ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣ ಎಂಬ ಸಂವಹನ ಕೌಶಲ

Last Updated 26 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ವ್ಯಕ್ತಿಗಳಿಬ್ಬರ ನಡುವೆ, ಗುಂಪುಗಳಲ್ಲಿ ಅಥವಾ ಜನರ ಮಹಾಸಾಗರದಲ್ಲಿ ಮಾತನಾಡುವವ ಮತ್ತು ಶ್ರೋತೃಗಳ ನಡುವೆ ನಡೆಯುವ ಕ್ರಿಯೆ ಸಂವಹನ. ಈ ಸಂವಹನ ಒಂದು ಸಂಕೀರ್ಣ ಮಾಧ್ಯಮದ ಮೂಲಕ ನಡೆಯುತ್ತದೆ. ಆದರೆ ಈ ಮಾಧ್ಯಮಕ್ಕೆ ಭಾಷೆಯೊಂದೇ ಅಲ್ಲ, ಸಮಗ್ರ ವ್ಯಕ್ತಿತ್ವವನ್ನೇ ಬಳಸಬೇಕಾಗುತ್ತದೆ.

ಆಗ ಮಾತ್ರ ಶ್ರೋತೃಗಳ ಮೇಲೆ ನಾವು ಅಂದುಕೊಂಡಂತಹ ಪರಿಣಾಮ ಬೀರಲು ಸಾಧ್ಯ. ಈ ಭಾಷಣ ಅಥವಾ ವಾಕ್ಚಾತುರ್ಯ ಎಲ್ಲರಿಗೂ ಸಿದ್ಧಿಸುವಂತಹದಲ್ಲ ಎಂದೇನೂ ಅಂದುಕೊಳ್ಳಬೇಕಾಗಿಲ್ಲ. ಎಳವೆಯಲ್ಲೇ ರೂಢಿಸಿಕೊಂಡರೆ ಭವಿಷ್ಯದಲ್ಲಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನೆರವಿಗೆ ನಿಲ್ಲುತ್ತದೆ.

ಒಬ್ಬ ವಿದ್ಯಾರ್ಥಿಗೆ ಶಿಕ್ಷಕ ಪಾಠ ಮಾಡಬೇಕಾದರೆ ಈ ಸಂವಹನ ಎಷ್ಟು ಪ್ರಬಲವಾದ ಮಾಧ್ಯಮ ಎಂಬುದನ್ನು ಅರಿಯಬಹುದು. ಶಿಕ್ಷಕ ಅಂದಿನ ಪಾಠದ ಬಗ್ಗೆ ಎಷ್ಟೇ ಪೂರ್ವಸಿದ್ಧತೆ ಮಾಡಿಕೊಂಡರೂ ಅದನ್ನು ಅರ್ಥವಾಗುವಂತೆ ಹೇಳದಿದ್ದರೆ ಆ ಸಿದ್ಧತೆಯೆಲ್ಲವೂ ವ್ಯರ್ಥವಾದಂತೆ. ಹೀಗಾಗಿ ಶಿಕ್ಷಕ ಭಾಷಣ ಕಲೆಯ ಕೆಲವು ಪಟ್ಟುಗಳನ್ನು ಅರಿತಿರಬೇಕಾಗುತ್ತದೆ. ಅಂದರೆ ಪಾಠ ಮಾಡುವಾಗ ಬಳಸಬೇಕಾದ ಶಬ್ದಗಳು, ಭಾಷೆಯ ವೈಖರಿ, ಅಂಗಿಕ ಭಾಷೆ (ಬಾಡಿ ಲ್ಯಾಂಗ್ವೇಜ್‌), ಧ್ವನಿ ಎಲ್ಲವನ್ನೂ ರೂಢಿಸಿಕೊಂಡರೆ ಪಾಠದ ಬಗ್ಗೆ ವಿದ್ಯಾರ್ಥಿಗಳ ಗಮನವನ್ನು ಸೆಳೆಯಲು ಸಾಧ್ಯ.

ಮಾತಿನ ತಂತ್ರ
ಕೇಳುಗರನ್ನು ಅಂದರೆ ಇಲ್ಲಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಮಾತು, ಭಾಷೆ, ವಿಧಾನ ಮತ್ತು ತಂತ್ರಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಚಿಕ್ಕ ಮಕ್ಕಳಾದರೆ ಅವರಲ್ಲಿ ಚಿತ್ತ ಚಾಂಚಲ್ಯ ಜಾಸ್ತಿ. ಅಂಥವರನ್ನು ಪಾಠದತ್ತ ಸೆಳೆಯಲು, ಗಮನ ಕೇಂದ್ರೀಕರಿಸುವಂತೆ ಮಾಡಲು ಮಾತನಾಡುವ ಶೈಲಿಯನ್ನು ಬದಲಾಯಿಸುವ ಅಗತ್ಯವಿರುತ್ತದೆ.

ಅವರ ವಯಸ್ಸಿಗೆ ಅನುಗುಣವಾಗಿ ಮಾತಿನ ವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ದೊಡ್ಡ ದೊಡ್ಡ, ಅರ್ಥವಾಗದ ಶಬ್ದಗಳನ್ನು ಬಳಸದಿರುವುದು ಒಳಿತು. ಆಕರ್ಷಕ ಪದಗಳನ್ನು, ಪ್ರಾಸಗಳನ್ನು ಬಳಸುತ್ತ, ಮಧ್ಯೆ ಮಧ್ಯೆ ಅವರನ್ನೂ ಒಳಗೊಳ್ಳುತ್ತ ಪಾಠ ಮುಂದುವರಿಸಬೇಕಾಗುತ್ತದೆ.

ಆರಂಭದಲ್ಲಿ ಕೇಳುಗರ ಮನಃಸ್ಥಿತಿಯನ್ನು, ಭಾವನೆಗಳನ್ನು, ನಂಬಿಕೆಗಳನ್ನು, ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಒಬ್ಬ ಜಾಣ ಸಂವಹನಕಾರನಿಗೆ ಇರಬೇಕು. ಈ ಮಾತು ವ್ಯಕ್ತಿಗಳಿಬ್ಬರ ನಡುವಿನ ಸಂವಹನಕ್ಕೆ ಹಾಗೂ ಗುಂಪು ಸಂವಹನಕ್ಕೂ ಸತ್ಯವೇ. ಮುಖ್ಯವಾದುದೆಂದರೆ ಕೇಳುಗನ ಮನಸ್ಸನ್ನು ಹದಗೊಳಿಸಿಕೊಳ್ಳುವಿಕೆ.

ಈ ಪ್ರಕ್ರಿಯೆಯಲ್ಲಿ ಭಾಷೆಯ ಚತುರತೆ ಇರುತ್ತದೆ. ಭಾವನೆಗಳ ಚಕಮಕಿ ಇರುತ್ತದೆ. ಅನಿಸಿಕೆಗಳೊಡನೆ ಆಟ ಇರುತ್ತದೆ. ಕೇಳುಗನ ಭಾವನೆಗಳ ಭಾಷೆ ಅವನ ಭಾಷೆಯಾಗಿರಬೇಕಾಗುತ್ತದೆ. ಶರೀರ ಭಾಷೆ ಕೂಡ ಭಾವ ಭಾಷೆಯನ್ನು ಹರಿತಗೊಳಿಸಬೇಕಾಗುತ್ತದೆ. ಹೀಗೆ ಹಲವು ತಂತ್ರಗಳ ಮೂಲಕ ಆತ ಕೇಳುಗರ ಮನಸ್ಸನ್ನು ಹದಗೊಳಿಸಬೇಕಾಗುತ್ತದೆ.

ವಿದ್ಯಾರ್ಥಿಗಳ ಮನಸ್ಸು ಅರಿಯಬೇಕು
ಸಂವಹನಕಾರನ ಮುಂದಿರುವ ಸವಾಲು ಉದ್ದೇಶದ್ದು. ಒಬ್ಬ ಶಿಕ್ಷಕನಾದರೆ ವಿದ್ಯಾರ್ಥಿಗಳ ಮನಸ್ಸನ್ನು ಹೊಕ್ಕು ಅವರಿಗೆ ಅರ್ಥವಾಗುವಂತೆ, ಪಾಠದಲ್ಲಿ ಕುತೂಹಲ ಮೂಡುವಂತೆ ಮಾತನಾಡುವುದು ಆತನ ಉದ್ದೇಶವಾಗಿರುತ್ತದೆ. ಕಂಪನಿಯ ಸಭೆಯಲ್ಲಿ ಅಥವ ಕಂಪನಿಯವರು ನಿಯೋಜಿಸಿದ ಸೆಮಿನಾರ್‌ಗಳಲ್ಲಿ ಮಾತನಾಡಬೇಕಾದರೆ ವಿಷಯದ ಕುರಿತು ಖಚಿತವಾಗಿ ಗೊತ್ತಿದೆ ಎಂಬ ಭಾವನೆ ಮೂಡಿಸುವಂತೆ ಮಾತನಾಡಬೇಕಾಗುತ್ತದೆ. ಈ ಅಂಶಗಳನ್ನು ಶಾಲಾ– ಕಾಲೇಜಿನ ಚರ್ಚಾ ಸ್ಪರ್ಧೆಗಳಲ್ಲಿ, ಭಾಷಣಗಳಲ್ಲಿ ರೂಢಿ ಮಾಡಿಕೊಂಡರೆ ಸಹಾಯವಾಗುತ್ತದೆ.

***
ವಿದ್ಯಾರ್ಥಿಗಳಿಗೆ ಈ ಭಾಷಣ ಕಲೆಯನ್ನು ಆರಂಭದಿಂದಲೇ ಕಲಿಸಲು ಶಾಲಾ– ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆ, ಚರ್ಚಾಕೂಟಗಳನ್ನು ನಡೆಸುವುದು ವಾಡಿಕೆ. ಒಂದು ವಿಷಯದ ಮೇಲೆ ಆತ 10– 20 ನಿಮಿಷ ನಿರರ್ಗಳವಾಗಿ ಮಾತನಾಡಬಲ್ಲ ಎಂದರೆ ಅದು ಮುಂದೆ ಉನ್ನತ ಶಿಕ್ಷಣದಲ್ಲಿ ಖಂಡಿತವಾಗಿಯೂ ನೆರವಿಗೆ ಬರಬಲ್ಲದು. ವೃತ್ತಿ ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಲಿಖಿತ ಪರೀಕ್ಷೆಯ ನಂತರ ಸಂದರ್ಶನ, ಗುಂಪು ಚರ್ಚೆ (ಗ್ರೂಪ್‌ ಡಿಸ್ಕಶನ್‌) ಇರುತ್ತದೆ.

ಈ ಭಾಷಣ ಕಲೆಯನ್ನು ಕರಗತ ಮಾಡಿಕೊಂಡರೆ ಇಂತಹ ಸಂದರ್ಶನ, ಗುಂಪು ಚರ್ಚೆಯಲ್ಲಿ ಯಶಸ್ವಿಯಾಗಿ ಭಾಗಿಯಾಗಿ ಪ್ರವೇಶ ಪಡೆಯಲು ಸಾಧ್ಯ. ಮುಂದೆ ಇದು ಉದ್ಯೋಗ ಮಾಡುವಾಗಲೂ ನೆರವಿಗೆ ಬರುತ್ತದೆ. ಕಂಪನಿಯಲ್ಲಿ ಒಂದು ಪ್ರಾಜೆಕ್ಟ್‌ ಮೇಲೆ ವಿಷಯ ಮಂಡಿಸುವಾಗ ಸಹೋದ್ಯೋಗಿಗಳು, ಮುಖ್ಯಸ್ಥರನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT