ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಮತ್ತೆ ಮೈಕೊಡವಿ ನಿಲ್ಲುವುದೇ?

Last Updated 16 ಜೂನ್ 2018, 9:12 IST
ಅಕ್ಷರ ಗಾತ್ರ

ಮೇ ಮೂರರಂದು ಮಧ್ಯಾಹ್ನ ಒಂದು ಗಂಟೆ ಇರಬಹುದು. ಉರಿ ಬಿಸಿಲಲ್ಲಿ ಮಹಿಳೆಯೊಬ್ಬರು, ಬಿದ್ದುಹೋದ ಕಟ್ಟಡವೊಂದರ ಕಲ್ಲುಮಣ್ಣಿನ ರಾಶಿಯೊಳಗೆ ಏನನ್ನೋ ಹುಡುಕಾಡುತ್ತಿದ್ದರು. ಪಕ್ಕದಲ್ಲೇ ಮತ್ತೊಂದು ಕಟ್ಟಡ ಅರ್ಧಂಬರ್ಧ ಕುಸಿದಿತ್ತು. ಉಳಿದ ಭಾಗವೂ ಯಾವುದೇ ಕ್ಷಣದಲ್ಲಿ ಬೀಳುವಂತಿತ್ತು. ಆದರೂ ಜೀವದ ಹಂಗು ತೊರೆದು ಅವಶೇಷಗಳನ್ನು ಕೆದಕುತ್ತಿದ್ದರು. ಅವರ ಬಟ್ಟೆ ಮಾಸಿತ್ತು. ಮುಖ ಕಪ್ಪಾಗಿತ್ತು. ಬಿಸಿಲಿನ ಝಳದಿಂದ ಬೆವರು ಇಳಿಯುತ್ತಿತ್ತು. ಅದ್ಯಾವುದರ ಅರಿವಿಲ್ಲದೆ ಕಲ್ಲುಮಣ್ಣಿನೊಳಗೆ ಕೈಹಾಕಿ ಪಾತ್ರೆ, ಬಟ್ಟೆಬರೆಗಳನ್ನು ಹೊರಗೆ ಎಳೆಯಲು ಅವರು ಪ್ರಯತ್ನಿಸುತ್ತಿದ್ದರು. ಕೆಲ ಹೊತ್ತು ಜಾಲಾಡಿದ ಬಳಿಕ ಅಂಕುಡೊಂಕಾದ ಅಲ್ಯುಮಿನಿಯಂ ತಟ್ಟೆಯೊಂದು ಸಿಕ್ಕಿತು. ಅದನ್ನು ಹಿಡಿದು ಒಂದು ಕ್ಷಣ ದಿಟ್ಟಿಸಿದರು. ಬಳಿಕ ಏನೋ ಗೊಣಗಿಕೊಂಡರು.

ಮಹಿಳೆ ಹೆಸರು ರಸ್ಮಿಲಾ. ವಯಸ್ಸು 25 ಇರಬಹುದು. ಮದುವೆಯಾಗಿ ಒಂದು ವರ್ಷವಾಗಿದೆ. ಗಂಡ ಬೇರೆ ಕಡೆ ನೌಕರಿಯಲ್ಲಿದ್ದಾರೆ. ನೇಪಾಳದ ಸಿಂಧೂಪಾಲ್‌ಚೌಕ‌ ಜಿಲ್ಲೆಯ ಚೌಟಾರ ಪಟ್ಟಣದಲ್ಲಿ ಒಡಹುಟ್ಟಿದವರ  ಜತೆ ರಸ್ಮಿಲಾ ವಾಸವಾಗಿದ್ದಾರೆ. ಭೂಮಿ ಕಂಪಿಸಿ ಒಂದು ವಾರ ಕಳೆದರೂ ಅವರು ಉಟ್ಟ ಬಟ್ಟೆಯಲ್ಲಿದ್ದರು, ಅನ್ನ, ನೀರಿಗೂ ಪರದಾಡಿದರು. ಇದು ರಸ್ಮಿಲಾ ಅವರೊಬ್ಬರ ಕಥೆಯಲ್ಲ. ಭೂಕಂಪದಿಂದ ಅತಂತ್ರವಾದ ಲಕ್ಷಾಂತರ ಜನ ಹೆಚ್ಚುಕಡಿಮೆ ಇದೇ ಸ್ಥಿತಿಯಲ್ಲಿದ್ದಾರೆ. ಸಾವುನೋವುಗಳನ್ನು ಎದುರಿಗೇ ಕಂಡವರ ಭಾವನೆಗಳು ಬತ್ತಿವೆ. ಹೃದಯಗಳು ಕಲ್ಲಾಗಿವೆ. ಕಣ್ಣು ಒಣಗಿವೆ. ಇಡೀ ದೇಶ ಒಂದು ರೀತಿ ‘ಸ್ಥಿತಪ್ರಜ್ಞ’ ಸ್ಥಿತಿಗೆ ತಲುಪಿದೆ. ಸತ್ತವರಿಗಾಗಿ ಯಾರೂ ಕಣ್ಣೀರು ಸುರಿಸುತ್ತಿಲ್ಲ. ಬದುಕುಳಿದವರು ಭವಿಷ್ಯ ಕಟ್ಟಿಕೊಳ್ಳಲು ಹೋರಾಡುತ್ತಿದ್ದಾರೆ.

ಏಪ್ರಿಲ್‌ 25ರ ಭೂಕಂಪಕ್ಕೆ ಎಂಟು ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 16 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಲಕ್ಷಾಂತರ ಜನರ ಬದುಕು ಅತಂತ್ರವಾಗಿದೆ. ಸಿಂಧೂಪಾಲ್‌ಚೌಕ, ಗೂರ್ಖಾ ಸೇರಿದಂತೆ 22 ಜಿಲ್ಲೆಗಳಿಗೆ ವಿಪರೀತ  ಹಾನಿಯಾಗಿವೆ. ಹಿಮಾಲಯದ ತಪ್ಪಲಿನಲ್ಲಿರುವ ಚಿಕ್ಕ ರಾಷ್ಟ್ರ ನೇಪಾಳ. ಅದಕ್ಕೆ ಬಿದ್ದಿರುವ ಹೊಡೆತದಿಂದ ಚೇತರಿಸಿಕೊಳ್ಳುವುದೇ ಎನ್ನುವ ಅನುಮಾನ ತಲೆದೋರಿದೆ. ನೇಪಾಳ ಸರ್ಕಾರ, ಆರಂಭದಲ್ಲಿ ಆಮೆ ವೇಗದಲ್ಲಿ ಹೆಜ್ಜೆ ಹಾಕಿತ್ತು. ರಕ್ಷಣೆ ಹಾಗೂ ಪರಿಹಾರ ವಿತರಣೆ ಕಾರ್ಯಾಚರಣೆಯನ್ನು ಮಂದಗತಿಯಲ್ಲಿ ನಡೆಸಿತ್ತು. ಬೀದಿಗೆ ಬಿದ್ದು ಅನ್ನ, ನೀರಿಗಾಗಿ ಅಂಗಲಾಚಿದ ಜನರಿಗೆ ಸರಿಯಾದ ಸಮಯಕ್ಕೆ ಪರಿಹಾರ ವಿತರಣೆ ಮಾಡಲು ಸೋತಿದೆ. ಹೊರ ದೇಶಗಳ ರಕ್ಷಣಾ ಪಡೆಗಳು, ಸರ್ಕಾರೇತರ ಸಂಘಸಂಸ್ಥೆಗಳು ನೆರವಿಗೆ ಬರದಿದ್ದರೆ ನೇಪಾಳ ಸರ್ಕಾರಕ್ಕೆ ನೂರಕ್ಕೆ ನೂರರಷ್ಟು ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಭಾರತ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚಿದೆ.

ಭೂಕಂಪದಿಂದ ಹಾನಿಗೊಳಗಾದ ಜನರಿಗೆ ಸರ್ಕಾರ ಪುಡಿಗಾಸು ನೆರವು ಪ್ರಕಟಿಸಿ ಕೈತೊಳೆದುಕೊಂಡಿದೆ. ಈ ಪ್ರಕೃತಿ ವಿಕೋಪಕ್ಕೆ ಬಲಿಯಾದವರಿಗೆ ತಲಾ ಒಂದು ಲಕ್ಷ ರೂಪಾಯಿ (ಭಾರತದ ₨ 62,500) ಪರಿಹಾರ ಪ್ರಕಟಿಸಿದೆ. ಮನೆ ಕಳೆದುಕೊಂಡವರಿಗೆ ಐದು ಸಾವಿರ, ಎರಡು ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ಇದು ಯಾತಕ್ಕೂ ಸಾಲುವುದಿಲ್ಲ. ಆದರೆ, ಬರಿಗೈಯಲ್ಲಿ ಬೀದಿಯಲ್ಲಿ ನಿಂತಿರುವ ಜನರಿಗೆ ಪ್ರತಿ ಪೈಸೆಯೂ ಮುಖ್ಯ. ಸರ್ಕಾರ ಪುಡಿಗಾಸು ಕೊಡುತ್ತಿದೆ ಎಂದು ತಿರಸ್ಕರಿಸುವಂತಿಲ್ಲ. ಏಕೆಂದರೆ ಅವರು ಶೂನ್ಯದಿಂದ ಬದುಕು ಕಟ್ಟಿಕೊಳ್ಳಬೇಕು.

ನೇಪಾಳದ ಸ್ಥಿತಿ ಗಮನಿಸಿದರೆ ಸದ್ಯಕ್ಕೆ ಸಮಸ್ಯೆ ಬಗೆಹರಿಯುವಂತೆ ಕಾಣುವುದಿಲ್ಲ. ಪರಿಹಾರ, ಪುನರ್‌ವಸತಿಗೆ ಕನಿಷ್ಠ ಐದಾರು ತಿಂಗಳಾದರೂ ಹಿಡಿಯಲಿದೆ. ಆ ನಂತರ ಊರು, ಕೇರಿಗಳಲ್ಲಿ ಬಿದ್ದಿರುವ ಅವಶೇಷಗಳನ್ನು ಎಷ್ಟೇ ತ್ವರಿತವಾಗಿ ತೆಗೆದರೂ ಒಂದೆರಡು ವರ್ಷವಾದರೂ ಬೇಕಾಗಲಿದೆ. ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ನಿರ್ಮಾಣಕ್ಕೆ ಐದಾರು ವರ್ಷವಾದರೂ ಅಗತ್ಯವಿದೆ. ಸರ್ಕಾರ ಪುನರ್‌ ನಿರ್ಮಾಣ ಕಾರ್ಯವವನ್ನು ಹೇಗೆ ನಡೆಸಲಿದೆ ಎನ್ನುವುದರ ಮೇಲೆ ನೇಪಾಳ ಪ್ರವಾಸೋದ್ಯಮ ನಿಂತಿದೆ. ದೇಶದ ಇಡೀ ಆರ್ಥಿಕತೆ ನಿಂತಿರುವುದು ಪ್ರವಾಸೋದ್ಯಮದ ಮೇಲೆ. ಪ್ರವಾಸೋದ್ಯಮಕ್ಕೆ ಕಲ್ಲುಬಿದ್ದರೆ ಜನರ ಬದುಕು ಕಷ್ಟ ಆಗಲಿದೆ. ದುರಂತದಲ್ಲಿ ಬಹುತೇಕ ಐತಿಹಾಸಿಕ ಸ್ಮಾರಕಗಳು ಬಿದ್ದು ಹೋಗಿವೆ. ಸ್ಮಾರಕಗಳ ಸಂರಕ್ಷಣೆ, ಪುನರ್‌ ನಿರ್ಮಾಣ ಆದ್ಯತೆ ಮೇಲೆ ಕೈಗೊಳ್ಳಬೇಕಿದೆ. ಬಹುಪಾಲು ಜನರ  ಹೊಟ್ಟೆ ತುಂಬುತ್ತಿರುವ ಪ್ರವಾಸೋದ್ಯಮಕ್ಕೆ ಏಟು ಬಿದ್ದರೆ ನೇಪಾಳ ಉಳಿಯುವುದು ಕಷ್ಟ. 

ನೇಪಾಳಕ್ಕೆ ಭೂಕಂಪ ಅಪ್ಪಳಿಸಿದ್ದು ಮೊದಲ ಸಲವಲ್ಲ. ಎಂಬತ್ತು ವರ್ಷದ ಹಿಂದೆ ಅಂದರೆ 1934ರ ಜನವರಿ 15ರಂದು ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿತ್ತು. ರಿಕ್ಟರ್‌ ಮಾಪಕದಲ್ಲಿ 8.0ರಷ್ಟಿದ್ದ ಕಂಪನಕ್ಕೆ 17 ಸಾವಿರ ಮಂದಿ ಬಲಿಯಾಗಿದ್ದರು. ಕಠ್ಮಂಡು, ಭಕ್ತಪುರ್, ಪಠಣ್‌ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಆಗಿತ್ತು. ಅಂದಿನಿಂದಲೇ ಮತ್ತೊಮ್ಮೆ ಭೂಮಿ ನಡಗಲಿದೆ ಎಂಬ ಮಾತು ಕೇಳುತ್ತಲೇ ಇತ್ತು. ಯಾವಾಗ? ಹೇಗೆಂಬ ಖಚಿತ ಮಾಹಿತಿ ಯಾರಿಗೂ ಇರಲಿಲ್ಲ. ‘ನೇಪಾಳ ಟೈಮ್ಸ್‌’ ಹನ್ನೊಂದು ವರ್ಷದ ಹಿಂದೆ, ಕಂಪನದ ನೆನಪು ಮಾಡಿಕೊಂಡು, ಇನ್ನೊಂದು ಆಪತ್ತು ಬಾಕಿ ಇದೆ. ಎದುರಿಸಲು ದೇಶ ಸಿದ್ಧವಾಗಬೇಕೆಂದೂ ಬರೆದಿತ್ತು. ಯಾವಾಗಲಾದರೂ ಎದುರಾಗಬಹುದಾದ ಭೂಕಂಪ ಕುರಿತು ಚರ್ಚೆ, ವಾಗ್ವಾದ ನಡೆದಿತ್ತು.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರಜ್ಞ ಎಂ.ವಿ. ಸಿಯರ್ಲೆ, ಎರಡು ವರ್ಷದ ಹಿಂದೆ ನೇಪಾಳ ಭೂಕಂಪ ಕುರಿತು ಮುನ್ಸೂಚನೆ  ನೀಡಿದ್ದರು. ನೇಪಾಳದಲ್ಲಿ ಭೂಕಂಪವಾಗಲಿದೆ. ಯಾವಾಗ ಆಗಬಹುದು ಎಂದು ಹೇಳುವುದು ಕಷ್ಟ. ಒಂದು ವರ್ಷದಲ್ಲಿ ಆಗಬಹುದು ಅಥವಾ ಹತ್ತು ವರ್ಷವಾದರೂ ಹಿಡಿಯಬಹುದೆಂದು ಹೇಳಿದ್ದಾಗಿ ಪ್ರಮುಖ ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಮಳೆ, ಪ್ರವಾಹ,  ಸುನಾಮಿಯನ್ನು ಮೊದಲೇ ಗ್ರಹಿಸಬಹುದು. ಭೂಕಂಪದ ಜಾಡು ಹಿಡಿಯುವುದು ಕಷ್ಟ’ ಎಂದೂ ಹಲವು ತಜ್ಞರು ಹೇಳಿದ್ದರು.

ನೇಪಾಳ ಸರ್ಕಾರಕ್ಕೆ ಭೂಕಂಪ ಕುರಿತು ಮೊದಲೇ ಅಲ್ಪಸ್ವಲ್ಪ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿದ್ದೇಕೆ?  ತುರ್ತು ಕ್ರಮಗಳನ್ನು ಕೈಗೊಳ್ಳಲಿಲ್ಲವೇಕೆ? ಭೂಕಂಪ ಸಂಭವಿಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರೆ ಸಾವುನೋವುಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿತ್ತು. ಪ್ರಕೃತಿ ವಿಕೋಪ ನಿರ್ವಹಣೆಗೆ ನೇಪಾಳದಲ್ಲಿ ಪ್ರತ್ಯೇಕ ಪ್ರಾಧಿಕಾರ ಇಲ್ಲ. ವಿಪತ್ತು ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕೆಂದು ನಾಗರಿಕ ಸಂಘಟನೆಗಳು, ಅಂತರರಾಷ್ಟ್ರೀಯ ಸಂಘಸಂಸ್ಥೆಗಳು ಕಳೆದ ಆರು ವರ್ಷಗಳಿಂದ ಒತ್ತಾಯಿಸುತ್ತಿವೆ. ಆದರೆ, ಸರ್ಕಾರ ಅದಕ್ಕೆ ಕಿವಿಗೊಟ್ಟಿಲ್ಲ. ಕಳೆದ ವರ್ಷ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದ ಬಳಿಕವೂ ಅದು ಪಾಠ ಕಲಿತಿಲ್ಲ. ಪದೇ ಪದೇ ನೈಸರ್ಗಿಕ ಆಪತ್ತು ಎದುರಾಗುವ 21 ಅಪಾಯಕಾರಿ ದೇಶಗಳಲ್ಲಿ ನೇಪಾಳವೂ ಒಂದು ಎಂಬ ಸತ್ಯ ಗೊತ್ತಿದ್ದ ಮೇಲೂ ಉದಾಸೀನ ಮಾಡಿದೆ. ಬಹುಶಃ ಅದಕ್ಕೆ ರಾಜಕೀಯ ನಾಯಕರ ಅದಕ್ಷತೆಯೂ ಕಾರಣವಾಗಿದೆ.

ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದ ಕಡೆಗೆ ಹೊರಳಿರುವ ನೇಪಾಳ, ದಕ್ಷ ಮತ್ತು ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದೆ. ಒಂದೇ ಪಕ್ಷ ಅಧಿಕಾರಕ್ಕೆ ಬರುವುದು ಅಸಾಧ್ಯವಾಗಿರುವುದರಿಂದ ಮೈತ್ರಿ ಪಕ್ಷಗಳ ಸರ್ಕಾರ ರಚನೆಯಾಗುತ್ತಿದೆ. ಯಾವ ಪಕ್ಷಗಳು ಅಧಿಕಾರ ಹಂಚಿಕೊಳ್ಳುತ್ತವೆ. ಸರ್ಕಾರ ಎಷ್ಟು ದಿನ ಉಳಿಯುತ್ತದೆ. ಯಾವಾಗ ಬಿದ್ದು ಹೋಗುತ್ತದೆ ಎಂದು ಹೇಳುವುದೇ ಕಷ್ಟವಾಗುತ್ತಿದೆ. ನೇಪಾಳದಲ್ಲಿ ಈಗ  ಕಾಂಗ್ರೆಸ್‌– ಕಮ್ಯುನಿಸ್ಟ್‌ ಸಮ್ಮಿಶ್ರ ಸರ್ಕಾರವಿದೆ. ಪ್ರಧಾನಿ ಸುಶೀಲ್‌ ಕುಮಾರ್‌ ಕೊಯಿರಾಲ ಕಾಂಗ್ರೆಸ್‌ ಮುಖಂಡ. ಉಪ ಪ್ರಧಾನಿ ಬಾಮ್‌ದೇವ್‌ ಗೌತಮ್‌ ಕಮ್ಯುನಿಸ್ಟ್‌ ನಾಯಕ. ಸರ್ಕಾರದಲ್ಲಿ ಗೌತಮ್‌ ಅವರದೇ ಪ್ರಾಬಲ್ಯ ಇದ್ದಂತಿದೆ. ಕೊಯಿರಾಲ ದುರ್ಬಲ ನಾಯಕರಾಗಿರುವುದರಿಂದ ಸಹಜವಾಗಿ ಗೌತಮ್‌ ಪ್ರಬಲವಾಗಿದ್ದಾರೆಂದು ನೇಪಾಳದ ಜನ ಭಾವಿಸಿದ್ದಾರೆ. ಏಪ್ರಿಲ್‌ 25ರ ಭೂಕಂಪದ ಬಳಿಕ ಗೃಹ ಇಲಾಖೆ ಜವಾಬ್ದಾರಿ ಹೊತ್ತಿರುವ ಬಾಮ್‌ದೇವ್‌ ಅಧ್ಯಕ್ಷತೆಯಲ್ಲೇ ತುರ್ತು ನಿರ್ವಹಣಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. ಸಮಿತಿ ಕೈಗೊಂಡ ನಿರ್ಧಾರಗಳನ್ನು ಸರ್ಕಾರ ಅನುಷ್ಠಾನ ಮಾಡುತ್ತಿದೆ. ನೇಪಾಳದಲ್ಲಿ ಒಂದು ವಾರ ಕಾರ್ಯಾಚರಣೆ ನಡೆಸಿದ ಭಾರತ ಹಾಗೂ ಇನ್ನಿತರ ದೇಶಗಳ ರಕ್ಷಣಾ ಪಡೆಗಳನ್ನು ವಾಪಸ್‌ ಕಳುಹಿಸಿದ ವಿಷಯದಲ್ಲೂ ಗೌತಮ್‌ ಅವರದೇ ಅಂತಿಮ ಮಾತು. ಅದನ್ನು ಸರ್ಕಾರ ಮರು ಮಾತಾಡದೆ ಒಪ್ಪಿಕೊಂಡಿತು.

‘ನೇಪಾಳದಲ್ಲಿ ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆ ಹೊಣೆ ಹೊತ್ತಿದೆ. ಎನ್‌ಡಿಆರ್‌ಎಫ್‌ ಬಿಡುವಿಲ್ಲದೆ ಜನರನ್ನು ರಕ್ಷಣೆ ಮಾಡುತ್ತಿದೆ. ನೇಪಾಳ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ’ ಎಂದು ಭಾರತದ ಕೆಲವು ಟಿ.ವಿ ಚಾನೆಲ್‌ಗಳು ಮಾಡಿದ ವರದಿಗಳು ದೊಡ್ಡ ವಿವಾದ ಸೃಷ್ಟಿಸಿತು. ನೇಪಾಳವೂ ಒಂದು ಸಾರ್ವಭೌಮ ರಾಷ್ಟ್ರ. ಆ ರಾಷ್ಟ್ರದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಸಣ್ಣ ತಿಳಿವಳಿಕೆಯೂ ಇದ್ದಂತಿರಲಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಪರ ಭಜನೆ ಮಾಡುವ ಟಿ.ವಿ. ಚಾನೆಲ್‌ಗಳೇ ಈ ಕೆಲಸವನ್ನು ಮಾಡಿದ್ದವು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಯಿತು. ‘ಭಾರತೀಯ ಮಾಧ್ಯಮಗಳೇ ವಾಪಸ್ ಹೋಗಿ’ ಎಂಬ ಘೋಷಣೆಗಳೂ ಕಾಣಿಸಿಕೊಂಡಿತು. ನೇಪಾಳ ಟಿ.ವಿ. ಚಾನೆಲ್‌ಗಳು, ಭಾರತದ ನಾಲ್ಕು ಟಿ.ವಿ ಚಾನೆಲ್‌ಗಳು ಪ್ರಸಾರ ಮಾಡಿದ ವರದಿಗಳನ್ನು ಮತ್ತೆ ಮತ್ತೆ ತೋರಿಸಿದವು. ರೇಡಿಯೊಗಳಲ್ಲೂ ದೊಡ್ಡ  ಚರ್ಚೆ ನಡೆಯಿತು. ಹೊರ ದೇಶಗಳಿಂದ ಬಂದಿರುವ ರಕ್ಷಣಾ ಪಡೆಗಳನ್ನು ಹಿಂದಕ್ಕೆ ಕಳುಹಿಸಬೇಕು ಎಂದು ಒತ್ತಡ ಹೆಚ್ಚಿತ್ತು. ಕೂಡಲೇ ಬಾಮ್‌ದೇವ್‌ ಸಮಿತಿ ತೀರ್ಮಾನ ಮಾಡಿತು.

ಚೀನಾ ಸೇರಿದಂತೆ 34 ದೇಶಗಳ 4500 ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಚೀನಾದ ‘ಬ್ಲೂ ಸ್ಕೈ ರೆಸ್ಕ್ಯೂ ಟೀಂ’ (ಬಿಎಸ್ಆರ್) ಬಿಡುವಿಲ್ಲದ ಕಾರ್ಯಾಚರಣೆ ನಡೆಸಿತ್ತು. ಒಂದು ಹಂತದಲ್ಲಿ ಬಿಎಸ್‌ಆರ್‌, ನೇಪಾಳ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಕ್ರಮಿಸಿಕೊಂಡು ಬೇರೆಯವರಿಗೆ ಜಾಗ ಕೊಡದೆ ತಮ್ಮ ದೇಶದಿಂದ ಬಂದಿದ್ದ ಪರಿಹಾರ ಸಾಮಗ್ರಿ ಇಳಿಸಿತು. ಭಾರತದ ಮಾಧ್ಯಮಗಳು ಬಿಟ್ಟು ಬೇರೆ ಯಾರೂ  ‘ನಾವೇ ಮಾಡಿದ್ದು’ ಎಂದು ಟಾಂಟಾಂ ಹೊಡೆಯಲಿಲ್ಲ. ಭಾರತದ ಮಾಧ್ಯಮಗಳ ನಡವಳಿಕೆ ಪ್ರಜ್ಞಾವಂತರಿಗೆ ಇಷ್ಟವಾಗಲಿಲ್ಲ. ನೇಪಾಳದ ಭಾರತೀಯ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳೇ ಮಾಧ್ಯಮಗಳು ಇತಿಮಿತಿ ಮೀರಿ ವರ್ತಿಸಿವೆ ಎಂದು ಆರೋಪಿಸಿದರು. ಮಾಧ್ಯಮಗಳು ಸೂಕ್ಷ್ಮವಾಗಿ ನಡೆದುಕೊಳ್ಳದಿದ್ದರೆ ಅಂತರರಾಷ್ಟ್ರೀಯ ಸಂಬಂಧದ ಮೇಲೆ ಪರಿಣಾಮಗಳಾಗಲಿವೆ ಎಂದೂ ಅಧಿಕಾರಿಗಳು ಅಭಿಪ್ರಾಯಪಟ್ಟರು. ನೇಪಾಳ, ಭಾರತ ಹಾಗೂ ಚೀನಾ ಎರಡಕ್ಕೂ ಅಖಾಡ. ನೇಪಾಳ ಜತೆಗಿನ ನಮ್ಮ ಸಂಬಂಧ ಸ್ವಲ್ಪ ಹದಗೆಟ್ಟರೂ ಚೀನಾ ಅದರ ಲಾಭ ಮಾಡಿಕೊಳ್ಳುವ ಅಪಾಯವಿದೆ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT