ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿಹೀನರ ಕ್ಯಾಮೆರಾಕಣ್ಣು ‘ಬ್ಲೈಂಡ್ ವೀವ್’

Last Updated 18 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಅವರ ಕಂಗಳಲ್ಲಿ ದೃಷ್ಟಿ ಚೈತನ್ಯವಿಲ್ಲ.  ಆದರೆ, ನೋಡುವವರ ಮನಮೆಚ್ಚುವಂತಹ ಛಾಯಾಚಿತ್ರ ತೆಗೆಯುವ ಶಕ್ತಿ ಅವರಿಗೆ ಇದೆ. ಹೌದು; ಅವರು ಅಂಧರು. ಆದರೆ, ಅಂದವಾದ ಫೋಟೊಗಳನ್ನು ಕ್ಲಿಕ್ಕಿಸಬಲ್ಲರು.

ಪಶ್ಚಿಮ ಬಂಗಾಳ ಮೂಲದ ಬಿಯಾಂಡ್ ಸೈಟ್ ಫೌಂಡೇಶನ್ ‘ಬ್ಲೈಂಡ್‌ ವೀವ್‘ ಎಂಬ ಫ್ರೇಮ್ ಹಾಕಿ ಕೊಟ್ಟಿದೆ. ಅಂಧರಿಗಾಗಿ ಕೆಲಸ ಮಾಡುತ್ತಿರುವ ಸೈಟ್‌ವಿವರ್ಸ್ ಸಂಸ್ಥೆ ಈ ಕಾರ್ಯದಲ್ಲಿ ಕೈಜೋಡಿಸಿದೆ. ಬೆಂಗಳೂರಿನಲ್ಲೂ ಅಂಧರಿಗಾಗಿ ಛಾಯಾಗ್ರಹಣ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.

ಅಂಧರಿಗಾಗಿ ಜಗತ್ತಿನಲ್ಲಿ ಎಲ್ಲಿಯೂ ಕ್ಯಾಮೆರಾ ಸಂಶೋಧನೆಯಾಗಿಲ್ಲ. ಫೊಟೋಗ್ರಫಿ ಮಾಡಬೇಕಾದರೆ ಅವರೂ ಸಾಮಾನ್ಯ ಕ್ಯಾಮೆರಾವನ್ನೇ ಬಳಸಬೇಕು. ಈ ಸಂಸ್ಥೆ ಸಾಮಾನ್ಯ ಕ್ಯಾಮೆರಾ ಅಂಧರ ಕೈಗಿತ್ತು ಫ್ರೇಮಿಂಗ್ ಪಾಠ ಹೇಳಿಕೊಟ್ಟಿದೆ.

‘ಅಂಧರಿಗೆ ಜಗತ್ತು ಎನ್ನವುದು ಕೇವಲ ನೆರಳು ಮತ್ತು ಬೆಳಕು ಅಷ್ಟೆ. ಬಿಸಿಲಿಗೆ ನಿಂತಾಗ ಮೈಬಿಸಿಯಾದರೆ ಅದು ಬೆಳಕು. ಮರದ ಕೆಳಗೆ ಮೈ ತಂಪಾದಾಗ ಅದು ನೆರಳು. ಇವಿಷ್ಟೇ ಅವರ ಜಗತ್ತು. ಬಣ್ಣಗಳು ಗೊತ್ತಿಲ್ಲದ ಅಂಧ ಮಕ್ಕಳಿಗೆ ಫೊಟೋಗ್ರಫಿ ಹೇಳಿಕೊಡುವುದು ಅಷ್ಟು ಸುಲಭದ ಮಾತಲ್ಲ. ಬಹಳ ಸಂಯಮವಿರಬೇಕು’ ಎನ್ನುತ್ತಾರೆ ಈ ಅಂಧರಿಗೆ ಫೊಟೋಗ್ರಫಿ ಕಲಿಸಿದ ಪಾರ್ಥೋ ಭೌಮಿಕ್‌.

ಹವ್ಯಾಸಿ ಫೊಟೋಗ್ರಾಫರ್ ಆಗಿರುವ, ಪೆಡಿಲೈಟ್‌ ಕಂಪೆನಿ ಉದ್ಯೋಗಿ ಪಾರ್ಥೋ ಭೌಮಿಕ್ 2004 ರಲ್ಲಿ ಹಳೆ ಪೇಪರ್‌ ವ್ಯಾಪಾರಿಯೊಬ್ಬನ ಬಳಿಗೆ ಹೋದಾಗ ಇಂಗ್ಲಿಷ್ ಪತ್ರಿಕೆಯೊಂದು ದೊರೆಯಿತು. ಅದರಲ್ಲಿ  ಅಂಧನೊಬ್ಬನ ಫೊಟೋಗ್ರಫಿ ಕುರಿತ ಬರಹ ಅವರ ಮನ ಸೆಳೆಯಿತು. ಈವ್‌ಜನ್ ಬಾವ್‌ಕರ್ ಅಂಧರ ಜಗತ್ತಿನ ಬಹಳ ದೊಡ್ಡ ಫೊಟೋಗ್ರಾಫರ್. ಅಂತರ್ಜಾಲದ ಮೂಲಕ ಅವರನ್ನು ಸಂಪರ್ಕಿಸಿದ ಭೌಮಿಕ್‌ಗೆ ಆತನ ಕಥೆ ಸ್ಫೂರ್ತಿಯೆನಿಸಿತು.

ಅಂಧರ ಕತ್ತಲ ಬದುಕಿಗೆ ಬೆಳಕು ನೀಡುವ ಕೆಲಸ ತಾವೂ ಮಾಡಬಾರದೇಕೆ ಎಂದೆನಿಸಿತು. ಅಂದಿನಿಂದ ಶುರುವಾದ ಸಂಶೋಧನೆ 2 ವರ್ಷಗಳ ಕಾಲ ನಿರಂತರವಾಗಿ ನಡೆಯಿತು. ಬಹಳಷ್ಟು ಪ್ರಯತ್ನಗಳ ಮೂಲಕ, ಅಂಧರಿಗೆ ಫೊಟೋಗ್ರಫಿ ಕಲಿಸುತ್ತೇನೆ ಎಂದು ಹೇಳಿದಾಗ ಮುಂದೆ ಬಂದವರು ಕೇವಲ ಒಬ್ಬರೇ. ಸ್ವಂತ ಬಂಡವಾಳದಿಂದಲೇ ಈ ಬದಲಾವಣೆಗೆ ಮೊದಲ ಹೆಜ್ಜೆ ಇರಿಸಿದ ಪಾರ್ಥೋ ಭೌಮಿಕ್‌ಗೆ ನಂತರದ ದಿನಗಳಲ್ಲಿ ಕೋಡಕ್ ಕಂಪೆನಿ ಸಹಾಯ ಹಸ್ತ ನೀಡಿತು. ಒಬ್ಬ ವಿದ್ಯಾರ್ಥಿಯಿಂದ ಪ್ರಾರಂಭವಾದ ಈ ಪ್ರಯತ್ನ ಇಂದು 500ಕ್ಕೆ ಬಂದು ನಿಂತಿದೆ.

ಅಂಧರಿಗೆ ಹೇಗೆ ಫೊಟೋಗ್ರಫಿ ತರಬೇತಿ?
ಮೊದಲು ಅಂಧರ ಕೈಗೆ ಕ್ಯಾಮೆರ ನೀಡಲಾಗುತ್ತದೆ. ಅವರು ಕೌತುಕವೆನ್ನುವಂತೆ, ಕ್ಯಾಮೆರಾವನ್ನು ಇಡಿಯಾಗಿ ಸ್ಪರ್ಶಿಸಿ ಶಬ್ದ, ವಾತಾವರಣವನ್ನು ಅನುಭವಿಸಿ ಛಾಯಾಗ್ರಹಣ ಮಾಡುತ್ತಾರೆ. ಪಾರ್ಥೋ ಭೌಮಿಕ್ ತೋರಿಸಕೊಟ್ಟ ಪ್ರಾತ್ಯಕ್ಷಿಕೆ ಹೀಗಿತ್ತು.

ನರೇಶ್ ಬಾಬುಗೆ, ಕ್ಯಾಮೆರಾ ಬಳಸುವ ಪಾಠ ಹೇಳಿಕೊಟ್ಟ ಭೌಮಿಕ್ ಆತನಿಗೆ, ಕ್ಲಿಕ್ ಮಾಡಬೇಕಾದ ಫ್ರೇಮ್ ಬಗ್ಗೆ ಹೇಳಿದರು. ಮುಂದೆ ಕುರ್ಚಿಯಲ್ಲಿ ಕೂತಿರುವ ವ್ಯಕ್ತಿ, ಆತನ ಹಿಂಭಾಗದ ಗೋಡೆ – ಕಿಟಕಿ ಇವಿಷ್ಟು ಅವರು ಹೇಳಿದ್ದ ಫ್ರೇಮ್. ಹುಟ್ಟು ಅಂಧನಾಗಿರುವ ನರೇಶ್ ಬಾಬು ಕೈಮುಂದೆ ಚಾಚುತ್ತ ಗೋಡೆ, ಕಿಟಕಿ ಮುಂದಿರುವ ವ್ಯಕ್ತಿಯನ್ನು ಸ್ಪರ್ಶಿಸಿದ. ಬಳಿಕ ಗೋಡೆಯಿಂದ ತಾನು ಮೊದಲಿದ್ದ ಜಾಗಕ್ಕೆ ಹೆಜ್ಜೆಗಳನ್ನು ಎಣಿಸುತ್ತ ಬಂದ.

ಆತ ತಾನು ಮೊದಲಿದ್ದ ಸ್ಥಾನಕ್ಕೆ ತಲುಪಿದ್ದ! ನಂತರ ಕ್ಯಾಮೆರಾವನ್ನು ಗಲ್ಲದ ಭಾಗಕ್ಕೆ ಇಟ್ಟುಕೊಂಡು ಒಂದು ಫ್ರೇಮ್ ಕ್ಲಿಕ್ಕಿಸಿದ್ದ. ಆತ ಅದನ್ನು ತೋರಿಸಿದರೆ, ಅಚ್ಚರಿ ಕಾದಿತ್ತು. ಭೌಮಿಕ್ ಹೇಳಿದ್ದ ಫ್ರೇಮ್ ಅಂಧನ ಕ್ಯಾಮೆರಾದಲ್ಲಿ ಮೂಡಿತ್ತು!

ಸಾಮಾನ್ಯ ಮನುಷ್ಯರಿಗೆ ಎರಡು ಕಣ್ಣುಗಳು ಮಾತ್ರ ಇದ್ದರೆ, ಅಂಧರ ಜಗತ್ತೇ ಬೇರೆ. ಅವರ ಬೆರಳುಗಳಿಗೆ ಕಣ್ಣುಗಳಿವೆ. ಸ್ಪರ್ಶಿಸಿ ಅವರು ಅದಕ್ಕೊಂದು ರೂಪ ಕೊಡುತ್ತಾರೆ. ಅವರ ಕಿವಿಗೂ ಕಣ್ಣಿದೆ. ನೆನಪುಗಳಿಗೆ ಕಣ್ಣಿದೆ. ಅದನ್ನು ಗ್ರಹಿಸಿ ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಾರೆ. ಅಂಧರು ಫೊಟೋ ಕ್ಲಿಕ್ಕಿಸಿದ ನಂತರ ಅದನ್ನು, ಪ್ರಿಂಟ್ ಹಾಕಿಸಿ ಬಿಯಾಂಡ್ ಸೈಟ್‌ ಫೌಂಡೇಶನ್ ಚಿತ್ರ ಪ್ರದರ್ಶನವನ್ನು ಏರ್ಪಡಿಸುತ್ತದೆ.

ಸಾಮಾನ್ಯವಾಗಿರುವ ಈ ಚಿತ್ರಗಳನ್ನು ಟಚ್ ಆಂಡ್‌ ಫೀಲ್‌ ಮಾಧ್ಯಮಕ್ಕೆ ವರ್ಗಾಯಿಸುತ್ತಾರೆ. ಬ್ರೈಲ್‌ ಲಿಪಿಯಲ್ಲಿ ಚಿತ್ರದ ಕುರಿತಾದ ವಿವರಗಳನ್ನೂ ನಮೂದಿಸುತ್ತಾರೆ. ಫೊಟೋವನ್ನು ಅಂಧರು ಮುಟ್ಟುತ್ತಾ ಖುಷಿ ಪಡುವುದನ್ನು ನೋಡಿದಾಗ ಪಾರ್ಥೋ  ಭೌಮಿಕ್‌ಗೆ ಆದ ಸಂತಸಕ್ಕೆ ಮಿತಿಯೇ ಇರಲಿಲ್ಲ!

ಅಂಧರಿಗೆ ಫೊಟೋಗ್ರಫಿ ಕೇವಲ ಸಂತಸದ ಕ್ಷಣ ಮಾತ್ರ ಅಲ್ಲ. ಅವರಿಗೆ ಹೊಸ ಜೀವನ ನೀಡಿದೆ. ಹೊಸ ಅವಕಾಶ ಸಿಕ್ಕಿದೆ. ಸಮಾನತೆಗೆ ದಾರಿಯಾಗಿದೆ. ಈ ಚಿತ್ರಗಳನ್ನು ಮಾರಾಟ ಕೂಡ ಮಾಡಲಾಗುತ್ತದೆ. ಬಂದ ಆದಾಯ ಅಂಧರಿಗೆ ಸ್ವಾವಲಂಬಿ ಜೀವನ ಮಾಡಲು ಅವಕಾಶ ನೀಡಿದೆ. ಬಿಯಾಂಡ್ ಸೈಟ್‌ ಫೌಂಡೇಶನ್‌ ಬಗ್ಗೆ ತಿಳಿದುಕೊಂಡ ಶಾರ್ಜದ ರಾಜಕುಮಾರಿ ಅರ್ವಾ ಅಲ್ ಕಸ್ಸೀಮೀ ಸಹಾಯಹಸ್ತ ಚಾಚಿದ್ದಾರೆ. ಅಂಧರು ಕ್ಲಿಕ್ಕಿಸಿದ ಛಾಯಾಚಿತ್ರಗಳು ದೇಶದಾದ್ಯಂತ ಪ್ರದರ್ಶನ ಕಂಡಿವೆ. ಕಾಣುತ್ತಲೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT