ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜೀರ್ಣ ಪಾಲಿಸಿ ತ್ರಿಸೂತ್ರ

ಭಾಗ–2
Last Updated 27 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಾರದ ಪ್ರಮಾಣವನ್ನು ಅರಿಯದೇ, ಪಶುವಿನಂತೆ ಅಧಿಕವಾಗಿ ತಿನ್ನುವುದೇ ಅಜೀರ್ಣ ಉಂಟಾಗಲು ಪ್ರಮುಖ ಕಾರಣ. ಆದ್ದರಿಂದ ಇಂತಹ ಅಜೀರ್ಣದಿಂದ ಪಾರಾಗಲು ಹಿತಭುಕ್, ಮಿತಭುಕ್, ಋತುಭುಕ್‌ಗಳೆಂಬ ತ್ರಿಸೂತ್ರಗಳನ್ನು ಪಾಲಿಸಬೇಕು.

ಹಿತವಾದ, ಮನಸ್ಸಿಗೆ ಹಿಡಿಸುವ ಆಹಾರ ಸೇವನೆ ಹಿತಭುಕ್. ಮಿತ ಪ್ರಮಾಣದಲ್ಲಿ ಆಹಾರ ಸೇವನೆ ಮಿತಭುಕ್ ಮತ್ತು ಆಯಾ ಋತುಗಳಿಗೆ ಅನುಸಾರವಾಗಿ ಆಹಾರ ಬಳಕೆ ಋತುಭುಕ್. `ಊಟ ಬಲ್ಲವನಿಗೆ ರೋಗವಿಲ್ಲ' ಎಂಬ  ಮಾತಿನಂತೆ ನಮ್ಮ ಶರೀರಕ್ಕೆ ಸೂಕ್ತವಾದವುಗಳನ್ನೇ ಸೇವಿಸಬೇಕು. ಉದಾ:  ಹೆಸರುಕಾಳು ಜೀರ್ಣಕ್ಕೆ ಸುಲಭ. ಉದ್ದು ಜೀರ್ಣಿಸಲು ಜಡವಾದದ್ದು.

-ಕೈಕಾಲು, ಮುಖ ತೊಳೆದು ಅಥವಾ ಸ್ನಾನ ಮಾಡಿದ ನಂತರ ಶುಭ್ರ ವಸ್ತ್ರ ಧರಿಸಿ ಸ್ವಚ್ಛ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಭೋಜನ ಮಾಡಬೇಕು.

-ಕೂದಲು, ಹುಳು ಇತ್ಯಾದಿಗಳಿಂದ ಮುಕ್ತವಾದ ಶುದ್ಧ ಆಹಾರ ಇರುವಂತೆ ಅಡುಗೆ ಮಾಡುವವರು ಮತ್ತು ಬಡಿಸುವವರು ಎಚ್ಚರ ವಹಿಸಬೇಕು.

-ಒಮ್ಮೆ ಬಿಸಿ ಮಾಡಿದ ಆಹಾರವನ್ನು ಪುನಃ ಬಿಸಿ ಮಾಡಿ ಸೇವಿಸಬಾರದು. ಅಂದರೆ ಫ್ರಿಡ್‌್ಜನಲ್ಲಿಟ್ಟ ಅಥವಾ ತಂಗಳು ಆಹಾರ ಬಳಸದೇ ತಾಜಾ ಆಹಾರವನ್ನು ಸೇವಿಸಬೇಕು.

-ಅತಿ ಬಿಸಿ ಅಥವಾ ತಣಿದುಹೋದ ಆಹಾರ ಒಳ್ಳೆಯದಲ್ಲ. ಮೀನು, ಮಾಂಸ ಇತ್ಯಾದಿ ಸರಿಯಾಗಿ ಬೇಯಿಸಿಯೇ ತಿನ್ನಬೇಕು.
-ಬೆಳಿಗ್ಗೆ ತುಂಬಾ ಮುಂಚಿತವಾಗಿ ಅಥವಾ ರಾತ್ರಿ ತುಂಬಾ ತಡವಾಗಿ ಆಹಾರ ಸೇವಿಸುವುದು ತರವಲ್ಲ.

-ಬಿಸಿಲಿನಲ್ಲಿ, ತೆರೆದ ವಾತಾವರಣದಲ್ಲಿ, ಮರದ ಕೆಳಗೆ, ಮಂಚ/ ಕುರ್ಚಿ ಮೇಲೆ, ತಟ್ಟೆ ಹಿಡಿದು ನಿಂತುಕೊಂಡು ತಿನ್ನಬಾರದು.

ಜೀರ್ಣ ಆದಾಗ...
ತಿಂದ ಆಹಾರ ಅಥವಾ ಹುಳಿತೇಗು ಇರದೇ ಇರುವಂತಹ ಶುದ್ಧವಾದ ತೇಗು, ಮಲ-ಮೂತ್ರ ವಿಸರ್ಜನೆ ಸಲೀಸಾಗಿ ಆಗುವುದು, ಶರೀರ ಹಗುರ ಎನಿಸುವುದು, ಹಸಿವು, ನೀರಡಿಕೆ ಸರಿಯಾಗಿ ಆಗುವುದು, ಉತ್ಸಾಹದಿಂದ ಇರುವುದು ತಿಂದ ಆಹಾರ ಸರಿಯಾಗಿ ಜೀರ್ಣವಾಗಿದೆ ಎಂಬುದನ್ನು ಸೂಚಿಸುತ್ತವೆ. 
   
ಜೀರ್ಣ ಆಗದಾಗ
ಶರೀರ ಭಾರ ಎನಿಸುವುದು, ಹೊಟ್ಟೆ ಮತ್ತು ಎದೆಯಲ್ಲಿ ವಾಯುವಿನಿಂದ ಸ್ತಬ್ಧಗೊಂಡಂತಹ ಅನುಭವ, ತಲೆ ಸುತ್ತು, ವಾಂತಿ, ಮಲಬದ್ಧತೆ, ಭೇದಿ ಅಥವಾ ಆಲಸ್ಯ ಅಜೀರ್ಣದ ಸಾಮಾನ್ಯ ಲಕ್ಷಣಗಳು.

-ತೆರೆದಿಟ್ಟ, ಸ್ವಚ್ಛವಿಲ್ಲದ ಪಾತ್ರೆಯಲ್ಲಿಟ್ಟ ಆಹಾರ ಸೇವಿಸಬಾರದು. -ಗಡಿಬಿಡಿಯಲ್ಲಿ/ ಅತಿ ನಿಧಾನವಾಗಿ ಊಟ ಮಾಡಬಾರದು.
-ಊಟದ ಮಧ್ಯೆ ಮಾತನಾಡುವುದು, ನಗುವುದು ಸರಿಯಲ್ಲ.

-ಆಹಾರದಲ್ಲಿ ಮನಸ್ಸಿಟ್ಟು ಏಕಾಗ್ರತೆಯಿಂದ ತಮ್ಮ ಜೀರ್ಣಶಕ್ತಿಗೆ ಅನುಸಾರವಾಗಿ ಆಹಾರ ಸೇವಿಸಬೇಕು. -ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಲಾಲಾಸ್ರಾವ ಹೆಚ್ಚಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. -ನೈಸರ್ಗಿಕ ಅಥವಾ ಸಾವಯವ ಕೃಷಿ ಮೂಲಕ ಬೆಳೆದ ಆಹಾರವನ್ನು ಬಳಸುವುದು ಒಳ್ಳೆಯದು.

-ಹೊಟ್ಟೆಯನ್ನು ಮೂರು ಭಾಗ ಎಂದು ಪರಿಗಣಿಸಿ, ಅದರಲ್ಲಿ ಎರಡು ಭಾಗವನ್ನು ಘನಾಹಾರ ಅಥವಾ ಅನ್ನದಿಂದಲೂ, ಒಂದು ಭಾಗವನ್ನು ದ್ರವಾಹಾರ ಅಥವಾ ನೀರಿನಿಂದಲೂ ತುಂಬಿಸಬೇಕು. ಇನ್ನೊಂದು ಭಾಗವನ್ನು ವಾಯು ಚಲಿಸಲು ಖಾಲಿ ಬಿಡಬೇಕು. 

ಸರ್ವಜ್ಞನ ವಚನದಿಂದಲೇ ಆರಂಭಿಸಿದ ಲೇಖನವನ್ನು ಸಮಯೋಚಿತವಾದ ಸರ್ವಜ್ಞನ ವಚನದೊಂದಿಗೇ ಮುಕ್ತಾಯ­ಗೊಳಿಸುವುದು ಹೆಚ್ಚು ಸಮಂಜಸ ಎನ್ನುವುದು ನನ್ನ ಭಾವನೆ.

ನಾಲಿಗೆಯ ಕಟ್ಟಿಹನು ಕಾಲನಿಗೆ ದೂರಹನು
ನಾಲಿಗೆಯ ರುಚಿಯ ಮೇಲಾಡುತಿರುವವನ
ಕಾಲಹತ್ತಿರವಕ್ಕು ಸರ್ವಜ್ಞ

ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡವನು ಯಮನಿಂದ ದೂರ ಇರುತ್ತಾನೆ. ನಾಲಿಗೆಯ ಅನುಸಾರ ಉಂಡು ತಿಂದವನು ಕಾಲನಿಗೆ, ಅಂದರೆ ಸಾವಿಗೆ ಹತ್ತಿರದವನಾಗುತ್ತಾನೆ.

ಒಟ್ಟಿನಲ್ಲಿ ಎಲ್ಲವೂ ಹಿತಮಿತವಾಗಿದ್ದರೆ ಮತ್ತು ಸೂಕ್ತ ರೀತಿಯಲ್ಲಿ ಆಹಾರ ಕ್ರಮಗಳನ್ನು ಅನುಸರಿಸಿದರೆ, ಆಹಾರ ಸಂಪೂರ್ಣ ಜೀರ್ಣವಾಗಿ ನಾವು ಹಲವು ರೋಗಗಳಿಂದ ದೂರವಿರಲು ಸಾಧ್ಯ.

ಚಿಕಿತ್ಸೆ ಏನು?
* ಆಮಾ ಜೀರ್ಣ ಆದಲ್ಲಿ ಬಜೆ, ಸೈಂಧವ ಲವಣವನ್ನು ನೀರಿಗೆ ಸೇರಿಸಿ ರೋಗಿಗೆ ಕುಡಿಸಿ ಅಥವಾ ಕೊತ್ತಂಬರಿ, ಶುಂಠಿ­ಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಸಿ ವಾಂತಿ ಮಾಡಿಸಬೇಕು.

* ವಿದಗ್ಧಾ ಜೀರ್ಣವಾಗಿದ್ದರೆ ಉಪವಾಸ ಮಾಡಿಸಬೇಕು. ತಂಪಾದ ನೀರನ್ನು ಕುಡಿಸಿ ವಿದಗ್ಧ ಪಿತ್ತವನ್ನು ಶಮನ ಮಾಡುವುದರಿಂದ, ವಿದಗ್ಧ ಅನ್ನವು ಜೀರ್ಣವಾಗಿ ಜಠರದಿಂದ ಮುಂದೆ ಸಾಗಿ ಕರುಳನ್ನು ಸೇರುತ್ತದೆ.

* ವಿಷ್ಟಬ್ಧಾ ಜೀರ್ಣ ಆಗಿದ್ದಲ್ಲಿ ಸೈಂಧವ ಲವಣ ಸೇರಿಸಿದ ನೀರನ್ನು ಕುಡಿಸಬೇಕು.
* ರಸಶೇಷಾ ಜೀರ್ಣದಲ್ಲಿ ಹಿಂಗು, ಶುಂಠಿ, ಹಿಪ್ಪಲಿ, ಕಾಳುಮೆಣಸು ಹಾಗೂ ಸೈಂಧವ ಲವಣಗಳನ್ನು ನೀರಿನಲ್ಲಿ ಕಲಸಿ ಹೊಟ್ಟೆಯ ಭಾಗಕ್ಕೆ ಲೇಪಿಸಿ, ನಿರ್ವಾತ ಸ್ಥಾನದಲ್ಲಿ ಮಲಗಿಸಿ ಉಪವಾಸ ಮಾಡಿಸಬೇಕು. 
 
ಯಾವ ದೋಷದಿಂದ ಅಜೀರ್ಣ ಉಂಟಾಗಿದೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಿದ ನಂತರವೇ, ಈ ಎಲ್ಲ ಚಿಕಿತ್ಸೆ ಮತ್ತು ಔಷಧಿಗಳನ್ನು ಆಯುರ್ವೇದ ತಜ್ಞರ ಸಲಹೆಯಂತೆ ಪಡೆಯಬೇಕು.          (ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT