ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೋಡು ತಿಮ್ಮಪ್ಪನವರಿಗೆ ಸಿಟ್ಟೇಕೆ ಬರುತ್ತದೆ ?

Last Updated 10 ಜನವರಿ 2015, 19:30 IST
ಅಕ್ಷರ ಗಾತ್ರ

ಅವರ ಸ್ವಭಾವವೇ ಹಾಗೆ. ನಗುವಿನ ಹಿಂದೆ ಸದಾ ಇಣುಕುವ ಸಿಡುಕು. ಮೂಲತಃ ಸಮಾಜವಾದಿ. ವ್ಯವಸ್ಥೆ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರಂತರ ಹೆಣಗಾಟ. ರಾಜಕೀಯ ಜೀವನದ ಆರಂಭವೂ ತುಮುಲದ್ದು. ಹೋರಾಟದ್ದು. ಉಳುವವನ ಪರವಾಗಿ ಸದಾ ತುಡಿಯುವಂಥದ್ದು. ಈಗ ವಯಸ್ಸು 84. ಅಂದುಕೊಂಡುದನ್ನು ಮಾಡಲು ಆಗದ್ದರಿಂದ ತನ್ನ ಬಗೆಗೇ ಬೇಸರ, ಹತಾಶೆ. ಯಾವಾಗಲೂ ನಿಧಾನವಾಗಿರುವ, ಸ್ಪಂದನಗುಣ ಕಳೆದುಕೊಂಡಿರುವ ಆಡಳಿತ ವ್ಯವಸ್ಥೆ ಬಗ್ಗೆ ಅಸಹನೆ.

ಈಗ ಅವರಿಗೆ ಸಮಾಧಾನವೇ ಇಲ್ಲ. ಯಾರು ಎದುರು ಬಂದರೂ ಸಿಡುಕುತ್ತಾರೆ. ‘ಈ ಸರ್ಕಾರ ನಿದ್ದೆ ಮಾಡುತ್ತಿದೆ’ ಎನ್ನುತ್ತಾರೆ. ‘ಇದಕ್ಕೆ ಕಣ್ಣಿಲ್ಲ, ಕಿವಿಯಿಲ್ಲ, ಹೃದಯ ಮೊದಲೇ ಇರಲಿಲ್ಲ’ ಎನ್ನುತ್ತಾರೆ. ಇನ್ನೂ ಜಾಸ್ತಿ ಸಿಟ್ಟು ಬಂದರೆ, ‘ಅದು ಎಲ್ಲಿ ಬದುಕಿದೆ, ಸತ್ತಿದೆ’ ಎನ್ನುತ್ತಾರೆ. ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಎಲ್ಲ ಸಮಾಜವಾದಿಗಳು ಕಂಡುಕೊಂಡ ಹಾಗೆ ಅವರೂ ಕಾಂಗ್ರೆಸ್ಸಿನಲ್ಲಿಯೇ ನೆಲೆ ಕಂಡುಕೊಂಡರು. ಅದಕ್ಕಿಂತ ಮುಂಚೆ 1950ರ ದಶಕದ ಆರಂಭದಲ್ಲಿ, ಉಳುವವನಿಗೆ ಭೂಮಿಯ ಹಕ್ಕಿಗಾಗಿ ನಡೆದ, ಕಾಗೋಡು ಸತ್ಯಾಗ್ರಹದ ಮುಂಚೂಣಿಯಲ್ಲಿ ಇದ್ದವರು.  1972ರಲ್ಲಿ ಮೊದಲ ಬಾರಿ ಬಂಗಾರಪ್ಪ ಮತ್ತು ಕೋಣಂದೂರು ಜತೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ವಿಧಾನಸಭೆ ಪ್ರವೇಶಿಸಿದವರು. ತುರ್ತು ಪರಿಸ್ಥಿತಿಯ ಕೇಡನ್ನು ವಿಧಾನಸಭೆಯಲ್ಲಿ ಕಟುವಾಗಿ ಟೀಕಿಸಿದವರು; ಸದನದಲ್ಲಿ ಆಗ ಕಾಗೋಡು ಮತ್ತು ಕೋಣಂದೂರು ಅವರದೇ ಜೋರು ದನಿ. ಅದೆಲ್ಲ ಇತಿಹಾಸ.

ಹತ್ತು ವರ್ಷಗಳ ಬಿಡುವಿನ ನಂತರ  ಕಾಗೋಡು ತಿಮ್ಮಪ್ಪನವರು ಮತ್ತೆ ಈ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇದು ಅವರಿಗೆ ತಾವು ಕೊಟ್ಟ ಭರವಸೆ  ಈಡೇರಿಸಲು ಕೊನೆಯ ಅವಕಾಶ. ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಗರ್ ಹುಕುಂ ಸಾಗುವಳಿದಾರರಿಗೆ ಆರು ತಿಂಗಳಲ್ಲಿ ಭೂಮಿಯ ಹಕ್ಕನ್ನು ಕೊಡುತ್ತೇವೆ’ ಎಂದು ಚುನಾವಣೆ ಸಮಯದಲ್ಲಿ ಅವರು ಭರವಸೆ ಕೊಟ್ಟಿದ್ದರು. ಅದು ಕೇವಲ ಚುನಾವಣೆಯಲ್ಲಿ ಗೆಲ್ಲಲು ಕೊಟ್ಟ ಭರವಸೆಯಾಗಿರಲಿಲ್ಲ; ಅದು ಆಗಲೇಬೇಕಾದ ಕೆಲಸ ಎಂದು ಅವರು ನಂಬಿದ್ದರು. ಉಪಜೀವನಕ್ಕಾಗಿ ಮೂರು ಎಕರೆ, ನಾಲ್ಕು ಎಕರೆ ಭೂಮಿಯನ್ನು ಅತಿಕ್ರಮಿಸಿಕೊಂಡಿರುವ ಬಡವರಿಗೆ ಒಂದು ಸರ್ಕಾರ ಅಷ್ಟನ್ನಾದರೂ ಮಾಡದಿದ್ದರೆ ಹೇಗೆ? ಅವರೆಲ್ಲ ಹಿಂದುಳಿದ ವರ್ಗದವರು. ಸಮಾಜವಾದಿಗಳ ರಾಜಕಾರಣದ ಮೂಲ ನೆಲೆ ಈ ವರ್ಗದವರೇ. ಪಕ್ಷ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿ ಹೋಯಿತು.

ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಒತ್ತುವರಿಯಾಗಿರುವ 1.74 ಲಕ್ಷ ಎಕರೆ ಭೂಮಿಯಲ್ಲಿ ಒಂದು ಎಕರೆ ಹಕ್ಕುಪತ್ರವನ್ನು ಒಬ್ಬರಿಗೂ ಕೊಡಲು ಇದುವರೆಗೆ ಸಾಧ್ಯವಾಗಲಿಲ್ಲ. ಏಕೆ ಆಗಲಿಲ್ಲ ಎಂದರೆ ಸರ್ಕಾರದಲ್ಲಿ ಇದ್ದವರು ಸುಪ್ರೀಂ ಕೋರ್ಟಿನ ಆದೇಶವನ್ನು ತೋರಿಸುತ್ತಾರೆ. ಸಾಗರ ತಾಲ್ಲೂಕಿನ ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ. ಹಳ್ಳಿಗಳಿಗೆ ಬರಲು ವೈದ್ಯರು ಸಿಗುವುದಿಲ್ಲ ಎಂದು ಸರ್ಕಾರ  ಸಬೂಬು ಹೇಳುತ್ತದೆ. ಕಾಗೋಡು ಅಧಿಕಾರದಲ್ಲಿ ಇದ್ದರೂ ಅಷ್ಟೆ, ಇಲ್ಲದೆ ಇದ್ದರೂ ಅಷ್ಟೆ, ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವವರು. ಕೈಲಾದ ಸಹಾಯ ಮಾಡಬೇಕು ಎನ್ನುವವರು. ಅದಕ್ಕಾಗಿ ಯಾರ ಬಾಗಿಲಿಗೆ ಹೋಗಲೂ ಅವರಿಗೆ ಅಳುಕೇನೂ ಇಲ್ಲ. ಈಗ ಅವರು ವಿಧಾನಸಭೆಯ ಅಧ್ಯಕ್ಷರು, ಶಿಷ್ಟಾಚಾರದ ಬಂದಿ. ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಪೀಠದಲ್ಲಿ ಕುಳಿತರೆ 225 ಮಂದಿ ಶಾಸಕರು ಬಿಡಿ ಮುಖ್ಯಮಂತ್ರಿಗೂ ಬೆವರು ಇಳಿಸಬಲ್ಲರು. ಆದರೆ, ಅಂದುಕೊಂಡುದನ್ನು ಮಾಡಲು ಆಗುತ್ತಿಲ್ಲ. ಕಂಡ ಕಂಡವರ ಮೇಲೆ  ರೇಗುತ್ತಾರೆ. ‘ನನಗೆ ಅಧಿಕಾರ  ಬಿಟ್ಟುಕೊಡಿ ಹೇಗೆ ಮಾಡುತ್ತೇನೆ ನೋಡಿ’ ಎಂದು ಕಂದಾಯ ಸಚಿವರಿಗೆ ಸವಾಲು ಹಾಕುತ್ತಾರೆ; ಆರೋಗ್ಯ ಸಚಿವರಿಗೆ ಛೇಡಿಸುತ್ತಾರೆ. ಅವರು ಹಾಗೆ ಹೇಳಿದ ಕೂಡಲೇ ಕಾಗೋಡು ಅವರಿಗೆ ಮಂತ್ರಿಯಾಗಬೇಕು ಎಂಬ ಆಸೆ ಎಂದು ಅನಿಸತೊಡಗುತ್ತದೆ; ಮುಖ್ಯಮಂತ್ರಿ ಆಗಲಿಲ್ಲ ಎಂಬ ಅಸಮಾಧಾನ ಎಂದು ಗುಲ್ಲು ಏಳುತ್ತದೆ.

ಘನತೆವೆತ್ತ ಎಚ್‌.ಆರ್.ಭಾರದ್ವಾಜರು ಕರ್ನಾಟಕದ ರಾಜ್ಯಪಾಲರಾಗಿದ್ದಾಗ ಒಬ್ಬ ರಾಜ್ಯಪಾಲ ಹೇಗೆ ನಡೆದುಕೊಳ್ಳಬಾರದು ಎಂದು ನಮಗೆಲ್ಲ ಗೊತ್ತಾಯಿತು. ಬಿಜೆಪಿಯವರಿಗೆ ದಿನ ನಿತ್ಯ ಕಾಟ ಕೊಡುವುದನ್ನೇ ದಂಧೆ ಮಾಡಿಕೊಂಡಿದ್ದ ಭಾರದ್ವಾಜರನ್ನು ಕಂಡರೆ ಕಾಂಗ್ರೆಸ್ಸಿಗರಿಗೆ ಬಹಳ ಪ್ರೀತಿ. ವಿರೋಧ ಪಕ್ಷವಾಗಿ ತಾವು ಮಾಡಲಾಗದ ಕೆಲಸವನ್ನು ಅವರೇ ಸಮರ್ಥವಾಗಿ ಮಾಡುತ್ತಿದ್ದಾರೆ ಎಂದು ಒಳಗೊಳಗೇ ಖುಷಿ. ಭಾರದ್ವಾಜರಿಗಿಂತ ಮುಂಚೆ ಕರ್ನಾಟಕಕ್ಕೆ ಅನೇಕ ಮಂದಿ ರಾಜ್ಯಪಾಲರು ಬಂದು ಹೋಗಿದ್ದರು. ಯಾರೂ ಅವರ ಹಾಗೆ ನಡೆದುಕೊಂಡಿರಲಿಲ್ಲ. ಈಗ ಕಾಗೋಡು ತಿಮ್ಮಪ್ಪನವರು ಸಭಾಧ್ಯಕ್ಷರು. ಇದುವರೆಗೆ ಆಗಿ ಹೋದ ಯಾವ ಸಭಾಧ್ಯಕ್ಷರೂ ಕಾಗೋಡು ತಿಮ್ಮಪ್ಪನವರ ಹಾಗೆ ನಡೆದುಕೊಂಡಿರಲಿಲ್ಲ, ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿರಲಿಲ್ಲ.

ಸರ್ಕಾರಕ್ಕೆ ಮುಜುಗರ ಮಾಡಬಾರದು ಎಂದೇ ಸಭಾಧ್ಯಕ್ಷರನ್ನು ಆಡಳಿತ ಪಕ್ಷದಿಂದಲೇ ಆರಿಸುತ್ತಾರೆ. ನಂತರ ಅವರು ಪಕ್ಷಕ್ಕೆ ರಾಜೀನಾಮೆ ಕೊಡುತ್ತಾರೆ ಎಂಬುದು ಬೇರೆ ವಿಚಾರ. ಅವೆಲ್ಲ ಸಂಸದೀಯ ರೂಢಿಗಳು ಅಷ್ಟೆ. ಹಿಂದೆ ಭಾರದ್ವಾಜರು ಕಾಂಗ್ರೆಸ್ಸಿನ ಕೆಲಸ ಮಾಡಿದ ಹಾಗೆಯೇ ಈಗ  ತಿಮ್ಮಪ್ಪನವರು ಬಿಜೆಪಿಯವರ ಕೆಲಸ ಮಾಡುತ್ತಿದ್ದಾರೆ. ‘ಈ ಸರ್ಕಾರ ಸತ್ತು ಹೋಗಿದೆ’ ಎಂದು ತಿಮ್ಮಪ್ಪನವರು ಬಹು ಹಿಂದೆಯೇ ಹೇಳಿದ ಮಾತನ್ನೇ ನಿನ್ನೆ ಮೊನ್ನೆ ಶೆಟ್ಟರ್‌ ಮತ್ತು ಯಡಿಯೂರಪ್ಪನವರು ಹೇಳಿದ್ದಾರೆ. ಕಾಂಗ್ರೆಸ್ಸಿನ ಮತ್ತೊಬ್ಬ ಹಿರಿಯ ಶಾಸಕ ರಮೇಶ್ ಕುಮಾರ್‌ ಅವರೂ, ‘ರೈತರ ಪಾಲಿಗೆ ಈ ಸರ್ಕಾರ ಸತ್ತಿದೆ’ ಎಂದು ಹೇಳಿ ಆರು ತಿಂಗಳೇ ಆಯಿತು. ಅವರೇನು ಆ ಮಾತನ್ನು ಎಲ್ಲಿಯೋ ಕದ್ದು ಮುಚ್ಚಿ ಹೇಳಿರಲಿಲ್ಲ. ವಿಧಾನಸಭೆಯ ಅಧಿವೇಶನದಲ್ಲಿಯೇ, ಮುಖ್ಯಮಂತ್ರಿಯ ಸಮ್ಮುಖದಲ್ಲಿಯೇ ಹಾಗೆಂದು ಸಾರಿದ್ದರು! ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರೂ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು. ನಂತರ, ‘ನಾನು ಹಾಗೆ ಹೇಳಲಿಲ್ಲ’ ಎಂದು ಸರಿಪಡಿಸಿಕೊಂಡರು.

ಇದೆಲ್ಲ ಮಾಧ್ಯಮಕ್ಕೆ ರಂಜನೆ. ಅದು ಇಂಥ ರಂಜನೆಯಲ್ಲಿಯೇ ಖುಷಿ ಕಾಣುತ್ತದೆ. ಅದನ್ನು ಮತ್ತೆ ಮತ್ತೆ ಹುಡುಕಿಕೊಂಡು ಹೋಗುತ್ತದೆ. ಭಾರದ್ವಾಜರು ಹೋಗುವ ಯಾವ ಕಾರ್ಯಕ್ರಮವನ್ನೂ ಮಾಧ್ಯಮದವರು ತಪ್ಪಿಸಿಕೊಳ್ಳುತ್ತಿರಲಿಲ್ಲ, ತಪ್ಪಿಸಿಕೊಳ್ಳುವ ಹಾಗೆ ಇರಲಿಲ್ಲ! ಮುಖ್ಯ ವೇದಿಕೆಯ ಮೇಲೆ ಅವರು ಮಾಡುವ ಭಾಷಣ ಅದಕ್ಕೇ ಬೇಕೇ ಆಗಿರಲಿಲ್ಲ. ಅವರು ಕೆಳಗೆ ಇಳಿದು ಬಂದ ಕೂಡಲೇ ಮೈಕು ಹಿಡಿದುಕೊಂಡು ಅವರ ಮುಖಕ್ಕೆ ಹಿಡಿಯುತ್ತಿತ್ತು. ಅವರು ಏನೋ ಹೇಳುತ್ತಿದ್ದರು. ಇಡೀ ದಿನ ಚರ್ಚೆ ಮಾಡಲು ಅದು ಗ್ರಾಸ ಒದಗಿಸುತ್ತಿತ್ತು. ಮತ್ತೆ ಮರುದಿನ ಅದೇ ಕೆಲಸ. ಈಗ ಕಾಗೋಡು ಬೆಂಗಳೂರಿನಲ್ಲಿ ಇದ್ದಾರೆ, ಕಚೇರಿಗೆ ಬಂದಿದ್ದಾರೆ ಎಂದು ಗೊತ್ತಾದರೆ ಸಾಕು ಮಾಧ್ಯಮದವರು ಅಲ್ಲಿಗೆ ದಾಳಿ ಇಡುತ್ತಾರೆ. ಮತ್ತೆ ಅದೇ ಕೆಲಸ. ರಂಜನೆಗಾಗಿ ಹುಡುಕಾಟ. ಸದಾ ಕುದಿಯುವ ಕಾಗೋಡು ಏನೋ ಹೇಳುತ್ತಾರೆ. ಇಡೀ ದಿನ ಮತ್ತೆ ಅದೇ ಚರ್ಚೆ. ‘ನಿಮ್ಮ ಸರ್ಕಾರ ಸತ್ತಿದೆ ಎಂದು ಕಾಗೋಡು ಹೇಳುತ್ತಿದ್ದಾರಲ್ಲ, ನೀವೇನು ಹೇಳುತ್ತೀರಿ’ ಎಂದು ಮುಖ್ಯಮಂತ್ರಿಗೆ ಪ್ರಶ್ನೆ. ‘ಹೌದೇ? ಅವರು ಯಾವ ಸಂದರ್ಭದಲ್ಲಿ ಹಾಗೆ ಹೇಳಿದ್ದಾರೆ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿಯಿಂದ ಉತ್ತರ. ಯಾವ ಸಂದರ್ಭದಲ್ಲಿ ಸರ್ಕಾರ ಸತ್ತಿದೆ ಎಂದು ಯಾರು ಹೇಳಿದರೇನು? ಅದಕ್ಕೆ ಒಂದು ಸಂದರ್ಭ ಎಂದು ಇರುತ್ತದೆಯೇ?! ಇದೆಲ್ಲ ಒಂದು ರೀತಿಯಲ್ಲಿ ತಮಾಷೆ, ಇನ್ನೊಂದು ರೀತಿಯಲ್ಲಿ ದುರಂತ.

ಕಾಗೋಡು ಅವರಿಗೆ ಏಕೆ ಸಿಟ್ಟು, ಏಕೆ ಅಸಮಾಧಾನ? ಎಲ್ಲರೂ ಅಂದುಕೊಂಡಿರುವ ಹಾಗೆ ಅವರಿಗೆ     ನಿಜವಾಗಿಯೂ ಮಂತ್ರಿ ಆಗಬೇಕಿದೆಯೇ? ಅವರು ಮಂತ್ರಿ ಆಗಬೇಕು ಎಂದಿದ್ದರೆ ಏನೂ ಮಾಡಲು ಆಗದು. ಆದರೆ, ಜನರಿಗೆ ಸಹಾಯ ಮಾಡಬೇಕು ಎಂಬುದೇ ಅವರ ಕಾಳಜಿಯಾಗಿದ್ದರೆ ಅದನ್ನು ಮಾಡಿಕೊಡಬೇಕಾದುದು ಸರ್ಕಾರದ ಕರ್ತವ್ಯ. ಅವರೇನು ಸ್ವಂತದ ಕೆಲಸ ಕೇಳುತ್ತಿಲ್ಲ. ಅವರಿವರ ವರ್ಗ ಮಾಡಿ ಎಂದೂ ಕೇಳುತ್ತಿಲ್ಲ. 

ಸಿದ್ದರಾಮಯ್ಯನವರು, ‘ಅಹಿಂದ ವರ್ಗಗಳ ಕಲ್ಯಾಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ’ ರಾಜಕೀಯ ಮಾಡುತ್ತಿದ್ದಾರೆ. ಕಾಗೋಡು ಅವರಿಗೂ ಮುಖ್ಯವಾಗಿ ತಮ್ಮ ಕ್ಷೇತ್ರದ ಹಿಂದುಳಿದ ವರ್ಗಗಳ ಕಲ್ಯಾಣವೇ ಬೇಕಾಗಿದೆ. ಹಾಗಾದರೆ ಸಮಸ್ಯೆ ಎಲ್ಲಿ ಇದೆ? ಕಾಗೋಡು, ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್‌, ಖಾದರ್‌ ಅವರೆಲ್ಲ ಒಂದು ಕಡೆ ಸೇರಿ ಏನೆಲ್ಲ ಆಗಬೇಕು ಎಂದು ಮಾತನಾಡಲು ಆಗದೇ? ಕಾಗೋಡು ಅವರ ಬೇಡಿಕೆಗಳನ್ನು ಈಡೇರಿಸಲು ಕಾನೂನಿನ ತೊಡಕುಗಳು ಇದ್ದರೆ ಅದನ್ನು ಪರಿಹರಿಸುವುದು ಹೇಗೆ ಎಂದು ಯೋಚಿಸಲು ಆಗದೇ? ಪ್ರಜಾಪ್ರಭುತ್ವದಲ್ಲಿ ಕುಳಿತುಕೊಂಡು, ಚರ್ಚಿಸಿ ಬಗೆಹರಿಸಿಕೊಳ್ಳಲು ಆಗದ ವಿಷಯ ಅಥವಾ ಸಮಸ್ಯೆ ಎಂಬುದು ಯಾವುದಾದರೂ ಇದೆಯೇ? ಮೇಜಿನ ಮುಂದೆ ಕುಳಿತುಕೊಳ್ಳುವುದೇ ಮೊದಲ ಸಮಸ್ಯೆ. ಒಂದು ಸಾರಿ ಕುಳಿತುಕೊಂಡರೆ ಉಳಿದುದೆಲ್ಲ ಸರಾಗವಾಗಿ ಬಗೆಹರಿದು ಹೋಗುತ್ತದೆ. ಅಥವಾ ಬಗೆ ಹರಿಯುವ ದಾರಿಗಳಾದರೂ ಕಾಣುತ್ತ ಹೋಗುತ್ತವೆ. ಅದು ಆಗಿಲ್ಲ ಎಂದು ಈಗ ಜನಾರ್ದನ ಪೂಜಾರಿ ಅವರು ರಂಗ ಪ್ರವೇಶ ಮಾಡಿದ್ದಾರೆ. ಅವರು ಕಾಂಗ್ರೆಸ್ಸಿನಲ್ಲಿ ಹಿರಿಯರಲ್ಲಿ ಹಿರಿಯರು. ಯಾರಿಗಾದರೂ ಬುದ್ಧಿ ಹೇಳುವಂಥವರು. ಈಗ ಅವರಿಗೆ ತಿಮ್ಮಪ್ಪನವರಿಗೆ ಬುದ್ಧಿ ಹೇಳುವ ಸಮಯ. ಪೂಜಾರಿ ರಂಗಪ್ರವೇಶ ಒಂದು ರಾಜಕೀಯ ತಂತ್ರವೇ ಅಥವಾ ಅವರು ಖಾದರ್‌ ಮೇಲಿನ ಪ್ರೀತಿಯಿಂದ ರಂಗಕ್ಕೆ ಬಂದರೇ? ಮತ್ತೆ ಅದೇ ಸಮಸ್ಯೆ. ಮಾಧ್ಯಮಕ್ಕೆ ಭರಪೂರ ರಂಜನೆ. ಅವರಿಂದ ಇವರಿಗೆ, ಇವರಿಂದ ಅವರಿಗೆ ಮೈಕುಗಳ ಸರಿಸಾಟ!

ನಮಗೆ ಉದ್ದೇಶ ಮರೆತು ಹೋದರೆ ಆಗುವುದೇ ಹೀಗೆ. ಕಾಗೋಡು ತಿಮ್ಮಪ್ಪ ಅವರು ಕೇಳಿದ ಹಾಗೆ, ಬಗರ್‌ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕು ಕೊಡಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸೇವೆ ಒದಗಿಸಬೇಕು. ಆಡಳಿತಶಾಹಿ ಎಂಬುದು ಸತ್ತಂತೆ ಇರದೇ ಜೀವಂತ ಇದೆ ಎಂದು ತೋರಿಸಿಕೊಳ್ಳಬೇಕು! ಅದನ್ನು ಮಾಡುವುದನ್ನು ಬಿಟ್ಟು ಅವರಿಗೆ ಶಿಷ್ಟಾಚಾರ ನೆನಪಿಸಿ, ‘ಸಭಾಧ್ಯಕ್ಷರಾದವರು ಹೀಗೆಲ್ಲ ಬಹಿರಂಗವಾಗಿ ಮಾತನಾಡಬಾರದು’ ಎಂದು ಹೇಳಿ, ಅವರ ಬಾಯಿಗೆ ಬೀಗ ಜಡಿಯುವ ಪ್ರಯತ್ನ ನಡೆಯುವಂತೆ ಕಾಣುತ್ತದೆ. ಇದು ಇನ್ನೊಂದು ರೀತಿಯಲ್ಲಿ ಬಡ ಸಾಗುವಳಿದಾರರ ಬಾಯಿಗೂ ಬಿರಡೆ ಜಡಿದಂತೆ ಆಗುವುದಿಲ್ಲವೇ? ಅವರ ಪರವಾಗಿ ಕಾಗೋಡು ಬಿಟ್ಟರೆ ಬೇರೆ ಯಾರೂ ಅಷ್ಟು ಜೋರಾಗಿ ಮಾತನಾಡುತ್ತಿರುವಂತೆ ಕಾಣುತ್ತಿಲ್ಲ. ವಿರೋಧ ಪಕ್ಷದವರು ಇದನ್ನೇ ಹೇಳಿದರೆ ಅವರು ರಾಜಕೀಯ ಮಾಡುತ್ತಾರೆ ಎಂದು ಅವರ ಬಾಯಿಯನ್ನು ಸುಲಭವಾಗಿ ಮುಚ್ಚಿಸಿ ಬಿಡಬಹುದು. ಹಾಗಾದರೆ ಸರ್ಕಾರ ಮಾಡಬೇಕಾದುದು ಏನು? ಕಾಗೋಡು ಅವರ ಬಾಯಿಯನ್ನು ಮುಚ್ಚಿಸುವುದೇ ಅಥವಾ ಅವರು ಪ್ರಸ್ತಾಪಿಸುತ್ತಿರುವ ಜನರ ಸಂಕಟಗಳನ್ನು ಪರಿಹರಿಸುವುದೇ? ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಒಂದು ದೊಡ್ಡ ಯಕ್ಷಪ್ರಶ್ನೆಯೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT