ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನಂತಾಗು... ನನಗಿಂತ ಉನ್ನತಿಗ್ಹೋಗು’

Published 7 ಜನವರಿ 2024, 23:30 IST
Last Updated 7 ಜನವರಿ 2024, 23:30 IST
ಅಕ್ಷರ ಗಾತ್ರ

ತುಮಕೂರಿನಿಂದ ಹತ್ತು ಕಿ.ಮೀ ದೂರದಲ್ಲಿರುವ ಮೆಳೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ತಿಂಗಳಿಗೊಮ್ಮೆ ನಡೆಯುವ ‘ನನ್ನಂತಾಗು... ನನಗಿಂತ ಉನ್ನತಿಗ್ಹೋಗು...’ ಎಂಬ ಕಾರ್ಯಕ್ರಮ ಶೈಕ್ಷಣಿಕ ವಲಯವನ್ನು ತನ್ನತ್ತ ಸೆಳೆಯುತ್ತಿದೆ.

ಭವಿಷ್ಯದ ಗುರಿಯತ್ತ ಬಾಲ್ಯದಿಂದಲೇ ಚಿತ್ತ ಹರಿಸುವಂತೆ ಮಾಡುವ ಕಾರ್ಯಕ್ರಮವೇ ‘ನನ್ನಂತಾಗು... ನನಗಿಂತ ಉನ್ನತಿಗ್ಹೋಗು ...’

ಇದೇ ಶಾಲೆಯಲ್ಲಿ ಓದಿ ಸರ್ಕಾರಿ ಅಧಿಕಾರಿಗಳಾದವರು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರು, ಶಿಕ್ಷಕರು, ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರು ಸೇರಿದಂತೆ ನಿವೃತ್ತರು, ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಿಕೊಂಡಿರುವ ಸಾಧಕರು ಹಾಗೂ ಆದರ್ಶ ವ್ಯಕ್ತಿಗಳನ್ನು ಪ್ರತಿ ತಿಂಗಳ ಶನಿವಾರ ನಡೆಯಲಿರುವ ಶಾರದಾ ಪೂಜೆಗೆ ಆಹ್ವಾನಿಸಲಾಗುತ್ತದೆ. ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳಾಡಿ,  ಮಕ್ಕಳ ಮನದಲ್ಲಿ ಕನಸು ಬಿತ್ತಿ, ಸಾಕಾರದ ಮಾರ್ಗವನ್ನು ತಿಳಿಸಿಕೊಡುವುದೇ ಈ ಕಾರ್ಯಕ್ರಮದ ವೈಶಿಷ್ಟ್ಯ.

ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಪಿ.ಪರಮೇಶ್‌ ಈ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ಇದರ ಸಾಕಾರ ಹಾಗೂ ಸಮುದಾಯದ ಒಳಗೊಳ್ಳುವಿಕೆಗಾಗಿ ಹಳೆಯ ವಿದ್ಯಾರ್ಥಿಗಳ ಬಳಗವು ಕೈ ಜೋಡಿಸಿದೆ. ತಾವು ಓದಿದ ಶಾಲೆಯ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗಿಯಾಗುವವರ ಸಂಖ್ಯೆಯು ಹೆಚ್ಚುತ್ತಿದೆ.

ಕಾರ್ಯಕ್ರಮದಲ್ಲಿ ಭಾಗಿಯಾದ ಹಳೆಯ ವಿದ್ಯಾರ್ಥಿಗಳು, ಶಾಲೆಯೊಂದಿಗಿನ ತಮ್ಮ ಒಡನಾಟ ಹೆಚ್ಚಿಸಿಕೊಳ್ಳುವ ಜೊತೆಗೆ ಶಾಲಾಭಿವೃದ್ಧಿಗಾಗಿ ದೇಣಿಗೆ ನೀಡುತ್ತಿದ್ದಾರೆ. ಪರಿಣಾಮ 2019–20ನೇ ಸಾಲಿನಲ್ಲಿ 1ರಿಂದ 7ನೇ ತರಗತಿಯವರೆಗೆ ಕೇವಲ 16 ಮಕ್ಕಳಿದ್ದು, ಬಾಗಿಲು ಮುಚ್ಚುವ ಹಂತಕ್ಕೆ ಬಂದಿದ್ದ ಸರ್ಕಾರಿ ಶಾಲೆಯೊಂದು ಸಬಲೀಕರಣಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ 58 ಮಕ್ಕಳು ಕಲಿಯುತ್ತಿದ್ದು, ಇವರಲ್ಲಿ ನಾಲ್ವರು ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದಾರೆ. ಶಾಲೆಯಲ್ಲಿ ಡಿಜಿಟಲ್‌ ಕೊಠಡಿಯೂ ಇಲ್ಲಿದೆ. ಶಿಥಿಲಾವಸ್ಥೆಯಲ್ಲಿದ್ದ ಕೊಠಡಿಗಳು ದುರಸ್ತಿಗೊಂಡಿವೆ. ವಿಶಾಲ ಮೈದಾನದಲ್ಲಿ ಕ್ರೀಡಾ ತರಬೇತಿಯೂ ನಡೆದಿದೆ. ಆರನೇ ತರಗತಿಯಿಂದ ಆಂಗ್ಲ ಮಾಧ್ಯಮವೂ ಆರಂಭಗೊಂಡಿದೆ.

2021–22ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭವಾದ ಈ ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿ.ವಜ್ರಪ್ಪ, ವಿಶ್ರಾಂತ ಸಹ ಪ್ರಾಧ್ಯಾಪಕ (ಇತಿಹಾಸ) ಸಿದ್ದಲಿಂಗಯ್ಯ, ಎಚ್‌ಎಂಟಿಯ ನಿವೃತ್ತ ನೌಕರ ಹಾಗೂ ರಾಷ್ಟ್ರೀಯ ಕಬಡ್ಡಿ ತರಬೇತುದಾರರರಾದ ಎಸ್‌.ಸಿದ್ದಗಂಗಯ್ಯ, ರೈಲ್ವೆಯ ನಿವೃತ್ತ ಎಂಜಿನಿಯರ್ ಅಂಜಿನಪ್ಪ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್.ಗಂಗರಾಜಯ್ಯ ಪಾಲ್ಗೊಂಡಿದ್ದು, ವಿದ್ಯಾರ್ಥಿ ಸಮೂಹದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಇವರಲ್ಲಿ ಸಿದ್ದಲಿಂಗಯ್ಯ ಶಾಲೆಗಾಗಿ ₹ 1 ಲಕ್ಷ ದೇಣಿಗೆ ನೀಡಿದ್ದಾರೆ. ಈ ಹಣವನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್‌ ಮಾಡಿದ್ದು, ಬರುವ ಬಡ್ಡಿಯ ಮೊತ್ತವನ್ನು ಶೈಕ್ಷಣಿಕ ಪ್ರಗತಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ. ಅಂಜಿನಪ್ಪ ಶಾಲೆಯ ಕಟ್ಟಡ ನಿಧಿಗೆ ದೇಣಿಗೆ ನೀಡುವುದಾಗಿ ಹೇಳಿದ್ದಾರೆ. ಗಂಗರಾಜಯ್ಯ ಮಕ್ಕಳಿಗೆ ಬಟ್ಟೆ ಕೊಡಿಸುತ್ತಿದ್ದಾರೆ. ಸಿದ್ದಗಂಗಯ್ಯ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರೆ, ಬಿ.ವಜ್ರಪ್ಪ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುತ್ತಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಎನ್‌.ರಾಜಶೇಖರ್‌, ಪಿಎಸ್‌ಐ ವಿಜಯಕುಮಾರಿ, ಶಿಕ್ಷಕಿ ಸರೋಜಮ್ಮ, ಬಯೋಕಾನ್‌ನ ಉದ್ಯೋಗಿ ರಮೇಶ್‌, ಖಾಸಗಿ ಕಂಪನಿಯೊಂದರ ಬ್ಯುಸಿನೆಸ್ ಹೆಡ್ ನಿಖಿಲ್‌, ಕರಾಟೆ ಶಿಕ್ಷಕ ನಿರಂಜನಪ್ಪ, ಅಂಗವಿಕಲ ಅಂತರರಾಷ್ಟ್ರೀಯ ಕ್ರೀಡಾಪಟು ಎಂ.ನೀಲಾಂಜನಯ್ಯ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಾಲೆಯಲ್ಲಿ ಕಲಿತದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಸಾಧನೆಯ ಕಠಿಣ ಪರಿಶ್ರಮದ ಹಾದಿಯ ಬಗ್ಗೆ ಮಕ್ಕಳಿಗೆ ತಿಳಿಸಿದ್ದು; ‘ನನಗಿಂತ ಉನ್ನತ ಸ್ಥಾನಕ್ಕೋಗಿ’ ಎಂದು ಹುರಿದುಂಬಿಸಿದ್ದಾರೆ. ಇದರೊಟ್ಟಿಗೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ (ಎನ್‌ಜಿಒ) ಸಹಕಾರದಿಂದ ಶಾಲೆಯ ಅಭಿವೃದ್ಧಿಗೂ ಕೈಜೋಡಿಸಿದ್ದಾರೆ.

ಇದಕ್ಕೆ ಪೂರಕವಾಗಿ ಹಳೆಯ ವಿದ್ಯಾರ್ಥಿಗಳ ಬಳಗವು ತಮ್ಮಲ್ಲೇ ₹ 1 ಲಕ್ಷ ದೇಣಿಗೆ ಸಂಗ್ರಹಿಸಿ, ವಿವಿಧ ಕೆಲಸಗಳನ್ನು ಸದ್ದಿಲ್ಲದೆ ಮಾಡಿದೆ. ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮಲ್ಲಿಕಾರ್ಜುನ ಮೆಳೇಹಳ್ಳಿ ಇದರ ಸಾರಥಿಯಾಗಿದ್ದಾರೆ. ಪಂಚಾಯಿತಿಯಿಂದಲೂ ಅನುದಾನ ಬಿಡುಗಡೆ ಮಾಡಿಸಿ, ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕೊಠಡಿಗಳ ದುರಸ್ತಿ ಮಾಡಿಸಿದ್ದಾರೆ. ರೋಟರಿಯ ಸಹಯೋಗದಲ್ಲಿ ಹಲವು ಕಾರ್ಯಕ್ರಮ ನಡೆಸುವ ಮೂಲಕ ಶಾಲೆಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ.

‘ಕಲಿಯಲು ನೀಡಿ ಸಹಕಾರ’

ಶಾಲೆಯ ಹಳೆ ವಿದ್ಯಾರ್ಥಿಗಳ ಬಳಗವು ಎರಡು ವರ್ಷದಿಂದಲೂ ‘ಶಾಲೆಗೆ ಬನ್ನಿ ಶನಿವಾರ, ಕಲಿಯಲು ನೀಡಿ ಸಹಕಾರ’ ಎಂಬ ಕಾರ್ಯಕ್ರಮವನ್ನೂ ನಡೆಸುತ್ತಿದೆ. ರೋಟರಿ ಸಂಸ್ಥೆಯ ಸಹಕಾರ ಇದಕ್ಕಿದೆ.

ನಿರಂಜನಪ್ಪ ಮಕ್ಕಳಿಗೆ ಕರಾಟೆ ಕಲಿಸಿದರೆ, ರಾಜಶೇಖರ್ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಚೇತನ್ ನೃತ್ಯ ಹೇಳಿಕೊಟ್ಟರೆ, ನಯನಾ ಜನಾರ್ದನ್, ಸಿದ್ದಗಂಗಾ ದೃಢವಾದ ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಬಗ್ಗೆ ತಿಳಿಸುತ್ತಿದ್ದಾರೆ. ಜ್ಞಾನೇಶ್‌ ಕ್ರೀಡಾ ತರಬೇತಿ ಕೊಡುತ್ತಿದ್ದಾರೆ. ಎಂ.ಎಚ್.ರಮೇಶ್ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಶಾಲೆಯ ಹಳೆಯ ವಿದ್ಯಾರ್ಥಿ ಬಿ.ವಜ್ರಪ್ಪ ಅವರಿಂದ ಮಕ್ಕಳಿಗೆ ಕ್ರೀಡಾ ತರಬೇತಿ

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಶಾಲೆಯ ಹಳೆಯ ವಿದ್ಯಾರ್ಥಿ ಬಿ.ವಜ್ರಪ್ಪ ಅವರಿಂದ ಮಕ್ಕಳಿಗೆ ಕ್ರೀಡಾ ತರಬೇತಿ

‘ನಾಟಕದಿಂದ ದೇಣಿಗೆ’

1920ರಲ್ಲಿ ಆರಂಭಗೊಂಡಿದ್ದ ಶಾಲೆ, 50ರ ದಶಕದಲ್ಲಿ ಹಿರಿಯ ಪ್ರಾಥಮಿಕ ಪಾಠಶಾಲೆಯಾಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಕೊಠಡಿಗಳ ಕೊರತೆ ಕಾಡಿತು. ಆಗ ಊರವರೇ ಹೊಸ ಕೊಠಡಿ ಕಟ್ಟಲು ಮುಂದಾದರು. ಅದಕ್ಕಾಗಿಯೇ ‘ಕೃಷ್ಣ ಪಾರಿಜಾತ’ ಎಂಬ ನಾಟಕವನ್ನು ಕಲಿತರು. ಪ್ರದರ್ಶನ ಆಯೋಜಿಸಿ, ಟಿಕೆಟ್‌ ಮಾರಾಟದ ಮೂಲಕ ₹ 8 ಸಾವಿರ ದೇಣಿಗೆ ಸಂಗ್ರಹಿಸಿ, ಕೊಠಡಿಗಳನ್ನು ಕಟ್ಟಿದ್ದ ಐತಿಹ್ಯ ಈ ಶಾಲೆಯದ್ದಾಗಿದೆ.

ಬಾಗಿಲು ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಯೊಂದು ಸಮುದಾಯದ ಒಳಗೊಳ್ಳುವಿಕೆಯ ನಂತರ ಪ್ರಗತಿ ಪಥದಲ್ಲಿದೆ ಎಂಬುದಕ್ಕೆ ಮೆಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯೇ ಜೀವಂತ ನಿದರ್ಶನವಾಗಿದೆ.
ಕಂಪ್ಯೂಟರ್‌ ಕಲಿಕೆಯಲ್ಲಿ ಶಾಲಾ ಮಕ್ಕಳು

ಕಂಪ್ಯೂಟರ್‌ ಕಲಿಕೆಯಲ್ಲಿ ಶಾಲಾ ಮಕ್ಕಳು

ಶಾಲೆಗೆ ಸಮುದಾಯವನ್ನು ಕರೆತಂದಿದ್ದರಿಂದ ಸ್ವರೂಪವೇ ಬದಲಾಗಿದೆ. ನಮ್ಮ ಶಾಲೆ ಎಂಬ ಹೆಮ್ಮೆ ಎಲ್ಲರಲ್ಲೂ ಮನೆ ಮಾಡಿದೆ. ಕಾನ್ವೆಂಟ್‌ಗೆ ಹೋಗುತ್ತಿದ್ದ ಮಕ್ಕಳಷ್ಟೇ ಅಲ್ಲ, ಸುತ್ತಲಿನ ಹಳ್ಳಿ ಮಕ್ಕಳೂ ಇದೀಗ ನಮ್ಮಲ್ಲಿಗೆ ಬರುತ್ತಿದ್ದಾರೆ. ಇಲಾಖೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಪಿ.ಪರಮೇಶ್, ಪ್ರಭಾರ ಮುಖ್ಯಶಿಕ್ಷಕ, ಮೆಳೇಹಳ್ಳಿ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT