ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಕ್ಕೆ ಸ್ವಾರ್ಥ, ಅಸೂಯೆಯನ್ನು ದಾಟಲಾಗದೇ?

Last Updated 22 ನವೆಂಬರ್ 2018, 19:55 IST
ಅಕ್ಷರ ಗಾತ್ರ

‘ವಿವಾಹಬಾಹಿರ ಸಂಬಂಧಕ್ಕೆ ಶಿಕ್ಷೆ ವಿಧಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 497 ಏಕಪಕ್ಷೀಯವಾಗಿದ್ದು ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಹೆಂಡತಿಯು ಗಂಡನ ಸ್ವತ್ತಲ್ಲ. 150 ವರ್ಷಗಳಷ್ಟು ಹಳೆಯದಾದ ಈ ಕಾನೂನು ಅಸಾಂವಿಧಾನಿಕ’ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ಗಂಡು– ಹೆಣ್ಣಿನ ಸಂಬಂಧ, ‘ವಿವಾಹ’ ಎಂಬ ಪರಿಕಲ್ಪನೆಗಿರುವ ಹಲವು ಮಾದರಿಗಳು ಮತ್ತು ಅವುಗಳ ನಿರಂತರ ವಿಕಸನವನ್ನೂ ಈ ತೀರ್ಪು ಗಮನಕ್ಕೆ ತರುತ್ತದೆ.

ಮಾನವಶಾಸ್ತ್ರಜ್ಞರು ಗುರುತಿಸಿರುವಂತೆ ಏಕಸಂಗಾತಿ ವಿವಾಹ (ಮಾನೊಗಮಿ), ವ್ಯವಸಾಯ ಆರಂಭವಾದ ಕಾಲ
ಮಾನದಲ್ಲಿ (ಸುಮಾರು 10 ಸಾವಿರ ವರ್ಷಗಳ ಹಿಂದೆ) ಸೃಷ್ಟಿಯಾದ ಪಿತೃಪ್ರಧಾನ ಕುಟುಂಬಗಳ ಒಂದು ಸಾಮಾಜಿಕ-ಆರ್ಥಿಕ ಒಪ್ಪಂದ. ಇದರಲ್ಲಿ ಆಸ್ತಿಯ ಪರಿಕಲ್ಪನೆ ಇದೆ. ಏಕಸಂಗಾತಿ ವಿವಾಹವನ್ನು ನಮ್ಮಂತಹ ದೇಶಗಳಲ್ಲಿ ಸಮಾಜ, ಕಾನೂನು ಸಂರಕ್ಷಿಸಿದರೂ ಬಹುಸಂಗಾತಿ ಸಂಬಂಧಗಳು ಸಹಜವಾಗಿ ನಡೆಯುತ್ತಲೇ ಇರುತ್ತವೆ. ಬದಲಾದ ಕಾಲದಲ್ಲಿ, ಏಕಸಂಗಾತಿ ವಿವಾಹಕ್ಕೆ ಎದುರಾಗುವ ಮುಖ್ಯ ಸವಾಲು: ವಿವಾಹಬಾಹಿರ ಸಂಬಂಧ.

ದಾಂಪತ್ಯ ಬದುಕಿನಲ್ಲಿ ಇನ್ನೊಂದು ಸಂಬಂಧದ ಪ್ರವೇಶದ ಸನ್ನಿವೇಶವನ್ನು ಪರಿಶೀಲಿಸೋಣ: ಮದುವೆಯಾಗಿ ಹತ್ತು ವರ್ಷಗಳಾಗಿವೆ. ಇಬ್ಬರು ಮಕ್ಕಳು. ಗಂಡ– ಹೆಂಡತಿ ಇಬ್ಬರೂ ವೃತ್ತಿಪರರು. ವಿಭಕ್ತ ಕುಟುಂಬ. ಮಹಾನಗರಿಯ ಒತ್ತಡದ ಬದುಕು. ಗಂಡ ಅಥವಾ ಹೆಂಡತಿಗೆ ಹೊಸ ಪರಿಚಯವಾಗಿದೆ. ಈ ಗೆಳೆತನ– ಪ್ರೇಮಕ್ಕೆ ತಿರುಗಿರುವುದು ಅರಿವಾಗುವಷ್ಟರಲ್ಲಿ ವರ್ಷಗಳೇ ಮುಗಿದಿವೆ. ವೃತ್ತಿ ಜೀವನಕ್ಕೂ, ಸಾಂಸಾರಿಕ ಜೀವನಕ್ಕೂ ಹೊಸ ಹುರುಪು ಬಂದಿದೆ. ಹೆಂಡತಿಯ ಅಥವಾ ಗಂಡನ ಸಾಂಗತ್ಯದಲ್ಲಿ ತುಂಬಲಾಗದ ತನ್ನ ವ್ಯಕ್ತಿತ್ವದ ಇತರ ಆಯಾಮಗಳಿಗೆ ಈಗ ರೆಕ್ಕೆ ಬಂದಿದೆ. ಗಂಡ ಅಥವಾ ಹೆಂಡತಿ ಈ ಸಂಬಂಧದಿಂದ ತನ್ನ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳುತ್ತಾರೆ. ಹೆಂಡತಿಯ (ಗಂಡನ) ಮೇಲಿನ ಪ್ರೀತಿ ಅವನಿ(ಳಿ)ಗೆ ಕಮ್ಮಿಯೇನೂ ಆಗಿಲ್ಲ. ಹೆಂಡತಿಗೆ (ಗಂಡನಿಗೆ) ತಿಳಿಯದವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಅದು ಹೇಗೋ ಹೆಂಡತಿಗೆ (ಗಂಡನಿಗೆ) ವಿಚಾರ ತಿಳಿಯುತ್ತದೆ. ಮನೆಯಲ್ಲಿ ಜಗಳವಾಗುತ್ತದೆ.

ಈ ಸನ್ನಿವೇಶವು ಪಡೆಯಬಹುದಾದ ತಿರುವುಗಳು:

l ತನ್ನ ಸಂಗಾತಿಯನ್ನು ಬೇರೊಬ್ಬರ ಜೊತೆ ಹಂಚಿಕೊಳ್ಳಲು ಸಾಧ್ಯವಿಲ್ಲವೆಂದು ವಿಚ್ಛೇದನ ಕೊಡುವುದು (ಹಂಚಿಕೊಳ್ಳುವುದು ಎನ್ನುವುದರಲ್ಲೇ ಸಂಗಾತಿಯನ್ನು ಆಸ್ತಿಯ ಪರಿಕಲ್ಪನೆಯಲ್ಲಿ ಗ್ರಹಿಸಿರುವುದು ಕಾಣುತ್ತದೆ).

l ವಿಚ್ಛೇದನ ಕೊಡದೆ ಸೇಡು ಸಾಧಿಸುವುದು, ಠಾಣೆ, ಕೋರ್ಟು ಅಲೆಸುವುದು. ದಾಂಪತ್ಯದ ಸಮಸ್ಯೆ ಬೀದಿಗೆ ತಂದು ಅನಾಗರಿಕವಾಗಿ ವರ್ತಿಸುವುದು, ಕೊಲ್ಲುವುದು, ಕೊಲ್ಲಿಸುವುದು, ಆತ್ಮಹತ್ಯೆಗೆ ಪ್ರಯತ್ನಿಸುವುದು. ರಹಸ್ಯವಾಗಿ ಸಂಬಂಧವನ್ನು ಮುಂದುವರೆಸುವುದು; ಸತ್ಯವನ್ನು ಮರೆಮಾಚಿದಾಗ ಆಗುವ ಅನವಶ್ಯಕ ಸಂಕಷ್ಟಗಳನ್ನೆದುರಿಸುವುದು. ಈ ಎರಡೂ ಸಂದರ್ಭಗಳಲ್ಲಿ ಪೋಷಕರ ಪ್ರೀತಿಯಿಂದ ಮಕ್ಕಳು ವಂಚಿತರಾಗುವುದು.

ಮೇಲಿನ ತಿರುವುಗಳಿಗಿರಬಹುದಾದ ಕಾರಣಗಳು- ಏಕಸಂಗಾತಿ, ದಾಂಪತ್ಯದ ಮೂಲ ಒಪ್ಪಂದ. ಜೀವಮಾನವಿಡಿ ಮದುವೆಯಾದ ವ್ಯಕ್ತಿಯಿಂದಷ್ಟೇ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಲೈಂಗಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಬೇಕು. ಈ ಪದ್ಧತಿ ಸಾಂಸ್ಕೃತಿಕ ನಡವಳಿಕೆಯ ಚೌಕಟ್ಟನ್ನು ಸೃಷ್ಟಿಸಿರುವುದರಿಂದ ಪರ್ಯಾಯ ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ.

ಇನ್ನೊಂದು ಬಗೆಯ ಪರಿಸ್ಥಿತಿ ಸೃಷ್ಟಿಯಾಗಬಹುದು. ಹತ್ತು ವರ್ಷಗಳಿಂದ ಚೆನ್ನಾಗಿ ಬಲ್ಲ ತನ್ನ ಸಂಗಾತಿಯ ಈ ನಡವಳಿಕೆ ಈತನಲ್ಲಿ ಅಥವಾ ಈಕೆಯಲ್ಲಿ ದುಃಖ, ಆಶ್ಚರ್ಯ ಮೂಡಿಸಿದೆ. ಇನ್ನೊಬ್ಬಳಲ್ಲಿ(ಇನ್ನೊಬ್ಬನಲ್ಲಿ) ಮೂಡಿರಬಹುದಾದ ಗಟ್ಟಿ ಸಂಬಂಧಕ್ಕೆ ಲೈಂಗಿಕ ಆಸಕ್ತಿಯಷ್ಟೇ ಅಲ್ಲದೇ ಇರುವ ಇತರ ಆಯಾಮಗಳಾವುವು? ಸ್ನೇಹಿತರ ಸಮಸ್ಯೆಯಂತೆ ಇದನ್ನು ನೋಡುವುದು. ಮೂರನೆಯ ವ್ಯಕ್ತಿಯ ವ್ಯಕ್ತಿತ್ವ, ಹಿನ್ನೆಲೆ ಮತ್ತು ಆಕೆಯ–ಆತನ ನಿರೀಕ್ಷೆಗಳೇನು? ಇನ್ನೊಂದು ಸಂಬಂಧದಿಂದ ದಾಂಪತ್ಯಕ್ಕೆ ಮತ್ತು ಕುಟುಂಬಕ್ಕೆ ಆಗುವ ಅಪಾಯಗಳೇನು? ಅನುಕೂಲಗಳೇನು? ಸಾಂಸಾರಿಕ ಜವಾಬ್ದಾರಿಗಳ ಹಂಚಿಕೆ; ಮೂರನೇ ವ್ಯಕ್ತಿಯ ಜೊತೆಯೂ ತೆರೆದ
ಮನಸ್ಸಿನಿಂದ ಚರ್ಚಿಸಿ ಈ ವಿಚಾರ ಪರಿಶೀಲಿಸುವುದು. ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವುದು. ಇದರಿಂದ ಎರಡು ಬಗೆಯ ಆರೋಗ್ಯಕರ ನಿರ್ಧಾರಹೊರಬೀಳಬಹುದು: ಇನ್ನೊಂದು ಸಂಬಂಧ ಸ್ವೀಕರಿಸುವ ಮನಸ್ಥಿತಿ ಇಲ್ಲದಿರುವುದರಿಂದ ಪರಸ್ಪರ ಸಮ್ಮತಿಯ
ವಿಚ್ಛೇದನ. ಆದರೆ ಮಗುವಿನ ಪಾಲನೆಯಲ್ಲಿ ಮೂವರೂ ಜವಾಬ್ದಾರಿ ಹಂಚಿಕೊಳ್ಳುವುದು ವಿಚ್ಛೇದನ ಕೇವಲ ಸಂಗಾತಿಗೆ ಹೊರತು ಮಕ್ಕಳಿಗಲ್ಲವಲ್ಲ. ಈ ಇಡೀ ಪ್ರಕ್ರಿಯೆಯು ಕೇವಲ ಸಂಬಂಧಪಟ್ಟ ಕುಟುಂಬದವರು ನಾಲ್ಕು ಗೋಡೆಗಳ ಮಧ್ಯೆ ನಾಗರಿಕವಾಗಿ ಚರ್ಚಿಸಿ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆಯೇ ಹೊರತು ವ್ಯಕ್ತಿಯ ಮಾನನಷ್ಟ ಮಾಡುವ ಬೀದಿರಂಪಾಟವಾಗಿರುವುದಿಲ್ಲ.

ಸಂಬಂಧದಿಂದ ಕುಟುಂಬಕ್ಕೆ ಯಾವುದೇ ಬಗೆಯ ಅನನುಕೂಲಗಳಾಗದಂತೆ ಗುಣಾತ್ಮಕವಾಗಿ ಜೀವನವನ್ನು ಸಂರಚಿಸಿಕೊಳ್ಳುವುದು. ಮೂರನೇ ವ್ಯಕ್ತಿ ಮಕ್ಕಳ ಜೊತೆ ಯಾವ ರೀತಿಯ ಜವಾಬ್ದಾರಿಯುತ ನಡವಳಿಕೆ ತೋರಿಸಬೇಕೆಂಬುದನ್ನು ಸ್ನೇಹ-ಪ್ರೀತಿಯ ವೈಶಾಲ್ಯದ ಸಾಮರ್ಥ್ಯದಿಂದಲೇ ನಿರ್ಧರಿಸಿಕೊಳ್ಳುವುದು. ಇಂತಹ ಒಪ್ಪಂದಕ್ಕೆ ಮೂರನೇ ವ್ಯಕ್ತಿಯ ಸಹಕಾರವೂ ಅತಿಮುಖ್ಯ. ಕುಟುಂಬದ ಸ್ವಾಸ್ಥ್ಯಕ್ಕೆ ಪ್ರಾಮುಖ್ಯ ನೀಡದೆ ಸ್ವಾರ್ಥವನ್ನು ಪರಿಗಣಿಸಿದರೆ ಇದ್ಯಾವುದೂ ಸಾಧ್ಯವಾಗುವುದಿಲ್ಲ.

ಮದುವೆಯಾದ ನಂತರ ಇಬ್ಬರ ವ್ಯಕ್ತಿತ್ವವೂ ಸ್ವತಂತ್ರವಾಗಿ ಬೆಳೆಯಲು ಅವಕಾಶವಿರಬೇಕು. ಪರಸ್ಪರ ಅವಲಂಬಿತ ಸಾಂಗತ್ಯವಿರಬಹುದೇ ವಿನಾ ದಬ್ಬಾಳಿಕೆ, ಅಧೀನತೆ ಇರದಂತೆ ಪ್ರಯತ್ನಿಸುವುದು ಮುಖ್ಯ. ಮಕ್ಕಳ ಬೆಳವಣಿಗೆಯಲ್ಲಿ ಇಬ್ಬರೂ ಜವಾಬ್ದಾರಿಯಿಂದ ಕರ್ತವ್ಯ ಆಯ್ಕೆ ಮಾಡಿಕೊಳ್ಳಬೇಕು. ಪ್ರೇಮಕ್ಕಿಂತ ಹೆಚ್ಚಾಗಿ ದಂಪತಿಯ ಗೆಳೆತನಕ್ಕೆ ಪ್ರಾಶಸ್ತ್ಯವಿರಬೇಕು. ದಾಂಪತ್ಯದ ಈ ಮೌಲ್ಯಗಳು ಆರೋಗ್ಯಕರ ದಾರಿಗಳನ್ನು ಸೃಷ್ಟಿಸುತ್ತವೆ. ಈ ರೀತಿಯ ಕುಟುಂಬಗಳು ನಮ್ಮ ನಡುವೆ ಬದುಕುತ್ತಿವೆ ಕೂಡ. ಇನ್ನೊಂದು ಸಂಬಂಧದ ಪ್ರವೇಶದಿಂದ ಮೂಡುವ ಅಸೂಯೆ, ಅಭದ್ರತೆ ನಿಭಾಯಿಸುವ ಸಾಮರ್ಥ್ಯವಿರುವವರೂ ಇದ್ದಾರೆ. ದಬ್ಬಾಳಿಕೆಯ ಬಹುಪತ್ನಿತ್ವವಾಗಲೀ ಬಹುಪತಿತ್ವವಾಗಲೀ ಇಲ್ಲಿ ಚರ್ಚಿತವಾಗುತ್ತಿಲ್ಲ. ಆಧುನಿಕ ಸಮಾಜದ ಒಂದು ಆರೋಗ್ಯಕರ ದಾಂಪತ್ಯದಲ್ಲಿ ಮೂಡಬಹುದಾದ ಸನ್ನಿವೇಶವು ಇದಾಗಿರುತ್ತದೆ.

ಒಂದಕ್ಕಿಂತ ಹೆಚ್ಚು ಸಂಗಾತಿಯನ್ನು ಲಿಂಗ ಬೇಧಭಾವವಿಲ್ಲದ, ದಬ್ಬಾಳಿಕೆಯಿಲ್ಲದ ಪರಸ್ಪರ ಸ್ನೇಹದಿಂದ ಪ್ರೇಮವನ್ನೂ ಹಂಚಿಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿಗಳು ತಮ್ಮನ್ನು ‘ಪಾಲಿಅಮೊರಸ್’ (Polyamory: poly=many, amor=love) ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಮುಂದುವರೆದ ದೇಶಗಳಲ್ಲಷ್ಟೇ ಏಕೆ, ಬೆಂಗಳೂರಿನಲ್ಲೂ ಈ ಮನಸ್ಥಿತಿಯ ಗುಂಪು ತನ್ನ ಛಾಪನ್ನು ಮೂಡಿಸುತ್ತಿದೆ. ರಹಸ್ಯವಾಗಿ ನಡೆಯುವ ಬಹು ಸಂಗಾತಿ ಸಂಬಂಧಗಳಿಗೂ ಇದಕ್ಕೂ ಇರುವ ಮುಖ್ಯ ವ್ಯತ್ಯಾಸ: ಪಾರದರ್ಶಕತೆ ಮತ್ತು ಪ್ರಾಮಾಣಿಕತೆ. ಇಲ್ಲಿ ನಂಬಿಕೆ ದ್ರೋಹವಿರುವುದಿಲ್ಲ. ಎಲ್ಲರೂ ಪರಸ್ಪರ ಬಲ್ಲವರಾಗಿರುತ್ತಾರೆ. ಅವರವರ ಜವಾಬ್ದಾರಿಯನ್ನು ನಿಭಾಯಿಸುವ ಬುದ್ಧಿವಂತ ಸಹೃದಯಿಗಳಾಗಿರುತ್ತಾರೆ. ಇದು ಸುಲಭವೇ? ಖಂಡಿತಾ ಇಲ್ಲ. ಆದರೆ ಅಸಾಧ್ಯವಲ್ಲ ಎಂಬುದಕ್ಕೆ ನಮ್ಮ ನಡುವೆ ಬದುಕುತ್ತಿರುವ ಇವರೇ ಸಾಕ್ಷಿ. ನಾವು ನಂಬಿರುವ ಸಿದ್ಧ ಮಾದರಿಯಾಚೆಗಿರುವ ಸಾಂಗತ್ಯದ ಮಾದರಿಗಳನ್ನು ಒಪ್ಪಲಾಗದಿದ್ದರೂ ಪರ್ಯಾಯ ಮನಸ್ಥಿತಿ, ಮಾರ್ಗಗಳ ಬಗ್ಗೆ ಆರೋಗ್ಯಕರ ಕುತೂಹಲವಿರುವ ತೆರೆದ ಮನಸ್ಸಾದರೂ ‌ಬೇಡವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT