ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಮಾತು ಅರ್ಥಗಳ ದಾಂಪತ್ಯ– ಸುಖಿ ದಾಂಪತ್ಯದ ಬಗ್ಗೆ ಲೇಖನ

Last Updated 1 ನವೆಂಬರ್ 2022, 0:15 IST
ಅಕ್ಷರ ಗಾತ್ರ

ಇಬ್ಬರು ವ್ಯಕ್ತಿಗಳು ಮದುವೆಯಾದ ನಂತರ ಎಲ್ಲವನ್ನೂ ಹಂಚಿಕೊಂಡು ಒಂದೇ ಸೂರಿನಡಿಗೆ ಬದುಕು ಸಾಗಿಸುವುದು ಸುಲಭದ ಕಾರ್ಯವಲ್ಲ; ಅದೊಂದು ತಪಸ್ಸೇ..

***

ಆ ನದಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹರಿಯುತ್ತದೆ. ಎರಡೂ ಕಡೆಗೂ ಜನರಿದ್ದಾರೆ. ಈ ನದಿಯ ನೀರು ಹರಿಯುವುದನ್ನು ನೋಡುವುದೇ ಮನಸ್ಸಿಗೆ ಖುಷಿಕೊಡುತ್ತದೆ. ಹಾಗೆಯೇ ಎರಡೂ ಜಾಗದ ಜನರಿಗೆ ಎಷ್ಟೋ ಅನುಕೂಲಗಳು. ಒಮ್ಮೊಮ್ಮೆ ನದಿಯ ನೀರಿನ ಪ್ರಮಾಣ ಕಡಿಮೆಯಾಗಿ, ಈ ಬದಿಯ ಜನರಿಗೆ ನೀರೇ ಸಿಗುವುದಿಲ್ಲ. ಇನ್ನು ಕೆಲವು ಬಾರಿ, ನೀರಿನ ರಭಸ ಹೆಚ್ಚಾಗಿ, ಈ ಬದಿಯ ಜಾಗಕ್ಕೆ ನೀರು ಮುನ್ನುಗ್ಗಿ ಬಂದು, ತೊಂದರೆಗಳನ್ನು ಮಾಡುತ್ತದೆ. ಒಟ್ಟಿನಲ್ಲಿ ಈ ನದಿಯ ನೀರು ಹೆಚ್ಚು ಅಲ್ಲದೇ, ಕಡಿಮೆಯೂ ಆಗದೇ, ಸರಿಯಾದ ಪ್ರಮಾಣದಲ್ಲಿ ಹರಿದರಷ್ಟೇ ಎಲ್ಲವೂ ಸಹಜ, ಸಂತಸ. ಅಂತೆಯೇ ಪತಿ-ಪತ್ನಿಯ ನಡುವಿನ ಸಂವಹನ ಕೂಡ. ಸಂಗಾತಿಗಳ ಮಧ್ಯೆ, ಈ ನದಿಯ ನೀರಿನಂತೆ ಮನಸ್ಸಿನ ಇಚ್ಛೆಗಳು-ಯೋಚನೆಗಳು, ಮಾತುಗಳ ಮೂಲಕ ಸರಿಯಾಗಿ ಒಬ್ಬರಿಂದ ಇನ್ನೊಬ್ಬರಿಗೆ ತಲುಪಿದರೆ ಎಲ್ಲವೂ ಸುಖ. ಇಲ್ಲದಿದ್ದರೆ ದಾಂಪತ್ಯದಲ್ಲಿ ವಿಧವಿಧ ಸಮಸ್ಯೆಗಳು. ಒಂದು ಅಧ್ಯಯನದ ಪ್ರಕಾರ, ಸತಿ-ಪತ್ನಿಯ ನಡುವಿನ ಸಂವಹನ ಪರಿಣಾಮಕಾರಿಯಾಗಿದ್ದರೆ, ಶೇ. 50ರಷ್ಟು ವಿಚ್ಛೇದನಗಳನ್ನು ತಡೆಗಟ್ಟಬಹುದಂತೆ. ಇನ್ನೊಂದು ಅಧ್ಯಯನದ ಪ್ರಕಾರ ಲಿವಿಂಗ್ ರೂಂನಲ್ಲಿ ಆಗುವ ಸಂವಹನದಿಂದ, ನಿಮ್ಮ ಸಂಗಾತಿಗೆ ಸಂತಸ ಸಿಕ್ಕರೆ, ಬೆಡ್ ರೂಂನಲ್ಲಿನ ಲೈಂಗಿಕ ಕ್ರಿಯೆಯೂ ಸುಖಕರವಾಗಿರುತ್ತದಂತೆ.

ಪರಿಣಾಮಕಾರಿಯಾದ ಸಂವಹನ ಒಂದು ಕಲೆ. ಹುಟ್ಟಿನಿಂದಲೇ ಇರಬೇಕಾದ ಕೌಶಲವೇನಲ್ಲ. ಬಾಲ್ಯದ ಘಟನೆಗಳು, ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳು, ನಾವು ಬೆಳೆದ ವಾತಾವರಣ, ಕೌಟುಂಬಿಕ ಪರಿಸರ – ಇವೆಲ್ಲವೂ ನಾವು ಬೆಳೆಸಿಕೊಳ್ಳುವ ವಿವಿಧ ಸ್ವಭಾವ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತವೆ. ಈ ರೀತಿ ನಮ್ಮಲ್ಲಿ ರೂಪುಗೊಂಡ ಸಂವಹನ ಕಲೆನನ್ನು ನಾಳಿನ ಜೀವನ, ಪರಸ್ಪರ ವ್ಯಕ್ತಿಗಳ ಸಂಬಂಧಗಳು ಯಶಸ್ವಿಯಾಗಲು ಮಹತ್ವದ ಪಾತ್ರವನ್ನು ವಹಿಸುತ್ತವೆ. ಅದಕ್ಕೇ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಲ್ಲರಲ್ಲಿ ಇರಲೇಬೇಕಾದ ಹತ್ತು ಜೀವನ ಕೌಶಲಗಳಲ್ಲಿ, ಪರಿಣಾಮಕಾರಿಯಾದ ಸಂವಹನವೂ ಒಂದು. ಬೇರೆ ಬೇರೆ ಪರಿಸರದಲ್ಲಿ ಬೆಳೆದು, ಇಬ್ಬರು ವ್ಯಕ್ತಿಗಳು ಮದುವೆಯಾದ ನಂತರ ಎಲ್ಲವನ್ನೂ ಹಂಚಿಕೊಂಡು ಒಂದೇ ಸೂರಿನಡಿಗೆ ಬದುಕು ಸಾಗಿಸುವುದು ಸುಲಭದ ಕಾರ್ಯವಲ್ಲ. ಅದೊಂದು ತಪಸ್ಸೇ. ಈ ತಪಸ್ಸಿನಲ್ಲಿ ಇಬ್ಬರೂ ಈ ಸಂವಹನ ಕಲೆಯನ್ನು ರೂಢಿಸಿಕೊಂಡರೆ, ತಪಸ್ಸು ಕಷ್ಟವೆನಿಸಲಿಕ್ಕಿಲ್ಲ.

lಪತಿ-ಪತ್ನಿಯ ನಡುವೆ ಜಗಳಗಳು ಸಾಮಾನ್ಯವೇ. ಭಾವನಾತ್ಮಕವಾಗಿ ನೊಂದ ಮನಸ್ಸಿನಿಂದ ಬರುವಂತಹ ಮಾತುಗಳಿಗೆ ಹಲವಾರು ಬಾರಿ ಅರ್ಥವಿಲ್ಲ. ಅಸಂಬದ್ಧ ಪ್ರಲಾಪವದು. ಆದರೆ ಒಂದು ಬಾರಿ ಆಡಿದ ಮಾತು, ಇನ್ನೊಬ್ಬ ಸಂಗಾತಿಯಲ್ಲಿ ಗಟ್ಟಿಯಾಗಿ ಉಳಿದುಬಿಡುವುದು. ಆದ್ದರಿಂದ ಜಗಳಗಳಾಗುವಾಗ, ಆದಷ್ಟು ಮಾತು ನಿಯಂತ್ರಿಸಲು ಪ್ರಯತ್ನಿಸಿ. ಮನಸ್ಸು ಶಾಂತವಾದ ನಂತರ ನಿಮ್ಮ ಸಂವಾದ ಮುಂದುವರೆಯಲಿ.

lಸಂವಹನದ ಮೊದಲ ಹೆಜ್ಜೆ ಆಸಕ್ತಿಯಿಂದ ಕೇಳುವುದು, ನಿಮ್ಮ ಸಂಗಾತಿ ಮಾತನಾಡುವಾಗ ಅವರ ಮಾತುಗಳನ್ನು ಆಲಿಸಿ, ಕೈಯಲ್ಲಿರುವ ಮೊಬೈಲ್, ಕಿವಿಯಲ್ಲಿರುವ ಇಯರ್‌ ಫೋನ್‌, ಕಣ್ಣಲ್ಲಿ ನೋಡುತ್ತಿರುವ ಟಿ.ವಿ.ಯನ್ನು ಕೆಲವು ಕ್ಷಣಗಳ ಕಾಲವಾದರೂ ದೂರ ಮಾಡಿ.

lನೀವು ನಿಮ್ಮ ಸಂಗಾತಿಗೆ ಏನು ಹೇಳಲು ಬಯಸುತ್ತೀರ, ಅದನ್ನು ನೇರವಾಗಿ ಹೇಳಿ. ಸುತ್ತಿ ಬಳಸಿ, ನಕಾರಾತ್ಮಕವಾಗಿ ಹೇಳುವುದು ಬೇಡ.

lಇನ್ನೊಬ್ಬರು ನಮ್ಮ ಮಾತು ಕೇಳಲು, ನಾವು ಕಿರುಚಿ ಏರುದನಿಯಲ್ಲಿ ಹೇಳುವ ಅಗತ್ಯವಿಲ್ಲ.

lಸಂವಹನ ಎಂದಾಗ ಕೇವಲ ಮಾತಷ್ಟೇ ಅಲ್ಲ, ನಮ್ಮ ದೇಹದ ಭಾಷೆ (body language), ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಎಲ್ಲವೂ ಸೇರಿದೆ. ಆದ್ದರಿಂದ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡುವಾಗ, ಈ ಎಲ್ಲದರ ಬಗ್ಗೆ ಗಮನವಿರಲಿ.

lಇನ್ನೂ ಕೆಲವರಿರುತ್ತಾರೆ. ನೇರವಾಗಿ ಒಬ್ಬರಿಗೊಬ್ಬರು ಹೇಳದೇ, ಮೂರನೆಯವರ ಮುಖಾಂತರ ಹೇಳಿಸುತ್ತಾರೆ. ಗಂಡ-ಹೆಂಡತಿಯರ ಮಧ್ಯೆ ಮೂರನೆಯವರ ಮಧ್ಯಸ್ಥಿಕೆ ಬೇಡ.

lಸಂಗಾತಿಗಳ ಮಧ್ಯೆ ಭಿನ್ನತೆಗಳು ಇರುವುದು ಸಾಮಾನ್ಯ. ಭಿನ್ನತೆಗಳನ್ನು ಅರಿತು, ಸಾಧ್ಯವಾದಷ್ಟು ಹೊಂದಿಕೊಂಡು, ಇಲ್ಲದಿದ್ದರೆ ಪರಿಣಾಮಕಾರಿಯಾದ ಸಂವಹನದಿಂದ ಸರಿದೂಗಿಸಿಕೊಂಡರೆ ಬಾಳು ಬಂಗಾರವಾಗುತ್ತದೆ. ಆಗ ಸಂಸಾರ ಆನಂದಸಾಗರವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT