ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೇಟಾ ಥುನ್ಬರ್ಗ್ ಎನ್ನುವ ‘ಹಸಿರು’ ಪುಟಾಣಿ!

ಗ್ರೇಟಾ ಥುನ್ಬರ್ಗ್ ಎನ್ನುವ ‘ಹಸಿರು’ ಪುಟಾಣಿ!
Last Updated 1 ಅಕ್ಟೋಬರ್ 2019, 10:02 IST
ಅಕ್ಷರ ಗಾತ್ರ

‘ನೀವು ಹೇಳುತ್ತೀರಿ ನಿಮ್ಮ ಮಕ್ಕಳಿಗಿಂತ ನಿಮಗೆ ಪ್ರಿಯವಾದುದು ಯಾವುದೂ ಇಲ್ಲ ಎಂದು. ಆದರೂ ಅವರ ಭವಿಷ್ಯವನ್ನು ಅವರ ಕಣ್ಣೆದುರೇ ಕಸಿದುಕೊಳ್ಳುತ್ತಿದ್ದೀರಿ. ಇದು ಮನುಷ್ಯ ನಿರ್ಮಿತ ಜಾಗತಿಕ ಬಿಕ್ಕಟ್ಟು. ಒಂದು ಬಿಕ್ಕಟ್ಟನ್ನು ಪರಿಹರಿಸಲು ಅದನ್ನು ಬಿಕ್ಕಟ್ಟೆಂದು ಗುರುತಿಸುವುದು ಅತ್ಯಂತ ಮುಖ್ಯ. ಈ ಬಿಕ್ಕಟ್ಟಿಗೆ ನಾವಿರುವ ವ್ಯವಸ್ಥೆಯಲ್ಲಿ ಪರಿಹಾರ ಸಿಗುವುದಿಲ್ಲವಾದರೆ ವ್ಯವಸ್ಥೆಯನ್ನು ಬದಲಿಸಿ ಪರಿಹಾರ ಹುಡುಕಿ.’

ಈ ಮಾತುಗಳನ್ನು ಇದೀಗ ಮುಗಿದಿರುವ ಮಹಾನ್ ಚುನಾವಣೆಯ ಭಾಷಣಗಳಿಂದ ಆರಿಸಿದ್ದಲ್ಲ, ಇವು ಯಾವುದೇ ಪಕ್ಷದ ಪ್ರಣಾಳಿಕೆಯ ಸಾಲುಗಳಂತೂ ಖಂಡಿತ ಅಲ್ಲ. ಅಥವಾ ಜಗತ್ತಿನ ಯಾವುದೇ ದೇಶದ ಧಾರ್ಮಿಕ ಸಂತ, ಆಧ್ಯಾತ್ಮಿಕ ಗುರುವಿನ ಅಥವಾ ದೂರದೃಷ್ಟಿಯ ಮುತ್ಸದ್ದಿಯ ಮಾತುಗಳು ಕೂಡ ಅಲ್ಲ. ಹರೆಯದ ಹುಡುಗಿಯೊಬ್ಬಳ ನುಡಿಗಳಿವು. ಈಕೆಯ ವಯಸ್ಸು ಹದಿನಾರು ವರ್ಷ. ಹೆಸರು ಗ್ರೇಟಾ ಥುನ್ಬರ್ಗ್. ದೇಶ ಸ್ವೀಡನ್. ಇವಳು ಹೇಳುತ್ತಿರುವುದು ಬದಲಾಗುತ್ತಿರುವ ಹವಾಮಾನದ ಬಗ್ಗೆ, ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಕುರಿತು.

ಸ್ವೀಡನ್ ಸಣ್ಣ ಹಾಗೂ ಶ್ರೀಮಂತ ದೇಶ. ಜಾಗತಿಕ ತಾಪಮಾನ ಹೆಚ್ಚುತ್ತಿರುವುದರ ಮತ್ತು ಅದರ ಪರಿಣಾಮಗಳ ವಿರುದ್ಧ ಅಳಿವು ಉಳಿವಿನ ಹೋರಾಟದ ಪರಿಸ್ಥಿತಿಯನ್ನು ಒಂದು ವೇಳೆ ಎಲ್ಲ ದೇಶಗಳೂ ಎದುರಿಸಬೇಕಾದರೆ ಅದನ್ನು ಎದುರಿಸಲು ಸ್ವೀಡನ್ ಬಳಿ ಇತರ ಅನೇಕ ದೇಶಗಳಿಗಿಂತ ಹೆಚ್ಚಿನ ಶಕ್ತಿ ಸಾಮರ್ಥ್ಯಗಳಿವೆ. ಹಾಗೆಂದುಕೊಂಡು ನೆಮ್ಮದಿಯಲ್ಲಿ ಸ್ವೀಡನ್ ಅಥವಾ ಅದರಂತಹ ಸಂಪನ್ಮೂಲಭರಿತ ದೇಶಗಳು ಇರಬಾರದು ಎಂದು ಗ್ರೇಟಾ ಹೇಳುತ್ತಾಳೆ. ಅಭಿವೃದ್ಧಿಶೀಲ ದೇಶಗಳಾದ ಭಾರತ, ನೈಜೀರಿಯಾ, ಕಾಂಬೋಡಿಯಾಗಳಂತಹ ದೇಶಗಳು ಕಾರ್ಯೋನ್ಮುಖವಾಗಲು ಪ್ರೇರೇಪಿಸುವ ಮೊದಲು ಅಭಿವೃದ್ಧಿಯ ತುತ್ತತುದಿಯಲ್ಲಿರುವ ಸ್ವೀಡನ್‌ನಂತಹ ದೇಶಗಳು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು; ಅದರರ್ಥ ಇದು ಭಾರತದಂತಹ ದೇಶಗಳಿಗೆ ಅಪ್ರಸ್ತುತ ವಿಷಯವೆಂದೂ ಅಲ್ಲ.

ಬದಲಾಗಿ ವಿಜ್ಞಾನ ಲೋಕಕ್ಕೆ, ಕೈಗಾರಿಕಾ ಜಗತ್ತಿಗೆ ಹಿರಿಯ ಸಂಶೋಧನೆಗಳನ್ನು, ಬದಲಾವಣೆಗಳನ್ನು ಕೊಡುಗೆಯಾಗಿ ನೀಡಿದ ದೇಶಗಳೇ ಜಾಗತಿಕ ತಾಪಮಾನ ಬದಲಾಗುತ್ತಿರುವ ಈ ಹೊತ್ತಲ್ಲೂ ಗಟ್ಟಿಯಾದ ಹೆಜ್ಜೆ ಇಡಬೇಕು, ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ತಗ್ಗಿಸುವ ಎಲ್ಲ ಸಾಧ್ಯತೆಗಳನ್ನು ಅನುಸರಿಸಬೇಕು ಎನ್ನುವುದು ಅವಳ ಮಾತಿನ ಅರ್ಥ. ಇಂತಹ ತುರ್ತು ಅಗತ್ಯದ ಮಾತುಗಳನ್ನು ಆಡುತ್ತ ಹವಾಮಾನ ಬದಲಾವಣೆಯ ಬಗ್ಗೆ ಎಚ್ಚರ ನೀಡಲು ಯೂರೋಪಿನ ದೇಶಗಳಲ್ಲಿ ರೈಲಿನಲ್ಲಿ ಸಂಚರಿಸಿ ನಿತ್ಯವೂ ಸುದ್ದಿಯಾಗುತ್ತಿದ್ದಾಳೆ ಗ್ರೇಟಾ.

ವಾತಾವರಣಕ್ಕೆ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಸೇರಿಸುವ ವಿಮಾನಗಳನ್ನು ಬಳಸದೆ ಯುರೋಪಿನ ದೇಶ ದೇಶಗಳ ಸಂಸತ್ತುಗಳನ್ನು, ಅಲ್ಲಿನ ನಾಯಕರನ್ನು ಭೇಟಿ ಮಾಡಲು ರೈಲಿನಲ್ಲಿಯೇ ಸುತ್ತುತ್ತಿದ್ದಾಳೆ. ಪರಿಸರ ಸಂವಾದದಲ್ಲಿ ಕೂಡ ನುಡಿದಂತೆ ನಡೆಯುವುದು ಸಾಧ್ಯವೂ ಹೌದು, ಮುಖ್ಯವೂ ಹೌದು ಎಂದು ತನ್ನನ್ನು ಗಮನಿಸುತ್ತಿರುವವರೆಲ್ಲರಿಗೂ ತಣ್ಣಗಿನ ಸಂದೇಶ ರವಾನಿಸುತ್ತಿದ್ದಾಳೆ. ಎಲ್ಲಿಗೆ ಎಷ್ಟು ಬೇಗ ತಲುಪಿದೆ ಎನ್ನುವುದಕ್ಕಿಂತ ಹೇಗೆ ತಲುಪಿದೆ ಎನ್ನುವುದು ಹೆಚ್ಚು ಪ್ರಸ್ತುತವಾಗುವಂತೆ ತನ್ನ ಪ್ರಯಾಣ ಮಾದರಿಯ ಆಯ್ಕೆಯೂ ಹೆಚ್ಚು ಪರಿಸರ ಸ್ನೇಹಿಯಾಗಿರಬೇಕು ಎಂದಿದ್ದಾಳೆ.

ತನ್ನ ಎಚ್ಚರದ ನುಡಿಗಳಿಂದ, ದಿಟ್ಟ ಹೆಜ್ಜೆಗಳಿಂದ ‘ಕ್ಲೈಮೇಟ್ ಹೀರೊ’ ಎಂದು ಪತ್ರಿಕೆಗಳಿಂದ, ರಾಷ್ಟ್ರೀಯ ನಾಯಕರಿಂದ, ಹೊಗಳಿಸಿಕೊಳ್ಳುತ್ತಿದ್ದಾಳೆ. ಚಳವಳಿಯೊಂದರಲ್ಲಿ ಮುಂಚೂಣಿಗೆ ಬರುವ ನಾಯಕರ ಬಗೆಗಿನ ಕುತೂಹಲ, ಅಚ್ಚರಿಗಳು, ಕಟ್ಟುಕತೆಗಳು ಮುಂದೆ ಗುಣಗಾನವಾಗಿ ಚಳವಳಿಯ ಮೂಲ ಆಶಯ ಹಿಂದೆ ಸರಿಯುವ ಸಾಧ್ಯತೆಗಳು ಬಹಳ ಹೆಚ್ಚಿರುತ್ತವೆ. ಇಂತಹ ಹೊಗಳಿಕೆಗಳು, ಹುಬ್ಬೇರಿಸುವಿಕೆಗಳು, ಚಪ್ಪಾಳೆಗಳು ಇವ್ಯಾವುವೂ ಗ್ರೇಟಾಳಿಗೆ ಬೇಕಿಲ್ಲ. ಆಕೆ ಬಯಸುತ್ತಿರುವುದು ಪರಿಸರ ಶಾಶ್ವತವಾಗಿ ಬದಲಾಗುವುದನ್ನು ನಿಲ್ಲಿಸುವ ದೃಢ ಹೆಜ್ಜೆಗಳನ್ನು; ಹವಾಮಾನವನ್ನು ಬದಲಿಸುತ್ತಿರುವ ವಿದ್ಯಮಾನಗಳನ್ನು ತಡೆಯುವ ನಿಶ್ಚಿತ ಕ್ರಮಗಳನ್ನು.

ಒಂದು ವಿಷಯವನ್ನು ಮನಮುಟ್ಟುವಂತೆ ತಲುಪಿಸುವ ವಿಚಾರದಲ್ಲಿ ಯಾವ ವಿಷಯವನ್ನು ಹೇಗೆ ಹೇಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ಹೇಳುತ್ತಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ. ಹೈಸ್ಕೂಲ್ ವಿದ್ಯಾಭ್ಯಾಸದ ವೇಳೆ ಚಳವಳಿಯಲ್ಲಿ ಧುಮುಕಿದ ಎಷ್ಟು ವಿದ್ಯಾರ್ಥಿಗಳು ನಮಗೆ ಗೊತ್ತು? ಶಾಲಾ ತರಗತಿಗಳನ್ನು ಚಳವಳಿಯ ಕಾರಣಕ್ಕೆ ತಪ್ಪಿಸಿ ಮಕ್ಕಳು ಬೀದಿಗಿಳಿಯುವುದು ಎಷ್ಟು ಸಾಮಾನ್ಯ? ಅಥವಾ ಅಂತಹ ಅನಿವಾರ್ಯ ಏನಾದರೂ ನಮ್ಮ ಮುಂದಿರುವುದು ಹೌದೇ? ಗ್ರೇಟಾಳ ಅನಿಸಿಕೆಯಂತೆ ನಮ್ಮ ಕಣ್ಣಿಗೆ ಬೃಹತ್ ಬಿಕ್ಕಟ್ಟೊಂದು ಬಿಕ್ಕಟ್ಟಾಗಿ ಕಾಣದಿರುವುದೇ ಮೊದಲ ಬಿಕ್ಕಟ್ಟು.

ಪರಿಸರದ ಮೇಲೆ ಮನುಷ್ಯನ ನಿಯಂತ್ರಣ ತಪ್ಪಲು ‘ಇನ್ನು ಬರೀ ಹನ್ನೆರಡು ವರ್ಷಗಳು’ ಇವೆ ಎನ್ನುವ ಎಚ್ಚರಿಕೆ ನೀಡುವ ವರದಿಯೊಂದು ಗ್ರೇಟಾಳ ಚಳವಳಿಗೆ ಪ್ರೇರಣೆ.

ಹದಿನಾರರ ವಯಸ್ಸು ಎಂದರೆ ವಿದ್ಯಾಭ್ಯಾಸದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ, ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ತೀವ್ರವಾಗಿ ಪ್ರಯತ್ನ ಪಡಬೇಕಾದ ವಯಸ್ಸು. ಎಲ್ಲ ದೇಶಗಳಲ್ಲೂ ಹೆತ್ತವರು ಹೀಗೆಯೇ ಯೋಚಿಸುತ್ತಾರೆ. ಈ ವಿದ್ಯಾರ್ಥಿಯ ಚಳವಳಿಯನ್ನು ಕಂಡು ಹಲವರು ಇಂಗ್ಲೆಂಡ್‌ನಲ್ಲಿಯೂಮಕ್ಕಳ ಶೈಕ್ಷಣಿಕ ಜವಾಬ್ದಾರಿಯ ಬಗ್ಗೆ ಪ್ರಶ್ನಿಸಿದ್ದಿದೆ. ವಾತಾವರಣದ ಮೇಲೆ ನಿರಂತರ ಹಲ್ಲೆಗಳನ್ನು ಮುಂದುವರೆಸುತ್ತ, ಭವಿಷ್ಯವೇ ಇಲ್ಲದಂತೆ ಮಾಡಿದಮೇಲೆ ಮಕ್ಕಳು ಶಿಕ್ಷಣ ಪಡೆದು ಏನು ಮಾಡಬೇಕು ಎಂದು ಗ್ರೇಟಾ ಅಂತಹವರಿಗೆ ಉತ್ತರಿಸುತ್ತಾಳೆ. ಅಥವಾ ಬಿಕ್ಕಟ್ಟನ್ನು ಗುರುತಿಸಲು ಹೇಳಿಕೊಡದ ಶಿಕ್ಷಣವಾದರೂ ಎಂತಹ ಶಿಕ್ಷಣ ಎಂದು ಕೇಳುತ್ತಾಳೆ. ಹಾಗಿದ್ದರೆ ಹವಾಮಾನ ವೈಪರೀತ್ಯ ಇಷ್ಟು ವಿಷಮ ಬಿಕ್ಕಟ್ಟೇ? ಇಡೀ ಜಗತ್ತು, ದೊಡ್ಡವರು–ಸಣ್ಣವರು, ಸಾಮಾನ್ಯರು, ಸರ್ಕಾರಗಳು, ಉದ್ಯಮಗಳು ತುರ್ತಾಗಿ ಯೋಚಿಸಬೇಕಾದ ಸಮಸ್ಯೆಯೇ? ಹೌದೆನ್ನುವವರ ಸಾಲಿನಲ್ಲಿ ಬ್ರಿಟನ್ನಿನ ಸರ್ ಡೇವಿಡ್ ಅಟ್ಟೆನ್ಬರೋ ಕೂಡ ಇದ್ದಾರೆ. ಪ್ರಕೃತಿಯ ಇತಿಹಾಸಕಾರ ಎನ್ನುವ ಹೆಸರು ಪಡೆದ ಹಿರಿಯ ಆಂಗ್ಲ ಈಅಟ್ಟೆನ್ಬರೋ. ಹಲವು ದಶಕಗಳಿಂದ ಜೀವಜಗತ್ತಿನ ಬಗ್ಗೆ ಕುತೂಹಲಕಾರಿ ದೂರದರ್ಶನ ಸರಣಿಗಳನ್ನು ಮಾಡಿರುವ ಅಟ್ಟೆನ್ಬರೋ ತಮ್ಮ ಪೀಳಿಗೆಯವರು ಪರಿಸರಕ್ಕೆ ಅಪಚಾರ ಮಾಡಿದರು, ಈ ಮಕ್ಕಳಿಂದಾದರೂ ಅವರು ಎಚ್ಚರಗೊಳ್ಳಲಿ ಎಂದು ಆಶಿಸಿದ್ದಾರೆ.

ಗ್ರೇಟಾಳ ಕರೆಗೆ ಬ್ರಿಟನ್ನಿನ, ಯೂರೋಪಿನ, ಇಡೀ ಜಗತ್ತಿನ ಮಕ್ಕಳು ದನಿಗೂಡಿಸುತ್ತಿದ್ದಾರೆ. ಶುಕ್ರವಾರ ಶಾಲೆಗಳಿಗೆ ಗೈರುಹಾಜರಾಗಿ ರಸ್ತೆಯಲ್ಲಿ ಘೋಷಣೆ ಕೂಗುತ್ತಿದ್ದಾರೆ, ಮೆರವಣಿಗೆ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಅಂದರೆ ಎಪ್ಪತ್ತಕ್ಕಿಂತ ಹೆಚ್ಚು ದೇಶಗಳ ಐದುನೂರು ನಗರಗಳಲ್ಲಿ ‘ಫ್ರೈಡೆ ಫಾರ್ ಫ್ಯೂಚರ್’ (ಭವಿಷ್ಯಕ್ಕಾಗಿ ಶುಕ್ರವಾರ) ಎನ್ನುವ ಚಳವಳಿ ಶುರುವಾಗಿದೆ. ಈ ಚಳವಳಿಯ ಹಿಂದೆ ಗ್ರೇಟಾಳ ಆಕ್ರೋಶದ ಚುಚ್ಚು ಮಾತುಗಳು ಇವೆ. ಈ ಬಿಕ್ಕಟ್ಟಿನ ಬಗ್ಗೆ ಮಾತಾಡುವಲ್ಲಿ, ಎಚ್ಚರ ಹುಟ್ಟಿಸುವಲ್ಲಿ ಎಲ್ಲ ದೇಶಗಳ ಸರ್ಕಾರಗಳು, ಸಾಮಾಜಿಕ ಮಾಧ್ಯಮಗಳು, ಪತ್ರಿಕೆಗಳು, ಚಳವಳಿಗಳು ಸೋತಿವೆ. ಮಕ್ಕಳು ಕೂಡ ಈ ಚಳವಳಿಯ ಭಾಗವಾಗಿ ಹೊಸ ಆಯಾಮವನ್ನು, ತುರ್ತು ಪರಿಣಾಮವನ್ನು ನೀಡಲೆತ್ನಿಸುವುದು ಅನಿವಾರ್ಯವಾಗಿದೆ. ಬದುಕಿನ ಎಲ್ಲ ಹಂತಗಳಲ್ಲೂ ಕಾರ್ಬನ್ ಡೈ ಆಕ್ಸೈಡ್ ಬಳಕೆ ಕಡಿಮೆ ಮಾಡುವ ಹೆಜ್ಜೆಗಳನ್ನು ಸರ್ಕಾರಗಳು ಹೆಚ್ಚು ಹೆಚ್ಚು ಅನುಸರಿಸುವುದು, ಜನಸಾಮಾನ್ಯರೂ ತಮ್ಮ ಮಿತಿಯಲ್ಲಿ ಕಾರ್ಯಪ್ರವೃತ್ತರಾಗುವುದು ಅಗತ್ಯವಾಗಿದೆ.

ಜಗತ್ತಿನ ಎಲ್ಲ ಮನುಷ್ಯ, ಪ್ರಾಣಿ, ಸಸ್ಯಗಳನ್ನು ಬಾಧಿಸುವ ಬಿಕ್ಕಟ್ಟೊಂದರ ಬಗ್ಗೆ ಜನಸಾಮಾನ್ಯರ ನಿರ್ಲಕ್ಷ್ಯ ಅಜ್ಞಾನ, ಉದ್ಯಮಗಳ ಸ್ವಾರ್ಥ, ಸರ್ಕಾರಗಳ ಜಡತ್ವ ಎದುರಿಸಲು ಮಕ್ಕಳೇ ಬೀದಿಗಿಳಿಯುವುದು, ಶಾಲೆ ತಪ್ಪಿಸಿ ಹೋರಾಟ ಮಾಡುವುದು ಅನಿವಾರ್ಯ ಎಂದು ಕಿರಿಯಳಾದ ಗ್ರೇಟಾ ಹಾಗೂ ಹಿರಿಯರಾದ ಅಟ್ಟೆನ್ಬರೋ ನಂಬುತ್ತಾರೆ. ಇದು ಅವರು ಯೋಚಿಸಿದ್ದನ್ನು ನಾವೂ ಯೋಚಿಸಬೇಕಾದ ಹೊತ್ತು, ಕಾರ್ಯೋನ್ಮುಖರಾಗಬೇಕಾದ ಘಳಿಗೆ, ನಮ್ಮ ಮಕ್ಕಳು ನಮಗೆ ಪ್ರಿಯರಾಗಿರುವುದು ಹೌದಾದಲ್ಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT