ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಚ್ಚುಗೆಯ ಮಹಾಪೂರದಲ್ಲಿ ಕಳವಳದ ಸುಳಿಗಾಳಿ

Last Updated 10 ಜನವರಿ 2015, 19:55 IST
ಅಕ್ಷರ ಗಾತ್ರ

ಕಳೆದ ವರ್ಷದ ಉತ್ತರಾರ್ಧದಲ್ಲಿ ನಾಲ್ವರು ಸಂಸದರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರು. ಗೋರಖ್‌ಪುರದ ಸಂಸದ ಯೋಗಿ ಆದಿತ್ಯನಾಥ್‌  ‘ಮುಸ್ಲಿಂ ಯುವಕರು ಲವ್‌ ಜಿಹಾದ್‌ ಮೂಲಕ ಹಿಂದೂ ಮಹಿಳೆಯರನ್ನು  ಮರುಳು ಮಾಡಿ ಮದುವೆಯಾಗಿ, ಇಸ್ಲಾಂಗೆ ಮತಾಂತರಗೊಳಿಸುತ್ತಿದ್ದಾರೆ’ ಎಂದು ಹೇಳಿ­ದ್ದರು. ಉನ್ನಾವ್‌ ಕ್ಷೇತ್ರದ ಲೋಕಸಭಾ ಸದಸ್ಯ ಸಾಕ್ಷಿ ಮಹಾರಾಜ್‌ ‘ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಮ್‌ ಗೋಡ್ಸೆ ಒಬ್ಬ ನಿಜವಾದ ದೇಶಭಕ್ತ’ ಎಂದಿದ್ದರು. ಫತೇಪುರದ ಸಂಸದೆ ಸಾಧ್ವಿ ಜ್ಯೋತಿ ನಿರಂಜನ (ಇತ್ತೀಚೆಗೆ ಸಚಿವ ಸಂಪುಟ ಸೇರಿದ್ದಾರೆ) ಭಗವಂತ ರಾಮನನ್ನು ಆರಾಧಿಸದವರು ಅಥವಾ ತಮ್ಮ ಪಕ್ಷಕ್ಕೆ ಮತ ಹಾಕದವರೆಲ್ಲರೂ ‘ಹರಾಮ್‌ಜಾದೆ’ಗಳು ಎಂದು ಟೀಕಿಸಿದ್ದರು (ಈ ಪದವನ್ನು ನಾವು ಸೌಮ್ಯವಾಗಿ ರ್‍್ಯಾಸ್ಕಲ್‌್ಸ ಎಂದು ಭಾಷಾಂತರಿಸು­ತ್ತೇವಾದರೂ, ಇದು ಹೆಚ್ಚಾಗಿ ಹೀನ ಅರ್ಥವನ್ನೇ ಕೊಡುತ್ತದೆ ಎಂಬುದು ಒಬ್ಬ ಮೂಲ ಹಿಂದೂ­ಸ್ತಾನಿಗೆ ಚೆನ್ನಾಗೇ ತಿಳಿದಿರುತ್ತದೆ). ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹಿಂದೂಗಳಾಗಿ ಮತಾಂತ­ರಿ­ಸುವ ಕಾರ್ಯಕ್ಕೆ ಅಲೀಗಡದ ಸಂಸದ ಸತೀಶ್‌ ಗೌತಮ್‌ ಬೆಂಬಲ ಘೋಷಿಸಿದ್ದರು.

ಈ ಎಲ್ಲ ಸಂಸದರೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು. ಹೀಗಾಗಿ ಇವರ ಹೇಳಿಕೆಗಳ ಬಗ್ಗೆ ಸರ್ಕಾರದ ಮುಖ್ಯಸ್ಥರಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ವಿರೋಧ ಪಕ್ಷ ಪ್ರಧಾನಿಯನ್ನು ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ, ರಾಜ್ಯಸಭೆ ಕೊನೆಯವರೆಗೂ ಕಲಾಪವನ್ನೇ ಕಾಣಲಿಲ್ಲ. ಮೊದಲು ಈ ಬೇಡಿಕೆಗೆ ಒಪ್ಪದ ಪ್ರಧಾನಿ, ಬಳಿಕ ಹೇಳಿಕೆ ನೀಡಿದರು. ಆದರೆ ವಿರೋಧ ಪಕ್ಷದ ಪ್ರಕಾರ, ಅವರು ಕೊಟ್ಟ ಉತ್ತರ ದಾರಿತಪ್ಪಿದ ತಮ್ಮ ಸಂಸದರ   ನಡವಳಿಕೆಯನ್ನು ಸ್ಪಷ್ಟವಾಗಿ ಖಂಡಿಸುವಂತೆ ಇರಲಿಲ್ಲ.

ಈ ಎಲ್ಲ ವಿವಾದಗಳಿಗೆ ಸಾಕಷ್ಟು ಪ್ರಚಾರ ಸಿಕ್ಕಿತಾದರೂ, ಹೀಗೆ ಕಿಡಿಕಾರುತ್ತಿರುವ ಬಿಜೆಪಿಯ ಸಂಸದರೆಲ್ಲರೂ ಉತ್ತರ ಪ್ರದೇಶದವರೇ ಆಗಿ­ರುವ ವಿಷಯ ಮಾತ್ರ ಗಣನೆಗೆ ಬರಲೇ ಇಲ್ಲ. ಸಂಸತ್‌ ಸ್ಥಾನಕ್ಕೆ ಸ್ಪರ್ಧಿಸಲು ಇವರೆಲ್ಲರನ್ನೂ ಆಯ್ಕೆ ಮಾಡಿದವರು ಆಗ ಬಿಜೆಪಿಯ ಪ್ರಧಾನ ಕಾರ್ಯ­ದರ್ಶಿಯಾಗಿದ್ದ ಮತ್ತು ದೇಶದ ಈ ಅತಿದೊಡ್ಡ ರಾಜ್ಯದ ಚುನಾವಣಾ ಪ್ರಚಾರದ ಏಕಮೇವ ಹೊಣೆ ಹೊತ್ತಿದ್ದ ಅಮಿತ್‌ ಷಾ ಅವರು. ಅವರ ನಡುವಿನ ಈ ಸಂಬಂಧವನ್ನು ವಿರೋಧ ಪಕ್ಷವಾಗಲೀ ಮಾಧ್ಯಮಗಳಾಗಲೀ ಅರಿಯದೇ ಹೋದದ್ದು ಗಮನಾರ್ಹವಾದ ಸಂಗತಿ. ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಪ್ರಧಾನಿ ಮೇಲೆ ಪದೇ ಪದೇ ಒತ್ತಡ ಹಾಕು­ವಾಗಲಾದರೂ, ಸಂಸತ್ತಿನ ಒಳಗಾಗಲೀ ಅಥವಾ ಹೊರಗಾಗಲೀ ಯಾರೊ­ಬ್ಬರೂ ಧರ್ಮಾಂಧರ ಗುಂಪಿನಲ್ಲಿ ಇದ್ದವರನ್ನು ಸಂಸದರನ್ನಾಗಿ ಮಾಡಿದ ಪ್ರಮುಖ ಹೊಣೆಗಾರ­ನನ್ನು ಖಂಡಿಸಲೇ ಇಲ್ಲ.

ಅಮಿತ್‌ ಷಾ ಅವರು ಮುಖ್ಯವಾಹಿನಿಗೆ ಬಂದಿರುವುದು ದೇಶದ ಸಾರ್ವಜನಿಕ ವಲಯ­ದಲ್ಲಿ ನಡೆಯುತ್ತಿರುವ ಆತಂಕಕಾರಿ ಚರ್ಚೆಗಳಲ್ಲಿ ಒಂದು. ಅಧಿಕಾರದಲ್ಲಿದ್ದಾಗ ಬಂಧನಕ್ಕೆ ಒಳ­ಗಾದ ರಾಜ್ಯವೊಂದರ ಮೊದಲ  ಗೃಹ ಸಚಿವ; ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದೆಂಬ ಭಯದಿಂದ ಸುಪ್ರೀಂಕೋರ್ಟ್‌ ಎರಡು ವರ್ಷ ತವರು ರಾಜ್ಯ­ದಿಂದ ಹೊರಗೆ ಕಳುಹಿಸಿದ್ದ ವ್ಯಕ್ತಿ; ಬಹು­ತೇಕರು ಹೇಳುವಂತೆ, ತಮ್ಮ ರಾಜ್ಯದ ಪೊಲೀಸ್‌ ಪಡೆ­ಯನ್ನು ಸಂಪೂರ್ಣ ರಾಜಕೀಯಕರಣಗೊಳಿಸಿದ ಹಾಗೂ ತಮ್ಮ ದಾರಿಗೆ ಬಾರದವರಿಗೆ ಶಿಕ್ಷೆ ವಿಧಿಸುತ್ತಿದ್ದ ವ್ಯಕ್ತಿ ಅಮಿತ್‌ ಷಾ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ, ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ ಪಕ್ಷ 71ರಲ್ಲಿ ದಿಗ್ವಿಜಯ ಸಾಧಿಸಿದಾಗ ಅಮಿತ್‌ ಷಾ ಅವರ ವಿವಾದಾತ್ಮಕ ಹಿನ್ನೆಲೆ ಮರೆತೇ­ಹೋಯಿತು. ಬೃಹತ್‌ ರಾಜ್ಯದಲ್ಲಿ ಬಿಜೆಪಿಯ ಅದ್ಭುತವಾದ ಸಾಧನೆ ಮತ್ತು ಒಟ್ಟಾರೆ ದೊರೆತ ಬಹುಮತ  ಅವರನ್ನು ಪಕ್ಷದ ಅಧ್ಯಕ್ಷ ಗಾದಿಗೆ ಏರಿಸಿತು. ಈ ಮಧ್ಯೆ, ಬಿಜೆಪಿಯ ಗೆಲುವಿಗೆ ಕಾರ್ಯತಂತ್ರ ರೂಪಿಸುವಲ್ಲಿ ಅವರು ವಹಿಸಿದ ಪಾತ್ರದ ಬಗ್ಗೆ ಮಾಧ್ಯಮಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂತು. ಹಿಂದೆ ನಂಬಿಕೆಗೆ ಅನರ್ಹ ಎನಿಸಿಕೊಂಡಿದ್ದ ವ್ಯಕ್ತಿಯನ್ನು ಇದೀಗ ರಾಜಕೀಯ ಮೇಧಾವಿ, ಆಧುನಿಕ ಚಾಣಕ್ಯ ಎಂದೆಲ್ಲ ಕೊಂಡಾಡಲಾಗುತ್ತಿದೆ.

ಮಾಧ್ಯಮ ಪಂಡಿತರು ಅಮಿತ್‌ ಷಾ ಅವರನ್ನು ವಿಶೇಷವಾಗಿ, ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಹೊಗಳುತ್ತಾರೆ. ಆದರೆ ಅವರು ಆಯ್ಕೆ ಮಾಡಿದ ಅಭ್ಯರ್ಥಿಗಳಲ್ಲೇ ಮೇಲಿನ ನಾಲ್ವರು ಸಂಸದರೂ ಸೇರಿದ್ದಾರೆ. ಇಷ್ಟಾದರೂ ಉತ್ತರ ಪ್ರದೇಶದ ತಮ್ಮ ಸಂಸದರ ಹೇಳಿಕೆಗಳ ಹೊಣೆ ಹೊರುವಂತೆ ಬಿಜೆಪಿ ಅಧ್ಯಕ್ಷರನ್ನು ಯಾರೂ ಕೇಳಲಿಲ್ಲ. ಈ ಮಧ್ಯೆ, ವಿಸ್ತರಿತ ಸಂಘ ಪರಿವಾರದ ಇತರ ಸದ­ಸ್ಯರು ತಮ್ಮ ಉದ್ದೇಶ­ಗಳನ್ನು ಅತ್ಯಂತ ನಿಖರ­ವಾಗಿಯೇ ಸ್ಪಷ್ಟಪಡಿಸಿ­ದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ‘ಭಾರತ ಒಂದು ಹಿಂದೂ ರಾಷ್ಟ್ರ, ಹೀಗಾಗಿ ಈ ದೇಶದ ಎಲ್ಲ ನಾಗರಿಕರೂ ತಾವು ಹಿಂದೂ ಮೂಲದವರು ಎಂಬುದನ್ನು ಒಪ್ಪಿ­ಕೊಳ್ಳಲೇಬೇಕು’ ಎಂದು ಘೋಷಿಸಿ­ದ್ದಾರೆ. ಇದನ್ನೇ ಗುರಿಯಾಗಿ ಇಟ್ಟು­ಕೊಂಡು ವಿಶ್ವ ಹಿಂದೂ ಪರಿಷತ್‌ ಸರಣಿ ಮತಾಂತರ ಕಾರ್ಯ­ಕ್ರಮ­ಗಳನ್ನು ಆಯೋಜಿಸಿದೆ. ಪ್ರತಿ ಭಾರತೀ­ಯನೂ ನಂಬಿಕೆಯಿಂದ ಹಿಂದೂ ಧರ್ಮೀಯ­ನಾಗು­ವಂತೆ  ಮಾಡುವುದು ತಮ್ಮ ಗುರಿ ಎಂದು ಅದರ ಅಧ್ಯಕ್ಷ ಪ್ರವೀಣ್‌ ತೊಗಾಡಿಯ ಹೇಳಿದ್ದಾರೆ.

ಹಲವು ವರ್ಷಗಳ ಕಾಲ ಸ್ವತಃ ನರೇಂದ್ರ ಮೋದಿ ಅವರೇ ‘ಹಿಂದೂ ರಾಷ್ಟ್ರ’ದ ಕಟ್ಟಾ ಅನುಯಾಯಿಯಾಗಿದ್ದರು. ಮುಖ್ಯಮಂತ್ರಿ­ಯಾದ ಆರಂಭಿಕ ವರ್ಷಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಬಗ್ಗೆ ಅವರು ಅಗೌರವ­ಯುತವಾದ ಟೀಕೆಗಳನ್ನು ಮಾಡಿದ್ದರು. ಆದರೆ 2008ರಿಂದ ಈಚೆಗೆ ತಾವೊಬ್ಬ ಸೌಮ್ಯವಾದಿ ಎಂಬಂತೆ ಗುರುತಿಸಿಕೊಳ್ಳಲು  ಆರಂಭಿಸಿದರು. ಬಳಿಕ ಅವರೊಬ್ಬ ವಿಕಾಸ ಪುರುಷ, ಅಭಿವೃದ್ಧಿ­ಗಾಗಿ ತುಡಿಯುವ ವ್ಯಕ್ತಿ, ಇಡೀ ಗುಜರಾತನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಇರು­ವಂಥ ಒಬ್ಬ ನಾಯಕ ಎಂಬಂತೆ ತೋರತೊಡಗಿ­ದರು. ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರಕ್ಕೆ ಇಳಿದ ಬಳಿಕವಂತೂ ಹಿಂದಿನದನ್ನೆಲ್ಲ ಮರೆಮಾಚು­ವಂತೆ, ತಾವೇನಿದ್ದರೂ ಭವಿಷ್ಯದ ರಾಜಕಾರಣಿ ಎಂಬಂತೆ ಕಾಣಿಸಿಕೊಂಡರು. ವಿವಾದಾತ್ಮಕ ವಿಷಯ­ಗಳ ಬಗೆಗಿನ ಅವರ ಒಲವು ಏನೇ ಇರಲಿ, ಈ ಹಂತದಲ್ಲಿ ಅವರ ಕೂರಂಬುಗಳು ಮಾತ್ರ ಇಡೀ ಸಮುದಾಯ­ವನ್ನು ಗುರಿಯಾಗಿ ಇಟ್ಟು­ಕೊಳ್ಳದೆ ತಮ್ಮ ಎದುರಾಳಿಗಳ ಕಡೆಗಷ್ಟೇ ನಿರ್ದೇಶಿತವಾಗಿದ್ದವು.

ನರೇಂದ್ರ ಮೋದಿ ಅವರ ಚಮತ್ಕಾರಿಕವಾದ ಈ ಹೊಸ ಅವತಾರದ ಜೊತೆಗೆ ಪ್ರಖರ ವಾಕ್ಪಟುತ್ವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇಂತಹ ಸಂಗತಿಗಳ ಪ್ರಮಾಣವನ್ನು ಅಳೆಯುವುದು  ಅಸಾಧ್ಯವಾದರೂ, ಬಿಜೆಪಿ­ಯನ್ನು ಬೆಂಬಲಿಸಿದವರೆಲ್ಲರೂ ಭಾರತ ಒಂದು ‘ಹಿಂದೂ ರಾಷ್ಟ್ರ’ ಆಗಲೇಬೇಕು ಎನ್ನುವ ವಾದ­ವನ್ನು ಒಪ್ಪುತ್ತಾರೆ ಎಂದು ಹೇಳಲಾಗದು. ಅವ­ರೆಲ್ಲ  ಮತ ಹಾಕಿದ್ದು ಯಾಕೆಂದರೆ: 1. ಅವರೆಲ್ಲ (ನಿಶ್ಚಿತವಾಗಿಯೂ) ಲಂಚದ ಹಾವಳಿ ಮತ್ತು ಆಡಳಿತಾರೂಢ ಕಾಂಗ್ರೆಸ್‌ನ ವಂಶಾಡಳಿತ ಸಂಸ್ಕೃತಿಯಿಂದ ಬೇಸತ್ತಿದ್ದರು. 2. ನರೇಂದ್ರ ಮೋದಿ ಅವರ ಉತ್ಸಾಹ, ವರ್ಚಸ್ಸಿನ ಮೋಡಿಗೆ ಒಳಗಾಗಿದ್ದರು. ಮೋದಿ ಸ್ವಪರಿಶ್ರಮದಿಂದ ಮೇಲೆ ಬಂದಿರುವುದರಿಂದ ಕಡಿಮೆ ಭ್ರಷ್ಟಾ­ಚಾರದ, ಸಮೃದ್ಧ ಹಾಗೂ ಸುರಕ್ಷಿತವಾದ ಭಾರತವನ್ನು ಕಾಣಬೇಕೆಂಬ ತಮ್ಮ ನಿರೀಕ್ಷೆಗಳಿಗೆ ಸ್ಪಂದಿಸಬಲ್ಲ ಪರ್ಯಾಯ ಆಯ್ಕೆ ಎಂಬಂತೆ ಅವರಿಗೆ ಕಂಡರು.

ಹೀಗೆ ಮೋದಿ ಒಬ್ಬ ಆಧುನಿಕ, ಕಾರ್ಯ­ಪ್ರವೃತ್ತ, ಪ್ರಗತಿಪರ  ಮತ್ತು ಉತ್ತಮ ಆಡಳಿತ ತರಬಲ್ಲ ಒಬ್ಬ ಸುಧಾರಕ ಎಂಬ ಅನಿಸಿಕೆಯನ್ನು ಮತದಾರರು ತಮ್ಮ ತಮ್ಮಲ್ಲೇ ವ್ಯಾಪಕವಾಗಿ ವಿನಿಮಯ ಮಾಡಿಕೊಂಡರು. ಬಹುಶಃ ಮೋದಿ ಅವರಲ್ಲಿ ನಿಜಕ್ಕೂ ಸೈದ್ಧಾಂತಿಕವಾದ ಪರಿವರ್ತ­ನೆಯೇ ಆಗಿರಬಹುದು. ಆದರೆ ಅವರ ನಂತರದ ಎರಡನೇ ನಾಯಕನಿಗೂ ಇದೇ ಮಾತು ಅನ್ವಯಿಸುವುದೇ?

ಇಲ್ಲಿ ನಾವು ಸಂಶಯಪಡಲು ಸಾಕಷ್ಟು ಆಸ್ಪದ ಇದೆ. ಚುನಾವಣಾ ಪ್ರಚಾರದ ಸಂದರ್ಭ­ದಲ್ಲಿ ‘ಮತಪೆಟ್ಟಿಗೆಗಳ ಮೂಲಕ ಸೇಡು ತೀರಿಸಿ­ಕೊಳ್ಳಿ’ ಎಂದು ಹಿಂದೂಗಳನ್ನು ಒತ್ತಾಯಿಸಿದ್ದ­ಕ್ಕಾಗಿ ಚುನಾವಣಾ ಆಯೋಗ ಅವರನ್ನು ತರಾ­ಟೆಗೆ ತೆಗೆದುಕೊಂಡಿತ್ತು. ಉತ್ತರ ಪ್ರದೇಶದಲ್ಲಿ ಸಂಸದ ಸ್ಥಾನಕ್ಕೆ ಅವರಿಂದ ನೇಮಕಗೊಂಡ ಅಭ್ಯರ್ಥಿಗಳ ಹೇಳಿಕೆಗಳು ಸರ್ಕಾರದ ಬಹಿರಂಗ ಕಾರ್ಯಸೂಚಿ­ಗಿಂತ ಭಿನ್ನವಾಗಿವೆ. ಅವು ಮೋದಿ ಅವರೇ ಸ್ವತಃ ಹಿಂದೆ ಸರಿದಿದ್ದಾರೆ ಎಂದು ಭಾವಿಸಲಾಗಿರುವ (ಅಥವಾ ಹಾಗೆ ಹೇಳಲಾಗು­ತ್ತಿ­ರುವ) ‘ಭಾರತದ ಧ್ರುವೀಕರಣ’­ವನ್ನು ಒಳಗೊಂಡ ಪ್ರತಿಗಾಮಿ ದೃಷ್ಟಿಕೋನವನ್ನೇ ಪ್ರತಿಪಾದಿಸುವಂತೆ ಇವೆ. ಯೋಗಿ ಆದಿತ್ಯನಾಥ್‌ ಮತ್ತು ಸಾಧ್ವಿ ಜ್ಯೋತಿ ನಿರಂಜನ ಅವರ ವಿರುದ್ಧ ಅಮಿತ್‌ ಷಾ ಸಾರ್ವಜನಿಕವಾಗಿ  ಚಾಟಿ ಬೀಸದೇ ಇರುವುದನ್ನು ನೋಡಿದರೆ, ಅವರು ಸಹ ಇಂಥ ಧೋರಣೆಗೆ ಸಂಪೂರ್ಣ ವಿರುದ್ಧವಾಗೇನೂ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಈ ಬಗ್ಗೆ ಹೇಳಿಕೆ ನೀಡುವಂತೆ ವರದಿಗಾರರು ಕೇಳಿದಾಗ ‘ನಮ್ಮ ಪಕ್ಷ ಸಾಮಾಜಿಕ ಸಾಮರಸ್ಯದ ಪರವಾಗಿ ನಿಲ್ಲುತ್ತದೆ’ ಎಂಬಂತಹ ಜಾರಿಕೆಯ ಉತ್ತರವನ್ನು ಷಾ ನೀಡಿದ್ದರು.

ಈ ಎಲ್ಲ ಬೆಳವಣಿಗೆಗಳು ಒಂದು ರೀತಿ ಆತಂಕ­ಕಾರಿಯಾಗಿವೆ. ಯಾಕೆಂದರೆ ಉತ್ತರ ಪ್ರದೇಶ­ದಲ್ಲಿ ಕೋಮು ಭಾವನೆ ಹುಟ್ಟುಹಾಕುವಲ್ಲಿ ಅಮಿತ್‌ ಷಾ ಮತ್ತು ಅವರ ಪಕ್ಷದೊಂದಿಗೆ ತಾಳ ಹಾಕಲು ಮುಲಾಯಂ ಸಿಂಗ್‌ ಯಾದವ್‌ ಹಾಗೂ ಅವರ ಪಕ್ಷ ಸಿದ್ಧವಾಗಿದೆ. ರಾಜ್ಯವನ್ನು ಇನ್ನಷ್ಟು   ಧ್ರುವೀಕರಣದತ್ತ ಕೊಂಡೊಯ್ಯುವುದ­ರಲ್ಲಿ ಎರಡು ಕಡೆಯಲ್ಲೂ ತಮ್ಮದೇ ಆದ ಹಿತಾಸಕ್ತಿಗಳಿವೆ. ಉತ್ತರ ಪ್ರದೇಶದಲ್ಲಿ ವಿಧಾನ­ಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ಆತಂಕ ಹುಟ್ಟಿಸುತ್ತಿರುವ ಸಂಗತಿ ಎಂದರೆ, ಮುಲಾಯಂ ಮತ್ತು ಅಜಂ ಖಾನ್‌ ಅಂತಹವರು ಅಭದ್ರ ಮುಸ್ಲಿಮರಲ್ಲಿ, ಯೋಗಿ ಆದಿತ್ಯನಾಥ್‌ ಹಾಗೂ ಸಾಧ್ವಿ ಜ್ಯೋತಿ ನಿರಂಜನ ಅವರಂತಹವರು ಅಭದ್ರ ಹಿಂದೂಗಳಲ್ಲಿ ಆತಂಕದ ಕಿಡಿ ಹೊತ್ತಿಸುವ ಸಾಧ್ಯತೆ ಇದೆ.

ಇದರ ಜೊತೆಗೆ, ಈ ಅಂಧಾಭಿಮಾನದ ಕುಂಡಕ್ಕೆ ತುಪ್ಪ ಸುರಿಯಲು ಅಸದುದ್ದೀನ್‌ ಒವೈಸಿ ಮತ್ತು ಮಜ್ಲಿಸ್‌–- ಎ– ಇತ್ತೆಹಾದುಲ್‌ ಮುಸ್ಲಿಮೀನ್‌ ಕೂಡ ಇವೆ. ಆಗ ಅಮಿತ್‌ ಷಾ ನಾಯಕತ್ವದಲ್ಲಿ ಬಿಜೆಪಿ ಇಬ್ಬಗೆ ನೀತಿಯನ್ನು ಅನುಸರಿಸಬಹುದು; ಒಂದು ಕಡೆ ಪ್ರಧಾನ ಮಂತ್ರಿ ತಮ್ಮ ಭಾಷಣ­ಗಳಲ್ಲಿ, ಎಲ್ಲ ಯುವಜನರಿಗೂ ಉದ್ಯೋಗ, ಎಲ್ಲ ಹಳ್ಳಿಗಳಿಗೆ ಹಗಲಿರುಳೂ ವಿದ್ಯುತ್‌ ಒದಗಿಸುವ ಪ್ರಚೋದನಾತ್ಮಕ ಭರವಸೆ ನೀಡಿದರೆ, ಇತ್ತ ತಳಮಟ್ಟದಲ್ಲಿ ಕಾರ್ಯಕರ್ತರು ‘ಹಿಂದೂ ಘನತೆ’ಯ ಬಗ್ಗೆ ಪ್ರಚಾರ ಮಾಡುತ್ತಾ ಹೋಗಬಹುದು.

ಅಮಿತ್‌ ಷಾ ಅವರನ್ನು ಸಿಬಿಐ ಆರೋಪ­ಮುಕ್ತ ಮಾಡಿರುವ ಬಗ್ಗೆ ಈಗಾಗಲೇ ಅವರ ಬೆಂಬಲಿಗರು ಹೆಚ್ಚು ಪ್ರಚಾರ ತೆಗೆದುಕೊಂಡಿ­ದ್ದಾರೆ. ಈ ‘ಕ್ಲೀನ್‌ ಚಿಟ್‌’ ಬಗೆಗಿನ ವ್ಯಾಖ್ಯಾನ­ಗಳು ಎಷ್ಟರಮಟ್ಟಿಗೆ ಇವೆ ಎಂದರೆ, ದೇಶದ ಪ್ರಮುಖ ರಾಜಕೀಯ ಪಕ್ಷವೊಂದರ ಅಧ್ಯಕ್ಷರು ನೀಡುತ್ತಿ­ರುವ ಹೇಳಿಕೆಗಳು ಮತ್ತು ಮಾಡು­ತ್ತಿರುವ ಕಾರ್ಯಗಳು ಅವರ ಸ್ಥಾನದ  ಘನತೆಗೆ ತಕ್ಕಂತೆ ಇವೆಯೇ ಎಂಬ ಮೂಲಭೂತ ಪ್ರಶ್ನೆಯನ್ನೇ ಮರೆಮಾಚಿವೆ.

ಅಮಿತ್‌ ಷಾ ಗುಜರಾತ್‌ನಲ್ಲಿ ಗೃಹ ಸಚಿವ­ರಾಗಿದ್ದಾಗ ಮಾಡಿದ ಕೆಲಸ, ಉತ್ತರ ಪ್ರದೇಶ­ದಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರವನ್ನು ನಿರ್ವಹಿಸಿದ ರೀತಿ, ಪಕ್ಷದ ಅಧ್ಯಕ್ಷರಾಗಿ ಅವರ ನಡೆ ಎಲ್ಲವೂ ಅವರಿಗೆ ‘ಅಂತಿಮ ಗುರಿ ಮುಖ್ಯವೇ ಹೊರತು ಅದಕ್ಕಾಗಿ ಅನುಸರಿಸುವ ಮಾರ್ಗವಲ್ಲ’ ಎಂಬುದನ್ನು ತೋರಿಸುತ್ತವೆ. ಹೀಗಾಗಿ ಮಾಧ್ಯಮ­ಗಳಲ್ಲಿ ಅವರಿಗೆ ಸಿಗುತ್ತಿರುವ ಮನ್ನಣೆ ಮತ್ತು ಮೆಚ್ಚುಗೆಯ ಮಹಾಪೂರ ನಮ್ಮನ್ನು ಒಂದು ರೀತಿ ಕಳವಳಕ್ಕೆ ಈಡು ಮಾಡುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT