ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀಳೆಂಬ ಗೋಳು ತಡೆಯಿರಿ ಹೀಗೆ

Last Updated 11 ಜನವರಿ 2013, 19:59 IST
ಅಕ್ಷರ ಗಾತ್ರ

ಶೇಕ್ಸ್‌ಪಿಯರ್ ರಚಿಸಿದ ಮ್ಯೋಕ್‌ಬೆಥ್ ನಾಟಕದಲ್ಲಿ ಬರುವ ಲೇಡಿ ಮ್ಯೋಕ್‌ಬೆಥ್ ಪಾತ್ರದಲ್ಲಿ ಮಾನಸಿಕ ಘರ್ಷಣೆ ಚಟದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.  ಲೇಡಿ ಮ್ಯೋಕ್‌ಬೆಥ್ ರಾತ್ರಿ ಹೊತ್ತು ನಿದ್ರೆಯಲ್ಲಿ ಎದ್ದು ಮತ್ತೆ ಮತ್ತೆ ಕೈ ತೊಳೆಯುತ್ತಾಳೆ.

ಎಷ್ಟು ತೊಳೆದರೂ ಅವಳಿಗೆ ತನ್ನ ಕೈಯಿಂದ ರಕ್ತದ ಕಲೆಗಳು ಹೋಗದು ಎಂಬ ಭಾವನೆ. ತನ್ನ ರಾಜನ ಸಾವಿಗೆ ಕಾರಣಳಾದ ಅವಳನ್ನು ಕಾಡುತ್ತಿದ್ದ ಆ ಪಾಪಪ್ರಜ್ಞೆ ಚಟದ ರೂಪದಲ್ಲಿ ಹೀಗೆ ಹೊರಬೀಳುತ್ತಿತ್ತು.
***
ಶ್ರೀನಿವಾಸ ಬ್ಯಾಂಕ್ ನೌಕರ, ಮದುವೆಯಾಗಿ 20 ವರ್ಷ, ಇಬ್ಬರು ಹೆಣ್ಣು ಮಕ್ಕಳ ತಂದೆ. ಬಹಳ ನಿಯತ್ತಿನ ಮನುಷ್ಯ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬಂದು ತನ್ನ ಕೆಲಸ ಸರಿಯಾಗಿ ಮಾಡುತ್ತಿದ್ದ. ಯಾರಿಂದಲೂ ಬೊಟ್ಟು ಮಾಡಿಸಿಕೊಳ್ಳಲು ಇಷ್ಟಪಡದ ಆಸಾಮಿ.  ಆದರೆ ಕ್ಯಾಷ್‌ಕೌಂಟರ್‌ನಲ್ಲಿ ಕೆಲಸ ಮಾಡಲು ಹೆದರುತ್ತಾನೆ.

ಯಾಕೆಂದರೆ ಎಲ್ಲಿ ಲೆಕ್ಕ ತಪ್ಪಿ ಹೋಗುತ್ತದೋ ಎಂಬ ಸಂಶಯ ಮತ್ತೆ ಮತ್ತೆ ಮನಸ್ಸಿನಲ್ಲಿ ಕಾಡಿ ಹಣವನ್ನು ಎಣಿಸುವ ಚಟ. ಇತ್ತೀಚೆಗೆ ಬ್ಯಾಂಕ್‌ನಲ್ಲಿ ಹಣ ಎಣಿಸುವ ಯಂತ್ರ ಇದ್ದರೂ ಎಣಿಸುವ ಗೀಳು ಅವನನ್ನು ಬಿಡುತ್ತಿಲ್ಲ. ಇದು ಅಸಂಬದ್ಧ ಎಂದು ತಿಳಿದರೂ ನಿಯಂತ್ರಿಸಲಾಗುತ್ತಿಲ್ಲ.
***
ಗೃಹಿಣಿಯಾದ ಲಕ್ಷ್ಮಿ ಮನೆ ವಸ್ತುಗಳನ್ನು ಶುಚಿಯಾಗಿ ಇಡುವುದರಲ್ಲಿ ಎತ್ತಿದ ಕೈ. ಯಾವ ವಸ್ತುವಾಗಲೀ ಗಂಡ, ಮಕ್ಕಳು ಕೈ ತೊಳೆಯದೆ ಮುಟ್ಟುವಂತಿಲ್ಲ. ತನ್ನ ಎಲ್ಲ ತೊಳೆಯುವ ಕಲಾಪವಾದ ಮೇಲಷ್ಟೇ ಬೆಳಗಿನ ತಿಂಡಿ ಮಾಡಲು ಆರಂಭ. ಅವಳ ಈ ಅತಿಯಾದ ಶುಚಿತ್ವದಿಂದ ಮನೆ ಮಂದಿಗೆಲ್ಲ ಕಿರಿಕಿರಿ. ಬಂಧುಗಳು ಮನೆಗೆ ಬಂದು ತಂಗಲು ಹೆದರುತ್ತಾರೆ. ಕನಿಷ್ಠ 25 ರಿಂದ 30 ಬಾರಿ ಕೈ ತೊಳೆಯಲೇಬೇಕು. ತನ್ನ ಕೈಯಲ್ಲಿ ಕೊಳೆ ಇಲ್ಲದಿದ್ದರೂ ಇದೆ ಎನ್ನುವ ಸಂಶಯದ ಗೀಳು.

ಸ್ನಾನ ಮಾಡಲು ಕನಿಷ್ಠ ಎರಡು ಗಂಟೆ ಸಮಯ ಮತ್ತು ಎರಡು ಹಂಡೆ ನೀರು ಬೇಕೇ ಬೇಕು. ಮೈಗೆ ನೀರು ಹಾಕಿಕೊಳ್ಳುವಾಗಲೂ ಅದು ಮೇಲಿನಿಂದಲೇ ಬೀಳಬೇಕು. ತಪ್ಪಿದರೆ ಮತ್ತದೇ ರೀತಿಯಲ್ಲಿ ಮೊದಲಿನಿಂದ ಶುರು. ಹೆಚ್ಚು ಸಾಬೂನು ಬಳಕೆಯಿಂದ ಬೆರಳ ಸಂದಿಯಲ್ಲಿ ಫಂಗಸ್ ಸೋಂಕು ಮತ್ತು ಚರ್ಮದ ಉರಿಯೂತ ಕಾಣಿಸಿಕೊಂಡಿದ್ದರೂ ತೊಳೆಯುವ ಆಟ ಮಾತ್ರ ನಿಲ್ಲಲಿಲ್ಲ.

ತನ್ನ ಈ ನಡವಳಿಕೆಯಿಂದ ಬೇರೆ ಕೆಲಸಗಳು ತಡವಾಗುವುದರಿಂದ ಆತಂಕ, ಕೋಪ, ಅಸಹಾಯಕತೆ. ಯಾವುದೇ ಸಾಮಾಜಿಕ ಕಾರ್ಯಕ್ರಮಕ್ಕೂ ಹೋಗಲು ಆಗದು. ಹೋದರೆ ಎಲ್ಲಿ ತನ್ನ ಶುಚಿತ್ವಕ್ಕೆ ಕುಂದಾಗುತ್ತದೋ ಎಂಬ ಚಿಂತೆ.
***
ಸ್ಮಿತಾ 8ನೇ ತರಗತಿಯಲ್ಲಿದ್ದಾಳೆ. ಸರಳವಾದ ಆಲೋಚನೆಗಳನ್ನು ಮಾಡಿಕೊಂಡು ಸಂತೋಷವಾಗಿದ್ದಾಳೆ. ಇವಳ ಅಕ್ಕ ಶ್ವೇತಾ 10ನೇ ತರಗತಿ ಮುಗಿಸಿ ಈಗ ಕಾಲೇಜು ಸೇರಿದ್ದಾಳೆ. ಬುದ್ಧಿವಂತೆಯಾದರೂ ಪರೀಕ್ಷೆಯಲ್ಲಿ ಬಹಳ ಕಷ್ಟದಿಂದ ಶೇ 62ರಷ್ಟು ಅಂಕ ಪಡೆದಿದ್ದಾಳೆ.

ಯಾಕೆಂದರೆ ಇವಳಿಗೆ ಮಾಡಿದ ಕೆಲಸವೆಲ್ಲವೂ ಸರಿಯಾಗಿಯೇ ಇರಬೇಕೆಂಬ ಗೀಳು. ಅತಿಯಾದ ಎಚ್ಚರ ವಹಿಸುತ್ತಾ ಅತಿಯಾದ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸಲು ಹೊರಡುವುದರಿಂದ ತನ್ನ ಸಾಮರ್ಥ್ಯಕ್ಕೆ ತಕ್ಕ ಫಲಿತಾಂಶ ಪಡೆದೇ ತೀರಬೇಕು ಎಂಬ ಹಟ.

ಒಂದು ವೇಳೆ ಬರದಿದ್ದರೆ ಭವಿಷ್ಯದ ಬಗ್ಗೆ ಆತಂಕ, ಅಭದ್ರತೆ, ಕಣ್ಣೀರಿಡುವುದು, ತನ್ನ ಬಗ್ಗೆ ಹೀನಾಯ ಭಾವನೆ. ತನ್ನ ಕಾರ್ಯಗಳನ್ನು ಸೂಕ್ಷ್ಮವಾಗಿ ಯೋಚಿಸಿ ವೇಳಾಪಟ್ಟಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ.

ಇಂತಹ ಹಲವು ಉದಾಹರಣೆಗಳು ಎಷ್ಟೋ ಕುಟುಂಬಗಳಲ್ಲಿ ನಮಗೆ ಸಿಗುತ್ತವೆ. ಇವನ್ನು ಸಾಮಾನ್ಯ ಸಮಸ್ಯೆಗಳೆಂದು ಬದಿಗಿಡಬೇಡಿ. ಪ್ರತಿ ವ್ಯಕ್ತಿಗೂ ಒಂದಲ್ಲ ಒಂದು ಗೀಳು, ಚಟ ಇದ್ದೇ ಇರುತ್ತದೆ. ಆದರೆ ಅದು ಮನೋಬೇನೆಯಾಗಿ ಪರಿವರ್ತನೆಗೊಳ್ಳುವುದು ಯಾವ ವಿಷಯವನ್ನು ಯೋಚಿಸಬಾರದು ಎಂದುಕೊಂಡಿರುತ್ತೇವೋ ಅಂತಹ ವಿಚಾರಗಳು ನಮ್ಮ ಹತೋಟಿ ಮೀರಿ ಪದೇ ಪದೇ ಮನಸ್ಸಿನಲ್ಲಿ ಸುಳಿಯತೊಡಗಿದಾಗ.

ಆಗ ಯಾವ ಕಾರ್ಯಗಳನ್ನು ಮಾಡಬಾರದು ಎಂದುಕೊಂಡಿರುತ್ತೇವೋ ಅವನ್ನು ಪುನರಾವರ್ತಿಸಲು ಆರಂಭಿಸುತ್ತೇವೆ. ಅಮೃತ ಅತಿಯಾದರೂ ವಿಷವಾಗಿ ಪರಿಣಮಿಸುತ್ತದೆ ಎನ್ನುವ ಹಾಗೆ ಸ್ವಲ್ಪ ಮಟ್ಟಿಗೆ ಗೀಳು, ಚಟ ಆತ್ಮ ಸಂರಕ್ಷಣಾ ತಂತ್ರ ಮತ್ತು ನಿಷ್ಠೆ / ಶಿಸ್ತನ್ನು ಕಲಿಸುತ್ತದೆ. ಗೆಲ್ಲಬೇಕೆಂಬ ಚಟ ಬೆಳೆಸಿಕೊಳ್ಳುವುದು ಉತ್ತಮ ಜೀವನಕ್ಕೆ ದಾರಿ.

ಆದರೆ ಕಲ್ಪನೆ ಹಾಗೂ ವಸ್ತುನಿಷ್ಠೆಯ ನಡುವಿನ ವ್ಯತ್ಯಾಸವನ್ನು ನಾವು ಅರಿತಿರಬೇಕು. ಯೋಚನೆ ಮತ್ತು ಕಾರ್ಯಗಳ ವ್ಯತ್ಯಾಸವನ್ನು ತಿಳಿದು ಅಪಸಾಮಾನ್ಯ (ಗೀಳು-ಚಟ) ವರ್ತನೆಯನ್ನು ಒಪ್ಪಿಕೊಂಡು ಆತ್ಮರಚನೆಗೆ ಪ್ರೇರಕವಾಗಬೇಕು. ತಪ್ಪಿದಲ್ಲಿ ಅದು ಮನೋರೋಗವಾಗಿ ಪರಿವರ್ತನೆಗೊಳ್ಳುತ್ತದೆ.

ಗೀಳು- ಚಟದಿಂದ ಒತ್ತಡ, ಪ್ರತಿಕ್ರಿಯೆಗಳು ಆತಂಕಕಾರಿ, ಅಸಂಬದ್ಧ ಮತ್ತು ಅರ್ಥಹೀನ ಎಂಬುದನ್ನು ಅರಿತುಕೊಂಡರೂ ಅವುಗಳನ್ನು ಎದುರಿಸಲು ಬಹಳಷ್ಟು ಮಂದಿ ಅಸಮರ್ಥರಾಗುತ್ತಾರೆ. ಇದರಿಂದ ದುಶ್ಚಟಗಳಿಗೆ ಒಳಗಾಗುವುದು, ಕೆಲಸ ಕಾರ್ಯಗಳು ಕುಂಠಿತವಾಗಿ ಖಿನ್ನತೆ, ಆತ್ಮಹತ್ಯೆ, ಸಂಬಂಧಗಳ ನಡುವೆ ಬಿರುಕು ಉಂಟಾಗುವಂತಹ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ.

ಗೀಳು-ಚಟಗಳನ್ನು ಹಾಗೇ ಬಿಟ್ಟರೆ ಅವು ವ್ಯಕ್ತಿಯ ಜೀವನವನ್ನೇ ಆಕ್ರಮಿಸಿಕೊಳ್ಳುತ್ತವೆ. ಅವನ್ನು ನಿಯಂತ್ರಿಸಲು ಇಂದು ಅನೇಕ ಉತ್ತಮ ಔಷಧಿಗಳು ಲಭ್ಯವಿವೆ. ಅವುಗಳನ್ನು ಮನೋವೈದ್ಯರು ಸೂಚಿಸಿದಂತೆ ನಿರ್ದಿಷ್ಟ ಪ್ರಮಾಣ ಹಾಗೂ ಸಮಯದವರೆಗೆ ತೆಗೆದುಕೊಳ್ಳುವುದರಿಂದ ಫಲಕಾರಿ. ಇದಲ್ಲದೆ ಕೆಲವು ರೀತಿಯ  ವರ್ತನಾ ಮಾರ್ಪಾಡಿನ ವಿಧಾನಗಳನ್ನು ಉಪಯೋಗಿಸಿ ಇವುಗಳ ತೀವ್ರತೆಯನ್ನು ತಗ್ಗಿಸಬಹುದು.

ಅದೇ ರೀತಿ ಸರಳವಾದ ಬದಲಿ ಆಲೋಚನೆಗಳು ಮತ್ತು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದಲೂ ಗೀಳು-ಚಟದಿಂದ ದೂರವಿರಲು ಸಾಧ್ಯ. ಯಾವುದೇ ಪ್ರತಿಕ್ರಿಯೆಯನ್ನು ಧನಾತ್ಮಕವಾಗಿ ಪುನರ್ಬಲಗೊಳಿಸುವುದರಿಂದಲೂ ಇದನ್ನು ತಡೆಯಬಹುದು. ಇಲ್ಲದಿದ್ದರೆ ಗೀಳಿನಿಂದ ಗೋಳು ಚಟದಿಂದ ಚಟ್ಟ ಎಂಬ ಮಾತು ನಿಜವಾಗುತ್ತದೆ.

ಇವೆಲ್ಲ ಗೀಳುಗಳೇ
* ಪದೇ ಪದೇ ಕೈ ಅಥವಾ ಪಾತ್ರೆತೊಳೆಯುವುದು
* ಪದೇ ಪದೇ ಹಣ ಎಣಿಸುವುದು
* ಯಾರಾದರೂ ಚಾಕುವಿನಲ್ಲಿ ತಿವಿದು ಬಿಟ್ಟರೆ ಎನ್ನುವ ಸಂಶಯ
* ಬಸ್ಸು, ಕಾರು ಅಪಘಾತಕ್ಕೆ ಒಳಗಾಗುತ್ತದೆ ಎಂಬ ದುಗುಡ
* ತಮ್ಮಿಂದ ಮತ್ತು ಬೇರೆಯವರಿಂದ ಕಾಲನಿಷ್ಠೆಯನ್ನು ಅತಿಯಾಗಿ ನಿರೀಕ್ಷಿಸುವುದು ಮತ್ತು ಶಿಸ್ತನ್ನು ವಿಧಿಸುವುದು

* ಅನೇಕ ಬಾರಿ ತಲೆ ಬಾಚಿಕೊಳ್ಳುವುದು
* ಕನ್ನಡಿಯಲ್ಲಿ ನೋಡಿಕೊಳ್ಳುತ್ತಲೇ ಇರುವುದು
* ಸರಿಯಾಗಿ ಬರೆದಿರುವೆನೇ ಎಂದು ಪುನಃ ಪುನಃ ಪರೀಕ್ಷಿಸುವುದು
* ಬೇಡದಿದ್ದರೂ ಬೋರ್ಡ್‌ಗಳನ್ನು ಓದುವುದು, ಮೆಟ್ಟಿಲುಗಳನ್ನು ಎಣಿಸುವುದು
* ಬೀಗ ಸರಿಯಾಗಿ ಹಾಕಿದ್ದರೂ ಅದನ್ನು ಎಳೆದು ಎಳೆದು ನೋಡುವುದು
*  ನಲ್ಲಿ ನಿಲ್ಲಿಸಿದ್ದರೂ ಮತ್ತೆ ಮತ್ತೆ ಪರೀಕ್ಷಿಸುವುದು
* ಅಂಗ ಚೇಷ್ಟೆಗಳು- ಶಾರೀರಿಕ ಕ್ರಿಯೆಗಳು ಇತ್ಯಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT