ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನೋದ್‌ ಮೆಹ್ತಾ: ಮಾಧ್ಯಮಕ್ಕೆ ಕಲಿಸಿದ ಪಾಠ ಒಂದೇ ಎರಡೇ?

Last Updated 14 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಮಗೆ ಗೊತ್ತಿರುವುದಿಲ್ಲ ಸಾವು ನಮ್ಮ ಬಾಗಿಲಿಗೆ ಬಂದು ‘ಟಿಕ್‌’ ‘ಟಿಕ್‌’ ಎಂದು ಬಡಿಯುತ್ತ ನಿಂತಿದೆ ಎಂದು. ಆದರೆ, ಅದು ಹೇಗೋ ಸೂಚನೆ ಕೊಡುತ್ತ ಇರುವಂತೆ ಕಾಣುತ್ತದೆ. ವಿನೋದ್‌ ಮೆಹ್ತಾ ತಮ್ಮ ಕೊನೆಯ ಪುಸ್ತಕ ‘ಎಡಿಟರ್‌ ಅನ್‌ಪ್ಲಗ್ಡ್‌’ ಬರೆಯುವಾಗ ಏನು ಅಂದುಕೊಂಡಿದ್ದರೋ ಏನೋ? ಅವರಿಗೆ ಬರೀ ವೃತ್ತಿ ಜೀವನದಿಂದ ನಿವೃತ್ತಿ ಬೇಕು ಎಂದು ಅನಿಸಿತ್ತೋ ಅಥವಾ ಬದುಕೇ ಮುಗಿಯುತ್ತ ಬಂತು ಎಂದುಕೊಂಡಿದ್ದರೋ? ಅವರು ಈ ಪುಸ್ತಕದ ಮೊದಲ ಅಧ್ಯಾಯಕ್ಕೆ ‘Walking into the Sunset’ ಎಂದು ಹೆಸರು ಕೊಟ್ಟಿದ್ದರು. ಅದನ್ನು ಹೇಗೂ ಅರ್ಥ ಮಾಡಿಕೊಳ್ಳಬಹುದು. ಕಳೆದ ಮೂರು ವರ್ಷಗಳಿಂದ ಅವರು ಹೆಚ್ಚೂ ಕಡಿಮೆ ಆಲಂಕಾರಿಕ ಸಂಪಾದಕರಾಗಿ ಕೆಲಸ ಮಾಡುತ್ತಿ ದ್ದರು. ಅವರ ಒಟ್ಟು ವೃತ್ತಿ ಜೀವನ ನೋಡಿದರೆ ಎಲ್ಲಿಯೂ ಅವರು ಬಹುಕಾಲ ಇರಲಿಲ್ಲ. ಏನೋ ಒಂದು ಆಗಿ ಆ ಹುದ್ದೆ ತೊರೆದು ಹೊರ ನಡೆಯು ತ್ತಿದ್ದರು. ಅವರೇ ಸ್ಥಾಪಿಸಿದ ‘ಔಟ್‌ಲುಕ್‌’ ಪತ್ರಿಕೆಯ ಒಡೆಯರಿಗೆ ಮೆಹ್ತಾ ಬಗ್ಗೆ ಬಹಳ ಸಹನೆ, ಪ್ರೀತಿ ಮತ್ತು ಗೌರವ. ಸಂಪೂರ್ಣ 17 ವರ್ಷ ಕಾಲ ಅವರನ್ನು ಸಹಿಸಿದರು! ಅವರು ಏನು ಬರೆದರೂ ಅವರ ಹುದ್ದೆಯಿಂದ ಕದಲಿಸಲಿಲ್ಲ. ಕೊನೆಗೆ ಅವರಿಗೂ ‘ಸಹನೆ’ ಕಳೆದು ಹೋಯಿತು. ಮೆಹ್ತಾ ಅವರನ್ನು ಒಂದು ರೀತಿಯ ‘ಸಲಹೆಗಾರನ’ ನಿರಪಾಯಕಾರಿ ಪಟ್ಟದಲ್ಲಿ ಕೂಡ್ರಿಸಿದರು. ಅದಕ್ಕೆ ಕಾರಣವಿತ್ತು : ವಿನೋದ್‌ ಮೆಹ್ತಾ ಜೇನುಗೂಡಿಗೆ ಕೈ ಇಕ್ಕಿದ್ದರು.

 ಅವರು ನೀರಾ ರಾಡಿಯಾ ಟೇಪು ಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟ ಮಾಡಿ ತಮ್ಮ ಮಾಲೀಕರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಅವರಿಗೆ ಮೆಹ್ತಾ ಬಿಸಿ ತುಪ್ಪವಾದರು. ನುಂಗುವಂತೆಯೂ  ಇರಲಿಲ್ಲ, ಉಗುಳುವಂತೆಯೂ ಇರಲಿಲ್ಲ. ಮೊದಲೇ  ಕಷ್ಟದಲ್ಲಿ ಇರುವ ವಾರ ಪತ್ರಿಕೆಯ ಮಾಲೀಕರು ಜಾಹೀರಾತು ಲೋಕಕ್ಕೆ ‘ಸಂದೇಶ’ವನ್ನು ಕೊಡಲೇಬೇಕಿತ್ತು. ಮೆಹ್ತಾ ಅವರನ್ನು ಸಕ್ರಿಯ ಸಂಪಾದಕ ಹುದ್ದೆಯಿಂದ ತೆಗೆಯುವುದೇ ಆ ‘ಸಂದೇಶ’ ಆಗಿತ್ತು. ಅದನ್ನು ಅವರು ಮಾಡಿದರು.

ರಾಡಿಯಾ ಟೇಪುಗಳನ್ನು ಬಹಿರಂಗಗೊಳಿ ಸಿದ್ದು ಮೆಹ್ತಾ ವೃತ್ತಿ ಜೀವನದ ಶಿಖರ ಗಳಿಗೆಗಳಲ್ಲಿ ಒಂದು. ಅಥವಾ ಅದುವೇ ಏಕೈಕ ಶಿಖರಗಳಿಗೆ  ಎಂದರೂ ನಡೆದೀತು. ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಶಾಹಿಗಳು, ಅಧಿಕಾರದ ತಲೆಹಿಡುಕರು ಮತ್ತು ಪತ್ರಕರ್ತರ ನಡುವಿನ ಅನೈತಿಕ ಸಂಬಂಧಕ್ಕೆ ರಾಡಿಯಾ ಟೇಪುಗಳು ನಿರಾಕರಿಸಲಾಗದ ನಿಜನುಡಿಯಂತೆ ಇದ್ದುವು. ಆ ಟೇಪಿನಲ್ಲಿ ಎಷ್ಟು ಜನ ಬೆತ್ತಲಾದರು! ಆದರೆ, ವಿಚಿತ್ರ ನೋಡಿ ಹಲವು ಸಾವಿರ ಪ್ರಸಾರ ಇರುವ ಒಂದು ವಾರಪತ್ರಿಕೆಯಲ್ಲಿ ಈ ಸುದ್ದಿ ಸೋರಿಕೆ ಯಾಯಿತು. ಅಂದರೆ, ಲಕ್ಷಾಂತರ  ಪ್ರಸಾರ ಇರುವ ದೊಡ್ಡ ದೊಡ್ಡ ಇಂಗ್ಲಿಷ್‌  ಪತ್ರಿಕೆಗಳಿಗೆ ಈ ಟೇಪುಗಳು ಸಿಗಲು ಸಾಧ್ಯ ಇರಲಿಲ್ಲವೇ? ಅಥವಾ ಅಲ್ಲಿ ಪ್ರವೇಶ ಸಿಗದೇ ಅವು ‘ಔಟ್‌ಲುಕ್‌’ ದಾರಿ ಹಿಡಿದುವೇ? ಈ ರಹಸ್ಯ ತಿಳಿದವರು ಬಹಳ ಮಂದಿ ಇರಲಾರರು.

ಪತ್ರಿಕೋದ್ಯಮದ ಈಗಿನ ಅನೇಕ ಸಮಸ್ಯೆ ಗಳಿಗೂ ರಾಡಿಯಾ ಟೇಪುಗಳಿಗೂ ನೇರ ಸಂಬಂಧ ಇದೆ. ಪತ್ರಕರ್ತರು ಮತ್ತು ಕರ್ತೆಯರು ಎಷ್ಟು ಕೆಳಕ್ಕೆ ಇಳಿಯಬಹುದು, ಅಧಿಕಾರದ ತಲೆಹಿಡುಕರ ಕೈಯ ದಾಳವಾಗಿ ಹೇಗೆ ಕುಣಿಯಬಹುದು ಎಂಬುದನ್ನು ಹೇಳುತ್ತಲೇ ಅದಕ್ಕೆ ಅಡ್ಡಿ ಮಾಡಿದರೆ ಏನು ಪರಿಣಾಮ ಆಗಬಹುದು ಎಂಬುದನ್ನೂ ಅದು ಹೇಳಿತು. ಅನೇಕರನ್ನು ಬೆತ್ತಲು ಮಾಡಿ ಜಗತ್ತಿಗೆ ತೋರಿಸುವ ಜಾಹೀರಾತು ಲೋಕ ತಾನು ಬೆತ್ತಲಾದುದನ್ನು ಒಪ್ಪಿಕೊಳ್ಳಲು ಸಿದ್ಧ ಇರಲಿಲ್ಲ. ತಾವು ಬೆತ್ತಲು ಮಾಡಿದ ಉದ್ಯಮಿಗಳ ಬಾಗಿಲಿಗೇ ಹೋಗಿ ಸಂಧಾನ ಮಾಡಲು ಮೆಹ್ತಾ ಹೆಣಗಿದ್ದು, ದಿವ್ಯ ತಾತ್ಸಾರಕ್ಕೆ ಸಿಲುಕಿ ಅವಮಾನಿತರಾದುದು ಅವರ ಕೊನೆಯ ಪುಸ್ತಕದಲ್ಲಿ ಇರುವ ದಾರುಣ ಅಧ್ಯಾಯ.

ಮೆಹ್ತಾ ಬದುಕಿನ ಕೊನೆಯ ದಿನಗಳಲ್ಲಿ ಕಲಿತ ಪಾಠಗಳು ಕಠೋರವಾಗಿದ್ದುವು. ಅಧಿಕಾರದ ಬಾಲಂಗೋಚಿ ಆಗಬೇಕು ಎಂದು ಹಾತೊರೆಯು ವವರು ಮತ್ತು ಅದಕ್ಕೆ ತಕ್ಕಂತೆ ಬರೆಯುವವರು, ನಡೆದುಕೊಳ್ಳುವವರು, ಉದ್ದೇಶದ ಪತ್ರಿಕೋದ್ಯಮ ಮಾಡುವವರು ಎಲ್ಲ ಕಡೆಯೂ ಇರುವಾಗ ಮೆಹ್ತಾ ಅಂಥವರಿಗೆ ಕಷ್ಟವಾಗುವುದು ಸಹಜ. ಅವರು ಬಿಜೆಪಿಯ ಕಡು ವಿರೋಧಿಯಾಗಿದ್ದರು. ತಮ್ಮನ್ನೇ ತಾವು ‘ಸುಳ್ಳು ಜಾತ್ಯತೀತವಾದಿ’ ಎಂದು ಕರೆದುಕೊಂಡರು. ಅದೇ ಕಾರಣಕ್ಕಾಗಿ ಅವರನ್ನು ಸೋನಿಯಾ ಚಮಚಾ ಎಂದು ಬಹಳ ಮಂದಿ ಕರೆದರು. ಆದರೂ, ಯುಪಿಎ  ಎರಡು ಅವಧಿಗೆ ಆಡಳಿತ ಮಾಡಿ ದರೂ, ಮೆಹ್ತಾಗೆ ಒಂದು ಪದ್ಮ ಪ್ರಶಸ್ತಿ ಬರಲಿಲ್ಲ. ರಾಜ್ಯಸಭೆಗೆ ಅವರ ನಾಮಕರಣ ಆಗಲಿಲ್ಲ. ಸೋಜಿಗ ಎಂದರೆ ಅವರ ಕೈ ಕೆಳಗೆ ಕೆಲಸ ಮಾಡಿದವರು ಅಂಥ ಪ್ರಶಸ್ತಿಗಳನ್ನು ಗಿಟ್ಟಿಸಿ ಕೊಂಡು ಬಿಟ್ಟರು. ಅವರಿಗೆ ಗೊತ್ತಿದ್ದುದು ಮೆಹ್ತಾಗೆ ಗೊತ್ತಿರಲಿಲ್ಲ! ಗೊತ್ತಿದ್ದರೂ ಅವರು ಆ ದಾರಿಯಲ್ಲಿ ಹೋಗುವುದು ಸಾಧ್ಯ ಇರಲಿಲ್ಲ.‌ ಆದರೆ, ಮೆಹ್ತಾ ನಿಧನರಾದಾಗ ಆರ್ಣಬ್‌ ಗೋಸ್ವಾಮಿ ತಮ್ಮ ಲೇಖನವನ್ನು, ‘ವಿನೋದ್‌ ಮೆಹ್ತಾ ಒಬ್ಬ ಅಪ್ರತಿಮ ಪ್ರಾಮಾಣಿಕ’ ಎಂದು ಆರಂಭಿಸಿದರು. ಅದು ಎಲ್ಲ ಪ್ರಶಸ್ತಿಗಳಿಗಿಂತ, ಸ್ಥಾನಮಾನಗಳಿಗಿಂತ ದೊಡ್ಡ ಗೌರವವಾಗಿತ್ತು. ಮೆಹ್ತಾ ಎಲ್ಲ ಅರ್ಥದಲ್ಲಿ ಪ್ರಾಮಾಣಿಕರಾಗಿದ್ದರು. ಅವರು ತಮ್ಮ ವೃತ್ತಿ ಬದುಕಿನಲ್ಲಿ ಯಾರ ಜತೆಗೂ, ಯಾವುದರ ಜತೆಗೂ ರಾಜಿ ಮಾಡಿಕೊಂಡಂತೆ ಕಾಣಲಿಲ್ಲ.

ಅವರು ಒಂದು ಸಾಧಾರಣ ಕುಟುಂಬದಲ್ಲಿ ಹುಟ್ಟಿದ್ದರು. ಅದೂ ದೂರದ ಪಾಕಿಸ್ತಾನದಲ್ಲಿ. ತಂದೆ ಪಾಕಿಸ್ತಾನದವರು, ತಾಯಿ ಆಫ್ಘಾನಿಸ್ತಾನ ದವರು. ಮೆಹ್ತಾ ಹುಟ್ಟಿದ್ದು ರಾವಲ್ಪಿಂಡಿಯಲ್ಲಿ. ದೇಶ ವಿಭಜನೆ ಸಮಯದಲ್ಲಿ ಅವರ ಕುಟುಂಬ ಲಖನೌಗೆ ವಲಸೆ ಬಂತು. ವಿನೋದ್‌ ಓದಿದ್ದು ಅದೇ ಊರಿನ ಲಾ ಮಾರ್ಟಿನೇರ್‌ ಕಾಲೇಜಿನಲ್ಲಿ. ಅವರಿಗೆ ಓದಿನಲ್ಲಿ ಆಸಕ್ತಿಯೇ ಇರಲಿಲ್ಲ. ಬಿ.ಎ ಪಾಸಾಗಿದ್ದು ಮೂರನೇ ದರ್ಜೆಯಲ್ಲಿ. ತಪ್ಪಿಲ್ಲದೇ ಇಂಗ್ಲಿಷ್‌ ಬರೆಯಲು ಅವರಿಗೆ ಆಗ ಬರುತ್ತಿರಲಿಲ್ಲ. ಪದವಿ ಮುಗಿಸಿದರೂ ಬೇರೆ ಏನೇನೂ ಓದಿರಲಿಲ್ಲ. ಪತ್ರಿಕೋದ್ಯಮಕ್ಕೆ ಈಗ ಬರುವ ಹುಡುಗ ಹುಡುಗಿಯರಿಗೆ ಮೆಹ್ತಾ ಬಹಳ ದೊಡ್ಡ ಮಾದರಿ ಎಂದು ನನಗೆ ಯಾವಾಗಲೂ ಅನಿಸಿದೆ. ಈಗಿನ ಬಹುತೇಕ ಹುಡುಗ ಹುಡುಗಿ ಯರಿಗೆ ಇಂಗ್ಲಿಷ್‌ ಬಹಳ ಕಷ್ಟ. ನೆಟ್ಟಗೆ  ಒಂದು ಸಾಲು ಮಾತನಾಡಲು ಬರುವುದಿಲ್ಲ. ಬರೆಯಲು ಬರುವು ದಿಲ್ಲ. ಆ ಅವಮಾನ ಅವರನ್ನು ನಿತ್ಯ ಕೊಲ್ಲುತ್ತ ಇರುತ್ತದೆ.  ಇಂಗ್ಲಿಷ್‌ ಬಿಡಿ, ಕನ್ನಡವೂ ಅವರಿಗೆ ಕಷ್ಟ ಕೊಡುತ್ತಿದೆ. ಆದರೆ, ಸ್ವಲ್ಪ ಶ್ರಮ ಪಟ್ಟರೆ ಯಾವುದೂ ಕಷ್ಟವಲ್ಲ ಎಂಬುದಕ್ಕೆ ಮತ್ತೆ ಮೆಹ್ತಾ  ಅವರೇ ನಿದರ್ಶನ.

ಬಿ.ಎ ಓದಿದ ನಂತರ ಎಂಟು ವರ್ಷಗಳ ಕಾಲ ಅವರು ಪತ್ರಿಕೆ ಓದಿರಲಿಲ್ಲ, ಟೀವಿ ನೋಡಿರಲಿಲ್ಲ. ಲೈಬ್ರರಿಗಳ ಕಡೆ ಮುಖ ಹಾಕಿರಲಿಲ್ಲ. ತಾನೇನು ಮಹಾ, ಅಮೆರಿಕದ ಅಧ್ಯಕ್ಷರೇ ಆಗಿದ್ದ ಕೆನಡಿ ಅವರಿಗೂ ಕಾಗುಣಿತದ ಸಮಸ್ಯೆ ಇತ್ತು ಎಂದು ಸಮಾಧಾನ ಮಾಡಿಕೊಂಡಿದ್ದವರು ಎಷ್ಟು ಚೆನ್ನಾಗಿ ಬರೆಯಲು ಕಲಿತರು! ಎಷ್ಟು ಚೆನ್ನಾಗಿ ಓದಿದರು! ನಮ್ಮ ಹುಡುಗ ಹುಡುಗಿಯರು ಕಷ್ಟಪಟ್ಟು ಉಪ ಸಂಪಾದಕನ ಹುದ್ದೆ ಹಿಡಿದರೆ, ಮೆಹ್ತಾ ಆರಂಭದಿಂದಲೇ ಸಂಪಾದಕ ಆದರು. ಅನೇಕ ಪ್ರಯೋಗ ಮಾಡಿದರು.

ಅವರಿಗೆ ಯಾರ ಬಗೆಗೂ ಗೌರವ ಇರಲಿಲ್ಲ. ಏಕೆಂದರೆ ಯಾರೂ ಪರಿಪೂರ್ಣರು ಎಂದು ಅವರಿಗೆ ಅನಿಸಿರಲಿಲ್ಲ. ಯಾರೂ ಪರಿಪೂರ್ಣರಲ್ಲ ಎಂದು ಅವರಿಗೆ ತಿಳಿಸಿದವರು ಪ್ರಖ್ಯಾತ ಲೇಖಕ ಡಾಂ ಮೊರೇಸ್‌. ಲಂಡನ್ನಿಗೆ ಹೋಗಿ ಆಗಿನ ಪ್ರಧಾನಿ ನೆಹರೂ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿ ಅವರು ದೊಡ್ಡ ಸುದ್ದಿಯಾಗಿದ್ದರು. ಮೆಹ್ತಾಗೆ ಅದು ಒಂದು ಪಾಠ ಕಲಿಸಿತು. ಎಲ್ಲರನ್ನೂ ಪ್ರಶ್ನಿಸು ಎಂದು. ತಮ್ಮನ್ನು ಪ್ರಶ್ನಿಸುವುದನ್ನೂ ಅವರು ಇಷ್ಟಪಡುತ್ತಿದ್ದರು.  ತಮ್ಮ ಮತ್ತು ಪತ್ರಿಕೆಯ ನಿಲುವನ್ನು ಟೀಕಿಸಿದ ಪತ್ರಗಳನ್ನು ಅವರು ಪ್ರಕಟಿಸಿದರು. ಬಹುಶಃ ಹಾಗೆ ಮಾಡಿದ ಮೊದಲ ಸಂಪಾದಕ ಅವರು. ಎಲ್ಲರನ್ನು ಟೀಕಿಸುವ ಅಥವಾ ಟೀಕಿಸುವ ಅಧಿಕಾರ ತನಗೆ ಇದೆ ಎಂದು ತಿಳಿದುಕೊಂಡ ಪತ್ರಕರ್ತರನ್ನು ಟೀಕಿಸುವ ಅಧಿಕಾರ ಓದುಗರಿಗೆ ಇದೆ ಎಂದು ನಮ್ಮನ್ನು ನಂಬಿಸಿದವರು ಅವರು. ಅವರ ಪತ್ರಿಕೆಯ ಅತ್ಯಂತ ಆಸಕ್ತಿಕರ ವಿಭಾಗ ಎಂದರೆ ಓದುಗರ ಪತ್ರಗಳದೇ ಆಗಿತ್ತು ಎಂಬುದು ಪತ್ರಿಕೋದ್ಯಮದಲ್ಲಿ ವಿರಳ ವಿದ್ಯಮಾನ.

ಎಲ್ಲರನ್ನು ಅಗೌರವದಿಂದ ಕಂಡ, ಎಲ್ಲರನ್ನು ಟೀಕಿಸಿದ, ಅಷ್ಟೇನು ಯಶಸ್ವಿ ಮತ್ತು ಪ್ರಮುಖವಲ್ಲದ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ ಮೆಹ್ತಾ ಸಾವು ಬಹಳ ದೊಡ್ಡ ಸುದ್ದಿಯಾಯಿತು. ಅವರ ಅಂತ್ಯಸಂಸ್ಕಾರದಲ್ಲಿ ಕಾಂಗ್ರೆಸ್ಸಿನವರ ಜತೆಗೆ ಬಿಜೆಪಿಯವರೂ ಭಾಗವಹಿ ಸಿದರು. ‘ಔಟ್‌ಲುಕ್‌’ ಪತ್ರಿಕೆಯಲ್ಲಿ ಯಾವಾಗಲೂ ಬರೆಯುತ್ತಿದ್ದ ಪ್ರಸಿದ್ಧ  ಲೇಖಕಿ ಅರುಂಧತಿ ರಾಯ್‌ ಒಂದು ಮಾತು ಹೇಳುತ್ತಿದ್ದರು : ಎಲ್ಲರ ಕಪಾಟಿನಿಂದ ತಲೆಬುರುಡೆಗಳನ್ನು ಎಳೆದು ತೆಗೆಯುವ ಪತ್ರಕರ್ತನ ಕಪಾಟಿನಲ್ಲಿ ಯಾವ ತಲೆಬುರುಡೆಗಳೂ ಇರಬಾರದು ಎಂದು. ಮೆಹ್ತಾ ಅವರ ಕಪಾಟಿನಲ್ಲಿ ತಲೆಬುರುಡೆಗಳು ಇರಲಿಲ್ಲವೇ? ಅವರ ಕುರಿತು ಅವರ ಸಮಕಾಲೀನರಿಗೆ ಇದ್ದ ಅಸೂಯೆ ಮತ್ತು ನಮ್ಮಂಥ ಮಧ್ಯವಯಸ್ಕರು ಅವರ ಕುರಿತು ಹೊಂದಿದ್ದ ಪ್ರೀತಿ ನೋಡಿದರೆ ಇರಲಾರವು ಎಂದು ಅನಿಸುತ್ತದೆ. ಸಾವಿನ ಮನೆ ಪ್ರವೇಶಿಸಿದ ಒಬ್ಬ ಪತ್ರಕರ್ತನ ಕುರಿತು ಇದಕ್ಕಿಂತ ಹೆಚ್ಚಿಗೆ ಏನು ಒಳ್ಳೆಯದನ್ನು ಹೇಳಲು ಸಾಧ್ಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT