ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾಶಾಸ್ತ್ರದ ಶೈಕ್ಷಣಿಕ ಆಯಾಮ

Last Updated 26 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ಭಾಷಾಶಾಸ್ತ್ರ (ಲಿಂಗ್ವಿಸ್ಟಿಕ್‌) ಕೇವಲ ನುಡಿ ಬಗೆಗಿನ ತಿಳಿವು ಮಾತ್ರವಲ್ಲ, ಅದು ಬದುಕಿನ ವಿಭಿನ್ನ ನೆಲೆಗಳಿಗೆ ಸಂಬಂಧಿಸಿದ ವಿದ್ಯಮಾನ. ಶಿಕ್ಷಣಶಾಸ್ತ್ರ, ಸಾಹಿತ್ಯ ವಿಮರ್ಶೆ, ಸಮಾಜಶಾಸ್ತ್ರ, ಸಂಸ್ಕೃತಿ ಅಧ್ಯಯನ, ವಿಜ್ಞಾನ, ತಂತ್ರಜ್ಞಾನ, ಮನೋವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್, ವಿದೇಶಿ ಭಾಷಾ ಅಧ್ಯಯನ, ನರವಿಜ್ಞಾನ, ತತ್ವಶಾಸ್ತ್ರ, ಅಪರಾಧಶಾಸ್ತ್ರ, ವಂಶಾವಳಿಶಾಸ್ತ್ರ, ವಾಕ್ ಮತ್ತ ಶ್ರವಣ ವಿಜ್ಞಾನ ಮೊದಲಾದ ಅಧ್ಯಯನ ವಿಷಯಗಳೊಂದಿಗೆ ಭಾಷಾಶಾಸ್ತ್ರ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ.

ಭಾಷಾಶಾಸ್ತ್ರ ಈ ವಿಭಿನ್ನ ಆಯಾಮಗಳಿಂದ ಜಗತ್ತಿನಾದ್ಯಂತ ಮಹತ್ವವನ್ನು ಪಡೆದಿದೆ. ಇದರಿಂದ ಭಾಷಾಕೇಂದ್ರಿತ ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳು ಅತ್ಯಂತ ವ್ಯಾಪಕವಾಗಿ ಇವತ್ತು ತಲೆಯೆತ್ತಿವೆ.

ಬದುಕಿನ ಕೌಶಲಗಳ ಮೂಲಧಾತು
ಭಾಷಾಶಾಸ್ತ್ರೀಯ ತಿಳಿವು ಹಲವು ಬಗೆಯ ಉದ್ಯೋಗ ಮತ್ತು ವೃತ್ತಿಜೀವನಕ್ಕೆ ಅಡಿಪಾಯ ಎನ್ನಬಹುದು. ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ವಾದಮಂಡನೆ, ವಿಮರ್ಶಾತ್ಮಕ ಚಿಂತನೆ, ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆ ಹಾಗೂ ಮೌಖಿಕ-ಲಿಖಿತ ಅಭಿವ್ಯಕ್ತಿಗಳ ವಿಶ್ಲೇಷಣೆ ಮೊದಲಾದ ವಿಶೇಷ ಕೌಶಲಗಳನ್ನು ಬಲಪಡಿಸುವಲ್ಲಿ ಭಾಷಾಶಾಸ್ತ್ರವು ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿರುತ್ತದೆ.

ಅಷ್ಟೇ ಅಲ್ಲ, ಭಾಷಾಶಾಸ್ತ್ರ ವಿದ್ಯಾರ್ಥಿಗಳು ಅನೇಕ ವಿಭಿನ್ನ ಭಾಷೆ ಮತ್ತು ಸಂಸ್ಕೃತಿಗಳೊಂದಿಗೆ ವಿಶಿಷ್ಟವಾದ ಒಡನಾಟವನ್ನು ಬೆಳೆಸಿಕೊಳ್ಳಲು ಸಾಧ್ಯ. ಪರಿಣಾಮವಾಗಿ, ವಿಭಿನ್ನ ಸಾಂಸ್ಕೃತಿಕ ಕೌಶಲಗಳನ್ನು ಪಡೆಯಲೂ ಇದು ಅನುವಾಗುತ್ತದೆ.

ಈ ಎಲ್ಲ ಕೌಶಲಗಳು ಪ್ರತಿಯೊಂದು ವೃತ್ತಿಯಲ್ಲಿಯೂ ಹಲವು ಬಗೆಯಲ್ಲಿ ನಮಗೆ ಸಹಾಯಕ್ಕೆ ಬರುತ್ತವೆ. ಮೇಲ್ನೋಟಕ್ಕೆ ಈ ಕೌಶಲಗಳೆಲ್ಲವೂ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಾಣುವುದಿಲ್ಲ. ಆದರೆ ಭಾಷಾಶಾಸ್ತ್ರದ ಓದಿನಿಂದಲೇ ಇಂತಹ ಎಲ್ಲ ಚಳಕಗಳು ನಮ್ಮಲ್ಲಿ ಏರ್ಪಡುತ್ತವೆ ಎಂಬುದು ಗಮನಾರ್ಹ.

ಅಧ್ಯಯನ ಮತ್ತು ಕೌಶಲಗಳು
ಭಾಷೆಯ ಪ್ರಮುಖ ಅಂಶಗಳ ರಚನೆ ಮತ್ತು ಬಳಕೆಯ ಆಳವಾದ ಜ್ಞಾನವನ್ನು ಸಹಜವಾಗಿಯೇ ಪಡೆಯಬಹುದು.

ಭಾಷಾ ದತ್ತಾಂಶವನ್ನು ವಿಶ್ಲೇಷಿಸುವ ಹಾಗೂ ಭಾಷೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬಹುದು.

ಯಾವುದೇ ಬಗೆಯ ಸಮಸ್ಯೆಯನ್ನು ವಿಮರ್ಶಾತ್ಮಕ ನೋಟದಿಂದ ವಿಶ್ಲೇಷಿಸುವ ಮತ್ತು ಈ ಸಾಮರ್ಥ್ಯವನ್ನು ಬೇರೊಂದು ಸನ್ನಿವೇಶಕ್ಕೆ ಅನ್ವಯಿಸುವ ಹಾಗೂ ರೂಪಾಂತರಿಸುವ ಕಸುವು ನಮ್ಮಲ್ಲಿ ನೆಲೆಗೊಳ್ಳುತ್ತದೆ.

ಪರಿಮಾಣಾತ್ಮಕ ಮತ್ತು ಗುಣಾತ್ಮಕ ದತ್ತಾಂಶಗಳ ಸಂಗ್ರಹ ಹಾಗೂ ವಿಶ್ಲೇಷಣೆಯೊಂದಿಗೆ, ಯಾವುದೇ ದತ್ತಾಂಶದ ರಚನಾತ್ಮಕ ವಿಶ್ಲೇಷಣೆ ಮಾಡುವ ಪ್ರಾಯೋಗಿಕ ಜಾಣ್ಮೆ ಬೆಳೆಯುತ್ತದೆ.

ಭಾಷೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಸಂವಹನದಲ್ಲಿ ಅಡಕವಾಗಿರುವ ಎಂತಹದೇ ಬಿಕ್ಕಟ್ಟು ಇಲ್ಲವೇ ಸಮಸ್ಯೆಯನ್ನು ಕೂಲಂಕಷವಾಗಿ ಬಿಡಿಸಿ ನೋಡುವ ತಿಳಿವಳಿಕೆ ರೂಪುಗೊಳ್ಳುತ್ತದೆ.

ಅನುಭವ ಮತ್ತು ಕೌಶಲಗಳ ಸಹಯೋಗದಿಂದ ಸಮಸ್ಯೆಗಳನ್ನು ಬಗೆಹರಿಸುವ ಮಾನಸಿಕ-ಸಾಮಾಜಿಕ ವಾತಾವರಣವು ನಿರ್ಮಾಣಗೊಳ್ಳುತ್ತದೆ.

ಭಾಷಾವೈಜ್ಞಾನಿಕ ತಿಳಿವು ವೈಚಾರಿಕ ಮನೋಭಾವನೆಗೆ ದಾರಿಯಾಗುತ್ತದೆ. ಅಂತರ್-ಸಾಂಸ್ಕೃತಿಕ ಸಂವಹನ ಸಾಧ್ಯತೆ ಜಾಸ್ತಿಯಾಗುತ್ತದೆ.

ಭಾಷೆಗಳನ್ನು ವಿಶ್ಲೇಷಿಸಲು ಬೇಕಾದ ಜ್ಞಾನ ಮತ್ತು ಕೌಶಲಗಳ ಬೇಡಿಕೆ ಹಿಂದೆಂದಿಗಿಂತಲೂ ಇವತ್ತು ಅತ್ಯಂತ ಜರೂರಿನದಾಗಿದೆ. ಆಧುನಿಕ ಸಮಾಜವು ಎದುರಿಸುತ್ತಿರುವ ಅನೇಕ ಭಾಷಾ ಸಂಬಂಧಿ ಸಮಸ್ಯೆಗಳನ್ನು ನಿಭಾಯಿಸಲು ಭಾಷಾಶಾಸ್ತ್ರ ಹಾಗೂ ಅನ್ವಯಿಕ ಭಾಷಾಶಾಸ್ತ್ರದ ಅಧ್ಯಯನ ತೀರಾ ಅವಶ್ಯವಾಗಿದೆ.

ಸಮಸ್ಯೆ ಬಗೆಹರಿಸುವ, ವಿಶ್ಲೇಷಣಾತ್ಮಕ ಚಿಂತನೆಯ ಕೌಶಲಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಉದ್ಯೋಗವನ್ನು ಹೊಂದುವುದು ಅತ್ಯಂತ ಸುಲಭ. ಭಾಷಿಕ ಸಂಬಂಧಿತ ಈ ಜ್ಞಾನವನ್ನು ಬೇರೊಂದು ಕ್ಷೇತ್ರಕ್ಕೆ ವರ್ಗಾಯಿಸಿಕೊಳ್ಳುವ ಜಾಣ್ಮೆಯನ್ನು ಅವರು ಪಡೆದಿರುತ್ತಾರೆ. ಭಾಷಾಶಾಸ್ತ್ರದ ವ್ಯಾಪ್ತಿಯಾಚೆಗೂ ಯಾವುದೇ ಉದ್ಯೋಗವನ್ನು ಪಡೆಯುವುದು ಭಾಷಾಶಾಸ್ತ್ರದ ಓದಿನಿಂದ ಸಾಧ್ಯ.

ಭಾಷಾ ಬೋಧನೆ ಮತ್ತು ಕಲಿಕೆ
ಭಾಷಾ ಬೋಧನೆ-ಕಲಿಕೆಗೆ ಪೂರಕವಾಗಿ ಭಾಷಾಶಾಸ್ತ್ರ ಹಲವು ಬಗೆಯಲ್ಲಿ ನೆರವಿಗೆ ಬರುತ್ತದೆ. ವಿಶೇಷವಾಗಿ ವಿದೇಶಿ ಭಾಷಾ ಬೋಧನೆ ಮತ್ತು ಇಂಗ್ಲಿಷನ್ನು ಮೊದಲ/ಎರಡನೇ ಇಲ್ಲವೇ ಮೂರನೆಯ ಭಾಷೆಯನ್ನಾಗಿ ಕಲಿಸಲು ಮತ್ತು ಕಲಿಕಾ-ಬೋಧನಾ ಸಾಮಗ್ರಿಗಳನ್ನು ರೂಪಿಸಲು ಒತ್ತಾಸೆಯಾಗುತ್ತದೆ. ಒಟ್ಟಾರೆ ಸಾಕ್ಷರತೆಯ ಬೆಳವಣಿಗೆಗೆ ಭಾಷಾಶಾಸ್ತ್ರ ಮೂಲಧಾತುವಾಗಿದೆ. ಬಹುಭಾಷಿಕ/ ಬಹುಸಾಂಸ್ಕೃತಿಕ ಸನ್ನಿವೇಶದಲ್ಲಿ ಶೈಕ್ಷಣಿಕ ನೀತಿ, ಪಠ್ಯಕ್ರಮ ಹಾಗೂ ಕಾರ‍್ಯಯೋಜನೆಗಳನ್ನು ನೆಲೆಗೊಳಿಸಲು ಭಾಷಾವೈಜ್ಞಾನಿಕ ತಿಳಿವು ವಿಶೇಷವಾಗಿ ನೆರವಿಗೆ ಬರುತ್ತದೆ. ಆನ್‌ಲೈನ್ ಕಲಿಕೆ ಮತ್ತು ಬೋಧನೆಗೆ ಅವಶ್ಯಕ ಸಾಮಗ್ರಿಗಳನ್ನು ರೂಪಿಸುವುದು ಈ ತಿಳಿವಿನಿಂದ ಸುಲಭ. ಟಿಇಎಸ್‌ಒಎಲ್ ಅಥವಾ ಇಎಸ್‌ಎಲ್ ತರಬೇತಿದಾರರನ್ನು ಸಜ್ಜುಗೊಳಿಸಲು ಭಾಷಾಶಾಸ್ತ್ರದ ನೆರವು ಅನಿವಾರ್ಯ.

ಉದ್ಯೋಗಾವಕಾಶಗಳನ್ನು ರೂಪಿಸಿಕೊಳ್ಳುವ ಜಾಣ್ಮೆ
ಭಾಷಾಶಾಸ್ತ್ರ ಪದವೀಧರರು ಮಾರ್ಕೆಟಿಂಗ್‌ನಿಂದ ಶುರುವಾಗಿ ಪ್ರಕಾಶನದವರೆಗೆ ಹಾಗೂ ಉಚ್ಚಾರದ ತರಬೇತಿದಾರರಿಂದ ಹಿಡಿದು ವಾಕ್-ಶ್ರವಣ ದೋಷ ನಿವಾರಣ ಚಿಕಿತ್ಸಕರಾಗಿ ಕೆಲಸ ಮಾಡಲು ಸಾಧ್ಯ. ಡಿಜಿಟಲ್ ಕಾಪಿ ರೈಟರ್, ಪಬ್ಲಿಷಿಂಗ್ ಕಾಪಿ ಎಡಿಟರ್, ನಿಘಂಟು ರಚನಾಕಾರರು, ಆಡಿಯೊಲಜಿಸ್ಟ್, ಪ್ರೂಫ್ ರೀಡರ್, ಅನುವಾದಕ, ಕಂಟೆಂಟ್ ರೈಟರ್, ಲಾಂಗ್ವೇಜ್ ಇಂಟರ್‌ಪ್ರೀಟರ್ ಇತ್ಯಾದಿ ಉದ್ಯೋಗಗಳು ಲಭ್ಯ.

ಇಲ್ಲಿ ಪಟ್ಟಿ ಮಾಡಿದ ಅವಕಾಶಗಳಿಗೆ ಮಾತ್ರ ನಮ್ಮ ಚಿಂತನೆಗಳನ್ನು ಸೀಮಿತಗೊಳಿಸುವ ಅಗತ್ಯವಿಲ್ಲ. ಭಾಷಾಶಾಸ್ತ್ರದ ವಿದ್ಯಾರ್ಥಿಗಳ ಅನುಭವದ ಆಧಾರದ ಮೇಲೆ ಇತರ ಸಾಕಷ್ಟು ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಡೆಯಬಹುದು. ಅವುಗಳನ್ನು ಪಡೆಯುವ ಛಲ ನಮ್ಮದಾಗಬೇಕು.

ಮಾಹಿತಿ ತಂತ್ರಜ್ಞಾನ ಮತ್ತು ಭಾಷಾಶಾಸ್ತ್ರ
ಕಂಪ್ಯೂಟರ್ ವಿಜ್ಞಾನ ಮತ್ತು ಭಾಷಾಶಾಸ್ತ್ರಗಳ ಸಹಯೋಗದಿಂದ ಸಾಕಷ್ಟು ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳು ರೂಪುಗೊಂಡಿವೆ. ಉದಾ: ನೈಸರ್ಗಿಕ ಭಾಷಾ ಸಂಸ್ಕರಣೆ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್), ಮಾತಿನ ಗುರುತಿಸುವಿಕೆ (ಸ್ಪೀಚ್ ರೆಕಗ್ನಿಶನ್), ಮಾತಿನ ಸಂಶ್ಲೇಷಣೆ (ಸ್ಪೀಚ್ ಸಿಂಥಸಿಸ್), ರೀಡೇಬಲ್ ಡಿಕ್ಷನರಿ, ಆನ್‌ಲೈನ್ ಅನುವಾದ, ಕಂಟೆಂಟ್ ರೈಟಿಂಗ್ ಮೊದಲಾದವುಗಳನ್ನು ಹೆಸರಿಸಬಹುದು.

ಆನ್‌ಲೈನ್ ಅನುವಾದಕ್ಕೆ ಅನುವಾಗುವ ಡೇಟಾಬೇಸ್ ಇಲ್ಲವೇ ಪದಕೋಶ ಅಭಿವೃದ್ಧಿ (ಲೆಕ್ಸಿಕಾನ್ ಡೆವಲಪ್‌ಮೆಂಟ್‌) ಹಾಗೂ ಭಾಷಾ ಕಣಜವನ್ನು ನಿರ್ಮಿಸುವುದಕ್ಕೆ ಭಾಷಾಶಾಸ್ತ್ರದ ತಿಳಿವು ಅತ್ಯವಶ್ಯ. ಚಲನಚಿತ್ರಗಳಿಗೆ ಸಬ್‌ಟೈಟಲ್‌ಗಳನ್ನು ಒದಗಿಸುವ, ಉಚ್ಚಾರಣೆಗೆ ನೆರವು ನೀಡುವ ಮತ್ತು ಧ್ವನಿ ವಿಶ್ಲೇಷಣೆಗೆ, ಫೋರೆನ್ಸಿಕ್ ವಿಶ್ಲೇಷಣೆಗೆ ಅನಕೂಲವಾಗುವ ತಂತ್ರಾಂಶಗಳ ಬೆಳವಣಿಗೆ, ಪ್ರೂಫ್‌ ರೀಡರ್, ಕಾಗುಣಿತ ಮತ್ತು ವ್ಯಾಕರಣ ಪರಿಶೀಲಕ ಹಾಗೂ ಸಮಾನಾರ್ಥ ಸೂಚಿಸುವ ಪದಕೋಶಗಳನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸುವುದಕ್ಕೆ ಭಾಷಾಶಾಸ್ತ್ರದ ಪ್ರಾಯೋಗಿಕತೆ ಅತ್ಯವಶ್ಯವಾಗಿ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT