ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ‘ಕಾಕ್ಸಿಡಿನಿಯಾ’

ಅಕ್ಷರ ಗಾತ್ರ

ನಮ್ಮ ಇಡೀ ದೇಹ ಒಂದು ಬಗೆಯ ಸಾವಯವ ಸಮಗ್ರತೆಯಿಂದ ಕೂಡಿದೆ. ದೇಹದ ಶಾರೀರಿಕ ರಚನೆ ಎಂದರೆ ಅದೊಂದು ವ್ಯೂಹ. ಪರಸ್ಪರ ಅಂತರ್ ಸಂಬಂಧವನ್ನು ಹೊಂದಿರುವ ಅತ್ಯಂತ ಸೂಕ್ಷ್ಮವಾದ ಹೆಣಿಗೆಯನ್ನು ಹೊಂದಿರುವ ಜೇಡರ ಬಲೆ ಇದ್ದ ಹಾಗೆ.

ಒಂದು ಎಳೆ ಕಂಪಿಸಿದರೂ ಇಡಿಯ ಜೇಡರ ಬಲೆಯೇ ಅಲ್ಲಾಡುವಂತೆ ನಮ್ಮ ದೇಹದ  ಯಾವುದೋ ಅಂಗಕ್ಕೆ ಒಂದು ಸಣ್ಣ ಊನವಾದರೂ ಅದು ನಮಗೆ ಗೊತ್ತಿಲ್ಲದಂತೆ ನಮ್ಮ ದೇಹದ ಇತರೆ ಭಾಗಗಳಿಗೂ ನಿಧಾನಕ್ಕೆ ಹರಡುತ್ತದೆ. ನಿಧಾನವಾಗಿ ಹರಡುವುದರ ಪರಿಣಾಮ ಮಾತ್ರ ಭೀಕರವೂ ಗಂಭೀರವೂ ಆಗಿರುತ್ತದೆ. ಹಾಗಾಗಿ ಯಾವುದೇ ನೋವನ್ನು ಕಡೆಗಣಿಸುವಂತಿಲ್ಲ.

ಸಾಮಾನ್ಯವಾಗಿ ನರಸಂಬಂಧಿ ಸಮಸ್ಯೆಗಳಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಆದರೆ ಕುಳಿತು ಕೊಳ್ಳುವುದಕ್ಕಿಂತ ನಿಲ್ಲುವುದೇ ಹಿತ ಅನ್ನಿಸುವಷ್ಟು ನೋವು ನಿಮ್ಮನ್ನು ಕಾಡಿದರೆ ನೀವು ಗಂಭೀರವಾದ ಸಮಸ್ಯೆಗೆ ತುತ್ತಾಗಿದ್ದೀರಿ ಎಂದೇ ಅರ್ಥ. ಜನರಿಂದ ಕಿಕ್ಕಿರಿದ ಬಸ್ಸಿನಲ್ಲಿ ನಿಂತು ಕೈ-ಕಾಲು ಜೋಮು ಹಿಡಿದವರಿಗೆ ಒಮ್ಮೆ ಕುಳಿತುಕೊಳ್ಳಲು ಸೀಟು ಸಿಕ್ಕಿತೆಂದರೆ ಸ್ವರ್ಗವೇ ಕಾಲಡಿಗೆ ಬಂದಷ್ಟು ಖುಷಿ.

ಹಾಗಿರುವಾಗ ಕುಳಿತು ಹಿಂಸೆ ಪಡುವುದಕ್ಕಿಂತ ನಿಂತೇ ಆರಾಮವಾಗಿ ಇರುತ್ತೇನೆ ಎಂದೆನಿಸಿದರೆ ಕಾಯಿಲೆ ಗಂಭೀರ ಸ್ವರೂಪ ತಾಳಿದೆ ಎಂದರ್ಥ. ಈ ಕಾಯಿಲೆಗೆ ಇಂಗ್ಲಿಷ್‌ನಲ್ಲಿ ಟೇಲ್ ಬೋನ್ ಪೈನ್ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಕಾಕ್ಸಿಡಿನಿಯಾ ಎನ್ನುತ್ತಾರೆ. ಕನ್ನಡದಲ್ಲಿ ಹೇಳುವುದಾದರೆ ಬೆನ್ನುಮೂಳೆಯ ಕೊನೆಯ ಭಾಗದ ನೋವು. ಕಾಕಿಕ್ಸ್ ಅಂದರೆ ಬೆನ್ನುಮೂಳೆಯ ಕೊನೆಯ ಭಾಗ. ಅಲ್ಲಿ ಕಾಣಿಸಿಕೊಳ್ಳುವ ನೋವೇ ಕಾಕ್ಸಿಡಿನಿಯಾ.

ಕಾಕ್ಸಿಡಿನಿಯಾಕ್ಕೆ ಕಾರಣಗಳು
*ಬಹಳ ಎತ್ತರದಿಂದ ಕುಳಿತ ಭಂಗಿಯಲ್ಲೇ ಕೆಳಗೆ ಬಿದ್ದರೆ
*ಗಟ್ಟಿಯಾದ ಮತ್ತು ಇಕ್ಕಟ್ಟಾದ ಜಾಗದಲ್ಲಿ ದೀರ್ಘಕಾಲ ಕುಳಿತಿದ್ದರೆ
*ಸ್ಕೀಯಿಂಗ್, ರಗ್ಬಿ, ವಾಲಿಬಾಲ್, ಫುಟ್‌ಬಾಲ್, ಕ್ರಿಕೆಟ್, ಕಬಡ್ಡಿ ಆಡುವಂತಹ ಕ್ರೀಡಾಪಟುಗಳು ಆಕಸ್ಮಿಕವಾಗಿ  ಬಿದ್ದ ಸಂದರ್ಭದಲ್ಲಿ
*ಹೆರಿಗೆ ನಂತರದ ದಿನಗಳಲ್ಲಿ
*ಅಪಘಾತಗಳಲ್ಲಿ ಕಾಕಿಕ್ಸ್ ಭಾಗಕ್ಕೆ ಪೆಟ್ಟುಬಿದ್ದವರಲ್ಲಿ
*ಕಾಕಿಕ್ಸ್ ಭಾಗದಲ್ಲಿ ಸ್ಪರ್ ತುಂಬಿಕೊಂಡವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ಕಾಯಿಲೆಯ ಲಕ್ಷಣಗಳು 
*ಕುಳಿತುಕೊಂಡು ಕೆಲಸ ಮಾಡುವುದು ಅಸಾಧ್ಯ
*ಕುಳಿತುಕೊಳ್ಳುವಾಗ ಮತ್ತು ಮೇಲೇಳುವಾಗ ನೋವು ಹೆಚ್ಚಾಗುತ್ತ ಹೋಗುತ್ತದೆ
*ಗಟ್ಟಿಯಾದ ಕಲ್ಲಿನ ಮೇಲೆ ಅಥವಾ ಹರಿತವಾದ ಆಯುಧದ ಮೇಲೆ ಕುಳಿತಷ್ಟು ನೋವು ಉಂಟಾಗುತ್ತದೆ
*ಬಹಿರ್ದೆಸೆಗೆ ಕುಳಿತಾಗ ಮರ್ಮಸ್ಥಾನಗಳಿಗೆ ಮೆಣಸಿನ ಪುಡಿ ಎರಚಿದಷ್ಟು ಉರಿಯಾಗುತ್ತದೆ
*ಒಂದು ವೇಳೆ ಕಷ್ಟಪಟ್ಟು ಕುಳಿತರೆ ಅಲ್ಲಿಂದ ತಕ್ಷಣ ಎದ್ದು ನಿಲ್ಲುವುದೂ ಕಷ್ಟವಾಗುತ್ತದೆ
*ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ದುಸ್ಸಾಧ್ಯವಾಗುತ್ತದೆ.
*ಹೆಂಗಸರಂತೂ ಅವರ ಋತುಸಮಯದ ಸಂದರ್ಭದಲ್ಲಿ ಇನ್ನಿಲ್ಲದ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ.
ಇದಕ್ಕೆ ಸರ್ಜರಿಯ ಮೊರೆ ಹೋಗುವುದು ಅತ್ಯಂತ ಅಪಾಯಕಾರಿಯಾದ ಸಂಗತಿ. ಹಾಗಾಗಿ ಬೆನ್ನುಮೂಳೆ ಕೊನೆ ತಜ್ಞ ವೈದ್ಯರನ್ನು ಭೇಟಿಯಾಗಿ ಅವರ ಸಲಹೆ, ಸೂಚನೆಗಳಿಗೆ ಅನುಸಾರವಾಗಿ ವೈದ್ಯಕೀಯ ಚಿಕಿತ್ಸೆಗೊಳಗಾಗುವುದು ಒಳ್ಳೆಯದು.
ಮಾಹಿತಿಗೆ: 9901863961

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT