ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಂತುಕ !

ಕೈ ಕುಲುಕಿ ಹೋದ
Last Updated 16 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

(ಗೆಳತಿ ರಶ್ಮಿ ಫೋನಿನಲ್ಲಿ ಹೇಳಿದ್ದು ಹೇಳಿದ ಹಾಗೆ)
ಹಲೋ,
ಏನ್ಮಾಡ್ತಿದ್ದಿ? ಪುರುಸೊತ್ತಾಗಿದೀಯಾ? ವಾರದ ಹಿಂದೆ ಫೋನ್ ಮಾಡಿದ್ದೆ ಅಲ್ವೇನೇ? ಬರೀ ಒಂದು ವಾರದಲ್ಲಿ ಏನೇನೆಲ್ಲ ಆಗಿ ಹೋಯ್ತು ಅಂದ್ರೆ ಅಬ್ಬಾ! ಜೀವಂತ ನರಕ ಅನುಭವಿಸಿದ ಹಾಗಾಯ್ತು. ತಡಿ, ಹೇಳ್ತೀನಿ.

ಕಳೆದ ವಾರ ನಮ್ಮ ಚಾರು ಡಾನ್ಸ್ ಕ್ಲಾಸಿಗೆ ಹೋಗಿ ಬಂದೋಳು ತಲೆನೋವು, ಹೊಟ್ಟೆನೋವು ಅಂದ್ಲು. ಹಣೆ ಮುಟ್ಟಿ ನೋಡಿದೆ. ಜ್ವರ ಬಂದಿದ್ದು ಗೊತ್ತಾಯ್ತು. ಮೊದಲು ಹುಡುಕೋದು ಕಾರಣ ಅಲ್ವಾ? `ಹೊರಗೆ ಎಲ್ಲಾದ್ರೂ ನೀರು ಗೀರು ಕುಡಿದಿದ್ಯಾ' ಎನ್ನುವಲ್ಲಿಂದ ವಿಚಾರಣೆ ಶುರುವಾಗಿ, `ಬೇಡ ಅಂದ್ರೂ ಕೇಳ್ಲಿಲ್ಲ. ಫ್ರೆಂಡ್ಸ್ ಜೊತೆ ಕುಣ್ಕಂಡು ಹೋಗಿ ನಿನ್ನೆ ಪಾನಿಪೂರಿ ತಿಂದ್ಕೊಂಡು ಬಂದಿ...'

ಅನ್ನುವವರೆಗೆ ಊಹೆ ಹರಿಬಿಟ್ಟಿದ್ದಾಯ್ತು. ಜ್ವರ ಬಂದ್ರೆ ಮಾಡೋದೇನು, ಗೊತ್ತುಂಟಲ್ಲ? ಮಾತ್ರೆ ನುಂಗಿ ಮುಸುಕು ಹಾಕಿ ಮಲಗೋದು.
ಮೊನ್ನೆ ಮೊನ್ನೆ ಒಳ್ಳೇ ಕಾಲೇಜಲ್ಲಿ ಪಿ.ಯು. ಸೀಟು ಸಿಕ್ತು ಅಂತ ಕುಣಿದು ಕುಪ್ಪಳಿಸ್ತಿದ್ದೋಳು ಜ್ವರ ತಂದ್ಕೊಂಡಿದ್ದು ತುಂಬಾ ಬೇಜಾರಾಯ್ತು ಕಣೇ, ಏನ್ಮಾಡ್ತಿ? ಮರುದಿನ ಸಂಜೆ ಜ್ವರ ಬಿಟ್ಟಿದ್ದು ಹೌದು. ಆದರೆ ಸುಸ್ತು.

ಹೊತ್ತಿಗೆ ಒಂದರ ಹಾಗೆ ಮಾತ್ರೆ ನುಂಗಿದ್ದರ ಪರಿಣಾಮ ಅಂತ ನಮ್ಮ ಲೆಕ್ಕಾಚಾರ. `ಬೆಚ್ಚಗೆ ಹೊದ್ದು ಮಲಕ್ಕೊಂಬಿಡು. ಎಲ್ಲ ಸರಿಯಾಗುತ್ತೆ' ಅಂತ ಹೇಳಿ ನಿರುಮ್ಮಳವಾಗಿ ಇದ್ದುಬಿಟ್ವಿ. ನಾಲ್ಕನೆಯ ದಿನ ಬೆಳಿಗ್ಗೆ ಎದ್ದೋಳಿಗೆ ಮೂಗಲ್ಲಿ ರಕ್ತ. ಉಷ್ಣ ಆಗಿದೆ ಅನ್ನುವ ತೀರ್ಮಾನ. ಸ್ವಲ್ಪ ಹೊತ್ತಿಗೆ ಎಲ್ಲ ಸರಿಯಾಯ್ತು. ಹಾಗೆ ನಾವು ಅಂದ್ಕೊಂಡಿದ್ವಿ. ಮಧ್ಯಾಹ್ನ ಉಂಡು ಮಲಗಿದೋಳು ಮುಸ್ಸಂಜೆ ಹೊತ್ತಿಗೆ ಎದ್ದಾಗ ಮುಖವೆಲ್ಲ ರಕ್ತ.

ಹತ್ತಿರ ಇರೋ ಡಾಕ್ಟರ ಹತ್ರ ಕರ‌್ಕೊಂಡ್ಹೋದ್ವಿ. ಪುಣ್ಯಾತ್ಮ, ಸರಿಯಾದ ಹೊತ್ತಿಗೆ ಸೂಕ್ತ ಸಲಹೆ ಕೊಟ್ರು. ಒಂದು ಸಲ ಬ್ಲಡ್ ಟೆಸ್ಟ್ ಮಾಡಿಸ್ಬಿಡಿ. ಪ್ಲೇಟ್‌ಲೆಟ್ ಎಷ್ಟಿದೆ ಅಂತ ನೋಡಿಸಿ ಅಂದ್ರು. ಬ್ಲಡ್ ಟೆಸ್ಟ್ ಮಾಡಿಸಿದ್ರೆ ಎದೆ ಝಗ್ ಅನ್ನುವಂತಿತ್ತು ರಿಪೋರ್ಟು. ಎರಡೂವರೆ ಲಕ್ಷಕ್ಕಿಂತ ಹೆಚ್ಚಿರಬೇಕಾಗಿದ್ದ ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಪ್ಪತ್ನಾಲ್ಕು ಸಾವಿರಕ್ಕೆ ಇಳಿದಿದೆ. ಡೆಂಗೆ? ಈ ಕುರಿತು ಬೇಕಾದಷ್ಟು ಓದಿ, ಕೇಳಿ ಎಲ್ಲಾ ಗೊತ್ತಿದೆ. ಆದರೆ ಅದು ನಮ್ಮ ಮನೆಯವರೆಗೆ ಬರಲಿಕ್ಕಿಲ್ಲ ಎನ್ನುವ ಧೋರಣೆ.

ಜ್ವರ ಬಿಟ್ಟಿದ್ದರಿಂದ ನಾವೇ ಕಂಡುಕೊಂಡಿದ್ದ ಸಮಾಧಾನ. ಸಣ್ಣ ತಪ್ಪೂ ಎಷ್ಟು ದುಬಾರಿಯಾಗಿಬಿಡುತ್ತೆ ಅಲ್ವಾ? ಡೆಂಗೆ ಜ್ವರಕ್ಕೆ ಟ್ರೀಟ್‌ಮೆಂಟ್ ಇರೋ ಬೆರಳೆಣಿಕೆಯ ಆಸ್ಪತ್ರೆಗಳಲ್ಲಿ ಪ್ರತಿಷ್ಠಿತ ಅನ್ನಿಸಿಕೊಂಡಿದ್ದ ಒಂದು ಆಸ್ಪತ್ರೆಗೆ ಓಡಿದ್ವಿ. ಅಲ್ಲಿ ಮತ್ತೊಂದು ಬ್ಲಡ್ ಟೆಸ್ಟು. ಒಂದೂವರೆ ಗಂಟೆಯ ಹಿಂದೆ ಇಪ್ಪತ್ನಾಲ್ಕು ಸಾವಿರ ಇದ್ದ ಪ್ಲೇಟ್‌ಲೆಟ್‌ಗಳು ಎಂಟು ಸಾವಿರಕ್ಕೆ ಇಳಿದುಬಿಟ್ಟಿದಾವೆ.

ಹುಡುಗಿಯನ್ನು ಐ.ಸಿ.ಯು.ನಲ್ಲಿ ದಾಖಲು ಮಾಡ್ಕೊಂಡ್ರು. ನಮ್ಮ ಪರಿಸ್ಥಿತಿ ಹೇಗಾಗಿತ್ತು ಅನ್ನೋದನ್ನ ನಿನ್ನ ಊಹೆಗೆ ಬಿಟ್ಟಿದೀನಿ.  ಹೆದರುವವರ ಮೇಲೆ ಕಪ್ಪೆ ಎಸೆದ ಹಾಗೆ. ಆಚೀಚೆ ಕಡೆ ಕೂತವರೆಲ್ಲಾ ಡೆಂಗೆ ಜ್ವರದವರನ್ನು ಆಸ್ಪತ್ರೆಗೆ ಸೇರಿಸಿ ಕಾದು ಕುಳಿತ ಬಂಧುವರ್ಗ.  ಅವರಿಗೆ ಹಾಗಾಯ್ತು, ಇವರು ಹೋಗೇಬಿಟ್ರು ಅಂತ ಕಾಯಿಲೆ ಸುತ್ತಲೇ ಮಾತುಕತೆ ಗಿರಕಿ ಹೊಡೀತಿತ್ತು.

ಬೇಕಾದ್ದು, ಬೇಡವಾದ್ದು ಎಲ್ಲ ಕಿವಿ ತಲುಪ್ತಿತ್ತು. ಪ್ಲೇಟ್‌ಲೆಟ್‌ಗಳ ಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಾದ್ರೆ ಅಪಾಯದ ಗಂಟೆ ಬಾರಿಸಿದ ಹಾಗೆ. ಬಿ.ಪಿ.ಇಳಿದು ರೋಗಿ ಸಾವಿನ ಮನೆಯ ಬಾಗಿಲು ತಟ್ಟಿದ ಲೆಕ್ಕ. ಜ್ವರ ಬಿಟ್ಟರೂ, ಬಿಡದಿದ್ದರೂ ಮೂರು ದಿನದ ಹೊತ್ತಿಗೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿಯುತ್ತಾ ಬರುತ್ತೆ. ದೇಹದ ಒಳಭಾಗದಲ್ಲಿ ರಕ್ತನಾಳಗಳು ಒಡೆದು ಬ್ಲೀಡಿಂಗ್ ಆಗಿ ಚರ್ಮದ ಮೇಲೆ ಕಲೆಯಂತಾ ದದ್ದುಗಳು. ಮೂಗಲ್ಲಿ ರಕ್ತ ಬಂದಿದ್ದು ಅದಕ್ಕೇನಾ? ದೇವರೇ...

ಡೆಂಗೆಗೆ ಪ್ರತ್ಯೇಕ ಔಷಧಿ ಅನ್ನುವಂತಾದ್ದು ಏನಿಲ್ಲವಂತೆ. ಏನಿದ್ದರೂ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕುಸಿಯದಂತೆ ಹೊರಗಿನಿಂದ ರಕ್ತ ಕೊಡಬೇಕು. ರೋಗಿಗೆ ಗ್ಲೂಕೋಸ್ ಡ್ರಿಪ್ಸು. ಆರು ಗಂಟೆಗೊಂದು ಸಲ ರಕ್ತ ತಪಾಸಣೆ. ಪ್ಲೇಟ್‌ಲೆಟ್‌ಗಳು ಕಮ್ಮಿ ಆಗಿದ್ದರೆ ಬಿ.ಪಿ.ಯಿಂದಲೇ ಗೊತ್ತಾಗುತ್ತದೆಯಂತೆ. ಹೆಚ್ಚೂಕಮ್ಮಿ 17 ಬಾಟಲಿಗಳಷ್ಟು ರಕ್ತ ಸಂಗ್ರಹಿಸಿದರೆ, ಅದರಿಂದ ಒಂದು ಬೆರಳುದ್ದದ ಬಾಟಲಿಯಷ್ಟು ಪ್ಲೇಟ್‌ಲೆಟ್ ಸಿಕ್ಕುತ್ತವಂತೆ.

ಬ್ಲಡ್ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಕಾದಿರಿಸಿದ ಪ್ಲೇಟ್‌ಲೆಟ್‌ಗಳಲ್ಲಿ ಆರೇಳು ಜನರ ರಕ್ತಕಣಗಳು ಸೇರಿರ‌ತಾವಂತೆ. ಒಬ್ಬರೇ ರಕ್ತ ಕೊಟ್ಟರೆ ಪರಿಣಾಮ ಹೆಚ್ಚು. ಇಂತಾ ಮಾತುಗಳೇ ಕಿವಿಗೆ ಬೀಳ್ತಿದ್ದಿದ್ದು. ಒಂದೊಂದು ನಿಮಿಷ ಒಂದೊಂದು ಯುಗವಾಗುವುದು ಅನ್ನೋದರ ಅನುಭವ ಆವತ್ತು ಗೊತ್ತಾಯ್ತು.

ಡಾಕ್ಟರು ಬಂದು ನಮ್ಮ ಚಾರುವನ್ನು ಪರೀಕ್ಷಿಸಿ, ನರ್ಸ್ ಬಂದು, ರೋಗಿಯ ಗ್ರೂಪಿನ ರಕ್ತ ಕೊಡುವ ಮೂರು ನಾಲ್ಕು ಜನರನ್ನ ಗೊತ್ತು ಮಾಡ್ಕೊಳ್ಳಿ ಅಂದಾಗ `ನಾನೇ ಇದೀನಿ. ನನ್ನ ಬ್ಲಡ್ ಗ್ರೂಪ್ ಅದೇ' ಅಂದರು ಇವರು. ನನ್ನಷ್ಟೇ ಕುಸಿದು ಹೋಗಿದ್ದರೂ ಮೇಲೆ ಧೈರ್ಯದ ಮುಖವಾಡ ಹಾಕಿಕೊಂಡಿದ್ದವರು. ಆದರೆ ರಕ್ತ ಕೊಡುವ ಅವರ ನಿರ್ಧಾರ ನಿಮಿಷಾರ್ಧದಲ್ಲಿ ಮುರಿದು ಬಿತ್ತು. 40  ವರ್ಷಕ್ಕಿಂತಾ ಕಮ್ಮಿ ವಯಸ್ಸಿನವರು ರಕ್ತ ಕೊಟ್ಟರೆ ಪರಿಣಾಮ ಜಾಸ್ತಿಯಂತೆ. ಪ್ಲೇಟ್‌ಲೆಟ್‌ಗಳು ಬೇಗ ಏರ‌ತಾವಂತೆ.

ಗಂಟೆ ನೋಡಿದರೆ ಆಗಲೇ ರಾತ್ರಿ ಒಂಬತ್ತೂವರೆ. ಮೊದಲೇ ಗೊತ್ತಿದ್ದಿದ್ದರೆ ಇಷ್ಟು ಹೊತ್ತಿಗೆ ಯಾರನ್ನಾದರೂ ಸಂಪರ್ಕಿಸಬಹುದಿತ್ತು. ಶನಿವಾರ ಬೇರೆ. ಮರುದಿನ ರಜಾ ಎಂದು ಎಲ್ಲೆಲ್ಲಿಗೋ ಎದ್ದುಬಿಟ್ಟಿರುತ್ತಾರೆ. ಅಲ್ಲದೆ ಡೆಂಗೆ ರೋಗಿಗಳು ತುಂಬಿರುವ ಆಸ್ಪತ್ರೆಗೆ ಬಂದು ರಕ್ತ ಕೊಡಲು ಹಿಂಜರಿಯಲೂ ಬಹುದು. ಈ ಕಾಯಿಲೆಗಳು ಹೆಚ್ಚಾಗುವುದೇ ಡಾಕ್ಟರು ಸಿಗುತ್ತಾರಾ ಅನ್ನುವ ಅನುಮಾನ ಹುಟ್ಟಿಸೋ ರಜಾ ದಿನಗಳಲ್ಲಿ. ಇಂತಾ ಸಂದರ್ಭದಲ್ಲಿ ತಲೆ ಕೆಲಸ ಮಾಡೋದನ್ನೇ ನಿಲ್ಲಿಸಿಬಿಟ್ಟಿರುತ್ತೆ ಕಣೇ.

ನಮ್ಮ ಮನೆಯವರು ಯಾರ‌ಯಾರನ್ನೋ ಸಂಪರ್ಕಿಸಿ, ಕೊನೆಗೆ ನಮಗೆ ಬೇಕಾದ ಬ್ಲಡ್‌ಗ್ರೂಪಿನ, 40ಕ್ಕಿಂತಾ ಕಡಿಮೆ ವಯಸ್ಸಿನ  ಆಪ್ತರೊಬ್ಬರು ರಕ್ತದಾನ ಮಾಡೋಕೆ ಒಪ್ಪಿ, ಅವರು ಆಸ್ಪತ್ರೆಗೆ ಬಂದು, ಅದೆಲ್ಲಾ ದೊಡ್ಡ ಕತೆ ಬಿಡು. ನಾವು ಬಂದ ಆಸ್ಪತ್ರೆಯಲ್ಲಿ ರಕ್ತದಿಂದ ಪ್ಲೇಟ್‌ಲೆಟ್‌ಗಳನ್ನು ಪ್ರತ್ಯೇಕಿಸಿ ತಕ್ಷಣವೇ ರೋಗಿಗೆ ಕೊಡುವ ವ್ಯವಸ್ಥೆ ಇದ್ದು, ದೇವರ ದಯದಿಂದ ನಮ್ಮ ಆಯ್ಕೆ ಸರಿಯಾಗಿದ್ದಾಗಿತ್ತು.

`ಬೇಕಾದರೆ ಫೋನ್ ಮಾಡ್ತೀವಿ, ನೀವು ಮನೆಗೆ ಹೋಗಿ' ಅನ್ನುತ್ತಿದ್ದಾಳೆ ನರ್ಸ್. ನಿಯಮ ಅಂದರೆ ನಿಯಮ. ಮನಸ್ಸಿಲ್ಲದ ಮನಸ್ಸಿನಿಂದ ಚಾರುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಮನೆಗೆ ಬಂದು, ಬೆಳಗಾಗುವವರೆಗೆ ಜಾಗರಣೆ. ಮರುಬೆಳಿಗ್ಗೆ ಶುಭವಾಗಿಯೇ ಆರಂಭವಾಯ್ತು. ಪ್ಲೇಟ್‌ಲೆಟ್‌ಗಳ ಸಂಖ್ಯೆ 24 ಸಾವಿರಕ್ಕೆ ಏರಿತ್ತು. ಆದರೂ ಐ.ಸಿ.ಯು. ವಾಸ ಅನಿವಾರ್ಯ.

ಮೂರನೆಯ ಬೆಳಗಿನೊಂದಿಗೆ ಪ್ಲೇಟ್‌ಲೆಟ್‌ಗಳ ಸಂಖ್ಯೆ 70 ಸಾವಿರಕ್ಕೆ ಏರಿತ್ತು. ಮಧ್ಯಾಹ್ನ ಡಿಸ್‌ಚಾರ್ಜ್ ಆಯ್ತು ಅನ್ನು. ಆದರೆ ಆ ಎರಡು ದಿನಗಳ ಅನುಭವ? ಅಬ್ಬಾ... ವಿಟಮಿನ್ ಮಾತ್ರೆಗಳ ಜೊತೆ ಡಾಕ್ಟರ ಸಲಹೆ, ಸೂಚನೆ ಕೇಳ್ಕೊಂಡು ಸುಸೂತ್ರವಾಗಿ ಮನೆಗೆ ಬಂದೆವು ಮಾರಾಯ್ತಿ. ಇನ್ನೂ ಕೆಲವು ದಿನ ವಿಶ್ರಾಂತಿ ಕಡ್ಡಾಯ ಅಂದಿದಾರೆ. ಆಡಿ, ಓಡಿ, ಪೆಟ್ಟು ಮಾಡಿಕೊಂಡು ರಕ್ತ ಬಂದರೆ ಅಪಾಯವಂತೆ.
ಆಸ್ಪತ್ರೆಗೆ ಬಂದೋರು ಏನೇನು ಸಲಹೆ ಹಂಚಿಕೋತಿದ್ದರು ಗೊತ್ತಾ? ಎಲ್ಲ ರೀತಿಯ ವೈದ್ಯವೂ ಮಾತಲ್ಲಿ ಕೇಳಿ ಬರ‌ತಿತ್ತು.

ಪಪ್ಪಾಯದ ಎಲೆಯ ರಸ ತೆಗೆದು ಬೆಳಿಗ್ಗೆ ಬರಿಹೊಟ್ಟೆಗೆ ಒಂದೂವರೆ ಚಮಚದಷ್ಟು ಕುಡಿಸಿದರೆ ಒಂದೇ ದಿನದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಡಬಲ್ ಆಗುತ್ತೆ ಅಂತ ಒಬ್ಬರ ಮಾತು. ಅಯ್ಯೋ, ಭಾರೀ ಉಷ್ಣ. ಅದನ್ನ ಕುಡಿದು ಯಾರಿಗೋ ರಕ್ತವಾಂತಿ ಆಯ್ತು ಅಂತ ಮತ್ತೊಬ್ಬರು. ಒಂದು ಚಮಚ ಕುಡಿಸಿದರೆ ಏನಾಗಲ್ಲ ಅಂತ ಮೊದಲಿನವರು. ನುಗ್ಗೆಸೊಪ್ಪು, ದಾಳಿಂಬೆ, ಬೀಟ್ರೂಟು ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಾಗಲು ಒಂದೊಂದೂ ರಾಮಬಾಣ, ಹದ ಹೇಳುವವರ ಮಾತಲ್ಲಿ.

ನ್ಯಾಚುರೋಪತಿಯಲ್ಲಿ ಪಾಂಡಿತ್ಯ ಗಳಿಸಿದವರೊಬ್ಬರ ಸಲಹೆಯ ಪ್ರಕಾರ ಪಪ್ಪಾಯಿ ಎಲೆಯ ರಸ ಕೊಟ್ಟರೂ ಎಳನೀರು ಚೆನ್ನಾಗಿ ಕುಡಿಸಿದರೆ ಉಷ್ಣ ತಗ್ಗುತ್ತದೆ. ಮನೆಗೆ ಬಂದ ಮೇಲೆ ಮೂರು ದಿನ ಈ ಪ್ರಯೋಗ ಮಾಡಿ ನೋಡಿದೆವು ಅನ್ನು.  ಮಧ್ಯ ಒಂದು ದಿನ ಬಿಟ್ಟು ತಪಾಸಣೆಗೆ ಕರೆದುಕೊಂಡು ಹೋದರೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ಎರಡೂವರೆ ಲಕ್ಷ ದಾಟಿ ಹೋಗಿ ನಮಗೆ ಎಷ್ಟು ನಿರಾಳವಾಯ್ತು ಅಂತ ನೀನೇ ಕಲ್ಪನೆ ಮಾಡ್ಕೋ.

ಮನೆಗೆ ಭೇಟಿ ಕೊಟ್ಟ ಭಯೋತ್ಪಾದಕ ಕೈ ಕುಲುಕಿ ಹೋದ ಅನುಭವ. 10 ವರ್ಷಕ್ಕಿಂತಾ ಸಣ್ಣ ವಯಸ್ಸಿನ ಮಕ್ಕಳಿಗೆ, ಮುದುಕರಿಗೆ, ವಾಸಿಯಾಗೋದು ಸ್ವಲ್ಪ ತಡ ಆಗ್ಬಹುದಂತೆ. ಇಮ್ಯೂನಿಟಿ ಹೆಚ್ಚಿಗೆ ಇರಲ್ಲ ನೋಡು. ಡೆಂಗೆ ಅಂದರೆ ಸಾವಿಗೆ ಪರ್ಯಾಯ ಪದ ಅಂತೇನೂ ಅಲ್ಲ ಮಾರಾಯ್ತಿ. ಸೂಕ್ತ ಕಾಲದಲ್ಲಿ ತಕ್ಕ ಚಿಕಿತ್ಸೆ ಪಡೆದರೆ ವಾಸಿಯಾಗುತ್ತೆ ಅನ್ನೋ ಧೈರ್ಯ ಬಂದಿದೆ.

ಅದರ ಹೆಸರು ಹೇಳೋಕೂ ಹೆದರಿಕೆ ಪಡಬೇಕಾದ್ದಿಲ್ಲ ಅಂತ ನನ್ನ ಅನುಭವ. ಡಿಸ್‌ಚಾರ್ಜ್ ಮಾಡಿಸಿಕೊಳ್ಳೋಕೆ ಬಿಲ್‌ಗಾಗಿ ಕಾಯ್ತೊ ಇದ್ದಾಗ ಹಳ್ಳಿ ಕಡೆಯವರೊಬ್ರು ತಮ್ಮ ಮಗನನ್ನು ಕರ‌್ಕೊಂಡು ಬಂದಿದ್ರು ಕಣೇ. ಅವರ 22 ವರ್ಷದ ಮಗನಿಗೆ ಡೆಂಗೆ ಬಂದಿದೆಯಂತೆ. ಎರಡು ವರ್ಷದ ಹಿಂದೆ ಅವರ ತಮ್ಮನ ಮಗ ಇದೇ ಕಾಯಿಲೆಯಿಂದ ತೀರಿಕೊಂಡನಂತೆ.

ಎಷ್ಟು ಕಂಗೆಟ್ಟು ಹೋಗಿದ್ರು ಅಂದ್ರೆ  ಇನ್ನು ಮಗನ ಆಸೆ ಬಿಟ್ಟ ಹಾಗೇ ಅನ್ನೋವಷ್ಟು. ನಮ್ಮನೆಯೋರು ಮಗಳನ್ನು ತೋರಿಸಿ ಅವರಿಗೆ ಧೈರ್ಯ ಹೇಳಿದ್ರು. ಅದನ್ನು ಕೇಳಿ ಆ ಹಳ್ಳಿಯೋರಿಗೆ ಅದೇನೋ ಧೈರ್ಯ ಆವಾಹನೆಯಾಯ್ತು. 40 ವರ್ಷ ದಾಟದಿರುವ ಮಗನ ಬ್ಲಡ್ ಗ್ರೂಪಿನವರನ್ನು ನೆನಪಿಸಿಕೊಳ್ತಾ ಥ್ಯಾಂಕ್ಸ್ ಹೇಳಿದ್ರು.

ಏನೂ ಗೊತ್ತಿಲ್ಲದೇ ಇರೋಕಿಂತಾ ಒಂದಿಷ್ಟು ಗೊತ್ತಿರೋದು ವಾಸಿ ಅಲ್ವಾ? ಮುನ್ನೆಚ್ಚರಿಕೆ ಅನ್ನೋದು ಒಂದು ಕಡೆ, ಕಾಯಿಲೆ ಬಂದ ಮೇಲೆ ಎದುರಿಸೋದು ಹೇಗೆ ಅನ್ನೋದು ಮತ್ತೊಂದು ಕಡೆ. ಅಮೂಲ್ಯವಾದ ಒಂದು ಜೀವ ಉಳಿಸಲು ರಕ್ತದಾನ ಮಾಡುವ ಉತ್ಸುಕತೆಯಿರುವ ಯುವಕರ ಒಂದು ಲಿಸ್ಟನ್ನು ಅವರ ಬ್ಲಡ್ ಗ್ರೂಪಿನ ವಿವರಗಳ ಸಮೇತ ಡೈರಿ ಮಾಡ್ತಿದೀವಿ ಕಣೇ. ಅವಶ್ಯಕತೆ ಬಿದ್ರೆ ಉಪಯೋಗಕ್ಕೆ ಬರುತ್ತೆ. ನಮ್ಮ ಹಾಗೆ ಎಲ್ಲರೂ, ಎಲ್ಲರ ಹಾಗೆ ನಾವೂ ಅನ್ನುವಂತಿದ್ದರೆ ಎಷ್ಟು ಧೈರ್ಯ ಇರುತ್ತೆ ಅಲ್ವಾ? ಏನಂತಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT