ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರನ್ನು ಸೋಲಿಸುವ ನೌಕರಶಾಹಿ

Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ಇತ್ತೀಚೆಗೆ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಸಂಖ್ಯೆ ಯನ್ನು ಜೋಡಿಸಿ ಮತದಾರರ ಹೆಸರು ಒಂದಕ್ಕೂ ಹೆಚ್ಚಿನ ಕಡೆ ಮತದಾರರ ಪಟ್ಟಿಯಲ್ಲಿ ಇರದಂತೆ ನೋಡಿಕೊಳ್ಳುವುದಕ್ಕೆ ಒಂದು ಅಭಿಯಾನವನ್ನೇ ಆರಂಭಿಸಿತು. ಇದು ಆರಂಭವಾದದ್ದು ಮತದಾರರ ಪಟ್ಟಿ ಸಂಪೂರ್ಣ ಕಂಪ್ಯೂಟರೀಕರಣಗೊಂಡು ಎರಡು ಚುನಾವಣೆಗಳು ನಡೆದ ಮೇಲೆ ಎಂಬುದಿಲ್ಲಿ ಗಮನಿಸಬೇಕಾದ ಸಂಗತಿ. ಕಂಪ್ಯೂಟರೀಕೃತ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಒಂದಕ್ಕಿಂತ ಹೆಚ್ಚಿನ ಕಡೆ ಏಕಿದೆ ಎಂಬ ಪ್ರಶ್ನೆ ಕೇಳಿಕೊಂಡರೆ ನಮ್ಮ ಕಂಪ್ಯೂಟರೀಕೃತ ಆಡಳಿತದ ಮಿತಿಗಳು ಬಯಲಾಗುತ್ತಾ ಹೋಗುತ್ತವೆ.

ಕಂಪ್ಯೂಟರೀಕೃತ ಆಡಳಿತದ ಬಗ್ಗೆ ನೀತಿ ನಿರೂಪಕರಿಗೆ ಯಾವ ಕನಸಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವ ನೌಕರಶಾಹಿಯ ಮಟ್ಟಿಗೆ ಅದು ಕಾಗದಕ್ಕೆ ಪರ್ಯಾಯವಾಗಿ ಕಂಪ್ಯೂಟರ್ ಸ್ಕ್ರೀನ್, ಟೈಪ್‌ರೈಟರಿಗೆ ಬದಲಾಗಿ ಬಂದ ಕಂಪ್ಯೂಟರ್ ಕೀಬೋರ್ಡ್‌ನಂತೆ ಕಾಣಿಸುತ್ತದೆ. ಕೇಂದ್ರೀಕೃತ ದತ್ತಸಂಚಯವೊಂದರಲ್ಲಿ ಮತದಾರರ ಪಟ್ಟಿ ಇದ್ದರೆ ಅದರಿಂದ ಆಗುವ ಅನುಕೂಲಗಳು ಒಂದೆರಡರಲ್ಲ. ಒಬ್ಬನೇ ಮತದಾರನ ಹೆಸರು ಹಲವು ಕ್ಷೇತ್ರಗಳಲ್ಲಿ ಇರದಂತೆ ನೋಡಿಕೊಳ್ಳಬಹುದು. ಆತ ವಿಳಾಸ ಬದಲಾಯಿಸಿದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಆತನ ಹೆಸರನ್ನು ವರ್ಗಾಯಿಸಬಹುದು. ಆದರೆ, ಈಗಲೂ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಥವಾ ವಿಳಾಸ ಬದಲಾಯಿಸುವ ಪ್ರಕ್ರಿಯೆ ಕಾಗದದಲ್ಲಿ ಮುದ್ರಿತವಾದ ಮತದಾರರ ಪಟ್ಟಿಯಿದ್ದ ಕಾಲದಲ್ಲಿ ನಡೆಯುತ್ತಿದ್ದಂತೆಯೇ ನಡೆಯುತ್ತದೆ.

ಮತದಾರರ ಪಟ್ಟಿಯನ್ನು ವಿಧಾನಸಭಾ ಕ್ಷೇತ್ರವಾರು ಸಿದ್ಧಪಡಿಸಲಾಗುತ್ತದೆ. ಆದ್ದರಿಂದ ವಿಧಾನಸಭಾ ಕ್ಷೇತ್ರದ ಒಳಗೇ ವಿಳಾಸ ಬದಲಾಗಿದ್ದರೆ ಅದಕ್ಕೊಂದು ಅರ್ಜಿ ನಮೂನೆ, ಮತದಾರ ವಿಧಾನಸಭಾ ಕ್ಷೇತ್ರದಿಂದ ಹೊರಗೆ ಹೋಗಿದ್ದರೆ ಅದಕ್ಕೆ ಬೇರೊಂದು ಅರ್ಜಿ ನಮೂನೆಗಳನ್ನು ನಿಗದಿಪಡಿಸಿದೆ. ಇವೆಲ್ಲವನ್ನೂ ಆನ್‌ಲೈನ್ ಮೂಲಕವೇ ಸಲ್ಲಿಸುವ ಸವಲತ್ತೂ ಇದೆ. ಆದರೆ ಆ ಅರ್ಜಿಯ ಪ್ರತಿ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಅಗತ್ಯ ದಾಖಲೆಗಳ ಮುದ್ರಿತ ಪ್ರತಿಗಳನ್ನು ನಿರ್ದಿಷ್ಟ ಮತದಾರರ ನೋಂದಣಿ ಅಧಿಕಾರಿಯ ಕಚೇರಿಗೆ ತಲುಪಿಸಬೇಕು!

ಹೊಸತಾಗಿ ಹೆಸರು ಸೇರಿಸುವುದಿದ್ದರೆ ಅದಕ್ಕೆ ಬಳಕೆಯಾಗುವ ಅರ್ಜಿ ನಮೂನೆಯಲ್ಲಿ ಭಾರತದ ಯಾವುದಾದರೂ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಹೆಸರು ಈಗಾಗಲೇ ಮತದಾರರ ಪಟ್ಟಿಯಲ್ಲಿದೆಯೇ ಎಂಬ ಪ್ರಶ್ನೆಯಿದೆ. ಇದ್ದರೆ ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆಯ ಸಂಖ್ಯೆಯ ಜೊತೆಗೆ ಆ ವಿವರಗಳನ್ನೂ ಒದಗಿಸುವುದು ಕಡ್ಡಾಯ. ಅರಿವಿದ್ದೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಜನಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧ. ಕಾನೂನು ಪಾಲಿಸಬೇಕೆಂದು ಈ ವಿವರ ಒದಗಿಸಿದರೆ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ. ನೀವು ಹಿಂದೆ ಇದ್ದ ವಿಳಾಸಕ್ಕೆ ಸಂಬಂಧಿಸಿದ ಮತದಾರರ ನೋಂದಣಿ ಅಧಿಕಾರಿಯನ್ನು ಪತ್ತೆ ಮಾಡಿ ಪಟ್ಟಿಯಿಂದ ಹೆಸರು ತೆಗೆದು ಹಾಕುವುದಕ್ಕೆ ಅರ್ಜಿ ಸಲ್ಲಿಸಿ ಅದರ ಸ್ವೀಕೃತಿಯನ್ನು ತರಲೇಬೇಕಾಗುತ್ತದೆ.

ಕಾನೂನಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಇನ್ನೆಲ್ಲೂ ನನ್ನ ಹೆಸರಿಲ್ಲ ಎಂದು ಅರ್ಜಿ ತುಂಬಿಸಿದರೆ ಎಲ್ಲಾ ಸುಸೂತ್ರ. ಮತದಾರರ ಪಟ್ಟಿಗೆ ಹೆಸರೂ ಸೇರುತ್ತದೆ. ಅಷ್ಟೇ ಅಲ್ಲ ಆ ಹೆಸರಿನಲ್ಲಿ ಒಂದು ಮತದಾರರ ಗುರುತಿನ ಚೀಟಿಯೂ ಸಿದ್ಧವಾಗಿಬಿಡುತ್ತದೆ. ಅಂದರೆ ಚುನಾವಣಾ ಆಯೋಗಕ್ಕಾಗಿ ಕೆಲಸ ಮಾಡುವ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಕಂಪ್ಯೂಟರೀಕೃತ ಮತದಾರರ ಪಟ್ಟಿಯನ್ನೂ ಮುದ್ರಿತ ಮತದಾರರ ಪಟ್ಟಿಯಂತೆಯೇ ಬಳಸಿದ್ದರ ಪರಿಣಾಮವಾಗಿ ಮತದಾರರ ಹೆಸರು ಎರಡೇನು ಇಪ್ಪತ್ತು ಕಡೆ ಬೇಕಾದರೂ ಕಾಣಿಸಬಹುದಾದ ಸ್ಥಿತಿ ಇದೆ.

ಇದೇಕೆ ಹೀಗಾಯಿತು? ನೀತಿ ನಿರೂಪಕರು ಕಂಪ್ಯೂಟರೀಕರಣದ ಮೂಲಕ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ನೀತಿಗಳನ್ನು ಕಾರ್ಯರೂಪಕ್ಕೆ ತರಬೇಕಾದ ಅಧಿಕಾರಶಾಹಿಯ ಒಂದು ದೊಡ್ಡ ವರ್ಗ ಹಳೆಯ ವ್ಯವಸ್ಥೆಯನ್ನೇ ಕಂಪ್ಯೂಟರ್ ಯುಗದಲ್ಲಿಯೂ ಮುಂದುವರಿಸುವುದಕ್ಕೆ ಬೇಕಿರುವ ತಂತ್ರರೂಪಿಸಿ ಸಮಸ್ಯೆಗಳನ್ನು ಸಂಕೀರ್ಣಗೊಳಿಸುತ್ತಾ ಸಾಗುತ್ತದೆ.ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಪೌರತ್ವದ ದಾಖಲೆಯೂ ಆಗಿರುವುದರಿಂದ ಇದಕ್ಕೆ ಹೆಸರು ಸೇರಿಸುವುದು ಅಥವಾ ತೆಗೆಯುವುದನ್ನು ಬಹಳ ಎಚ್ಚರಿಕೆಯಿಂದ ನಿರ್ದಿಷ್ಟ ನಿಯಮದಂತೆ ಮಾಡುವ ಅಗತ್ಯವಿದೆ. ಆದರೆ ಮತದಾರರು ಸರ್ಕಾರಿ ಕಚೇರಿಗಳಿಗೆ ಅಲೆಯದಂತೆ ನೋಡಿಕೊಳ್ಳುವುದಕ್ಕೆ ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಸಾಧ್ಯ. ಅದನ್ನು ಮಾಡದೆ ಎಲ್ಲಿ ಹೆಸರಿದೆಯೋ ಅಲ್ಲಿನ ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ತರಬೇಕೆಂಬ ನಿಯಮ ರೂಪಿಸಿದರೆ ಏನಾಗಬಹುದೋ ಅದು ಈಗ ಸಂಭವಿಸುತ್ತಿದೆ.

ಹೊಸತಾಗಿ ಅರ್ಜಿ ಸಲ್ಲಿಸುವವರು ತಮ್ಮ ಹೆಸರು ಬೇರೆಲ್ಲಿಯೂ ಇರಲಿಲ್ಲ ಎಂಬ ಘೋಷಣೆಯನ್ನಷ್ಟೇ ಸಲ್ಲಿಸುತ್ತಾರೆ.ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಶಿಕ್ಷಾರ್ಹ ಅಪರಾಧವೆಂಬುದೇನೋ ನಿಜ. ಮತದಾರರ ಪಟ್ಟಿಯ ಪರಿಷ್ಕರಣೆಯನ್ನೇ ಸರಿಯಾಗಿ ಮಾಡಲಾಗದ ನಮ್ಮ ಅಧಿಕಾರಶಾಹಿ, ಎರಡೆರಡು ಕಡೆ ಹೆಸರಿರುವವರನ್ನು ಹುಡುಕಿ ಅವರನ್ನು ಶಿಕ್ಷಿಸುವುದು ಸಾಧ್ಯವೇ? ಈ ಸಮಸ್ಯೆಯಿಂದಾಗಿ ಚುನಾವಣಾ ಆಯೋಗ ಈಗ ಆಧಾರ್ ಸಂಖ್ಯೆಯ ಜೊತೆಗೆ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಜೋಡಿಸುವ ಕೆಲಸಕ್ಕೆ ಹೊರಟಿದೆ. ಇದರಿಂದ ಎರಡೆರಡು ನಮೂದಿನ ಸಮಸ್ಯೆಯೇನೋ ಪರಿಹಾರವಾಗಬಹುದು.ವಿಳಾಸ ಬದಲಾವಣೆಯ ಪ್ರಕ್ರಿಯೆಯನ್ನು ಸರಳಗೊಳಿಸದಿದ್ದರೆ ಮತದಾರರ ಪಟ್ಟಿಯಲ್ಲಿರುವವರ ಸಂಖ್ಯೆಯಲ್ಲಿ ಭಾರಿ ಕುಸಿತ ಕಾಣಿಸಬಹುದು. ಇದನ್ನು ಸರಿಪಡಿಸಲು ಚುನಾವಣಾ ಆಯೋಗ ಮತದಾರರ ಮರುನೋಂದಣಿ ಅಭಿಯಾನ ಕೈಗೊಳ್ಳಬೇಕಾಗಬಹುದು.

ಭಾರತದ ನೌಕರಶಾಹಿ ತನ್ನ ಕೆಂಪು ಪಟ್ಟಿ ನೀತಿಯನ್ನು ಹೇರುವುದಕ್ಕೆ ಬಳಸುವ ತಂತ್ರಗಳೇ ಕುತೂಹಲಕಾರಿ. ಇ–ಆಡಳಿತ, ಕಂಪ್ಯೂಟರೀಕರಣ, ಮಾಹಿತಿ ಹಕ್ಕು ಕಾಯ್ದೆಗಳೆಲ್ಲವೂ ಜಾರಿಯಾದಾಗ ನೌಕರಶಾಹಿ ಸ್ವಲ್ಪ ಮಟ್ಟಿಗಾದರೂ ಜನಸ್ನೇಹಿಯಾಗಬಹುದು ಎಂಬ ಆಸೆ ಎಲ್ಲರಿಗೂ ಇತ್ತು. ರಾಜಕಾರಣಿಗಳಂತೂ ಕಂಪ್ಯೂಟರ್ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಪ್ರಾಮಾಣಿಕವಾಗಿಯೇ ನಂಬಿದ್ದಾರೆ. ಆದರೆ ನೌಕರಶಾಹಿ ಸದಾ ರಂಗೋಲಿಯ ಕೆಳಗೆ ನುಸುಳುವ ಕೆಲಸವನ್ನೇ ಮಾಡುತ್ತದೆ.ಕರ್ನಾಟಕ ಸರ್ಕಾರ ರೂಪಿಸಿದ ಮಹತ್ವಾಕಾಂಕ್ಷೆಯ ‘ಸಕಾಲ’ ಯೋಜನೆ ಮೇಲು ನೋಟಕ್ಕೆ ಬಹಳ ಯಶಸ್ವಿ ಅನ್ನಿಸುತ್ತದೆ.

ಪ್ರತೀ ಅರ್ಜಿಯನ್ನು ಮಾಹಿತಿ ತಂತ್ರಜ್ಞಾನಾಧಾರಿತ ವ್ಯವಸ್ಥೆಯೊಂದರ ಮೂಲಕ ಸ್ವೀಕರಿಸಿ ನಿರ್ದಿಷ್ಟ ಅವಧಿಯೊಳಗೆ ಸೇವೆಗಳು ದೊರೆಯುವಂತೆ ನೋಡಿಕೊಳ್ಳುವ ವ್ಯವಸ್ಥೆ ಇದು. ಇದಕ್ಕೆ ಒಂದು ಕಾಯ್ದೆಯ ಬೆಂಬಲವೂ ಇದೆ. ಪ್ರತಿಯೊಂದು ಸೇವೆಗೆ ಅರ್ಜಿಯನ್ನು ಸ್ವೀಕರಿಸುವ ಕ್ರಿಯೆಯೂ ಕಂಪ್ಯೂಟರೀಕೃತ ವ್ಯವಸ್ಥೆಯೊಂದರ ಮೂಲಕ ನಡೆಯುತ್ತದೆ. ಕೇಂದ್ರೀಕೃತ ದತ್ತಸಂಚಯವೊಂದರಲ್ಲಿ ಪ್ರತೀ ಅರ್ಜಿಯ ವಿಲೇವಾರಿಯೂ ದಾಖಲಾಗುವುದರಿಂದ ಯಾವ ಕಚೇರಿಯಲ್ಲಿ ಎಷ್ಟು ಅರ್ಜಿಗಳನ್ನು ಯಾವ ಸೇವೆಗಳಿಗಾಗಿ ಸ್ವೀಕರಿಸಲಾಯಿತು ಎಂಬ ವಿವರ ಎಲ್ಲಾ ಹಂತದ ಉನ್ನತ ಅಧಿಕಾರಿಗಳಿಗೂ ದೊರೆಯುತ್ತದೆ. ಇಷ್ಟರ ಮೇಲೆ ಯಾವ ಕಚೇರಿಯಲ್ಲಿ ಎಷ್ಟು ಬೇಗ ಅರ್ಜಿಗಳು ವಿಲೇವಾರಿಯಾದವು ಎಂಬುದಕ್ಕೆ ಅನುಗುಣವಾಗಿ ಗುಣಾಂಕಗಳನ್ನು ಕೊಡುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಇವೆಲ್ಲವೂ ಜನರಿಗೆ ಸರ್ಕಾರ ಒದಗಿಸುವ ಸೇವೆಗಳಲ್ಲಿ ದಕ್ಷತೆಯನ್ನು ತರಬೇಕಲ್ಲವೇ?

ಆದರೆ, ವಾಸ್ತವ ಹಾಗಿಲ್ಲ. ಅಜೀಮ್ ಪ್ರೇಂಜಿ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನ ಈ ಕುರಿತಂತೆ ಕೆಲವು ಕುತೂಹಲಕರ ಮಾಹಿತಿಗಳನ್ನು ಹೊರಗೆಡವಿದೆ. ಸೇವೆಗೆ ನಿಗದಿ ಪಡಿಸಲಾಗಿರುವ ಈ ನಿರ್ದಿಷ್ಟ ಅವಧಿ ಎಂಬುದು ಆರಂಭಗೊಳ್ಳುವುದು ಅರ್ಜಿಯನ್ನು ಸ್ವೀಕರಿಸಿದ ಕ್ಷಣದಿಂದ. ನಮ್ಮ ನೌಕರಶಾಹಿ ಚಾತುರ್ಯ ಎಷ್ಟೆಂದರೆ ಕಂಪ್ಯೂಟರ್ ಮೂಲಕ ಅರ್ಜಿ ಸ್ವೀಕರಿಸದೇ ಇರುವ ತಂತ್ರವನ್ನು ಅನುಸರಿಸುತ್ತದೆ. ಇದೇನು ಕಷ್ಟದ ಸಂಗತಿಯಲ್ಲ. ಯಾವುದೋ ದಾಖಲೆ ಸರಿ ಇಲ್ಲ ಎಂಬ ನೆಪ ಹೇಳುವುದಕ್ಕೆ ಸರ್ಕಾರಿ ಅಧಿಕಾರಿಗಳಿಗೆ ಯಾರೂ ಕಲಿಸಿ ಕೊಡಬೇಕಾಗಿಲ್ಲ.

ಒಂದು ವೇಳೆ ಅರ್ಜಿಯನ್ನು ಸ್ವೀಕರಿಸಿ ಸ್ವೀಕೃತಿಯನ್ನು ಕೊಟ್ಟನಂತರವೂ ನಿರ್ದಿಷ್ಟ ಸೇವೆ ದೊರೆತೇ ಬಿಡುತ್ತದೆ ಎಂದುಕೊಳ್ಳಬೇಕಾಗಿಲ್ಲ. ಉದಾಹರಣೆಗೆ ‘ಸಕಾಲ’ದ ನಿಯಮಗಳಂತೆ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಅರ್ಜಿಯನ್ನು ಸ್ವೀಕರಿಸಿದ 21 ದಿನದೊಳಗೆ ವಿಲೇವಾರಿ ಮಾಡಬೇಕು. ಕೊನೆಯ ದಿನ ಅರ್ಜಿಯ ಯಾವುದೋ ಒಂದು ಲೋಪವನ್ನು ತೋರಿಸಿಕೊಟ್ಟು ಅರ್ಜಿ ವಿಲೇವಾರಿಯಾಯಿತು ಎಂಬ ದಾಖಲೆ ಸೃಷ್ಟಿಸುವ ಅವಕಾಶವಿದೆ. ಅಥವಾ 21ನೇ ದಿನ ಜಾತಿ ಪ್ರಮಾಣ ಪತ್ರವನ್ನು ಮುದ್ರಿಸಿ ಇಟ್ಟುಕೊಂಡು ಲಂಚವಿಲ್ಲದೆ ಅದನ್ನು ಕೊಡುವುದಿಲ್ಲ ಎಂದು ಕಾಡಿಸುವುದಕ್ಕೂ ಅವಕಾಶವಿದೆ. ಕಂಪ್ಯೂಟರೀಕೃತ ವ್ಯವಸ್ಥೆ ಮಾತ್ರ ಮೇಲಧಿಕಾರಿಗಳಿಗೆ ಅರ್ಜಿ ವಿಲೇವಾರಿಯಾಗಿದೆ ಎಂಬ ಅಂಕಿ–ಅಂಶವನ್ನು ಒದಗಿಸುತ್ತಿರುತ್ತದೆ. ಇನ್ನು ತುರ್ತಾಗಿ ಜಾತಿ ಪ್ರಮಾಣಪತ್ರ ಬೇಕಾಗಿದ್ದರೆ ಅದನ್ನು ಪಡೆಯುವುದಕ್ಕೆ ಅರ್ಜಿದಾರ ಮಧ್ಯವರ್ತಿಯನ್ನು ಅವಲಂಬಿಸಿಯೋ ಅಥವಾ ಅಧಿಕಾರಿಯ ಕೈಬಿಸಿ ಮಾಡಿಯೋ ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ.

ಈ ಅನುಭವಗಳ ಬೆಳಕಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯನ್ನೂ ನೋಡಬೇಕಾಗುತ್ತದೆ. ನೀತಿ ನಿರೂಪಣೆಯ ಸ್ಥಾನದಲ್ಲಿರುವ ಅವರ ಕಾಳಜಿ ಎಷ್ಟೇ ಪ್ರಾಮಾಣಿಕವಾಗಿದ್ದರೂ ಅದನ್ನು ವಿಫಲಗೊಳಿಸುವ ಎಲ್ಲಾ ಶಕ್ತಿಯನ್ನೂ ಸುಪ್ತವಾಗಿಟ್ಟುಕೊಂಡಿರುವ ನೌಕರಶಾಹಿಯೊಂದಿದೆ. ಡಿಜಿಟಲ್ ಇಂಡಿಯಾದ ನಿರೀಕ್ಷೆಗಳು ನಿಜವಾಗಬೇಕೆಂದರೆ ನೌಕರಶಾಹಿ ಸಂಸ್ಕೃತಿಯನ್ನು ಬದಲಾಯಿಸುವುದಕ್ಕೆ ಬೇಕಿರುವ ಕ್ರಮಗಳೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT