ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಭಾಷಾ ಪರಿಸರದಲ್ಲಿ ಕಲಿಕೆಯ ಮಾಧ್ಯಮ

ತಾಯ್ನುಡಿಯ ಕಲಿಕೆಯ ಲಾಭಗಳು ಯುನೆಸ್ಕೊ ಅಧ್ಯಯನಗಳಲ್ಲಿ ಪದೇಪದೇ ಸಾಬೀತಾಗಿವೆ
Last Updated 27 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಜಾರ್ಖಂಡಿನ ಪುಟ್ಟ ಹಳ್ಳಿಯ ಶಾಲೆ. ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಹಿಂದಿ ಮಾಧ್ಯಮದಲ್ಲಿ ತಮ್ಮ ಮೊದಲ ಕಲಿಕೆಯನ್ನು ಪ್ರಾರಂಭಿಸಿದ್ದಾರೆ. ಎರಡನೇ ತರಗತಿಯಲ್ಲಿ ವಿಜ್ಞಾನದ ವಿಷಯದ ಪಾಠವನ್ನು ಶಿಕ್ಷಕರು ಹಿಂದಿಯಲ್ಲಿ ಕಲಿಸಿಕೊಡುತ್ತಿದ್ದಾರೆ. ಬೋಜ್‌ಪುರಿ ಮನೆಮಾತಾಗಿರುವ ಹುಡುಗಿಗೆ ಹಿಂದಿಯಲ್ಲಿ ಕಲಿಸುತ್ತಿರುವುದು ಪೂರ್ಣವಾಗಿ ಅರ್ಥವಾಗುತ್ತಿಲ್ಲ. ಬೋರ್ಡಿನ ಮೇಲೆ ಬರೆದಿರುವ ವಿಜ್ಞಾನದ ವಿಷಯವನ್ನು ಅನುಕರಣೆಯಲ್ಲಿ ಪುಸ್ತಕದಲ್ಲಿ ಬರೆದುಕೊಳ್ಳುತ್ತಾಳೆ. ಶಾಲೆ ಅವಧಿ ಮುಗಿದು ಮನೆಗೆ ಬಂದಿದ್ದಾಳೆ. ಬಡತನದಲ್ಲಿ ಬೇಯುತ್ತಿರುವ ಕುಟುಂಬದ ಪಾಲನೆಗಾಗಿ ತನ್ನ ಪಾಲಿನ ಕೆಲಸವನ್ನೆಲ್ಲಾ ಮುಗಿಸಿ ನಾಳೆ ವಿಜ್ಞಾನದ ಕಿರು ಪರೀಕ್ಷೆಗೆ ತಯಾರಿಗಾಗಿ ಕುಳಿತಿದ್ದಾಳೆ. ವಿಜ್ಞಾನದ ಕೆಲವು ವಿಷಯಗಳು ಸರಿಯಾಗಿ ಅರ್ಥವಾಗಿಲ್ಲ. ಅಪ್ಪಅಮ್ಮನಲ್ಲಿ ಕೇಳಿದರೆ ಅವರಿಗೆ ವಿಜ್ಞಾನದ ವಿಷಯವನ್ನು ಹಿಂದಿಯಲ್ಲಿ ಓದಿ ಅವಳಿಗೆ ತಿಳಿಹೇಳುವಷ್ಟು ವಿದ್ಯಾವಂತರಲ್ಲ. ಜೊತೆಗೆ ಮನೆ ಮಾತು ಬೋಜ್‌ಪುರಿ. ಇವಳು ಮಕೀಕಾಮಕಿ ಉರುಹೊಡೆದು ಮಲಗುತ್ತಾಳೆ. ಪರೀಕ್ಷೆಯಲ್ಲಿ ಪಾಸಾಗುತ್ತಾಳೆ. ಆದರೆ ಅವಳ ಮನಸ್ಸಿಗೆ ತಿಳಿದಿದೆ ‘ನನಗೆ ಸಂಪೂರ್ಣವಾಗಿ ಕಲಿಕೆಯ ವಿಷಯಗಳು ಅರ್ಥವಾಗುತ್ತಿಲ್ಲ’ ಎಂದು. ಶಾಲೆಗೆ ಬರಲು ಅಂತಹ ವಿಶೇಷ ಆಸಕ್ತಿ ಅವಳಿಗೆ ಮೂಡುತ್ತಿಲ್ಲ. ಗೆಳತಿಯನ್ನು ಕೇಳೋಣವೆಂದರೆ ಆಕೆಯ ತಾಯ್ನುಡಿ ಕುರ್ಮಾಲಿ. ಆಕೆಯೂ ಕಲಿಕೆಯಲ್ಲಿ ಹಿಂದುಳಿದಿದ್ದಾಳೆ. ಆಕೆಯ ಬಹುತೇಕ ಸಹಪಾಠಿಗಳಿಗೂ ಇದೇ ಸಮಸ್ಯೆ.

ಜಾರ್ಖಂಡಿನ ಗ್ರಾಮೀಣ ಭಾಗಗಳಲ್ಲಿ ಕೇವಲ ಶೇ 4 ರಷ್ಟು ಜನರು ಹಿಂದಿ ಭಾಷೆ ಮಾತನಾಡುತ್ತಾರೆ. ಇನ್ನುಳಿದ ಶೇ 99ರಷ್ಟು ಗ್ರಾಮೀಣ ಜನರು ಆಯಾ ಬುಡಕಟ್ಟಿನ ಆದಿವಾಸಿ ಭಾಷೆ ಅಥವಾ ಪ್ರಾದೇಶಿಕ ನಾಡಭಾಷೆಯನ್ನು ಆಡುತ್ತಾರೆ. ಈ ರೀತಿಯ ಭಾಷಾ ವೈವಿಧ್ಯ ಪರಿಗಣಿಸದ ಜಾರ್ಖಂಡ್ ಸರ್ಕಾರ ಹಿಂದಿಯನ್ನು ಅದರ ಅಧಿಕೃತ ಭಾಷೆಯನ್ನಾಗಿ ಘೋಷಿಸಿದೆ. ಇನ್ನುಳಿದ ಪ್ರಮುಖ 15 ನಾಡಭಾಷೆಗಳಿಗೆ ಎರಡನೇ ಸ್ಥಾನವನ್ನು ಕೊಟ್ಟಿದೆ. ಗ್ರಾಮೀಣ ಜಾರ್ಖಂಡಿನ ಮಕ್ಕಳ ಈ ಪರಿಸ್ಥಿತಿಯನ್ನು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ ಯುನಿಸೆಫ್ ಮತ್ತು ಜಾರ್ಖಂಡ್ ಟ್ರೈಬಲ್ ವೆಲ್ಫೇರ್ ರಿಸರ್ಚ್ ಇನ್‌ಸ್ಟಿಟ್ಯೂಟ್ 2013ರಲ್ಲಿ ತನ್ನ ವರದಿಯನ್ನು ನೀಡಿತು. ಹಿಂದಿ ಮಾಧ್ಯಮದಲ್ಲಿ ಶಿಕ್ಷಣವನ್ನು ಶುರು ಮಾಡುವ ಮಕ್ಕಳ ಕಲಿಕೆಯ ಮಟ್ಟ ಮತ್ತು ಯಾವುದೇ ವಿಷಯವನ್ನು ಗ್ರಹಿಸುವ ಹಾಗೂ ಅವರವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ಈ ಕಲಿಕೆಯನ್ನು ಅಳವಡಿಸಿಕೊಳ್ಳುವ ಶಕ್ತಿ ಅತ್ಯಂತ ನಿರಾಶಾದಾಯಕವಾಗಿರುವುದನ್ನು ವರದಿ ತೆರೆದು ತೋರಿಸಿದೆ.

ಭಾರತದ ಬಹುಭಾಷೆಯ ಪರಿಸರಕ್ಕೆ ಹೊಂದುವ ಕಲಿಕೆಯಿಂದ ವಂಚಿತರಾಗುವವರು ಮುಖ್ಯವಾಗಿ ಹಿಂದುಳಿದ ಗ್ರಾಮೀಣ ಮತ್ತು ಬುಡಕಟ್ಟು ಜನರ ಮಕ್ಕಳು. ಭಾರತದ ಬಹುಪಾಲು ಬುಡಕಟ್ಟಿನ ಮಕ್ಕಳು ಆಯಾ ರಾಜ್ಯದ ನಾಡ ಭಾಷೆ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಪ್ರಾರಂಭಿಸಿದರೂ ಆ ಮಕ್ಕಳ ಕಲಿಕೆಯ ಮಟ್ಟ ಮತ್ತು ಅವರ ಮುಂದಿನ ಜೀವನದ ಯಶಸ್ಸಿನ ಮಟ್ಟ ನಿರಾಶಾದಾಯಕವಾಗಿರುವುದನ್ನು ಮನಗಂಡ ಭಾರತ ಸರ್ಕಾರ, 2003ರಲ್ಲಿ ‘ಸರ್ವ ಶಿಕ್ಷಣ ಅಭಿಯಾನ’ದ ಭಾಗವಾಗಿ ಬುಡಕಟ್ಟು ಜನಾಂಗಗಳು ಹೆಚ್ಚಿರುವ ರಾಜ್ಯಗಳಲ್ಲಿ ‘ತಾಯ್ನುಡಿಯ ಕಲಿಕಾ ಮಾಧ್ಯಮದಲ್ಲಿ ಬಹುಭಾಷಾ ಸೂತ್ರ’ವನ್ನು ಪರಿಚಯಿಸಲು ಮುಂದಾಯಿತು. ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳನ್ನು ಬಿಟ್ಟರೆ ಯಾವ ರಾಜ್ಯಗಳೂ ಇದರ ಬಗ್ಗೆ ಹೆಚ್ಚು ಗಮನಕೊಡಲಿಲ್ಲವೆಂಬುದು ಈಗ ಇತಿಹಾಸ.

ಆಗಿನ ಆಂಧ್ರ ಪ್ರದೇಶದ ಸರ್ಕಾರವು ಪ್ರಯೋಗಾತ್ಮಕವಾಗಿ 2003ರಲ್ಲಿ ರಾಜ್ಯದ ಸಾವಿರ ಶಾಲೆಗಳಲ್ಲಿ 8 ಬುಡಕಟ್ಟಿನ ಭಾಷೆಗಳನ್ನು ಶಿಕ್ಷಣದ ಕಲಿಕೆಯ ಮಾಧ್ಯಮವನ್ನಾಗಿತಂದಿತು. ಬುಡಕಟ್ಟಿನ ಭಾಷೆಗಳಲ್ಲಿ ಸರಳವಾದ ಪಠ್ಯಪುಸ್ತಕಗಳನ್ನು ಆಯಾ ಸಮುದಾಯದ ಭಾಷೆಯನ್ನು ತಿಳಿದ ವಯಸ್ಕರ ಜೊತೆಗೂಡಿ ರಚಿಸಿತು. ಮಕ್ಕಳು ಈ ಶಾಲೆಗಳಲ್ಲಿ ಮೊದಲ ದಿನಗಳಿಂದಲೇ ತಮ್ಮ ತಾಯ್ನುಡಿಯಲ್ಲಿ ಕಲಿಕೆಯನ್ನು ಶುರು ಮಾಡಿದವು. ಎರಡನೇ ತರಗತಿಯಿಂದ ಕ್ರಮೇಣ ನಾಡ ಭಾಷೆಯಾದ ತೆಲುಗು ಹಾಗೂ ಮೂರನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಓದಲು ಮತ್ತು ಬರೆಯಲು ಕಲಿಯುತ್ತಾರೆ. ಕಲಿಕೆಯ ಅರ್ಧ ಭಾಗ ತಾಯ್ನುಡಿಯಲ್ಲೇ ಆಗುತ್ತದೆ. ಮಿಕ್ಕ ಸಮಯವು ತೆಲುಗು, ಇಂಗ್ಲಿಷ್ ಕಲಿಕೆಗೆ ವಿನಿಯೋಗವಾದರೆ, ಪಠ್ಯದ ವಿಷಯಗಳನ್ನು ದ್ವಿಭಾಷೆಯಲ್ಲಿ ಕಲಿಸಿಕೊಡಲಾಗುತ್ತದೆ. ಐದನೇ ತರಗತಿಯಿಂದ ತೇರ್ಗಡೆಯಾಗುವಷ್ಟರಲ್ಲಿ ಕಲಿಕೆಯ ವಿಷಯಗಳನ್ನು ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಕ್ಷಮತೆಯಿಂದ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಮಕ್ಕಳು ಪಡೆಯುತ್ತಾರೆ. ಬಹುಪಾಲು ಇದೇ ಮಾದರಿಯಲ್ಲಿ ಒಡಿಶಾದ 495 ಶಾಲಾ ಮಕ್ಕಳು ಕಲಿಯುತ್ತಿದ್ದಾರೆ. ಈ ಎರಡು ರಾಜ್ಯಗಳ ಪ್ರಯೋಗಾತ್ಮಕ ಕಲಿಕೆಯ ಮಾದರಿಯನ್ನು ಗಮನಾರ್ಹ ವಿಧಾನವೆಂದು ಯುನೆಸ್ಕೊ ಸಂಶೋಧನೆಯು ತನ್ನ ವರದಿಗಳಲ್ಲಿ ಗುರುತಿಸಿದೆ.

ನಮ್ಮ ರಾಜ್ಯದಲ್ಲಿ ನಿರಂತರವಾಗಿ ಚರ್ಚಿತವಾಗುವ ಇಂಗ್ಲಿಷ್ ಮಾಧ್ಯಮ - ಕನ್ನಡ ಮಾಧ್ಯಮ ಶಿಕ್ಷಣದ ವಿಷಯದ ಚರ್ಚೆಯನ್ನು ಈಗಿನ ಜಾಗತಿಕ ಬದುಕಿನ ವಾಸ್ತವವನ್ನಷ್ಟೇ ಅಲ್ಲದೆ ಮಗುವಿನ ಕಲಿಕೆಯ ಮನಸ್ಸಿನ ಪ್ರಕ್ರಿಯೆಯನ್ನು ಗಮನದಲ್ಲಿರಿಸಿಕೊಂಡು ಅರಿಯಬೇಕಾಗಿದೆ.

ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆಯನ್ನು ಶುರು ಮಾಡುವ ಮಕ್ಕಳು ವ್ಯವಹರಿಸುವಷ್ಟು ಇಂಗ್ಲಿಷ್ ಕಲಿಯುತ್ತಾರೆ ನಿಜ. ಆದರೆ ವಿಷಯವನ್ನು ಪೂರ್ಣವಾಗಿ ಗ್ರಹಿಸುವ, ಸೃಜನಶೀಲವಾಗಿ ಚಿಂತಿಸುವ, ವಿಶ್ಲೇಷಿಸುವ, ವಿವರಣಾತ್ಮಕವಾಗಿ ಅಭ್ಯಸಿಸುವ ಕೌಶಲಗಳನ್ನು ಕಲಿಯಲಾಗದ ಮಕ್ಕಳು ಭವಿಷ್ಯದಲ್ಲಿ ವಿಶಿಷ್ಟ ಉದ್ಯೋಗದ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ? ಸುಮಾರು ಇಪ್ಪತ್ತು ವರ್ಷಗಳಿಂದೀಚೆಗೆ ನಾವು ಕಾಣುತ್ತಿರುವ ಐಟಿಬಿಟಿ ‘ಅಭಿವೃದ್ಧಿ’ ಹೆಚ್ಚು ಕಾಲ ಬಾಳದು. ಬೌದ್ಧಿಕ ಕ್ಷಮತೆಯನ್ನು ಬಯಸುವ ಕೆಲಸಗಳಿಗೂ ಈಗ ರೋಬಾಟಿಕ್, ಡೀಪ್ ಲರ್ನಿಂಗ್, ಮಶಿನ್ ಲರ್ನಿಂಗ್ ಲಗ್ಗೆ ಇಡುತ್ತಿವೆ. ಇವು ಬಹುಪಾಲು ಈಗಿನ ಉದ್ಯೋಗಗಳನ್ನೂ ಕಸಿದು ಕೊಂಡಾಗ ಮುಂದೆ ನಮ್ಮ ಮಕ್ಕಳಿಗೆ ನಿಲುಕುವುದು ಅವರವರ ಸ್ವಂತ ಬುದ್ಧಿಶಕ್ತಿ, ಬದುಕನ್ನು ಕ್ಷಮತೆಯಿಂದ ನಿರ್ವಹಿಸುವ ಮಾನಸಿಕ ದೃಢತೆಯ ಕೌಶಲ. ಇದನ್ನು ಉಳಿಸಿಕೊಳ್ಳುವ ತಾಯ್ನುಡಿಯ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕೊಡುವುದು ಬೇಡವೇ?

ವಿಶ್ವದ (ಮುಖ್ಯವಾಗಿ ಮುಂದುವರೆಯುತ್ತಿರುವ ದೇಶಗಳ) ಶಿಕ್ಷಣ ತಜ್ಞ‌‌ರು ಮತ್ತು ದಿನನಿತ್ಯ ಪಾಠ ಹೇಳಿಕೊಡುವ ಶಿಕ್ಷಕರ ಜೊತೆಗೂಡಿ ಯುನೆಸ್ಕೊ ನಿರಂತರ ಅಧ್ಯಯನಗಳನ್ನು ನಡೆಸಿದೆ. ಪದೇಪದೇ ಸಾಬೀತಾಗಿರುವುದು ತಾಯ್ನುಡಿಯ ಕಲಿಕೆಯ ಲಾಭಗಳು ಮಾತ್ರ. ತಾಯ್ನುಡಿಯಲ್ಲಿ ಕಲಿಕೆಯನ್ನು ಮೊದಲ ಆರು ವರ್ಷಗಳಲ್ಲಿ ಕಲಿತ ಮಕ್ಕಳು ವಿಶ್ವದಾದ್ಯಂತ ಜೀವನದಲ್ಲಿ ಸುಧಾರಿತ ಮಟ್ಟದಲ್ಲಿದ್ದಾರೆಂದು ಸಂಶೋಧನೆಗಳು ತೋರಿಸಿವೆ. ಮನೆಯಿಂದ ಮೊದಲ ಬಾರಿಗೆ ಶಾಲೆಗೆ ಕಾಲಿಡುವ ಮುದ್ದು ಮಕ್ಕಳ ಮನಸ್ಸು ತನ್ನ ಅರಿವಿನಲ್ಲಿರುವ ಭಾಷೆಯಲ್ಲಿಯೇ ಕಲಿಯಲು ಶಕ್ತವಾಗಿರುತ್ತದೆ. ವಿಷಯಗಳ ಕ್ರಮಬದ್ಧ ಕಲಿಕೆಯು ಸಾಧ್ಯವಾಗುವುದು ಶಾಲೆಯ, ಮನೆಯ ಮತ್ತು ಹೊರಗಿನ ಸಮಾಜದ ಭಾಷೆಯು ಒಂದೇ ಆಗಿದ್ದಾಗ ಮಾತ್ರ. ಬಹುಭಾಷೆಗಳ ನಾಡಲ್ಲಿ ತಾಯ್ನುಡಿಯ ಜೊತೆಗೆ ಬಹುಸಂಖ್ಯಾತರು ಅತಿ ಹೆಚ್ಚು ಬಳಸುವ ಭಾಷೆಯನ್ನಾದರೂ ಮಾಧ್ಯಮವನ್ನಾಗಿಸಬೇಕು.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜಾಗತಿಕ ಬದುಕಿಗೆ ಮಕ್ಕಳನ್ನು ಸಿದ್ಧಪಡಿಸುವಲ್ಲಿ ಸರ್ಕಾರ ತನ್ನ ಶಿಕ್ಷಣದ ಮಾದರಿಯನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಳ್ಳಬೇಕಾದ್ದು ಈಗಿನ ತುರ್ತು. ತಾಯ್ನುಡಿಯ ಕಲಿಕೆಯ ಮಾಧ್ಯಮದಲ್ಲಿ ಬಹುಭಾಷಾ ಸೂತ್ರವನ್ನು ಪಾಲಿಸಿ ಮಕ್ಕಳು ಪ್ರೌಢಶಾಲೆಗೆ ಬರುವಷ್ಟರಲ್ಲಿ ಇಂಗ್ಲಿಷ್‌ ಅನ್ನು ಕ್ರಮೇಣ ಕಲಿಕೆಯ ಮಾಧ್ಯಮವನ್ನಾಗಿಸಲಿ. ಆದರೆ ಅತ್ಯಮೂಲ್ಯವಾದ ಕಲಿಕೆಯ ಮೊದಲ ಅವಧಿ ತಾಯ್ನುಡಿಯಲ್ಲೇ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT