ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿಗೆ ಫ್ರಾನ್ಸ್ ಇದ್ದಂತೆ ಭಾರತಕ್ಕೆ ಬಂಗಾಳ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಬಂಗಾಳಿಗಳಲ್ಲಿ ಬೌದ್ಧಿಕತೆಯ ಗೀಳು ಯಾವ ಪ್ರಮಾಣದಲ್ಲಿ ಇದೆಯೆಂದರೆ, ಅವರ ಬೈಗುಳಗಳು ಕೂಡ ಇದನ್ನು ಪ್ರತಿಫಲಿಸುತ್ತದೆ ಎಂದು ಕೆಲವು ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕವೊಂದರಲ್ಲಿ ಸಮಾಜಶಾಸ್ತ್ರಜ್ಞ ರವೀಂದ್ರ ರೇ ಗುರುತಿಸಿದ್ದಾರೆ.  ರಕ್ತ ಸಂಬಂಧಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಜರೆಯುವುದೇ ಭಾರತದ ಇತರ ಭಾಗಗಳಲ್ಲಿ ಕಾಣಸಿಗುವ ಅತ್ಯಂತ ಸಾಮಾನ್ಯ ರೀತಿಯ ಬೈಗುಳವಾಗಿದೆ- ತಮಗೆ ಇಷ್ಟ ಇಲ್ಲದವರನ್ನು ಅಥವಾ ಜಗಳದ ಸಂದರ್ಭದಲ್ಲಿ ಜನರು ತಾಯಿ ಅಥವಾ ಅಕ್ಕನೊಂದಿಗೆ ಮಲಗಿದವನು ಎಂದು ಬಯ್ಯುತ್ತಾರೆ. ಆದರೆ ಬಂಗಾಳದಲ್ಲಿ ಅತ್ಯಂತ ಸಾಮಾನ್ಯ ಬೈಗುಳ ಅಂದರೆ ಬೊಕ ಚೊಡ್ಡ- ಮೂರ್ಖನೊಬ್ಬನನ್ನು ಪ್ರೀತಿಸುವುದಕ್ಕಾಗಿ ಈ ತನಕ ಮೈಮರೆತವನು ಎಂದು ಇದನ್ನು ಅನುವಾದ ಮಾಡಿಕೊಳ್ಳಬಹುದು.

ಆಕ್ಸ್‌ಫರ್ಡ್‌ನ ಇತಿಹಾಸಕಾರ ಸುಧೀರ್ ಹಜಾರಿಸಿಂಗ್ ಅವರ ‘ಹೌ ದ ಫ್ರೆಂಚ್ ಥಿಂಕ್’ ಎಂಬ ಹೊಸ ಪುಸ್ತಕವನ್ನು ಓದುವಾಗ ರವೀಂದ್ರ ರೇ ಅವರ ಒಳನೋಟಗಳು ನನಗೆ ನೆನಪಾದವು. ಡೆಕಾರ್ಟೆಯಿಂದ ವಾಲ್ಟೇರ್, ಸಾರ್ತ್್ರೆ ಮತ್ತು ಫುಕೋವರೆಗೆ ಫ್ರಾನ್ಸ್‌ನ ಚಿಂತನೆಯ ವಿಸ್ತಾರವಾದ ಚಿತ್ರಣವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ‘ಬೌದ್ಧಿಕ ಸಮುದಾಯದ ಆತ್ಮೀಯ ಚಿತ್ರಣ’ ಎಂಬುದು ಈ ಕೃತಿಯ ಉಪಶೀರ್ಷಿಕೆ. ಪಶ್ಚಿಮದ ಸಂಸ್ಕೃತಿಗಳಲ್ಲೇ ಫ್ರೆಂಚರು ಅತಿ ಹೆಚ್ಚು ಸಮಯವನ್ನು ಚಿಂತನೆ ಮತ್ತು ಸಂವಾದದ ಕಲೆಯಲ್ಲಿ ತೊಡಗಿಸಿಕೊಂಡವರು ಎಂಬುದು ಈ ಪುಸ್ತಕದ ಮುಖ್ಯ ವಿಷಯ. ಹಲವು ಭಿನ್ನ ಉದಾಹರಣೆಗಳ ಮೂಲಕ ಅದನ್ನು ಅವರು ವಿವರಿಸಿದ್ದಾರೆ.

ಹಜಾರಿಸಿಂಗ್ ಅವರ ಪುಸ್ತಕವನ್ನು ಓದುತ್ತಾ ಅವರು ನೀಡಿರುವ ಹಲವು ಉದ್ಧರಣೆಗಳು ಮತ್ತು ಉಲ್ಲೇಖಗಳು ಬಂಗಾಳ ಮತ್ತು ಬಂಗಾಳಿಗಳಿಗೂ ಅನ್ವಯವಾಗುತ್ತವೆ ಎಂಬುದು ನನ್ನ ಗಮನಕ್ಕೆ ಬಂತು. ಇವರು ಕೂಡ ಬೌದ್ಧಿಕತೆಯ ಜನ. ಹಾಗಾಗಿಯೇ ದೀರ್ಘ ಕಾಲದಿಂದ ಅವರನ್ನು ಗಮನಿಸುತ್ತಾ ಬಂದಿರುವ ನನ್ನಲ್ಲಿ ಇದು ಸಾಕಷ್ಟು ಮಮತೆಯನ್ನು ಮತ್ತು ಕೆಲವೊಮ್ಮೆ ಸ್ವಲ್ಪ ಹತಾಶೆಯನ್ನೂ ಉಂಟು ಮಾಡಿದೆ. 

ಶ್ರೇಷ್ಠ ಇತಿಹಾಸಕಾರರಲ್ಲಿ ಒಬ್ಬರಾದ ಜೂಲ್ ಮಿಷೆಲ್ ಫ್ರೆಂಚರ ಬಗ್ಗೆ ಒಮ್ಮೆ ಹೀಗೆ ಬರೆದಿದ್ದರು: ‘ನಾವು ಹರಟುತ್ತೇವೆ, ಜಗಳ ಮಾಡುತ್ತೇವೆ, ನಮ್ಮ ಶಕ್ತಿಯನ್ನು ಪದಗಳಿಗಾಗಿ ವ್ಯಯ ಮಾಡುತ್ತೇವೆ; ನಾವು ಶಕ್ತಿಯುತ ಭಾಷೆ ಬಳಸುತ್ತೇವೆ ಮತ್ತು ಅತಿ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆಯೂ ಉದ್ವಿಗ್ನತೆಯ ಗರಿಷ್ಠ ಮಟ್ಟ ತಲುಪುತ್ತೇವೆ’. ಇದು ಬಂಗಾಳಿಗಳಿಗೂ ಹೊಂದಿಕೆಯಾಗುವ ಲಕ್ಷಣವಾಗಿದೆ. ‘ಫ್ರೆಂಚರಿಗೆ ಚಿಂತನೆಗಳು ಮುಖ್ಯ ಮಾತ್ರವಲ್ಲ, ತಮ್ಮ ಅಸ್ತಿತ್ವದ ಸನ್ನಿವೇಶದಲ್ಲಿ ಅದಕ್ಕಾಗಿ ಸಾಯುವುದೂ ಮೌಲಿಕವೇ’ ಎಂದು ಹಜಾರಿಸಿಂಗ್ ಬರೆಯುತ್ತಾರೆ.

20ನೇ ಶತಮಾನದ ಬಂಗಾಳಿಗಳಿಗೂ ಇದರಲ್ಲಿ ಬಹುಪಾಲು ಅನ್ವಯವಾಗುತ್ತದೆ. ವಸಾಹತು ವಿರೋಧಿ ಹಿಂಸಾತ್ಮಕ ಚಳವಳಿಯಲ್ಲಿ ಭಾಗವಹಿಸುವಿಕೆ ಮತ್ತು ನಂತರದ ನಕ್ಸಲ್ ಬಂಡಾಯಗಳ ಮೂಲಕ ತಮ್ಮ ಚಿಂತನೆಗಳಿಗಾಗಿ ಸಾಯುವುದರಲ್ಲಿ ತಾವು ಫ್ರೆಂಚರಿಗಿಂತ ಮುಂದೆ ಇರುವವರು  ಎಂಬುದನ್ನು ಬಂಗಾಳಿಗಳು ತೋರಿಸಿಕೊಟ್ಟಿದ್ದಾರೆ. ಚಿಂತನೆಗಳು ಹೆಚ್ಚು ಸಂಘರ್ಷಭರಿತವಾದಷ್ಟೂ ಉತ್ತಮ. ಹಾಗಾಗಿಯೇ 19ನೇ ಶತಮಾನದ ಪ್ಯಾರಿಸ್‌ನ ವಿದ್ವಾಂಸರೊಬ್ಬರು ಹೀಗೆ ಹೇಳಿದ್ದಾರೆ: ‘ನಾವು ಫ್ರೆಂಚರು. ಹಾಗಾಗಿ ನಾವು ವಿರೋಧಿಸುವುದಕ್ಕಾಗಿಯೇ ಹುಟ್ಟಿದವರು. ವಿರೋಧವನ್ನು ಅದರ ಫಲಿತಾಂಶಕ್ಕಾಗಿ ನಾವು ವಿರೋಧಿಸುವುದಲ್ಲ, ಬದಲಿಗೆ ಫಲಿತಾಂಶದ ಹೊರತಾಗಿಯೂ ವಿರೋಧಿಸುತ್ತೇವೆ. ವಿರೋಧಿಸುತ್ತೇವೆ ಎಂಬ ಕಾರಣಕ್ಕಾಗಿಯೇ ನಾವು ವಿರೋಧವನ್ನು ಇಷ್ಟಪಡುತ್ತೇವೆ.

ನಮ್ಮ ಭಾವವೇ ಸಂಘರ್ಷಾತ್ಮಕ. ನಮಗೆ ಹೋರಾಡುವುದಕ್ಕೆ ಸದಾ ಒಬ್ಬ ಶತ್ರು ಮತ್ತು ವಶಪಡಿಸಿಕೊಳ್ಳುವುದಕ್ಕಾಗಿ ಒಂದು ಕೋಟೆ ಅಗತ್ಯ. ನಾವು ದಾಳಿ ನಡೆಸುವುದು ವಿಜಯದ ಬಳಿಕ ದೊರೆಯುವ ಕೊಳ್ಳೆಯನ್ನು ಅನುಭವಿಸುವುದಕ್ಕಾಗಿ ಅಲ್ಲ, ಬದಲಿಗೆ ನಮ್ಮ ವಿರೋಧದ ಆನಂದಕ್ಕಾಗಿ’. ಮತ್ತೊಮ್ಮೆ, ಈ ಹೇಳಿಕೆಯಲ್ಲಿ ಬಂಗಾಳಿಗಳು ಕೂಡ ತಮ್ಮನ್ನು ಗುರುತಿಸಿಕೊಳ್ಳಬಹುದು. ಬಂಗಾಳದಲ್ಲಿ ನಡೆಯುವ ಎಲ್ಲ ಪ್ರತಿಭಟನೆಗಳಲ್ಲಿ ಸಾಮಾನ್ಯವಾದÀ ಘೋಷಣೆಯೆಂದರೆ ಚೋಲ್ಬೆ ನಾ- ಅಂದರೆ ಧಿಕ್ಕಾರ. ಬಂಗಾಳಿಗಳಿಗೆ  ವಿರೋಧ ಅತ್ಯಂತ ಸಹಜವಾಗಿ ಬರುತ್ತದೆ. 

ನವದೆಹಲಿಯೆಂಬ  ಕೋಟೆಯನ್ನು ಬಂಗಾಳದ ಎಲ್ಲ ರಾಜಕಾರಣಿಗಳು ವಿರೋಧಿಸಿದ್ದಾರೆ (ಸುಭಾಷ್‌ ಚಂದ್ರ ಬೋಸ್, ಶ್ಯಾಮಪ್ರಸಾದ್ ಮುಖರ್ಜಿಯಿಂದ ಜ್ಯೋತಿ ಬಸು, ಮಮತಾ ಬ್ಯಾನರ್ಜಿವರೆಗೆ) ಮತ್ತು ಅದನ್ನು ಕೈವಶ ಮಾಡಿಕೊಳ್ಳಲು ವೀರಾವೇಶದಿಂದ ಹೋರಾಡಿದ್ದಾರೆ (ಈತನಕ ವಿಫಲರೂ ಆಗಿದ್ದಾರೆ). ಚಿಂತನೆಯೆಡೆಗಿನ ಆಕರ್ಷಣೆ, ಓದುವ ಆಕಾಂಕ್ಷೆ ಮತ್ತು ವಾಗ್ವಾದದ ಒತ್ತಾಯಗಳು ಸಮಾಜದ ಎಲ್ಲ ವರ್ಗಗಳಲ್ಲಿಯೂ ಸಮಾನವಾಗಿಯೇ ಇವೆ ಎಂಬುದನ್ನು ‘ಹೌ ದ ಫ್ರೆಂಚ್ ಥಿಂಕ್’ ವಿವರಿಸುತ್ತಾ ಹೋಗುತ್ತದೆ.

ಎಡಪಂಥೀಯ ಒಲವಿನ ಪತ್ರಿಕೆಯೊಂದಕ್ಕೆ ಓದುಗರು ಬರೆದ ಪತ್ರಗಳನ್ನು ಹಜಾರಿಸಿಂಗ್ ವಿಶ್ಲೇಷಿಸುತ್ತಾರೆ: ‘ಎಲ್ಲ ವರ್ಗಗಳಿಂದಲೂ ಪತ್ರಗಳು ಬಂದಿವೆ- ವಿದ್ಯಾರ್ಥಿಗಳು, ಕಲಾವಿದರು, ಧರ್ಮ ಗುರುಗಳು, ಮೇಯರ್‌ಗಳು, ಸಂಸತ್ ಸದಸ್ಯರು, ವೈದ್ಯರು, ವಕೀಲರು, ಕೈಗಾರಿಕೋದ್ಯಮಿಗಳು ಮತ್ತು ರೈತರು; ಒಬ್ಬ ಕಸ್ಟಮ್ಸ್ ಇನ್‌ಸ್ಪೆಕ್ಟರ್‌ ಕೂಡ ಪತ್ರ ಬರೆದಿದ್ದಾರೆ’. ಬಂಗಾಳದ ಬಗ್ಗೆಯೂ ಬಹುತೇಕ ಇದೇ ಮಾತನ್ನು ಹೇಳಬಹುದು. ನಾನು ಕಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದಾಗ ನ್ಯಾಷನಲ್ ಲೈಬ್ರೆರಿಗೆ ಹೋದರೆ, ಪಕ್ಕದ ಡೆಸ್ಕ್‌ನಲ್ಲಿ ಬಂದು ಕುಳಿತುಕೊಳ್ಳುವ ವ್ಯಕ್ತಿ ವಿದ್ವಾಂಸನೇ ಅಥವಾ ತನ್ನ ಚಿಂತನೆಯನ್ನು ಪ್ರಖರಗೊಳಿಸಲು ಯತ್ನಿಸುತ್ತಿರುವ ರೈಲ್ವೆ ಗುಮಾಸ್ತನೇ ಎಂಬುದನ್ನು ಊಹಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ನಾನು ಸದಸ್ಯನಾಗಿದ್ದ ಸಿನಿಮಾ ಮುಂತಾದ ಕ್ಲಬ್‌ಗಳಲ್ಲಿ ಬೆಂಗಳೂರು ಅಥವಾ ದೆಹಲಿಯಲ್ಲಾದರೆ ಪಾಶ್ಚಾತ್ಯೀಕರಣಗೊಂಡ ವಿಶಿಷ್ಟ  ಜನರು ಸದಸ್ಯರಾಗಿರುತ್ತಾರೆ. ಆದರೆ ಬಂಗಾಳದಲ್ಲಿ ಬುರ್ಧ್ವಾನ್‌ನ ಉನ್ನತ ಅಧಿಕಾರಿಗಳ ಜೊತೆಗೆ ಹೌರಾದ ಸಬ್ ಇನ್‌ಸ್ಪೆಕ್ಟರ್‌ಗಳೂ ಸದಸ್ಯರಾಗಿರುತ್ತಾರೆ. ಚಿಂತನೆ ಮತ್ತು ಬರಹದ ಉದ್ಯೋಗದಲ್ಲಿ  ತೊಡಗಿರುವ ಜನರು ಇಡೀ ಸಮಾಜದ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಎಂದು ಎಲ್ಲ ಜನರು ಭಾವಿಸುತ್ತಾರೆ. ಬಂಗಾಳದಲ್ಲಿ, ಕವಿಗಳು, ಕಲಾವಿದರು, ಸಿನಿಮಾ ನಿರ್ದೇಶಕರಿಗೆ ಎತ್ತರದ ಸ್ಥಾನವನ್ನು ನೀಡಲಾಗಿದೆ.

‘ನಿರ್ದಿಷ್ಟ ಸಾಂಸ್ಕೃತಿಕ ಸಂಪತ್ತನ್ನು ಹೊಂದಿರುವ ಲೇಖಕರು ಮತ್ತು ಚಿಂತಕರಿಗೆ ಸಾರ್ವಜನಿಕ ಸಂವಾದದಲ್ಲಿ ಮಧ್ಯಪ್ರವೇಶ ನಡೆಸುವ ಅವಕಾಶ ಇದೆ ಮತ್ತು ಫ್ರಾನ್ಸ್‌ನ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಅವರು ಪರಿಹಾರಗಳನ್ನು ಸೂಚಿಸಬಲ್ಲರು’ ಎಂಬ ನಂಬಿಕೆ ಫ್ರೆಂಚರಲ್ಲೂ ವ್ಯಾಪಕವಾಗಿದೆ ಎಂದು ಹಜಾರಿಸಿಂಗ್ ಬರೆಯುತ್ತಾರೆ. ಹಿಂದೆ ಬಂಕಿಮ್ ಮತ್ತು ಟ್ಯಾಗೋರ್ ಮತ್ತು ಇತ್ತೀಚೆಗೆ ಮಹಾಶ್ವೇತಾದೇವಿ ಫ್ರಾನ್ಸ್‌ನಲ್ಲಿ ವಾಲ್ಟೇರ್ ಮತ್ತು ಸಾರ್ತ್ರೆ ವಹಿಸಿದ ಪಾತ್ರಗಳನ್ನು ಬಂಗಾಳದಲ್ಲಿ ನಿರ್ವಹಿಸಿದ್ದಾರೆ.

ಇತ್ತೀಚಿನ ದಶಕಗಳಲ್ಲಿ ಬಂಗಾಳದ ಬೌದ್ಧಿಕ ವಲಯ ಎಡಪಂಥದತ್ತ ವಾಲಿಕೊಂಡಿದೆ. ಇಲ್ಲಿಯೂ ಫ್ರಾನ್ಸ್‌ನ ತಮ್ಮ ಸಹಚರರ ಅನುಕರಣೆಯನ್ನೇ ಗಮನಿಸಬಹುದು. ಕಮ್ಯುನಿಸಂ ‘ಫ್ರಾನ್ಸ್‌ನಲ್ಲಿ ಅಸಾಧಾರಣ ಆಕರ್ಷಣೆಯನ್ನು ಪಡೆದುಕೊಂಡಿತು’ ಎಂದು ಹಜಾರಿಸಿಂಗ್ ಬರೆದಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನವನ್ನು ವಿರೋಧಿಸುವುದು ಕಮ್ಯುನಿಸ್ಟ್ ಸಿದ್ಧಾಂತದ ಒಂದು ಭಾಗ. ಇತಿಹಾಸಕಾರ ಜ್ಯಾಕ್ ಪೋರ್ಟೆಸ್ ಫ್ರಾನ್ಸ್‌ನಲ್ಲಿಯೂ ಇದನ್ನು ಗುರುತಿಸುತ್ತಾರೆ: ಎರಡನೇ ಜಾಗತಿಕ ಮಹಾಯುದ್ಧದ ನಂತರ ಅಮೆರಿಕ ವಿರೋಧಿ ನಿಲುವು ಫ್ರಾನ್ಸ್‌ನ  ರಾಜಕೀಯ ಮತ್ತು ಬೌದ್ಧಿಕ ವಲಯಕ್ಕೆ ಸಂಬಂಧಿಸಿ ನಿರ್ಣಾಯಕ ಮಾನದಂಡವಾಗಿದೆ ಎಂದು ಪೋರ್ಟೆಸ್ ಹೇಳುತ್ತಾರೆ. ಹಜಾರಿಸಿಂಗ್ ಕೂಡ ಇದನ್ನೇ ಬರೆಯುತ್ತಾರೆ.

ಕೆಲವು ವಿರಳ ವ್ಯಕ್ತಿಗಳನ್ನು ಹೊರತುಪಡಿಸಿದರೆ (ಅಲೆಕ್ಸಿಸ್ ಡ ಟೊಕ್ವಿಲ್ ಅಂಥವರು), ಪ್ರತ್ಯೇಕಿತ, ಹಿಂಸಾತ್ಮಕ, ಭೌತಿಕವಾದಿ, ವಿಲಕ್ಷಣ ನಂಬಿಕೆಗಳೇ ಮುಖ್ಯವಾಗಿರುವ ಸಾಂಸ್ಕೃತಿಕ ಔನ್ನತ್ಯದ ಸಾಮರ್ಥ್ಯವೇ ಇಲ್ಲದ ಸಮಾಜವನ್ನು ಅಮೆರಿಕ ಹೊಂದಿದೆ ಎಂದು ಫ್ರಾನ್ಸ್‌ನ  ಬರಹಗಾರರು ನಿರಂತರವಾಗಿ ಬರೆದಿದ್ದಾರೆ. ಇಲ್ಲಿಯೂ ಮತ್ತೆ ನಾವು ಬಂಗಾಳದೊಂದಿಗಿನ ಸಾಮ್ಯವನ್ನು ಗುರುತಿಸಬಹುದು. ವಿಯೆಟ್ನಾಂ ಯುದ್ಧ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಂಗಾಳಿಗಳು ಪಡೆದಷ್ಟು ಆನಂದವನ್ನು ಅವರಿಗೆ ನೀಡಿದ ಬೇರೆ ಘಟನೆಗಳು ಬಹಳ ಕಡಿಮೆ. ಆ ಸಂದರ್ಭದಲ್ಲಿ ಅವರು ಅಮೆರಿಕದ ಕಾನ್ಸಲ್ ಕಚೇರಿ ಇದ್ದ ರಸ್ತೆಗೆ ಹೊ ಚಿ ಮಿನ್ ರಸ್ತೆ ಎಂದು ಹೆಸರಿಟ್ಟಿದ್ದರು.

ಫ್ರಾನ್ಸ್‌ನ ತಮ್ಮ ಸಹವರ್ತಿಗಳ ಹಾಗೆಯೇ ಬಂಗಾಳದ ಬುದ್ಧಿಜೀವಿಗಳು ಕೂಡ ಅಮೆರಿಕವನ್ನು ಸಂವೇದನಾ ರಹಿತವಾದ ವ್ಯಾಪಾರಿ ಮನಸ್ಥಿತಿಯವರು ಮತ್ತು ಸಾಮ್ರಾಜ್ಯಶಾಹಿಯ ನಗ್ನ ಪ್ರತಿಪಾದಕರು ಎಂದು ಪರಿಗಣಿಸಿದ್ದಾರೆ. ಅಮೆರಿಕ ಅಕಾಡೆಮಿಯಲ್ಲಿ ತಮಗೊಂದು ತಾಣವನ್ನು ನಿರೀಕ್ಷಿಸುತ್ತಲೇ ಅಮೆರಿಕದ ಬಗೆಗಿನ ತಿರಸ್ಕಾರದ ಮುಂದುವರಿಕೆಯಲ್ಲಿಯೂ ಬಂಗಾಳಿಗಳು ಫ್ರೆಂಚರನ್ನು ಅನುಸರಿಸಿದ್ದಾರೆ. ಪುಸ್ತಕದ ಮಧ್ಯದಲ್ಲಿಯೇ ಹಜಾರಿಸಿಂಗ್ ಅವರು ‘ಫ್ರೆಂಚ್ ಶೈಲಿಯ ಚಿಂತನೆಯ’ ಲಕ್ಷಣಗಳನ್ನು ಸಾರಾಂಶಗೊಳಿಸಿ ವಿವರಿಸಿದ್ದಾರೆ.

ಅಂತರಂಗದಲ್ಲಿಯೇ ಇರುವ ಕಲಹಪ್ರೀತಿ ಮತ್ತು ವಾಗ್ವಾದ ಪ್ರೀತಿ, ವ್ಯವಸ್ಥೆ ಬಗ್ಗೆ ಹೊಂದಿರುವ  ಆಕರ್ಷಣೆ, ಊಹಿಸಬಹುದಾದ ಮತ್ತು ನೇರ ಮನಸ್ಥಿತಿ (ಮತ್ತು ಅದಕ್ಕೆ ವ್ಯತಿರಿಕ್ತವಾಗಿ, ಸಂಪ್ರದಾಯಬದ್ಧತೆಯ ಬಗ್ಗೆ ಅಸಡ್ಡೆ), ಧರ್ಮಗಳು ಮತ್ತು ರೂಪಕಗಳ ಬಗ್ಗೆ ಗೀಳು, ಉನ್ನತ ಮಟ್ಟದ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿರುವುದು ಆಳುವ ಅಧಿಕಾರವನ್ನು ನೀಡುತ್ತದೆ ಎಂಬ ನಂಬಿಕೆ, ಖಾಸಗಿ ಹಿನ್ನಡೆಗಳು ಮತ್ತು ವೈಯಕ್ತಿಕ ನಷ್ಟಗಳನ್ನು ಸಾರ್ವತ್ರಿಕ ತಾತ್ವಿಕ ದೃಷ್ಟಿಕೋನವಾಗಿ ಪರಿವರ್ತಿಸುವ ಸಾಮರ್ಥ್ಯ ಮತ್ತು ಚೈತನ್ಯಯುತ ಆಶಾವಾದವನ್ನು ವಿಷಾದದ ನಿರಾಶಾವಾದವಾಗಿ ಪರಿವರ್ತಿಸುವ ಸಾಮರ್ಥ್ಯಗಳನ್ನು ಫ್ರೆಂಚರ ಮುಖ್ಯ ಲಕ್ಷಣಗಳಾಗಿ ಹಜಾರಿಸಿಂಗ್ ಪಟ್ಟಿ ಮಾಡಿದ್ದಾರೆ.

ಕಲಹಪ್ರೀತಿ, ವಾಗ್ವಾದಪ್ರೀತಿ, ಸಂಪ್ರದಾಯಗಳ ಬಗ್ಗೆ ಅಸಡ್ಡೆ, ಸಂಸ್ಕೃತಿಯನ್ನು ರಾಜಕೀಯ ಮತ್ತು ವಿಶೇಷವಾಗಿ ಉದ್ಯಮಶೀಲತೆಗಿಂತ ಬಹಳ ಮೇಲೆ ಇರಿಸುವ ಮನೋಭಾವ, ಸಾಮಾಜಿಕ ಹಿನ್ನಡೆಯನ್ನು ವೈಯಕ್ತಿಕಗೊಳಿಸುವ ಶಕ್ತಿ, ದಿಢೀರನೆ ಬದಲಾಗುವ ಮನಸ್ಥಿತಿ ಮುಂತಾದ ಅಂಶಗಳು ಬಂಗಾಳಿ ಚಿಂತನೆಯ ಭಾಗಗಳೆಂದು ಪರಿಗಣಿಸಬಹುದು. ಈ ವಿಷಯಗಳಲ್ಲಿ ಫ್ರೆಂಚರು ಮತ್ತು ಬಂಗಾಳಿಗಳು ಹೆಚ್ಚು ಕಡಿಮೆ ಒಂದೇ ರೀತಿ ಇದ್ದಾರೆ. ‘ತಮ್ಮ ಬಗ್ಗೆ ಮಾತ್ರವಲ್ಲ, ಉಳಿದ ಇಡೀ ಜಗತ್ತಿನ ಬಗ್ಗೆ ಚಿಂತಿಸುವುದು ತಮ್ಮ ಕರ್ತವ್ಯ’ ಎಂದು ಫ್ರೆಂಚರು ಭಾವಿಸುತ್ತಾರೆ ಎಂದು ಸುಧೀರ್ ಹಜಾರಿಸಿಂಗ್ ಬರೆಯುತ್ತಾರೆ. 

ಆದರೆ ಸಮಸ್ಯೆ ಏನೆಂದರೆ, ಉಳಿದ ಜಗತ್ತು ಇದನ್ನು ಸ್ವೀಕರಿಸಲು ಸಿದ್ಧ ಇಲ್ಲ. ಜಾಗತಿಕ ಮಟ್ಟದಲ್ಲಿ ಪ್ರಭಾವವನ್ನು ಕಳೆದುಕೊಂಡಿರುವ ವಿಚಾರ ಫ್ರೆಂಚರಲ್ಲಿ ಗಾಢವಾದ ನಿರಾಶಾವಾದಕ್ಕೆ ಕಾರಣವಾಗಿದೆ. ಪುಸ್ತಕದ ಕೊನೆಯಲ್ಲಿ ಹಜಾರಿಸಿಂಗ್ ಅವರು ಫ್ರಾನ್ಸ್‌ನ ಇಂದಿನ ಬೌದ್ಧಿಕ ಮತ್ತು ರಾಜಕೀಯ ವಲಯವನ್ನು ವ್ಯಾಪಿಸಿರುವ ‘ದುರದೃಷ್ಟ’ವನ್ನು ಪ್ರಸ್ತಾಪಿಸುತ್ತಾರೆ. ಫ್ರಾನ್ಸ್‌ನಲ್ಲಿ ಎಲ್ಲವೂ ಕುಸಿಯುತ್ತಿರುವಂತೆ ಕಾಣಿಸುತ್ತಿದೆ. ಫ್ರೆಂಚ್ ಕಾರುಗಳು ರಫ್ತಾಗುತ್ತಿಲ್ಲ, ಫ್ರೆಂಚ್ ಸಿನಿಮಾಗಳನ್ನು ಫ್ರಾನ್ಸ್‌ನ ಹೊರಗಿನ ಜನ ಹೆಚ್ಚಾಗಿ ನೋಡುತ್ತಿಲ್ಲ.

ಕಾದಂಬರಿಕಾರರೊಬ್ಬರು ಫ್ರಾನ್ಸ್‌ನ ಪರಿಸ್ಥಿತಿಯನ್ನು ಕಟುವಾದ ಧ್ವನಿಯಲ್ಲಿ ಹೀಗೆ ಬಣ್ಣಿಸಿದ್ದಾರೆ: ಫ್ರಾನ್ಸ್‌ನ ವಿಜ್ಞಾನ, ತತ್ವಜ್ಞಾನ, ಸಾಹಿತ್ಯ, ಸಿನಿಮಾಗಳು ಒಂದು ಕಾಲದಲ್ಲಿ ಜಗತ್ತಿನ ಅತ್ಯುತ್ತಮವಾದುದಾಗಿದ್ದವು. ಈಗ ಆಕರ್ಷಕ ಹೋಟೆಲುಗಳು, ಸುಗಂಧ ದ್ರವ್ಯಗಳು ಮತ್ತು ಡಬ್ಬದಲ್ಲಿ ಸಂಸ್ಕರಿಸಿದ ಮಾಂಸವನ್ನು ಬಿಟ್ಟರೆ ಇಲ್ಲಿ ಮಾರಾಟ ಯೋಗ್ಯವಾದದ್ದು ಏನೂ ಇಲ್ಲ’. ಬಂಗಾಳಿಗಳಿಗೆ ಈ ಮಟ್ಟದ ಸಮಾಧಾನವೂ ಇಲ್ಲ.  ಜಗತ್ತಿನ ಎಲ್ಲೆಡೆಯ ಜನರು ಪ್ಯಾರಿಸ್‌ಗೆ ಲಗ್ಗೆ ಇಡುತ್ತಾರೆ. 

ಆದರೆ ಕೋಲ್ಕತ್ತದಲ್ಲಿ ಮಲಯಾಳಿ ಅಥವಾ ತಮಿಳು ಪ್ರವಾಸಿಗ ಕಾಣಿಸುವುದೇ ಇಲ್ಲ. ರವೀಂದ್ರನಾಥ ಟ್ಯಾಗೋರ್ ಭಾರತೀಯ ಸಾಹಿತ್ಯವನ್ನು, ಸತ್ಯಜಿತ್ ರೇ ಭಾರತೀಯ ಸಿನಿಮಾವನ್ನು, ಸೌರವ್ ಗಂಗೂಲಿ ಭಾರತದ ಕ್ರಿಕೆಟನ್ನು ಆವರಿಸಿಕೊಂಡಿದ್ದ ದಿನಗಳು ಕಳೆದು ಹೋದವು. ರಸಗುಲ್ಲಾದ ಮಾಲೀಕತ್ವಕ್ಕೂ ಒಡಿಯಾ ಜನರು ಸವಾಲೊಡ್ಡಿದ್ದಾರೆ. ಬಂಗಾಳದಲ್ಲಿ ಮೂಡಿರುವ ಅವನತಿಯ ಭಾವ,  ಫ್ರಾನ್ಸ್‌ನದಕ್ಕಿಂತ ಹೆಚ್ಚು ವ್ಯಾಪಕವಾಗಿದೆ ಅನಿಸುತ್ತದೆ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT