ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮ್ಲಾ: ಮೇಲ್ಮೈ ನೀರಿನ ಪ್ರಮಾಣದಲ್ಲಿ ಹೆಚ್ಚಳ!

ಒಂದು ಕಾಲದಲ್ಲಿ ಶ್ವೇತವರ್ಣದ ಹಿಮವರ್ಷಗಳಿಂದ ಕಂಗೊಳಿಸುತ್ತಿದ್ದ, ಚಳಿಗಾಲದಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳಿಂದ ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಶಿಮ್ಲಾ ಪಟ್ಟಣವು ಇಂದು ಇತಿಹಾಸದಲ್ಲೇ ಕಂಡು ಕೇಳರಿಯದ ನೀರಿನ ಬಿಕ್ಕಟ್ಟನ್ನು ಅನುಭವಿಸುತ್ತಿದೆ.

2015-16ರಅವಧಿಯಲ್ಲಿ ಆವರಿಸಿದ ಬರಗಾಲವು ಮರಾಠಾವಾಡಾದ ರೈತರ ಜೀವನವನ್ನು ಸಂಪೂರ್ಣವಾಗಿ ದಿಕ್ಕೆಟ್ಟಿಸಿತ್ತು. ಇಂತಹ ಅನೇಕ ಸಂದರ್ಭಗಳು, ಸನ್ನಿವೇಶಗಳು, ಭಾರತದಲ್ಲಿ ನದಿಗಳ ಮಹತ್ವ ಏನೆಂಬುದನ್ನು ತೋರಿಸಿಕೊಟ್ಟಿವೆ.

ನದಿಗಳು ನಮ್ಮ ದೇಶದೊಂದಿಗೆ ಕೇವಲ ನೈಸರ್ಗಿಕವಾದ ಸಂಬಂಧವನ್ನು ಹೊಂದಿಲ್ಲ. ನಾಡಿನ ಜನರ ನಾಡಿಮಿಡಿತದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನೂ ಹೊಂದಿವೆ. ನೀರಿನ ಮಹತ್ವವು ಇಂದು ವಿಶ್ವದೆಲ್ಲೆಡೆ ಹೆಚ್ಚುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಇಂತಹ ಸಂದರ್ಭದಲ್ಲಿ, ನೈಸರ್ಗಿಕವಾಗಿ ನದಿ-ಸರೋವರಗಳ ನೀರಿನ ಮಟ್ಟವು ಕಾಲಾಂತರದಲ್ಲಿ ಹೇಗೆ ಬದಲಾಗುತ್ತದೆ? ಇದರ ಹಿಂದಿನ ಕಾರಣಗಳೇನು?

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನವೊಂದರದಲ್ಲಿ, ನಿಖರವಾಗಿ ಇಂತಹ ಒಂದು ರಹಸ್ಯವನ್ನು ಅರ್ಥೈಸಿಕೊಳ್ಳುವ ಕಾರ್ಯವನ್ನು ಮಾಡುವಲ್ಲಿ ಅವರು ಸಫಲರಾಗಿದ್ದಾರೆ.13 ವರ್ಷಗಳಿಂದ, ಭಾರತವೆಂಬ ಈ ಪರ್ಯಾಯ ದ್ವೀಪದ ನೀರಿನ ಮಟ್ಟವು ಹೇಗೆ ಬದಲಾಗಿದೆ ಎಂಬುದನ್ನು ಅಧ್ಯಯನ ಮಾಡಿದ್ದಾರೆ.

ಮೇಲ್ಮೈಜಲ ಮತ್ತು ಅಂತರ್ಜಲದ ಬಗ್ಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ನಾವು ಉಪಯೋಗಿಸಲು ಯೋಗ್ಯವಾದ ನೀರು ಎಷ್ಟಿದೆ ಎಂಬುದನ್ನು ಲೆಕ್ಕಹಾಕಬಹುದು. ಆದರೆ, ಇಷ್ಟು ಬೃಹತ್ ಮಟ್ಟದ ಮಾಹಿತಿಯನ್ನು ಸರಿಯಾದ ಉಪಕರಣಗಳಿಲ್ಲದೆ ಸಂಗ್ರಹಿಸುವುದು ಬಹುದೊಡ್ಡ ಸವಾಲಿನ ಸಂಗತಿಯೇ. ಆದ್ದರಿಂದ, ಸಂಶೋಧಕರು ವಿಶ್ವಾಸಾರ್ಹವಾದ, ನಿಖರತೆ
ಯೊಂದಿಗೆ ಅಗತ್ಯ ಮಾಹಿತಿ ಒದಗಿಸುವ, ಉಪಗ್ರಹ ಆಧಾರಿತ ಅಧ್ಯಯನದೆಡೆಗೆ ಮುಖ ಮಾಡಿದರು.

ಇಂತಹ ಮಾಹಿತಿಯನ್ನು ಒದಗಿಸುವ ಒಂದು ಅದ್ಭುತ ಪ್ರಯೋಗವೇ ‘ಗ್ರ್ಯಾವಿಟಿ ರಿಕವರಿ ಮತ್ತು ಕ್ಲೈಮೇಟ್ ಎಕ್ಸ್‌ಪಿರಿಮೆಂಟ್‌’ (GRACE). ಇದು ತಕ್ಕಡಿಯ ಹಾಗಿರುವ ಅವಳಿ ಉಪಗ್ರಹಗಳನ್ನು ಹೊಂದಿದ್ದು, ಭೂಮಿಯ ಗುರುತ್ವ ಕ್ಷೇತ್ರದಲ್ಲಿನ ವ್ಯತ್ಯಾಸವನ್ನು ಗುರುತಿಸಿ, ಭೂಮಿಯ ಮೇಲಿನ ನೀರಿನ ವಿತರಣೆಯಲ್ಲಾದ ಬದಲಾವಣೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಹಿಡಿದು ಕೃಷ್ಣಾನದಿಯವರೆಗೆ ಅಲ್ಲಲ್ಲಿ ಹರಡಿರುವ ಜಲಾಶಯಗಳ ಬಗ್ಗೆ GRACEನ ಮೂಲಕ ವಿಜ್ಞಾನಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

‘ಸಾಮಾನ್ಯವಾಗಿ, ಮೇಲ್ಮೈ ನೀರಿನ ಪ್ರಮಾಣವನ್ನು, ನೀರು ಆವರಿಸಿರುವ ಭೂಮಿಯ ವಿಸ್ತೀರ್ಣ ಹಾಗೂ ಅಲ್ಲಿನ ಮಣ್ಣಿನಲ್ಲಿರುವ ತೇವಾಂಶದ ಆಧಾರದ ಮೇಲೆ ಕಂಡುಹಿಡಿಯಲಾಗುತ್ತದೆ. ಆದರೆ, ಮಣ್ಣಿನ ತೇವಾಂಶವನ್ನು ಕಂಡು ಹಿಡಿಯಲು ಸಾಕಷ್ಟು ಹೊರಾಂಗಣ ಮಾಪಕ ಕೇಂದ್ರಗಳು ಇಲ್ಲ. ಜೊತೆಗೇ, ಆ ಪ್ರದೇಶದಲ್ಲಿ ಹೊಳೆಗಳು, ಅಣೆಕಟ್ಟುಗಳು, ಕೊಳಗಳು ಮತ್ತು ಸರೋವರಗಳು ಎಷ್ಟು ಮೇಲ್ಮೈ ಪ್ರದೇಶವನ್ನು ಆವರಿಸಿವೆ ಎಂಬುದರ ಸಂಪೂರ್ಣ ಚಿತ್ರಣವೂ ಇಲ್ಲ’ ಎಂದು ಅಧ್ಯಯನ ನಡೆದ ಜಾಗದ ಸ್ಥಿತಿಗತಿಗಳನ್ನು ‘ರಿಸರ್ಚ್ ಮ್ಯಾಟರ್ಸ್’ನೊಂದಿಗಿನ ಸಂದರ್ಶನದಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರೂ ಆದ ಪ್ರೊ. ನಾಗೇಶ್ ಕುಮಾರ್ ವಿವರಿಸುತ್ತಾರೆ.

ಮೊದಲನೆಯದಾಗಿ, ಸಂಶೋಧಕರು ಈ ಅಧ್ಯಯನದಲ್ಲಿ, ಪರ್ಯಾಯ ದ್ವೀಪದ ನದಿ-ಜಲಾಶಯಗಳ ಮೇಲ್ಮೈ ನೀರಿನ ಶೇಖರಣೆಯ ಬಗ್ಗೆ ಮಾಹಿತಿ ಕಲೆಹಾಕಿದರು. 2002ರಿಂದ 2014ರವರೆಗಿನ 13 ವರ್ಷಗಳ ಮಾಹಿತಿಯನ್ನು ಅಧ್ಯಯನ ಮಾಡಿ, ಅದರ ಜೊತೆಗೆ, ಮಣ್ಣಿನ ತೇವಾಂಶ ಹಾಗೂ ನೀರಿನಿಂದ ಆವೃತವಾದ ಪ್ರದೇಶದ ವಿಸ್ತೀರ್ಣವನ್ನು ಲೆಕ್ಕಹಾಕಲು ಉಪಗ್ರಹದ ಸಹಾಯ ಪಡೆಯಲಾಯಿತು.

‘ಇಲ್ಲಿ ಅನುಸರಿಸಿರುವ ಪ್ರದೇಶ-ಆಧಾರಿತ ಅಧ್ಯಯನ ವಿಧಾನದ ಪ್ರಕಾರ, ನೀರಿನ ಪ್ರಮಾಣದ ಏರಿಕೆ ಹಾಗೂ ಇಳಿಕೆಯ ವಿನ್ಯಾಸವು, ಜಲಾಶಯಕ್ಕೆ ಅನುಗುಣವಾಗಿ ಬದಲಾಗಬಹುದು ಮತ್ತು ಇಲ್ಲಿರುವಂತಹದ್ದೇ ವಿನ್ಯಾಸ ಬೇರೆ ಯಾವುದೋ ನದಿ-
ಜಲಾಶಯಗಳ ಪ್ರದೇಶಗಳಲ್ಲೂ ಇರಬಹುದು. ಈ ಸಾಧ್ಯತೆಗಳನ್ನೂ ನಾವು ಅಲ್ಲಗಳೆಯುವಂತಿಲ್ಲ ಎಂದುಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕಪ್ರೊಫೆಸರ್ ನಾಗೇಶ್ ಕುಮಾರ್ ಹೇಳುತ್ತಾರೆ.

‘GRACE’ ನಿಂದ ದೊರೆತ ಮಾಹಿತಿ ಬಳಸಿಕೊಂಡು, ಸಂಶೋಧಕರು ನರ್ಮದಾ, ತಪತಿ, ಮಾಹಿ, ಗೋದಾವರಿ ಮತ್ತು ಕೃಷ್ಣಾ ನದಿಗಳ ಹರಿವಿನ ಆಧಾರದ ಮೇಲೆ, ಪರ್ಯಾಯ ದ್ವೀಪವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ.

ಮೂರು ವಿಭಾಗಗಳು ಕೃಷ್ಣಾ ಮತ್ತು ಗೋದಾವರಿ ಜಲಾಶಯಗಳ ಸುತ್ತಲಿನ ಪ್ರದೇಶವನ್ನು ಒಳಗೊಂಡರೆ, ಒಂದು ವಿಭಾಗವು ಪಶ್ಚಿಮಾಭಿಮುಖವಾಗಿ ಹರಿಯುವ ಉಳಿದ ನದಿಗಳನ್ನು ಒಳಗೊಂಡಿದೆ. ಎಈ ಪ್ರದೇಶಗಳಲ್ಲಿನ ನೀರಿನ ಸಂಗ್ರಹವು, ಒಟ್ಟಾರೆಯಾಗಿ 74 ಕ್ಯೂಬಿಕ್ ಕಿಲೋಮೀಟರ್ ಪರಿಮಾಣಕ್ಕಿಂತಲೂ (Volume) ಹೆಚ್ಚಾಗಿದೆ ಎಂಬುದು ಗಮನಾರ್ಹ ಸಂಗತಿ. ಇದರ ಅರ್ಥ, ಏರಿಕೆಯಾಗಿರುವ ನೀರಿನ ಪ್ರಮಾಣವು, ಭಾರತದ ದೊಡ್ಡ ಅಣೆಕಟ್ಟಿಗಿಂತ (3.5 ಕ್ಯೂಬಿಕ್ ಕಿ.ಮೀ) ಸುಮಾರು 20ಪಟ್ಟು ಹೆಚ್ಚಿನದು.

ಹಾಗಾದರೆ, ಈ ರೀತಿಯ ಮೇಲ್ಮೈ ನೀರಿನ ಹೆಚ್ಚಳಕ್ಕೆ ಕಾರಣವೇನು? ಈ ಪ್ರಶ್ನೆಗೆ ಉತ್ತರವಾಗಿ, ಸಂಶೋಧಕರು ಹಲವಾರು ಸನ್ನಿವೇಶಗಳನ್ನು ಅವಲೋಕಿಸಿ, ಕೆಲವು ಪ್ರಮುಖ ಕಾರಣಗಳನ್ನು ನೀಡಿದ್ದಾರೆ.

ಮಳೆಯಲ್ಲಿ ಆಗಿರಬಹುದಾದ ಹೆಚ್ಚಳ, ಆವಿಯಾಗುವಿಕೆಯಲ್ಲಿ ಆಗಿರಬಹುದಾದ ಇಳಿಕೆ, ಹೊಸ ಆಣೆಕಟ್ಟುಗಳ ನಿರ್ಮಾಣದಿಂದ ನದಿ ನೀರಿನಲ್ಲಿ ಆಗಿರಬಹುದಾದ ಇಳಿಕೆ ಇತ್ಯಾದಿ. ಇವೆಲ್ಲಾ ಕಾರಣಗಳಲ್ಲಿ, ಮಳೆಯ ಪ್ರಮಾಣದಲ್ಲಿ ಆಗಿರುವ ಹೆಚ್ಚಳವು ಅತೀ ಮುಖ್ಯವಾದುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಈ ಅಧ್ಯಯನವು ಮಳೆಯ ಪ್ರಮಾಣದ ಪರಿಣಾಮವನ್ನು ಪರಿಶೀಲಿಸಿ, ಅಧ್ಯಯನದ ಅವಧಿಯಲ್ಲಿ ಮಳೆಯ ಪ್ರಮಾಣವು ಮೇಲ್ಮೈಜಲ ಮತ್ತು ಅಂತರ್ಜಲ ಎರಡರ ಏರಿಕೆಯಲ್ಲಿಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ತೀರ್ಮಾನಿಸಿತು.

2002ರಲ್ಲಿ ತೀವ್ರವಾಗಿ ಅಪ್ಪಳಿಸಿದ ಬರಗಾಲವನ್ನು ಮುಂದಿಟ್ಟುಕೊಂಡು, ಈ ಫಲಿತಾಂಶಗಳನ್ನು ನಾವು ಅವ
ಲೋಕಿಸಬೇಕು ಎಂದು ಸಂಶೋಧಕರು ಸೂಚಿಸುತ್ತಾರೆ. ಏಕೆಂದರೆ ಆ ಬರಗಾಲವು ಅಂತರ್ಜಲದ ಮಟ್ಟವನ್ನು ಕಡಿಮೆ ಮಾಡಿತ್ತು. GRACE ಮಾಹಿತಿಯು 2002ರ ಮೊದಲು ಲಭ್ಯ ಇಲ್ಲದಿರುವುದರಿಂದ, ಈ ಇಳಿಕೆಯನ್ನು ಅರ್ಥಮಾಡಿಕೊಳ್ಳಲು ಯಾವುದೇ ಪ್ರಮಾಣಗಳು ನಮಗೆ ಲಭ್ಯವಿಲ್ಲ.

‘2002ರಿಂದಲೂ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಂತರ್ಜಲ ಮತ್ತು ಮೇಲ್ಮೈ ನೀರಿನ ಮಟ್ಟವು ತೀವ್ರ ಬರ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಅನುಕೂಲವಾಗಿದೆ’ ಎಂದು ಈ ಅಧ್ಯಯನದ ಸಹ ಲೇಖಕರಾಗಿರುವ ಶ್ರೀಯುತ ಚಂದನ್ ಹೇಳುತ್ತಾರೆ.

(ಗುಬ್ಬಿ ಲ್ಯಾಬ್ಸ್‌–ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಒಂದು ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT