ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸಸ್ ಆಲ್-ಇನ್-ಒನ್ ಒಂದರಲ್ಲೇ ಎಲ್ಲವೂ ಅಡಕ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಏಸಸ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ವಿಮರ್ಶೆ ಇದೇ ಅಂಕಣದಲ್ಲಿ ಬಂದಿದೆ. ಪ್ರಾರಂಭದಲ್ಲಿ ಗಣಕಗಳಲ್ಲಿ ಬಳಸುವ ಮದರ್‌ಬೋರ್ಡ್‌ ತಯಾರಿಕೆಯನ್ನು ಏಸಸ್ ಮಾಡುತ್ತಿತ್ತು. ಅಲ್ಲಿಂದ ಮುಂದುವರೆದು ಹಲವು ನಮೂನೆಯ ಲ್ಯಾಪ್‌ಟಾಪ್, 2-ಇನ್-1, ಟ್ಯಾಬ್ಲೆಟ್ ಜೊತೆ ಸ್ಮಾರ್ಟ್‌ಫೋನ್‌ಗಳನ್ನೂ ಈ ಕಂಪೆನಿ ತಯಾರಿಸುತ್ತಿದೆ. ಏಸಸ್ ಕಂಪೆನಿಯ ಉತ್ಪನ್ನಗಳು ಸಾಮಾನ್ಯವಾಗಿ ನೀಡುವ ಹಣಕ್ಕೆ ಮೋಸವಿಲ್ಲ ಎನ್ನುವಂತಿವೆ. ಒಂದರಲ್ಲೇ ಎಲ್ಲವೂ ಅಡಕವಾಗಿರುವ ಏಸಸ್ ಆಲ್-ಇನ್-ಒನ್ ಇಟಿ2040 (Asus ET2040 All-in-One PC) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
2.4 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್(J2900), 4 ಗಿಗಾಬೈಟ್ ಮೆಮೊರಿ, 500 ಗಿಗಾಬೈಟ್ ಸಂಗ್ರಹ ಶಕ್ತಿಯ ಹಾರ್ಡ್‌ಡಿಸ್ಕ್, ಇಂಟೆಲ್ ಗ್ರಾಫಿಕ್ಸ್, 19.5 ಇಂಚು ಗಾತ್ರದ 16:9 ಅನುಪಾತದ 1366 x 768 ಪಿಕ್ಸೆಲ್ ರೆಸೊಲೂಶನ್ನ ಎಲ್ಇಡಿ ಪರದೆ, ಸ್ಪರ್ಶಪರದೆ ಇಲ್ಲ, 1 ಮೆಗಾಪಿಕ್ಸೆಲ್ ಕ್ಯಾಮೆರಾ, 2 x 2 ವಾಟ್ ಸ್ಪೀಕರ್‌ಗಳು, ಮೈಕ್ರೋಫೋನ್ ಇದೆ, ವೈಫೈ, ಇಥರ್ನೆಟ್, ಹೆಡ್‌ಫೋನ್, ಮೈಕ್ರೋಫೋನ್, ಎಚ್‌ಡಿಎಂಐ ಮತ್ತು 5 ಯುಎಸ್‌ಬಿ ಕಿಂಡಿಗಳು, ಕಾರ್ಡ್‌ರೀಡರ್‌, ವಿಂಡೋಸ್ 8.1, ಇತ್ಯಾದಿ. ಅಂದಾಜು ಮಾರುಕಟ್ಟೆ ಬೆಲೆ ₹26,000.  

ಆಲ್-ಇನ್-ಒನ್‌ ಗಣಕಗಳಲ್ಲಿ ಡೆಸ್ಕ್‌ಟಾಪ್ ಗಣಕಗಳಂತೆ ಮದರ್‌ಬೋರ್ಡ್, ಹಾರ್ಡ್‌ಡಿಸ್ಕ್ ಇತ್ಯಾದಿ ಇರುವ ಒಂದು ಪೆಟ್ಟಿಗೆ, ಮಾನಿಟರ್ ಬೇರೆ ಬೇರೆ  ಇರುವುದಿಲ್ಲ. ಗಣಕದ ಪ್ರಮುಖ ಅಂಗಗಳಾದ ಮದರ್‌ಬೋರ್ಡ್, ಮೆಮೊರಿ, ಹಾರ್ಡ್ ಡಿಸ್ಕ್, ಮಾನಿಟರ್‌ ಎಲ್ಲ ಒಂದರಲ್ಲೇ ಅಡಕವಾಗಿರುತ್ತವೆ. ಹೊರಗಿನಿಂದ ಕೀಬೋರ್ಡ್ ಮತ್ತು ಮೌಸ್ ಜೋಡಿಸಬೇಕು. ಲ್ಯಾಪ್‌ಟಾಪ್‌ಗಳಂತೆ ಇದರಲ್ಲೇ ಬ್ಯಾಟರಿಯೂ ಇರುತ್ತದೆ. ಜೊತೆಗೆ ಚಾರ್ಜರ್ ಕೂಡ ನೀಡಿರುತ್ತಾರೆ. ಇದನ್ನು ನೆಟ್ಟಗೆ ನಿಲ್ಲಿಸಲು ಹಿಂದುಗಡೆ ತೆರೆಯಬಲ್ಲ ಆಧಾರ ನೀಡಿದ್ದಾರೆ. ಕೀಬೋರ್ಡ್ ಮತ್ತು ಮೌಸ್‌ಗಳನ್ನು ಅವರೇ ನೀಡಿದ್ದಾರೆ.

ನೋಡಲು ಆಕರ್ಷಕವಾಗಿದೆ. ರಚನೆ ಚೆನ್ನಾಗಿದೆ. ದೇಹ ಗಟ್ಟಿಮುಟ್ಟಾಗಿದೆ. ಸುಮಾರು 15 ಮಿ.ಮೀ ದಪ್ಪವಾಗಿದೆ. ಅಂದರೆ ಕಡಿಮೆ ಜಾಗದಲ್ಲಿ ನಿಮಗೆ ಡೆಸ್ಕ್‌ಟಾಪ್ ಗಣಕ ದೊರೆತಂತಾಗುವುದು. ಆದರೆ ಇದರ ಮೆಮೊರಿ ಜಾಸ್ತಿ ಮಾಡುವುದಾಗಲಿ ಹಾರ್ಡ್‌ಡಿಸ್ಕ್‌ ಬದಲಿಸುವುದಾಗಲಿ ಸುಲಭ ಸಾಧ್ಯವಲ್ಲ. ಈ ವಿಷಯದಲ್ಲಿ ಇದು ಲ್ಯಾಪ್‌ಟಾಪ್‌ಗಳಂತೆ.

ಪರದೆ ತುಂಬ ದೊಡ್ಡದಿರುವುದರಿಂದ ಗ್ರಾಫಿಕ್ಸ್ ಕೆಲಸ ಮಾಡುವವರಿಗೆ ಇದು ಸೂಕ್ತ. ಇತ್ತೀಚೆಗೆ ಬಹುತೇಕ ಡಿಟಿಪಿ ಕೇಂದ್ರಗಳಲ್ಲಿ ಇಂತಹ ಗಣಕಗಳನ್ನೇ ಬಳಸುತ್ತಾರೆ. ಇದರಲ್ಲಿ ಸಿ.ಡಿ. ಅಥವಾ ಡಿ.ವಿ.ಡಿ. ಡ್ರೈವ್ ಇಲ್ಲ. ಅವುಗಳ ಬಳಕೆ ಈಗ ತುಂಬ ಕಡಿಮೆಯಾಗಿದೆ. ಹೈಡೆಫಿನಿಶನ್ ಪರದೆ ಇದೆ. ಹೈಡೆಫಿನಿಶನ್ ವಿಡಿಯೊ ಮಾತ್ರವಲ್ಲ 4k ವಿಡಿಯೊಗಳನ್ನೂ ಯಾವುದೇ ಅಡೆತಡೆಯಿಲ್ಲದೆ ವೀಕ್ಷಣೆ ಮಾಡಬಹುದು. ಆದರೆ ಪರದೆಯ ಗುಣಮಟ್ಟ ಮಾತ್ರ ಅಷ್ಟಕ್ಕಷ್ಟೆ. ವೀಕ್ಷಣೆಯ ವ್ಯಾಪ್ತಿಯೂ (viewing angle) ಚೆನ್ನಾಗಿಲ್ಲ.

ಇದರಲ್ಲಿರುವ ಕ್ಯಾಮೆರಾ ಕೇವಲ 1 ಮೆಗಾಪಿಕ್ಸೆಲ್‌ನದು. ವೆಬ್‌ಕ್ಯಾಮ್ ಆಗಿ ಮಾತ್ರ ಬಳಸಬಹುದು. ಆಡಿಯೊ ಇಂಜಿನ್ ಪರವಾಗಿಲ್ಲ. ಉತ್ತಮ ಹೆಡ್‌ಫೋನ್‌ ಹಾಕಿಕೊಂಡರೆ ಸಂಗೀತ ಆಲಿಸುವ ಅಥವಾ ಆಟ ಆಡುವ ಅನುಭವ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಇದರ ಗ್ರಾಫಿಕ್ಸ್ ಕೂಡ ತೃಪ್ತಿದಾಯಕವಾಗಿದೆ ಎನ್ನಬಹುದು. ಆಟ ಆಡುವ ಅನುಭವ ಪರವಾಗಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಅತ್ಯುತ್ತಮ ಮಟ್ಟದ ಆಟ ಆಡುವ ಅನುಭವ ಬೇಕು ಅಥವಾ ಅತ್ಯುತ್ತಮ ಮಟ್ಟದ ಗ್ರಾಫಿಕ್ಸ್ ಅನುಭವ ಬೇಕು ಎನ್ನುವರಿಗೆ ಇದು ಒಪ್ಪುವಂಥದ್ದಲ್ಲ. ಎಲ್ಲದರಲ್ಲೂ ಒಂದು ಮಟ್ಟದ ರಾಜಿ ಮಾಡಿಕೊಳ್ಳಲು ಸಿದ್ಧರಾಗಿದ್ದವರಿಗೆ ಮಾತ್ರ ಇದು ಸೂಕ್ತ.

ಇದರಲ್ಲಿ ಸ್ಪರ್ಶಪರದೆ ಇಲ್ಲ ಎನ್ನುವುದು ಒಂದು ದೊಡ್ಡ ಕೊರತೆಯೇ. ಈ ಕೊರತೆಯನ್ನು ಏಸಸ್‌ನವರು ಒಂದು ಸವಲತ್ತನ್ನು ನೀಡುವ ಮೂಲಕ ನೀಗಿದ್ದಾರೆ ಎನ್ನಬಹುದು. ಇದರಲ್ಲಿರುವ ಕ್ಯಾಮೆರಾ ನಿಮ್ಮ ಕೈಯ ಚಲನೆಯನ್ನು ಗ್ರಹಿಸಿ ಅರ್ಥಮಾಡಿಕೊಳ್ಳುತ್ತದೆ. ಅಂಗೈಯ ಬೇರೆ ಬೇರೆ ಅಭಿನಯಗಳು ಬೇರೆ ಬೇರೆ ಕೆಲಸಕ್ಕೆ ನಿಗದಿಯಾಗಿವೆ.

ಕ್ಯಾಮೆರಾದ ಮುಂದೆ ಕೈ ಅಲ್ಲಾಡಿಸಿ, ಆಡಿಸಿ, ಮುಷ್ಟಿ ಬಿಗಿದು-ಬಿಟ್ಟು ಹೀಗೆ ಬೇರೆ ಬೇರೆ ರೀತಿಯ ಅಭಿನಯಗಳ ಮೂಲಕ ಬೇರೆ ಬೇರೆ ಕೆಲಸಗಳನ್ನು ಈ ಗಣಕದಿಂದ ಮಾಡಿಸಿಕೊಳ್ಳಬಹುದು. ಒಮ್ಮೆ ಸರಿಯಾಗಿ ಅಭ್ಯಾಸವಾದರೆ ಈ ಸವಲತ್ತನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಲ್ಯಾಪ್‌ಟಾಪ್‌ಗಳಂತೆ ಇದರಲ್ಲೂ ಬ್ಯಾಟರಿ ಇದೆ. ಆದರೆ ಇದು ಲ್ಯಾಪ್‌ಟಾಪ್‌ಗಳಂತೆ ಹಲವು ಗಂಟೆಗಳ ಕಾಲ ಬ್ಯಾಟರಿಯಲ್ಲಿ ಕೆಲಸ ಮಾಡಲಾರದು. ಏನು ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಅನುಸರಿಸಿ ಸುಮಾರು ಎರಡು ಗಂಟೆಗಳ ಕಾಲ ಇದು ಬ್ಯಾಟರಿಯಲ್ಲಿ ಕೆಲಸ ಮಾಡಬಲ್ಲುದು.

ಬಹುಮಟ್ಟಿಗೆ ಲ್ಯಾಪ್‌ಟಾಪ್‌ನಂತೆ ಇದನ್ನು ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಬಹುದು. ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಇದನ್ನು ವರ್ಗಾಯಿಸುವುದು ಬಲು ಸುಲಭ. ಪ್ರಮುಖ ಅಂಗದಲ್ಲೇ ಎಲ್ಲವೂ ಅಡಕವಾಗಿದೆ. ಕೇವಲ ಕೀಬೋರ್ಡ್ ಮತ್ತು ಮೌಸ್ ಜೋಡಿಸಿದರೆ ಆಯಿತು. ಕಡಿಮೆ ಜಾಗವನ್ನು ಇದು ಆಕ್ರಮಿಸುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದು. 

ವಾರದ ಆಪ್
ಸ್ಪೀಡ್‌ಟೆಸ್ಟ್ 

ನೀವು ಅಂತರಜಾಲ ಸಂಪರ್ಕವನ್ನು ಹಣ ನೀಡಿ ಕೊಂಡುಕೊಂಡಿರುತ್ತೀರಿ. ನೀವು ನೀಡಿದ್ದು 3mbps ಸಂಪರ್ಕಕ್ಕೆ. ಆದರೆ ನಿಮಗೆ ಯಾಕೋ ಅದು ಅಷ್ಟು ಇಲ್ಲ ಎಂಬ ಅನುಮಾನ ಬಂದಿರುತ್ತದೆ. ಈ ಅನುಮಾನವನ್ನು ಪರಿಹರಿಸಿಕೊಳ್ಳಲು, ಅಂದರೆ ನಿಮ್ಮ ಅಂತರಜಾಲ ಸಂಪರ್ಕದ ವೇಗವನ್ನು ಅಳೆಯಲು www.speedtest.net ಎಂಬ ಜಾಲತಾಣವಿದೆ. ಇದೇ ಜಾಲತಾಣ ನೀಡುವ ಸವಲತ್ತನ್ನು ನಿಮ್ಮ ಆಂಡ್ರಾಯ್ಡ್ ಫೋನ್ ಮೂಲಕವೂ ನೀವು ಬಳಸಬಹುದು. ಅದಕ್ಕಾಗಿ ಗೂಗಲ್ ಪ್ಲೇ ಸ್ಟೋರಿನಲ್ಲಿ Speedtest.net ಎಂದು ಹುಡುಕಿದರೆ ನಿಮಗೆ ಈ ಕಿರುತಂತ್ರಾಂಶ (ಆಪ್) ದೊರೆಯುತ್ತದೆ.

ಡೌನ್‌ಲೋಡ್‌ ಮತ್ತು ಅಪ್‌ಲೋಡ್ ವೇಗಗಳನ್ನು ಅದು ತೋರಿಸುತ್ತದೆ. ಜೊತೆಗೆ ನೀವು ನಿಮ್ಮ ಫೋನಿನಲ್ಲಿ ಜಿಪಿಎಸ್ ಆನ್ ಮಾಡಿದ್ದಲ್ಲಿ ನೀವಿರುವ ಸ್ಥಳದ ಅಕ್ಷಾಂಶ ರೇಖಾಂಶಗಳನ್ನೂ ದಾಖಲಿಸುತ್ತದೆ. ಈ ವಿವರಗಳನ್ನು ನೀವು ಇಮೇಲ್ ಮೂಲಕವೂ ಕಳುಹಿಸಬಹುದು.

ಗ್ಯಾಜೆಟ್ ಸುದ್ದಿ
ಕೇವಲ 9 ಡಾಲರಿಗೆ ಪುಟ್ಟ ಗಣಕ

ಹವ್ಯಾಸಿಗಳಿಗಾಗಿ ಪುಟಾಣಿ ಗಣಕಗಳು ಜನಪ್ರಿಯವಾಗುತ್ತಿವೆ. ಇದನ್ನು ಪ್ರಾರಂಭಿಸಿದ್ದು ರಾಸ್‌ಬೆರಿ ಪೈ (Raspberry Pi). ಈಗ  ಇದಕ್ಕಿಂತಲೂ ಚಿಕ್ಕದಾದ ಹಾಗೂ ಇನ್ನೂ ಕಡಿಮೆ ಬೆಲೆಯ ಪುಟಾಣಿ ಗಣಕ ಸಿದ್ಧವಾಗಿದೆ. ಇದರ ಹೆಸರು ಚಿಪ್ (CHIP).

  ಇದನ್ನು ಸದ್ಯಕ್ಕೆ ಜಗತ್ತಿನ ಅತಿ ಚಿಕ್ಕದಾದ ಹಾಗೂ ಅತಿ ಕಡಿಮೆ ಬೆಲೆಯ ಗಣಕ ಎನ್ನಬಹುದು. ಇದರಲ್ಲಿ ಪರದೆ, ಬ್ಯಾಟರಿ, ಕೀಲಿಮಣೆ ಎಲ್ಲ ಇಲ್ಲ. ಅವೆಲ್ಲವನ್ನು ಹೊರಗಿನಿಂದ ಜೋಡಿಸಬಹುದು. ಹಾಗಿದ್ದರೆ ಇದರಲ್ಲಿ ಏನೇನು ಇವೆ? ಇದರಲ್ಲಿ 1 ಗಿಗಾಹರ್ಟ್ಸ್ ವೇಗದ ಪ್ರೊಸೆಸರ್, ಗ್ರಾಫಿಕ್ಸ್‌ಗೆಂದು ಅದರಲ್ಲೇ ಅಡಕವಾದ ಪ್ರೊಸೆಸರ್, 512 ಮೆಗಾಬೈಟ್ ಪ್ರಾಥಮಿಕ ಮೆಮೊರಿ ಮತ್ತು 4 ಗಿಗಾಬೈಟ್ ಸಂಗ್ರಹ ಮೆಮೊರಿ, ಮೈಕ್ರೋ ಯುಎಸ್‌ಬಿ, ಹೆಡ್‌ಫೋನ್‌ ಮತ್ತು ಮೈಕ್ರೋಫೋನ್ ಕಿಂಡಿಗಳಿವೆ. ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುತ್ತದೆ. ಲಿಬ್ರೆ ಆಫೀಸ್ ತಂತ್ರಾಂಶ ಬಳಸಿ ಕೆಲಸ ಮಾಡುವುದು ಹಾಗೂ ಕೆಲವು ಆಟಗಳನ್ನು ಆಡುವುದು ಎಲ್ಲ ಮಾಡಬಹುದು.

ಗ್ಯಾಜೆಟ್ ಸಲಹೆ
ಪ್ರಶ್ನೆ
: ದಯವಿಟ್ಟು ಏಸಸ್ ಝೆನ್‌ಫೋನ್‌  2ರ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಬೇಕಾಗಿ ವಿನಂತಿ.

: ಅದನ್ನು ಮೇ 14ರ ಸಂಚಿಕೆಯಲ್ಲಿ ನೀಡಲಾಗಿತ್ತು. ನೋಡಿ -  bitly.com/gadgetloka174

ಗ್ಯಾಜೆಟ್ ತರ್ಲೆ 
ಕೆಲವು ಗಾದೆಗಳು: 
ನಿಮ್ಮ ಬ್ಲಾಗಿಗೆ ಹೆಚ್ಚು ಸ್ಪಾಮ್ ಕಮೆಂಟುಗಳು ಬರುತ್ತಿವೆ ಎಂದಾದಲ್ಲಿ ನಿಮ್ಮ ಬ್ಲಾಗ್ ತುಂಬ ಜನಪ್ರಿಯ ಎಂದು ತೀರ್ಮಾನಿಸಬಹುದು.  ನೀವು ಒಂದು ಸಮಾಜಸೇವೆಯ ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ ಅದಕ್ಕೆ ಲೈಕ್ ಒತ್ತಿದವರೆಲ್ಲ ನಿಮ್ಮ ಕೆಲಸದಲ್ಲಿ ನಿಮ್ಮ ಜೊತೆ ಕೈಜೋಡಿಸುತ್ತಾರೆ ಎಂಬುದು ನಿಮ್ಮ ಭ್ರಮೆ. ಫೇಸ್‌ಬುಕ್ ಪೋಸ್ಟ್‌ಗಿಂತ ಅದಕ್ಕೆ ಬರುವ ಕಮೆಂಟುಗಳನ್ನು ಓದುವುದೇ ಹೆಚ್ಚು ಮಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT