ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಪುಟಗಳಿಂದ...

Last Updated 8 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ವಿಶ್ವ ಕ್ರಿಕೆಟ್‌ನ ಅನಭಿಶಕ್ತ ದೊರೆಯಂತೆ ಮೆರೆಯುತ್ತಿದ್ದ ವೆಸ್ಟ್‌ ಇಂಡೀಸ್‌ ಪ್ರಾಬಲ್ಯಕ್ಕೆ ‘ಕಪಿಲ್‌ ಡೆವಿಲ್ಸ್‌’ ಕಡಿವಾಣ ತೊಡಿಸಿದ ನಂತರ ನಡೆದದ್ದೇ 1987ರ ವಿಶ್ವಕಪ್‌ ಹಬ್ಬ.

ಅಕ್ಟೋಬರ್‌ 8ರಿಂದ ನವೆಂಬರ್‌ 8ರವರೆಗೆ ನಡೆದ ಈ ಟೂರ್ನಿಯ ಆತಿಥ್ಯವನ್ನು ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ವಹಿಸಿಕೊಂಡಿದ್ದು ವಿಶೇಷ. ಇಂಗ್ಲೆಂಡ್‌ನಿಂದ ಹೊರಗೆ ನಡೆದ ಮೊದಲ ವಿಶ್ವಕಪ್‌ ಕೂಡಾ ಇದಾಗಿತ್ತು. ಇದಕ್ಕೂ ಮೊದಲು ನಡೆದ ಮೂರು ಟೂರ್ನಿಗೂ ಇಂಗ್ಲೆಂಡ್‌ ಆತಿಥ್ಯ ವಹಿಸಿತ್ತು.

ಅಕ್ಟೋಬರ್ 9ರಂದು ನಡೆದ ಮೊದಲ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಗಿದ್ದವು. ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 270ರನ್‌ ಗಳಿಸಿತ್ತು. ಭಾರತ 49.5 ಓವರ್‌ಗಳಲ್ಲಿ 269ರನ್‌ಗಳಿಗೆ ಆಲೌಟ್‌ ಆಗಿ ಒಂದು ರನ್‌ನಿಂದ ವೀರೋಚಿತ ಸೋಲು ಕಂಡಿತ್ತು.

ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ನವಜೋತ್‌ ಸಿಂಗ್‌ ಸಿಧು 73ರನ್‌ ಗಳಿಸಿ ಮಿಂಚಿದ್ದರು. ವಿಶ್ವಕಪ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಟೂರ್ನಿಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಜಿಂಬಾಬ್ವೆ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ಆಡಿದ ಆರು ಪಂದ್ಯಗಳಿಂದ  5ಗೆಲುವು ಹಾಗೂ ಒಂದು ಸೋಲಿನೊಂದಿಗೆ 20 ಪಾಯಿಂಟ್ಸ್‌ ಕಲೆಹಾಕಿ ಗುಂಪಿನಲ್ಲಿ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತ್ತು.

ಸೆಮಿಯಲ್ಲಿ ತಂಡ ಇಂಗ್ಲೆಂಡ್‌ ಎದುರು 35ರನ್‌ಗಳ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದ ಫೈನಲ್‌ನಲ್ಲಿ ಅಲನ್‌ ಬಾರ್ಡರ್‌ ನೇತೃತ್ವದ ಆಸ್ಟ್ರೇಲಿಯಾ ಏಳು ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿ ಚೊಚ್ಚಲ ವಿಶ್ವ ಕಪ್‌ ಎತ್ತಿಹಿಡಿಯಿತು.

ಬಣ್ಣದ ಅನಾವರಣ: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಜಂಟಿ ಆತಿಥ್ಯದಲ್ಲಿ 1992ರ  ಫೆಬ್ರುವರಿ 22ರಿಂದ ಮಾರ್ಚ್‌ 5ರವರೆಗೆ ಜರುಗಿದ ಐದನೇ ವಿಶ್ವಕಪ್‌ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು.

ಆಟಗಾರರು ಬಣ್ಣದ ಉಡುಗೆ ತೊಟ್ಟು ಆಡಿದ ಮೊದಲ ವಿಶ್ವಕಪ್‌ ಇದಾಗಿತ್ತು. ಇದರ ಜತೆಗೆ ಆಟದಲ್ಲಿ ಬಿಳಿ ಚೆಂಡನ್ನು ಬಳಕೆಗೆ ತಂದಿದ್ದೂ ಇದೇ ವಿಶ್ವಕಪ್‌ನಲ್ಲಿ.  ಟೂರ್ನಿಯಲ್ಲಿ ಹಗಲು–ಇರುಳಿನಲ್ಲಿ ಕೆಲ ಪಂದ್ಯಗಳು ನಡೆದಿದ್ದು ಮತ್ತೊಂದು ವಿಶೇಷ.

ಈ ಟೂರ್ನಿಯಲ್ಲಿ ಭಾರತ 8 ಪಂದ್ಯ ಆಡಿತ್ತು. ಇದರಲ್ಲಿ ಗೆದ್ದಿದ್ದು ಎರಡು ಪಂದ್ಯ, ಸೋತಿದ್ದು ಐದರಲ್ಲಿ. ಒಂದು ಪಂದ್ಯ ಫಲಿತಾಂಶ ಕಾಣಲಿಲ್ಲ. ಹೀಗಾಗಿ ತಂಡ ರೌಂಡ್‌ ರಾಬಿನ್‌ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತು. ಫೈನಲ್‌ನಲ್ಲಿ ಪಾಕಿಸ್ತಾನ 22ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಪರಾಭವಗೊಳಿಸಿ ವಿಶ್ವಕಪ್‌ ಜಯಿಸಿತು.

ಜಯಸೂರ್ಯ ಮೋಡಿ: 1996ರ ವಿಶ್ವಕಪ್‌ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದ ಜಂಟಿ  ಆತಿಥ್ಯದಲ್ಲಿ ನಡೆಯಿತು. ಭಾರತ ಟೂರ್ನಿಯ 17 ಪಂದ್ಯಗಳನ್ನು 17 ಕ್ರೀಡಾಂಗಣಗಳಲ್ಲಿ ಆಯೋಜಿಸಿತ್ತು. ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ಆಡಿದ 5 ಪಂದ್ಯಗಳಿಂದ ಆರು ಪಾಯಿಂಟ್ಸ್‌ ಗಳಿಸಲಷ್ಟೇ ಶಕ್ತವಾಗಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನದ ಎದುರು 39 ರನ್‌ಗಳ ಜಯ ಸಾಧಿಸಿದ್ದ ತಂಡ, ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎದುರು ಶರಣಾಗಿತ್ತು.

ಅರ್ಜುನ್‌ ರಣತುಂಗಾ ನಾಯಕತ್ವದ ಶ್ರೀಲಂಕಾ ಫೈನಲ್‌ನಲ್ಲಿ 7ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಆಲ್‌ರೌಂಡ್‌ ಪ್ರದರ್ಶನ ನೀಡಿದ್ದ ಜಯಸೂರ್ಯ ಸರಣಿ ಶ್ರೇಷ್ಠ ಗೌರವ ಪಡೆದಿದ್ದರು.

ಭಾರತಕ್ಕೆ ಮರುಕಳಿಸಿದ ವೈಭವ

2011ರ ವಿಶ್ವಕಪ್‌ಗೆ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ವೇದಿಕೆ ಕಲ್ಪಿಸಿದ್ದವು.

14 ತಂಡಗಳು ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು.‘ಸ್ಟಂಪಿ’ ಈ ಟೂರ್ನಿಯ ಲಾಂಛನವಾಗಿತ್ತು. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ಗುಂಪು ಹಂತದಲ್ಲಿ ಆರು ಪಂದ್ಯಗಳನ್ನಾಡಿತ್ತು. ಇದರಲ್ಲಿ ನಾಲ್ಕರಲ್ಲಿ ಗೆದ್ದರೆ, ಒಂದರಲ್ಲಿ ಸೋತಿತ್ತು. ಮತ್ತೊಂದು ಪಂದ್ಯ ‘ಟೈ’ ಆಗಿತ್ತು.

ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು. ಸೆಮಿಫೈನಲ್‌ನಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗ ಪಾಕಿಸ್ತಾನದ ಎದುರು 29ರನ್‌ಗಳ ಜಯಭೇರಿ ಮೊಳಗಿಸಿತ್ತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ಎದುರಿನ ಫೈನಲ್‌ನಲ್ಲಿ ಭಾರತ ಆರು ವಿಕೆಟ್‌ಗಳಿಂದ ಗೆದ್ದು 28 ವರ್ಷಗಳ ಬಳಿಕ ವಿಶ್ವಕಪ್‌ ಎತ್ತಿಹಿಡಿದ ಸಾಧನೆ ಮಾಡಿತ್ತು. ಕ್ಯಾನ್ಸರ್‌ ನಡುವೆಯೂ ಕೆಚ್ಚೆದೆಯ ಆಟ ಪ್ರದರ್ಶಿಸಿದ್ದ ಭಾರತದ ಯುವರಾಜ್‌ ಸಿಂಗ್‌ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.

ಆಸ್ಟ್ರೇಲಿಯಾದ ಪಾರಮ್ಯ: 1999ರ ಏಳನೇ ವಿಶ್ವಕಪ್‌ ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ಐರ್ಲೆಂಡ್‌ ಮತ್ತು ಹಾಲೆಂಡ್‌ ನೆಲದಲ್ಲಿ ನಡೆಯಿತು.
ಭಾರತ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಮೂರು ವಿಕೆಟ್‌ ಸೋಲು ಕಂಡಿತ್ತು.
ಸೂಪರ್‌ ಸಿಕ್ಸ್‌ ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ವಿರುದ್ಧ ಎದುರಾದ ಸೋಲು ಭಾರತದ ಪ್ರಶಸ್ತಿ ಕನಸನ್ನು ಭಗ್ನಗೊಳಿಸಿತ್ತು.

ಜೂನ್‌ 20 ರಂದು ‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ ಅಂಗಳದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿ ಎರಡನೇ ಬಾರಿ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರವಾಯಿತು.

ಪಾಂಟಿಂಗ್‌ ಮ್ಯಾಜಿಕ್‌: 2003ರ ವಿಶ್ವಕಪ್‌ ದಕ್ಷಿಣ ಆಫ್ರಿಕಾದ ನೆಲದಲ್ಲಿ ನಡೆದ ಮೊದಲ ಕ್ರಿಕೆಟ್‌ ಹಬ್ಬ. ಈ ಟೂರ್ನಿ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಯಿತು. ಟೆಸ್ಟ್‌ ಆಡದ ರಾಷ್ಟ್ರ ಎನಿಸಿದ್ದ ಕೆನ್ಯಾ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿತ್ತು.

ಅಮೋಘ ಪ್ರದರ್ಶನ ನೀಡಿದ್ದ ಸೌರವ್‌ ಗಂಗೂಲಿ ಮುಂದಾಳತ್ವದ ಭಾರತ ಪ್ರಶಸ್ತಿ ಸುತ್ತು ತಲುಪಿತ್ತು. ಸೆಮಿಫೈನಲ್‌ನಲ್ಲಿ ಕೆನ್ಯಾ ಎದುರು 91ರನ್‌ಗಳ ಜಯಭೇರಿ ಮೊಳಗಿಸಿದ್ದ ಭಾರತ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 125ರನ್‌ಗಳಿಂದ ಸೋತು ಟ್ರೋಫಿ ಗೆಲುವಿನ ಅವಕಾಶ ಕೈಚೆಲ್ಲಿತು. 2007ರ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ, ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು.

ನಂತರ ಬರ್ಮುಡಾ ಎದುರು 257ರನ್‌ಗಳಿಂದ ಗೆದ್ದ ಭಾರತ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 69ರನ್‌ಗಳಿಂದ ಸೋತು ಗುಂಪುಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತು.

ರಿಕಿ ಪಾಂಟಿಂಗ್‌ ನೇತೃತ್ವದ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 53ರನ್‌ಗಳಿಂದ ಶ್ರೀಲಂಕಾವನ್ನು ಮಣಿಸಿ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಕೀರ್ತಿ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT