ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡುಗಲಿಗಳಿಗೇ ಗಂಡಾಂತರ

ಅಪಾಯ ಬಂತೆಂಬ ಕಹಳೆಯೂ ರಕ್ಷಾಗೋಡೆಯೂ ಒಟ್ಟೊಟ್ಟಿಗೇ ಏಳುತ್ತಿವೆ
Published 7 ಫೆಬ್ರುವರಿ 2024, 19:36 IST
Last Updated 7 ಫೆಬ್ರುವರಿ 2024, 19:36 IST
ಅಕ್ಷರ ಗಾತ್ರ

ಸುಮಾರು ಎಂಟು ಸಾವಿರ ವರ್ಷಗಳ ಹಿಂದೆ ಸೈಬೀರಿಯಾದಲ್ಲಿ ಕಡವೆಗಳನ್ನು ಹೋಲುವ ಎಲ್ಕ್‌ ಎಂಬ ಪ್ರಾಣಿಗಳಿದ್ದವು. ಅವಕ್ಕೆ ಭಾರೀ ಗಾತ್ರದ ಕೊಂಬುಗಳಿದ್ದವು. ಚಿಕ್ಕ ತಲೆಯ ಮೇಲೆ ಮೂರೂವರೆ ಮೀಟರ್‌ ವಿಸ್ತಾರದ ಕೊಂಬುಗಳು. ಕವಲುಗಳಾಗಿ, ಕೆಲವೆಡೆ ಹಲಗೆಯಂತೆ ಅಗಲಗಲ ಇರುತ್ತಿದ್ದವು. ಅಂಥ ವೈಭವದ ಕೊಂಬು ಅವಕ್ಕೆ ಏಕೆ ಮೊಳೆಯಿತೆಂಬುದು ನಮಗೆ ಗೊತ್ತೇ ಇದೆ. ತಾನೇ ಸುಂದರ, ತಾನೇ ಬಲಿಷ್ಠನೆಂದು ತೋರಿಸುತ್ತ ತನ್ನ ವಂಶವಾಹಿಯನ್ನೇ ಎಲ್ಲೆಡೆ ಬಿತ್ತಲೆಂದು ನಿಸರ್ಗವೇ ಅನೇಕ ಜೀವಜಂತುಗಳ ಗಂಡುಗಲಿಗಳಲ್ಲಿ ಈ ವ್ಯವಸ್ಥೆಯನ್ನು ಮಾಡಿಟ್ಟಿದೆ.

ಐರೋಪ್ಯದ ಭೂಭಾಗದಲ್ಲಿ ಸುತ್ತಾಡುತ್ತಿದ್ದ ‘ಐರಿಶ್‌ ಎಲ್ಕ್‌’ ಹೆಸರಿನ ಈ ಜೀವಿ ಸಂಪೂರ್ಣ ನಿರ್ವಂಶ ಆಗಿದ್ದು ಹೇಗೆ ಎಂಬುದರ ಬಗ್ಗೆ ವಿಜ್ಞಾನಿಗಳು ಬಹಳಷ್ಟು ಚರ್ಚಿಸಿದ್ದಾರೆ. ಅವುಗಳ ಪಳೆಯುಳಿಕೆಗಳ ದಂತಪಂಕ್ತಿಯಲ್ಲಿ ಸಿಲುಕಿದ್ದ ಆಹಾರ ಕಣಗಳ ಡಿಎನ್‌ಎಯನ್ನೂ ಓದಿಯಾಗಿದೆ. ಹಿಮಯುಗ ಕಳೆದು, ಕ್ರಮೇಣ ಭೂಮಿ ಬೆಚ್ಚಗಾಗುತ್ತ ಬಂದಂತೆ ಎಲ್ಲೆಡೆ ಅರಣ್ಯಗಳು ಮತ್ತೆ ಬೆಳೆಯತೊಡಗಿದ್ದವು. ಸಾಲದ್ದಕ್ಕೆ ಮನುಷ್ಯ ಎಂಬ ಜೀವಿ ಭರ್ಜಿ, ಕೊಡಲಿ ಹೊತ್ತು ದೊಡ್ಡ ಮೃಗಗಳನ್ನೂ ಅಟ್ಟಿಸಿಕೊಂಡು ಹೋಗಿ ಕೊಲ್ಲತೊಡಗಿದ್ದ. ಕೊಂಬಿನ ಕಾರಣದಿಂದಾಗಿ ಅರಣ್ಯಗಳಲ್ಲಿ ಓಡಾಡಲಾಗದ ಎಲ್ಕ್‌ಗಳು ಮೇವಿಗಾಗಿ ಬಯಲಿಗೆ ಬಂದು ಪೊದೆಗಳಲ್ಲಿ, ಕೆಸರು ಮಡುಗಳಲ್ಲಿ ಸಿಕ್ಕಿಬಿದ್ದು ಬೇಟೆಗಾರರಿಗೆ ಸುಲಭದಲ್ಲಿ ಬಲಿಯಾಗತೊಡಗಿದ್ದವು.

ಪ್ರತಿಷ್ಠೆಯ ಪ್ರತೀಕವೆನಿಸಿದ ಕೋಡುಗಳನ್ನೇ ಒಂದು ರೂಪಕವಾಗಿ ನಾವು ಇಂದಿನ ಅನೇಕ ಸಂದರ್ಭಗಳಿಗೆ ಅನ್ವಯಿಸಿ ನೋಡಬಹುದು. ಮುಖ್ಯವಾಗಿ ಇಡೀ ಮನುಕುಲವೇ ಕೋಡು ಮೂಡಿಸಿಕೊಂಡಂತೆ ವಿಜೃಂಭಿಸುತ್ತಿದೆ. ಹೊರಲಾರದ ಹೊರೆ ಹೊತ್ತು ತನ್ನ ಅಸ್ತಿತ್ವಕ್ಕೇ ಸಂಚಕಾರ ಬರುವಂಥ ಪರಿಸ್ಥಿತಿಯನ್ನು ನಿರ್ಮಿಸಿಕೊಂಡಿದೆ. ಜಾಗತಿಕ ವಾಣಿಜ್ಯ ಶಕ್ತಿಗಳು ಈಚೆಗೆ ದಾವೋಸ್‌ನಲ್ಲಿ ಸಭೆ ಸೇರುವ ತುಸು ಮುಂಚೆ, ಮನುಕುಲಕ್ಕೆ ಎದುರಾಗಿರುವ ಮಹಾನ್‌ ಸಂಕಟಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಅದರಲ್ಲಿ ಮೊದಲ ಸ್ಥಾನ ಹವಾಗುಣ ವೈಪರೀತ್ಯಕ್ಕೆ, ಎರಡನೆಯ ಸ್ಥಾನ ಯಾಂತ್ರಿಕ ಬುದ್ಧಿಮತ್ತೆಗೆ ಮತ್ತು ಮೂರನೆಯ ಸ್ಥಾನ ‘ಸಾಮಾಜಿಕ ತುಮುಲ’ಗಳಿಗೆ ಸಿಕ್ಕಿತ್ತು. (‘ಸಾಮಾಜಿಕ ತುಮುಲ’ಕ್ಕೆ ತುಸು ವಿವರಣೆ ಹೀಗಿದೆ: ಈ ವರ್ಷ ಭಾರತ, ಅಮೆರಿಕ, ಬ್ರೆಜಿಲ್‌, ಇಂಡೊನೇಶ್ಯ ಮುಂತಾದ 64 ರಾಷ್ಟ್ರಗಳು ಮತ್ತು ಐರೋಪ್ಯ ಸಂಘದಲ್ಲಿ ಚುನಾವಣೆ ನಡೆಯಲಿದೆ. ಇಷ್ಟೊಂದು ದೇಶಗಳಲ್ಲಿ ಒಂದೇ ವರ್ಷ ಚುನಾವಣೆ ಬಂದಿದ್ದು, ಭೂಮಿಯ ಶೇ 49ರಷ್ಟು ಜನರು ಮತಗಟ್ಟೆಗೆ ಹೋಗುತ್ತಿರುವುದು ಅಷ್ಟಗ್ರಹ ಯೋಗದಷ್ಟೇ ಅಪರೂಪ. ಸುಳ್ಳುಸುದ್ದಿ ಮತ್ತು ಡೀಪ್‌ಫೇಕ್‌ಗಳಿಂದಾಗಿ ಭಾರೀ ಪ್ರಮಾಣದಲ್ಲಿ ಸಾಮಾಜಿಕ ಧ್ರುವೀಕರಣ ಆಗಲಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಜಾಗತಿಕ ಸಮತೋಲ ಬಿಗಡಾಯಿಸಲಿದೆ ಎಂಬುದು ‘ವಿಶ್ವ ಆರ್ಥಿಕ ವೇದಿಕೆ’ಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ).

ಮನುಕುಲದ ಸಂಕಟಗಳ ಈ ಪಟ್ಟಿಯಲ್ಲಿ ಸೇರಬೇಕಿದ್ದ ಇನ್ನೊಂದು ಸಂಗತಿಯೂ ತೀರಾ ಗಂಭೀರದ್ದೆಂದು ಇದೀಗ ವಿಜ್ಞಾನಿಗಳು ಚರ್ಚಿಸುತ್ತಿದ್ದಾರೆ. ಅದು ವೀರ್ಯಾಣು ದೌರ್ಬಲ್ಯಕ್ಕೆ ಸಂಬಂಧಿಸಿದ್ದು. ಹಿಂದಿನ 70 ವರ್ಷಗಳಿಂದ ಪುರುಷರ ವೀರ್ಯಾಣುಗಳು ದುರ್ಬಲವಾಗುತ್ತಿವೆ. ಈಚೆಗೆ ಮತ್ತೊಮ್ಮೆ ನಡೆಸಿದ ವಿಶ್ವಮಟ್ಟದ ಸಮೀಕ್ಷೆಯ ಪ್ರಕಾರ, ಸುದೃಢ ವೀರ್ಯಾಣುಗಳ ಸಂಖ್ಯೆಯಲ್ಲಿ ಶೇ 50ರಷ್ಟು ಇಳಿಕೆಯಾಗಿದ್ದು ಈ ಇಳಿಕೆಯ ವೇಗವೇ ಆತಂಕಕಾರಿ ಎಂದು ಸಂಶೋಧಕರು ಹೇಳಿದ್ದನ್ನು ‘ನ್ಯೂ ಸೈಂಟಿಸ್ಟ್‌’ ಪತ್ರಿಕೆ ಹೋದ ವಾರ ವರದಿ ಮಾಡಿದೆ. ಸಂತಾನ ವೈಫಲ್ಯಕ್ಕೆ ಕಾರಣಗಳು ಇಂತಿವೆ: ಕೃತಕ ಕೆಮಿಕಲ್‌ಗಳ, ಕೃಷಿವಿಷಗಳ ಅತಿ ಬಳಕೆ, ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳ ಮಾಲಿನ್ಯ ಮತ್ತು ಅದರಿಂದ ದೇಹದಲ್ಲಿನ ಎಂಡೊಕ್ರೈನ್‌ ವ್ಯವಸ್ಥೆಯ ಏರುಪೇರು... ಹೀಗೆ ಮನುಷ್ಯ ತಾನು ಸೃಷ್ಟಿಸಿಕೊಂಡ ಸೌಲಭ್ಯಜಾಲದಲ್ಲಿ ತಾನೇ ಸಿಲುಕುತ್ತಿದ್ದಾನೆ.

ವಿಜ್ಞಾನದ ಬ್ಯೂಟಿ ಏನೆಂದರೆ, ಅದು ಎಚ್ಚರಿಕೆಯ ಕಹಳೆಯನ್ನೂ ಮೊಳಗಿಸುತ್ತದೆ, ರಕ್ಷಣೆಯ ಗೋಡೆಯನ್ನೂ ನಿರ್ಮಿಸುತ್ತ ಹೋಗುತ್ತದೆ. ಸಂತಾನ ವೈಫಲ್ಯವನ್ನು ಸದ್ಯಕ್ಕೆ ಬದಿಗಿಡೋಣ. ಬೆಂಗಳೂರು ಒಂದರಲ್ಲೇ ಇಂದು 60ಕ್ಕೂ ಹೆಚ್ಚು ಅಧಿಕೃತ ‘ಸಂತಾನ ಸಹಾಯ ಕೇಂದ್ರ’ಗಳಿವೆ. ಭೂಮಿ ಇನ್ನಷ್ಟು ಬಿಸಿಯಾಗದಂತೆ ತಡೆಯಲು ಏನೆಲ್ಲ ಕ್ರಾಂತಿಕಾರಿ ಹೆಜ್ಜೆಗಳು ಮೂಡುತ್ತಿವೆ. ಈ ವಾರದ ವಿಶೇಷ ಸುದ್ದಿ ಏನೆಂದರೆ, ಭೂಮಿಯ ಆಳದಿಂದ ನೇರವಾಗಿ ಜಲಜನಕ (ಹೈಡ್ರೊಜನ್‌) ಅನಿಲವನ್ನೇ ಹೊರಕ್ಕೆ ತೆಗೆಯುವ ವಿಧಾನಗಳ ಪರೀಕ್ಷೆ ಆರಂಭವಾಗಿದೆ. ನಮಗೆಲ್ಲ ಗೊತ್ತಿರುವಂತೆ, ಸಿಎನ್‌ಜಿ ಅಥವಾ ನೈಸರ್ಗಿಕ ಅನಿಲದ ಬದಲು ವಾಹನಗಳಲ್ಲಿ ಹೈಡ್ರೊಜನ್‌ ಅನಿಲವನ್ನೇ ತುಂಬಿಸಿಕೊಂಡು ಗಾಡಿ ಓಡಿಸಿದರೆ, ಹೊಗೆ ಕೊಳವೆಯಲ್ಲಿ ಬರೀ ನೀರಾವಿ ಹೊರಕ್ಕೆ ಬರುತ್ತದೆ ವಿನಾ ಕಾರ್ಬನ್‌ ಸೂಸುವುದಿಲ್ಲ. ಅಂಥ ಪರಿಶುದ್ಧ ಅನಿಲ ಸಂಪತ್ತಿನ ಒಡೆಯರಾಗಲು ಜಗತ್ತಿನಾದ್ಯಂತ ಭಾರೀ ಪೈಪೋಟಿ ನಡೆಯುತ್ತಿದೆ.

ಸದ್ಯ ರಾಜಸ್ಥಾನದಲ್ಲಿ ‘ಅದಾನಿ ಗ್ರೀನ್‌ ಎನರ್ಜಿ’ ಕಂಪನಿ ಜಗತ್ತಿನಲ್ಲೇ ಅತಿ ದೊಡ್ಡ, 726 ಚ.ಕಿ.ಮೀ. ವಿಸ್ತೀರ್ಣದ ಸೌರ ಮತ್ತು ಗಾಳಿಯಂತ್ರಗಳನ್ನು ಸ್ಥಾಪಿಸತೊಡಗಿದೆ. ಖಾವ್ಡಾ ಹೆಸರಿನ ಊರಿನ ಸುತ್ತ ನಿರ್ಜನ, ಉಪ್ಪುಜೌಳಿನಲ್ಲಿ ಅರಳುತ್ತಿರುವ ಈ ಸೋಲಾರ್‌ ಪಾರ್ಕ್‌ ಇಡೀ ಸಿಂಗಪುರ ದೇಶಕ್ಕಿಂತ ದೊಡ್ಡದಾಗಿದ್ದು ಅದನ್ನು ಬಾಹ್ಯಾಕಾಶದಿಂದಲೂ ನೋಡಬಹುದಾಗಿದೆ ಎಂದು ಎ.ಪಿ. ವಾರ್ತಾ ಸಂಸ್ಥೆ ಸಚಿತ್ರ ವರದಿಯನ್ನು ಪ್ರಕಟಿಸಿದೆ. ಅದರಲ್ಲಿನ ಚಿತ್ರಗಳನ್ನು ನೋಡಿದರೆ ವಿಶಾಲ ಕಛ್‌ನ ಮರುಭೂಮಿಯ ಮೇಲೆ ಉಕ್ಕು ಅಲ್ಯೂಮಿನಿಯಂ ಪಂಜರವನ್ನೇ ಹಾಸಿದಂತೆ ಕಾಣುತ್ತಿದೆ. ಇಡೀ ಜಾಲ ಪೂರ್ಣಗೊಂಡಾಗ 30 ಸಾವಿರ ಮೆಗಾವಾಟ್‌ ವಿದ್ಯುತ್‌ (ಕೈಗಾ ಅಣುಶಕ್ತಿ ಸ್ಥಾವರಕ್ಕಿಂತ 40 ಪಟ್ಟು ಹೆಚ್ಚು) ಶಕ್ತಿ ಅದಾನಿ ಕಂಪನಿಯ ಕೈಗೆಟುಕಲಿದೆ. ಆ ವಿದ್ಯುತ್ತಿನಿಂದ ನೀರನ್ನು ವಿಭಜಿಸಿದರೆ ಜಲಜನಕ, ಆಮ್ಲಜನಕ ಪ್ರತ್ಯೇಕ ಸಿಗುತ್ತವಲ್ಲ?

ಅಷ್ಟೆಲ್ಲ ಸುತ್ತುಬಳಸಿನ ಮಾರ್ಗದ ಬದಲು, ನೆಲದಾಳದಲ್ಲಿ ಮೆಲ್ಲಗೆ ಸೂಸುತ್ತಿರುವ ಹೈಡ್ರೊಜನ್‌ ಅನಿಲವನ್ನೇ ಸಂಗ್ರಹಿಸಿ ಮೇಲೆತ್ತಿ ತಂದರೆ? ಹಾಗೆಲ್ಲ ಪಾತಾಳಕ್ಕೆ ಕನ್ನ ಕೊರೆದರೆ ಕಚ್ಚಾತೈಲ ಅಥವಾ ಅದರದ್ದೇ ಕೊಳಕು ಅನಿಲ ಸಿಗುತ್ತದೆ ವಿನಾ ಜಲಜನಕ ಸಿಗುವುದು ಅಸಂಭವ ಎಂದೇ ಇದುವರೆಗೆ ಪರಿಗಣಿಸಲಾಗಿತ್ತು. ಆದರೆ ಅಂಥ ಭೂಗತ ಜಲಜನಕವನ್ನು ತೆಗೆಯಲು ಸಾಧ್ಯವಿದೆ ಎಂಬ ಸೂಚನೆ ಸಿಕ್ಕಿದೆ. ವಿವಿಧ ದೇಶಗಳಲ್ಲಿ ಅಂಥ ಅತ್ಯುತ್ತಮ ನಿಕ್ಷೇಪಗಳ ಪತ್ತೆಗೆ ಪೈಪೋಟಿ ಆರಂಭವಾಗಿದೆ. ಆ ಜಲಜನಕಕ್ಕೆ ‘ಗೋಲ್ಡ್‌ ಹೈಡ್ರೊಜನ್‌’ ಎಂತಲೇ ಹೆಸರನ್ನೂ ಇಡಲಾಗಿದೆ. ಕೊಲ್ಲಿರಾಷ್ಟ್ರ ಓಮನ್‌ನಲ್ಲಿ ಮೊದಲ ಕೊಳವೆ ಬಾವಿ ಕೊರೆಯಲು ಸಿದ್ಧತೆ ನಡೆದಿದೆ. ಇತ್ತ ವಿದ್ಯುತ್‌ ಶಕ್ತಿಯ ಶೇಖರಣೆಗೆ ಬೇಕಾದ ಬ್ಯಾಟರಿ ತಾಂತ್ರಿಕತೆಗೂ ಹೊಸ ತಂತ್ರಜ್ಞಾನ ರೂಪುಗೊಳ್ಳುತ್ತಿದೆ. ಲೀಥಿಯಂ ಬದಲಿಗೆ ಕಾಂಕ್ರೀಟ್‌ಗೇ ಹಂಡೆಮಸಿಯನ್ನು ಸೇರಿಸಿ ಅದನ್ನೇ ಬ್ಯಾಟರಿಯಾಗಿ ಪರಿವರ್ತಿಸುವ ಚಿಕ್ಕ ಯತ್ನಕ್ಕೆ ಫಲ ಸಿಕ್ಕಿದೆ. ಇನ್ನೇನು, ಮನೆಯ ಅಡಿಪಾಯ, ಗೋಡೆ, ರಸ್ತೆಯಲ್ಲೇ ಶಕ್ತಿ ಶೇಖರಣೆ ಮಾಡಲು ಸಾಧ್ಯವಾದೀತು. ಚೀನಾದಲ್ಲಿ ರಸ್ತೆಯ ಮೇಲಿನ ಬಿಳಿಪಟ್ಟೆಯನ್ನೇ ಮೂಸುತ್ತ ಸಾಗುವ ಹಳಿರಹಿತ ರೈಲು ಆಗಲೇ ಬಂದಾಗಿದೆ. ಆ ಪಟ್ಟೆಯ ತಳಕ್ಕೆ ಬ್ಯಾಟರಿ ಜೋಡಿಸುವುದಷ್ಟೇ ಬಾಕಿ.

ಇವೆಲ್ಲವುಗಳ ನಡುವೆ ಎಲಾನ್‌ ಮಸ್ಕ್‌ ಒಡೆತನದ ನ್ಯೂರಾಲಿಂಕ್‌ ಕಂಪನಿ ಹೊಸದೊಂದು ಕ್ರಾಂತಿಗೆ ಅಡಿಯಿಟ್ಟಿದೆ. ಮನುಷ್ಯನ ಮಿದುಳಿನ ನರತಂತುವಿಗೆ ಇಲೆಕ್ಟ್ರಾನಿಕ್‌ ಬಿಲ್ಲೆಯನ್ನು ಜೋಡಿಸಿ ಅಮೆರಿಕ ಸರ್ಕಾರದ ಮಾನ್ಯತೆಯನ್ನೂ ಪಡೆದಿದೆ. ‘ಟೆಲಿಪಥಿ’ ಹೆಸರಿನ ಈ ಬಿಲ್ಲೆಯನ್ನು ಹುದುಗಿಸಿಕೊಂಡರೆ ಲಕ್ವ ಹೊಡೆದ ನಿಶ್ಚಲ ವ್ಯಕ್ತಿಯೂ ಕಂಪ್ಯೂಟರಿನಲ್ಲಿ ಅಕ್ಷರ ಜೋಡಣೆ ಮಾಡಬಹುದು, ಗೇಮ್ಸ್‌ ಆಡಬಹುದು. ಇದು ಆರಂಭ ಮಾತ್ರ. ಮುಂದೆ ಅತಿಬಳಕೆ, ದುರ್ಬಳಕೆಯ ದಿಸೆಯಲ್ಲಿ ಇದು ವಿಕಾಸವಾದರೆ ಮನುಷ್ಯ- ರೋಬಾಟ್‌ ವ್ಯತ್ಯಾಸ ಮಸಕಾದೀತು.

ಅಂತೂ ತನ್ನ ಹಣೆಬರಹವನ್ನು ತಾನೇ ಬರೆದುಕೊಳ್ಳುವ ಹಂತಕ್ಕೆ ಮನುಕುಲ ಬಂದು ನಿಂತಿದೆ. ‘ಸ್ವಯಮಪಿ ಲಿಖಿತಂ ಸ್ವಯಂ ನ ವಾಚಯತಿ’ (ತಾನು ಬರೆದುದನ್ನು ತಾನೇ ಓದಲಾಗದ) ಸ್ಥಿತಿಗೆ ಅದು ಹೊರಳದಂತಾದರೆ ಸಾಕೇನೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT