಂವಹನೋದ್ಯಮ ಅನುಸರಿಸುತ್ತಾ ಬಂದಿರುವ ವ್ಯಾಪಾರದ ಮಾದರಿಯನ್ನು ಗಮನಿಸಬೇಕು.

ಸಂವಹನೋದ್ಯಮ 18ನೇ ಶತಮಾನದಲ್ಲಿ ಆರಂಭವಾಯಿತು ಎನ್ನಬಹುದು. ಆ ಕಾಲದಿಂದಲೂ ಈ ಉದ್ಯಮದ ಆದಾಯದ ಮೂಲಗಳು ಎರಡು. ಮೊದಲನೆಯದ್ದು ಉತ್ಪನ್ನಗಳ ಮಾರಾಟ. ಎರಡನೆಯದ್ದು ಜಾಹೀರಾತು. ಪುಸ್ತಕ, ಸಂಗೀತ ತಟ್ಟೆಗಳು, ಸಿನಿಮಾ ಮುಂತಾದುವುಗಳಲ್ಲಿ ಜಾಹೀರಾತಿಗಿಂತ ಉತ್ಪನ್ನದ ಮಾರಾಟವೇ ಮುಖ್ಯ. ವೃತ್ತಪತ್ರಿಕೆ, ಕೇಬಲ್ ಟಿ.ವಿ. ಮುಂತಾದುವುಗಳಲ್ಲಿ ಉತ್ಪನ್ನದ ಮಾರಾಟದಿಂದ ದೊರೆಯುವ ಆದಾಯದ ಜೊತೆಗೆ ಜಾಹೀರಾತುಗಳೂ ಲಾಭ ತಂದುಕೊಡುತ್ತವೆ. ರೇಡಿಯೊ ಮತ್ತು ಟಿ.ವಿ.ಯ ಸಂದರ್ಭಗಳಲ್ಲಿ ಮೂಲ ಉತ್ಪನ್ನ ಜಾಹೀರಾತಿನ ವಾಹಕವಾಗಿ ಕೆಲಸ ಮಾಡುತ್ತದೆ. ಇಂಟರ್ನೆಟ್‌ನ ಸಂದರ್ಭದಲ್ಲಿ ಇದು ಸಂಪೂರ್ಣವಾಗಿ ಜಾಹೀರಾತುಗಳನ್ನೇ ಅವಲಂಬಿಸಿದ ವ್ಯಾಪಾರದ ಮಾದರಿಯೊಂದು ರೂಪುಗೊಂಡಿತು. ವೃತ್ತಪತ್ರಿಕೆಗಳ ಸಂದರ್ಭದಲ್ಲಿ ಜಾಹೀರಾತು ಒಂದು ಮುಖ್ಯ ವರಮಾನದ ಮೂಲವಾಗಿದ್ದರೂ ಪತ್ರಿಕೆಗೊಂದು ಮುಖಬೆಲೆ ಇದ್ದೇ ಇತ್ತು. ಕೇಬಲ್ ಟಿ.ವಿ. ಮತ್ತು ರೇಡಿಯೊದ ಸಂದರ್ಭದಲ್ಲಿ ಇದು ಸ್ವಲ್ಪ ಮಟ್ಟಿಗೆ ಸಡಿಲಗೊಂಡ ಮುಖಬೆಲೆ, ಇಂಟರ್ನೆಟ್‌ನ ಸಂದರ್ಭಕ್ಕೆ ಬರುವ ಹೊತ್ತಿಗೆ ‘ಸಂಪೂರ್ಣ ಉಚಿತ’ ಮಾದರಿಯೊಂದನ್ನು ಆವಿಷ್ಕರಿಸಿಕೊಂಡಿತು.

ಇ–ಮೇಲ್ ಅಥವಾ ಸಾಮಾಜಿಕ ಜಾಲ ಸೇವೆಗಳು ಈಗ ಅಗತ್ಯ ಸೇವೆಯೇ ಆಗಿಬಿಟ್ಟಿದೆ. ಇದಕ್ಕಾಗಿ ನಾವು ಗೂಗಲ್, ಯಾಹೂ, ರಿಡಿಫ್, ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿ ಯಾವುದೇ ಸಂಸ್ಥೆಗಳಿಗೂ ನಾವು ಶುಲ್ಕಪಾವತಿಸುವುದಿಲ್ಲ. ಬದಲಿಗೆ ನಮ್ಮ ವೈಯಕ್ತಿಕ ವಿವರಗಳನ್ನು ಅವರಿಗೆ ಒದಗಿಸುತ್ತೇವೆ. ನಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಸಕ್ತಿ, ಉದ್ಯೋಗ, ಸಂಬಂಧಿಗಳು ಹೀಗೆ ಅನೇಕ ವಿವರಗಳನ್ನು ಅವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಗ್ರಹಿಸುತ್ತವೆ. ಈ ವಿವರಗಳನ್ನು ಬಿಕರಿ ಮಾಡುವ ಮೂಲಕ ‘ಉಚಿತ ಸೇವೆ’ ಒದಗಿಸುವ ಸಂಸ್ಥೆಗಳು ತಮ್ಮ ವರಮಾನವನ್ನು ಸಂಗ್ರಹಿಸುತ್ತವೆ. ನಿರ್ದಿಷ್ಟ ಸಾಮಾಜಿಕ ಜಾಲ ಸೇವೆ ನೀಡುವ ಕಂಪೆನಿಯೊಂದರ ಷೇರು ಮೌಲ್ಯ ನಿರ್ಧರಿಸುವುದೇ ಅದರ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಸಂಖ್ಯೆ ಮತ್ತು ಅವರ ವಿವರಗಳು. ಯಾವ ಕಂಪೆನಿ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿದೆಯೇ ಅದು ಶ್ರೀಮಂತ ಕಂಪೆನಿ.

ಎಲ್ಲದಕ್ಕಿಂತ ಹೆಚ್ಚಾಗಿ ಉಚಿತ ಸೇವೆಯ ಹೆಸರಿನಲ್ಲಿ ಈ ಕಂಪೆನಿಗಳು ಸಂಗ್ರಹಿಸುತ್ತಿರುವ ಖಾಸಗಿ ಮಾಹಿತಿ ಒಂದು ಬಗೆಯ ಸ್ಥಿರಾಸ್ಥಿ. ಗ್ರಾಹಕ ತಿಂಗಳಿಗೊಂದಷ್ಟು ಶುಲ್ಕ ನೀಡಿ ಸೇವೆಯನ್ನು ಯಾವುದೇ ಖಾಸಗಿ ಮಾಹಿತಿಯನ್ನು ಕಂಪೆನಿಯ ಜೊತೆ ಹಂಚಿಕೊಳ್ಳದೇ ಇದ್ದರೆ ಸೇವೆ ಒದಗಿಸುವ ಕಂಪೆನಿ ವೈಯಕ್ತಿಕ ಮಾಹಿತಿಯ ಸ್ಥಿರಾಸ್ಥಿಯನ್ನು ಸಂಪಾದಿಸಲು ಸಾಧ್ಯವಾಗುವುದೇ ಇಲ್ಲ. ಕತ್ತುಕೊಯ್ಯುವಂಥ ಸ್ಪರ್ಧೆ ಇರುವ ಗ್ರಾಹಕನನ್ನು ತಮ್ಮಿಂದ ದೂರವಾಗದಂತೆ ಕಟ್ಟಿ ಹಾಕಲೂ ಸಾಧ್ಯವಿಲ್ಲ. ಆದ್ದರಿಂದ ಝೇನಪ್ ಅವರ ಶುಲ್ಕಾಧಾರಿತ ಸೇವೆಯ ಪರಿಕಲ್ಪನೆಯನ್ನು ಯಾವ ಸಾಮಾಜಿಕ ಜಾಲ ದೈತ್ಯ ಕಂಪೆನಿಯೂ ಒಪ್ಪಿಕೊಳ್ಳುವುದಿಲ್ಲ.

ಹಾಗಿದ್ದರೆ ಇಡೀ ಪ್ರಕ್ರಿಯೆಯಲ್ಲಿ ಗ್ರಾಹಕನಿಗೆ ಯಾವ ಸ್ಥಾನವೂ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಹೊರಟರೆ ಮತ್ತೊಂದು ನಮಗೆ ಮತ್ತೊಂದು ಚಿತ್ರಣ ಸಿಗುತ್ತದೆ. ಯಾವುದೇ ಸಾಮಾಜಿಕ ಜಾಲತಾಣದ ಯಶಸ್ಸಿರುವುದು ಅದನ್ನು ಬಳಸುವವರ ಸಂಖ್ಯೆಯಲ್ಲಿ. ಗ್ರಾಹಕನೇ ಉತ್ಪನ್ನವೂ ಆಗಿಬಿಡುವ ಈ ವೈಚಿತ್ರ್ಯವೊಂದನ್ನು ಸಿಲಿಕಾನ್ ವ್ಯಾಲಿಯ ಬುದ್ಧಿವಂತರು ಆವಿಷ್ಕರಿಸಿಬಿಟ್ಟಿದ್ದಾರೆ. ವ್ಯಕ್ತಿಯ ಖಾಸಗಿ ಮಾಹಿತಿಯ ಪಾವಿತ್ರ್ಯದ ಕುರಿತ ಚರ್ಚೆಯೂ ಈ ವೇದಿಕೆಗಳಲ್ಲೇ ನಡೆಯಬೇಕಾದ ವಿಚಿತ್ರ ಪರಿಸ್ಥಿತಿಯಲ್ಲಿ ಇಂದು ಜಗತ್ತಿದೆ.

ಈ ವೈಚಿತ್ರ್ಯವೇ ಒಂದು ಬಗೆಯ ಸಮತೋಲನಕ್ಕೂ ಕಾರಣವಾಗುತ್ತಿದೆ. ಪ್ರತಿಯೊಂದು ಸಾಮಾಜಿಕ ಜಾಲತಾಣವೂ ತನ್ನ ಬಳಕೆದಾರರ ಕುರಿತು ಅತಿ ಹೆಚ್ಚು ವಿವರಗಳನ್ನು ಬೇಡುತ್ತಿರುವಾಗಲೇ ಅದರ ಬಳಕೆದಾರರು ಖಾಸಗಿ ವಿವರಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಜಿಪುಣರಾಗುತ್ತಾ ಸಾಗಿದ್ದಾರೆ. ಫೇಸ್‌ಬುಕ್ ‘ರಿಯಲ್ ನೇಮ್ ಪಾಲಿಸಿ’ (ನಿಜ ಹೆಸರು ನೀತಿ), ಜಿಮೇಲ್ ರೂಪಿಸಿದ ಮೊಬೈಲ್ ಸಂಖ್ಯೆ ಕಡ್ಡಾಯ ನೀತಿಗಳು ವಿಫಲವಾಗುವುದರ ಹಿಂದೆ ಗ್ರಾಹಕರ ಶಕ್ತಿ ಇದೆ. ಇಂಥ ನೀತಿಗಳನ್ನು ಹೆಚ್ಚು ಒತ್ತಾಯದಿಂದ ಹೇರಿದರೆ ತಮ್ಮ ಒಟ್ಟು ಬಳಕೆದಾರರ ಸಂಖ್ಯೆ ಕಡಿಮೆಯಾಗಬಹುದೆಂಬ ಭಯ ಈ ಎಲ್ಲಾ ಕಂಪೆನಿಗಳಿಗೂ ಇದೆ. ಸದ್ಯದ ಮಟ್ಟಿಗೆ ಈ ಭಯವೇ ಗ್ರಾಹಕರ ಹಿತೈಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT