ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಶಕ್ತಿಗೆ ಶಿಸ್ತೇ ಸಾಣೆ

Last Updated 12 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಅರ್ಧವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿದೆ. ಮಕ್ಕಳು ನೆನಪಿನ ಶಕ್ತಿಯನ್ನು ಕುರಿತಾಗಿ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಇದು ಸಕಾಲ. ಈ ನಿಟ್ಟಿನಲ್ಲಿ ಮೊಟ್ಟಮೊದಲು ಅರಿಯಬೇಕಾಗಿರುವುದು ಏನೆಂದರೆ ‘ನೆನಪಿನ ಶಕ್ತಿಯನ್ನು ಹೆಚ್ಚಿಸಲು ಯಾವುದೇ ಔಷಧಗಳಿಲ್ಲ. ಮಾತ್ರೆ, ಟಾನಿಕ್‌, ಭಸ್ಮ ಯಾವುದರಿಂದಲೂ ಆ ಶಕ್ತಿ ಹೆಚ್ಚುವುದಿಲ್ಲ’ ಎಂಬ ವೈದ್ಯಕೀಯ ಸತ್ಯವನ್ನು.

ಕಲಿತದ್ದನ್ನು, ಅನುಭವಿಸಿದ್ದನ್ನು ಸಂಗ್ರಹಿಸಿಡುವುದು ಸ್ಮೃತಿ ಅಥವಾ ಜ್ಞಾಪಕಶಕ್ತಿ, ಸ್ಮರಣೆ, ನೆನಪಿನ ಶಕ್ತಿ – ಇವನ್ನೆಲ್ಲ ಸ್ಮೃತಿಗೆ ಪರ್ಯಾಯಪದಗಳಾಗಿ ಬಳಸಲಾಗುತ್ತದೆ. ಇಂದ್ರಿಯಗಳ ಮೂಲಕ ನಾವು ಪಡೆಯುವ ಅನುಭವಗಳೆಲ್ಲ ಸ್ಮೃತಿಯಲ್ಲಿ ದಾಖಲಾಗುತ್ತವೆ. ಮನುಷ್ಯನ ಉತ್ತಮ ಜೀವನಕ್ಕೆ ಸಮರ್ಥ ನೆನಪಿನ ಶಕ್ತಿ ಅತ್ಯಗತ್ಯ. ಮೆದುಳಿನಲ್ಲಿರುವ ಸ್ಮೃತಿಯ ‘ಉಗ್ರಾಣ’ದಲ್ಲಿ ಕಂಪ್ಯೂಟರ್‌ಗಿಂತಲೂ ಹೆಚ್ಚಿನ ವಿಷಯಗಳನ್ನು ಶೇಖರಿಸಬಹುದು; ಈ ಸಾಮರ್ಥ್ಯಕ್ಕೆ ಮಿತಿಯಿಲ್ಲ. ಸ್ಮೃತಿಯು ಕಲಿಕೆ-ಧಾರಣೆ-ಪುನಃಸ್ಮರಣೆ-ಗುರುತಿಸುವಿಕೆ – ಈ ಹಂತಗಳಲ್ಲಿ ಸಾಗುತ್ತದೆ. ಕಲಿಕೆಯು ಮುಂದೆ ಸಾಗಲು ಹಿಂದೆ ಕಲಿತದ್ದರ ನೆನಪು ಅತ್ಯವಶ್ಯಕ. ಕಲಿಕೆ ಮತ್ತು ಸ್ಮೃತಿ ಪರಸ್ಪರ ಪೂರಕಶಕ್ತಿಗಳು.

ಮೊದಲು ಗುರುತಿಸುವಿಕೆ, ಅನಂತರ ಅರ್ಥದ ಗ್ರಹಿಕೆ – ಹೀಗೆ ನೆನಪು ಸಂಗ್ರಹಗೊಳ್ಳುತ್ತದೆ. ನಾವು ಒಂದು ವಸ್ತುವನ್ನು ತಪ್ಪಾಗಿ ಅರ್ಥೈಸಿಕೊಂಡರೆ ಅದು ಹಾಗೆಯೇ ದಾಖಲಾಗುತ್ತದೆ. ಆದ್ದರಿಂದ ಕಲಿಯುವ ಮೊದಲು ಮಾಹಿತಿಯ ಖಚಿತತೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಯಾವುದೇ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಾಗ ನಮ್ಮ ಮೆದುಳಿನಲ್ಲಿ ಕೆಲವು ಭೌತಿಕ ಬದಲಾವಣೆಗಳಾಗುತ್ತವೆ. ಮೆದುಳಿನಲ್ಲಿ ನೆನಪು ಉಳಿಯಲು ಮಾನಸಿಕ ಅಂಶಗಳು ಸಹ ಕಾರಣವಾಗುತ್ತವೆ. ಕಲಿಯುವ ವಿಷಯ/ಚಟುವಟಿಕೆ, ಸಮಯ, ಎಷ್ಟು ಬಾರಿ ಪುನರಾವರ್ತನೆ ಮಾಡಲಾಯಿತು, ಕಲಿಯುವವರ ಧೋರಣೆ, ವಯಸ್ಸು, ಆಸಕ್ತಿ, ಪ್ರೇರಣೆ – ಈ ಎಲ್ಲ ಅಂಶಗಳು ನೆನಪನ್ನು ಪ್ರಭಾವಿಸುತ್ತವೆ.

ವಿದ್ಯಾರ್ಥಿಗಳು ಎದುರಿಸುವ ಅತಿದೊಡ್ಡ ಸಮಸ್ಯೆ ನೆನಪಿನ ಶಕ್ತಿಯ ಕೊರತೆ. ‘ರಾತ್ರಿ ಓದಿದ್ದು ಬೆಳಿಗ್ಗೆ ನೆನಪಿರುವುದಿಲ್ಲ, ಶಾಲೆಯಲ್ಲಿ ಕಲಿತದ್ದು ರಾತ್ರಿ ನೆನಪಿಗೆ ಬರುವುದಿಲ್ಲ.’ ಈ ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಿರುತ್ತಾರೆ. ವಿದ್ಯಾರ್ಥಿಗಳ ಸ್ಮೃತಿ ಅಥವಾ ನೆನಪಿನ ಶಕ್ತಿಯ ವೈಫಲ್ಯಕ್ಕೆ ಕಾರಣಗಳಾಗಿರುವ ಸಾಮಾನ್ಯ ಸಂಗತಿಗಳು:

* ಅಧ್ಯಯನ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ (ಚಿಂತೆ, ಆತಂಕ, ಆಯಾಸ, ಕ್ಷೋಭೆ) ಏಕಾಗ್ರತೆಯ ಕೊರತೆ, ಆಸಕ್ತಿಯಿಲ್ಲದಿರುವುದು.

* ಓದಿದ್ದನ್ನು ಸರಿಯಾಗಿ ಅರ್ಥೈಸಿಕೊಳ್ಳದೆಯೇ ಕಂಠಪಾಠ ಮಾಡುವುದು (ಕಂಠಪಾಠದ ನೆನಪಿನ ಅವಧಿ 24ರಿಂದ 48 ಗಂಟೆಗಳು ಮಾತ್ರ.)

*ಕಲಿತ ವಿಷಯವನ್ನು ಪುನರಾವರ್ತನೆ ಮಾಡದೆ, ಅದನ್ನು ಬರೆಯದೇ, ಚರ್ಚಿಸದೇ ಹಾಗೂ ಉಪಯೋಗಿಸದೇ ಇರುವುದು.

* ಸಮಯಕ್ಕೆ ಸರಿಯಾಗಿ ನೀರು–ಆಹಾರಗಳನ್ನು ತೆಗೆದುಕೊಳ್ಳದೇ ಓದುವುದು.

* ಟಿವಿ ನೋಡುತ್ತಲೋ ಮೊಬೈಲ್‌ನಲ್ಲಿ ಹಾಡು ಕೇಳುತ್ತಲೋ ಓದುವುದು.

*ಪಾಲಕರ ಅಥವಾ ಇತರರ ಒತ್ತಾಯಕ್ಕೆ ಮಾತ್ರವೇ ಓದುವುದು.

*ಆಸಕ್ತಿಯಿಲ್ಲದ/ವೈಶಿಷ್ಟ್ಯವಿಲ್ಲದ ವಿಷಯಗಳು ಹಾಗೂ ಅನ್ಯವಿಷಯಗಳ ಕಡೆಗೆ ಗಮನ.

*ವಿಶ್ರಾಂತಿಯಿಲ್ಲದೇ ಓದುವುದು.

*ಓದುವ/ಕಲಿಯುವ ವಿಷಯದ ಬಗೆಗಿನ ಪೂರ್ವಗ್ರಹ.

*ನೆನಪಿಟ್ಟುಕೊಳ್ಳಬೇಕೆಂಬ ಸಂಕಲ್ಪವಿಲ್ಲದೇ ಓದುವುದು.

*ಅಧ್ಯಯನಕ್ಕೆ ಮುಂಚಿನ ಹಾಗೂ ನಂತರದ ಚಟುವಟಿಕೆಗಳು.

*ಕಲಿಕೆಯ ವೇಳೆ ಮತ್ತು ಪುನರಾವರ್ತನೆಯ ವೇಳೆಗೂ ಕಾಲಾವಧಿಯ ಹೆಚ್ಚಿನ ಅಂತರ.

ಮೆದುಳಿಗೆ ಪೆಟ್ಟುಬಿದ್ದಿದ್ದಲ್ಲಿ ನೆನಪಿನ ಶಕ್ತಿ ಕುಂದಬಹುದು. ಒಬ್ಬ ವ್ಯಕ್ತಿಗೆ ನೆನಪಿನ ಶಕ್ತಿಯ ಕೊರತೆಯಿದೆ ಎಂದರೆ ಅದರ ಅರ್ಥ ಅವನಲ್ಲಿರುವ ನೆನಪಿನ ಶಕ್ತಿಯನ್ನು ಉಪಯೋಗಿಸುತ್ತಿಲ್ಲ ಎಂದು. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಪೋಷಕರು ಹಾಗೂ ವಿದ್ಯಾರ್ಥಿಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆಂದು ಹೇಳಲಾದ ಮಾತ್ರೆ, ಟಾನಿಕ್‌ಗಳ ಮೊರೆ ಹೋಗುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಸ್ಮರಣಶಕ್ತಿಯನ್ನು ಹೆಚ್ಚಿಸುವ ಯಾವುದೇ ಔಷಧಗಳಿಲ್ಲ.

ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನೆನಪಿನ ಶಕ್ತಿಯನ್ನು ತರಬೇತಿಗೊಳಿಸಬಹುದು.

*ಕಲಿಯುವ ವಿಷಯದ ಬಗ್ಗೆ ಏಕಾಗ್ರತೆ ಇರಬೇಕು. ಒಂದೇ ವಿಷಯದ ಬಗ್ಗೆ ಏಕಾಗ್ರತೆ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.

*ಕಲಿಯಬೇಕಾಗಿರುವ ವಿಷಯದ ಬಗ್ಗೆ ಕಲಿಯುವ ವ್ಯಕ್ತಿಯಲ್ಲಿ ಆಸಕ್ತಿ, ಪ್ರೇರಣೆ ಹಾಗೂ ಅಪೇಕ್ಷೆ ಉತ್ತಮ ಮಟ್ಟದ್ದಾಗಿರಬೇಕು.

* ಅರ್ಥಪೂರ್ಣಕಲಿಕೆಯಿಂದ ದೀರ್ಘಕಾಲದ ನೆನಪಿನ ಶಕ್ತಿ ಸಾಧ್ಯ.

*ಕಲಿಯುವ ಪ್ರತಿ ವಿಷಯದಲ್ಲಿಯೂ ಪ್ರಾಥಮಿಕ ಜ್ಞಾನವನ್ನು ಗಳಿಸುತ್ತಾ ಹೋಗಬೇಕು.

* ಕಲಿತ ವಿಷಯದ ಪುನರಾವರ್ತನೆ ಮತ್ತು ವಿಶ್ಲೇಷಣೆ ಮಾಡುವುದು.

* ನಿದ್ರಾಹೀನತೆ, ಒತ್ತಡ ನೆನಪಿನ ಶಕ್ತಿಯ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತವೆ. ಆದ್ದರಿಂದ ಕಲಿಕೆಯ ಪ್ರಯತ್ನಗಳ ನಡುವೆ ಉತ್ತಮ ವಿರಾಮ ಅಗತ್ಯ. ವಿರಾಮದಿಂದಾಗಿ ಕಲಿಕೆಯನ್ನು ಸಂಗ್ರಹಿಸಲೂ ಧಾರಣೆಮಾಡಲೂ ಸಾಧ್ಯವಾಗುತ್ತದೆ.

* ಮೆದುಳಿಗೆ ವ್ಯಾಯಾಮ ಸಿಗುವಂತಹ ಪದಬಂಧ, ಸುಡುಕೊ, ಗಣಿತದ ಲೆಕ್ಕಗಳನ್ನು ಬಿಡಿಸುವುದು, ಚದುರಂಗದಾಟದಂಥ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.

*ನಿಮ್ಮದೇ ಆದ ಓದುವ/ಅಭ್ಯಾಸದ ಶೈಲಿಯನ್ನು ರೂಢಿಸಿಕೊಳ್ಳಿ. ಬೋಧನಾ ಸಮಯದಲ್ಲಿ ನೋಟ್ಸ್ ಮಾಡಿಕೊಳ್ಳಿ.

ನೀವು ಓದಿದ ವಿಷಯವನ್ನು ಈಗಾಗಲೇ ನಿಮಗೆ ಗೊತ್ತಿರುವ ಮಾಹಿತಿಯೊಂದಿಗೆ ಲಿಂಕ್ ಮಾಡಿ. (ಕ್ಲಿಷ್ಟ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ವಿಧಾನ ಸಹಾಯಕಾರಿ.)

* ತರ್ಕಬದ್ಧ ಸಂಬಂಧಕಲ್ಪನೆ ಮತ್ತು ಪ್ರಾಸಗಳಿಂದ (ರೈಮ್ಸ್) ನೆನಪಿನಲ್ಲಿಟ್ಟುಕೊಳ್ಳಿ.

*ಕಲಿಕೆಯ ವಸ್ತು/ವಿಷಯ/ಚಟುವಟಿಕೆ ಬಗ್ಗೆ ಸಕಾರಾತ್ಮಕ ಧೋರಣೆಯಿರಲಿ.

* ದುಶ್ಚಟಗಳಿಂದ ದೂರವಿರಿ. ನಿಮ್ಮ ನೆನಪಿನ ಶಕ್ತಿಯ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ.

* ಕಲಿಯುವ ವಿಷಯ ಹೆಚ್ಚು ದೊಡ್ಡದಾದಷ್ಟು ಧಾರಣೆಯು ಹೆಚ್ಚಾಗುತ್ತದೆ. ಏಕೆಂದರೆ ಕಲಿಯುವವನು ದೊಡ್ಡ ವಿಷಯವನ್ನು ಕಲಿಯಲು ಹೆಚ್ಚು ಪ್ರಯತ್ನಶೀಲನಾಗಿರುತ್ತಾನೆ.

* ಸಾಧ್ಯವಾದಲ್ಲಿ ಕಲಿಯುವ ವಿಷಯಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ದೃಶ್ಯಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.

*ಮುಖ್ಯ ಹಾಗೂ ಕಷ್ಟದ ವಿಷಯಗಳನ್ನು ಆದಷ್ಟು ರಾತ್ರಿ ಮಲಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದನಂತರ ಅಭ್ಯಾಸ ಮಾಡಿ.

* ಓದಲು ವಿನಿಯೋಗಿಸುವ ಸಮಯವನ್ನು ಶೇ 25 ಓದಲು ಶೇ 75 ಮೆಲುಕು ಹಾಕಿಕೊಳ್ಳಲು ಉಪಯೋಗಿಸಿ.

* ಕಲಿಕೆಯ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುತ್ತಿರಿ.

* ಶಾಲೆಯಲ್ಲಿ ಪದೆ ಪದೇ ನಡೆಸುವ ಪ್ರಶ್ನೋತ್ತರ ಕಾರ್ಯಕ್ರಮಗಳು ಮತ್ತು ಕಿರುಪರೀಕ್ಷೆಗಳು ನೆನಪಿನ ಶಕ್ತಿಯನ್ನು ಉತ್ತಮಗೊಳಿಸುತ್ತವೆ.

*ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ.

ಪೋಷಕರಿಗೆ ಒಂದು ಮಾತು. ಒಂದು ವೇಳೆ ನಿಮ್ಮ ಮಗು ಚಿಕ್ಕಂದಿನಲ್ಲಿ ಬಿದ್ದು ತಲೆಗೆ ಪೆಟ್ಟಾಗಿದ್ದರೆ, ಯಾವುದೇ ಹಿಂಜರಿಕೆಗೆ ಬಲಿಯಾಗದೆ ತಜ್ಞರಿಗೆ ತೋರಿಸಿ ಸೂಕ್ತ ಸಲಹೆಯನ್ನು ಪಡೆದು ಅದರ ಪ್ರಕಾರ ಮುಂದುವರೆಯಿರಿ. ಇಂದಿನ ಆಧುನಿಕ ನರವಿಜ್ಞಾನವು ಅಂಥ ಬಹುತೇಕ ಸಮಸ್ಯೆಗಳನ್ನು ಸರಿಪಡಿಸುತ್ತದೆ. ತಡ ಮಾಡಿದಷ್ಟೂ ಹೆಚ್ಚು ತೊಂದರೆಯನ್ನು ಮಗು ಅನುಭವಿಸುತ್ತದೆ.

***

SQ3R- ಇದು ಕಲಿತದ್ದನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ತಂತ್ರವಾಗಿದೆ.

S – Survey
Q- Question
R – Read
R – Recite
R- Review
Survey: ಕಲಿಯಬೇಕಾದ್ದನ್ನು ಮೊದಲು ಸಮೀಕ್ಷಿಸುವುದು. ಓದಬೇಕೆಂದಿರುವ ವಿಷಯವನ್ನು ಬೇಗ ಓದಿ. ಇದರಿಂದ ನೀವು ಓದುತ್ತಿರುವ ವಿಷಯದ ಬಗ್ಗೆ ನಿಮಗೆ ಸ್ಥೂಲ ತಿಳಿವಳಿಕೆ ಬರುತ್ತದೆ. ಆನಂತರ ಆತ್ಮವಿಶ್ವಾಸದಿಂದ ಓದಬಹುದು.

Question: ಓದುವ ವಿಷಯದ ಬಗ್ಗೆ ಪ್ರಶ‍್ನೆಗಳನ್ನು ರಚಿಸಿಕೊಳ‍್ಳಿ.

Read: ರಚಿಸಿಕೊಂಡಿರುವ ಪ್ರಶ್ನೆಗೆ ಉತ್ತರ ದೊರೆಯುವಷ್ಟು ಸಲ ಓದಿರಿ.

Recite: ಓದಿದ್ದನ್ನು ಪುನಾರಾವರ್ತಿಸುವುದು. ನಮ್ಮದೇ ಶಬ್ದಗಳಲ್ಲಿ ಪದೇ ಪದೇ ಹೇಳುವುದು ಅಥವಾ ಬರೆಯುವುದು; ಮತ್ತೊಬ್ಬರಿಗೆ ಹೇಳಿಕೊಡುವುದೂ ಆಗಬಹುದು.
Review: ಓದಿದ ವಿಷಯಗಳನ್ನು ಪುನಃ ಪುನಃ ವಿಮರ್ಶಿಸುವುದು.

***
ಇಡಿಯಾಗಿ ಕಲಿಯಿರಿ

ಕಲಿತ ವಿಷಯ ನೆನಪಿನಲ್ಲಿ ಉಳಿಯಲು ಬಿಡಿಯಾದ ಕಲಿಕೆ ಸೂಕ್ತವೋ/ಇಡಿಯಾದ ಕಲಿಕೆ ಸೂಕ್ತವೋ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ಬಿಡಿ ಕಲಿಕೆಯ ವಿಧಾನದಲ್ಲಿ ಪ್ರತಿ ಬಿಡಿಭಾಗವನ್ನು ಕಲಿತಾಗಲೂ ವಿಶ್ವಾಸ ಮೂಡಿ ಉತ್ಸಾಹ ಹೆಚ್ಚುವುದರಿಂದ ಕಲಿಕೆ ಯಶಸ್ವಿಯಾಗುತ್ತದೆ. ಕಲಿತ ಎಲ್ಲ ಭಾಗಗಳನ್ನು ಒಟ್ಟಾಗಿ ಕೂಡಿಸಿ ಕಲಿಕೆಯನ್ನು ಪೂರ್ಣಗೊಳಿಸಬೇಕು. ಹಾಗೆ ಕೂಡಿಸಲಾಗದಿದ್ದರೆ ಕಲಿಕೆ ಅರ್ಥರಹಿತವಾಗುತ್ತದೆ. ಕಲಿಯುವ ವಿಷಯ ಹೆಚ್ಚಿನ ಸಮಯವನ್ನು ಬೇಡುವಂಥದ್ದೂ. ವಿಸ್ತಾರವೂ ಆಗಿರದಿದ್ದರೆ ಇಡಿಯಾಗಿ ಕಲಿಯುವುದು ಉತ್ತಮ.

ನೆನಪುಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಆದ್ದರಿಂದ ಒಂದು ವಸ್ತು ಅಥವಾ ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಅನೇಕ ವಿಷಯಗಳು ಸರಣಿಕ್ರಮದಲ್ಲಿ ನೆನಪಿಗೆ ಬರುತ್ತವೆ. ನಮಗೆ ಅಗತ್ಯವಿರುವ ವಿಷಯಗಳನ್ನು ನೆನಪು ಮಾಡಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಮಾಹಿತಿ ನಮ್ಮ ದೀರ್ಘಾವಧಿ ನೆನಪಿನಲ್ಲಿ ಸಂಗ್ರಹವಿರುತ್ತದೆ. ಅದನ್ನು ಹೊರತೆಗೆಯುವ ಮೂಲಕ ನಮ್ಮ ನೆನಪಿನ ಶಕ್ತಿಯು ಮತ್ತಷ್ಟು ತೀಕ್ಷ್ಣಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT