ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯುರ್ವೇದದ ಅರಿವು

Last Updated 25 ಅಕ್ಟೋಬರ್ 2022, 3:17 IST
ಅಕ್ಷರ ಗಾತ್ರ

ಕೊರೊನಾಯುಗದಂತಹ ಕಠಿಣ ಕಾಲ ಹಿಂದೆಯೂ ಬಂದಿತ್ತು. ‘ವಿಘ್ನ ಭೂತಾಃ ಯದಾ ರೋಗಾಃ ಪ್ರಾದುರ್ಭೂತಾ ಶರೀರಿಣಾಂ‘ - ಎಂದರೆ ದಿನದಿನದ ಕಾಯಕ ನಡೆಸಲು ಜನರ ಪರದಾಟದ ಪರಿಸ್ಥಿತಿ. ಅದನ್ನು ಹೋಗಲಾಡಿಸಲು ಹಿಮವತ್ ಪರ್ವತದ ತಪ್ಪಲಿನಲ್ಲಿ ಋಷಿಗಣ ಸಭೆ ಸೇರಿತ್ತಂತೆ. ಕೊನೆಗೆ ಆತ್ರೇಯ ಭರದ್ವಾಜ ಋಷಿಗಳು ನೇತೃತ್ವ ವಹಿಸಿದರಂತೆ. ಐವತ್ತನಾಲ್ಕು ಮಂದಿ ಸೇರಿದ್ದ ಮುನಿಗಣದ ತಂಡ ಇಂದ್ರನನ್ನು ಸಂಧಿಸಿತ್ತಂತೆ. ಬ್ರಹ್ಮದೇವರು ಆಯುರ್ವೇದವನ್ನು ಸ್ಮರಿಸಿದರಂತೆ. ಅವರು ಅದನ್ನು ಪ್ರಜಾಪತಿಗೆ ಬೋಧಿಸಿದರಂತೆ. ಅವರಿಂದ ಈ ವಿದ್ಯೆಯು ವೇದಯುಗದ ಅವಳಿ ವೈದ್ಯರೆನಿಸಿದ್ದ ಅಶ್ವಿನೀ ದೇವತೆಗಳಿಗೆ ಲಭಿಸಿದ್ದಂತೆ. ಅನಂತರ ಸಹಸ್ರಾಕ್ಷನೆನಿಸಿದ ಇಂದ್ರನಿಗೆ ದಕ್ಕಿತು. ಇಂದ್ರನಿಂದ ಆತ್ರೇಯ ಭರದ್ವಾಜರಿಗೆ ವೈದ್ಯವಿದ್ಯೆ ಲಭಿಸಿದ ಕಥೆ ಚರಕಸಂಹಿತೆಯ ಮೊದಲ ಅಧ್ಯಾಯದಲ್ಲಿದೆ. ಹೀಗೆ ಕನಿಷ್ಠ ಐದು ಸಾವಿರ ವರ್ಷದ ಮೌಖಿಕ ಜ್ಞಾನಪರಂಪರೆ ಸ್ಮೃತಿ ಮತ್ತು ಶ್ರುತಿಯ ರೂಪವಾಗಿತ್ತು. ಅದು ಸಂಹಿತೆಯಾದುದು ಚರಕಮಹರ್ಷಿಯ ಕಾಲದಲ್ಲಿ. ಗುಪ್ತಯುಗದ ಸಂಕಲಿತ ಕೃತಿ ‘ಚರಕ ಸಂಹಿತೆ’ ಎಂಬ ಇತಿಹಾಸಕಾರರ ಅಭಿಪ್ರಾಯವಿದೆ.

ಚರಕ ಸಂಹಿತೆಯ ಒಂದು ಶ್ಲೋಕದ ಭಾವಾರ್ಥ ಹೀಗಿದೆ:‘ಚಿರಾಯುಗಳಾಗುವ ವಿಧಾನ ಅರಿಯಿರಿ. ನಿತ್ಯವೂ ಹಿತಮಿತದ ಆಹಾರ ಪದ್ಧತಿ ಮತ್ತು ದಿನಚರಿ ನಮ್ಮದಾಗಲಿ. ಹಿತ ಅಹಿತದ ವಿಚಕ್ಷಣೆ ನಮ್ಮ ಜೀವನಶೈಲಿಯಾಗಲಿ. ವಿಷಯಸುಖಗಳತ್ತ ಬೇಡ ನಮ್ಮ ಆಕರ್ಷಣೆ. ದಾನಶೀಲತೆಯೇ ನಮ್ಮ ಬದುಕಾಗಲಿ. ಸತ್ಯಪರತೆಯ ಬದುಕನ್ನು ಬಾಳೋಣ. ಕ್ಷಮಾಗುಣ ಮೈಗೂಡಿಸಿಕೊಳ್ಳೋಣ. ಆಪ್ತೋಪಸೇವೀ ಎಂದರೆ ನಮಗೆ ಹಿತ ಬಯಸುವ ಗುರು, ಹಿರಿಯರನ್ನು ನಾವು ಗೌರವಿಸಿ ಅವರನ್ನು ಉಪಚರಿಸೋಣ. ಇಂತಹ ಜೀವನದಿಂದ ನಿರೋಗತ್ವ ಸಾಧಿಸಲಾದೀತು’.

ಅಷ್ಟಾಂಗಗಳು

ಇಂದು ಸೂಪರ್ ಸ್ಪೆಷಾಲಿಟಿ ಯುಗ. ಅಂತಹುದೇ ಸ್ಪೆಷಾಲಿಟಿ ಆಯುರ್ವೇದದಲ್ಲಿ ಹಿಂದೆ ಇತ್ತು. ಕಾಯಚಿಕಿತ್ಸೆ ಎಂಬುದು ಇಂಟರ್ನಲ್ ಮೆಡಿಸಿನ್. ಚರಕಸಂಹಿತೆಯೇ ಈ ವಿಭಾಗದ ಆಧಾರ ಗ್ರಂಥ. ಬಾಲತಂತ್ರ ಎಂಬುದು ಹಿಂದಿನ ಪೀಡಿಯಾಟ್ರಿಕ್ಸ್. ಕಾಶ್ಯಪ ಎಂಬ ಮುನಿ ಬರೆದ ಸಂಹಿತೆಯಿಂದ ಐದು ಸಾವಿರ ವರ್ಷ ಪೂರ್ವದ ಶಿಶು ಪೋಷಣೆ, ಶೈಶವದ ಕಾಯಿಲೆಗಳು ಮತ್ತು ಚಿಕಿತ್ಸೆ ವಿಧಾನ ನಮಗೆ ಅರಿವಿಗೆ ಬರುತ್ತದೆ. ಗ್ರಹಚಿಕಿತ್ಸೆ ಎಂಬುದು ಮಾನಸ ರೋಗವಿಜ್ಞಾನ ಅಥವಾ ಅಂದಿನ ಸೈಕಿಯಾಟ್ರಿ. ಊರ್ಧ್ವಾಂಗ ಚಿಕಿತ್ಸೆ ಎಂಬುದು ಇಂದಿನ ಇ.ಎನ್.ಟಿ. ಅಥವಾ ಕಿವಿ, ಮೂಗು, ಗಂಟಲ ಕಾಯಿಲೆಗಳ ಅರಿವಿನ ವಿಶೇಷ ವಿಭಾಗ. ನೇತ್ರಚಿಕಿತ್ಸೆಯ ಪರಿಣತಿ ಅಗಾಧ ರೂಪದ್ದು. ಅದು ಸಹ ಇದೇ ವಿಭಾಗದಡಿ ವರ್ಣಿತ. ಶಲ್ಯಚಿಕಿತ್ಸೆಯು ಅಂದಿನ ಸರ್ಜಿಕಲ್ ಪರಿಣತಿ. ಸುಶ್ರುತ ಎಂಬ ಶಸ್ತ್ರವೈದ್ಯ ಆ ಯುಗದ ಖ್ಯಾತ ಸರ್ಜನ್. ಇದನ್ನು ಧನ್ವಂತರಿ ಸಂಪ್ರದಾಯ ಎಂದೂ ಕರೆಯುವರು. ಕಾಶಿಯ ರಾಜ ದಿವೋದಾಸ ಧನ್ವಂತರಿಯೇ ಈ ಶಾಖೆಯ ಮೂಲಪ್ರವರ್ತಕ. ವಿಷ ಮತ್ತು ವಿಷ ಜಂತುಗಳ ಕಡಿತದ ವಿಭಾಗವು ಅಂದಿನ ಟಾಕ್ಸಿಕಾಲಜಿ. ಕೊನೆಯ ಎರಡು ವಿಭಾಗಗಳು ಅಂದು ಮತ್ತು ಇಂದೂ ಸಹ ಹೆಚ್ಚು ಪ್ರಸ್ತುತ.

ಜರಾ ಎಂದರೆ ಮುದಿತನ. ಜೆರಂಟಾಲಜಿ ಎಂದರೆ ಹಿರಿಹರೆಯದ ತೊಂದರೆ ಮತ್ತು ಮುಪ್ಪು ಮುಂದೂಡುವ ವಿಜ್ಞಾನ;ಜರಾ ಚಿಕಿತ್ಸೆ – ಇದನ್ನು ಅಷ್ಟಾಂಗದ ಪ್ರಮುಖ ಅಂಗ ಎಂದು ಭಾವಿಸಲಾಗಿದೆ. ಕೊನೆಯದು ವೃಷಚಿಕಿತ್ಸೆ. ಸ್ತ್ರೀ ಪುರುಷರ ಫಲವತ್ತತೆ ಅಂದಿಗಿಂತ ಇಂದು ಬಲು ದೊಡ್ಡ ಸವಾಲು. ನಿರೋಗಿಯಾದ ಶಿಶುವನ್ನು ಪಡೆಯುವ, ಸುದೀರ್ಘ ಕಾಲ ಲೈಂಗಿಕತೆ ಕಾಪಾಡುವ ವಿಭಾಗವು ಆಯುರ್ವೇದದ ಕೊನೆಯ ಸ್ಪೆಷಾಲಿಟಿ.

ಆಯುರ್ವೇದದ ಮೂಲ ಗುರಿ ಕೇವಲ ಆರೋಗ್ಯ ಸಾಧನೆ ಮಾತ್ರ ಅಲ್ಲ. ಚರಮಗುರಿ ಚತುರ್ವಿಧ ಪುರುಷಾರ್ಥ ಸಾಧನೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಸಾಧನೆಯೇ ಮೂಲ ಉದ್ದೇಶ. ಆಯುಸ್ಸಿನ ವೇದವೇ ಆಯುರ್ವೇದ. ನಮ್ಮ ಸುದೀರ್ಘ ಬದುಕಿನ ಮಜಲುಗಳು ಬಾಲ್ಯ, ಯೌವನ, ಹಿರಿಹರೆಯ ಮತ್ತು ವೃದ್ಧಾಪ್ಯದ್ದು. ಇದು ದೀರ್ಘವಾಗಿದ್ದರೆ ಸಾಲದು. ಸುಖಾಯು ರೂಪದ್ದಾಗಿರಲಿ. ಹಿತಾಯುವಾಗಲಿ ಎಂಬ ಚಿಂತನೆಯೇ ಆಯುರ್ವೇದದ ಚರಮ ಗುರಿ. ಆಗ ಮಾತ್ರ ನಮ್ಮ ಜೀವನದ ಶ್ರೇಯಸ್ಸು ಲಭಿಸೀತು. ನಿಶ್ರೇಯಸ್ಸು, ಎಂದರೆ ಮೋಕ್ಷ ಮಾರ್ಗದ ಹಾದಿ ಸುಗಮ ಎನ್ನುತ್ತದೆ ಚರಕಾದಿ ಮುನಿಗಳ ಕ್ಷೇಮಚಿಂತನೆಯ ಧಾಟಿ. ಪ್ರಪಂಚದ ಯಾವ ವೈದ್ಯಕೀಯ ಶಾಸ್ತ್ರವೂ ಇಂತಹ ಮೇಲ್ಪಂಕ್ತಿ ಹೊಂದಿಲ್ಲ ಎಂಬ ಹೆಮ್ಮೆ ನಮ್ಮದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT