ನಮಗೆ ಬದುಕಿನ ಪಾಠಗಳು ಎಲ್ಲಿ ದೊರೆಯುತ್ತವೆ ಎಂಬುದನ್ನು ಹೇಳುವುದು ಕಷ್ಟ. ಕೆಲವೊಂದು ಬಾರಿ ನಾವು ಕಲ್ಪಿಸಲೂ ಅಸಾಧ್ಯವಿದ್ದ ಸ್ಥಳಗಳಲ್ಲಿ, ಅಸಾಮಾನ್ಯ ಸಂದರ್ಭಗಳಲ್ಲಿ, ಥಟ್ಟನೇ ಎದ್ದು ನಮ್ಮ ಮುಂದೆ ನಿಲ್ಲುತ್ತವೆ ಅಪೂರ್ವ ದರ್ಶನಗಳು. ಅವುಗಳನ್ನು ನೋಡುವ ಪ್ರೀತಿಯ ಕಣ್ಣುಗಳನ್ನು, ತೆರೆದ ಮನಸ್ಸುಗಳನ್ನು ಹೊಂದಿದ್ದರೆ ದಿನದಿನವೂ ಅಂಥ ಘಟನೆಗಳು ಜೀವನಕ್ಕೆ ಬುತ್ತಿಯನ್ನು ನೀಡಿಯಾವು. ಇತ್ತೀಚಿಗೆ ಇಡೀ ವಿಶ್ವವೇ ಕಣ್ಣೊಂದೆಯಾಗಿ ನೋಡಿದ್ದು ಫುಟ್‌ಬಾಲ್ ವಿಶ್ವಕಪ್ ಆಟಗಳನ್ನು. ಭಾರತದಲ್ಲಿಯೂ ರಾತ್ರಿಯೆಲ್ಲ ಬೆಳಗಾಗಿ, ತರುಣ ತರುಣಿಯರೆಲ್ಲ ನಿಶಾಚರರಾಗಿ ಸಂಭ್ರಮಿಸಿದ್ದು ಇನ್ನೂ ಹಸಿರಾಗಿದೆ. ಆ ಆಟಗಾರರ ಛಲ, ಪರಿಶ್ರಮ, ಗೋಲು ಹೊಡೆದಾಗ ಅವರ ಮುಖದಲ್ಲಿ ಉಕ್ಕಿ ಬಂದ ಸಂತೋಷದ ಬುಗ್ಗೆ, ಸೋತಾಗ ಕಂಡ ಹತಾಶೆಯ ಭಾವನೆ, ಸಹಸ್ರಾರು ಸಂಖ್ಯೆಯಲ್ಲಿ ತಮ್ಮ ನೆಚ್ಚಿನ ಆಟಗಾರರು ತೋರಲಿರುವ ಅದ್ಭುತ ಕಾಲ್ಚೆಳಕವನ್ನು ನೋಡಲು ಬಂದಿದ್ದ ಪ್ರೇಕ್ಷಕರ ಹೋ, ಹೋ, ಅಯ್ಯೋಗಳು ನಮ್ಮೆಲ್ಲರ ಮನಸ್ಸನ್ನು ಮುದಗೊಳಿಸಿದವು, ತಟ್ಟಿದವು.

ಇವೆಲ್ಲ ಕೋಲಾಹಲಗಳ ನಡುವೆ ಒಂದು ಘಟನೆ ಜರುಗಿತು. ಅದನ್ನು ಎಷ್ಟು ಜನ ಗಮನಿಸಿದರೋ ಇಲ್ಲವೋ ತಿಳಿಯದು. ನನಗಂತೂ ಅದೊಂದು ದೊಡ್ಡ ಪಾಠವವೆನ್ನಿಸಿತು. ಅದು ಒಂದು ದೇಶ ಇಡೀ ಪ್ರಪಂಚಕ್ಕೆ ನೀಡಿದ ನೀತಿಪಾಠ. ಈ ವಿಶ್ವಕಪ್‌ನಲ್ಲಿ ಗ್ರೀಸ್ ದೇಶ ಮತ್ತು ಜಪಾನ್ ದೇಶದ ನಡುವೆ ಆಟ ನಡೆಯಿತು. ಅದನ್ನು ನೋಡಲೆಂದೇ ಸುಮಾರು ಹದಿನೈದು ಸಾವಿರ ಜನ ಜಪಾನೀಯರು ಬ್ರೆಜಿಲ್‌ಗೆ ಬಂದಿದ್ದರು. ಆಟ ನಡೆದದ್ದು ಪೆರ್ನಾಬುಕಾ ಮೈದಾನದಲ್ಲಿ. ಆಟ ಮುಗಿದಾಗ ಗ್ರೀಸ್ ಗೆದ್ದಿತ್ತು. ಜಪಾನೀ ಪ್ರೇಕ್ಷಕರಿಗೆ ನಿರಾಸೆಯಾದದ್ದು ತಪ್ಪಲ್ಲ. ಆದರೆ ನಿಜವಾಗಿಯೂ ಅದ್ಭುತ ನಡೆದದ್ದು ಆಟ ಮುಗಿದ ಮೇಲೆ. ಮೈದಾನದಲ್ಲಿ ಆಟಗಾರರೆಲ್ಲ ಸಾಲಾಗಿ ನಿಂತು ತಮ್ಮನ್ನು ಪ್ರೋತ್ಸಾಹಿಸಿದ ಪ್ರೇಕ್ಷಕರಿಗೆಲ್ಲ ತಲೆಬಾಗಿ ವಂದಿಸಿದರು. ಆಗ ಹನಿ ಹನಿ ಮಳೆಯಾಗುತ್ತಿತ್ತು. ಜಪಾನಿನ ಆಟಗಾರರು ಮೈಮೇಲೆ ರೇನ್‌ಕೋಟ್ ಹಾಕಿಕೊಂಡು ಮೈದಾನದ ಸುತ್ತಮುತ್ತ ಬಿದ್ದಿದ್ದ ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬ ತೊಡಗಿದರು.

ಅವರಷ್ಟೇ ಅಲ್ಲ, ಹದಿನೈದು ಸಾವಿರ ಜಪಾನೀ ಪ್ರೇಕ್ಷಕರೂ ರೇನ್‌ಕೋಟ್‌ಗಳನ್ನು ಹಾಕಿಕೊಂಡು ಕೈಗಳಲ್ಲಿ ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಗ್ಯಾಲರಿಗಳಲ್ಲಿ ಬಿದ್ದಿದ್ದ ಕಸವನ್ನು ತುಂಬತೊಡಗಿದರು. ಅದನ್ನು ನೋಡುತ್ತಿದ್ದವರಿಗೆ ಇದೊಂದು ಪವಾಡ. ಸಾಮಾನ್ಯವಾಗಿ ಆಟ ಮುಗಿದಾಗ ಮೈದಾನ ರಣಾಂಗಣವಾಗಿರುತ್ತದೆ. ಬೆಂಚುಗಳನ್ನು ಮುರಿಯುತ್ತಾರೆ, ಹೊಡೆದಾಡುತ್ತಾರೆ. ಯಾರಿಗೂ ತಮಗೆ ಸಂತೋಷ ನೀಡಿದ ಆ ಮೈದಾನ ಮತ್ತು ಸ್ಟೇಡಿಯಂ ಬಗ್ಗೆ ಕಾಳಜಿ ತೋರಬೇಕೆಂಬುದು ಹೊಳೆಯುವುದಿಲ್ಲ. ಆದರೆ ಜಪಾನಿನ ಪ್ರೇಕ್ಷಕರು ಹಾಗೂ ಆಟಗಾರರು ಜೊತೆಯಾಗಿ ಇಡೀ ಮೈದಾನ ಸ್ವಚ್ಛಮಾಡಿದರು.

ಹೀಗೇಕೆ ಮಾಡುತ್ತೀರಿ ಎಂದು ಒಬ್ಬ ವರದಿಗಾರ ಕೇಳಿದಾಗ ಜಪಾನಿನ ಫುಟ್‌ಬಾಲ್ ಅಭಿಮಾನಿಯೊಬ್ಬ ಹೇಳಿದ, ‘ನಮ್ಮ ದೇಶದಲ್ಲಿ ನಾವು ಕೊಳಕು ಮಾಡುವುದನ್ನು ಇಷ್ಟಪಡುವುದಿಲ್ಲ. ಸಂಗೀತ ಕಛೇರಿಗಳಲ್ಲಿ, ಹೋಟೆಲ್ಲುಗಳಲ್ಲಿ ನಾವು ಸೃಷ್ಟಿಸಿದ ಕೊಳೆಯನ್ನು ನಾವೇ ತೆಗೆಯುತ್ತೇವೆ. ದಾರಿಯಲ್ಲಿ ಕಸಕಂಡರೂ ನಾವೇ ತೆಗೆದು ಹಾಕುತ್ತೇವೆ. ಏಕೆಂದರೆ ಅದು ನಮ್ಮ ದೇಶ. ಅಲ್ಲಿ ಕೊಳಕು ಕಂಡರೆ ನಮಗೆ ಅಪಮಾನ. ಬ್ರೆಜಿಲ್ ದೇಶ ನಮಗೆ ಈ ಸುಂದರ ಆಟವನ್ನು ನೋಡಲು ಅವಕಾಶ ಮಾಡಿಕೊಟ್ಟಿದೆ, ಅದ್ಭುತ ಮೈದಾನವನ್ನು ಕಟ್ಟಿದೆ. ಆದ್ದರಿಂದ ನಾವು ಮಾಡುವ ಸ್ವಚ್ಛತೆ ಈ ದೇಶಕ್ಕೆ ನಾವು ನೀಡುವ ಅಲ್ಪ ಋಣಸಂದಾಯ’. ಬ್ರೆಜಿಲ್ ದೇಶದ ನಾಯಕರು ಹೇಳಿದರು, ‘ನಮಗೆ ಫುಟ್‌ಬಾಲ್ ಆಟದಿಂದ ಅದೆಷ್ಟು ಪಾಠ ದೊರೆಯಿತೋ ತಿಳಿಯದು. ಆದರೆ, ಈ ಜಪಾನಿ ಆಟಗಾರರು, ಪ್ರೇಕ್ಷಕರಿಂದ ನಮ್ಮ ದೇಶಕ್ಕೆ ಸಾಮಾಜಿಕ ಜೀವನದ ಬಗ್ಗೆ ಬಹುದೊಡ್ಡ ಪಾಠ ದೊರಕಿದೆ’. ತಾವು ಸಂದರ್ಶಿಸಿದ ದೇಶದ ಸ್ವಚ್ಛತೆ, ಸುಂದರತೆಯ ಬಗ್ಗೆ ಶ್ರಮಿಸುವ ಜೀವನ ವಿಧಾನಕ್ಕೂ ನಮ್ಮೂರಿನ, ನಮ್ಮ ಮನೆಯ ಸ್ವಚ್ಛತೆಯ ಬಗ್ಗೆ ಉಪೇಕ್ಷೆ ತೋರುವ ನಮ್ಮ ವಿಧಾನಕ್ಕೂ ತಾಳೆ ಹಾಕಿದಾಗ ನಾವು ಸಾಗಬೇಕಾದ ದಾರಿ ಬಹುದೂರ ಇದೆ ಎನ್ನಿಸದಿರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.